অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಂತಾನಹೀನತೆಯ ಕಾರಣ ಶೋಧಿಸುತ್ತ

ಯೋನಿಯ ಮೂಲಕ ಪ್ರವೇಶಿಸುವಂಥ ವೀರ್ಯವು ಗರ್ಭನಾಳವನ್ನು ಹಾದು, ಗರ್ಭಕೋಶವನ್ನು ಸೇರಿ ಅಲ್ಲಿರುವ ಅಂಡಾಣುವಿನೊಂದಿಗೆ ಮಿಲನವಾಗಬೇಕು. ಅಂದರೆ ಗರ್ಭವತಿಯಾಗಬೇಕೆಂದರೆ ಎರಡು ಮಿಲನಗಳಾಗಬೇಕು- ಒಂದು ಸ್ತ್ರೀ-ಪುರುಷ ಮಿಲನ, ಇನ್ನೊಂದು ಈ ಮಿಲನದ ಬಳಿಕದ ಅಂಡಾಣು-ವೀರ್ಯಾಣು ಮಿಲನ. ದೇಹದಲ್ಲಿರುವಂಥ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ವೀರ್ಯದ ಚಲನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತದೆ. ಆದರೆ ವೀರ್ಯಕ್ಕೆ ಹೊದಿಕೆಯಂತೆ (ಕೋಟ್ನಂತೆ) ಇರುವ ಪ್ರೋಟೀನ್ ಡಿಇಎಫ್ ಬಿ 126 ಈ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಿ ಅಂಡಾಣುವಿನೊಂದಿಗೆ ಮಿಲನವಾಗುತ್ತದೆ. ಒಂದು ವೇಳೆ ವೀಯಾಣುವಿನಲ್ಲಿ ಈ ಪ್ರೋಟೀನ್ ಹೊದಿಕೆ ಇಲ್ಲದೇ ಹೋದರೆ?

ಮಗುವಿನ ಕಿಲಕಲ ನಗು, ಅದರ ಅಳು, ರಂಪಾಟ, ಅದರ ಚೇಷ್ಟೆಗಳು, ಆಟಗಳು... ಮಗುವಿನ ಒಂದೊಂದು ಕ್ಷಣದಲ್ಲೂ ಬೆರೆತುಕೊಂದಡರೆ ದೊಡ್ಡವರೂ ಕೂಡಾ ಮಕ್ಕಳೇ ಆಗುತ್ತಾರೆ! ಆ ಕಂದಮ್ಮಗಳೊಂದಿಗೆ ತಾವೂ ತೊದಲುನುಡಿಯಲ್ಲಿ ಮಾತನಾಡುತ್ತಾರೆ. ಮಕ್ಕಳೊಂದಿಗೆ ಕಳೆಯುವ ಆ ಕ್ಷಣಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವೇನೋ? ಮುದ್ದಾದ ಮಕ್ಕಳನ್ನು ಕಂಡಾಗ ಭಾವುಕರಾಗದವರು ಯಾರಿದ್ದಾರೆ? ಇಂಥದ್ದೇ ಒಂದು ಮುದ್ದು ಕಂದ ನನಗೂ ಇರಬೇಕು... ಹಾಗಂತ ಹೆಂಗಸರೂ ಬಯಸುತ್ತಾರೆ, ಪುರುಷರೂ ಕೂಡಾ! ಬಯಕೆಗಳು ಎಲ್ಲಾ ಕಾಲದಲ್ಲೂ ಈಡೇರುವುದಿಲ್ಲ. ಸಂತಾನ ಪಡೆಯುವುದು ಸುಲಭದ ವಿಚಾರವೂ ಅಲ್ಲ. ಸ್ತ್ರೀ-ಪುರುಷ ಮಿಲನಗೊಂಡರೆ ಸಾಕು ಸಂತಾನವಾಗದೇ ಏನು ಎಂಬ ಪ್ರಶ್ನೆಗಳು ಸಹಜ. ಮಿಲನವೊಂದಷ್ಟೇ ಸಂತಾನದ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದಲ್ಲ.

ಸ್ತ್ರೀ-ಪುರುಷರಿಬ್ಬರಲ್ಲಿಯೂ ಇರಬಹುದಾದಂಥ ನ್ಯೂನತೆಗಳದ್ದು ಇಲ್ಲಿ ಪ್ರಮುಖ ಪಾತ್ರ. ಯಾವುದೇ ಸಮಸ್ಯೆಗಳಿಲ್ಲ ಎಂದಾದರೆ ಮಿಲನ ಮಾತ್ರಕ್ಕೇ ಸಂತಾನ ಪಡೆಯಬಹುದು. ಸಮಸ್ಯೆಗಳಿದ್ದದ್ದೇ ಆದಲ್ಲಿ ಆ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಕಡೆಗೆ ಮೊದಲು ಗಮನ ಹರಿಸಬೇಕು. ಸ್ತ್ರೀಯರಲ್ಲಿ ಉತ್ಪತ್ತಿಯಾಗುವಂಥ ಅಂಡಾಣು ಫಲಪ್ರದವಾಗಿರಬೇಕು, ಜೊತೆಗೆ ಆರೋಗ್ಯಪೂರ್ಣವಾಗಿರಬೇಕು. ಪುರುಷರ ವೀರ್ಯವೂ ಅಷ್ಟೇ ಫಲಪ್ರದ ಮತ್ತು ಆರೋಗ್ಯದಿಂದ ಇರಬೇಕು. ಅದೆಷ್ಟೋ ಬಾರಿ ಸ್ತ್ರೀಯರಲ್ಲೋ ಪುರುಷರಲ್ಲೋ ಸಮಸ್ಯೆಗಳಿರುವ ಕಾರಣ ಸಂತಾನ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ನಮಗೆ ಮಕ್ಕಳಾಗಿಲ್ಲ ಎಡಂದು ಕೊರಗುತ್ತಾರೆಯೇ ವಿನಃ ಏನು ಸಮಸ್ಯೆ ಇರಬಹುದು ಎಂಬ ಬಗ್ಗೆ ಚಿಂತನೆ ನಡೆಸುವುದಿಲ್ಲ. ಕೊರಗೇ ಹೆಚ್ಚಾಗಿರುವಾಗ ಚಿಂತನೆ ನಡೆಸುವುದಕ್ಕೆ ಸಾಧ್ಯವೂ ಇಲ್ಲ. ಇಷ್ಟೆಲ್ಲಾ ಪ್ರಸ್ತಾಪ ಮಾಡಬೇಕಾಗಿ ಬಂದದ್ದು ಪುರುಷರಲ್ಲಿ ಸಂತಾನ ಹೀನತೆಗೆ ಏನು ಕಾರಣಗಳಿರಬಹುದು ಎಂಬ ಬಗ್ಗೆ ಅಮೆರಿಕದ ಯುಸಿ ಡೇವಿಸ್ ಬೊಡೇಗಾ ಮೆರೈನ್ ಲ್ಯಾಬೊರೇಟರಿ ಮತ್ತು ಸೆಂಟರ್ ಫಾರ್ ಹೆಲ್ತ್, ಎನ್ವಿರಾನ್ಮೆಂಟ್ ನಡೆಸಿದ ಸಂಶೋಧನೆ ನಡೆಸಿದ ಸುದ್ದಿ ಗಮನಿಸಿದಾಗ.

ಪ್ರಸ್ತುತ ಜಗತ್ತಿನಲ್ಲಿ ಬಹಳಷ್ಟು ಪುರುಷರು ಸಂತಾನ ಹೀನತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣವೇನಿರಬಹುದು ಎಂಬುದನ್ನು ಅರಿತುಕೊಳ್ಳುವ ಸಲುವಾಗಿ ಇಲ್ಲಿನ ಸಂಶೋಧಕರು ಜಗತ್ತಿನ ವಿವಿಧ ದೇಶಗಳ ಪುರುಷರನ್ನು ಪರಿಶೀಲಿಸಿದರು. ಅವರ ವೀರ್ಯದ ಸ್ಯಾಂಪಲ್ ಅನ್ನು ಪರೀಕ್ಷಿಸಿದರು. ಗಂಡು ಹೆಣ್ಣು ಮಿಲನಗೊಂಡ ತಕ್ಷಣ ಹೆಣ್ಣು ಗರ್ಭವತಿಯಾಗುವುದಿಲ್ಲ. ಯೋನಿಯ ಮೂಲಕ ಪ್ರವೇಶಿಸುವಂಥ ವೀರ್ಯವು ಗರ್ಭನಾಳವನ್ನು ಹಾದು, ಗರ್ಭಕೋಶವನ್ನು ಸೇರಿ ಅಲ್ಲಿರುವ ಅಂಡಾಣುವಿನೊಂದಿಗೆ ಮಿಲನವಾಗಬೇಕು. ಅಂದರೆ ಗರ್ಭವತಿಯಾಗಬೇಕೆಂದರೆ ಎರಡು ಮಿಲನಗಳಾಗಬೇಕು- ಒಂದು ಸ್ತ್ರೀ-ಪುರುಷ ಮಿಲನ, ಇನ್ನೊಂದು ಈ ಮಿಲನದ ಬಳಿಕದ ಅಂಡಾಣು-ವೀರ್ಯಾಣು ಮಿಲನ.

ಇಲ್ಲೇ ಸಮಸ್ಯೆ ಎದುರಾಗುವುದು

ಈ ಎರಡು ಮಿಲನಗಳಲ್ಲಿ ಹೆಚ್ಚಾಗಿ ಮೊದಲನೆ ಮಿಲನದಲ್ಲಿ ಎಂಥ ಸಮಸ್ಯೆಗಳಿರುವುದಿಲ್ಲ. ಎರಡನೇ ಮಿಲನ ಇದೆಯಲ್ಲ? ಅದು ಸುಲಭಕ್ಕೆ ಸಾಧ್ಯವಾಗುವುದಿಲ್ಲ. ಯೋನಿ ಪ್ರವೇಶಿಸಿದಂಥ ವೀರ್ಯ ಅಂಡಾಣುವನ್ನು ಹುಡುಕಿಕೊಂಡು ಚಲಿಸುವಾಗ ಅದಕ್ಕೆ ಹಲವು ತಡೆಗಳು ಎದುರಾಗುತ್ತವೆ. ದೇಹದಲ್ಲಿರುವಂಥ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ವೀರ್ಯದ ಚಲನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತದೆ. ಆದರೆ ವೀರ್ಯಕ್ಕೆ ಹೊದಿಕೆಯಂತೆ (ಕೋಟ್ನಂತೆ) ಇರುವ ಪ್ರೋಟೀನ್ ಡಿಇಎಫ್ ಬಿ 126 ಈ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಿ ಅಂಡಾಣುವಿನೊಂದಿಗೆ ಮಿಲನವಾಗುತ್ತದೆ. ಒಂದು ವೇಳೆ ವೀಯಾಣುವಿನಲ್ಲಿ ಈ ಪ್ರೋಟೀನ್ ಹೊದಿಕೆ ಇಲ್ಲದೇ ಹೋದರೆ?

ಪ್ರಸ್ತುತ ಜಗತ್ತಿನ ಬಹುತೇಕ ಪುರುಷರಿಗೆ ಸಮಸ್ಯೆಯಾಗಿರುವುದು ಇದುವೇ ಎನ್ನುತ್ತಿದೆ ಸಂಶೋಧನೆ. ಜಗತ್ತಿನಲ್ಲಿ ಶೇಕಡಾ 25ರಷ್ಟು ಪುರುಷರಲ್ಲಿ ಸಮಸ್ಯೆಗಳಿರುವ ವಂಶವಾಹಿಗಳ ಎರಡು ಪ್ರತಿಗಳಿರುತ್ತವೆ. ಈ ಸಮಸ್ಯಾಪೂರ್ಣ ವಂಶವಾಹಿಗಳೇ ಅವರಲ್ಲಿ ಸಂತಾನಹೀನತೆಗೆ ಕಾರಣವಾಗುತ್ತವೆ. ಈ ವಂಶವಾಹಿಗಳಲ್ಲಿ ಸಮಸ್ಯೆ ಇತ್ತೆಂದಾದಲ್ಲಿ ವೀರ್ಯಾಣುವಿಗೆ ಇರಬೇಕಾದ ಪ್ರೋಟೀನ್ ಹೊದಿಕೆ ಇರುವುದಿಲ್ಲ. ಇನ್ನೂ ಒಂದು ಪ್ರಮುಖ ವಿಚಾರವೆಂದರೆ ಪುರುಷರಲ್ಲಿ ಇರುವಂಥ ವೀರ್ಯಾಣುಗಳ ಪ್ರಮಾಣ ಫಲಪ್ರದ ಸಂತಾನಕ್ಕೆ ಕಾರಣವೆನಿಸುವುದಿಲ್ಲ. ವೀರ್ಯಾಣುಗಳ ಸಂಖ್ಯೆ ಸ್ವಲ್ಪ ಕಡಿಮೆ ಇದ್ದರೂ ಸಹ ಆ ವೀರ್ಯಾಣುಗಳಿಗೆ ಪ್ರೋಟೀನ್ ಹೊದಿಕೆ ಇಲ್ಲದೇ ಇದ್ದರಷ್ಟೇ ಸಮಸ್ಯೆ ಬರುವ ಸಾಧ್ಯತೆಗಳಿವೆ ಎಂದೂ ಈ ಸಂಶೋಧನೆ ಹೇಳುತ್ತಿದೆ.

ಜೊತೆಗೆ ಪ್ರತಿಯೊಂದು ವೀರ್ಯಾಣುವಿನ ಗುಣಮಟ್ಟವೂ ಉತ್ತಮವಾಗಿರುವುದಕ್ಕೆ ಸಾಧ್ಯವಿಲ್ಲ. ಕೆಲವೊಂದು ಕಡಿಮೆ ಗುಣಮಟ್ಟದ ವೀರ್ಯಾಣುಗಳು ಇರಬಹುದು ಮತ್ತು ಇದ್ದೇ ಇರುತ್ತವೆ. ಆದರೆ ಮಿಲನ ಫಲಪ್ರದವಾಗಲು ಕೆಲವೇ ಕೆಲವು ಉತ್ತಮ ಗುಣಮಟ್ಟದ ವೀರ್ಯಾಣು ಇದ್ದರೂ ಸಾಕು. ಅಂಡಾಣುವಿನೊಂದಿಗೆ ಮಿಲನಗೊಳ್ಳುವ ವೀರ್ಯಾಣುವಿನ ಗುಣಮಟ್ಟ ಹೇಗಿರುತ್ತದೆ ಎಂಬುದರ ಮೇಲೆ ಅದು ಅವಲಂಬಿತ. ಅಂಡಾಣುವಿನ ಜೊತೆಗೆ ಮಿಲನಗೊಳ್ಳುವ ವೀಯಾಣುವೊಂದೇ ಉತ್ತಮ ಗುಣಮಟ್ಟದ್ದಾದರೂ ಸ್ತ್ರೀ ಗರ್ಭವತಿಯಾಗುತ್ತಾಳೆ.

ವೀರ್ಯಾಣು ಉತ್ಪತ್ತಿಯಾಗುವುದು ವೃಷಣದಲ್ಲಿ. ನಂತರ ಅದು ವೃಷಣನಾಣದಲ್ಲಿ (ಎಪಿಡಿಡೈಮಿಸ್) ಸಂಗ್ರಹಗೊಳ್ಳುತ್ತದೆ. ವೀರ್ಯಾಣುವಿಗೆ ಹೊದಿಕೆಯಾಗುವ ಪ್ರೋಟೀನ್ ಉತ್ಪತ್ತಿಯಾಗುವುದು ವೃಷಣನಾಳದಲ್ಲಿ. ಹೀಗಾಗಿ ವೃಷಣದಲ್ಲಿ ಉತ್ಪತ್ತಿಯಾದ ವೀರ್ಯಾಣು ವೃಷಣನಾಳಕ್ಕೆ ಬಂದ ತಕ್ಷಣ ಅಲ್ಲಿ ಉತ್ಪತ್ತಿಯಾದಂಥ ಪ್ರೋಟೀನ್ ವೀರ್ಯಾಣುವಿಗೆ ಹೊದಿಕೆಯಾಗುತ್ತದೆ. ಸ್ತ್ರೀ-ಪುರುಷರ ಮಿಲನವಾದಾಗ ವೀರ್ಯಾಣು ಪ್ರೋಟೀನ್ ಹೊದಿಕೆಯ ಸಹಿತ ಯೋನಿಯ ಮೂಲಕ ಗರ್ಭ ಪ್ರವೇಶಿಸುತ್ತದೆ. ಯೋನಿಯಿಂದ ಗರ್ಭದ್ವಾರದವರೆಗೂ ಲೋಳೆಯಂಥ ದ್ರವ (ಸೆರ್ವಿಕಲ್ ಮ್ಯೂಕಸ್) ಇರುತ್ತದೆ. ಇದರ ಮೂಲಕ ವೀರ್ಯ ಹಾದು ಹೋಗಬೇಕು. ಪ್ರೋಟೀನ್ ಹೊದಿಕೆಯಿಲ್ಲದ ವೀರ್ಯಾಣು ಸಾಮಾನ್ಯ ಸೂಕ್ಷ್ಮದರ್ಶಕದಲ್ಲಿ ಸಹಜ ವೀರ್ಯಾಣುವಿನಂತೆಯೇ ಕಾಣುತ್ತದೆ. ಆದರೆ ಈ ಲೋಳೆಯಂಥ ದ್ರವದ ಮೂಲಕ ಹಾದು ಹೋಗುವುದು ಅದಕ್ಕೆ ಸಾಧ್ಯವಾಗುವುದಿಲ್ಲ.

ಪರಿಹಾರ ಸಿಗಬಹುದೇ?

ಸಮಸ್ಯೆಯ ಮೂಲವೇನೋ ಪತ್ತೆಯಾಗಿದೆ. ಆದರೆ ಪರಿಹಾರ? ಇದರ ಬಗ್ಗೆಯೇ ವಿಜ್ಞಾನಿಗಳು ಸಂಶೋಧನೆ ನಡೆಸುತ್ತದ್ದಾರೆ. ಅಂಡಾಣು ಮತ್ತು ವೀರ್ಯಾಣುಗಳನ್ನು ಪಡೆದು ಪ್ರಯೋಗಾಲಯದಲ್ಲಿ ಸಂಯೋಜಿಸಿ ನಂತರ ಮತ್ತೆ ಗರ್ಭದೊಳಗೆ ಅದನ್ನು ಸೇರಿಸಬಹುದು. ಆದರೆ ಈ ಪ್ರಕ್ರಿಯೆಯನ್ನು ಸಹಜವಾಗಿಸಲು ಸಾಧ್ಯವಿಲ್ಲವೇ ಎಂಬ ಬಗ್ಗೆ ಚಿಂತನೆ ನಡೆದಿದೆ. ಆದರೆ ಪ್ರೋಟೀನ್ ಡಿಇಎಫ್ ಬಿ 126ಯನ್ನು ಹೊತ್ತು ತರುವಂಥ ವಂಶವಾಹಿಗೆ ಯಾವ ರೀತಿಯ ಚಿಕಿತ್ಸೆ ಕೊಡುವುದು ಎಂಬುದು ಇನ್ನೂ ಗೊತ್ತಾಗಿಲ್ಲ ಸಂಶೋಧನೆ ಮುಂದುವರಿದಿದೆ.

ಆದರೆ ಈ ವಿಚಾರಗಳನ್ನೆಲ್ಲ ಸಹಜವಾಗಿಯೇ ಗಮನಿಸಿದಾಗ ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯೇ ಇದಕ್ಕೆ ಕಾರಣವೇನೋ ಎನ್ನಿಸುತ್ತದೆ. ಉಸಿರಾಡುವುದು ವಿಷವಾಯು, ಕುಡಿಯುವುದು ಕ್ಲೋರಿನ್ ಬೆರೆತ ನೀರು, ತಿನ್ನುವುದು ಕೀಟನಾಶಕ ಸಿಂಪಡಿಸಿದ ಆಹಾರ. ಬೆಳೆಗಳಿಗೆ ಸಿಂಪಡಿಸಿದಂಥ ಕೀಟನಾಶಕ ಆಹಾರ ಸರಪಣಿಯ ಮೂಲಕ ನಮ್ಮ ದೇಹಕ್ಕೂ ಪ್ರವೇಶಿಸುತ್ತದೆ. ಇನ್ನೂ ಜೀವನಶೈಲಿ- ಒಂದು ಸ್ವಲ್ಪ ದೂರ ನಡೆದಾಡುವುದಕ್ಕೂ ನಮಗೆ ಆಲಸ್ಯ. ನಮ್ಮ ಆರೋಗ್ಯವೇ ಸರಿಯಿಲ್ಲದಿರುವಾಗ ವೀರ್ಯ ಹೇಗೆ ತಾನೇ ಆರೋಗ್ಯಪೂರ್ಣವಾಗಿದ್ದೀತು? ಫಾಸ್ಟ್ ಫುಡ್, ಜಂಕ್ ಫುಡ್... ಇವನ್ನೆಲ್ಲ ತಯಾರಿಸುವ ವಿಧಾನವನ್ನು ಗಮನಿಸಿದರೇ ತಿನ್ನುವುದು ಬೇಡ ಅನ್ನಿಸುತ್ತದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ನಮ್ಮ ಜೀವನಶೈಲಿ ಎಲ್ಲವೂ ನೇರ್ಪಾಗಿದ್ದರಷ್ಟೇ ಮಿಲನ ಫಲಪ್ರದವಾಗುವುದಕ್ಕೆ ಸಾಧ್ಯ. ನಮ್ಮ ಹಿರಿಯರು ನವವಿವಾಹಿತರು ಅರಳಿಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು, ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು ಎಂದಿದ್ದು ಯಾಕೆ ಗೊತ್ತೆ?- ಈ ಮರಗಳು ಅಧಿಕ ಪ್ರಮಾಣದ ಆಮ್ಲಜನಕವನ್ನು ಹೊರಸೂಸುತ್ತವೆ. ಆ ಮರಗಳ ಕೆಳಗಿದ್ದಷ್ಟು ಹೊತ್ತು ಹಿತವಾದ ಆಮ್ಲಜನಕ ಸೇವಿಸಿ ಆರೋಗ್ಯ ವೃದ್ಧಿಯಾಗಲಿ ಎಂಬ ಕಾರಣಕ್ಕೆ. ಇವೆಲ್ಲ ಗೊಡ್ಡು ಸಂಪ್ರದಾಯ ಎಂದು ಮೂಗುಮುರಿದರೆ?

ಮೂಲ : ವಿಜ್ಞಾನ ಗಂಗೆ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate