অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭನಿರೋಧಕ ಗುಳಿಗೆಗಳು

ಆವಿಷ್ಕಾರಗಳು ಪ್ರಪಂಚಕ್ಕೆ ಉಪಕಾರಿಯಾಗುವುದರ ಜೊತೆ ಜೊತೆಗೆ ಹಲವು ಬಾರಿ ಕಂಟಕವಾಗಿಯೂ ಪರಿಣಮಿಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗರ್ಭನಿರೋಧಕ ಗುಳಿಗೆಗಳು. ಬೇಡದ ಗರ್ಭವನ್ನು ತಡೆಗಟ್ಟುವಂಥ ಈ ಗುಳಿಗೆಗಗಳನ್ನು ಇಂದು ಅತಿಯಾಗಿ ಬಳಸುತ್ತಿರುವುದು ಯುವ ಸಮುದಾಯ. ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸಲು ಬಹುತೇಕ ಯುವಸಮುದಾಯ ಗರ್ಭನಿರೋಧಕಗಳ ಮೊರೆ ಹೋಗುತ್ತದೆ. ಇದರಿಂದಾಗಬಹುದಾದಂಥ ಅಪಾಯಗಳೆಲ್ಲ ಆ ಕ್ಷಣದಲ್ಲಿ ನೆನಪಿಗೆ ಬರುವುದೇ ಇಲ್ಲ!

ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ಬಂಜೆತನಕ್ಕೆ ಕಾರಣವಾಗಬಹುದು ಎಂಬ ಸತ್ಯವನ್ನು ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ. ಈ ವಿಚಾರ ಗೊತ್ತಿದ್ದರೂ ಯುವಸಮುದಾಯ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವಂಥ ಪ್ರಸಂಗ ಬರದಂತೆ ಎಚ್ಚರವಹಿಸುವುದೇ ಇಲ್ಲ. ಇದೀಗ ವಿಜ್ಞಾನಿಗಳು ಈ ಗರ್ಭನಿರೋಧಕ ಗುಳಿಗೆಗಳ ಇನ್ನೊಂದು ಅಪಾಯವನ್ನು ಗುರುತಿಸಿದ್ದಾರೆ. ಅದು- ನೆನಪು ಕಳೆದುಕೊಳ್ಳುವ ಸಮಸ್ಯೆ! ಹೌದು, ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ನಿಮ್ಮ ನೆನಪುಗಳನ್ನೇ ಹಾಳುಮಾಡಬಹುದು, ಸ್ಮರಣಶಕ್ತಿಗೆ ಹೊಡೆತ ನೀಡಬಹುದು ಎಂಬ ಸತ್ಯ ಯುಸಿ ಇರ್ವಿನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಪ್ರಯೋಗ ಸಾಬೀತುಪಡಿಸಿದೆ.

ಗುಳಿಗೆಗಳ ಅಡ್ಡ ಪರಿಣಾಮ

ಗರ್ಭಧಾರಣೆಯನ್ನು ತಡೆಗಟ್ಟಬೇಕೆಂದು ಯುವತಿಯರು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾರೆ. ಈ ಗುಳಿಗೆಗಳು ದೇಹದ ಹಾರ್ಮೋನುಗಳ ಮೇಲೆ ನೇರವಾಗಿ ಪರಿಣಾಮ ಬೀರಿ ಸ್ಮರಣಶಕ್ತಿಯನ್ನು ಕುಗ್ಗಿಸುತ್ತವೆ. ಜಗತ್ತಿನಾದ್ಯಂತ 10 ಕೋಟಿಗೂ ಅಧಿಕ ಯುವತಿಯರು ಗರ್ಭನಿರೋಧಕ ಗುಳಿಗೆಗಳನ್ನು ಬಳಸುತ್ತಿದ್ದಾರೆ. ಹಾರ್ಮೋನುಗಳ ಮೇಲೆ ಪರಿಣಾಮ ಬೀರುವಂಥ ಈ ಗುಳಿಗೆಗಳು ವಿಚಾರಗಳನ್ನು, ಘಟನೆಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಅಗತ್ಯವಿರುವ ಹಾರ್ಮೋನುಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. ಇದರಿಂದಾಗಿ ಸ್ಮರಣಶಕ್ತಿ ಕುಂಠಿತವಾಗುತ್ತದೆ.

ಗರ್ಭನಿರೋಧಕ ಗುಳಿಗೆಗಳು ಈಸ್ಟ್ರೋಜೆನ್, ಪ್ರೋಜೆಸ್ಟಿರೋನ್ ಮೊದಲಾದ ಲೈಂಗಿಕ ಹಾರ್ಮೋನುಗಳನ್ನು ಕುಂಠಿತಗೊಳಿಸುತ್ತವೆ. ಇದರಿಂದಾಗಿ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ ಈ ಲೈಂಗಿಕ ಹಾರ್ಮೋನುಗಳು ಕುಂಠಿತಗೊಂಡಾದ ಇತರ ಹಾರ್ಮೋನುಗಳ ಮೇಲೂ ಅದರ ಪರಿಣಾಮ ಬೀಳುತ್ತದೆ ಮತ್ತು ಈ ಅಡ್ಡಪರಿಣಾಮ ಸ್ಮರಣಶಕ್ತಿಯ ಮೇಲಾಗುತ್ತದೆ. ಅಲ್ಲದೆ ಮಹಿಳೆಯರಲ್ಲಿ ಈ ಲೈಂಗಿಕ ಹಾರ್ಮೋನುಗಳು ಮತ್ತು ಮೆದುಳಿನ ಎಡಭಾಗದ ಚಟುವಟಿಕೆಗಳ ಜೊತೆ ನೇರವಾಗಿ ಸಂಬಂಧ ಹೊಂದಿವೆ. ಇದೀಗ ಹೊರಬಿದ್ದಿರುವ ಇನ್ನೊಂದು ಸಮಸ್ಯೆ ನಿಜಕ್ಕೂ ಆತಂಕಕಾರಿಯಾಗಿದೆ. ಕಳೆದ 10 ವರ್ಷಗಳಿಂದ ಇದೇ ವಿಚಾರವಾಗಿ ಸಂಶೋಧನೆ ನಡೆಸುತ್ತರುವ ವಿಜ್ಞಾನಿಗಳು ಈ ವಿಚಾರದಲ್ಲಿ ಇನ್ನಷ್ಟು ಬೆಳಕು ಚೆಲ್ಲುವ ಭರವಸೆಯಿದೆ.

ಸತತವಾಗಿ ಗರ್ಭನಿರೋಧಕ ಗುಳಿಗೆಗಳನ್ನು ತಿಂದಿರುವಂಥ ಮತ್ತು ಇಂಥ ಗುಳಿಗೆಗಳನ್ನು ತಿನ್ನದೇ ಇರುವಂಥ ಮಹಿಳೆಯರನ್ನು ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದ್ದರು. ಗರ್ಭನಿರೋಧಕ ಗುಳಿಗೆಗಳನ್ನು ತಿಂದಂಥ ಮಹಿಳೆಯರು ತಮ್ಮ ಜೀವನದಲ್ಲಿ ನಡೆದಿರುವಂಥ ಘಟನೆಗಳನ್ನು ನೆನಪಿಸಿಕೊಳ್ಳುವಲ್ಲಿ ಮತ್ತು ತಮ್ಮದೇ ಕುಟುಂಬದವರನ್ನು ಕೂಡಾ ನೆನಪಿಸಿಕೊಳ್ಳುವಲ್ಲಿ ವಿಫಲರಾದರು.

ಈ ಸಂಶೋಧಕರು ಮುಖ್ಯವಾಗಿ ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಸ್ಮರಣಶಕ್ತಿಯ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಪ್ರತಿಯೊಬ್ಬರ ಮೆದುಳಿನಲ್ಲಿಯೂ ಸಹ ಎಡ ಮತ್ತು ಬಲ ಭಾಗಗಳಿರುತ್ತವೆ. ಪುರುಷರ ಸ್ಮರಣಶಕ್ತಿ ಮುಖ್ಯವಾಗಿ ಅವಲಂಬಿಸಿರುವುದು ಬಲ ಭಾಗವನ್ನು. ಮಹಿಳೆಯರ ಸ್ಮರಣಶಕ್ತಿ ಎಡ ಭಾಗದ ಮೇಲೆ ಅವಲಂಬಿತ. ಗರ್ಭನಿರೋಧಕ ಗುಳಿಗೆಗಳನ್ನು ಮಹಿಳೆಯರು ಸೇವಿಸಿದಾಗ ಅದು ಲೈಂಗಿಕ ಹಾರ್ಮೋನುಗಳ ಸಾಮಥ್ರ್ಯವನ್ನು ಮತ್ತು ಉತ್ಪತ್ತಿಯನ್ನು ಕುಗ್ಗಿಸುತ್ತವೆ. ಈ ಲೈಂಗಿಕ ಹಾರ್ಮೋನುಗಳಿಗೂ ಮೆದುಳಿನ ಎಡಭಾಗಕ್ಕೂ ಹತ್ತಿರದ ನಂಟು. ಹೀಗಾಗಿ ಲೈಂಗಿಕ ಹಾರ್ಮೋನುಗಳು ಕುಗ್ಗಿದಾಗ ಸ್ಮರಣಶಕ್ತಿ ಸಹಜವಾಗಿಯೇ ಕಡಿಮೆಯಾಗುತ್ತದೆ.

ಮೋಜಿನಲ್ಲಿ ಆರೋಗ್ಯ ನಿಕೃಷ್ಟ

ಇಂದಿನ ಯುವಪೀಳಿಗೆಗೆ ಮೋಜಿನ ಬದುಕೇ ಪ್ರಿಯವಾಗಿದೆ. ತಮ್ಮ ಜೀವನ ಶೈಲಿಯ ಪರಿಣಾಮವೇನಾಗಬಹುದು ಎಂಬ ಯೋಚನೆ ಅವರ ಮನಸ್ಸಿನಲ್ಲಿ ಬರುವುದೇ ಇಲ್ಲ. ಬಿಸಿಯುಸಿರು ಸೋಕಿದರೆ ಸಾಕು ಕರಗಿ ನೀರಾಗುತ್ತಾರೆ. ಸಂಯಮ ಎಂಬುದಂತೂ ಇಲ್ಲವೇ ಇಲ್ಲ. ಗರ್ಭಧರಿಸಿದಾಗಲೇ ಆಲಂಕ ಉಂಟಾಗುವುದು. ಆಮೇಲೆ ಅದು ಬೆಳೆಯದಂತೆ ತಡೆಯುವುದಕ್ಕೆ ಸಾವಿರಾರು ಗುಳಿಗೆಗಳ ಸೇವನೆ. ಗರ್ಭಧರಿಸುವುದನ್ನು ತಡೆಯಲು ಕಾಂಡೋಮ್ನಂಥ ವ್ಯವಸ್ಥೆ ಇದ್ದರೂ ಸಹ ಬಹಳಷ್ಟು ಬಾರಿ ಇವು ಫಲ ಕೊಡುವುದಿಲ್ಲ. ಅಂಥ ಸಂದರ್ಭಗಳಲ್ಲಿ ಗುಳಿಗೆಗಳಿಗೇ ಸಲಾಂ ಹೊಡೆದಿರುತ್ತಾರೆ ಯುವತಿಯರು.

ಗರ್ಭನಿರೋಧಕ ಗುಳಿಗೆಗಳ ಅಡ್ಡಪರಿಣಾಮದ ಬಗ್ಗೆ ಯುವತಿಯರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ ಎಂದೇ ಹೇಳಬೇಕು. ಮನೆಯಲ್ಲಿ ಹೆತ್ತವರ ಮಾತುಗಳನ್ನು ಕೇಳುವಂಥ, ಆ ಮಾತುಗಳಿಂದ ಅರಿವು ಮೂಡಿಸಿಕೊಳ್ಳುವಂಥ ಮನಸ್ಥಿತಿ ಬಹುಶಃ ಇಂದಿನ ಪೀಳಿಗೆಯಲ್ಲಿ ಇಲ್ಲ. ಇವೆಲ್ಲದಕ್ಕಿಂತ ಹೆಚ್ಚಾಗಿ ಗರ್ಭನಿರೋಧಕ ಗುಳಿಗೆಗಳನ್ನು ತಯಾರಿಸುವಂಥ ಕಂಪನಿಗಳು ತಮ್ಮ ಕಂಪನಿಯ ಗುಳಿಗೆಗಳು ಅಟ್ಟಪರಿಣಾಮ ಬೀರುವುದಿಲ್ಲ ಎಂದು ದೊಡ್ಡದಾಗಿ ಜಾಹೀರಾತು ಕೊಡುತ್ತಾರೆ. ಗರ್ಭಿಣಿಯಾಗುವುದನ್ನು ತಪ್ಪಿಸಲಲು ಒಂದು ಗುಳಿಗೆ ತಿಂದರೆ ಸಾಕು ಎಂಬ ಒಕ್ಕಣೆಯೂ ಜೊತೆಯಲ್ಲೇ ಇರುತ್ತದೆ. ಜಾಹೀರಾತುಗಳನ್ನು ನೋಡಿ, ಅವುಗಳನ್ನು ನಂಬಿಕೊಂಡೇ ಬೆಳೆದಂತಹ ಯುವಪೀಳಿಗೆ ಆ ಜಾಹೀರಾತುಗಳಿಗೆ ಮರುಳಾಗಿಬಿಡುತ್ತದೆ. ತಾವೇನೇ ಮಾಡಿದ್ರೂ ಗುಳಿಗೆಯ ರಕ್ಷಣೆಯಿದೆ ಎಂಬ ನಂಬಿಕೆಯಲ್ಲಿ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಎಡವಟ್ಟಾಗುವುದೇ ಇಲ್ಲಿ.

ಹೀಗಾಗಿ ಯುವಪೀಳಿಗೆ ಇಂದು ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಹಾದಿ ತಪ್ಪಿ ನಡೆಯುತ್ತಿದೆ ಎಂದಾದರೆ ಅದಕ್ಕೆ ಹೊಣೆಗಾರರು ಹಲವಾರು ಜನ. ಎಳವೆಯಿಂದಲೇ ಮಕ್ಕಳಲ್ಲಿ ಲೈಂಗಿಕ ವಿಚಾರಗಳ ಬಗ್ಗೆ ಅರಿವು ಮೂಡಿಸಿದರೆ ಇಂಥ ಸಮಸ್ಯೆ ಬರುವುದಿಲ್ಲ. ಇನ್ನೂ ಒಂದು ಆಘಾತಕಾರಿ ವಿಚಾರ ಎಂದರೆ ಈ ರೀತಿ ಹಾದಿ ತಪ್ಪುತ್ತಿರುವ ಯುವ ಪೀಳಿಗೆಯ ಪೈಕಿ ಹೆಚ್ಚಿನವರು ತಂದೆ ತಾಯಿಯ ಪ್ರೀತಿಯನ್ನು ಅಕ್ಕರೆಯನ್ನು ಪಡೆಯದವರು. ಪ್ರೀತಿ ಅಕ್ಕರೆ ಎಂದರೆ ಮಕ್ಕಳು ಕೇಳಿದ್ದನ್ನು ತಂದುಕೊಡುವುದಲ್ಲ. ಅವರು ಹಾದಿ ತಪ್ಪುತ್ತಾರೆಂಬ ಅನುಮಾನ ಬಂದ ತಕ್ಷಣ ಅವರನ್ನು ಬೈದು ತಿದ್ದುವುದು ಕೂಡಾ ಪ್ರೀತಿಯೇ. ಇಂದು ಪತಿ, ಪತ್ನಿ ಇಬ್ಬರೂ ನೌಕರಿಗೆ ಹೋಗುವವರು. ಹಣ ಒಟ್ಟುಗೂಡಿಸುವ ಭರದಲ್ಲೆ ಮಕ್ಕಳ ಕಡೆಗೆ ಗಮನ ಕೊಡುವುದಕ್ಕೆ ಸಮಯ ಇಲ್ಲ. ಅದಕ್ಕೆ ಆಯಾಗಳು, ಇಲ್ಲದಿದ್ದರೆ ಬೇಬಿ ಸಿಟ್ಟಿಂಗುಗಳು! ಆಯಾ, ಬೇಬಿಸಿಟ್ಟಿಂಗಿನಲ್ಲಿ ಏನೇ ಸೌಲಭ್ಯ ಇದ್ದರೂ ಸಹ ಅದು ಅಪ್ಪ, ಅಮ್ಮನ ಪ್ರೀತಿಗೆ ಸಮನಾಗುವುದಿಲ್ಲ. ಇಂದು ಗರ್ಭನಿರೋಧಕ ಗುಳಿಗೆಗಳು ಅಧಿಕ ಪ್ರಮಾಣದಲ್ಲಿ ಯುವಪೀಳಿಗೆಯಿಂದ ಬಳಸಲ್ಪಡುತ್ತಿದೆ ಎಂದಾದರೆ ಅದಕ್ಕೆ ಇಂಥ ತಂದೆ, ತಾಯಿ ಕೂಡಾ ಹೊಣೆಗಾರರಾಗುತ್ತಾರೆ. ಇಂಥ ಗುಳಿಗೆಗಳನ್ನು ಉತ್ಪಾದಿಸುವ ಕಂಪನಿಗಳು ಇಂದು ಈ ಮಟ್ಟಕ್ಕೆ ಬೆಳೆದಿವೆ ಎಂದಾದರೆ ಅದಕ್ಕೂ ಇವರೇ ಹೊಣೆಗಾರರು.

ಮೂಲ : ವಿಜ್ಞಾನ ಗಂಗೆ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate