ಡಾ. ವೀಣಾ ಶಾಂತೇಶ್ವರ (ಫೆಬ್ರವರಿ, ೨೨, ೧೯೪೫) ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಧಾರವಾಡ ಇವರ ಹುಟ್ಟೂರು. ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆಯಾದ ವೀಣಾ ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ.; ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿಯೂ, ಅದರ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.; ವೀಣಾ ಶಾಂತೇಶ್ವರ ಅವರು; ಸಣ್ಣಕತೆ, ಕಾದಂಬರಿಗಳ ಜೊತೆಗೆ ಹಲವಾರು ವಿಮರ್ಶಾತ್ಮಕ ಪ್ರಬಂಧಸಂಗ್ರಹಗಳನ್ನು, ಪ್ರಕಟಿಸಿದ್ದಾರೆ.; ೧೯೯೪-೯೬ರಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೫ರಲ್ಲಿ ಅಖಿಲ ಭಾರತ ಲೇಖಕಿಯರ ಸಮ್ಮೇಳನದ ಸಂಯೋಜಕಿಯಾಗಿದ್ದರು.
ಮುಳ್ಳುಗಳು’, ‘ಕೊನೆಯ ದಾರಿ’, ‘ಕವಲು’, ‘ಹಸಿವು’, ‘ಬಿಡುಗಡೆ’ - ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿರುವ ವೀಣಾ ಅವರು ‘ಗಂಡಸರು’ ಮತ್ತು ‘ಶೋಷಣೆ, ಬಂಡಾಯ ಇತ್ಯಾದಿ’ ಎಂಬ ಎರಡು ಕಾದಂಬರಿಗಳನ್ನು ರಚಿಸಿದ್ದಾರೆ. ವೀಣಾ ಅವರು ಕನ್ನಡದಲ್ಲಲ್ಲದೆ, ಇಂಗ್ಲಿಷಿನಲ್ಲಿಯೂ ಸಾಹಿತ್ಯ ರಚಿಸಿದ್ದು, ರೆಪ್ಯೂಟೇಶನ್ , ಕ್ರಾಸ್ ರೋಡ್ಸ್, ಹರ್ ಫ್ರೀಡಮ್, ದಿ ಶಾಡೊ ಎಂಬ ಸಣ್ಣ ಕಥೆಗಳನ್ನು ಮತ್ತು ‘ಮೆನ್’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ.; ‘ಮಹಿಳೆಯರ ಸಣ್ಣಕಥೆಗಳು’, ‘ಹೊಸ ಹೆಜ್ಜೆ’ ಎಂಬ ಮಹಿಳೆಯರ ಪ್ರಾತಿನಿಧಿಕ ಕವನ ಸಂಕಲನಗಳನ್ನೊಳಗೊಂಡಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ‘ನಡೆದದ್ದೇ ದಾರಿ’ ಎಂಬ ಹೆಸರಿನಲ್ಲಿ ವೀಣಾ ಅವರ ಸಮಗ್ರ ಕಥನ ಸಾಹಿತ್ಯ ಪ್ರಕಟಗೊಂಡಿದೆ. ಇವರ ೧೫ ರೇಡಿಯೊ ನಾಟಕಗಳು ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡಿವೆ.
ಅನುವಾದ ಕ್ಷೇತ್ರಕ್ಕೂ ವೀಣಾ ಅವರ ಕೊಡುಗೆ ಸಂದಾಯವಾಗಿದೆ. ಇವರ ಕಥೆಗಳು ಇಂಗ್ಲಿಷ್,; ಫ್ರೆಂಚ್, ಹಿಂದಿ, ಕೊಂಕಣಿ, ಮರಾಠಿ, ಉರ್ದು, ತಮಿಳು, ತೆಲುಗು, ಮಲೆಯಾಳಂ, ಗುಜರಾತಿ ಮತ್ತು ಸಿಂಧಿ ಭಾಷೆಗಳಲ್ಲಿ ಅನುವಾದಗೊಂಡಿರುವುದಲ್ಲದೆ, ವೀಣಾ ಅವರು ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ಕುರಿಗಾಹಿ ಬಿಲ್ಲೇಸುರ’(ಹಿಂದಿ ಅನುವಾದ), ‘ಯಕೃತ್ತು’(ಶಾಮ ಮನೋಹರ್ ಅವರ ನಾಟಕ ಅನುವಾದ),; ‘ಫತಝಡಕೆ ಫೂಲ್’, ಸ್ತನದಾಯಿನಿ ಕೃತಿಗಳನ್ನೂ, ಸುಮಾರು ಹದಿನೈದು ಮರಾಠಿ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅಮೆರಿಕನ್/ಮೆಕ್ಸಿಕನ್ ಇಂಗ್ಲಿಷ್ ಕಥೆಗಳ ಅನುವಾದಗಳು ‘ಅದೃಷ್ಟ’ ಸಂಕಲನದಲ್ಲಿದೆ.;
ವೀಣಾ ಅವರು ನಾಡಿನ ಹಲವಾರು ಸಾಹಿತ್ಯ ಸಂಘಟನೆಗಳಲ್ಲಿ ಸದಸ್ಯೆಯಾಗಿದ್ದರಲ್ಲದೆ,; ಸಾಹಿತ್ಯಿಕ, ವೈಚಾರಿಕ ಸಂಕಿರಣ, ಸಾಂಸ್ಕೃತಿಕ ಉತ್ಸವಗಳ ನಿರ್ದೇಶಕಿ/ ಆಯೋಜಕಿಯಾಗಿ ಸೇವೆ ಸಲ್ಲಿಸಿದ್ದಾರೆ.; ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಸಮಯದಲ್ಲಿ ಹಲವಾರು ಶೈಕ್ಷಣಿಕ ಸುಧಾರಣೆಗಳನ್ನ್ನು ಜಾರಿಗೆ ತಂದಿದ್ದಾರೆ. ಇವರ ಆಡಳಿತಾವಧಿಯಲ್ಲಿಯೇ,; ೨೦೦೨ರಲ್ಲಿ ನಂದನ್ ನಿಲೇಕಣಿಯವರ ಆರ್ಥಿಕ ಸಹಕಾರದಿಂದ ಅತ್ಯಂತ ವಿನೂತನವಾದ ‘ಸೃಜನ - ಡಾ. ಅಣ್ಣಾಜಿರಾವ್ ಸಿರೂರ’ ರಂಗಮಂದಿರ ನಿರ್ಮಾಣಗೊಂಡಿತು.
ಪ್ರತಿಭಾವಂತ ಲೇಖಕಿ ವೀಣಾ ಶಾಂತೇಶ್ವರ ಅವರಿಗೆ ಹಲವಾರು ಸಾಹಿತ್ಯಿಕ ಗೌರವಗಳು ಸಂದಿವೆ. ‘ಕವಲು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೩),; ‘ಹಸಿವು’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್‍ನಿಂದ ‘ಮಲ್ಲಿಕಾ’ ಪ್ರಶಸ್ತಿ, ‘ಗಂಡಸರು’ ಕಾದಂಬರಿಗೆ ಪ್ರಜಾವಾಣಿ ಬಹುಮಾನ (೧೯೭೫),; ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೮), ಶಿಕ್ಷಣ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಶಾಶ್ವತ ಪ್ರತಿಷ್ಠಾನದ ‘ಸದೋದಿತಾ’ ಪ್ರಶಸ್ತಿ,; ಅಜ್ಞೇಯರ ‘ನದೀ ಕೇ ದ್ವೀಪ್’ ಕೃತಿಯ ಕನ್ನಡ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (೨೦೦೫),; ಕಾತ್ಯಾಯಿನಿ ಸಮ್ಮಾನ್ (೨೦೦೭) ಕೆಲವು ಪ್ರಮುಖ ಪ್ರಶಸ್ತಿಗಳು. ಪ್ರಸಕ್ತ ವೀಣಾ ಶಾಂತೇಶ್ವರ ಅವರು ಪತಿ ಶಾಂತೇಶ್ವರ ಅವರೊಡನೆ ಧಾರವಾಡದಲ್ಲಿ ನೆಲೆಸಿದ್ದಾರೆ. ಅರವತ್ತನಾಲ್ಕರ ಹರೆಯದ ವೀಣಾ ಅವರಿಗೆ ಅವರ ಅಭಿಮಾನಿಗಳು, ಹಿತೈಷಿಗಳು ‘ನಿರ್ದಿಗಂತ’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಲಿದ್ದಾರೆ.
ಮೂಲ : ಕನ್ನಡ ಸಾಹಿತ್ಯ ರಂಗ
ಕೊನೆಯ ಮಾರ್ಪಾಟು : 7/13/2020