অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹದಿಹರೆಯದವರ ಆರೋಗ್ಯ

ಹದಿಹರೆಯದವರ ಆರೋಗ್ಯ

  1. ಹದಿಹರೆಯದವರನ್ನು ಕಾಡುವ ಆರೋಗ್ಯ ಸಮಸ್ಯೆಗಳು
    1. ಮಾನಸಿಕ ಆರೋಗ್ಯ
    2. ಮಾದಕ ವಸ್ತುಗಳ ಬಳಕೆ
    3. ಅಕಸ್ಮಾತ್ತಾಗಿ ಆಗುವ ಗಾಯಗಳು
    4. ಹಿಂಸಾತ್ಮಕ ನಡವಳಿಕೆ
    5. ಪೌಷ್ಟಿಕಾಂಶ
    6. ಲೈಂಗಿಕ ಮತ್ತು ಜನನಾಂಗ ಆರೋಗ್ಯ
    7. ಎಚ್‌ಐವಿ
    8. ಮೂಳೆ ಆರೋಗ್ಯ
      1. ಮೂಳೆ ಆರೋಗ್ಯದ
      2. ಮೂಳೆಗಳ ರಚನೆಯ ಮೂಲಭೂತ ಅಂಶಗಳು
      3. ಮೂಳೆಯ ಬೆಳವಣಿಗೆ
      4. ಮೂಳೆ ಆರೋಗ್ಯಕ್ಕೆ ಹಾನಿಕಾರಕವಾಗುವ ಅಂಶಗಳು
    9. ಮೂಳೆ ಸವೆತ
  2. ಪೌಷ್ಟಿಕಾಂಶ
  3. ಮೂಳೆಗೆ ವ್ಯಾಯಾಮಗಳು
  4. ಸರ್ವೆಕಲ್‌ (ಗರ್ಭಕೊರಳಿನ) ಕ್ಯಾನ್ಸರ್‌ ತಡೆಗಟ್ಟುವುದು
  5. ಸರ್ವೆಕಲ್‌ ಕ್ಯಾನ್ಸರ್‌ ಎಂದರೇನು?
    1. ಸರ್ವೆಕಲ್‌ ಕ್ಯಾನ್ಸರ್‌ ಹೇಗೆ ಬರುತ್ತದೆ?
    2. ಸರ್ವೆಕಲ್‌ ಕ್ಯಾನ್ಸರ್‌ ಯಾರಿಗೆ ಬರುವ ಸಾಧ್ಯತೆಯಿದೆ?
    3. ಸರ್ವೆಕಲ್‌ (ಗರ್ಭಕೊರಳು) ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವುದು ಹೇಗೆ?
    4. ರೋಗ ನಿರೋಧಕ ಲಸಿಕೆಯನ್ನು ಯಾರು ತೆಗೆದುಕೊಳ್ಳಬೇಕು?
    5. ವ್ಯಾಕ್ಸಿನ್‌ ಹೇಗೆ ಕೊಡುತ್ತಾರೆ? ಇದು ಸುರಕ್ಷಿತವೇ?

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ)  ಹದಿಹರೆಯವನ್ನು ವಯೋಮಾನಕ್ಕೆ ಅನುಗುಣವಾಗಿ (೧೦ ಮತ್ತು ೧೯ ರೊಳಗಿನ ವಯೋಮಾನದವರು) ಜೀವನದಲ್ಲಿ ತೀವ್ರ ದೈಹಿಕ ಬದಲಾವಣೆಗಳು ಕಂಡುಬರುವ ಹಂತ ಎಂದು ಹೇಳಿದೆ.ದೈಹಿಕ ಬದಲಾವಣೆಯ ವಿಶೇಷ ಲಕ್ಷಣಗಳು ಇಂತಿವೆ:

  • ತೀವ್ರ ದೈಹಿಕ ಬೆಳವಣಿಗೆ ಮತ್ತು ಅಭಿವೃದ್ಧಿ
  • ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪ್ರಬುದ್ಧತೆ. ಆದರೆ ಎಲ್ಲವೂ ಒಂದೇ ಸಮಯದಲ್ಲಿ ಅಲ್ಲ
  • ಲೈಂಗಿಕ ಪ್ರಬುದ್ಧತೆ ಮತ್ತು ಲೈಂಗಿಕ ಚಟುವಟಿಕೆ
  • ಪ್ರಯೋಗಶೀಲತೆ
  • ಪ್ರೌಢರಂತಹ ಮಾನಸಿಕ ಬೆಳವಣಿಗೆ ಪ್ರಕ್ರಿಯೆ ಮತ್ತು ಪ್ರೌಢ ವ್ಯಕ್ತಿತ್ವ
  • ಸಂಪೂರ್ಣ ಸಾಮಾಜಿಕ- ಆರ್ಥಿಕ ಅವಲಂಬನೆಯಿಂದ ಭಾಗಶಃ ಸ್ವಾತಂತ್ರ್ಯದ ಸಂಕ್ರಮಣಕಾಲ ಇದು

ದೊಡ್ಡ ಬದಲಾವಣೆ, ದೊಡ್ಡ ಸವಾಲು

ಪ್ರಾಯ, ಸಾಮಾನ್ಯವಾಗಿ ೧೦ ರಿಂದ ೧೬ ವರ್ಷದೊಳಗೆ ಪ್ರಾರಂಭವಾಗುತ್ತದೆ. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕ್ರಮೇಣ ಬದಲಾಗುವ ಪ್ರಕ್ರಿಯೆ ಇದು. ಪ್ರತಿ ವ್ಯಕ್ತಿಯಲ್ಲಿಯೂ ಈ ಬದಲಾವಣೆಗಳು ಬೇರೆ ಬೇರೆ ಕಾಲದಲ್ಲಿ ಪ್ರಾರಂಭವಾಗುತ್ತವೆ. ದೈಹಿಕ ಬದಲಾವಣೆಗಳು, ನಡವಳಿಕೆಯಲ್ಲಿನ ಬದಲಾವಣೆಗಳು ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಗಳು ಅವುಗಳಲ್ಲಿ  ಕೆಲವು. ಈ ಪ್ರಕ್ರಿಯೆಯಲ್ಲಿ ಕಂಡು ಬರುವ ಹಲವು ಬದಲಾವಣೆಗಳೆಂದರೆ

  • ಕೈ ಕಾಲುಗಳು, ತೋಳುಗಳು, ಕಾಲುಗಳು, ಪೃಷ್ಠಗಳು ಮತ್ತು ಎದೆಯ ಭಾಗಗಳು ಹಿಗ್ಗುತ್ತವೆ. ದೇಹದಲ್ಲಿ ಎಂತಹ ಬದಲಾವಣೆಗಳಾಗಬೇಕು ಮತ್ತು ಹೇಗೆ ಬದಲಾಗಬೇಕು ಎಂಬ ಸಂದೇಶವನ್ನು ಎಲ್ಲೆಡೆ ಮುಟ್ಟಿಸುವ ವಿಶೇಷ ರಸಾಯನಿಕಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ.
  • ಜನನಾಂಗಗಳು ದೊಡ್ಡವಾಗಿ ರಸಗಳು ಉತ್ಪತ್ತಿಯಾಗುತ್ತವೆ.
  • ಚರ್ಮದಲ್ಲಿ ಹೆಚ್ಚಿನ ಎಣ್ಣೆ ಸ್ರವಿಸಬಹುದು
  • ಕುಂಕುಳಲ್ಲಿ, ತೋಳಲ್ಲಿ ಮತ್ತು ಕಾಲಲ್ಲಿ  ಕೂದಲುಗಳು ಬರುತ್ತವೆ

ಅತ್ಯಗತ್ಯ ದೈಹಿಕ ಕಾಳಜಿ

ದೇಹದ ಆರೈಕೆ ಮಾಡಲು ತೆಗೆದುಕೊಳ್ಳಬೇಕಾದ ಸರಳ ಮತ್ತು ಮೂಲಭೂತ ಕ್ರಮಗಳು

  • ಪ್ರಾಯಕ್ಕೆ ಬಂದ ಕೂಡಲೇ ಬೆವರುವುದು ಹೆಚ್ಚಾಗುತ್ತದೆ. ಸ್ನಾನ ಮಾಡುವುದರಿಂದ ಸ್ವಚ್ಛವಾಗುವುದು ಮತ್ತು ಆಹ್ಲಾದಕರ ವಾಸನೆಯನ್ನು ಹೊಂದಬಹುದು.
  • ಹಲ್ಲು ಹುಳುಕು ತಡೆಯಲು ಕನಿಷ್ಠ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜಿರಿ, ಇದರಿಂದ ಉಸಿರು ತಾಜಾತನವನ್ನು ಹೊಂದಿರುತ್ತದೆ
  • ತೈಲ ಗ್ರಂಥಿಗಳು ಸೇಬಮ್‌ (ತೈಲಯುಕ್ತ ಪದಾರ್ಥ) ಬಿಡುಗಡೆ ಮಾಡುವುದರಿಂದ ಮೊಡವೆಗಳು ಬರಬಹುದು
  • ಪೌಷ್ಟಿಕ ಆಹಾರ ಅತ್ಯಗತ್ಯ. ಕರಿದ ಪದಾರ್ಥಗಳು ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆಮಾಡಿ
  • ಸಕಾರಾತ್ಮಕ ಯೋಚನೆಗಳು ನಿಮ್ಮಲ್ಲಿರಲಿ. ಉತ್ತಮ ಆರೋಗ್ಯಕ್ಕೆ  ಸುಭದ್ರ ಮನಸ್ಸು ಅತ್ಯಗತ್ಯ

ತಾಯಿ ತಂದೆಯರ ಜತೆ ಹೊಂದಿಕೊಳ್ಳುವುದು

ಹದಿಹರೆಯದ ಸಮಯದಲ್ಲಿ ಅನೇಕ ಪೋಷಕರು ಮತ್ತು ಮಕ್ಕಳಲ್ಲಿ ಒಬ್ಬರೊಡನೆ ಒಬ್ಬರು ಹೊಂದಿಕೊಂಡು ಹೋಗುವುದರಲ್ಲಿ ತೊಡಕುಗಳು ಕಾಣಿಸಿಕೊಳ್ಳುತ್ತವೆ. ಯುವಕರು ನೆನಪಿಡಬೇಕಾದ ಕೆಲವು  ಅಂಶಗಳು

  • ಕುಟುಂಬವನ್ನು ಗೌರವಿಸಿ
  • ಪೋಷಕರ ನಂಬಿಕೆ ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಳ್ಳಿ
  • ಪೋಷಕರು ತಮ್ಮ ಮಕ್ಕಳಿಗೆ ಅತ್ಯತ್ತಮವಾದದ್ದನ್ನೇ ಕೊಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ
  • ನಿಮ್ಮ ತಂದೆತಾಯಿಯರ ಜತೆ ಮುಕ್ತ ವಾಗಿ ಮತ್ತು ಪ್ರಾಮಾಣಿಕವಾಗಿ ಇರಿ
  • ಅವರ ಬಗ್ಗೆ ಕಾಳಜಿ ಮತ್ತು ಗೌರವಗಳಿರಲಿ

ಹದಿಹರೆಯದವರನ್ನು ಕಾಡುವ ಆರೋಗ್ಯ ಸಮಸ್ಯೆಗಳು

ಭಾರತದಲ್ಲಿ ಹದಿಹರೆಯದವರ ಆರೋಗ್ಯ ಪರಿಸ್ಥಿತಿ

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ದೇಶ ಭಾರತ. ಅದು ೧೦೮೧ ಮಿಲಿಯನ್‌ಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಬಹು ಸಂಖ್ಯಾತರು ಹದಿಹರೆಯದವರು. ಒಟ್ಟಾರೆ ಜನಸಂಖ್ಯೆಯ ಶೇ ೨೨.೫ರಷ್ಟು ಅಂದರೆ ೨೨೫ ಮಿಲಿಯನ್‌  ಹದಿಹರೆಯದವರಿದ್ದಾರೆ. ಅವರೆಲ್ಲ ವಿಭಿನ್ನ ಪರಿಸರದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಅವರ ಆರೋಗ್ಯದ ಅಗತ್ಯಗಳೂ ಕೂಡ ವಿಭಿನ್ನವಾಗಿವೆ. ಈ ಯುವಜನಾಂಗ ಒಟ್ಟಾರೆ ಜನಸಂಖ್ಯೆ ಸರಿಸುಮಾರು (೧೦- ೨೪ ವರ್ಷಗಳು) ೩೩೧ ಮಿಲಿಯನ್‌, ಭಾರತದ ಒಟ್ಟಾರೆ ಜನಸಂಖ್ಯೆಯ ಶೇ. ೩೦ ರಷ್ಟು (೨೦೦೧ರ ಜನಗಣತಿ) ರಷ್ಟು ಹದಿಹರೆಯದವರಿದ್ದಾರೆ. ಉಕ್ಕುವ ಉತ್ಸಾಹ, ಸಾಧಿಸುವ ಸ್ಫೂರ್ತಿ ಮತ್ತು ಹೊಸ ಆಲೋಚನೆಗಳ ಒಟ್ಟು ಮೊತ್ತವೇ ಹದಿಹರೆಯದವರು. ದೇಶದ ಧನಾತ್ಮಕ ಶಕ್ತಿ ಅವರು. ಭವಿಷ್ಯದ ಉತ್ಪಾದಕತೆಯ ಜವಾಬ್ದಾರಿ ಅವರ ಹೆಗಲಿಗಿದೆ. ಆದರೆ ಅವರು ಆರೋಗ್ಯಕರ ರೀತಿಯಲ್ಲಿ ಬೆಳೆದಾಗ ಮಾತ್ರ ಇದು ಸಾಧ್ಯ. ಬೇರೆ ವಯೋಮಾನದವರಿಗೆ ಹೋಲಿಸಿದಾಗ ಈ ವಯೋಮಾನದವರಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ. ಆದುದರಿಂದ ಈ ಗುಂಪನ್ನು ಆರೋಗ್ಯಕರ ಗುಂಪು ಎಂದೇ ಪರಿಗಣಿಸಲಾಗುತ್ತದೆ. ಆದರೆ ಹದಿಹರೆಯದವರ ಆರೋಗ್ಯವನ್ನು ಅಳೆಯಲು ಸಾವಿನ ಸಂಖ್ಯೆಯನ್ನು ಅಳತೆಗೋಲಾಗಿ ಇಟ್ಟುಕೊಳ್ಳುವುದು ಹಾದಿ ತಪ್ಪುವಂತೆ ಮಾಡುತ್ತದೆ. ಹಾಗೆ ನೋಡಿದರೆ ಹದಿಹರೆಯದವರಲ್ಲಿ ಹಲವು ಆರೋಗ್ಯ ಸಂಬಂಧಿತ ತೊಂದರೆಗಳು ಮತ್ತು ನಿರ್ದಿಷ್ಟ ಸಾವುಗಳು ಆಗುತ್ತಿವೆ.ಹದಿಹರೆಯದವರ ಆರೋಗ್ಯಕ್ಕೆ ಸಂಬಂಧಿಸಿದ ಇಲ್ಲವೇ ನಡವಳಿಕೆಗೆ ಸಂಬಂಧಿಸಿದ ತೊಂದರೆಗಳು ಉದ್ಭವವಾದಾಗ ಅವುಗಳನ್ನು ಸಮರ್ಥವಾಗಿ ಎದುರಿಸಲು ಅನುವಾಗುವಂತೆ, ಹದಿಹರೆಯದವರ ಆರೋಗ್ಯಕರ ಬೆಳವಣಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅವರಿಗೆ ಅಗತ್ಯ ಮಾಹಿತಿ ನೀಡುವುದು, ಜೀವನ ಕಲೆಗಳನ್ನು ಕರಗತಗೊಳಿಸುವುದು, ಸುರಕ್ಷಿತ ಮತ್ತು ಸಹಾಯಕ ಪರಿಸರ ಒದಗಿಸುವುದು; ಸೂಕ್ತ ಮತ್ತು ಕೈಗೆಟುಕುವಂತಿರುವ ಆರೋಗ್ಯ ಮತ್ತು ಆಪ್ತ ಸಮಾಲೋಚನೆಯ ಸೇವೆಗಳನ್ನು ಒದಗಿಸಬೇಕಾಗುತ್ತದೆ.

ಮಾನಸಿಕ ಆರೋಗ್ಯ

ಬಾಲ್ಯಾವಸ್ಥೆಯ ಉತ್ತರಾರ್ಧದಲ್ಲಿ ಮತ್ತು ಕಿಶೋರಾವಸ್ಥೆಯ ಮೊದಲ ಭಾಗದಲ್ಲಿ ಮಕ್ಕಳು ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತವೆ. ಸಮಸ್ಯಾ ನಿವಾರಣಾ ಕೌಶಲ್ಯ, ಸಮಾಜಿಕ ಕೌಶಲ್ಯ ಮತ್ತು ಆತ್ಮ ವಿಶ್ವಾಸಗಳನ್ನು ಹೆಚ್ಚಿಸುವ ಮೂಲಕ ಕಿಶೋರಾವಸ್ಥೆಯಲ್ಲಿ ತಲೆದೋರುವ ನಡವಳಿಕೆಯಲ್ಲಿನ ಏರುಪೇರು, ಆತಂಕ, ಖಿನ್ನತೆ ಮತ್ತು ತಿನ್ನುವ ಹವ್ಯಾಸದಲ್ಲಿನ ಏರುಪೇರು ಸೇರಿದಂತೆ ಇತರ ಅಪಾಯಕಾರಿ ನಡವಳಿಕೆಗಳಾದ ಲೈಂಗಿಕ ನಡವಳಿಕೆಗಳು, ಮಾದಕ ವಸ್ತುಗಳ ಬಳಕೆ ಮತ್ತು ಹಿಂಸಾತ್ಮಕ ನಡವಳಿಕೆಗಳನ್ನು ನಿರ್ವಹಿಸುವ ಕೌಶಲ ಅವರದಾಗಬೇಕು. ಹದಿಹರೆಯದವರೊಂದಿಗೆ ಬೆರೆತು ಅವರಲ್ಲಿನ ಮಾನಸಿಕ ತೊಂದರೆಗಳನ್ನು ಶೀಘ್ರದಲ್ಲೇ ಗುರುತಿಸಿ ಆಪ್ತ ಸಮಾಲೋಚನೆ, ನಡವಳಿಕೆ ಚಿಕಿತ್ಸೆ ಮತ್ತು ಸೂಕ್ತ ಮನೋವೈದ್ಯಕೀಯ ಔಷಧಗಳ ಬಳಕೆಗೆ ಪ್ರೋತ್ಸಾಹಿಸುವ ಸಾಮರ್ಥ್ಯವನ್ನು ಆಪ್ತ ಸಮಾಲೋಚಕರು ಹೊಂದಿರಬೇಕು.

ಮಾದಕ ವಸ್ತುಗಳ ಬಳಕೆ

ಮಾದಕ ವಸ್ತುಗಳಾದ ತಂಬಾಕು ಮತ್ತು ಮದ್ಯಗಳ ಲಭ್ಯತೆಗೆ ಕಾನೂನುಗಳು ಕಡಿವಾಣ ಹಾಕಿದ್ದಾಗ್ಯೂ ಕೂಡ, ಇವುಗಳ ಬೇಡಿಕೆ ಇಳಿಯುವಂತೆ ಹಾಗು ಯುವಕರ ಆರೋಗ್ಯಕರ ಬೆಳೆವಣಿಗೆಗೆ ಸಹಾಯಕವಾಗುವಂತೆ ಅನೇಕ ಮಧ್ಯ ವರ್ತನೆಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ವಸ್ತುಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು, ಸಹಪಾಠಿಗಳ ಒತ್ತಡಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಯಿಸುವಂತೆ ಮಾಡುವುದು, ಒತ್ತಡವನ್ನು ಆರೋಗ್ಯಕರ ರೀತಿಯಲ್ಲಿ ನಿಭಾಯಿಸುವ ಗುಣಗಳನ್ನು ಅವರು ಮೈಗೂಡಿಸಿಕೊಳ್ಳುವಂತೆ ಮಾಡಿದಾಗ ಅವರು ಈ ಚಟಗಳಿಗೆ ಬಲಿಯಾಗುವುದನ್ನು ಕಡಿಮೆ ಮಾಡಲು ಸ್ಫೂರ್ತಿದೊರೆಯುತ್ತದೆ.

ಅಕಸ್ಮಾತ್ತಾಗಿ ಆಗುವ ಗಾಯಗಳು

ವೇಗ ಮಿತಿಯನ್ನು ಜಾರಿ ಮಾಡುವುದರಿಂದ ರಸ್ತೆ ಅಪಘಾತಗಳು ಮತ್ತು ಅದರಿಂದ ಉಂಟಾಗುವ ಗಂಭೀರ ಸ್ವರೂಪದ ಗಾಯಗಳನ್ನು ತಡೆಯಬಹುದಾಗಿದೆ. ಇದರಿಂದ ಹದಿಹರೆಯದವರ ಆರೋಗ್ಯವನ್ನು ಕಾಪಾಡಬಹುದಾಗಿದೆ. ಇದು ಅತ್ಯಂತ ಪ್ರಮುಖವಾಗಿದೆ. ಬಾಲ್ಯಾವಸ್ಥೆಯ ಉತ್ತರಾರ್ಧದಲ್ಲಿ ಮತ್ತು ಕಿಶೋರಾವಸ್ಥೆಯ ಮೊದಲ ಭಾಗದಲ್ಲಿ ಅನೇಕ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ.

ಹಿಂಸಾತ್ಮಕ ನಡವಳಿಕೆ

ಹದಿಹರೆಯದವರಲ್ಲಿ ಹಿಂಸಾತ್ಮಕ ನಡವಳಿಕೆಯನ್ನು ಕಡಿಮೆ ಮಾಡುವಲ್ಲಿ ಜೀವನ ಕೌಶಲ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು ತುಂಬ ಪ್ರಮುಖ ಪಾತ್ರವಹಿಸುತ್ತವೆ. ಹಿಂಸಾತ್ಮಕ ನಡವಳಿಕೆಯನ್ನು ಕಡಿಮೆ ಮಾಡುವಲ್ಲಿ ಸಮಸ್ಯೆಯ ನಿವಾರಣೆ ಕೌಶಲ ಮತ್ತು ಅಹಿಂಸಾತ್ಮಕ ಶಿಸ್ತುಗಳನ್ನು ಬೆಳೆಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಸಹಕಾರ ಅತ್ಯಗತ್ಯ. ಹಾಗೊಂದು ವೇಳೆ ಹಿಂಸೆಯನ್ನು ಎದುರಿಸಬೇಕಾಗಿ ಬಂದಾಗ, ಲೈಂಗಿಕ ಹಿಂಸೆಯೂ ಸೇರಿದಂತೆ ಯಾವುದೇ ಬಗೆಯ  ಹಿಂಸೆಗೆ ಬಲಿಯಾದ ಹದಿಹರೆಯದವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸೂಕ್ತ, ಸಂವೇದನಾಶೀಲ ಕಾಳಜಿ ಮತ್ತು ಚಿಕಿತ್ಸೆಯನ್ನು ನೀಡಲು ಆರೋಗ್ಯ ವ್ಯವಸ್ಥೆ ಸಮರ್ಥವಾಗಿರಬೇಕು. ಹಿಂಸಾತ್ಮಕ ನಡವಳಿಕೆಯ ದೀರ್ಘಕಾಲೀನ ಪರಿಣಾಮಗಳನ್ನು ಎದುರಿಸುವಲ್ಲಿ ಮಾನಸಿಕ ಮತ್ತು ಸಮಾಜಿಕ ಬೆಂಬಲಗಳು ಸಹಾಯಕವಾಗುತ್ತವೆ. ಇದರಿಂದ ಮುಂದೆ ಅವರು ಹಿಂಸಾತ್ಮಕ ನಡವಳಿಕೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯನ್ನು ತಡೆಯಬಹುದಾಗಿದೆ.

  • ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ವಸ್ತುಗಳ ಸೇವನೆ ಮಾಡಿದಾಗ ಮತ್ತು ಮದ್ಯಸೇವಿಸಿದಾಗ ವಾಹನ ಚಾಲನೆ ಮಾಡದಿರುವುದು ಮತ್ತು ವಾಹನ ಚಾಲನೆಯ ಸಮಯದಲ್ಲಿ ಸೀಟ್‌ ಬೆಲ್ಟ್‌ (ಮತ್ತು ಹೆಲ್ಮೆಟ್‌) ಧರಿಸುವುದನ್ನು ಪ್ರೋತ್ಸಾಹಿಸುವ ಶಿಕ್ಷಣ ಮತ್ತು ಕಾನೂನುಗಳನ್ನು ಜಾರಿಗೆ ತರುವುದು.
  • ಸುರಕ್ಷಿತ ಮತ್ತು ಕಡಿಮೆ ವೆಚ್ಚದ ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚಿಸಿ ವಾಹನ ಚಾಲನೆಗೆ ಪರ್ಯಾಯಗಳನ್ನು ಒದಗಿಸುವುದು.
  • ಪರಿಸರವನ್ನು ಸುರಕ್ಷಿತಗೊಳಿಸುವುದು ಮತ್ತು ಹೇಗೆ ನೀರಿನಲ್ಲಿ ಮುಳುಗುವುದನ್ನು, ಬೆಂಕಿಯ ಗಾಯಗಳನ್ನು ಮತ್ತು ಎತ್ತರದಿಂದ ಕೆಳಕ್ಕೆ ಬೀಳುವುದನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಮಕ್ಕಳು ಮತ್ತು ಹದಿಹರೆಯದವರಿಗೆ ಮಾಹಿತಿ ಮತ್ತು ಶಿಕ್ಷಣವನ್ನು ನೀಡುವುದು. ಇಂತಹ ಸಂದರ್ಭಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುವುದರಿಂದ ಪ್ರಾಣ ಉಳಿಸಬಹುದು.

ಪೌಷ್ಟಿಕಾಂಶ

ಬಾಲ್ಯಾವಸ್ಥೆಯಲ್ಲಿನ ದೀರ್ಘಕಾಲೀನ ಪೌಷ್ಟಿಕಾಂಶ ಕೊರತೆಯು ಮಕ್ಕಳ ಮುಂದಿನ ಜೀವನ ಪೂರ್ತಿ ಅವರ ಆರೋಗ್ಯ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಆರೋಗ್ಯಪೂರ್ಣ ಆಹಾರದ ದೊರೆಯುವಿಕೆಯು ಹೆಚ್ಚುವುದರಿಂದ ಮಕ್ಕಳು ಮತ್ತು ಹದಿಹರೆಯದವರಿಗೂ ಅನುಕೂಲವಾಗಲಿದೆ. ಕಿಶೋರಾವಸ್ಥೆಯಲ್ಲಿರುವ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಹದಿಹರೆಯದ ಗರ್ಭಧಾರಣೆಯನ್ನು ತಡೆಯುವುದು ಮತ್ತು ಗರ್ಭಧಾರಣೆಗೆ ಮುನ್ನ ಸ್ತ್ರೀಯ ಪೌಷ್ಟಿಕಾಂಶದ ಮೌಲ್ಯವನ್ನು ಅಳೆದು ಅವರಿಗೆ ಸೂಕ್ತ ಪೌಷ್ಟಿಕ ಆಹಾರ ನೀಡುವುದರಿಂದ ಹೆರಿಗೆ ಸಮಯದಲ್ಲಿನ ತಾಯಿ ಮತ್ತು ನವಜಾತ ಶಿಶುವಿನ ಸಾವುಗಳನ್ನು ಕಡಿಮೆ ಮಾಡಬಹುದು. ಹಾಗಾದಾಗ ಪರಂಪರಾಗತ ಅಪೌಷ್ಟಿಕತೆಯ ಸರಣಿಯನ್ನು ತುಂಡರಿಸಬಹುದು. ಪೌಷ್ಟಿಕ ಆಹಾರದ ಲಭ್ಯತೆ ಹೆಚ್ಚಿಸುವುದು, ಮೈಕ್ರೋನ್ಯೂಟ್ರಿಯಂಟ್‌ಗಳ ನೀಡಿಕೆಯನ್ನು ಹೆಚ್ಚಿಸುವುದೂ ಅಲ್ಲದೆ ಸೋಂಕುಗಳ ನಿವಾರಣೆಯನ್ನೂ ಈ ಪ್ರಕ್ರಿಯೆ ಒಳಗೊಂಡಿದೆ. ಪ್ರೌಢಾವಸ್ಥೆಯಲ್ಲಿ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ದೀರ್ಘಕಾಲೀನ ರೋಗಗಳಿಗೆ ತುತ್ತಾಗುವುದನ್ನು ತಡೆಯಲು ಹದಿಹರೆಯದಲ್ಲಿಯೇ ಆರೋಗ್ಯ ಪೂರ್ಣ ಆಹಾರ ಸೇವನೆ ಮತ್ತು ಉತ್ತಮ ವ್ಯಾಯಾಮದ ಅಭ್ಯಾಸಗಳನ್ನು ರೂಪಿಸಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯ. ಕ್ಷಿಪ್ರವಾಗಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯನ್ನು ತಡೆಗಟ್ಟಲೂ ಕೂಡ ಆರೋಗ್ಯ ಪೂರ್ಣ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದು ಅಗತ್ಯ.

ಲೈಂಗಿಕ ಮತ್ತು ಜನನಾಂಗ ಆರೋಗ್ಯ

ತಾವು ಕಲಿತ ಪಾಠಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಶಿಕ್ಷಣದೊಂದಿಗೆ ಹದಿಹರೆಯದವರಿಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನೂ ಮಾಡಬೇಕು. ಸಮರ್ಥ ಕಳಕಳಿಯುಳ್ಳ ಆರೋಗ್ಯ ಕಾರ್ಯಕರ್ತರಿಂದ ಹದಿಹರೆಯದವರು ಸೋಂಕು ತಡೆಯುವ ಅಥವಾ ಚಿಕಿತ್ಸೆಯ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಹದಿಹರೆಯದವರಲ್ಲಿ ಲೈಂಗಿಕ ಬಲಾತ್ಕಾರದ ವಿಷಯವನ್ನು ವಿವಿಧ ಹಂತಗಳಲ್ಲಿ ಎದುರಿಸಬೇಕಾಗಿದೆ. ಈ ಅಪರಾಧಕ್ಕೆ ಕಠಿಣ ಸಜೆ ನೀಡುವ ಕಾನೂನುಗಳನ್ನು ಜಾರಿಗೆ ತರಬೇಕಿದೆ. ಲೈಂಗಿಕ ಬಲಾತ್ಕಾರವನ್ನು ತೀವ್ರವಾಗಿ ವಿರೋಧಿಸುವ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಬೇಕಿದೆ. ಸಮುದಾಯದಲ್ಲಿ, ಕೆಲಸದ ಸ್ಥಳಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ಬಲಾತ್ಕಾರಗಳು ನಡೆಯದಂತೆ ತಡೆಯಬೇಕಿದೆ. ತೀರಾ ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆಯನ್ನು ತಡೆಯುವ ಸಲುವಾಗಿ ಕನಿಷ್ಠ ಮದುವೆಯ ವಯಸ್ಸನ್ನು ನಿರ್ಧರಿಸುವ ಕಾನೂನುಗಳನ್ನು ಜಾರಿಗೆ ತರಬೇಕಿದೆ. ಹೆಂಡತಿ ಮತ್ತು ತಾಯಿಯಾಗುವ ಮೊದಲು ಹೆಣ್ಣುಮಕ್ಕಳು ಹದಿಹರೆಯದಿಂದ ಪ್ರೌಢ ಮಹಿಳೆಯಾಗಿ ಬೆಳೆಯಲು ಅಗತ್ಯವಾದ ಹೆಚ್ಚುವರಿ ಸಮಯವನ್ನು ಹೆಣ್ಣುಮಕ್ಕಳಿಗೆ ನೀಡುವಂತೆ ಸಮುದಾಯ ಮತ್ತು ಕುಟುಂಬಗಳನ್ನು ಕ್ರೋಢೀಕರಿಸುವ ಕೆಲಸವನ್ನು ಮಾಡಬೇಕಿದೆ.

ಎಚ್‌ಐವಿ

ಯುವಜನಾಂಗದಲ್ಲಿ ಎಚ್‌ಐವಿ ಸೋಂಕಿನ ಅಪಾಯವು ಅವರ ಮೊದಲ ಲೈಂಗಿಕ ಅನುಭವಕ್ಕೆ ತೆರೆದುಕೊಂಡ ವಯಸ್ಸಿನ ನಡುವೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಯುವಕರಲ್ಲಿ ಎಚ್‌ಐವಿ ಸೋಂಕು ಹರಡುವುದನ್ನು ತಡೆಯಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದನ್ನು ತಡೆಯುವುದು ಮತ್ತು ಲೈಂಗಿಕ ನಡವಳಿಕೆಗಳ ಆರಂಭವನ್ನು ಮುಂದಕ್ಕೆ ಹಾಕುವುದು ಪ್ರಮುಖ ಗುರಿಗಳಾಗಿವೆ. ಲೈಂಗಿಕವಾಗಿ ಸಕ್ರಿಯವಾಗಿರುವವರಲ್ಲಿ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಕಾಂಡೋಂಗಳ ಲಭ್ಯತೆ, ತಿಳಿವಳಿಕೆ, ಶಿಕ್ಷಣ ನೀಡುವುದು ಸೇರಿದಂತೆ ಸಮಗ್ರ ಸೋಂಕು ತಡೆ ಸೇವೆಗಳ ಬಳಕೆಗಳು ಅತ್ಯಂತ ಮುಖ್ಯವಾದವು. ಮಾದಕ ವಸ್ತುಗಳ ಬಳಸುವಂತಹ, ಸೋಂಕಿಗೆ ಈಡಾಗುವ ಅಪಾಯವಿರುವ ಯುವಕರಲ್ಲಿ ಶೀಘ್ರ ಮಧ್ಯವರ್ತನೆ ಮತ್ತು ತಡೆಯ ಮೇಲೆ, ಕಾರ್ಯಕ್ರಮಗಳು ತಮ್ಮ ಗಮನ ಕೇಂದ್ರೀಕರಿಸಬೇಕು. ಸೂಕ್ತವಾದ ಮತ್ತು ಸುಲಭವಾಗಿ ಲಭ್ಯವಾಗುವ ಎಚ್‌ಐವಿ ಪರೀಕ್ಷೆ ಸೇವೆಗಳು ಯವಕರಿಗೆ ಅಗತ್ಯವಿದೆ. ಎಚ್‌ಐವಿಯೊಂದಿಗೆ ಬದುಕುತ್ತಿರುವ ಯುವಕರಿಗೆ ಚಿಕಿತ್ಸೆ, ಆರೈಕೆ, ಬೆಂಬಲ ಮತ್ತು ಎಚ್‌ಐವಿ ಸೋಂಕು ತಡೆಯ ಸಕಾರಾತ್ಮಕ ಸೇವೆಗಳ ಅಗತ್ಯವಿದೆ. ಯುವಜನಾಂಗಕ್ಕಾಗಿ ಇರುವ ಎಲ್ಲ ಎಚ್‌ಐವಿ ಸೇವೆಗಳ ನೀಡಿಕೆಯಲ್ಲಿ ಮತ್ತು ಆ ಕಾರ್ಯಕ್ರಮಗಳ ಜಾರಿಯಲ್ಲಿ ಯೋಜನಾ ಹಂತದಿಂದಲೇ ಎಚ್‌ಐವಿಯೊಂದಿಗೆ ಬದುಕುತ್ತಿರುವವರನ್ನು ಜತೆಗೂಡಿಸಿಕೊಳ್ಳಬೇಕಿದೆ.

ಮೂಳೆ ಆರೋಗ್ಯ

ಮೂಳೆಗಳು ಅತ್ಯಂತ ಮುಖ್ಯ. ಜೀವನಪರ್ಯಂತ ಮೂಳೆಗಳ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯ. ಆರೋಗ್ಯಕರ ಮೂಳೆಗಳು, ಚಲನೆಯನ್ನು ಸುಸ್ಥಿತಿಯಲ್ಲಿರಿಸಿ, ಗಾಯಗಳಿಂದ ನಮ್ಮನ್ನು ರಕ್ಷಿಸುತ್ತವೆ. ಮೂಳೆಗಳು ದೇಹದ ವಿವಿಧ ಅಂಗಗಳಿಗೆ ಅಗತ್ಯವಾಗುವ ಅತ್ಯಂತ ಮುಖ್ಯ ಖನಿಜಾಂಶಗಳಾದ ಕ್ಯಾಲ್ಶಿಯಂ ಮುಂತಾದವುಗಳ ದಾಸ್ತಾನು ಕೋಣೆಗಳಾಗಿವೆ. ಮೂಳೆಗಳು ದೇಹದ ಜೀವಂತ ಅಂಗ. ಅವು ಸತತವಾಗಿ ಬದಲಾಗುತ್ತಿರುತ್ತವೆ. ಹೊಸ ಮೂಳೆಗಳು ತಯಾರಿ ನಡೆಯುತ್ತಲೇ ಇರುತ್ತವೆ. ಹಳೆಯ ಮೂಳೆಗಳು ಜೀವನ ಪರ್ಯಂತ ಇರುತ್ತವೆ? ಪ್ರೌಢರಲ್ಲಿ ಪ್ರತಿ ೭- ೧೦ ವರ್ಷಗಳಲ್ಲಿ ಇಡೀ ಅಸ್ಥಿ ಪಂಜರವು ಬದಲಾಗುತ್ತದೆ. ಉತ್ತಮ ಜೀವನವನ್ನು ಹೊಂದಲು ಚಿಕ್ಕಂದಿನಿಂದಲೇ ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಮಾಡುವದು ಅಗತ್ಯ. ಆ ಮೂಲಕ  ಮೂಳೆಗಳ ಆರೋಗ್ಯ ಕಾಪಾಡುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಮೂಳೆ ಸವೆತವನ್ನು (ಅಸ್ಥಿ ಭಿದುರತೆ) ತಡೆಯಲು ನಾವು ನಿಮಗೆ ವಾಸ್ತವ, ಗುರಿ ಮುಟ್ಟಲು ಸಾಧ್ಯವಾಗುವ ಆಹಾರ ಮತ್ತು ವ್ಯಾಯಾಮದ ವಿವರಗಳನ್ನು ನೀಡುತ್ತೇವೆ. ಇದು ಅಸ್ಥಿ ಭಿದುರತೆಯನ್ನು ತಡೆಯಲು ಅತ್ಯಂತ ಉಪಯುಕ್ತ.

ಮೂಳೆ ಆರೋಗ್ಯದ

ಮೂಳೆಯು ಅಸ್ಥಿ ಪಂಜರ ಅತ್ಯಂತ ಮುಖ್ಯ ಅಂಗಾಂಶ. ಪ್ರೌಢ ವಯಸ್ಕರ ದೇಹದಲ್ಲಿ ೨೦೬ ಮೂಳೆಗಳಿವೆ, ಶಿಶುಗಳಲ್ಲಿ ೩೦೦ ಮೂಳೆಗಳಿವೆ. ಮೂಳೆಗಳು ನಿಮಗೆ ಚಲಿಸಲು ಸಹಾಯ ಮಾಡುತ್ತವೆ. ನಿಮ್ಮೊಳಗಿನ ಅಂಗಾಂಗಗಳನ್ನು ರಕ್ಷಿಸುತ್ತವೆ.

ಮೂಳೆಯ ರಚನೆ

ಮೂಳೆಯು ಪ್ರೊಟೀನ್‌ ಮತ್ತು ಇತರ ಖನಿಜಾಂಶಗಳಾದ ಕ್ಯಾಲ್ಶಿಯಂ, ಫಾಸ್ಪೇಟ್‌ ಮತ್ತು ಮೆಗ್ನೀಸಿಯಂಗಳಿಂದ ರಚಿತವಾಗಿದೆ. ಕೊಲೊಜಿನ್‌ ಎಂಬು ಪ್ರೊಟಿನ್‌, ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದು ಮೂಳೆಗಳಿಗೆ ರಚನೆ ಮತ್ತು ಸ್ವರೂಪವನ್ನು ಕೊಡುತ್ತದೆ.

ಮೂಳೆಗಳ ರಚನೆಯ ಮೂಲಭೂತ ಅಂಶಗಳು

ಪೆರಿಯೋಸ್ಟೆಮ್: ಮೂಳೆಯ ಹೊರ ಭಾಗವನ್ನು ಪೆರಿಯೋಸ್ಟೆಮ್‌ ಸುತ್ತುವರಿದಿರುತ್ತದೆ. ಇದು ರಕ್ತನಾಳಗಳನ್ನು ಹೊಂದಿರುತ್ತದೆ.

ಸಾಂದ್ರ ಮೂಳೆ: ಇದು ನಮ್ಮ ಮೂಳೆಯ ಹೊರ ಪದರ ಇದು ಅತ್ಯಂತ ಸಾಂದ್ರವಾಗಿದೆ. ಅಸ್ಥಿ ಪಂಜರವನ್ನು ನೋಡಿದಾಗ ನಮಗೆ ಕಾಣುವುದು ಈ ಸಾಂದ್ರ ಮೂಳೆಗಳನ್ನೇ.ಪಂಜರವನ್ನು ನೋಡಿದಾಗ ನಮಗೆ ಕಾಣುವುದು ಈ ಸಾಂದ್ರ ಮೂಳೆಗಳನ್ನೇ.

ಕ್ಯಾನ್ಸೆಲಸ್‌ ಮೂಳೆ: ಇದು ನೋಡಲು ಸ್ಪಂಜಿನಂತೆ ಕಾಣುತ್ತದೆ. ಇದು ಸಾಂದ್ರ ಮೂಳೆಯಷ್ಟು ಗಟ್ಟಿಯಾದದ್ದಲ್ಲ. ಇದು ಅಸ್ಥಿ ಮಜ್ಜೆಯನ್ನು ಸುತ್ತುವರಿದಿರುತ್ತದೆ..

ಮೂಳೆಯ ಬೆಳವಣಿಗೆ

ಮೂಳೆಗಳಲ್ಲಿ ಸತತವಾಗಿ ಮೂಳೆಯ ಮರುಹೀರಿಕೆ (ಹಳೆಯ ಮೂಳೆಯನ್ನು ತೆಗೆದು ಹಾಕುವ ಕ್ರಿಯೆ) ಮತ್ತು ಮೂಳೆಯ ಮರುಬೆಳವಣಿಗೆಯ ಜೀವರಸಾಯನಿಕ ಕ್ರಿಯೆ ನಡೆಯುತ್ತಿರುತ್ತದೆ. ಇಲಿಸದನ್ನು ಮೂಳೆ ಮೆಟಾಬಸಂ ಎನ್ನುವರು.

ಮೂಳೆ ಬೆಳವಣಿಗೆಯ ಮರುಹೀರಿಕೆ ಮತ್ತು ಮರುಬೆಳವಣಿಗೆಯ ಪ್ರಕ್ರಿಯೆಯಲ್ಲಿ ಎರಡು ಪ್ರಮುಖ ಜೀವಕೋಶಗಳು ತೊಡಗಿಕೊಂಡಿರುತ್ತವೆ. ಅವೆಂದರೆ:

  • ಅಸ್ಟಿಯೋಬ್ಲಾಸ್ಟ್ಸ್‌: ಮೂಳೆಯ ಮರುಬೆಳವಣಿಗೆಗೆ ಈ ಜೀವಕೋಶಗಳೇ ಕಾರಣ
  • ಆಸ್ಟಿಯೋಕ್ಲಾಸ್ಟ್‌ : ಈ ಜೀವಕೋಶಗಳು ಮೂಳೆಗಳ ಮರುಹೀರಿಕೆಯ ಹೊಣೆ ಹೊತ್ತಿವೆ

ಈ ಜೀವ ಕೋಶಗಳ ಸಹಕಾರದಿಂದಲೇ ದೇಹಕ್ಕೆ ಅಗತ್ಯವಾದ ಖನಿಜಾಂಶಗಳ ನಿರ್ವಹಣೆ ಮತ್ತು ದೇಹದ ಸಮತೋಲನೆಯನ್ನು ಕಾಪಾಡುತ್ತವೆ. ಈ ಬಗೆಯ ಮರುಹೀರಿಕೆ ಮತ್ತು ಮರುಜೋಡಣೆಯ ಪ್ರಕ್ರಿಯೆ ಜೀವನ ಪರ್ಯಂತ ನಡೆಯುತ್ತಲೇ ಇರುತ್ತದೆ.

ಆಹಾರ ಮತ್ತು ಮೂಳೆಗಳ ಆರೋಗ್ಯ

ದೇಹದಲ್ಲಿರುವ ಒಟ್ಟಾರೆ ಶೇ. ೯೯ ಭಾಗ ಕ್ಯಾಲ್ಶಿಯಂ ನಮ್ಮ ಮೂಳೆಗಳಲ್ಲೇ ಇದೆ. ಹಾಗಾಗಿ ಮೂಳೆಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಆಹಾರದಲ್ಲಿ ಸೂಕ್ತ ಪ್ರಮಾಣದ ಕ್ಯಾಲ್ಶಿಯಂ ಇರುವುದು ಅಗತ್ಯ. ಪಾಸ್ಫರಸ್‌, ಮೆಗ್ನೀಸಿಯಂ, ಫ್ಲೌರಡ್‌ ಮತ್ತು ವಿಟಾಮಿನ್‌ ಕೆ ಗಳು ಮೂಳೆ ಆರೋಗ್ಯಕ್ಕೆ ಅಗತ್ಯವಾದ ಇತರ ಪ್ರಮುಖ ಪೌಷ್ಟಿಕಾಂಶಗಳು. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿವೆ.

ದೇಹದಲ್ಲಿರುವ ಒಟ್ಟಾರೆ ಶೇ. ೯೯ ಭಾಗ ಕ್ಯಾಲ್ಶಿಯಂ ನಮ್ಮ ಮೂಳೆಗಳಲ್ಲೇ ಇದೆ. ಹಾಗಾಗಿ ಮೂಳೆಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಆಹಾರದಲ್ಲಿ ಸೂಕ್ತ ಪ್ರಮಾಣದ ಕ್ಯಾಲ್ಶಿಯಂ ಇರುವುದು ಅಗತ್ಯ. ಪಾಸ್ಫರಸ್‌, ಮೆಗ್ನೀಸಿಯಂ, ಫ್ಲೌರಡ್‌ ಮತ್ತು ವಿಟಾಮಿನ್‌ ಕೆ ಗಳು ಮೂಳೆ ಆರೋಗ್ಯಕ್ಕೆ ಅಗತ್ಯವಾದ ಇತರ ಪ್ರಮುಖ ಪೌಷ್ಟಿಕಾಂಶಗಳು. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿವೆ. ಆಹಾರದಲ್ಲಿರುವ ಕ್ಯಾಲ್ಶಿಯಂಅನ್ನು ದೇಹವು ಹೀರಿಕೊಳ್ಳಲು ವಿಟಾಮಿನ್‌ ಡಿ ಯ ಅಗತ್ಯವಿದೆ. ಸೂರ್ಯನ ಬೆಳಕಿನಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ವಿಟಾಮಿನ್‌ ಡಿ ಹೇರಳವಾಗಿದೆ. ಈ ವಿಟಾಮಿನ್‌ ಡಿಯನ್ನಿ ನಿಮ್ಮ ಚರ್ಮವು ಹೀರಿಕೊಳ್ಳುತ್ತದೆ.

ವಿಟಾಮಿನ್‌ ಡಿಯು  ಕೊಬ್ಬಿದ ಮೀನು, ತುಪ್ಪ ಮತ್ತಿತರ ಆಹಾರಗಳಲ್ಲಿ ದೊರೆಯುತ್ತದೆ.

ಮೂಳೆ ಆರೋಗ್ಯಕ್ಕೆ ಹಾನಿಕಾರಕವಾಗುವ ಅಂಶಗಳು

ಮೂಳೆ ಆರೋಗ್ಯಕ್ಕೆ ಹಾನಿಕಾರಕವಾಗುವ ಅನೇಕ ಅಂಶಗಳು

  • ವಂಶವಾಹಿಗಳು: ಮೂಳೆ ಸಮಸ್ಯೆಗಳು ವಂಶಪಾರಂಪರ್ಯವಾಗಿ ಬರುತ್ತವೆ. ನಿಮ್ಮ ಪೋಷಕರು ಅಥವಾ ಸೋದರ,ಸೋದರಿಯರಿಗೆ ಮೂಳೆಗಳ ಸಮಸ್ಯೆಗಳೇನಾದರೂ ಇದ್ದರೆ ನಿಮಗೂ ಬರುವ ಸಾಧ್ಯೆತೆಯಿದೆ.ಕೆಲವು ಬುಡಕಟ್ಟು ಜನಾಂಗಗಳಲ್ಲಿ ಬೇರೆಯವರಿಗಿಂತ ಶಕ್ತಿಯುತವಾದ ಮೂಳೆಗಳನ್ನು ಹೊಂದಿವೆ.
  • ಆಹಾರ: ಆರೋಗ್ಯಯುತ ಮೂಳೆಗಳನ್ನು ಹೊಂದಲು ಕ್ಯಾಲ್ಶಿಯಂ ಮತ್ತು ವಿಟಾಮಿನ್‌ ಡಿ ಸಾಕಷ್ಟು ಬೇಕು. ಸಿಗರೇಟ್‌ ಸೇದುವುದು ಮತ್ತು ಮದ್ಯ ಸೇವನೆಯಿಂದ ಮೂಳೆ ಸವೆತ ಅಪಾಯ ಹೆಚ್ಚುತ್ತದೆ
  • ದೈಹಿಕ ಚಟುವಟಿಕೆ: ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯಿಂದ ಮೂಳೆಗಳು ಬಲಗೊಳ್ಳುತ್ತವೆ.
  • ವಯಸ್ಸು: ವಯಸ್ಸು ಕಳೆದಂತೆ ಮೂಳೆಗಳ ದೃಢತೆ ಕಡಿಮೆಯಾಗುತ್ತದೆ. ಮೆನೋಪಾಸ್‌ ಹತ್ತಿರ ಬಂದಂತೆ ಮೂಳೆಯ ಸಮಸ್ಯೆಗಳು ಹೆಚ್ಚಾಗುತ್ತವೆ.
  • ದೇಹದ ಗಾತ್ರ: ಕೃಶ ಮತ್ತು ಕಡಿಮೆ ತೂಕದ ಹೆಣ್ಣು ಮಕ್ಕಳಲ್ಲಿ ದುರ್ಬಲ ಮೂಳೆಗಳನ್ನು ಹೊಂದಿರುವ ಸಾಧ್ಯತೆಯಿದೆ.

ದೈಹಿಕ ವ್ಯಾಯಾಮ ಮತ್ತು ಕ್ಯಾಲ್ಶಿಯಂ ಯುಕ್ತ ಆಹಾರವನ್ನು ಸೇವಿಸುವುದರಿಂದ ಆರೋಗ್ಯವಂತ ಮೂಳೆಗಳನ್ನು ಹೊಂದಲು ಸಾಧ್ಯ. ಮೂಳೆಯ ಸಮಸ್ಯೆಗಳು ಜೀವನದ ಗುಣಮಟ್ಟದ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತವೆ.

ಮೂಳೆ ಸವೆತ

ದೇಹದಲ್ಲಿ ಕ್ಯಾಲ್ಶಿಯಂ ಖನಿಜಾಂಶವು ಕಡಿಮೆಯಾದಾಗ ಮೂಳೆ ಸವೆತ ಉಂಟಾಗುತ್ತದೆ. ಈ ಸಮಸ್ಯೆಯು ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತದೆ. ಪುರುಷರಲ್ಲಿ ಈ ಸಮಸ್ಯೆಯು ವಿರಳ.

ಮೂಳೆ ಸವೆತವು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಇದು ವಯಸ್ಸಾಗುವ ಪ್ರಕ್ರಿಯೆಯ ಅವಿಭಾಜ್ಯ ಅಂಗ. ಆದರೆಕೆಲ ಮಹಿಳೆಯರಲ್ಲಿ ಇತರ ರೋಗಗಳಿಂದಾಗಿ ಈ ಸಮಸ್ಯೆಯು ಬೇಗನೇ ತಲೆದೋರುವ ಸಾಧ್ಯತೆಯಿದೆ. ಋತುಬಂಧದ ನಂತರ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಹೆಚ್ಚು. ಇದು ಯಾವುದೇ ಲಕ್ಷಣಗಳನ್ನು ತೋರದೇ ಇರುವುದರಿಂದ ಮೂಳೆ ಮುರಿತವಾದಾಗ ಅಥವಾ ಆಗಾಗ ಮೂಳೆ ಮುರಿಯುವುದರಿಂದ ವೈದ್ಯರು ಅಸ್ಥಿ ಭಿದುರತೆಯ ಸಾಧ್ಯತೆಯ ಬಗ್ಗೆ ಸಂಶಯ ವ್ಯಕ್ತ ಪಡಿಸುತ್ತಾರೆ.

ಮೂಳೆಯ ಸಾಂದ್ರತೆ (ಬೋನ್‌ ಮಿನರಲ್‌ ಡೆನ್ಸಿಟಿ (ಬಿಎಂಡಿ)) ಪರೀಕ್ಷೆಯ ಮೂಲಕ ವೈದ್ಯರು ಮೂಳೆಯಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ಅಳೆಯುತ್ತಾರೆ.

ಮೂಳೆ ಸವೆತವನ್ನು ತಡೆಯುವುದು

ಬಲಯುತವಾದ ಮೂಳೆಗಳ ಅಭಿವೃದ್ಧಿಯು ಬಾಲ್ಯದಲ್ಲಿಯೇ ಆರಂಭವಾಗುತ್ತದೆ. ಜೀವನ ಪರ್ಯಂತ ಆರೋಗ್ಯವಾಗಿರಲು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ ಮಾರ್ಗ. ಮೂಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಅಂಶಗಳು:

ರಸದೂತಗಳು (ಹಾರ್ಮೋನ್‌): ಹದಿಹರೆಯ ಹುಡುಗಿಯರು ಮತ್ತು ಯುವತಿಯರಲ್ಲಿ ಮೂಳೆ ಆರೋಗ್ಯ ನಿರ್ವಹಣೆಯಲ್ಲಿ ಈಸ್ಟ್ರೋಜನ್‌ ಹಾರ್ಮೋನ್‌ನ ಉತ್ಪಾದನೆ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಈಸ್ಟ್ರೋಜನ್‌ನ ಕೊರತೆಯು ಮೂಳೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಮತ್ತು ಮೂಳೆ ಸವೆತಕ್ಕೆ ಕಾರಣವಾಗಬಹುದು:

  • ಋತುಸ್ರಾವವಾಗದೇ ಇರುವುದು
  • ಅನಿಮಿಯತ ಋತು ಚಕ್ರ
  • ಮೊದಲ ಋತುಸ್ರಾವ ತಡವಾಗುವುದು
  • ಶೀಘ್ರ ಋತುಬಂಧ

ಜೀವನ ಶೈಲಿ: ಮಹಿಳೆಯರಲ್ಲಿ ಧೂಮಪಾನವು ಭಾರಿ ಪ್ರಮಾಣದ ಬಿಎಂಡಿ ನಷ್ಟಕ್ಕೆ ಕಾರಣವಾಗುತ್ತದೆ. ಮೂಳೆ ಸವೆತಕ್ಕಾಗಿ ಔಷಧಿ ಸೇವಿಸುತ್ತಿರುವ ಮಹಿಳೆಯರು ಧೂಮಪಾನ ಸೇವನೆಯನ್ನು ಮುಂದುವರಿಸಿದರೆ ಚಿಕಿತ್ಸೆಯ ಪೂರ್ಣ ಫಲ ದೊರೆಯುವುದಿಲ್ಲ. ವಿಪರೀತ ಮದ್ಯಸೇವನೆ ಮಾಡುವ ಮಹಿಳೆಯರಲ್ಲಿಯೂ ಮೂಳೆ ಸವೆತದ ಸಾಧ್ಯತೆ ಹೆಚ್ಚು. ಮೂಳೆ ಸವೆತಕ್ಕೆ ಕಾರಣವಾಗುವ ಜೀವನ ಶೈಲಿಯ ಅಂಶಗಳು:

 

  • ಅಸಮರ್ಪಕ ಕ್ಯಾಲ್ಶಿಯಂ ಸೇವನೆ,
  • ದೈಹಿಕ ವ್ಯಾಯಾಮದ ಕೊರತೆ
  • ಹೆಚ್ಚಿನ ಕೆಫೀನ್‌ ಸೇವನೆ
  • ವಿಪರೀತ ಮದ್ಯ ಸೇವನೆ

ಪೌಷ್ಟಿಕಾಂಶ

ಕ್ಯಾಲ್ಶಿಯಂ: ನಿಮ್ಮ ಮೂಳೆ ಬಲಯುತವಾಗಿರಲು ಕ್ಯಾಲ್ಶಿಯಂ ಅತ್ಯಗತ್ಯ ಪೌಷ್ಟಿಕಾಂಶ. ಮೂಳೆ ಸವೆತವನ್ನು ತಡೆಯಲು ಕ್ಯಾಲ್ಶಿಯಂ ಅನ್ನು ಯಥೇಚ್ಛವಾಗಿ ಹೊಂದಿರುವ ಹಾಲಿನ ಉತ್ಪನ್ನಗಳನ್ನು ಒಳಗೊಂಡಿರುವ ಪದಾರ್ಥಗಳನ್ನು ಹೊಂದಿರುವ ಸಮತೋಲನ ಆಹಾರವನ್ನು ಸೇವಿಸಬೇಕು.

ವಿಟಮಿನ್‌ ಡಿ: ಕ್ಯಾಲ್ಶಿಯಂ ಪಚನ ಕ್ರಿಯೆಯಲ್ಲಿ ವಿಟಮಿನ್‌-ಡಿ ಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ಗ್ಯಾಸ್ಟ್ರೋಇಂಟಸ್ಟೈನಲ್‌  ಮತ್ತು ಮೂತ್ರಪಿಂಡಗಳ ಮೂಲಕ ಕ್ಯಾಲ್ಶಿಯಂ ಹೆಚ್ಚಾಗಿ ಹೀರಿಕೊಳ್ಳುವಂತೆ ಮಾಡಿ, ಆಮೂಲಕ ದೇಹದ ಇತರ ಅಂಗಾಂಶಗಳು ಮತ್ತು ರಕ್ತಕ್ಕೆ ಕ್ಯಾಲ್ಶಿಯಂ ದೊರೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಕ್ಯಾಲ್ಶಿಯಂ ಮೂಳೆಗಳಲ್ಲಿ ದಾಸ್ತಾನಾಗುವಂತೆ ಮಾಡುವಲ್ಲಿಯೂ ವಿಟಮಿನ್‌-ಡಿ ಯು ಸಹಾಯ ಮಾಡುತ್ತದೆ.

ದೈನಂದಿನ ಕ್ಯಾಲ್ಶಿಯಂ ಸೇವನೆಗೆ ಶಿಫಾರಸು

ವಿಭಾಗ

ವಯಸ್ಸು (ವರ್ಷಗಳಲ್ಲಿ)

ಕ್ಯಾಲ್ಶಿಯಂ (ಎಂಜಿ)

ಮಕ್ಕಳು

1-3

500

4-8

700

ಹುಡುಗಿಯರು

9-11

1000

12-18

1300

ಮಹಿಳೆಯರು

19-50

1000

>50

1300

ಗರ್ಭಿಣಿಯರು/ಹಾಲೂಡಿಸುವ ತಾಯಂದಿರು

14-18

1300

19-30

1000

31-50

1000

ವಿವಿಧ ಆಹಾರಗಳಲ್ಲಿರುವ ಸರಾಸರಿ ಕ್ಯಾಲ್ಶಿಯಂ ಪ್ರಮಾಣ

ಹಾಲಿನ ಉತ್ಪನ್ನಗಳು

ಆಹಾರ ಮೂಲ

ಬಡಿಸುವ ಪ್ರಮಾಣ

ಕ್ಯಾಲ್ಶಿಯಂ

ಸಾಮಾನ್ಯ ಹಾಲು

1 ಕಪ್ (250 ಎಂ.ಎಲ್)

285

ಕೊಬ್ಬು ತೆಗೆದ ಹಾಲು

1 ಕಪ್‌ (250 ಎಂ.ಎಲ್)

310

ನೈಸರ್ಗಿಕ ಮೊಸರು

1 tub (200 ಗ್ರಾಂ)

340

ಕಡಿಮೆ ಕೊಬ್ಬಿನ ಮೊಸರು

1 tub (200 ಗ್ರಾಂ)

420

ಚೆಡ್ಡಾರ್ ಛೀಸ್‌

40 ಗ್ರಾಂ  ಕ್ಯೂಬ್

310

ಕಡಿಮೆ ಕೊಬ್ಬಿರುವ ಕಾಟೇಜ್ ಛೀಸ್‌

100 ಗ್ರಾಂ

80

ಹಾಲಿನ ಉತ್ಪಾದನೆ ಹೊರತಾದ ಆಹಾರಗಳು

ಬಿಳಿ ಬ್ರೆಡ್‌

1 ಸ್ಲೈಸ್

15

ಬೇಯಿಸಿದ ಪಾಲಕ್‌ ಸೊಪ್ಪು

1 ಕಪ್  (340 ಗ್ರಾಂ )

170

ಕ್ಯಾನ್ಡ್‌ ಸಾಲ್ಮನ್‌ ಮೀನು (+ಮೂಳೆಗಳು)

½ ಕಪ್

230

ಕ್ಯಾನ್ಡ್‌ ಸಾರ್ಡೈನ್ಸ್ (+ಮೂಳೆಗಳು)

50 ಗ್ರಾಂ

190

ಬಾದಾಮಿ

15 ಬಾದಾಮಿಗಳು

50

 

ಮೂಳೆಗಳ ಮರುಬೆಳವಣಿಗೆ ಮತ್ತು ಮರುಹೀರಿಕೆಯ ಪ್ರಕ್ರಿಯೆಯು ದೇಹದಲ್ಲಿ ಸತತವಾಗಿ ನಡೆಯುತ್ತಲೇ ಇರುತ್ತದೆ. ನಿಮಗೆ ವಯಸ್ಸಾದಂತೆ ಮೂಳೆಯ ಮರುಹೀರುವಿಕೆ ಹೆಚ್ಚಾಗಿ, ಮರುಬೆಳವಣಿಗೆ ಕಡಿಮೆಯಾಗುವುದು. ಇದು ಅತ್ಯಂತ ಸ್ವಾಭಾವಿಕ ಮತ್ತು ನೈಸರ್ಗಿಕ ಪ್ರಕ್ರಿಯೆ. ಆರೋಗ್ಯದಿಂದಿರಲು ದಿನನಿತ್ಯದ ವ್ಯಾಯಾಮ, ಅಗತ್ಯ ಕ್ಯಾಲ್ಶಿಯಂ ಮತ್ತು ವಿಟಮಿನ್‌ - ಡಿ ಯುಕ್ತ ಆಹಾರ ಸೇವನೆ ಅಗತ್ಯ. ಮೂಳೆ ಸವೆತವನ್ನು ತಡೆಯಲು ಮತ್ತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ವಿವರಗಳನ್ನು ನಿಮ್ಮ ವೈದ್ಯರನ್ನು ಕೇಳಿ ಪಡೆಯಿರಿ.

ಮೂಳೆಗೆ ವ್ಯಾಯಾಮಗಳು

ವಯಸ್ಸಾದಮತೆ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ವಯಸ್ಸಾದಂತೆ ನಿಮ್ಮ ದೇಹದಲ್ಲಾಗುವ ಪ್ರಮುಖ ಬದಲಾವಣೆಗಳೆಂದರೆ:

  • ಮೂಳೆಯ ಸಾಂದ್ರತೆ ಕಡಿಮೆಯಾಗುತ್ತದೆ
  • ಸ್ನಾಯುಗಳ ಗಾತ್ರ ಮತ್ತು ಅದರ ಪಟುತ್ವ ಕಡಿಮೆಯಾಗುತ್ತದೆ
  • ಸ್ನಾಯುರಜ್ಜು ಮತ್ತು ಅಸ್ಥಿರಜ್ಜುಗಳ ಸ್ಥಿತಿಸ್ಥಾಪಕ ಗುಣ ಕಡಿಮೆಯಾಗುತ್ತದೆ
  • ಮೃದ್ವಸ್ಥಿಗಳು ನಾಶಗೊಳ್ಳುತ್ತವೆ ಮತ್ತು ಕೀಲುಗಳ ಉರಿಯೂತ ಉಂಟಾಗುತ್ತದೆ

ಮೇಲಿನ ದೈಹಿಕ ಬದಲಾವಣೆಗಳಿಂದಾಗಿ ಮೂಳೆ  ಮುರಿತ, ವಿವಿಧ ಗಾಯಗಳು, ಮೂಳೆ ಸವೆತ ಮೂಳೆಬಿಧುರತೆ, ಅತ್ರೈಟಿಸ್‌ಗಳಿಗೆ ಒಳಗಾಗುವ ಅಪಾಯ ಹೆಚ್ಚುತ್ತದೆ. ದೈನಂದಿನ ವ್ಯಾಯಾಮದಿಂದಾಗಿ ಇವುಗಳನ್ನು ತಡೆಯುವುದಲ್ಲದೆ, ನಿಧಾನಗತಿಯ ಸಮಸ್ಯೆಗಳಾದ ಅಸ್ಟಿಯೋಆತ್ರೈಟಿಸ್‌ ಮತ್ತು ಆಸ್ಟಿಯೋಪೊರೊಸಿಸ್‌ಗಳಿಂದ ಬಹುಮಟ್ಟಿಗೆ ನೆಮ್ಮದಿ ಪಡೆಯಬಹುದು. ನಿಯಮಿತ ವ್ಯಾಯಾಮದಿಂದಾಗಿ ಮೂಳೆ ಸವೆತ, ಸ್ನಾಯುಗಳ ಶಕ್ತಿಯನ್ನು ಕಾಯ್ದುಕೊಳ್ಳಬಹುದು, ಸಮನ್ವಯ ಮತ್ತು ಸಮತೋಲನವನ್ನು ಕಾಯ್ದುಕೊಳ್ಳಬಹುದು, ಇದರಿಂದ ಮುಗ್ಗರಿಸುವುದು, ಬೀಳುವುದರಿಂದ ಉಂಟಾಗುವ ಮೂಳೆ ಮುರಿತಗಳನ್ನು ತಪ್ಪಿಸಬಹುದು.

ನೀವು ಯಾವುದೇ ವ್ಯಾಯಾಮವನ್ನು ಆರಂಭಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ. ನಿಮ್ಮ ವೈದ್ಯರು ಸಲಹೆ ಮಾಡಿದ ವ್ಯಾಯಾಮಗಳನ್ನಷ್ಟೇ ಮಾಡಿ. ನಿಮ್ಮದೇ ವ್ಯಾಯಾಮಗಳನ್ನು ಮಾಡಬೇಡಿ. ನಿಮ್ಮ ವೈಯಕ್ತಿಕ ಆರೋಗ್ಯ ಸ್ಥಿತಿಯನ್ನು ಆಧರಿಸಿ ನಿಮ್ಮ ವೈದ್ಯರು ಕೆಲವು ವ್ಯಾಯಾಮಗಳನ್ನು ಮಾಡುವುದನ್ನು ನಿಷೇಧಿಸಬಹುದು.

ಸರ್ವೆಕಲ್‌ (ಗರ್ಭಕೊರಳಿನ) ಕ್ಯಾನ್ಸರ್‌ ತಡೆಗಟ್ಟುವುದು

ಸರ್ವೆಕಲ್‌ (ಗರ್ಭಕೊರಳಿನ) ಕ್ಯಾನ್ಸರ್‌ಅನ್ನು ಈಗ ರೋಗನಿರೋಧಕ ಲಸಿಕೆ ನೀಡುವುದರ ಮೂಲಕ ತಡೆಯಬಹುದು

ಸಂಬಂಧಗಳನ್ನು ರಕ್ಷಿಸುವುದು ಸ್ತ್ರೀತ್ವದ ವೈಶಿಷ್ಟ್ಯ, ಅದು ಕುಟುಂಬವೇ ಆಗಿರಬಹುದು ಇಲ್ಲಾ ಜೀವನವೇ ಆಗಿರಬಹುದು. ಸರ್ವೆಕಲ್‌ ಕ್ಯಾನ್ಸರ್‌ ವಿಷಯಕ್ಕೆ ಬಂದಾಗ ಇದು ಇನ್ನು ತೀವ್ರವಾಗುತ್ತದೆ. ಭಾರತದಲ್ಲಿ ಕ್ಯಾನ್ಸರ್‌ ಸಂಬಂಧಿತ ಕಾಯಿಲೆಯಿಂದ ಸಾವಿಗೆ ಈಡಾಗುವ ಮಹಿಳೆಯರಲ್ಲಿ ಸರ್ವೆಕಲ್‌ ಕ್ಯಾನ್ಯರಿಗೆ (ಸ್ತನ ಕ್ಯಾನ್ಸರ್‌ಗಿಂತಲೂ ಹೆಚ್ಚು ಮಂದಿ ಈ ಕ್ಯಾನ್ಸರಿಗೆ) ಬಲಿಯಾಗುತ್ತಿರುವವರೇ ಹೆಚ್ಚು.

ಸರ್ವೆಕಲ್‌ ಕ್ಯಾನ್ಸರ್‌ ಎಂದರೇನು?

ಸರ್ವೆಕ್ಸ್‌ (ಗರ್ಭಕೊರಳು) ನಲ್ಲಿ ಉಂಟಾಗುವ ಕ್ಯಾನ್ಸರ್‌ಗೆ ಸರ್ವೆಕಲ್‌ (ಗರ್ಭಕೊರಳಿನ) ಕ್ಯಾನ್ಸರ್‌ ಎನ್ನುತ್ತಾರೆ. ಗರ್ಭಾಶಯದ ಮುಂಭಾಗದಲ್ಲಿರುವ ಭಾಗಕ್ಕೆ ಸರ್ವೆಕ್ಸ್‌ ಎನ್ನುತ್ತಾರೆ. ಅದು ಯಾವುದೇ ಬಗೆಯ ಸೋಂಕು ಗರ್ಭಾಶಯವನ್ನು ಸೇರುವುದನ್ನು ಈ ಸರ್ವೆಕ್ಸ್‌ ತಡೆಯುತ್ತದೆ.

ಸರ್ವೆಕಲ್‌ ಕ್ಯಾನ್ಸರ್‌ ಹೇಗೆ ಬರುತ್ತದೆ?

ಈ ಬಗೆಯ ಕ್ಯಾನ್ಸರ್‌ ವಂಶಪಾರಂಪರ್ಯವಾಗಿ ಬರುವುದಿಲ್ಲ. ಹ್ಯೂಮನ್‌ ಪ್ಯಾಪಿಲೊಮ ವೈರಸ್‌ ಈ ಸರ್ವೆಕಲ್‌ ಕ್ಯಾನ್ಸರಿಗೆಕಾರಣ. ಇದು ಅತ್ಯಂತ ಸಾಮಾನ್ಯ ವೈರಸ್‌ ಮತ್ತು ಜನನಾಂಗಗಳ ಸಂಪರ್ಕದಿಂದ ಈ ವೈರಸ್‌ ಹರಡುತ್ತದೆ. ರೋಗನಿರೋಧಕ ಲಸಿಕೆ ನೀಡಿಕೆಯಿಂದ ಈ ಸೋಂಕನ್ನು ತಡೆಯಬಹುದಾಗಿದೆ.

ಸರ್ವೆಕಲ್‌ ಕ್ಯಾನ್ಸರ್‌ ಯಾರಿಗೆ ಬರುವ ಸಾಧ್ಯತೆಯಿದೆ?

ಎಳೆಯ ಯುವತಿಯರು ಈ ಎಚ್‌ಪಿವಿ ಸೋಂಕಿಗೆ ಈಡಾಗುವ ಸಾಧ್ಯತೆ ಹೆಚ್ಚು. ಭವಿಷ್ಯದಲ್ಲಿ ಇದು ಸರ್ವೆಕಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಹೆಚ್ಚು. ಆದರೆ ಯಾವುದೇ ವಯೋಮಿತಿಯಿಲ್ಲದೆ ಪ್ರತಿ ಮಹಿಳೆಯೂ ಈ ಕ್ಯಾನ್ಸರಿನ ಅಪಾಯಕ್ಕೆ ಒಳಗಾಗಬಹುದು. ಹಾಗಾಗಿಯೇ ಹುಡುಗಿಯರನ್ನು ಆದಷ್ಟು ಬೇಗ ಇದರಿಂದ ರಕ್ಷಿಸುವುದು ಒಳಿತು.

ಸರ್ವೆಕಲ್‌ (ಗರ್ಭಕೊರಳು) ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವುದು ಹೇಗೆ?

ಅತ್ಯಂತ ಮುಂದುವರಿದ ಸ್ಥಿತಿಯನ್ನು ಸೇರುವವರೆಗೆ ಸರ್ವೆಕಲ್‌ ಕ್ಯಾನ್ಸರಿನ (ಗರ್ಭಕೊರಳಿನ ಕ್ಯಾನ್ಸರ್‌) ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಪ್ಯಾಪ್‌ಸ್ಮಿಯರ್‌ ಟೆಸ್ಟ್‌ ನಿಂದ ಮಾತ್ರ ಇದನ್ನು ಇನ್ನೂ ಆರಂಭಿಕ ಹಂತದಲ್ಲೆ ಕಂಡುಕೊಳ್ಳಬಹುದು. ಎಚ್‌ಪಿವಿ ಸೋಂಕು ಉಂಟಾದ ನಂತರವಷ್ಟೇ ಪ್ಯಾಪ್‌ಸ್ಮಿಯರ್‌ ಪರೀಕ್ಷೆಯಲ್ಲಿ ಪತ್ತೆಯಾಗುತ್ತದೆ ಎಂಬುದನ್ನು ನೆನಪಿಡಿ. ಆದರೆ ಇದು ಸೋಂಕು ಉಂಟಾಗುವುದನ್ನು ತಡೆಯುವುದಿಲ್ಲ.ಇಗೋ ಇಲ್ಲಿದೆ ಒಳ್ಳೆಯ ಸುದ್ದಿ! ಇದೀಗ ಸರ್ವೆಕಲ್‌ ಕ್ಯಾನ್ಸರ್‌ಅನ್ನು ತಡೆಯಬಹುದು

  • ಸೋಂಕುಂಟಾಗುವ ತುಂಬ ಮೊದಲೇ ಸರ್ವೆಕಲ್‌ ಕ್ಯಾನ್ಸರ್‌ ರೋಗನಿರೋಧಕ ಲಸಿಕೆಯಿಂದ ಇದನ್ನು ತಡೆಯಬಹುದು.
  • ಈ ರೋಗ ನಿರೋಧಕ ಲಸಿಕೆಯು ದೇಹದಲ್ಲಿ ಸೋಂಕನ್ನು ತಡೆಯುವ ಆಂಟಿಬಾಡಿಗಳನ್ನು ಉತ್ಪತ್ತಿ ಮಾಡುತ್ತದೆ. ಎಚ್‌ಪಿವಿ ಸೋಂಕು ತಗುಲಿದಾಗ ಈ ಆಂಟಿಬಾಡಿಗಳು ಆ ಸೋಂಕಿನಿಂದ ನಮ್ಮನ್ನು ಕಾಪಾಡುತ್ತವೆ. ವೈರಸ್‌ ಸರ್ವೆಕ್ಸ್ ನ ಮೇಲೆ ದಾಳಿ ಮಾಡಿದಾಗ ಅವು ವೈರಸ್‌ಗಳ ಮೇಲೆ ದಾಳಿ ಮಾಡುತ್ತವೆ.
  • ಎಚ್‌ಪಿವಿ ಸೋಂಕಿನಿಂದ ಸರ್ವೆಕ್ಸ್‌ ಅನ್ನು ರಕ್ಷಿಸುವ ಮೂಲಕ ರೋಗನಿರೋಧಕ ಲಸಿಕೆಯು ಸರ್ವೆಕಲ್‌ ಕ್ಯಾನ್ಸರಿನಿಂದ ರಕ್ಷಣೆ ನೀಡುತ್ತದೆ.

ರೋಗ ನಿರೋಧಕ ಲಸಿಕೆಯನ್ನು ಯಾರು ತೆಗೆದುಕೊಳ್ಳಬೇಕು?

ಹದಿಹರೆಯದ ಹೆಣ್ಣುಮಕ್ಕಳಿಗೆ ಆದಷ್ಟು ಶೀಘ್ರದಲ್ಲಿ ಈ ಲಸಿಕೆ ಕೊಟ್ಟರೆ ಒಳ್ಳೆಯದು. ಆದಷ್ಟು ಬೇಗ ನೀಡಿದಾಗಲೇ ಉತ್ತಮ ಫಲಿತಾಂಶ ಸಾಧ್ಯ. ಆದರೆ ಎಲ್ಲ ಮಹಿಳೆಯರೂ ಸರ್ವೆಕಲ್‌ ಕ್ಯಾನ್ಸರಿಗೆ ಒಳಗಾಗುವ ಸಾಧ್ಯತೆಯಿರುವುದರಿಂದ ನೀವು ನಿಮ್ಮ ವೈದ್ಯರ ಬಳಿ ಸಮಾಲೋಚನೆ ನಡೆಸಿ ನಿಮಗೆ ಸರಿಹೊಂದುವ ರೋಗನಿರೋಧಕ ಲಸಿಕೆಯ ಬಗ್ಗೆ ತಿಳಿಯಿರಿ.

ವ್ಯಾಕ್ಸಿನ್‌ ಹೇಗೆ ಕೊಡುತ್ತಾರೆ? ಇದು ಸುರಕ್ಷಿತವೇ?

ಈ ರೋಗನಿರೋಧಕ ಲಸಿಕೆಯನ್ನು ಆರು ತಿಂಗಳಲ್ಲಿ ಮೂರು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದು ಸುರಕ್ಷಿತ ಮತ್ತು ತಡೆದುಕೊಳ್ಳಬಹುದಾಗಿದೆ. ಲಸಿಕೆ ನೀಡಿದ ನಂತರ ಎಲ್ಲ ರೋಗ ನಿರೋಧಕ ಲಸಿಕೆಗಳಿಗಿರುವಂತೆ ಇದರಲ್ಲೂ ತುಂಬ ಕಡಿಮೆ ತೀವ್ರತೆಯ ಅಡ್ಡಪರಿಣಾಮಗಳು ಆಗಬಹುದು ಉದಾ: ಸ್ವಲ್ಪ ಜ್ವರ, ಸ್ವಲ್ಪ ಊತ ಕಾಣಬಹುದು.

ಮೂಲ: ಜಿ ಎಸ್ ಕೆ

ಇಂಡಿಯನ್ ವೊಮೆಂಸ್ ಹೆಲ್ತ್

 

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate