অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಿಮ್ಮ ಪಿತ್ತಜನಕಾಂಗ

ನಿಮ್ಮ ಪಿತ್ತಜನಕಾಂಗ

ಮನುಷ್ಯನ ಹೃದಯ ರಕ್ತ ಸರಬರಾಜು ಮಾಡುತ್ತದೆ ಹಾಗೂ ಶ್ವಾಸಕೋಶ ನಮಗೆ ಆಮ್ಲಜನಕವನ್ನು ಉಸಿರಾಡಲು ಸಹಾಯ ಮಾಡುತ್ತದೆ ಎಂದು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. ಆದರೆ ಪಿತ್ತಜನಕಾಂಗದ ಕಾರ್ಯನಿರ್ವಹಣೆ ಬಗ್ಗೆ ನಮ್ಮಲ್ಲಿ ಬಹಳ ಜನರಿಗೆ ಅರಿವಿಲ್ಲ. ಉತ್ತಮ ಆರೋಗ್ಯಕ್ಕೆ ನೆರವಾಗುವಂತಹ ಅಂಗಾಂಗಳ ಪೈಕಿ ಪಿತ್ತಜನಕಾಂಗ ಕೂಡ ಒಂದು. ಆದರೆ ಪಿತ್ತಜನಕಾಂಗದ ಉತ್ತಮ ಆರೋಗ್ಯದ ಕಡೆ ಜನರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ. ನಮ್ಮ ದೇಹದ ಈ ಅಂಗದ ನಿಜವಾದ ಮೌಲ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದಲ್ಲಿ ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು.

ಪಿತ್ತಜನಕಾಂಗ (Liver) ನಮ್ಮ ದೇಹದ ಎರಡನೆಯ ಅತೀ ದೊಡ್ಡ ಅಂಗವಾಗಿದೆ. ಇದು ಪ್ರಮುಖ ಕೆಲಸ ನಿರ್ವಹಿಸುವಂತಹ ದೊಡ್ಡ ರಾಸಾಯನಿಕ ಕಾರ್ಖಾನೆಯಿದ್ದಂತೆ. ಕೊಲೆಸ್ಟ್ರಾಲ್ ಹಾಗೂ ಕೊಬ್ಬುಗಳ ಚಯಾಪಚಯ(metabolism); ಸಂಭವನೀಯ ಹಾನಿಕಾರಕ ಅಂಶಗಳ ನಂಜು ನಿರ್ಮೂಲನೆ ಮಾಡುವುದು, ಸೇವಿಸಿದ ಔಷಧಗಳ ಸಂಸ್ಕರಣೆ ಹಾಗೂ ವಿಸರ್ಜನೆ ಮತ್ತು ವಿವಿಧ ಹಾರ್ಮೊನುಗಳನ್ನು ನಿರ್ಬಂಧಿಸುವಂತಹ ಚಟುವಟಿಕೆಗಳ ಜವಾಬ್ದಾರಿಯನ್ನು ಪಿತ್ತಜನಕಾಂಗ ನಿರ್ವಹಿಸುತ್ತದೆ. ಜೊತೆಗೆ ಇದು ಶಕ್ತಿಗಾಗಿ ಸಕ್ಕರೆ ಅಂಶವನ್ನು ಶೇಖರಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಗಾಗಿ ಕಬ್ಬಿಣಾಂಶ ಹಾಗೂ ಕೆಲವು ಅಗತ್ಯ ವಿಟಮಿನ್‌ಗಳನ್ನೂ ಶೇಖರಿಸುತ್ತದೆ.

ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ, ಅದರಲ್ಲಿಯೂ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬೊಜ್ಜು, ಕೊಬ್ಬು ತುಂಬಿರುವ ಪಿತ್ತಜನಕಾಂಗದ ಪ್ರಕರಣಗಳು, ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗುತ್ತಿದೆ. ಒಟ್ಟು ಜನಸಂಖ್ಯೆಯ ಪೈಕಿ ಅಂದಾಜು 30ರಷ್ಟು ಜನರು ಕೊಬ್ಬು ಪಿತ್ತಜನಕಾಂಗದ (fatty liver) ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.  ಅಂದರೆ, ಪ್ರತಿ ಮೂವರಲ್ಲಿ ಒಬ್ಬರು ಹಾಗೂ ಮಧುಮೇಹಿಗಳು ಹಾಗೂ ಬೊಜ್ಜಿನ ಸಮಸ್ಯೆಯಿರುವ ರೋಗಿಗಳಲ್ಲಿ ಈ ಸಂಖ್ಯೆಯ ಪ್ರಮಾಣ 80 ರಷ್ಟು ಹೆಚ್ಚಾಗಿದೆ. ವಾಸ್ತವದಲ್ಲಿ 2020ರ ವೇಳೆಗೆ ಬಹುಪಾಲು ಪಿತ್ತಜನಕಾಂಗ ಮರುಜೋಡಣೆಯ ಪ್ರಕರಣಗಳಿಗೆ, ಕೊಬ್ಬು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಿರ್ರೊಸಿಸ್ ಮುಖ್ಯ ಕಾರಣವಾಗಲಿದೆ.

ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (ಎನ್‌ಎಎಫ್‌ಎಲ್‌ಡಿ), ಕೊಬ್ಬು ಶೇಖರಣೆಯ ಹೆಚ್ಚಳದ ಗುಣಲಕ್ಷಣವನ್ನು ಹೊಂದಿದೆ, ಅದರಲ್ಲಿಯೂ ವಿಶೇಷವಾಗಿ ಪಿತ್ತಜನಕಾಂಗದ ಜೀವಕೋಶಗಳಲ್ಲಿನ ಟ್ರೈಗ್ಲಿಸರೈಡ್ಸ್. ಪಿತ್ತಜನಕಾಂಗ ಅಥವಾ ಯಕೃತ್‌ನಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬಿನಾಂಶದ ಉಪಸ್ಥಿತಿ ಸಾಮಾನ್ಯ ಹಾಗೂ ಇದು ಯಾವುದೇ ಸಮಸ್ಯೆಗಳನ್ನು ಉಂಟು ಮಾಡುವುದಿಲ್ಲ. ಕೆಲವು ರೋಗಿಗಳಲ್ಲಿರುವ ಕೊಬ್ಬಿನ ಪ್ರಮಾಣ ಹಾಗೂ ಉರಿಯ (inflammation) ಸಂಭವಗಳ ನಡುವೆ ಸಂಬಂಧವಿಲ್ಲದಿದ್ದರೂ, ಈ ಹೆಚ್ಚುವರಿ ಕೊಬ್ಬಿನಾಂಶ ಸ್ಟಿಯಟೊಹೆಪಟೈಟಿಸ್ ಎಂದು ಕರೆಯಲ್ಪಡುವ ಉರಿಯನ್ನು ಉಂಟು ಮಾಡುತ್ತದೆ. ಸ್ಟಿಯಟೊಹೆಪಟೈಟಿಸ್, ಸಿರ್ರೊಸಿಸ್‌ಗೆ ದಾರಿಯಾಗಬಹುದು (ಪಿತ್ತಜನಕಾಂಗದ ಫೈಬ್ರೊಸಿಸ್, ಸ್ಕಾರಿಂಗ್ ಹಾಗೂ ಗಟ್ಟಿಯಾಗುವಿಕೆ). ಜೊತೆಗೆ ಪಿತ್ತಜನಕಾಂಗದ ಕ್ಯಾನ್ಸರ್ ಕೂಡ ಸಂಭವಿಸಬಹುದು.

ಕೊಬ್ಬಿದ ಪಿತ್ತಜನಕಾಂಗ ನೋಡಲು ಹಳದಿ ಜಿಡ್ಡಿನ ರೂಪದಲ್ಲಿರುತ್ತದೆ ಹಾಗೂ ಬಹುತೇಕ ಪ್ರಕರಣಗಳಲ್ಲಿ ದೊಡ್ಡದಾಗಿ ಕೊಬ್ಬಿನೊಂದಿಗೆ ಊದಿಕೊಂಡಿರುತ್ತದೆ. ಈ ಕೊಬ್ಬಿನ ಒಳನುಸುಳುವಿಕೆ, ದೇಹದ ಕೊಬ್ಬು ಶೇಖರಣೆಗಳ ಚಯಾಪಚಯ ಪ್ರಕ್ರಿಯೆಯನ್ನು ಕಡಿಮೆಗೊಳಿಸುತ್ತದೆ. ಅಂದರೆ, ಕೊಬ್ಬನ್ನು ಕಡಿಮೆಗೊಳಿಸುವಲ್ಲಿ ಪಿತ್ತಜನಕಾಂಗ ಕಡಿಮೆ ದಕ್ಷತೆಯನ್ನು ಹೊಂದಿದೆ. ಇದರಿಂದ ದೇಹದ ತೂಕ ಹೆಚ್ಚಾಗುವುದಲ್ಲದೆ, ತೂಕ ಕಡಿಮೆ ಮಾಡುವುದು ಅಸಾಧ್ಯವಾಗುತ್ತದೆ. ಅದಾಗ್ಯೂ, ಕೆಲವರು ಹೆಚ್ಚು ತೂಕವಿಲ್ಲದೆಯೇ ಕೊಬ್ಬು ತುಂಬಿರುವ ಪಿತ್ತಜನಕಾಂಗವನ್ನು ಹೊಂದಿರುವ ಸಾಧ್ಯತೆಯಿದೆ.

ಇದಕ್ಕೆ ಕಾರಣಗಳೇನು?
ಸಾಮಾನ್ಯವಾಗಿ ಕೊಬ್ಬು ಪಿತ್ತಜನಕಾಂಗಕ್ಕೆ, ಹೊಟ್ಟೆಯ ಬೊಜ್ಜು (abdominal obesity), ಅಸಮರ್ಪಕ ಆಹಾರ ಸೇವನೆ, ಮದ್ಯಪಾನ ಹಾಗೂ ಇನ್ಸೂಲಿನ್ ಪ್ರತಿರೋಧಗಳು ಕಾರಣ ಹಾಗೂ ಇದು ಟೈಪ್ 2 ಮಧುಮೇಹದ ಸಮಸ್ಯೆಯಿರುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಇದಕ್ಕೆ ಇತರೆ ಕಾರಣಗಳಲ್ಲಿ ಅಪೌಷ್ಠಿಕತೆ, ಹುಟ್ಟಿನಿಂದ ಉಂಟಾದ ಚಯಾಪಚಯ ವ್ಯಾಧಿ (congenital metabolic disorderss) ಹಾಗೂ ಔಷಧಗಳು, ನೋವು ನಿವಾರಕಗಳ ಹೆಚ್ಚಿನ ಬಳಕೆ ಅಥವಾ ಅದರಿಂದ ಸಂಭವಿಸುವಂತಹ ನಂಜಿನಾಂಶಗಳು ಸೇರಿವೆ.

ಗುರುತಿಸುವುದು ಹೇಗೆ?
ಕೊಬ್ಬು ಪಿತ್ತಜನಕಾಂಗವಿರುವ ಬಹುಪಾಲು ಜನರಿಗೆ, ತಮಗೆ ಪಿತ್ತಜನಕಾಂಗದ ಸಮಸ್ಯೆಯಿದೆ ಎಂಬುದೇ ತಿಳಿದಿರುವುದಿಲ್ಲ. ಏಕೆಂದರೆ ಇದರ ಸೂಚನೆಗಳು ಬಹಳ ಸ್ಪಷ್ಟವಾಗಿರುವುದಿಲ್ಲ ಅಥವಾ ನಿರ್ದಿಷ್ಟವಾಗಿರುವುದಿಲ್ಲ, ಅದರಲ್ಲಿಯೂ ವಿಶೇಷವಾಗಿ ಆರಂಭಿಕ ಹಂತಗಳಲ್ಲಿ. ಹೊಟ್ಟೆ ಭಾಗದಲ್ಲಿ ಹೆಚ್ಚಿನ ತೂಕ, ತೂಕ ಕಡಿಮೆಗೊಳಿಸುವಲ್ಲಿ ವಿಫಲತೆ, ಹೆಚ್ಚಿದ ಕೊಲೆಸ್ಟ್ರಾಲ್ ಅಥವಾ ಟ್ರೈಗ್ಲಿಸರೈಡ್ ಮಟ್ಟಗಳು, ಸುಸ್ತು, ವಾಕರಿಕೆ ಹಾಗೂ ಅಜೀರ್ಣ,  ಪಿತ್ತಜನಕಾಂಗ ಭಾಗದ (ಬಲ ಮೇಲ್ಭಾಗದ ಹೊಟ್ಟೆ) ಮೇಲೆ ಗೋಚರಿಸುವ ಸಮಸ್ಯೆಗಳು ಕೆಲವು ಸಾಮಾನ್ಯ ಸೂಚನೆಗಳಾಗಿವೆ.

ಪಿತ್ತಜನಕಾಂಗದ ಕಾರ್ಯನಿರ್ವಹಣೆಯನ್ನು ತಿಳಿದು ಕೊಳ್ಳುವ ಸಲುವಾಗಿ, ರಕ್ತ ಪರೀಕ್ಷೆಯ ಮೂಲಕ ಹೆಚ್ಚಿರುವ ಜೀವಂತ ಕಿಣ್ವಗಳಿಗಾಗಿ (elevated liver enzymes) ಪರೀಕ್ಷೆ ಮಾಡುವ ಮೂಲಕ ಹಾಗೂ ಪಿತ್ತಜನಕಾಂಗದ ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ರೋಗ ನಿರ್ಣಯ ಮಾಡಲಾಗುತ್ತದೆ.

ತಡೆಗಟ್ಟುವಿಕೆ ಹಾಗೂ ಚಿಕಿತ್ಸೆ
ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಪಿತ್ತಜನಕಾಂಗ ತಜ್ಞ ಅಥವಾ ಹೆಪಟಾಲಜಿಸ್ಟ್‌ರಿಂದ ಕ್ರಮಬದ್ಧವಾದ ನಿಗಾವಣೆಯ ಅಗತ್ಯವಿದೆ. ಕೊಬ್ಬಿನಾಂಶ ಹೆಚ್ಚಿರುವ ಪಿತ್ತಜನಕಾಂಗವನ್ನು ನಿಯಂತ್ರಿಸಲು, ಕಾರ್ಬೊಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಸೇವನೆ, ಕಡಿಮೆ ಮದ್ಯಪಾನ, ಹೆಚ್ಚು ತರಕಾರಿ ಸೇವನೆ, ಪೌಷ್ಠಿಕಾಂಶ ಹಾಗೂ ಸರಿಯಾದ ಕೊಬ್ಬಿನಾಂಶಗಳ ಸೇವನೆಯನ್ನು ಪಾಲಿಸಬೇಕು ಮತ್ತು ವ್ಯಾಯಾಮ ನಿಮ್ಮ ಚಯಾಪಚಯವನ್ನು ಸುಧಾರಿಸಲು ನೆರವಾಗುತ್ತದೆ.

ಮೂಲ :ಪ್ರಜಾವಾಣಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate