অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿತ್ತಲು ಎಂಬ ಆಸ್ಪತ್ರೆ

ಮನೆಗೊಂದು ಹಿತ್ತಲಿದ್ದರೇನೇ ಭೂಷಣ ಎಂಬ ಮಾತು ಹಿಂದಿನ ಕಾಲದಲ್ಲಿತ್ತು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಿತ್ತಲನ್ನು ಕಾಣಬಹುದು. ಕೇವಲ ಹೂ-ಗಿಡಗಳಿಗಷ್ಟೇ ಅದು ನೆಲೆಯಾಗದೆ ಹಲವಾರು ಔಷಧಿ ಸಸ್ಯಗಳೂ ಅಲ್ಲಿ ಜಾಗ ಪಡೆದಿರುತ್ತಿದ್ದವು. ಮುಖ್ಯವಾಗಿ ಅವೆಲ್ಲ ದಿನನಿತ್ಯದ ಅಡುಗೆಯಲ್ಲೂ ಬಳಕೆಯಾಗಿ ಮನೆ ಜನರ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆದರೆ ಇಂದು ನಗರ ಪ್ರದೇಶಗಳಲ್ಲಂತೂ ಔಷಧಿ ಸಸ್ಯ ನೆಡುವುದಕ್ಕೆ ಜಾಗವೂ ಇಲ್ಲ, ಜಾಗವಿದ್ದರೂ ಗಿಡ ಬೆಳೆಸುವ ವ್ಯವಧಾನ ಯಾರಿಗೂ ಇಲ್ಲ. ಆದರೆ ಕೆಲವು ಸಸ್ಯಗಳನ್ನು ಇರುವ ಜಾಗದಲ್ಲೇ ಹೂಕುಂಡ ಬಳಸಿಯೂ ಬೆಳೆಸಬಹುದು. ಸ್ವಾಸ್ಥ ್ಯವೃದ್ಧಿಯಲ್ಲಿ ಅವು ಅಗತ್ಯವೂ ಹೌದು.

ತುಳಸಿ

ಹಿಂದು ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನೂ, ಪೂಜನೀಯ ಸ್ಥಾನವನ್ನೂ ಪಡೆದಿರುವ ತುಳಸಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಉಪಯೋಗಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇದು ನೆಗಡಿ, ಜ್ವರ ಮುಂತಾದ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಪ್ರತಿದಿನವೂ ಒಂದು ತುಳಸಿ ಎಲೆಯನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು. ಬಹುಪಾಲು ಎಲ್ಲ ಹಿಂದುಗಳ ಮನೆಯಲ್ಲೂ ತುಳಸಿ ಗಿಡವಂತೂ ಇದ್ದೇ ಇರುತ್ತದೆ. ಇದನ್ನು ಹೂಕುಂಡದಲ್ಲೂ ಬೆಳೆಸಬಹುದು. ಮನೆಯ ಸುತ್ತ ತುಳಸಿ ವನವಿದ್ದರೆ ಹಲವು ರೋಗಗಳು ನಿವಾರಣೆಯಾಗುತ್ತವೆ ಎಂಬ ವಿಷಯವನ್ನೂ ಇತ್ತೀಚಿನ ಸಂಶೋಧನೆ ಬಯಲಿಗೆಳೆದಿದೆ.

ಪುದಿನ

ಪುದಿನ ಹಲ್ಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ರಕ್ತಶುದ್ಧಿಯ ಹೊಣೆಯನ್ನೂ ಸಮರ್ಥವಾಗಿ ನಿಭಾಯಿಸುತ್ತದೆ. ತಲೆನೋವು, ಗಂಟಲಿನ ಸೋಂಕನ್ನೂ ನಿವಾರಿಸುವಲ್ಲಿ ಪುದಿನದ ಪಾತ್ರ ಮಹತ್ವದ್ದು. ಈ ಪುಟ್ಟ ಗಿಡವನ್ನೂ ಕುಂಡದಲ್ಲಿಯೋ, ತ್ಯಾಜ್ಯವೆಂದು ಬಿಟ್ಟ ಪಾತ್ರೆಯಲ್ಲಿಯೂ ಬೆಳೆಸಬಹುದು.

ಲೋಳೆಸರ

ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ಲೋಳೆಸರವನ್ನು ಬೆಳೆಯುವುದೂ ಸುಲಭ. ಹೆಚ್ಚು ನೀರೂ ಇದಕ್ಕೆ ಬೇಕಿಲ್ಲ. ಕೂದಲಿನ ರಕ್ಷಣೆ, ಸೌಂದರ್ಯ ಹೆಚ್ಚಿಸುವುದು ಲೋಳೆಸರದ ಬಹುಮುಖ್ಯ ಕೆಲಸ.

ಒಂದೆಲಗ

ಒಂದೆಲಗವನ್ನಂತೂ ಬಹುಪಾಲು ಎಲ್ಲ ಔಷಧ ತಯಾರಿಕೆಯಲ್ಲೂ ಬಳಸುತ್ತಾರೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಒಂದೆಲಗ ಅಗ್ರಸ್ಥಾನ ಪಡೆದಿದೆ. ಉಷ್ಣ ದೇಹಪ್ರಕೃತಿಯನ್ನು ಹೊಂದಿರುವವರು ಒಂದೆಲಗ ರಸವನ್ನು ಪ್ರತಿದಿನ ಕುಡಿಯುವುದರಿಂದ ದೇಹದ ಉಷ್ಣತೆ ಸಮಸ್ಥಿತಿಯಲ್ಲಿರುತ್ತದೆ. ಇದನ್ನು ಸಹ ಹೂಕುಂಡದಲ್ಲಿಯೇ ಬೆಳೆಯಬಹುದು.

ದೊಡ್ಡಪತ್ರೆ

ದೊಡ್ಡಪತ್ರೆ ಸೊಪ್ಪಿನ ರಸವನ್ನು ಸೇವಿಸುವುದರಿಂದ ಹಲವು ಅಲರ್ಜಿ ಸಂಬಂಧಿ ಕಾಯಿಲೆಗಳು ವಾಸಿಯಾಗುತ್ತವೆ. ಇವಂತೂ ಹೂಕುಂಡದಲ್ಲಿಯೂ, ಸ್ವಲ್ಪವೇ ಜಾಗವಿದ್ದರೂ ಅಲ್ಲಿಯೇ ಬೆಳೆಯುತ್ತವೆ. ದಿನನಿತ್ಯದ ಅಡುಗೆಯಲ್ಲೂ ಇದನ್ನು ಬಳಸಬಹುದು.
ಗರಿಕೆ ಹುಲ್ಲು: ಗರಿಕೆ ಹುಲ್ಲು ಕೆಮ್ಮು, ಕಫ ಮುಂತಾದ ಸಮಸ್ಯೆಗಳಿಗೆ ಸುಲಭ ಪರಿಹಾರವಾಗಿದೆ. ಜ್ವರವಿದ್ದರೆ ಸಹ ಗರಿಕೆ ಹುಲ್ಲಿನ ಕಷಾಯ ಮಾಡಿ ಕುಡಿಯಬಹುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate