অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಳಿ ಚಳಿ

ಚಳಿ ಚಳಿ

ಬೆಚ್ಚನೆಯ ಹೊದಿಕೆಯನ್ನು ಹೊದೆದು ಸೂರ್ಯನ ಕಿರಣಗಳು ಮಲಗುವ ಕೋಣೆಯ ಕಿಟಕಿಗಳನ್ನು ಹಾದು ಬರುವವರೆಗೆ ಮಲಗುವುದೆಂದರೆ ಚಳಿಗಾಲದಲ್ಲಿ ಆಪ್ಯಾಯಮಾನ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುವ ಕಾಲ ಇದು. ಬಿಸಿ ಬಿಸಿ ಕಾಫಿಯನ್ನು ಹೀರುತ್ತಾ ಮುಂಜಾನೆಯ ವೃತ್ತ ಪತ್ರಿಕೆಗಳನ್ನು ಓದುವುದು ಅಥವಾ ದೂರದರ್ಶನದಲ್ಲಿ ವಾರ್ತೆಗಳನ್ನು ವೀಕ್ಷಿಸುವವರ ಗುಂಪು ಒಂದು ಕಡೆಯಾದರೆ ಈ ಚಳಿಗಾಲದಲ್ಲೂ (ಮಾಘ ಮಾಸ) ಮುಂಜಾನೆ ಬೇಗನೆ ಎದ್ದು, ಸ್ನಾನ ಮುಗಿಸಿ ಪೂಜೆ ಪುನಸ್ಕಾರಗಳನ್ನು ಮುಗಿಸಿ ದೇವಸ್ಥಾನಗಳಿಗೆ ಭೇಟಿ ಕೊಡುವವರ ಗುಂಪು ಇನ್ನೊಂದು ಕಡೆ ಈ ಕಾಲದಲ್ಲಿ ಗಿಡಮರಗಳ ಎಲೆಗಳು ಉದುರುತ್ತವೆ. ಇದು ಪ್ರಕೃತಿಯ ಬದಲಾವಣೆಗೆ ತಕ್ಕಂತೆ ನೀರಿನ ಅಂಶವನ್ನು ತನ್ನಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಮರ, ಗಿಡಗಳು ಮಾಡಿಕೊಳ್ಳುವ ಬದಲಾವಣೆ. ಈ ಋತುವಿನಲ್ಲಿ ಜೀರ್ಣ ಶಕ್ತಿ ಹೆಚ್ಚಿರುತ್ತದೆ. ದೇಹದ ಬಲವೂ ಚೆನ್ನಾಗಿರುತ್ತದೆ. ಪರಿಸರದಲ್ಲಿ ಒಣ ಗಾಳಿಯು ಬೀಸುತ್ತಿರುವುದರಿಂದ ಚರ್ಮವು ಒಡಿಯುವುದಲ್ಲದೆ, ಚರ್ಮದ ಸೋಂಕುಗಳು ಹೆಚ್ಚಾಗಿ ಕಂಡು ಬರುತ್ತವೆ. ಇದಲ್ಲದೆ ಜ್ವರ, ನೆಗಡಿ ಹಾಗೂ ಶ್ವಾಸಕೋಶ ಸಂಬಂಧಿ ರೋಗಗಳೂ ಕೂಡ ಕಂಡು ಬರುವ ಸಾಧ್ಯತೆ ಹೆಚ್ಚು. ಆದ ಕಾರಣ ಚಳಿಗಾಲದಲ್ಲಿ ಆಹಾರ ವಿಹಾರ ಹೀಗಿದ್ದರೆ ಒಳ್ಳೆಯದು.

ಆಹಾರ:
1. ಅಧಿಕವಾಗಿ ಹಸಿವು ಇರುವುದರಿಂದ ಜೀರ್ಣಕ್ಕೆ ಜಡವಾದಂಥಹ ಆಹಾರ ಸೇವನೆ ಮಾಡುವುದು
2. ಒಣ ಗಾಳಿಯು ಬೀಸುತ್ತಿರುವುದರಿಂದ ಜಿಡ್ಡಿನಂಶ ಹೆಚ್ಚಾಗಿರುವ ಆಹಾರ ಸೇವನೆ ಅಗತ್ಯ. ಆಹಾರವನ್ನು ಸೇವಿಸುವಾಗ ಬಿಸಿ ಆಹಾರದೊಂದಿಗೆ ಒಂದರಿಂದ ಎರಡು ಚಮಚದಷ್ಟು ತುಪ್ಪವನ್ನು ಸೇರಿಸಿ ಸೇವಿಸುವುದು ಹಿತಕರ.
3. ಸಿಹಿ, ಹುಳಿ ಉಪ್ಪು, ಖಾರ ಹಾಗೂ ಕ್ಷಾರ ರಸ ಪ್ರಧಾನವಾಗಿರುವ ಆಹಾರ ಸೇವನೆ ಈ ಋತುವಿನಲ್ಲಿ ಒಳ್ಳೆಯದು.
4. ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸುವುದು ಹಿತಕರ ಸಾಸಿವೆ ಎಣ್ಣೆ ದೇಹವನ್ನು ಬೆಚ್ಚಗಿಡುವುದಲ್ಲದೆ ವಾತವನ್ನು ಶಮನಗೊಳಿಸುವುದು.
5. ಗೋಧಿ ಹಿಟ್ಟಿನಿಂದ ತಯಾರಿಸಿದ ಪೂರಿ, ಚಪಾತಿ, ದೋಸೆಗಳನ್ನೂ ಕೂಡ ಈ ಋತುವಿನಲ್ಲಿ ಹಿತಕರ. ಗೋಧಿ ಜೀರ್ಣಕ್ಕೆ ಜಡ ಅಲ್ಲದೆ ವಾತವನ್ನು ಶಮನಗೊಳಿಸುವುದು.
6. ತುಪ್ಪದಲ್ಲೇ ತಯಾರಿಸಿದ ಸಜ್ಜಿಗೆ, ಹಿಟ್ಟಿನ ಉಂಡೆ, ಪೊಂಗಲ್ ಹಾಗೂ ಇತರೇ ಸಿಹಿ ತಿನಿಸುಗಳೂ ಕೂಡ ಈ ಋತುವಿನಲ್ಲಿ ಅಗತ್ಯ.
7. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಪದಾರ್ಥಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳನ್ನೂ ಕೂಡ ಈ ಋತುವಿನಲ್ಲಿ ಯಥೇಚ್ಛವಾಗಿ ಬಳಸಬಹುದು.
8. ಹಾಲು ಹಾಗೂ ತುಪ್ಪದಿಂದ ತಯಾರಿಸಿದ ಬೂದುಗುಂಬಳದ ಹಲ್ವಾ, ಸೋರೇಕಾಯಿ ಹಲ್ವಾ, ಸೀಮೆ ಬದನೆಕಾಯಿ ಹಲ್ವಾ, ಪಾಯಸಗಳೂ ಕೂಡ ಈ ಋತುವಿನಲ್ಲಿ ಉತ್ತಮ.
9. ಮೊಸರಿನಿಂದ ಶ್ರೀಖಂಡವನ್ನು ತಯಾರಿಸಿ ಬಳಸಬಹುದು.
10. ಬೂದುಗುಂಬಳ, ಸೋರೇಕಾಯಿ, ಸೌತೆಕಾಯಿ, ಮಂಗಳೂರು ಸೌತೆ, ಸೀಮೆ ಬದನೆಕಾಯಿ, ಇವುಗಳಿಂದ ಮಜ್ಜಿಗೆ ಹುಳಿಯನ್ನು ತಯಾರಿಸಿ ಸೇವಿಸುವುದು ಹಿತಕರ.
11. ನುಗ್ಗೇಕಾಯಿ, ಹೀರೇಕಾಯಿ, ತೊಂಡೇಕಾಯಿ, ಕ್ಯಾರೆಟ್ ಹಾಗೂ ವಿವಿಧ ರೀತಿಯ ಸೊಪ್ಪುಗಳು (ಉದಾ: ಪಾಲಕ್, ಮೆಂತ್ಯ, ಸಬ್ಬಸಿಗೆ, ಹರಿವೆ, ದಂಟಿನ ಸೊಪ್ಪು) ಗಳನ್ನೂ ಕೂಡ ಈ ಋತುವಿನಲ್ಲಿ ಬಳಸಬಹುದು.
12. ಅಲ್ಲದೆ ಗಡ್ಡೆ, ಗೆಣಸುಗಳು ಬೀಟ್ರೂಟ್, ಆಲುಗಡ್ಡೆ, ಕೆಸವಿನ ಗಡ್ಡೆ, ಬಾಳೆದಿಂಡು ಇವುಗಳನ್ನೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಇವೆಲ್ಲವೂ ಜೀರ್ಣಕ್ಕೆ ಜಡವಾದರೂ ಕೂಡ ಈ ಋತುವಿನಲ್ಲಿ ಜೀರ್ಣ ಶಕ್ತಿ ಹೆಚ್ಚಿರುವುದರಿಂದ ಇವುಗಳ ಬಳಕೆ ಹಿಚ್ಚಿನ ತೊಂದರೆಯನ್ನುಂಟು ಮಾಡುವುದಿಲ್ಲ.
13. ಕಬ್ಬು, ಕಬ್ಬಿನಿಂದ ತಯಾರಿಸಿದ ಬೆಲ್ಲ, ಸಕ್ಕರೆ ಹಾಗೂ ಇತರೇ ಬೆಲ್ಲದಿಂದ ತಯಾರಿಸಿದ ಆಹಾರವನ್ನು ಬಳಸುವುದು ಒಳ್ಳೆಯದು.

ವಿಹಾರ:

1. ನಿತ್ಯವೂ ಮೈಗೆ ಎಳ್ಳೆಣ್ಣೆಯನ್ನು ಹಚ್ಚಿ ತಿಕ್ಕಿ ಬಿಸಿ ನೀರಿನ ಸ್ನಾನ ಮಾಡಬೇಕು. ಇದರಿಂದ ವಾತ ಶಮನವಾಗುವುದಲ್ಲದೆ, ಮೈ ಒಡೆಯುವುದು ಕಡಿಮೆಯಾಗಿ, ಚರ್ಮ ನುಣುಪಾಗಿ ಕಾಂತಿಯುಕ್ತವಾಗುತ್ತದೆ.
2. ತಲೆಗೆ ನಿತ್ಯವೂ ಎಣ್ಣೆಯನ್ನು ಹಚ್ಚುವುದು ಹಿತಕರ ಸ್ವಲ್ಪ ಹತ್ತಿಯನ್ನು ಎಣ್ಣೆಯಲ್ಲಿ ಅದ್ದಿ ನೆತ್ತಿಯ ಮೇಲೆ ಇಟ್ಟುಕೊಳ್ಳುವುದೂ ಹಿತಕರ.
3. ಕಪ್ಪನೆಯ ಹತ್ತಿಯ ಅಥವಾ ಉಣ್ಣೆಯ ಬಟ್ಟೆಗಳನ್ನು ಬಳಸುವುದು ಹಿತಕರ. ಕಂಬಳಿ, ಉಣ್ಣೆಯ ಬಟ್ಟೆಗಳು, ಚರ್ಮದ ಹೊದಿಕೆಗಳು ಈ ಋತುವಿನಲ್ಲಿ ಅಗತ್ಯ.
4. ಮನೆಯ ಒಳಗಡೆ ಅಗ್ಗಿಷ್ಠಿಕೆ ಅಥವಾ ಕೆಂಡದ ಒಲೆಗಳನ್ನು ಉರಿಸಿ, ಅವುಗಳಲ್ಲಿ ಮೈ ಕಾಯಿಸಿಕೊಳ್ಳಬೇಕು.
5. ಸ್ನಾನ ಮತ್ತು ಇತರೇ ಶೌಚ ಕಾರ್ಯಗಳಿಗೆ ಬೆಚ್ಚಗಿನ ನೀರನ್ನು ಬಳಸಬೇಕು.
6. ಸ್ನಾನದ ನಂತರ ಮೈಗೆ ಚಂದನ, ಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳ ಲೇಪನ ಹಿತಕರ.
7. ವ್ಯಾಯಾಮ ಈ ಋತುವಿನಲ್ಲಿ ಅಗತ್ಯ. ನಮ್ಮ ಶಕ್ತಿಯ ಅರ್ಧದಷ್ಟು ವ್ಯಾಯಾಮ ಅವಶ್ಯಕ.
8. ಹಗಲು ನಿದ್ದೆ ಈ ಋತುವಿನಲ್ಲಿ ನಿಷಿದ್ಧ.

ಮೂಲ : ಕರುನಾಡು.

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate