অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೋನವ್ಯಾಂಡ್

ಸೋನವ್ಯಾಂಡ್

ಮಾನವನ ದೇಹದಲ್ಲಿ ತೀರಾ ಸಂಕೀರ್ಣವಾದ ಮತ್ತು ಅಷ್ಟೇ ಸೂಕ್ಷ್ಮವಾದ ಭಾಗ ಮೆದುಳು. ಮೆದುಳಿಗೆ ಚಿಕಿತ್ಸೆ ನೀಡುವುದೂ ತುಂಬಾ ಕಷ್ಟ, ಅದಕ್ಕೆ ಎಷ್ಟು ಪರಿಣತಿ ಇದ್ದರೂ ತಾಳ್ಮೆ ಇಲ್ಲದಿದ್ದರೆ ಅಥವಾ ಆತುರದ ಕೆಲಸಕ್ಕೆ ಕೈ ಹಚ್ಚಿದರೆ ಮೆದುಳಿನ ವ್ಯವಸ್ಥೆ ಹಾಳಾಗಿಬಿಡುತ್ತದೆ. ಇನ್ನು ಮೆದುಳಿನ ಕ್ಯಾನ್ಸರ್ಗೆ ಚಿಕಿತ್ಸೆ ಕೊಡುವಾಗ ಎಷ್ಟು ಜಾಗೃತೆಯಿದ್ದರೂ ಸಾಲದು. ಸ್ವಲ್ಪ ಕೈ ಅಲುಗಾಡಿದರೂ ಮೆದುಳೇ ನಿಷ್ಕ್ರಿಯಗೊಳ್ಳುವ ಅಪಾಯವಿದೆ. ಮೆದುಳಿನ ಕ್ಯಾನ್ಸರ್ ಇದೆಯೇ ಎಂದು ಇದುವರೆಗೆ ಸಿಟಿ ಸ್ಕ್ಯಾನ್, ಎಂಆರ್ಐ ಮೂಲಕ ಪರೀಕ್ಷಿಸಲಾಗುತ್ತಿತ್ತು. ಆದರೆ ಇವು ಶಸ್ತ್ರಚಿಕಿತ್ಸೆಯ ಮೊದಲು ಮಾಡುವ ಪರೀಕ್ಷೆಗಳಾದ ಕಾರಣ ಮೆದುಳಿನ ಪೂರ್ಣ ವಿಚಾರ ಅರಿವಿಗೆ ನಿಲುಕುತ್ತಿರಲಿಲ್ಲ. ಇದೀಗ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು, ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಅದುವೇ ಮೆದುಳಿನ ಅಲ್ಟ್ರಾಸೌಂಡ್ ಸ್ಕ್ಯಾನರ್.

ಸಾಮಾನ್ಯವಾಗಿ ಮೆದುಳಿನ ಸ್ಕ್ಯಾನಿಂಗ್ಗೆ ಬಳಸುತ್ತಿರುವುದು ಸಿಟಿ ಸ್ಕ್ಯಾನಿಂಗ್ ಮತ್ತು ಎಂಆರ್ಐ ಸ್ಕ್ಯಾನಿಂಗ್ ತಂತ್ರಜ್ಞಾನಗಳನ್ನು. ಆದರೆ ಈ ವಿಧಾನಗಳಿಂದ ಮೆದುಳಿನ ಆಪರೇಷನ್ಗೆ ಮೊದಲಿನ ವಿವರಗಳನ್ನಷ್ಟೇ ಪಡೆಯಬಹುದಾಗಿದೆ. ಮೆದುಳಿನ ಆಪರೇಷನ್ ಮಾಡಿದ ಬಳಿಕ ಮೆದುಳಿನ ಗಾತ್ರದಲ್ಲಿಯೂ ವ್ಯತ್ಯಾಸವಾಗುತ್ತದೆ. ಮೆದುಳು ವಿಕಸನಗೊಳ್ಳುವ ಅಥವಾ ಸಂಕೋಚನಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಆಪರೇಷನ್ಗೆ ಮೊದಲು ಕ್ಯಾನ್ಸರ್ ಗಡ್ಡೆಯನ್ನು ಗುರುತಿಸಿದ ಜಾಗವನ್ನು ಆಪರೇಷನ್ ನಂತರವೂ ನಿಖರವಾಗಿ ಗುರುತಿಸುವುದು ಸಾಧ್ಯ ಇಲ್ಲ. ಸಿಟಿ ಸ್ಕ್ಯಾನಿಂಗ್ ಮತ್ತು ಎಂಆರ್ಐ ಸ್ಕ್ಯಾನಿಂಗ್ಗಳು ಅತ್ಯಧಿಕ ವಿದ್ಯುತ್ಕಾಂತೀಯ ಶಕ್ತಿಯ ಸಹಾಯದಿಂದ ಕೆಲಸ ಮಾಡುವ ಕಾರಣ ಆಪರೇಷನ್ ನಂತರ ಕ್ಯಾನ್ಸರ್ ಗಡ್ಡೆಯನ್ನನು ಗುರುತಿಸುವುದಕ್ಕೆ ಈ ತಂತ್ರಜ್ಞಾನಗಳನ್ನು ಬಳಸುವುದಕ್ಕೆ ಸಾಧ್ಯವಿಲ್ಲ. ಇವುಗಳನ್ನು ಬಳಸುವಾಗ ಕಾಂತಗುಣವುಳ್ಳ ವೈದ್ಯಕೀಯ ಸಲಕರಣೆಗಳನ್ನೂ ಬಳಸುವಂತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಯ ವೆಚ್ಚ ದುಬಾರಿಯಾಗುತ್ತದೆ. ಸಾಮಾನ್ಯ ಜನಕ್ಕೆ ಎಟುಕದ ಮಟ್ಟಕ್ಕೆ ಹೋಗುತ್ತದೆ. ಅಲ್ಲದೆ ಈ ವಿಧಾನದಲ್ಲಿ ಕ್ಯಾನ್ಸರ್ ಗಡ್ಡೆ ಸಂಪೂರ್ಣವಾಗಿ ಹೊರತೆಗೆಯಲಾಗುತ್ತದೆ ಎಂಬ ನಂಬಿಕೆಯೂ ಇಲ್ಲ. ಸ್ವಲ್ಪವೇ ಸ್ವಲ್ಪ ಕ್ಯಾನ್ಸರ್ ಗಡ್ಡೆ ಉಳಿಯಿತು ಎಂದಾದರೆ ಮತ್ತೆ ಸರ್ಜರಿ ಮಾಡಲೇಬೇಕು. ಇವೆಲ್ಲದಕ್ಕೂ ಒಂದು ಪರಿಹಾರ ಎಂಬಂತೆ ಈಗ ಬಳಕೆಗೆ ಬಂದಿರುವುದು ಅಲ್ಟ್ರಾಸೌಂಡ್ ಸ್ಕ್ಯಾನರ್. ಇದುವೇ ಸೋನವ್ಯಾಂಡ್.
ಸೋನವ್ಯಾಂಡ್ ಎಂದರೆ...
ಅಲ್ಟ್ರಾಸೌಂಡ್ (ಶಬ್ದದ ಸೂಕ್ಷ್ಮತರಂಗಗಳು) ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ ಕ್ಯಾನ್ಸರ್ ಗಡ್ಡೆಯನ್ನು ಸರಿಯಾಗಿ ಗುರುತಿಸಿ ಒಂದು ಕಣವೂ ಉಳಿಯದಂತೆ ಗಡ್ಡೆಯನ್ನು ಹೊರತೆಗೆಯುವುದಕ್ಕೆ ಇದರಿಂದ ಸಾಧ್ಯ. ಸೋನವ್ಯಾಂಡ್ ಉಪಕರಣದಿಂದ ಬಿಡುಗಡೆಯಾಗುವ ಶಬ್ದದ ಸೂಕ್ಷ್ಮತರಂಗಗಳು ಆಪರೇಷನ್ ಮೂಲಕ ತೆರೆದಿರುವ ತಲೆಬುರುಡೆಯ ಒಳಗೆ ಪ್ರವೇಶಿಸುತ್ತವೆ. ತಡೆ ಸಿಕ್ಕಿದಾಗ ಶಬ್ಡತರಂಗ ಪ್ರತಿಫಲಿಸಿ ಹಿಂದಕ್ಕೆ ಬರುವುದು ಇದರ ಗುಣ. ಆಲ್ಟ್ರಾಸೌಂಡನ್ನು ಹಡಗು ಯಾನದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಎದುರಿನಿಂದ ಬರುವ ನೌಕೆಗಳು, ಸಾಗರದಲ್ಲಿ ಇರಬಹುದಾದಂಥ ತಡೆಗಳನ್ನು ಗುರುತಿಸಲು ಅಲ್ಟ್ರಾಸೌಂಡ್ ಬಳಸಲಾಗುತ್ತದೆ. ಇದೇ ಅಲ್ಟ್ರಾಸೌಂರ್ಡ ಕ್ಯಾನ್ಸರ್ ಗಡ್ಡೆಯನ್ನು ಗುರುತಿಸಲೂ ನೆರವಾಗುತ್ತದೆ.
ತೆರೆದ ಮೆದುಳಿನ ಮೂಲಕ (ತಲೆಬುರುಡೆ ಗಟ್ಟಿ ಇರುವುದರಿಂದ ಶಬ್ದತರಂಗ ಪ್ರತಿಫಲಿಸುತ್ತದೆ) ಪ್ರವೇಶಿಸುವ ಶಬ್ದತರಂಗವು ಕ್ಯಾನ್ಸರ್ ಗಡ್ಡೆಗೆ ಬಡಿದು ಪ್ರತಿಫಲಿಸುತ್ತದೆ. ಈ ಪ್ರತಿಫಲನದ 3-ಡಿ ಚಿತ್ರವನ್ನು ನೋಡಿಕೊಂಡು ವೈದ್ಯರು ಸರ್ಜರಿ ಮಾಡುತ್ತಾರೆ. ಇನ್ನೂ ವಿಶೇಷ ಎಂದರೆ ಸಿಟಿ ಅಥವಾ ಎಂಆರ್ಐ ಸ್ಕ್ಯಾನಿಂಗ್ ಮೂಲಕ ಪಡೆದ ವಿವರಗಳನ್ನು ಸಹ ಈ ಉಪಕರಣ 3-ಡಿ ಚಿತ್ರದ ಜೊತೆಯಲ್ಲೇ ತೋರಿಸುತ್ತದೆ. ಹೀಗಾಗಿ ಕ್ಯಾನ್ಸರ್ ಗಡ್ಡೆಯನ್ನು ನಿಖರವಾಗಿ ಗುರುತಿಸಿ, ಸರ್ಜರಿ ಮಾಡುವುದಕ್ಕೆ ಅನುಕೂಲವಾಗುತ್ತದೆ.
ಬೆಂಗಳೂರಿನಲ್ಲಿ ಏಷ್ಯಾದ ಪ್ರಥಮ
ಈ ಸೋನವ್ಯಾಂಡ್ ಉಪಕರಣ ಎಲ್ಲೋ ವಿದೇಶದಲ್ಲಿ ಇರುವುದಲ್ಲ. ನಮ್ಮ ಬೆಂಗಳೂರಿನಲ್ಲೇ ಇದರ ಬಳಕೆ ಶುರುವಾಗಿದೆ. ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆ ಸೋನವ್ಯಾಂಡ್ ಉಪಕರಣವನ್ನು ಅಳವಡಿಸಿದ್ದು, ರಾಜ್ಯದ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆಯನ್ನು ಹುಟ್ಟಿಸಿದೆ. ಇನ್ನೂ ವಿಶೇಷ ಎಂದರೆ ಇದು ಏಷ್ಯಾದಲ್ಲೇ ಪ್ರಥಮ ಸೋನವ್ಯಾಂಡ್! ಈ ಬಗ್ಗೆ ವಿಕ್ರಂ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಬಿ. ರವಿ ಮೋಹನ ರಾವ್ ಅವರು ಹೀಗೆ ಹೇಳುತ್ತಾರೆ-

ಡಾ. ಬಿ. ರವಿ ಮೋಹನ ರಾವ್
`ಸಿಟಿ ಅಥವಾ ಎಂಆರ್ಐ ಸ್ಕ್ಯಾನಿಂಗ್ ಬಳಸಿ ಮಾಡುವ ಕ್ಯಾನ್ಸರ್ ಸರ್ಜರಿಯ ಫಲಿತಾಂಶ ಗರಿಷ್ಠ ಎಂದರೆ ಶೇ. 50-60ರಷ್ಟಿರಬಹುದು. ಒಂದಷ್ಟು ಪ್ರಮಾಣದ ಕ್ಯಾನ್ಸರ್ ಅಂಶಗಳು ಉಳಿದೇ ಉಳಿಯುತ್ತವೆ. ಸರ್ಜರಿ ಸಮಯದಲ್ಲಿ ಈ ಉಪಕರಣಗಳನ್ನು ಬಳಸುವುದು ಸಾಧ್ಯವಿಲ್ಲದ ಕಾರಣ ಈ ದೋಷ. ಸರ್ಜರಿ ನಂತರ ಮತ್ತೆ ಸ್ಕ್ಯಾನ್ ಮಾಡಿ, ಕ್ಯಾನ್ಸರ್ ಅಂಶ ಉಳಿದಿದೆ ಅಂತ ಗೊತ್ತಾದರೆ ಮತ್ತೊಂದು ಸರ್ಜರಿ ಮಾಡಬೇಕಾಗುತ್ತದೆ. ಇದರಿಂದ ರೋಗಗಳಿಗೆ ವೆಚ್ಚ ದುಪ್ಪಟ್ಟಾಗುತ್ತದೆ. ಆದರೆ ಸೋನವ್ಯಾಂಡ್ ಉಪಕರಣವನ್ನು ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗಲೇ ಬಳಸಬಹುದಾದ್ದರಿಂದ ಶೆ.100ರಷ್ಟು ಫಲಿತಾಂಶವನ್ನು ನಿರೀಕ್ಷಿಸಬಹುದು. ಸರ್ಜರಿ ಮಾಡುತ್ತ ಜೊತೆ ಜೊತೆಗೇ ಸ್ಕ್ಯಾನಿಂಗ್ ಕೂಡಾ ಆಗುವುದರಿಂದ ಕ್ಯಾನ್ಸರ್ನ ಅಂಶ ಉಳಿಯುವ ಪ್ರಶ್ನೆಯೇ ಇಲ್ಲ. ಕ್ಯಾನ್ಸರ್ ಗಡ್ಡೆಯನ್ನು ಪೂರ್ಣವಾಗಿ ತೆಗೆಯುವುದು ಸಾಧ್ಯವಾಯಿತು ಎಂದಾದರೆ ರೋಗಿ ಆರೋಗ್ಯವಂತನಾಗುತ್ತಾನೆ.
ಮೆದುಳಿನ ಸರ್ಜರಿ ಎಂದರೆ ವೈದ್ಯರು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಮೆದುಳಿನಲ್ಲಿರುವ ನರಮಂಡಲಗಳಿಗಾಗಲೀ ಅಥವಾ ಇನ್ನಿತರ ಭಾಗಗಳಿಗಾಗಲೀ ಸ್ವಲ್ಪ ಹಾನಿಯಾದರೂ ಸಹ ಕ್ಯಾನ್ಸರ್ ರೋಗಿ ಮತ್ತೊಂದು ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ನರಮಂಡಲಗಳು ಕತ್ತರಿಸಲ್ಪಟ್ಟರೆ ಆತನ ಮೆದುಳು ನಿಷ್ಕ್ರಿಯವಾದಂತೆಯೇ ಲೆಕ್ಕ. ಹೀಗಾಗಿ ನುರಿತ ವೈದ್ಯರು ಕೂಡಾ ಮೆದುಳಿನ ಸರ್ಜರಿ ವಿಚಾರದಲ್ಲಿ ಬಹಳಷ್ಟು ಎಚ್ಚರ ವಹಿಸುತ್ತಾರೆ. ಸೋನವ್ಯಾಂಡ ಉಪಕರಣವನ್ನು ಬಳಸಿದ್ದೇ ಆದಲ್ಲಿ ಯಾವ ಭಾಗದಲ್ಲಿ ಕ್ಯಾನ್ಸರ್ ಇದೆ, ಯಾವುದು ನರಮಂಡಲಗಳು, ರಕ್ತನಾಳಗಳು ಯಾವುವು ಎಂಬ ವಿವರಗಳನ್ನು ಅದು ತೋರಿಸುತ್ತದೆ. ಹೀಗಾಗಿ ಬೇರೆ ಭಾಗಕ್ಕೆ ಹಾನಿಯಾಗುವ ಅಪಾಯ ಇಲ್ಲಿಲ್ಲ. ಇದು ವೈದ್ಯರಿಗೆ, ರೋಗಿಗಳಿಗೆ ಇಬ್ಬರಿಗೂ ಅನುಕೂಲವೇ. ಸೋನವ್ಯಾಂಡ್ ಬಳಸಿದರೆ ಆರ್ಧಕ್ಕರ್ಧ ಖರ್ಚು ಕಡಿಮೆಯಾಗುತ್ತದೆ.'
ಒಟ್ಟಿನಲ್ಲಿ ಮೆದುಳು ಕ್ಯಾನ್ಸರ್ನ ಸರ್ಜರಿಯ ವಿಚಾರದಲ್ಲಿ ಈ ಸೋನವ್ಯಾಂಡ್ ಉಪಕರಣ ಹೊಸ ಭರವಸೆಗಳನ್ನು ಹುಟ್ಟಿಸಿರುವುದಂತೂ ನಿಜ.

p>ಮೂಲ : ವಿಜ್ಞಾನ ಗಂಗೆ

ಕೊನೆಯ ಮಾರ್ಪಾಟು : 4/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate