অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭಾವಸ್ಥೆ

ಗರ್ಭಕೋಶದಲ್ಲಿ ಮಗು ಬೆಳೆಯುವ ಸ್ಥಿತಿ (ಪ್ರೆಗ್ನೆನ್ಸಿ). ಬಸಿರು ಪರ್ಯಾಯನಾಮ. ಈ ಸ್ಥಿತಿಯಲ್ಲಿರುವ ಸ್ತ್ರೀಗೆ ಗರ್ಭಿಣಿ ಅಥವಾ ಬಸುರಿ, ಬಿಮ್ಮನಸೆ ಎಂಬ ಹೆಸರುಗಳಿವೆ. ಅಂಡಾಣು ಮತ್ತು ವೀರ್ಯಾಣುಗಳ ಮಿಲನದಿಂದ ಗರ್ಭಾವಸ್ಥೆ ಪ್ರಾರಂಭವಾಗುತ್ತದೆ. ಭ್ರೂಣ ತಾಯಿಯ ಗರ್ಭಕೋಶದಲ್ಲಿದ್ದುಕೊಂಡು ಬೆಳೆದು ಶಿಶುವಿನ ರೂಪ ತಾಳಿ ಜನಿಸುವವರೆಗೂ ಗರ್ಭಾವಸ್ಥೆಯ ಅವಧಿ ಉಂಟು. ನಿರೀಕ್ಷಿತ ಕಾಲದಲ್ಲಿ ಮತ್ತು ಮುಂದೆಯೂ ಮುಟ್ಟಾಗದೇ ಹೋಗುವುದು, ನಾಲ್ಕಾರು ವಾರಗಳ ಬಳಿಕ ಬೆಳಿಗ್ಗೆ ಎದ್ದಾಗಲೆ ವಾಕರಿಕೆ, ಸ್ತನಗಳ ವೃದ್ಧಿ, ಮೊಲೆತೊಟ್ಟು ಕಪ್ಪು ವರ್ಣಕ್ಕೆ ತಿರುಗುವುದು, ಹೊಟ್ಟೆ ದಪ್ಪವಾಗುತ್ತಾ ಬರುವುದು, ಗರ್ಭಕೋಶದೊಳಗೆ ಮಗುವಿನ ಚಲನದಿಂದ ಆಗುವ ಅನುಭವ ಇವು ಕಂಡುಬಂದು ಸಾಮಾನ್ಯವಾಗಿ ಮುಟ್ಟು ನಿಂತ 40 ವಾರಗಳ ತರುವಾಯ (ಹತ್ತು ಚಾಂದ್ರಮಾನ ತಿಂಗಳು) ಶಿಶುವಿನ ಜನನವಾಗುತ್ತದೆ.


ಸಂಭೋಗ ಕ್ರಿಯೆಯಿಂದ ವೀರ್ಯ ಯೋನಿಯೊಳಹೊಕ್ಕ ಸಮಯದಲ್ಲಿ ಅಂಡಾಣು ಗರ್ಭಕೋಶನಾಳದೊಳಗಿದ್ದರೆ (ಫೆಲೋಪಿಯನ್ ಟ್ಯೂಬ್) ಅಥವಾ 12-24 ಗಂಟೆಗಳ ಬಳಿಕವಾದರೂ ಅದು ಬರುವ ಹಾಗಿದ್ದರೆ ಮಾತ್ರ ಅದರೊಡನೆ ಪುರುಷಾಣುವಿನ ಮಿಲನ ಸಾಧ್ಯ. ಪ್ರತಿ ಸಂಭೋಗ ಕ್ರಿಯೆಯೂ ಸ್ತ್ರೀಯಲ್ಲಿ ಗರ್ಭಾವಸ್ಥೆಯನ್ನು ಉಂಟುಮಾಡದೆ ಇರುವುದಕ್ಕೂ ಸಾಮಾನ್ಯವಾಗಿ ಮಾಸಿಕಚಕ್ರದ ಸುಮಾರು ಮಧ್ಯಕಾಲದಲ್ಲಿ ಮಾತ್ರ ಸಂಭೋಗದಿಂದ ಗರ್ಭಧಾರಣೆಯಾಗುವುದಕ್ಕೂ ಇದೇ ಕಾರಣ. ಸ್ತ್ರೀಯರಲ್ಲಿ ಪ್ರತಿ ತಿಂಗಳೂ (28 ದಿವಸಗಳ ಚಾಂದ್ರಮಾನ ತಿಂಗಳು) ಒಂದು ಅಂಡಾಣು ಅಂಡಾಶಯದಿಂದ ಕಳಿತು ಹೊರಬೀಳುತ್ತದೆ. ಮೇಲೆ ಹೇಳಿದಂತೆ 12-24 ಗಂಟೆಗಳ ಒಳಗೇ ಅದು ಪುರುಷಾಣುವಿನೊಡನೆ ಮಿಲನಗೊಂಡರೆ ಆಗ ಗರ್ಭಾವಸ್ಥೆಯುಂಟಾಗುತ್ತದೆ. ಇಲ್ಲದಿದ್ದರೆ ಅಂಡಾಣು ನಿಧಾನವಾಗಿ ಮುಂದಕ್ಕೆ ನೂಕಲ್ಪಡುತ್ತ ಗರ್ಭಕೋಶವನ್ನು ತಲಪಬಹುದು. ಆಮೇಲೋ ಅಥವಾ ಇನ್ನೂ ಮುಂಚೆಯೋ ಅದು ನಶಿಸಿಹೋಗುತ್ತದೆ. ಗರ್ಭಾವಸ್ಥೆ ಉಂಟಾಗದ ಇಂಥ ಸನ್ನಿವೇಶದಲ್ಲಿ ಅಂಡಾಣು ಅಂಡಾಶಯದಿಂದ ಹೊರಬಿದ್ದ 14 ದಿವಸಗಳ ತರುವಾಯ ಸ್ತ್ರೀಯಲ್ಲಿ ರಜಸ್ರಾವವಾಗುತ್ತದೆ. ಗರ್ಭಾವಸ್ಥೆ ಉಂಟಾದರೆ ರಜಸ್ರಾವವಾಗುವುದಿಲ್ಲ. ಆದ್ದರಿಂದ ಹೆಂಗಸು ಮುಟ್ಟಾಗುವುದು ಆಕೆ ಬಸಿರಾಗದೆ ಹೋದುದರ ಸೂಚನೆ ಮತ್ತು ಪರಿಣಾಮವಾಗಿರುತ್ತದೆ. ಹೆಂಗಸಿನ ಜೀವಮಾನದಲ್ಲಿ ಗರ್ಭಧಾರಣಾ ಸೌಲಭ್ಯ ಸುಮಾರು 15ನೆಯ ವರ್ಷದಿಂದ ಸುಮಾರು 50ನೆಯ ವರ್ಷ ವಯಸ್ಸಿನ ತನಕ ಕಾಣಬರುತ್ತದೆ. ಅಂದರೆ ಹುಡುಗಿ ಮೈನೆರೆದು ಪ್ರೌಢಳಾದಾಗಿನಿಂದ ವಯಸ್ಕ ಹೆಂಗಸಿನಲ್ಲಿ ಮುಟ್ಟು ನಿಲ್ಲುವತನಕ ಸಂತಾನ ಪ್ರಾಪ್ತಿ ಸೌಲಭ್ಯ ಉಂಟು. ರಜಸ್ಸ್ರಾವಕ್ಕೂ ಗರ್ಭಧಾರಣೆ ಗರ್ಭಾವಸ್ಥೆಗಳಿಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಾದರೆ ಹೆಂಗಸಿನಲ್ಲಿ ಪ್ರಜನನ ಕ್ರಿಯೆಯ ಸ್ಥೂಲಪರಿಚಯವಿರಬೇಕು.


ಪ್ರಜನನ ಕ್ರಿಯೆ ಜನನಾಂಗಗಳಿಂದ ಜರುಗಿಸಲ್ಪಡುವ ದೇಹಕಾರ್ಯ ಸ್ತ್ರೀಯಲ್ಲಿ ಪ್ರಧಾನ ಜನನಾಂಗಗಳೆಂದರೆ ಕಿಬ್ಬೊಟ್ಟೆಯಲ್ಲಿರುವ (ಪೆಲ್ವಿಕ್ ಕ್ಯಾವಿಟಿ) ಎಡ ಮತ್ತು ಬಲ ಅಂಡಾಶಯಗಳು ಮತ್ತು ಅವುಗಳ ನಡುವೆ ಇರುವ ಗರ್ಭಕೋಶ. ಅಂಡಾಶಯಗಳ ಸನಿಹದಲ್ಲಿ ಪ್ರಾರಂಭವಾಗುವ ಗರ್ಭಕೋಶನಾಳಗಳು ಗರ್ಭಕೋಶವನ್ನು ಸೇರುತ್ತವೆ. ಗರ್ಭಕೋಶ ಗೇರುಹಣ್ಣಿನ ಆಕಾರದಲ್ಲಿರುತ್ತದೆ. ಅದರ ಕಂಠ ಯೋನಿಯೊಳಕ್ಕೆ ಚಾಚಿಕೊಂಡಿರುತ್ತದೆ. ಯೋನಿಗೆ ಸಂಪರ್ಕವನ್ನು ಉಂಟುಮಾಡುವ ಭಾಗವಿದು. ಅಲ್ಲದೇ ಇದು ಗರ್ಭಕೋಶದೊಳಕ್ಕೂ ಹೊರಗಡೆಗೂ ಸಂಪರ್ಕವನ್ನು ಉಂಟುಮಾಡುತ್ತದೆ. ಹುಡುಗಿ ಮೈನೆರೆದಾಗ ಈ ಭಾಗಗಳಲ್ಲಿ ಮತ್ತು ಅನುಷಂಗಿಕ ಅಂಗಗಳಲ್ಲಿ ಮುಖ್ಯವಾಗಿ ಸ್ತನಗಳಲ್ಲಿ ಚಟುವಟಿಕೆ ಮತ್ತು ಕ್ರಿಯಾಶಕ್ತಿ ಮೂಡಿ ಬಂದು ವಿಶಿಷ್ಟ ಕ್ರಮವನ್ನು ಅನುಸರಿಸಿ ಜರುಗುವ ಕ್ರಿಯೆ ಕಂಡುಬರುತ್ತದೆ. ಇದರ ಅವಧಿ ಸಾಮಾನ್ಯವಾಗಿ 28 ದಿವಸಗಳು ಅಥವಾ ಒಂದು ಚಾಂದ್ರಮಾನ 30ಗಳು ರಜಸ್ಸ್ರಾವ ಈ ಚಕ್ರೀಯ ಕ್ರಿಯೆಯಲ್ಲಿ ಪ್ರಧಾನವಾಗಿ ವ್ಯಕ್ತವಾಗುವ ಘಟ್ಟವಾದುದರಿಂದ ಇದನ್ನು ಮಾಸಿಕ ಚಕ್ರವೆಂದು ಕರೆದು, ಚಕ್ರವನ್ನು ರಜಸ್ಸ್ರಾವದ ಮೊದಲನೆಯ ದಿವಸದಿಂದ ಎಣಿಸುವುದು ರೂಢಿಯಾಗಿದೆ. ಈ ಕ್ರಿಯೆಗೆ ತಲೆಚಿಪ್ಪಿನೊಳಗೆ ಮಿದುಳಿನ ತಳಭಾಗದಿಂದ ತೊಟ್ಟಿನ ಮೂಲಕ ನೇತುಬಿದ್ದಿರುವ ಪಿಟ್ಯುಯಿಟರಿ ಗ್ರಂಥಿಯ ಮುಂಭಾಗದ ಎಸ್.ಎಸ್.ಎಚ್., ಎಲ್.ಎಚ್. ಮತ್ತು ಎಲ್.ಟಿ.ಎಚ್ ಗಳೆಂಬ ಅಂತಃಸ್ರಾವಗಳೇ ಕಾರಣ. ಇವು ಅಂಡಾಶಯಗಳ ಮೇಲೆ ಪ್ರಭಾವ ಬೀರಿ ಅವನ್ನು ಕಾರ್ಯೋನ್ಮುಖಗೊಳಿಸುತ್ತವೆ. ಎಡ ಅಥವಾ ಬಲ ಅಂಡಾಶಯಗಳಲ್ಲಿ ಯಾವುದಾದರೂ ಒಂದು (ಯಾವುದು ಎನ್ನುವುದು ಕೇವಲ ಅನಿರ್ದಿಷ್ಟ) ಅಂಡಾಶಯದಿಂದ ಸಾಮಾನ್ಯವಾಗಿ ಒಂದು ಅಂಡಾಣು ಸುಮಾರು 2 ವಾರಗಳಲ್ಲಿ ಬಲಿತು ಹಣ್ಣಾಗುವುದಕ್ಕೆ ಈ ಎರಡು ವಾರಗಳು ಪಿಟ್ಯುಟರಿಯಿಂದ ಉತ್ಪತ್ತಿಯಾಗುವ ಎಫ್.ಎಸ್.ಎಚ್. ಕಾರಣ. ಇದೇ ಕಾರಣದಿಂದಲೇ ಈ ಎರಡು ವಾರಗಳಲ್ಲೂ ಅಂಡಾಶಯದಿಂದ ಈಸ್ಟ್ರೋಜೆನ್ನೆಂಬ ಅಂತಃಸ್ರಾವ ಉತ್ಪತ್ತಿಯಾಗುತ್ತದೆ. ಈಸ್ಟ್ರೋಜಿನ್ ಮುಖ್ಯವಾಗಿ ಗರ್ಭಕೋಶ ಮತ್ತು ಸ್ತನಗಳ ಮೇಲೆ ಪ್ರಭಾವ ಬೀರಿ ಅವುಗಳ ವೃದ್ಧಿಯನ್ನು ಉಂಟುಮಾಡುವುದು. ಎರಡು ವಾರಗಳ ತರುವಾಯ ಪಿಟ್ಯುಟರಿ ಎಫ್.ಎಸ್.ಎಚ್. ಬದಲು ಎಲ್.ಎಚ್ ಮತ್ತು ಎಲ್.ಟಿ.ಎಚ್ಗಳನ್ನು ಸ್ರವಿಸುತ್ತದೆ. ಇವುಗಳ ಪ್ರಭಾವವೂ ಅಂಡಾಶಯಗಳ ಮೇಲೆಯೇ ಪ್ರಧಾನವಾಗಿರುವುದು. ಈ ಕಾಲದ ಪ್ರಾರಂಭದಲ್ಲಿ ಅಂದರೆ ಸುಮಾರು 14ನೆಯ ದಿವಸವೇ ಬಲಿತು ಹಣ್ಣಾದ ಅಂಡಾಣು ಅಂಡಾಶಯದಿಂದ ಹೊರಬಿದ್ದು ಗರ್ಭಕೋಶ ನಾಳದೊಳಕ್ಕೆ ಹೀರಲ್ಪಟ್ಟು ಅದರೊಳಗೆ ಗರ್ಭಕೋಶದೆಡೆಗೆ ನೂಕಲ್ಪಡುತ್ತಿರುತ್ತದೆ. ಅಂಡಾಣುವಿದ್ದ ಸ್ಥಳ ರೂಪಾಂತರಗೊಂಡು ಕಾರ್ಪಸ್ ಲೂಟಿಯಂ ಮುಂದಕ್ಕೆ 14 ದಿವಸಗಳ ಪರ್ಯಂತ ಪ್ರೊಜೆಸ್ಟಿರಾನ್ ಎಂಬ ಅಂತಃಸ್ರಾವವನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕೆ ಪಿಟ್ಯುಟರಿಯ ಎಲ್.ಟಿ.ಎಚ್. ಕಾರಣ ಪ್ರೊಜೆಸ್ಟಿರಾನ್ ಕೂಡ ಗರ್ಭಕೋಶ ಮತ್ತು ಸ್ತನಗಳ ಮೇಲೆ ಪ್ರಧಾನವಾಗಿ ಪ್ರಭಾವ ಬೀರಿ ಅವುಗಳ ವೃದ್ಧಿತ ಸ್ಥಿತಿ ಉಪಯುಕ್ತ ರೀತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಎರಡು ವಾರಗಳ ಕೊನೆಯಲ್ಲಿ ಪಿಟ್ಯುಟರಿ ಎಲ್.ಎಚ್ ಮತ್ತು ಎಲ್.ಟಿ.ಎಚ್ ಅನ್ನು ಸ್ರವಿಸುವ ಬದಲು ಪುನಃ ಎಫ್.ಎಸ್.ಎಚ್. ಅನ್ನು ಸ್ರವಿಸುವುದಕ್ಕೆ ಪ್ರಾರಂಭಿಸುತ್ತದೆ. ತನ್ನ ಕ್ರಿಯಾಶಕ್ತಿ ಜರಾಯು ತಾಯಿಯ ಗರ್ಭಕೋಶ ಭಿತ್ತಿಯಿಂದ ಬೇರ್ಪಟ್ಟು ಅದರ ಕಾರ್ಯ ಕ್ಷೀಣಿಸುತ್ತದೆ, ಪ್ರೋಜೆಸ್ಟಿರಾನಿನ ಉತ್ಪತ್ತಿಗೆ ಇದರಿಂದ ಧಕ್ಕೆಯಾಗಿ ಗರ್ಭಾವಸ್ಥೆ ಕೊನೆಗೊಳ್ಳುತ್ತದೆ. ಆದರೆ ಇಷ್ಟರೊಳಗೆ ಭ್ರೂಣ ಬೆಳೆದು ತಾಯಿಯ ನೆರವಿಲ್ಲದೆ ಸ್ವತಂತ್ರವಾಗಿ ಜೀವಿಸಬಲ್ಲ ಮಗುವಾಗಿ ಅದರ ಜನನವಾಗುತ್ತದೆ. ಈ ಜನನಕ್ಕೆ ಪ್ರೋಜೆಸ್ಟಿರಾನಿನ ಉತ್ಪತ್ತಿಯ ನಿಲುಗಡೆ ಮಾತ್ರ ಕಾರಣವಲ್ಲ, ಪಿಟ್ಯುಟರಿ ಗ್ರಂಥಿಯ ಹಿಂಭಾಗದಿಂದ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಎಂಬ ಅಂತಃಸ್ರಾವವೂ ಶಿಶು ಜನನಕ್ಕೆ (ಗರ್ಭಾವಸ್ಥೆಯ ಅಂತ್ಯಕ್ಕೆ) ಮುಖ್ಯವಾಗಿದೆ. ಬಹುಶ ಪ್ರೋಜೆಸ್ಟಿರಾನಿನ ಪ್ರಭಾವಕ್ಕೆ ಒಳಗಾಗಿದ್ದ ಮತ್ತು ಆ ಪ್ರಭಾವ ಹಠಾತ್ತಾಗಿ ನಿಂತುಹೋದ ಗರ್ಭಕೋಶವನ್ನು ಮಾತ್ರ ಆಕ್ಸಿಟೋಸಿನ್ ಉದ್ರೇಕಿಸುತ್ತದೆ. ಹೀಗಾಗಿ 40 ವಾರಗಳ ಗರ್ಭಾವಸ್ಥೆಯ ಕೊನೆಯಲ್ಲಿ ಗರ್ಭಕೋಶ ಸಂಕುಚಿಸಿ ಒಳಗಿರುವ ಶಿಶುವನ್ನು ಹೊರದೂಡುತ್ತದೆ. ಸ್ವಲ್ಪ ಹೊತ್ತಿನಲ್ಲೆ ಬೇರ್ಪಟ್ಟ ಜರಾಯುವನ್ನೂ ಇದೇ ರೀತಿ ಹೊರದೂಡುತ್ತದೆ. ಇದು ಗರ್ಭಾವಸ್ಥೆಯ ಅಂತ್ಯ.


ಗರ್ಭಿಣಿಯರು ಹೆಚ್ಚು ಧೈರ್ಯಶಾಲಿಗಳಾಗಿಯೂ ಬಲಶಾಲಿಗಳಾಗಿಯೂ ಸಾಹಸ ಪ್ರವೃತ್ತಿಯವರಾಗಿಯೂ ಇರುವರೆಂದೂ ಗರ್ಭಾವಸ್ಥೆಯ ಕೊನೆಗೊಂಡ ಮೇಲೂ ಅವರು ಈ ಗುಣಗಳನ್ನು ಹೊಂದಿರುವರೆಂದೂ ಹೇಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಗರ್ಭಿಣಿಯರಲ್ಲಿ ಮಾನಸಿಕ ವ್ಯಾಪಾರಗಳು ಸ್ವಲ್ಪಮಟ್ಟಿಗೆ ಏರುಪೇರಾಗುತ್ತವೆ. ಸ್ವಲ್ಪ ಕಿರಿಕಿರಿ-ಶೀಘ್ರ ಕೋಪ-ಸೂಕ್ಷ್ಮಮನಸ್ಕರಾಗಿರುತ್ತಾರೆ. ಕ್ಷಯ ರೋಗಿಗಳು ಗರ್ಭಿಣಿಯ ರಾದಾಗ ಅವರಲ್ಲಿ ರೋಗದ ಉಲ್ಬಣ ತಗ್ಗಿನ ಮಟ್ಟದಲ್ಲಿರುತ್ತದೆ. ಆದರೆ ಗರ್ಭಾವಸ್ಥೆ ಕೊನೆಗೊಂಡ ಮೇಲೆ ರೋಗ ತೀಕ್ಷ್ಣತರವಾಗುತ್ತದೆ. ಆದರೆ ಬಲಹೀನ, ರೋಗಿಷ್ಠ ಸೂಕ್ಷ್ಮವ್ಯಕ್ತಿಗಳು, ಅತಿ ಚಿಕ್ಕ ವಯಸ್ಸಿಯವರು ಮತ್ತು ಅತಿ ಹೆಚ್ಚು ವಯಸ್ಕರು ಗರ್ಭಿಣಿಯರಾದರೆ ಗರ್ಭಾವಸ್ಥೆಯಲ್ಲಿ ಅವರು ಅನೇಕ ಪಿಡುಗುಗಳನ್ನು ಅನುಭವಿಸ ಬೇಕಾಗುತ್ತದೆ. ಹೊಟ್ಟೆ ತೊಳಸು, ವಾಂತಿ, ಕೆಲವು ಬಯಕೆ, ಹಲ್ಲುನೋವು, ಕೆಮ್ಮು ಗರ್ಭಕಾಲದ ಪ್ರಾರಂಭಿಕ ಮೂರು ತಿಂಗಳು ಮತ್ತು ಕೊನೆಯ ತಿಂಗಳು ಮೂತ್ರವಿಸರ್ಜನೆ ಯಲ್ಲಿ ತೊಂದರೆ, ಕಾಲಿನ ಅಭಿಧಮನಿಗಳು ಊದಿಕೊಂಡು ಕಾಲು ತೊಡೆಗಳಲ್ಲಿ ಊತ, ನೋವು ಉಂಟಾಗುವುದು ಇತ್ಯಾದಿ ಇವರ ಗರ್ಭಾವಸ್ಥೆಯಲ್ಲಿ ಕಂಡುಬರುತ್ತವೆ.

ಗರ್ಭಾವಸ್ಥೆಯಲ್ಲಿ ಸ್ವಾಭಾವಿಕ ಶಾರೀರಿಕ ಬದಲಾವಣೆಗಳು

ಬೆಳೆಯುವ ಭ್ರೂಣಕ್ಕೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಕ್ಲುಪ್ತ ಉಷ್ಣತೆಯುಳ್ಳ ಸ್ಥಳವನ್ನು ಗರ್ಭಾವಸ್ಥೆ ಅನುಕೂಲವಾಗಿ ಒದಗಿಸುವುದೇ ಅಲ್ಲದೆ ಮುಂದಕ್ಕೆ ಬೇಕಾಗಬಹುದಾದ ಶಾರೀರಿಕ ಬದಲಾವಣೆಗಳನ್ನೂ ಉಂಟುಮಾಡುತ್ತದೆ. ಮೊದಲಾಗಿ ಗರ್ಭಕೋಶ ದೊಡ್ಡ ದಾಗುವುದು. ಅದರೊಳಗಿರುವ ಭ್ರೂಣದ ಬೆಳೆವಣಿಗೆಯಿಂದ ಅದು ಹಿಗ್ಗುವುದು ಮಾತ್ರವಲ್ಲದೆ ತಾನೇ ಸ್ವತಃ ದೊಡ್ಡದಾಗಿ ದೃಢವಾಗುತ್ತದೆ. ಇದರಿಂದ ಗರ್ಭಕೋಶ ಸಕಾಲದಲ್ಲಿ ಸಂಕುಚಿಸಿ ಶಿಶುಜನನವಾಗುವುದಕ್ಕೆ ಅನುಕೂಲವಾಗುವುದು. ಉದರ ಮತ್ತು ಕಿಬ್ಬೊಟ್ಟೆಯ ಮುಂದಿನ ಭಿತ್ತಿಯ ಸ್ನಾಯುಗಳು ವೃದ್ಧಿ ಮತ್ತು ಸ್ರವಿಸುವ ಸಾಮರ್ಥ್ಯವೂ ಮೂಳೆಗಳ ಕಟ್ಟು ಹಿಗ್ಗಿದಂತಾಗುವುದೂ ಹೆರಿಗೆಗೆ ಅನುಕೂಲವಾಗುವ ಬದಲಾವಣೆಗಳು. ಸ್ತನಗಳ ವೃದ್ಧಿ ಮತ್ತು ಸ್ರವಿಸುವ ಸಾಮರ್ಥ್ಯವೂ ಗರ್ಭಾವಸ್ಥೆಯಲ್ಲಿ ಕಂಡುಬರುತ್ತದೆ. ಇದು ಮುಂದೆ ಹುಟ್ಟುವ ಮಗುವಿಗೆ ಹಾಲೂಡಿಸಿ ಸಂರಕ್ಷಿಸಲು ಆಗಿರುವ ಏರ್ಪಾಡು, ಗರ್ಭಾವಸ್ಥೆಯಲ್ಲಿ ವ್ಯಕ್ತಿಯ ತೂಕದ ಹೆಚ್ಚಳ ಸುಮಾರು 11-12 ಕೆ.ಜಿ. ವೃದ್ಧಿಗೊಂಡ ಗರ್ಭಕೋಶ, ಅದರೊಳಗಿರುವ ಮಗು, ಸ್ತನಗಳು ಎಲ್ಲಾ ಸುಮಾರು 5-6 ಕೆ.ಜಿ. ತೂಕಕ್ಕೆ ಕಾರಣ. ಉಳಿದ 5-6 ಕೆ.ಜಿ. ತೂಕದ ಹೆಚ್ಚಳ ದೇಹದಲ್ಲಿ ದ್ರವಾಂಶ ಹೆಚ್ಚು ಶೇಖರಣೆ ಆಗುವುದರಿಂದ ಉಂಟಾಗಿರುತ್ತದೆ. ರಕ್ತ ಸಹಜ ಪ್ರಮಾಣಕ್ಕಿಂತ 1/3ರಷ್ಟು ಹೆಚ್ಚಾಗಿದ್ದು ಕಣಗಳಿಗಿಂತ ದ್ರವಾಂಶ ಜಾಸ್ತಿಯಾಗಿರುವುದರಿಂದ ಸಹಜವಾಗಿಯೆ ಗರ್ಭಾವಸ್ಥೆಯಲ್ಲಿ ರಕ್ತವರ್ಣಹೀನತೆ ಕಂಡುಬಂದು ಸ್ವಾಭಾವಿಕ ಪ್ರಮಾಣದ ಶೇ. 87 ರಷ್ಟು ಮಾತ್ರ ಹಿಮೋಗ್ಲೋಬಿನ್ ಇರುತ್ತದೆ. ಗರ್ಭಾವಸ್ಥೆ ಕೊನೆಗೊಂಡಾಗ ಶರೀರ ತೂಕ ಸಹಜಮಟ್ಟಕ್ಕೆ ಸಾಮಾನ್ಯವಾಗಿ ಬಂದರೂ ಕೆಲವು ವೇಳೆ ತೂಕದ ಹೆಚ್ಚಳ ಪ್ರಸವಕಾಲದಿಂದ ಗಣನೆಗೆ ಬರುವಂತೆ ಸ್ಥೂಲಕಾಯವಾಗಿ ನಿಂತುಬಿಡಬಹುದು. ಗರ್ಭಾವಸ್ಥೆಯ ಪ್ರಾರಂಭವನ್ನು ಅನೇಕ ವಿಧದಿಂದ ಕರಾರುವಾಕ್ಕಾಗಿ ಗುರುತಿಸಬಹುದು. ಅಂಡಾಣು ಅಂಡಕೋಶದಿಂದ ಹೊರಬಿದ್ದ ದಿವಸ ಸ್ತ್ರೀಯರಲ್ಲಿ ಮುಂಜಾನೆ ದೇಹದ ಉಷ್ಣತೆ ಹಠಾತ್ತನೆ ಸ್ವಲ್ಪ ತಗ್ಗಿ ಆಮೇಲೆ ಮುಂಚಿಗಿಂತ ಸ್ವಲ್ಪ ಹೆಚ್ಚಿನ ಮಟ್ಟಕ್ಕೆ ಏರಿ ಮುಂದಿನ ದಿವಸಗಳಲ್ಲಿ ಆ ಹೊತ್ತಿನಲ್ಲಿ ಅದೇ ಏರಿದ ಮಟ್ಟದಲ್ಲಿ ಇರುತ್ತದೆ. ಅಂಡಾಣು ಅಂಡಕೋಶದಿಂದ ಹೊರಬಿದ್ದ 22-24 ಗಂಟೆಗಳಲ್ಲಿ ಗರ್ಭಾವಸ್ಥೆ ಪ್ರಾರಂಭವಾಗಿರಬೇಕೆನ್ನುವುದು ವ್ಯಕ್ತಪಟ್ಟಿದೆ. ಆದ್ದರಿಂದ ಮುಂಜಾವಿನ ಶರೀರೋಷ್ಣತೆಯನ್ನು ಕ್ಲಿಪ್ತವಾಗಿ ನೋಡುತ್ತಿದ್ದರೆ ಅದರ ವ್ಯತ್ಯಾಸದಿಂದ ಅಂಡಾಣು ಹೊರಬಿದ್ದ ದಿವಸವನ್ನು, ಅರ್ಥಾತ್ ಗರ್ಭಾವಸ್ಥೆಯ ಪ್ರಾರಂಭವನ್ನು, ಪತ್ತೆಮಾಡಬಹುದು. ಶರೀರೋಷ್ಣತಾ ವ್ಯತ್ಯಾಸ ಸ್ವಲ್ಪವೇ ಆದರೂ (0.5ಲಿ ಸೆಂ.) ಅದು ಖಚಿತವಾಗಿ ಆಗುತ್ತದಾದ್ದರಿಂದ ಈ ರೀತಿಯ ಗಣನೆ ಕಷ್ಟವಾಗುವುದಿಲ್ಲ. ಆ ದಿವಸದಿಂದ ಗರ್ಭಾವಸ್ಥೆ ಸಾಮಾನ್ಯವಾಗಿ 266 ದಿವಸಗಳು ಅಂದರೆ 9 1/2 ತಿಂಗಳು (ಚಾಂದ್ರಮಾನ) ಕಾಲ ವ್ಯಾಪ್ತಿಯುಳ್ಳದ್ದಾಗಿರುತ್ತದೆ. ಆದರೆ ಬೇರೆ ಬೇರೆ ಸ್ತ್ರೀಯರಲ್ಲಿ ಆರೋಗ್ಯವಾಗಿದ್ದರೂ ಈ ಅವಧಿ 252 ರಿಂದ 285 ದಿವಸಗಳವರೆಗೆ ಬದಲಾಗಬಹುದು. ಜೊತೆಗೆ ಅಂಡಾಣು ಹೊರಬಿದ್ದ ದಿವಸವನ್ನು ಶರೀರದ ಉಷ್ಣತಾಮಾಪನದಿಂದ ಎಲ್ಲರೂ ಖಚಿತವಾಗಿ ತಿಳಿದುಕೊಳ್ಳಲಾರರು. ಆದ್ದರಿಂದ ಗರ್ಭಾವಸ್ಥೆಯ ಕಾಲವನ್ನು ಬೇರೆ ಸುಲಭ ರೀತಿಯಲ್ಲಿ ಗಣಿಸುವುದು ರೂಢಿಗೆ ಬಂದಿದೆ, ಕೊನೆಯ ಬಾರಿ ಆದ ರಜಸ್ರಾವದ ಮೊದಲನೆಯ ದಿವಸಕ್ಕೆ ಏಳು ದಿವಸಗಳನ್ನು ಸೇರಿಸಿ ಅಲ್ಲಿಂದ ಮುಂದಕ್ಕೆ 9 ತಾರೀಖು ಪಟ್ಟಿ ತಿಂಗಳನ್ನು ಎಣಿಸಿದರೆ ಲಭಿಸುವ ದಿವಸ ಗರ್ಭಾವಸ್ಥೆಯ ಅಂತಿಮ ದಿವಸವೆಂದು ಗಣಿಸುವುದೂ ಇದು ಮುಟ್ಟಾದ ಮೊದಲ ದಿವಸದಿಂದ 280 ದಿನಗಳು ಅಂದರೆ 10 ಚಾಂದ್ರಮಾನ ತಿಂಗಳುಗಳ ಮೇಲೆ ಎಂದು ಗಣಿಸುವುದೂ ರೂಢಿಯಾಗಿದೆ. ಆದರೆ ನಿಜವಾಗಿ ಗರ್ಭಾವಸ್ಥೆಯ ಕಾಲ ಅಂಡಾಣು ಹೊರಬಿದ್ದು ನಿಷೇಚನಗೊಂಡ ದಿವಸದಿಂದ ಪ್ರಾರಂಭವಾಗುವುದರಿಂದ ಇದಕ್ಕಿಂತ 14 ದಿವಸಗಳು ಕಡಿಮೆ ಇರುತ್ತದೆನ್ನುವುದನ್ನು ಮರೆಯಬಾರದು. ಗರ್ಭಾವಸ್ಥೆಯ ಅವಧಿ ಅನೇಕ ವೇಳೆ ಯೋಗ್ಯ ಅಥವಾ ಅನೈತಿಕ ಜನನ ನಿಷ್ಕರ್ಷೆಯಲ್ಲಿ ನ್ಯಾಯಾಲಯದ ಅವಲೋಕನಕ್ಕೆ ಬರಬಹುದಾಗಿರುವುದರಿಂದ ಅನೇಕ ದೇಶಗಳಲ್ಲಿ ಗರ್ಭಾವಸ್ಥೆಯ ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನು ಕಾನೂನಿನಂತೆ ನಿಯಮಿಸಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಗರಿಷ್ಠ ಮಿತಿ ಬೇರೆ ಬೇರೆ ಉಂಟು. ಗರ್ಭಾವಸ್ಥೆಯ 28 ವಾರಗಳ ಮುಂಚೆಯೇ ಅಂದರೆ 7 ನೆಯ ತಿಂಗಳಿಗೆ ಮುಂಚೆಯೇ ಪ್ರಸವವಾದರೆ ಜನಿಸಿದ ಮಗು ಜೀವಂತವಾಗಿರುವುದಿಲ್ಲ ಎಂದು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಅಂಗೀಕರಿಸಿದ್ದಾರೆ. ಆದ್ದರಿಂದ ಅನೇಕ ದೇಶಗಳಲ್ಲಿ ಗರ್ಭಾವಸ್ಥೆಯ ಗರಿಷ್ಠ ಮಿತಿ 310 ದಿವಸಗಳೆಂದು ಗಣಿಸಲಾಗಿದೆ.

ಗರ್ಭಾವಸ್ಥೆಯ ಅರಿವು

ನಿರೀಕ್ಷಣೆಯಂತೆ ಮುಟ್ಟಾಗದೇ ಇದ್ದಾಗ ಸ್ತ್ರೀ ತಾನು ಗರ್ಭಿಣಿಯಾಗಿರಬಹುದೆಂಬುದನ್ನು ಊಹಿಸುತ್ತಾಳೆ. ಮುಂದಕ್ಕೆ ಬೆಳಗ್ಗೆ ಎದ್ದಾಗಲೇ ವಾಕರಿಕೆ, ಸ್ತನಗಳ ವೃದ್ಧಿ, ಹೊಟ್ಟೆ ದಪ್ಪವಾಗುವುದು ಕಂಡುಬರುತ್ತದೆ. ಗರ್ಭಾವಸ್ಥೆಯ 20ನೇ ವಾರ ಮೊದಲನೇ ಗರ್ಭಧರಿಸಿದವರಿಗೂ, 10ನೇ ವಾರಕ್ಕೆ ಎರಡನೆಯ, ಮೂರನೆಯ ಸಲ ಗರ್ಭಧರಿಸಿದವರಿಗೂ ಹೊಟ್ಟೆಯ ಮೇಲೆ ಕೈಯಿಟ್ಟು ನೋಡಿದರೆ ಶಿಶುವಿನ ಕೈಕಾಲು ಮುಂತಾದ ಭಾಗಗಳು ಸಿಕ್ಕಿ ಅವುಗಳ ಚಲನೆ ಖಾತರಿಯಾಗುತ್ತದೆ. ವ್ಯಕ್ತಿಗೇ ತಿಳಿಯುವಂತಿರುವ ಈ ಸೂಚನೆಗಳಲ್ಲದೆ ವೈದ್ಯಪರೀಕ್ಷೆಯಿಂದ ಗರ್ಭಾವಸ್ಥೆಯನ್ನು ಅರಿಯಬಹುದಾಗಿದೆ. 14ನೆಯ ವಾರಕ್ಕೆ ಡಾಪ್ಲರ್ ಮಗುವಿನ ಎದೆಬಡಿತ ಗುರುತಿಸುತ್ತದೆ. 16-18ವಾರಗಳ ಬಳಿಕ ಸ್ಟೆತಾಸ್ಕೋಪನ್ನು ಗರ್ಭಿಣಿಯ ಹೊಟ್ಟೆಯ ಮೇಲಿಟ್ಟು ಆಲಿಸಿದರೆ ಗುಂಡಿಗೆಯ ಬಡಿತ ಗಡಿಯಾರದ ಮಸುಕಾದ ಟಿಕ್ ಟಿಕ್ ಶಬ್ದದಂತೆ ಕೇಳುತ್ತದೆ. ಯೋನಿಯೊಳಗಿನ ಪರೀಕ್ಷೆಗಳಿಂದಲೂ ಗರ್ಭಾವಸ್ಥೆಯನ್ನು ಅರಿಯಬಹುದು;


33-34ನೆಯ ದಿನವೇ ಮೂತ್ರ ಪರೀಕ್ಷೆಯಿಂದ ಕರಾರುವಕ್ಕಾಗಿ ಆಕೆಯ ಗರ್ಭಿಣಿಯೇ ಇಲ್ಲವೇ ಎಂದು ತಿಳಿಯಬಹುದು. ಇತ್ತೀಚಿನ ಸ್ಕಾನಿಂಗ್ ಪರೀಕ್ಷೆಯಲ್ಲಿ 5-6ನೇ ವಾರಕ್ಕೆ ಗರ್ಭಿಣಿಯೆ ಅಲ್ಲವೇ ತಿಳಿಯುವುದರೊಂದಿಗೆ ಮಗುವಿನ ಹೃದಯ ಮಿಡಿತ ಕೂಡ ನೋಡಬಹುದು. 6ನೇ ವಾರದಿಂದ ಯೋನಿ ಪರೀಕ್ಷೆಯಲ್ಲಿ ಗರ್ಭವನ್ನು ಖಚಿತಪಡಿಸಬಹುದು.


20ನೆಯ ವಾರಕ್ಕೆ ಮೊದಲ ಬಾರಿ ಬಸಿರಾದವರೂ, 16ನೆಯ ವಾರಕ್ಕೆ ಎರಡು ಮೂರನೆ ಬಾರಿ ಬಸಿರಾದವರಿಗೂ ಮಗುವಿನ ಚಲನೆ ತಿಳಿಯುತ್ತದೆ.


ನಡುಗಾಲದಲ್ಲಿ, ಗರ್ಭಾವಸ್ಥೆಯ ಪ್ರಾರಂಭಿಕ ಲಕ್ಷಣಗಳು ಬೇರೆ ಕಾರಣಗಳಿಂದಲೂ ಉಂಟಾಗಬಹುದಾದ್ದರಿಂದ ನಂಬುವಂಥದಲ್ಲ, ರಕ್ತಕೊರತೆಯಿಂದ ಅಥವಾ ಬಹುವಾಗಿ ಬೇಕಾದ ವ್ಯಕ್ತಿಯ ಸಾವಿನಂತಹ ತೀವ್ರಮಾನಸಿಕ ಆಘಾತದಿಂದ ವ್ಯಕ್ತಿ ನಿರೀಕ್ಷಣೆಯಂತೆ ಮುಟ್ಟಾಗದೆ ಅದು ಮುಂದೆ ಹೋಗಬಹುದು. ಅನೈತಿಕ ಅಥವಾ ಇಷ್ಟವಿಲ್ಲದ ಸಂಭೋಗವಾದ ಮೇಲೆ ಗರ್ಭಧಾರಣೆಯಾಗಿ ಬಿಟ್ಟಿದೆಯೋ ಎಂಬ ಮಾನಸಿಕ ಭೀತಿಯಿಂದಲೇ ನಿರೀಕ್ಷಿತ ಮುಟ್ಟು, ನಿಂತುಹೋಗಿರಬಹುದು. ಇದಕ್ಕೆ ಬದಲಾಗಿ ಮಕ್ಕಳಿರದ ಸ್ತ್ರೀಯಲ್ಲಿ ಮಕ್ಕಳಾಗಬೇಕೆಂಬ ಅಭಿಲಾಷೆ ತೀವ್ರತೆಯಿಂದಲೇ ಮುಟ್ಟು ನಿಂತು ಬೆಳಗಿನ ವಾಕರಿಕೆ, ಹೊಟ್ಟೆ ದಪ್ಪವಾಗುವುದು ಮುಂತಾದ ಗರ್ಭಾವಸ್ಥೆಯ ಮುಂದಿನ ಅನೇಕ ಸೂಚನೆಗಳು ವ್ಯಕ್ತವಾಗಿ ಕೊನೆಗೆ 10 ತಿಂಗಳ ತರುವಾಯ ನಕಲಿ ಪ್ರಸವವೂ ಆಗಬಹುದು. 3ನೆಯ ತಿಂಗಳು ತುಂಬಿದ ಮೇಲೆ ಗರ್ಭಕೋಶದ ಬೆಳೆವಣಿಗೆಯನ್ನು ಹೊಟ್ಟೆಯ ಮೇಲೆ ಕೈಯಿಟ್ಟು ಪರೀಕ್ಷಿಸಿ ತಿಳಿಯಬಹುದು. 3ನೆಯ ತಿಂಗಳಲ್ಲಿ ಹೊಕ್ಕಳ ಮಟ್ಟದಲ್ಲಿ, 9ನೆಯ ತಿಂಗಳಲ್ಲಿ ಎದೆ ಮೂಳೆಯ ಕೆಳತುದಿಯ ಮಟ್ಟದಲ್ಲಿ, 10ನೆಯ ತಿಂಗಳಲ್ಲಿ ಅಂದರೆ ಪ್ರಸವದ ಸಮಯ ಹತ್ತಿರವಾದಂತೆ ಮೇಲಿನ ಮಟ್ಟಕ್ಕಿಂತ ಸು. 3-28 ಸೆಂಮೀ ಅಂಗುಲ ಕೆಳಗೆ ಗರ್ಭಕೋಶವನ್ನು ಸ್ಪರ್ಶಿಸಬಹುದು. ಚೊಚ್ಚಲು ಗರ್ಭಿಣಿಯರಲ್ಲಿ ಸ್ತನಗಳು ದಪ್ಪವಾಗಿಯೂ ದೃಢವಾಗಿಯೂ ಆಗುವುದರ ಜೊತೆಗೆ ಮುಟ್ಟಿದರೆ ನೋಯಲೂಬಹುದು. ಸಾಮಾನ್ಯವಾಗಿ ಎಲ್ಲ ಗರ್ಭಿಣಿಯರಲ್ಲೂ ಸ್ತನವನ್ನು ಅಮುಕಿದರೆ ಗಟ್ಟಿಯಾದ ಗಿಣ್ಣಿನಂತ ದ್ರವ ಬರುತ್ತದೆ. ಚೊಚ್ಚಲು ಗರ್ಭದಲ್ಲಿ ಮೊಲೆಗಳು ಕಂದು ಮತ್ತು ಅನೇಕರಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಜೀವಮಾನ ಪರ್ಯಂತ ಕಪ್ಪಾಗಿಯೇ ಇರುತ್ತವೆ. ಹಾಗೇ ಹೊಟ್ಟೆಯ ನಡುಗೆರೆ ಹೊಕ್ಕಳಿಂದ ಕೆಳಭಾಗದಲ್ಲಿ ಕಪ್ಪಾಗುತ್ತದೆ. ಹೊಟ್ಟೆ ಹಿಗ್ಗುವುದರಿಂದ ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಮೇಲೆಲ್ಲ ಕೆಂಪು ರೇಖೆಗಳು ಕಂಡು ಬರುತ್ತದೆ. ಪ್ರಸವವಾದ ಮೇಲೆ ಇವು ಬಿಳಿಯ ಸುಕ್ಕುಗಟ್ಟಿದ ರೇಖೆಗಳಾಗುತ್ತವೆ. ಈ ರೇಖೆಗಳು ಜೀವಮಾನಪರ್ಯಂತ ಇರುತ್ತವೆ. ಮೊಲೆಗಳ ಕಪ್ಪುವರ್ಣ, ಹೊಟ್ಟೆಯ ಸುಕ್ಕುಗಟ್ಟಿದ ರೇಖೆಗಳು ಆ ಸ್ತ್ರೀ ಒಮ್ಮೆಯಾದರೂ ಗರ್ಭಿಣಿಯಾಗಿದ್ದಳೆಂಬುದನ್ನು ಸೂಚಿಸುತ್ತವೆ. ಶಂಕಿತ ವ್ಯಕ್ತಿಯ ಮೂತ್ರವನ್ನು ಇಲಿ, ಮೊಲ, ಕಪ್ಪೆ ಮುಂತಾದ ಪ್ರಾಣಿಗಳಿಗೆ ಪಿಚಕಾರಿಯ ನೆರವಿನಿಂದ ಚುಚ್ಚಿ ಈ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಷಿಂಜಾಂಡೆಕ್ರ ಪರೀಕ್ಷಾ ವಿಧಾನದಲ್ಲಿ ಎಳೆಯ ಹೆಣ್ಣು ಇಲಿಗಳಿಗೆ 3-4 ದಿವಸ ಶಂಕಿತ ವ್ಯಕ್ತಿಯ ಮೂತ್ರವನ್ನು ಚುಚ್ಚುಮದ್ದಾಗಿ ಕೊಟ್ಟು ಆಮೇಲೆ ಅವನ್ನ ಕೊಂದು ಅವುಗಳ ಅಂಡಾಶಯಗಳನ್ನು ಪರೀಕ್ಷಿಸಲಾಗುತ್ತದೆ. ಅಂಡಾಣು ವೃದ್ಧಿಯಾಗಿರುವುದೂ ಅದು ಹೊರಬಿದ್ದು ಅಂಡಾಶಯದಲ್ಲಿ ರಕ್ತಕಲೆ ಕಟ್ಟಿಕೊಂಡಿರುವುದೂ ಸ್ತ್ರೀ ಗರ್ಭಿಣಿ ಎಂದು ಸೂಚಿಸುತ್ತದೆ. ಫ್ರೀಡ್ಮನ್ನನ ಪರೀಕ್ಷಾ ವಿಧಾನದಲ್ಲಿ ಜೊತೆಯ ಮೊಲಗಳಿಂದ ಅದರಲ್ಲೂ ಗಂಡಿನಿಂದ 2 ವಾರಗಳು ಬೇರೆಯಾಗಿರದ ಕನ್ಯಾಮೊಲವನ್ನು ಉಪಯೋಗಿಸುತ್ತಾರೆ. 48 ಗಂಟೆಗಳಾದ ಬಳಿಕ ಶಸ್ತ್ರಚಿಕಿತ್ಸೆಯಿಂದ ಹೊಟ್ಟೆಯನ್ನು ಕೊಯ್ದು ಮೊಲದ ಅಂಡಾಶಯಗಳನ್ನು ಪರೀಕ್ಷಿಸಲಾಗುತ್ತದೆ. ಇಲ್ಲೂ ಅಂಡಾಣುವೃದ್ಧಿ ವ್ಯಕ್ತಿಯ ಗರ್ಭಾವಸ್ಥೆಯನ್ನು ಸೂಚಿಸುತ್ತದೆ. ಹಾಗ್ಬೆನ್ ಪರೀಕ್ಷಾವಿಧಾನದಲ್ಲಿ ಒಂದು ತರಹ ಹೆಣ್ಣು ನೆಲಗಪ್ಪೆಯನ್ನು (ಟೋಡ್) ಉಪಯೋಗಿಸಲಾಗುವುದು. ಇದಲ್ಲದೆ ಗಂಡು ಕಪ್ಪೆಗಳನ್ನು ಉಪಯೋಗಿಸುವ ಪರೀಕ್ಷಾ ವಿಧಾನಗಳು ಉಂಟು, ಈ ಪರೀಕ್ಷಾ ವಿಧಾನಗಳಿಂದ ಗರ್ಭಾವಸ್ಥೆಯನ್ನು ಮುಟ್ಟು ನಿಂತ 1 ವಾರದಲ್ಲೇ ಅಂದರೆ ಸುಮಾರು 3 ವಾರಗಳ ಗರ್ಭಾವಸ್ಥೆಯಲ್ಲೇ ಪತ್ತೆ ಮಾಡಬಹುದು ಮತ್ತು ಇವು ಶೇ. 98 ಸಂದರ್ಭಗಳಲ್ಲಿ ಖಚಿತವಾದ, ನಂಬಲರ್ಹವಾದ ಪರೀಕ್ಷಾ ವಿಧಾನಗಳಾಗಿವೆ.


ಗರ್ಭಧರಿಸಿದ ಸಮಯದಲ್ಲಿ ಒಳ್ಳೆಯಗಾಳಿ, ಪೌಷ್ಟಿಕ ಆಹಾರ ಮತ್ತು ನಿಯಮಿತ ವ್ಯಾಯಾಮ ಅಗತ್ಯ. ಆಹಾರ ಸಮತೋಲನವಾಗಿದ್ದು, ವಿಟಮಿನ್ನುಗಳನ್ನೂ ಕಬ್ಬಿಣದ ಮತ್ತು ಸುಣ್ಣ ಅಂಶವನ್ನೂ ಪೂರೈಸುವಂತಿರಬೇಕು. ಸಾಮಾನ್ಯವಾಗಿ ಗರ್ಭಿಣಿಗೆ ಗರ್ಭಸ್ಥಿತಿ ಪುರ್ವದ 1 1/5 ರಷ್ಟು ಶಕ್ತಿಯನ್ನು ಒದಗಿಸುವಷ್ಟು ಆಹಾರ ಬೇಕಾಗುತ್ತದೆ. ಇದು 3ನೆಯ ತಿಂಗಳಿನಿಂದಲೇ ಸಹಜವಾಗಿ ಉಂಟಾಗುವ ಹೆಚ್ಚಿನ ಹಸಿವಿನಿಂದ ಪೂರೈಕೆ ಆಗುತ್ತದೆ. ತರಕಾರಿ ಹಣ್ಣುಗಳನ್ನೂ ದಿನಕ್ಕೆ ಕಡೆಪಕ್ಷ ಮುಕ್ಕಾಲು ಲೀಟರ್ ಹಾಲನ್ನು ತೆಗೆದುಕೊಂಡರೆ ಸಾಕಾದಷ್ಟು ಪೋಷಣೆ ದೊರೆಯುತ್ತದೆ. ಪ್ರಗತಿಪರ ರಾಷ್ಟ್ರಗಳ ಜನತೆಯಲ್ಲಿ ತಕ್ಕಷ್ಟು ಜ್ಞಾನ, ಧನ ಇರುವುದರಿಂದ ಗರ್ಭಾವಸ್ಥೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಗತ್ಯವಾದ ವಿಟಮಿನ್ನುಗಳನ್ನುಳ್ಳ ಆಹಾರಗಳನ್ನು ತೆಗೆದುಕೊಂಡು ಆ ಅವಧಿಯಲ್ಲಿ ಮತ್ತು ಪ್ರಸವ ಸಮಯದಲ್ಲಿ ಕಷ್ಟವಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಭಾರತದಂಥ ಮುಂದುವರೆಯುತ್ತಿರುವ ದೇಶಗಳಲ್ಲಿ ಪೌಷ್ಟಿಕಾಹಾರದ ಕೊರತೆ ಕಂಡುಬರುತ್ತದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಕಂಡುಬರುತ್ತದೆ. ಗರ್ಭಾವಸ್ಥೆಯಲ್ಲಿ ಮದ್ಯಸಾರವು ಹೊಗೆಸೊಪ್ಪು ವರ್ಜ್ಯ, ವ್ಯಕ್ತಿಯ ಸ್ವಾಭಾವಿಕ ಬಯಕೆಗಳ ಪುರೈಕೆ ವಿಚಾರದಲ್ಲಿ ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ನರಮಂಡಲ ಸೂಕ್ಷ್ಮಸ್ಥಿತಿಯಲ್ಲಿ ಇರುವುದರಿಂದ ಮನಸ್ಸು ಉದ್ರೇಕಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅವಶ್ಯಕತೆಗೆ ತಕ್ಕಂತೆ ನಿದ್ರೆ ಬೇಕಾಗುತ್ತದೆ. ಕಡಿಮೆಯೆಂದರೂ 10 ಗಂಟೆಗಳ ಕಾಲ ನಿದ್ರೆ ಮಗುವಿನ ಬೆಳೆವಣಿಗೆಗೆ ಅಗತ್ಯ. ಉಡಿಗೆ ತೊಡಿಗೆಗಳು ಹೊಟ್ಟೆ, ಸ್ತನಗಳನ್ನು ಬಿಗಿಯದಂತೆ ಇರಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ದೇಹದ ಸಮತೋಲನ ವ್ಯತ್ಯಾಸವಾಗಿದ್ದು ಗರ್ಭಿಣಿಯರು ನಡೆದಾಡುವಾಗ ಒಂದೆರಡು ಬಾರಿಯಾದರೂ ಮುಗ್ಗರಿಸಿ ಬೀಳುವುದು ಸಾಮಾನ್ಯ. ದೇಹಘಾತ ಮತ್ತು ಶ್ರಮವನ್ನು ಉಂಟುಮಾಡುವ ಕೆಲಸಗಳು, ಎತ್ತರದಿಂದ ಧುಮುಕುವುದು, ಭಾರ ಹೊರುವುದು ಗುದ್ದಾಡುವುದು, ದೂರ ಪ್ರಯಾಣ ಇವುಗಳೆಲ್ಲ ವರ್ಜ್ಯ, ಎತ್ತರದ ಹಿಮ್ಮಡಿ ಚಪ್ಪಲಿ ಒಳ್ಳೆಯದಲ್ಲ, ಯಾವ ಆತಂಕಗಳೂ ಇಲ್ಲದಿದ್ದರೆ ಸಂಭೋಗ ನಿಶಿದ್ಧವಲ್ಲ.


ಮೊದಲು ಗರ್ಭ ಖಚಿತಪಡಿಸಿಕೊಳ್ಳಬೇಕು, ಆ ಸಮಯದಲ್ಲಿಯೇ ಗರ್ಭಿಣಿಯ ದೈಹಿಕ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ರಕ್ತ ಪರೀಕ್ಷೆಗಳ ಮೂಲಕ ತೊಂದರೆಗಳು ಇಲ್ಲದೇ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.


ಗರ್ಭಾವಸ್ಥೆಯ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ: ಅತಿ ವಾಂತಿಯು ಮೊದಲ ತಿಂಗಳಲ್ಲಿ ಅವರಿಗೆ ಕಾಡಬಹುದಾದ ಅಂಶ. ಚಿಕಿತ್ಸೆಗೆ ಬಗ್ಗದಿದ್ದರೆ ವೈದ್ಯಕೀಯ ಮೇಲ್ವಿಚಾರಣೆಯಿಂದ ಗರ್ಭಪಾತ ಮಾಡಿಸಬಹುದು. ಸುಖ ಪ್ರಸವವಾಗುವುದಕ್ಕೆ ಗರ್ಭಿಣಿಯ ದೇಹದಲ್ಲಿ ಏನಾದರೂ ಅಡಚಣೆ ಇದೆಯೇ ಎಂದು ಮೊದಲ ಪರೀಕ್ಷೆಯಲ್ಲಿ ನೋಡಿಕೊಳ್ಳಬೇಕು. ಸೊಂಟದಲ್ಲಿ ಮೂಳೆಗಳ ವಿಕೃತಿಯಿಂದ ಇಂಥ ಸಂಭಾವ್ಯತೆ ಬರಬಹುದು. ಇಲ್ಲವೇ ರೋಗಸ್ಥಿತಿಯಿಂದ ಅಡಚಣೆ ಬರಬಹುದು. ಇವುಗಳಿಗೆ ತಕ್ಕ ಗಮನ ಕೊಟ್ಟು ಸುಖಪ್ರಸವವಾಗಿ ತಾಯಿ ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಪ್ರಸವಪೂರ್ವ ಎಚ್ಚರಿಕೆ ಕ್ರಮ. ಈ ಕ್ರಮದಂತೆ ಪ್ರಸವ ಆಸ್ಪತ್ರೆಯಲ್ಲಿ ನಡೆಯಬೇಕೇ ಮನೆಯಲ್ಲಿ ನಡೆಯಬೇಕೇ ಎನ್ನುವ ನಿರ್ಧಾರ ಮಾಡಬೇಕಾಗುತ್ತದೆ. ಕಷ್ಟ ಪ್ರಸವದಲ್ಲಿ ಆಸ್ಪತ್ರೆ ಸೌಕರ್ಯದ ಅವಶ್ಯಕತೆ ಜನತೆಗೆ ಬೇಕಾಗಿದೆ. 1930ರಿಂದ ಈಚೆಗೆ ಇಂಗ್ಲೆಂಡಿನಲ್ಲಿ ಮತ್ತು ಭಾರತದಲ್ಲಿ ಹೆರಿಗೆ ಆಸ್ಪತ್ರೆಗಳು, ಆಸ್ಪತ್ರೆಗೆ ಸೇರಬಯಸುವ ವ್ಯಕ್ತಿಗಳ ಸಂಖ್ಯೆಯೂ ಬಹುವಾಗಿ ಹೆಚ್ಚಿವೆ. ಎಲ್ಲ ಗರ್ಭಿಣಿಯರಿಗೂ ಆಸ್ಪತ್ರೆಯಲ್ಲೇ ಹೆರಿಗೆ ಆಗಬೇಕೆನ್ನುವುದು ಅಸಾಧ್ಯ. ಆದರೆ ಚೊಚ್ಚಲ ಬಸಿರಿನವರು, ಹಿಂದಿನ ಹೆರಿಗೆಗಳು ಕಷ್ಟವಾಗಿದ್ದವರು, ಮನೆಯಲ್ಲಿ ಹೆರಿಗೆಗೆ ಸೌಕರ್ಯಲೇಶವೂ ಇಲ್ಲದಿರುವವರು- ಇವರುಗಳಿಗೆ ಆಸ್ಪತ್ರೆಯ ದಾಖಲಾತಿ ಅವಶ್ಯಕವಾಗಿರುತ್ತದೆ. ಆಗಲೇ ಬಹು ಮಕ್ಕಳಾಗಿರುವವರಿಗೂ ಆಸ್ಪತ್ರೆಯಲ್ಲೇ ಹೆರಿಗೆ ನಡೆಯುವುದು ಸೂಕ್ತ. ಏಕೆಂದರೆ ಇವರಲ್ಲಿ ಪ್ರಸವ ಕಾಲದ ಮರಣ ಸಂಭಾವ್ಯತೆ ಬಹುವಾಗಿರುತ್ತದೆ. 3-4 ಮಕ್ಕಳಿರುವ ವ್ಯಕ್ತಿಗಳಿಗಿಂತ 6 ಮಕ್ಕಳಿರುವ ವ್ಯಕ್ತಿಗಳಲ್ಲಿ ಪ್ರಸವ ಕಾಲದ ಮರಣ ಸಂಭಾವ್ಯತೆ ಎರಡಷ್ಟೂ ಹತ್ತು ಮಕ್ಕಳಿರುವವರಲ್ಲಿ ನಾಲ್ಕರಷ್ಟೂ ಇರುವುದರಿಂದ ಆಸ್ಪತ್ರೆ ಅಂಥವರಿಗೆ ಎಷ್ಟು ಅಗತ್ಯ ಎಂದು ಗೊತ್ತಾಗುತ್ತದೆ.


ಪ್ರಸವಪೂರ್ವ ಎಚ್ಚರಿಕೆ ಗರ್ಭಸ್ಥಿತಿಯ ತರುಣದಲ್ಲೆ ದೇಹ ಪರೀಕ್ಷೆಯಿಂದ ಪ್ರಾರಂಭವಾಗಬೇಕು. ಕೊನೆಯ ಸಲ ಆದ ರಜಸ್ರಾವದ ಮೊದಲ ದಿವಸವನ್ನೂ ನಿರೀಕ್ಷಿತ ಪ್ರಸವ ದಿವಸವನ್ನೂ ವ್ಯಕ್ತಿಯ ತೂಕ, ಎತ್ತರ, ರಕ್ತದ ಒತ್ತಡವನ್ನೂ ಗುಂಡಿಗೆ ಫುಪ್ಪುಸನಾಳ ಸ್ಥಿತಿಯನ್ನೂ ಮೊದಲ ಸಾರಿಯೇ ಪರೀಕ್ಷೆ ಪ್ರಯೋಗಗಳಿಂದ ತಿಳಿದುಕೊಳ್ಳಬೇಕು. ರಕ್ತದ ಕೊರತೆ, ರಕ್ತಪಂಗಡ, ಅದರಲ್ಲೂ ಆರ್.ಎಚ್.ಪಂಗಡ ಹೆಚ್.ಐ.ವಿ. ಕಾಮಾಲೆ ಮತ್ತು ಪರಂಗಿ ರೋಗದ ಪತ್ತೆಗಾಗಿ ರಕ್ತಪರೀಕ್ಷೆಯನ್ನು ಮಾಡಬೇಕು. ಮೂತ್ರದಲ್ಲಿ ಆಲ್ಬ್ಯುಮಿನ್ ಸಕ್ಕರೆಗಳಿವೆಯೇ ಎಂದು ಪರೀಕ್ಷಿಸಬೇಕು. ಆಮೇಲೆ ನಾಲ್ಕು ವಾರಗಳಿಗೊಮ್ಮೆ ತೂಕ ಮತ್ತು ರಕ್ತದ ಒತ್ತಡವನ್ನು ಗರ್ಭಸ್ಥಿತಿಯ 20ನೆಯ ವಾರದ ತನಕವೂ 2 ವಾರಗಳಿಗೊಮ್ಮೆ 36ನೆಯ ವಾರದ ತನಕವೂ ಆಮೇಲೆ ಪ್ರಸವವಾಗುವ ತನಕ ವಾರವಾರವೂ ನೋಡುತ್ತಿರಬೇಕು. ಹೊಟ್ಟೆಯನ್ನು ಅಮುಕಿ ಪರೀಕ್ಷಿಸಿ ಗರ್ಭಕೋಶ ಎಷ್ಟು ಎತ್ತರದಲ್ಲಿದೆ ಎಂದು ಕಂಡುಕೊಳ್ಳಬೇಕು. ಗರ್ಭಕೋಶದೊಳಗೆ ಭ್ರೂಣ ಸರಿಯಾದ ಭಂಗಿಯಲ್ಲಿದೆಯೇ ಎಂದು ಗಮನಿಸಬೇಕು, ಮೊದಲ, ಎರಡನೆಯ ಹಾಗೂ ಕೊನೆಯ ತ್ರೈಮಾಸಿಕಗಳಲ್ಲಿ ನಡೆಸುವ ಸ್ಕಾನಿಂಗ್ ಎಲ್ಲಾ ಪರೀಕ್ಷೆಗಳಿಗೆ ಪೂರಕವಾಗಿ ಒದಗುತ್ತವೆ ಎನ್ನುವುದನ್ನೂ ತಿಳಿದುಕೊಳ್ಳಬೇಕು. ಗರ್ಭಸ್ಥಿತಿಯ 34ನೆಯ ವಾರದಲ್ಲಿ ಸುಖಪ್ರಸವಾಗುವಂತಿದೆಯೇ ಶಸ್ತ್ರಕ್ರಿಯಾಪ್ರಸವದ ಅಗತ್ಯ ಬೀಳುತ್ತದೆಯೇ ಎನ್ನುವುದನ್ನು ಭ್ರೂಣದ ತಲೆಯ ಗಾತ್ರದ ಪರೀಕ್ಷೆಯಿಂದ ತಿಳಿಯಬೇಕು. ಪ್ರಸವಪೂರ್ವ ಎಚ್ಚರಿಕೆಕ್ರಮ ಗರ್ಭಾವಸ್ಥೆಯ ಬಸಿರು ನಂಜನ್ನು ಪತ್ತೆಮಾಡಲು ಅಗತ್ಯವಾದ ವಿಧಾನ. ಬಸಿರು ನಂಜು ಇರುವ ವಿಚಾರವನ್ನು ಅದಷ್ಟು ಬೇಗ ಪತ್ತೆಮಾಡಿ ಚಿಕಿತ್ಸೆಗೆ ಒಳಪಡಿಸುವುದು ಒಳ್ಳೆಯದು. ಯಾರಿಗೆ ಬಸುರು ನಂಜು ಬರುವ ಸಾಧ್ಯತೆಗಳಿದೆಯೋ ಅವರಿಗೆ ಮೂರನೆಯ ತಿಂಗಳಿನಿಂದಲೂ ಚಿಕಿತ್ಸೆ ಆರಂಭಿಸುವುದು ಉತ್ತಮ. ಪುಷ್ಟಿಭರಿತ ಆಹಾರ, ನೀರು, ವಿಶ್ರಾಂತಿ, ಮಾನಸಿಕ ನೆಮ್ಮದಿ ಮುಖ್ಯವಾಗುತ್ತವೆ.


ವಿಟಮಿನ್ ಎ, ಸಿ, ಆಯ್ಕೆ ಮಾಡಿದ ಮೇದೋ ಅಮ್ಲಗಳು ಈ ದಿಸೆಯಲ್ಲಿ ಮುಖ್ಯವಾದ ಔಷಧಿಗಳು. ಕಾಲಮೀರಿದ ಮೇಲೆ ಜ್ಞಾನ ತಪ್ಪಿ ಅದಿರುವಾಯು ಬಂದು ಸಾವೇ ಸಂಭವಿಸಬಹುದು. ವಿಷಮ ಸ್ಥಿತಿ ಗರ್ಭಾವಸ್ಥೆಯ ಉತ್ತರಾರ್ಧದಲ್ಲಿ ಅವ್ಯಕ್ತವಾಗಿ ಪ್ರಾರಂಭವಾಗುತ್ತದೆ. ತೂಕ ಅತಿ ಹೆಚ್ಚಾಗುವುದಕ್ಕೆ ಮೂತ್ರದಲ್ಲಿ ಆಲ್ಬ್ಯುಮಿನ್ ಹೋಗುವುದು, ಕೈ ಕಾಲು ಮುಖ, ಹೊಟ್ಟೆ ಊತ ಇದರ ಸೂಚನೆಗಳು ಏರಿದ ಚಿಪ್ಪು. ಕಣ್ಕತ್ತಲೆ ನಂಜು ಹೆಚ್ಚಾದ ಸೂಚನೆ. ಅನೇಕ ವೇಳೆ ಇದೇ ವಿಷಮ ಸ್ಥಿತಿಯ ಪ್ರಾಥಮಿಕ ಗುರುತಾಗಿರುತ್ತದೆ ಮತ್ತು ತೂಕದ ವಿಷಯದಲ್ಲಿರುವಂತೆಯೇ ಕಾಲಕಾಲದ ದೇಹ ಪರೀಕ್ಷೆಯಿಂದಲೊ ಅಕಸ್ಮಾತ್ತಾಗಿಯೋ ತಿಳಿದುಬರುವ ಸ್ಥಿತಿಯಾಗಿರುತ್ತದೆ. ಇನ್ನು ಮುಂದಿನ ಘಟ್ಟ, ಗರ್ಭಾವಸ್ಥೆಯ ವಿಷಮ ಪರಿಸ್ಥಿತಿಯನ್ನು ವೈದ್ಯರ ನೇರ ನಿರ್ದೇಶನದಲ್ಲಿ ಮನೆಯಲ್ಲೇ ಸೂಕ್ತ ವಿಶ್ರಾಂತಿ ಕೊಟ್ಟು ಚಿಕಿತ್ಸಿಸಬಹುದು. ಪರಿಸ್ಥಿತಿ ತೀವ್ರವಾಗಿದ್ದರೆ ಆಸ್ಪತ್ರೆಗೇ ಸೇರಿಸಬೇಕಾಗುತ್ತದೆ. ಕಾಲಮೀರಿ ವಿಷಮಸ್ಥಿತಿ ಅದಿರುವಾಯುವಿನ ಘಟ್ಟ ತಲುಪಿದ್ದರೆ ಶೇ.30 ಮರಣವನ್ನಪುತ್ತಾರೆ. ಈ ಸ್ಥಿತಿಯ ಕಾರಣದ ಅರಿವು ಇನ್ನೂ ಹೆಚ್ಚುವವರೆಗೂ ಹೀಗೆ ಇರುತ್ತದೆ ಎಂಬುದಾಗಿಯೂ ಅಂದಾಜು ಮಾಡಲಾಗಿದೆ. ನಂಜು ಹತೋಟಿಯಲ್ಲಿಲ್ಲದಿದ್ದರೆ ಮಗುವನ್ನು ತೆಗೆಯಲೇಬೇಕು. ಗರ್ಭಿಣಿ ಆರ್.ಎಚ್. ಋಣ ಪ್ರತಿಯಕಾಯ (ಆ್ಯಂಟಿ ಆರ್. ಎಚ್. ಅಗ್ಲೊಟಿನೆನ್) ಉತ್ಪತ್ತಿಯಾಗಿ ಮಾಸು/ಕಸದ ಮೂಲಕ ಭ್ರೂಣದ ದೇಹಕ್ಕೆ ತಲುಪಿ ಭ್ರೂಣದ ಕೆಂಪುರಕ್ತಕಣ (ಕೆಂಗಣ) ನಾಶವಾಗುತ್ತದೆ. ಇದರಿಂದ ಶಿಶುವಿನಲ್ಲಿ ರಕ್ತಹೀನತೆ, ಕಾಮಾಲೆಗಳು ಉಂಟಾಗುತ್ತವೆ. ಮೊದಲ ಗರ್ಭಾವಸ್ಥೆಯಲ್ಲಿ ತಾಯಿ ತಂದೆಯವರಿಗೆ ಆಗುವ ಮಗುವಿಗೆ ಯಾವ ಅಪಾಯವೂ ಇಲ್ಲ.


ಆದರೆ ಮುಂದಿನ ಗರ್ಭಾವಸ್ಥೆಗಳು ಸಾಮಾನ್ಯವಾಗಿ ಗರ್ಭಪಾತದಿಂದಲೋ ಸತ್ತಮಗುವಿನ ಜನನದಿಂದಲೋ ಅಥವಾ ಹುಟ್ಟಿದ ಮಗು ರಕ್ತಹೀನತೆ ಕಾಮಾಲೆಗಳ ತೀವ್ರತೆಯಿಂದ ಸುಮಾರು ಒಂದು ವಾರದಲ್ಲೇ ಮೃತವಾಗುವುದರಿಂದಲೋ ಪರ್ಯವಸಾನವಾಗುತ್ತದೆ. ಹುಟ್ಟಿದ ಶಿಶುವಿನ ರಕ್ತವನ್ನೆಲ್ಲ ತೆಗೆದು ಅದರ ದೇಹಕ್ಕೆ ಒಗ್ಗುವ ಬೇರೆ ರಕ್ತವನ್ನು ತುಂಬಿ ಶಿಶು ಜೀವಂತವಾಗಿರುವಂತೆ ಮಾಡಲು ಪ್ರಯತ್ನಿಸುತ್ತಾರೆ. ಶಿಶು ಗರ್ಭದಲ್ಲಿ ಇರುವಾಗಲಾದರೂ ಈ ಪ್ರಯೋಗ ಮಾಡಬಹುದು. ಶಿಶುವಿಗೆ ಮಾತ್ರವಲ್ಲದೆ ಈ ಪರಿಸ್ಥಿತಿ ತಾಯಿಗೂ ಅನಾನುಕೂಲವಾಗಿರುತ್ತದೆ. ತಾಯಿಗೆ ಆರ್.ಎಚ್. ಧನಪಂಗಡದ ರಕ್ತವನ್ನು ಕೊಡುವಂತಿಲ್ಲ. ಪರಿಸ್ಥಿತಿಯ ಅರಿವಿಲ್ಲದೆ ಹಾಗೇನಾದರೂ ಕೊಟ್ಟರೆ, ತಾಯಿಯ ಜೀವಕ್ಕೆ ಅಪಾಯವಾಗಬಹುದು. ಕ್ಷಯರೋಗ ತಾಯಿಗೆ ಮಾರಕವಾಗಬಹುದು. ಲೈಂಗಿಕ ರೋಗಗಳು ಶಿಶುವಿಗೆ ಮಾರಕವಾಗಿರುತ್ತವೆ. ಮೂತ್ರಪಿಂಡ ರೋಗಗಳೂ ಗರ್ಭಾವಸ್ಥೆಯ ವಿಷಮಪರಿಸ್ಥಿತಿಗಳೂ ತಾಯಿ ಮಗು ಇಬ್ಬರಿಗೂ ಮಾರಕವಾಗಿತ್ತವೆ. ಕೀಲು ಗಂಟು ನೋವು ಇರುವವರಿಗೆ ಗರ್ಭಾವಸ್ಥೆಯ ಕಾಲದಲ್ಲಿ ಯೋನಿಯಿಂದ ರಕ್ತಸ್ರಾವವಾಗಬಹುದು. ಇದು ಗರ್ಭಪಾತದ ಚಿಹ್ನೆ ಇಲ್ಲವೇ ಕಷ್ಟ ಪ್ರಸವದ ಚಿಹ್ನೆಯಾಗಿದ್ದು ಎಚ್ಚರಿಕೆ ತೆಗೆದುಕೊಳ್ಳಬೇಕಾದ ಪ್ರಸಂಗವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಅವಳಿತ್ರಿವಳಿ ಮಕ್ಕಳಿರುವ ಸಾಧ್ಯತೆ ಅಪರೂಪವೇನಲ್ಲ, ಅಂಡಾಶಯದಿಂದ ಒಂದು ಕಾಲದಲ್ಲಿ ಒಂದೇ ಅಂಡಾಣು ವೃದ್ಧಿಯಾಗಿ ಹೊರಬೀಳುವ ಬದಲು 2-3 ಅಂಡಾಣುಗಳು ಏಕಕಾಲಿಕವಾಗಿ ಹೊರಬೀಳುವುದರಿಂದ ಅವಳಿತ್ರಿವಳಿಗಳಾಗುವ ಸಂಭಾವ್ಯತೆ ಉಂಟಾಗುತ್ತದೆ. ಭ್ರೂಣಾಣು ಬೆಳೆದು ಒಂದು ಶಿಶುವಾಗುವ ಬದಲು, ಪ್ರಾರಂಭದಲ್ಲಿ ಭ್ರೂಣಾಣು ಇಬ್ಭಾಗವಾದಾಗ ಆ ಎರಡೂ ಬೇರೆ ಬೇರೆ ಶಿಶುಗಳಾಗಿ ಬೆಳೆಯುವುದರಿಂದಲೂ ಅವಳಿ ಸ್ಥಿತಿಗೆ ಕಾರಣವಾಗಿದೆ. ಆದರೆ ಕೆಲವರಲ್ಲಿ ಕೆಲವು ಸಲ ಮಾತ್ರ ಹೀಗೆ ಏಕೆ ಆಗುತ್ತದೆ ಎನ್ನುವುದು ಗೊತ್ತಿಲ್ಲ. ಗರ್ಭಾವಸ್ಥೆಯಲ್ಲಿ ಭ್ರೂಣ ಸರಿಯಾಗಿ ಬೆಳೆಯದೆ ಕಾರಣಾಂತರದಿಂದ ಅಕ್ರಮ ಬೆಳೆವಣಿಗೆಯಾಗಿ ಅಂಗವಿಕಲವಾದ ಮಗು ಹುಟ್ಟಬಹುದು. ಸ್ವಲ್ಪ ಕಾಲದ ಹಿಂದೆ ಥಾಲಿಡೋಮೈಡ್ ಎಂಬ ವೇದನಾಶಕ ಔಷಧಿಯನ್ನು ಗರ್ಭಿಣಿಯರು ಸೇವಿಸುವ ರೂಢಿ ಇದ್ದಾಗ ಇಂತ ವ್ಯತ್ಯಯಗಳು ಉದ್ಭವಿಸಿ ಅನೇಕ ಊನಗಳುಳ್ಳ ಶಿಶುಗಳ ಜನನವಾಗುತ್ತಿತ್ತು. ಗರ್ಭಾವಸ್ಥೆಯ ಕಾಲದಲ್ಲಿ ತಾಯಿಗೆ ರೂಬೆಲ್ಲ ಎಂಬ ಸೋಂಕಿನ ರೋಗ ಉಂಟಾದರೂ ಹೀಗೆ ಭ್ರೂಣದಲ್ಲಿ ಅಕ್ರಮ ಬೆಳೆವಣಿಗೆ ಮತ್ತು ಅಂಗವಿಕಲತೆ ಕಂಡುಬರುತ್ತವೆ. ಗರ್ಭಾವಸ್ಥೆಯಲ್ಲಿ ಸ್ತ್ರೀ ಅಗಾಧ ವಿಕಿರಣಪಟುತ್ವಕ್ಕೆ ಒಳಗಾದಾಗಲೂ ಇಂತಹ ಅಕ್ರಮಗಳುಂಟಾಗುತ್ತವೆ. 1945ರಲ್ಲಿ ಜಪಾನಿನ ಹಿರೊಷಿಮ, ನಾಗಸಾಕಿಗಳಲ್ಲಿ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಪ್ರಥಮವಾಗಿ ಉಪಯೋಗಿಸಿದ ಪರಮಾಣು ಬಾಂಬಿನ ಸ್ಪೋಟನೆಯಿಂದಾಗಿ ಅಗಾಧ ವಿಕಿರಣಪಟುತ್ವಕ್ಕೆ ತುತ್ತಾಗಿ ಜನಿಸಿದ ಸಹಸ್ರಾರು ಅಂಗವಿಕಲ ಮಕ್ಕಳನ್ನು ಯಾರೂ ಮರೆಯಲಾರರು.


ಗರ್ಭಾವಸ್ಥೆಯ ಅವಧಿ 40 ವಾರಗಳು ಎಂದು ಮೇಲೆ ವಿವರಿಸಿದ್ದರೂ ಶೇ.5 - ಶೇ.8 ರಷ್ಟು ಪ್ರಸಂಗಗಳಲ್ಲಿ ಅವಧಿಗೆ ಮುಂಚಿತವಾಗಿಯೇ ಗರ್ಭಾವಸ್ಥೆ ಕೊನೆಗೊಂಡು ಅವಸರದ ಹೆರಿಗೆ ಆಗುತ್ತದೆ. ಹೀಗೆ ಅವಸರವಾಗಿ ಹುಟ್ಟಿದ ಅನೇಕ ಮಕ್ಕಳು ಸತ್ತೇ ಹುಟ್ಟುತ್ತವೆ. ಇಲ್ಲವೇ ಶೀಘ್ರದಲ್ಲೇ ಸತ್ತು ಹೋಗುತ್ತವೆ. ಗರ್ಭಾವಸ್ಥೆಯ ಅವಧಿ 28 ವಾರಗಳನ್ನು ಮೀರಿ 40 ವಾರಗಳನ್ನು ಸಮೀಪಿಸಿದಂತೆ ಹುಟ್ಟುವ ಮಕ್ಕಳು ಜೀವಂತವಾಗಿರುವ ಸಂಭಾವ್ಯತೆ ಹೆಚ್ಚುತ್ತದೆ. ಗರ್ಭಾವಸ್ಥೆಯ ಅವಧಿ ಈ ಮಿತಿಯಲ್ಲಿ ಎಷ್ಟೇ ಇರಲಿ, ಹುಟ್ಟಿದ ಮಗು 2 ಕೆ.ಜಿ.ಗಿಂತ ಕಡಿಮೆ ಇದ್ದರೆ ಅದನ್ನು ಅವಸರದಲ್ಲಿ ಹುಟ್ಟಿದ ಮಗು ಎಂದು ಪರಿಗಣಿಸಬೇಕೆಂದು ಎಲ್ಲ ದೇಶದವರೂ ಒಪ್ಪಿದ್ದಾರೆ. ಗರ್ಭಾವಸ್ಥೆಯ ಅಕಾಲಿಕ ಅಂತ್ಯ ತಾಯಿಯ ದೇಹದಾರ್ಢ್ಯ, ಪೌಷ್ಟಿಕಸ್ಥಿತಿ ಇವನ್ನು ಅವಲಂಬಿಸಿವೆ. ಕುಳ್ಳ ರೋಗಿಷ್ಠ ಹೆಂಗಸು, ಎತ್ತರವಾಗಿ ಆರೋಗ್ಯವಾಗಿರುವ ಹೆಂಗಸಿಗಿಂತ 6ರಷ್ಟು ಹೆಚ್ಚು ಸಂದರ್ಭಗಳಲ್ಲಿ ಗರ್ಭಾವಸ್ಥೆಯ ಅಕಾಲಿಕ ಅಂತ್ಯವನ್ನು ತೋರುತ್ತಾಳೆ.

ಗರ್ಭಾವಸ್ಥೆ (ಪ್ರಾಣಿಗಳಲ್ಲಿ)

ಮರಿಗಳಿಗೆ ಮೊಲೆ ಹಾಲೂಡಿಸುವ ಪ್ರಾಣಿಗಳನ್ನು, ಎಂದರೆ ಸಸ್ತನಿಗಳನ್ನು, ಕುರಿತು ಗರ್ಭಾವಸ್ಥೆ ಎಂಬ ಪದದ ಬಳಕೆ ಉಂಟು. ಇಂಥ ಪ್ರಾಣಿಗಳಲ್ಲಿ ಸಹ ಗರ್ಭಾವಸ್ಥೆಯ ಅವಧಿಯನ್ನು ಮನುಷ್ಯರಲ್ಲಿ ವ್ಯಾಖ್ಯಾನಿಸಿರುವಂತೆಯೇ ವ್ಯಾಖ್ಯಾನಿಸಲಾಗಿದೆ: ಗರ್ಭದಲ್ಲಿ ಭ್ರೂಣವುಂಟಾಗಿ ಪಿಂಡವಾಗಿ ಬೆಳೆದು ಅದು ಮರಿಯಾಗಿ ಹುಟ್ಟುವವರೆಗಿನ ಕಾಲ. ಯಾವುದೇ ಪ್ರಾಣಿಯಲ್ಲಿ ನಿಷೇಚನ ಯಾವಾಗ ನಡೆಯಿತು ಎಂಬುದನ್ನು ಕರಾರುವಾಕ್ಕಾಗಿ ಹೇಳುವುದು ಕಷ್ಟ. ಆದ್ದರಿಂದ ಇಂಥಲ್ಲಿ ಋತು ದಿನದಿಂದ ಲೆಕ್ಕಹಾಕಿ ಗರ್ಭಾವಧಿಯನ್ನು ನಿರ್ಧರಿಸಬೇಕು. ಒಂದೊಂದು ಪ್ರಾಣಿಯ ಗರ್ಭಾವಸ್ಥೆಯ ಕಾಲ ಒಂದೊಂದು ಎಂಬುದನ್ನು ಮುಂದಿನ ಯಾದಿಯಲ್ಲಿ ನೋಡಬಹುದು.

ಪ್ರಾಣಿಯ ಹೆಸರು ಗಬ್ಬದ ಅವಧಿ (ದಿನಗಳಲ್ಲಿ)

 

  • ಕತ್ತೆಕಿರುಬ ... 110
  • ಮೀನ್ಚುಳ್ಳಿ ... 338-358
  • ಮುಳ್ಳು ಹಂದಿ- ...
  • ಯುರೋಪಿನ 35-40
  • ಹಂದಿ ಮೀನು ... 276
  • ಎಮ್ಮೆ ... 275
  • ಕಾಡೆಮ್ಮೆ ... 270
  • ದನ ... 284 (260-300)
  • ಕುರಿ ... 148 (143-159)
  • ಮೇಕೆ ... 151 (145-157)
  • ಕುದುರೆ ... 337 (320-356)
  • ಕತ್ತೆ ... 365
  • ಒಂಟೆ ... 410 (370-440)
  • ಹಂದಿ ... 113 (110-120)
  • ಖಡ್ಗಮೃಗ (ಆಫ್ರಿಕದ)... 530-550
  • ಜಿರಾಫೆ ... 395-425
  • ನೀರಾನೆ ... 237-250
  • ಜಿಂಕೆ ... 197-220
  • ಹಿಮ ಸಾರಂಗ ... 215-224
  • ಬೆಕ್ಕು ... 63 (55-69)
  • ನಾಯಿ ... 61 (58-63)
  • ಕಾಡು ಬೆಕ್ಕು ... 92-95
  • ಚಿರತೆ ... 90-93
  • ಸಿಂಹ ... 108 (105-113)
  • ಹುಲಿ ... 113-105
  • ರಕೂನ್ ... 63
  • ಸೀಲ್ ಪ್ರಾಣಿ (ಉತ್ತರದ ತುಪ್ಪುಳು ಪ್ರಾಣಿ) 350
  • ಇಲಿ ... 22 (21.5-22)
  • ನೀರು ನಾಯಿ-ಕೆನಡ ... 62
  • ಕರಡಿ ... 210
  • ಗಿನಿ ಹಂದಿ ... 68
  • ಮೊಲ ... 38
  • ತಿಮಿಂಗಿಲ ... 365 (360-480)
  • ಆನೆ ... 600-660
  • ಆನೆ-ಏಷ್ಯದ್ದು ... 645 (520-730)
  • ಕೋತಿ ... 210
  • ಕೋತಿ-ರ್ಹೀಸಸ್ ... 164 (146-180)
  • ಚಿಂಪಾಂಜ಼ಿ ... 237 (216-261)
  • ಬಾವಲಿ ... 50
  • ಕಾಂಗರೂ-ದೊಡ್ಡದು ... 30-40
  • ಒಪಾಸಮ್ (ವರ್ಜೀನಿಯದ) 181 (502-2.5)


ಸಸ್ತನಿಗಳಲ್ಲೆಲ್ಲ ಅತಿಕಡಿಮೆ ಗಬ್ಬದ ಅವಧಿ ವರ್ಜೀನಿಯದ ಒಪಾಸಮ್ನಲ್ಲಿ ಕಂಡು ಬಂದರೆ. ಅತಿ ದೀರ್ಘಾವಧಿ ಭಾರತದ ಆನೆಗಳಲ್ಲಿ (ಸುಮಾರು 22 ತಿಂಗಳುಗಳು) ಕಾಣಬಹುದು. ಈ ವ್ಯತ್ಯಾಸದ ಕಾರಣ ನಿಖರವಾಗಿ ಇನ್ನೂ ತಿಳಿದು ಬಂದಿಲ್ಲ. ಪ್ರಾಣಿಗಳು ವಿಕಾಸವಾದಂತೆಲ್ಲ ಅವುಗಳ ದೇಹಸ್ಥಿತಿಗೆ ಅನುಗುಣವಾಗಿ ಗರ್ಭಾವಸ್ಥೆ ಹೊಂದಿಕೊಂಡಿರ ಬಹುದು. ಪಿಂಡದ ಬೆಳೆವಣಿಗೆ ಹಾಗೂ ಅದರ ಗಾತ್ರ ಗಬ್ಬದ ಅವಧಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಚಿಕ್ಕ ಚಿಕ್ಕ ಪ್ರಾಣಿಗಳಲ್ಲಿ ಗಬ್ಬದ ಅವಧಿ ಕಡಿಮೆ: ದೈತ್ಯಾಕಾರದ ಪ್ರಾಣಿಗಳಲ್ಲಿ ಹೆಚ್ಚು. ಈ ನಿಯಮಕ್ಕೆ ಅಪವಾದದ ಪ್ರಾಣಿಗಳು-ಗಿನಿಹಂದಿ ಹಾಗೂ ಈ ಪ್ರಾಣಿಯ ಸಂಬಂಧಿಗಳಾದ ದಕ್ಷಿಣ ಅಮೆರಿಕದ ಮೂಷಕಗಳು. ಇವು ಗಾತ್ರದಲ್ಲಿ ಚಿಕ್ಕವಾದರೂ ಇವುಗಳ ಗರ್ಭಾವಸ್ಥೆ ಸಾಕಷ್ಟು ದೀರ್ಘವಾಗಿಯೇ ಇರುವುದು. ಹೆಚ್ಚು ದಿವಸ ಗರ್ಭದಲ್ಲಿದ್ದು ಹುಟ್ಟುವ ಮರಿಗಳು ಚೆನ್ನಾಗಿ ಬೆಳೆದಿರುತ್ತವೆ.


ಕಾರ್ಪಸ್ ಲೂಟಿಯಮಿನ ಪಾತ್ರ

ಪ್ರಾಣಿ ಗಬ್ಬವಾದಾಗ ಅದರ ಗರ್ಭಕೋಶ, ಅಂಡಾಶಯ ಮತ್ತು ದೇಹದ ಅಂಗಾಂಶಗಳೆಲ್ಲ ಪ್ರಭಾವಿತವಾಗುತ್ತವೆ. ದೇಹದ ಹೊರಗೆ ಒಳಗೆ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಅಂಡಾಶಯದಲ್ಲಿ ಕಾರ್ಪಸ್ ಲೂಟಿಯಮ್ ಕಾಣಿಸಿಕೊಳ್ಳುತ್ತದೆ. ಇದು ಇರುವವರೆಗೂ ಗಬ್ಬ ಮುಂದುವರಿಯುವುದು. ಇದು ಒಂದು ಅಂತಃಸ್ರಾವ ಗ್ರಂಥಿಯ ರೀತಿಯಲ್ಲಿ ಕೆಲಸಮಾಡುವುದು. ಇದರಿಂದ ಪ್ರೋಜೆಸ್ಟಿರಾನ್ ಉತ್ಪತ್ತಿಯಾಗುತ್ತದೆ. ಇದು ಇರುವವರೆಗೂ ಪಿಂಡ ಗರ್ಭದಲ್ಲಿಯೇ ಇರುತ್ತದೆ. ಕಾರ್ಪಸ್ ಲೂಟಿಯಮ್ ಸಂಕುಚಿತವಾದಾಗ ಪ್ರೋಜೆಸ್ಟಿರಾನಿನ ಉತ್ಪಾದನೆ ನಿಂತುಹೋಗುವುದು. ಆಗ ಪ್ರಾಣಿ ಈಯುತ್ತದೆ (ಮರಿಹಾಕುತ್ತದೆ). ಆದ್ದರಿಂದ ಕಾರ್ಪಸ್ ಲೂಟಿಯಮಿನ ಕ್ರಿಯಾಶೀಲತೆಯ ವೇಳೆಯನ್ನು ಗರ್ಭಾವಧಿಯೆನ್ನಬಹುದು. ಒಂದು ವೇಳೆ ಕೃತಕ ರೀತಿಯಲ್ಲಿ ಪ್ರೋಜೆಸ್ಟಿರಾನನ್ನು ದೇಹದೊಳಗೆ ಸೇರಿಸುತ್ತಾ ಹೋದರೆ ಪ್ರಾಣಿಯ ಮರಿಹಾಕುವ ಕಾರ್ಯ ಮುಂದೆ ಹೋಗುವುದಲ್ಲದೆ ಪಿಂಡ ಬೆಳೆಯುತ್ತಲೇ ಹೋಗುತ್ತದೆ. ಕೆಲವು ದಿವಸಗಳು ಮಾತ್ರ ಈ ರೀತಿ ಮಾಡಿದರೆ ಪಿಂಡಕ್ಕೆ ಅಪಾಯವೇನೂ ಆಗುವುದಿಲ್ಲ. ಆದರೆ ಬಹಳ ದಿವಸಗಳವರೆಗೆ ಪ್ರೋಜೆಸ್ಟಿರಾನನ್ನು ಉಪಯೋಗಿಸುತ್ತ ಹೋದರೆ ಪಿಂಡ ಸತ್ತುಹೋಗುವುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಕಾರ್ಪಸ್ ಲೂಟಿಯಮಿನ ಪಾತ್ರ ಬಹಳ ಪ್ರಧಾನವಾದುದು. ಆದರೆ ಎಲ್ಲ ಪ್ರಾಣಿಗಳಲ್ಲಿಯೂ ಕಾರ್ಪಸ್ ಲೂಟಿಯಮಿನ ಅವಶ್ಯಕತೆ ಅಷ್ಟಾಗಿರದು. ಪೂರ್ವ ಆಫ್ರಿಕದಲ್ಲಿ ಕಾಣಬರುವ ನಿಕ್ಟೀರಿಯಸ್ ಜಾತಿಯ ಬಾವಲಿಗಳಲ್ಲಿ ಪ್ರಾಣಿ ಗರ್ಭಾವಸ್ಥೆಯಲ್ಲಿರುವಾಗಲೆ ಕಾರ್ಪಸ್ ಲೂಟಿಯಮ್ ಸಂಕುಚಿತವಾಗುತ್ತದೆ. ಆದರೂ ಗಬ್ಬ ಮುಂದುವರಿಯುತ್ತದೆ. ಸಾಕುಪ್ರಾಣಿಗಳಾದ ಕುದುರೆಗಳಲ್ಲಿಯೂ ಇದೇ ಸ್ಥಿತಿ ಕಾಣಬರುತ್ತದೆ. ಕಾರ್ಪಸ್ ಲೂಟಿಯಮಿನ ಕಾರ್ಯವನ್ನು ಬೇರೆ ಅಂತಃಸ್ರಾವ ಗ್ರಂಥಿಗಳು ವಹಿಸಿಕೊಂಡು ಪ್ರೋಜೆಸ್ಟಿರಾನನ್ನು ಉತ್ಪತ್ತಿಮಾಡುವುದರಿಂದ ಗಬ್ಬ ಮುಂದುವರಿಯುತ್ತದೆ. ಕೆಲವು ಪ್ರಾಣಿಗಳ ಗರ್ಭಾವಸ್ಥೆಯಲ್ಲಿ ಕಾರ್ಪಸ್ ಲೂಟಿಯಮ್ ಇರಲೇಬೇಕು. ಇಲ್ಲದಿದ್ದರೆ ಅಥವಾ ಅದನ್ನು ತೆಗೆದುಹಾಕಿದರೆ ಚಿಟ್ಟಿಲಿ ಮತ್ತು ಮೇಕೆಗಳಲ್ಲಿ ಪಿಂಡವು ಇಂಗಿ ಹೋಗುವುದು. ಪಿಂಡ ತಳವೂರಿದ ಬಳಿಕ ಕೋತಿ ಮತ್ತು ಮನುಷ್ಯರಲ್ಲಿ ಕಾರ್ಪಸ್ ಲೂಟಿಯಮನ್ನು ತೆಗೆದುಹಾಕಿದರೂ ಯಾವ ಬಾಧಕವೂ ಆಗುವುದಿಲ್ಲ.


ಕಾಡಿನಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಗಬ್ಬದ ಸ್ಥಿತಿ ಇನ್ನೂ ವಿಚಿತ್ರ. ಅವು ಯಾವ ತಾಣದಲ್ಲಿಯೂ ನಿಲ್ಲದೆ ಕಾಡಿನಲ್ಲೆಲ್ಲ ಓಡಾಡುತ್ತವೆ. ಕೆಲವಾರು ಪ್ರಾಣಿಗಳು ಗುಹೆ ಮತ್ತು ಬಿಲಗಳಲ್ಲಿ ವಾಸಿಸುತ್ತವೆ. ಯಾವ ತಾಣದಲ್ಲಿಯೂ ಇರದ ಪ್ರಾಣಿಗಳಲ್ಲಿ ಗಬ್ಬದ ಅವಧಿ ದೀರ್ಘವಾದುದು. ಹುಟ್ಟಿದ ಮರಿಗಳು ಸಾಕಷ್ಟು ಬಲಿಷ್ಠವಾಗಿರುತ್ತವೆ. ಆದರೆ ಗುಹೆ, ಬಿಲಗಳಲ್ಲಿ ವಾಸಿಸುವ ಇಲಿ ಮುಂತಾದ ಮೂಷಕಗಳ ಮರಿಗಳು ಹುಟ್ಟಿದಾಗ ಬಹಳ ಎಳೆಯ ಸ್ಥಿತಿಯಲ್ಲಿಯೇ ಇರುತ್ತವೆ. ಕರಡಿ ಮರಿಗಳೂ ಹುಟ್ಟಿದಾಗ ಬಹಳ ಎಳಸಾಗಿರುತ್ತವೆ. ಗಬ್ಬದ ಅವಧಿ ಕಾಂಗರೂ ಮುಂತಾದ ಮಾರ್ಸ್ಯುಪಿಯಲ್ಗಳಲ್ಲಿ ಕಡಿಮೆ. ಇವುಗಳ ಮರಿಗಳು ಹುಟ್ಟಿದಾಗ ಬಹಳ ಎಳಸಾಗಿರುತ್ತವೆ. ಮರಿಗಳ ಬೆಳೆವಣಿಗೆ ಪುರ್ಣವಾಗಿರುವುದಿಲ್ಲ. ಆದ್ದರಿಂದ ಮರಿಗಳು ಹುಟ್ಟಿದಮೇಲೆ ಅವನ್ನು ತಾಯಿ ಪ್ರಾಣಿ ತನ್ನ ಒಡಲಿನ ಹೊರಭಾಗದಲ್ಲಿ ಕಾಣಬರುವ ಮರಿಚೀಲದಲ್ಲಿ ಸಾಕುತ್ತದೆ. ಈ ಚೀಲದಲ್ಲಿ ಮರಿಗಳ ಬೆಳೆವಣಿಗೆ ಮುಂದುವರಿದು ಅವು ಪೂರ್ಣಾವಸ್ಥೆಯನ್ನು ತಲಪುತ್ತವೆ. ಕೆಲವೊಂದು ಜಾತಿಯ ಪ್ರಾಣಿಗಳಲ್ಲಿ ಈ ರೀತಿಯ ಮರಿಚೀಲ ಕಂಡುಬರುವುದಿಲ್ಲ. ಇಂಥ ಪ್ರಾಣಿಗಳಲ್ಲಿ ಹುಟ್ಟಿದ ಎಳೆಮರಿಗಳು ತಮ್ಮ ಕಾಲುಗಳಿಂದ ತಾಯಿಯ ಎದೆಭಾಗವನ್ನು ತಬ್ಬಿಕೊಂಡಿದ್ದು ಯಾವಾಗಲೂ ಮೊಲೆತೊಟ್ಟನ್ನು ಬಾಯಿಂದ ಹಿಡಿದುಕೊಂಡಿರುತ್ತವೆ. ಉದಾ: ಒಪಾಸಮ್, ಮಾರ್ಮೊಸಾಟ್, ಅಮೆರಿಕೆಯ ಬಯಲಿನ ಇಲಿ ಮತ್ತು ಕಾಡಿನ ಇಲಿಗಳು.

ಭ್ರೂಣದ ಒಳನಾಟಿಕೆ ಹಾಗೂ ಗರ್ಭಾವಧಿ

ಕೆಲವಾರು ಜಾತಿಯ ಪ್ರಾಣಿಗಳಲ್ಲಿ ಭ್ರೂಣದ ಬೆಳೆವಣಿಗೆ ಕೆಲಕಾಲ ನಿಂತುಹೋಗುತ್ತದೆ. ಇದರಿಂದ ಗಬ್ಬದ ಅವಧಿ ಹೆಚ್ಚಾಗುತ್ತದೆ. ಇದು ತುಪ್ಪಳಗೂದಲ ಹೊದಿಕೆಯುಳ್ಳ ಮಾಂಸಗಳಲ್ಲಿ ಸಾಮಾನ್ಯ. ಉದಾಹರಣೆಗೆ, ತುಪ್ಪಳಿಗ ಮತ್ತು ವೀಸಲ್. ಯುರೋಪಿನ ಬ್ಯಾಡ್ಜರ್ ಮತ್ತು ಅಮೆರಿಕದಲ್ಲಿನ ತುಪ್ಪಳಿಗ ಜುಲೈ ಮತ್ತು ಆಗಸ್ಟ್ ನಲ್ಲಿ ಗಬ್ಬವಾಗುತ್ತವೆ. ಭ್ರೂಣ ಕೆಲಕಾಲ ಮಾತ್ರ ಬೆಳೆದು ಮುಂದೆ ಜನವರಿ ತಿಂಗಳಿನವರೆಗೆ ತನ್ನ ಬೆಳೆವಣಿಗೆಯನ್ನು ಸ್ಥಗಿತಗೊಳಿಸುತ್ತದೆ. ಆಗ ಭ್ರೂಣ ಗರ್ಭಕೋಶದೊಳಗೆ ನಾಟುವುದಿಲ್ಲ. ಜನವರಿ ತಿಂಗಳಲ್ಲಿ ಭ್ರೂಣ ಒಳನಾಟಿಕೊಂಡು ಬೆಳೆದು ಮಾರ್ಚ್ ತಿಂಗಳಿನಲ್ಲಿ ಈ ಪ್ರಾಣಿಗಳು ಮರಿಹಾಕುವುವು. ಇಲ್ಲಿ ಗಬ್ಬದ ಅವಧಿ 250 ದಿನಗಳಾದರೂ ಭ್ರೂಣ/ಪಿಂಡ ಬೆಳೆಯಲು ಬೇಕಾಗುವ ಅವಧಿ ಮಾತ್ರ ಕೇವಲ 50 ದಿನಗಳು. ಈ ಪ್ರಾಣಿಗಳನ್ನು ಗಬ್ಬವಾದ ಮೇಲೆ ಪ್ರಾಯೋಗಿಕವಾಗಿ ಬಿಸಿಲಿನಲ್ಲಿ ಬಿಟ್ಟರೆ ಗಬ್ಬ ಮೂರು ತಿಂಗಳಿನಷ್ಟು ಕಡಿಮೆಯಾಗುತ್ತದೆ. ಬಿಸಿಲಿನ ಪ್ರಭಾವದಿಂದ ಚೇತನಗೊಂಡ ಕಾರ್ಪಸ್ ಲೂಟಿಯಮ್ ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸಿ ಅದರಿಂದ ಹಾರ್ಮೋನ್ ಉತ್ಪತ್ತಿಯಾಗುವಂತೆ ಮಾಡುವುದು. ಇದೇ ರೀತಿಯ ಗಬ್ಬದ ಸ್ಥಿತಿ ಆರ್ಮಡಿಲೊ ಮತ್ತು ರೋ ಜಿಂಕೆಗಳಲ್ಲಿ ಸಹ ಕಾಣಬರುತ್ತದೆ. ಕರಡಿ ಮತ್ತು ಸೀಲ್ಗಳಲ್ಲಿಯೂ ಇದೇ ರೀತಿ ಇರಬಹುದೆಂದು ನಂಬಲಾಗಿದೆ. ಈ ಒಳನಾಟಿಕೆ ನಿಧಾನವಾಗುವುದರಿಂದ ಚಿಟ್ಟಿಲಿ ಮುಂತಾದ ಚಿಕ್ಕ ಮೂಷಕಗಳಲ್ಲಿ ಗಬ್ಬ ಮುಂದೆ ಹೋಗುತ್ತದೆ. ತಾಯಿ ಮರಿಗಳಿಗೆ ಹಾಲನ್ನುಣ್ಣಿಸುತ್ತಿದ್ದರೆ 10-20 ದಿವಸಗಳಷ್ಟು ಗಬ್ಬ ಮುಂದೆ ಹೋಗುವುದು. ತಾಯಿಯ ದೇಹದಿಂದ ಹಾಲು ಉತ್ಪತ್ತಿಯಾಗಿ ಉಪಯೋಗವಾಗುವುದರಿಂದ ಹಾಗೂ ತಾಯಿ ಹೆಚ್ಚಿನ ಮರಿಗಳಿಗೆ ಹಾಲನ್ನು ಕೊಡುತ್ತಿರುವ ಸ್ಥಿತಿಯಲ್ಲಿ ಗಬ್ಬವಾಗುವುದು ನಿಧಾನವಾಗುತ್ತದೆ. ಆದರೆ ದೊಡ್ಡ ಗಾತ್ರದ ಮೂಷಕಗಳಲ್ಲಿ ಒಳನಾಟಿಕೆ ನಿಧಾನವಾಗುವುದು ವಿರಳ. ಚಿಟ್ಟಿಲಿಗಿಂತ ಸಾಮಾನ್ಯ ಇಲಿಗಳಲ್ಲಿ ಸೂಲಿನ ಅವಧಿ 22 ದಿನಗಳು. ಅರಳೆ ಇಲಿಯಲ್ಲಿ 27 ದಿನಗಳು.

ಗಬ್ಬದ ಪರೀಕ್ಷೆಗಳು

ಮನುಷ್ಯನಲ್ಲಿ ಮಾಡುವಂತೆಯೇ ಆಷಿಜ಼ಾಂಡೆಕ್ ಪರೀಕ್ಷೆಯ ತತ್ತ್ವವನ್ನು ಪಾಲಿಸಿಕೊಂಡು ಪ್ರಾಣಿಗಳಲ್ಲಿಯೂ ಈ ರೀತಿಯ ಪರೀಕ್ಷೆಗಳನ್ನು ಮಾಡುವ ವಿಧಾನ ಜಾರಿಯಲ್ಲಿದೆ. ಕುದುರೆ ಮತ್ತು ಹಸುಗಳಲ್ಲಿ ಅವು ಗಬ್ಬಗಟ್ಟಿದ ಬಳಿಕ ಈಸ್ಟಿನ್ ಅಥವಾ ಈಸ್ಟ್ರೋನ್ ಚೋದಕಗಳು ಉತ್ಪತ್ತಿಯಾಗುವುದು. ಇದನ್ನು ಸಹ ಇಲಿ ಹಾಗೂ ಚಿಟ್ಟಿಲಿಗಳನ್ನು ಉಪಯೋಗಿಸಿಕೊಂಡು ಗರ್ಭಾವಸ್ಥೆಯನ್ನು ಕಂಡುಹಿಡಿಯ ಬಹುದು. ಸ್ವಲ್ಪವೇ ಗಂಜಲವನ್ನು ಪ್ರಯೋಗದ ಹೆಣ್ಣು ಪ್ರಾಣಿಗಳಿಗೆ ಸೂಜಿಯ ಮೂಲಕ ದೇಹದೊಳಗೆ ಸೇರಿಸಿದರೆ ಇವುಗಳ ಯೋನಿದ್ವಾರದ ಮೇಲುಪೊರೆಯ ಕಣಗಳಲ್ಲಿ ವಿಶಿಷ್ಟವಾದ ಬದಲಾವಣೆಗಳುಂಟಾಗುವುದು. ಅದರ ಗಾಜುಫಲಕ ಮೇಲಿನ ಬಳಿತವನ್ನು (ಸ್ಮಿಯರ್) ಬಣ್ಣವೇರಿಸಿ ಸೂಕ್ಷ್ಮದರ್ಶಕದಡಿ ಈ ಬದಲಾವಣೆಗಳನ್ನು ನೋಡಬಹುದು. ಹೆಣ್ಗುದುರೆಯಲ್ಲಿ ಗಂಡಿನೊಡನೆ ಸಂಗಮವಾದ 42 ದಿವಸಗಳೊಳಗೆ ಈ ಪರಿಣಾಮ ಕಾಣಬರುವುದು. ಆದರೆ ಗರ್ಭನಿದಾನ ಪರೀಕ್ಷೆಯನ್ನು 60-65 ದಿನಗಳ ಬಳಿಕ ಮಾಡಿದರೆ ಕುದುರೆ ಗಂಜಲದಲ್ಲಿ ಈಸ್ಟ್ರಿನ್ ಅಂಶ ಹೆಚ್ಚಾಗಿರುವುದು. ಹಸುವಿನಲ್ಲಿ ಗಂಜಲದ ಮೂಲಕ ಹೊರ ಹೋಗುವ ಈಸ್ಟ್ರಿನ್ ತೀರ ಕಡಿಮೆ ಇರುವುದು. ಆದ್ದರಿಂದ 90 ದಿನಗಳವರೆಗೂ ಒಳ್ಳೆಯ ಪರಿಣಾಮ ಕಾಣಬರದು. ಮೇಲಾಗಿ ಒಂದೊಂದು ಹಸುವಿನಲ್ಲಿ 175 ದಿನಗಳವರೆಗೂ ಸರಿಯಾದ ಪರಿಣಾಮ ಕಾಣಿಸದು.


ಈ ರೀತಿಯಲ್ಲಿ ಈ ಗರ್ಭನಿದಾನ ಪರೀಕ್ಷೆಗಳು ಬಹಳ ಸೂಕ್ಷ್ಮತರವಾದವು. ನಾರ್ವೆಯಲ್ಲಿ ಇತ್ತೀಚೆಗೆ ಬಹಳ ಗುರುತರವಾದ ಪರೀಕ್ಷೆಯೊಂದನ್ನು ರೂಪಿಸಿರುವರು. ಹಂದಿಗಳ ಗಬ್ಬದ ಅವಸ್ಥೆಯನ್ನು ತಿಳಿಯಲು ಈ ಪರೀಕ್ಷೆಯನ್ನು ಮಾಡಬಹುದು. ಈ ಪರೀಕ್ಷೆಗೆ ಒಂದು ಗಂಟೆ ಹಿಡಿಯುವುದಲ್ಲದೇ ಬಹಳ ದುಬಾರಿ. ಇದಲ್ಲದೆ ಮಾಂಸಕ್ಕಾಗಿ ಬೀಜ ತೆಗೆದು ಬೆಳೆಸುವ ಕಂದುಬಣ್ಣದ ಕೆಪನ್ ಹುಂಜವನ್ನು ಗರ್ಭನಿದಾನಕ್ಕಾಗಿ ಉಪಯೋಗಿಸಿರುವರು. ಈ ಹಕ್ಕಿಯ ರೆಕ್ಕೆಗಳು ಸಾಮಾನ್ಯವಾಗಿ ಕಪ್ಪಾಗಿರುವುವು. ಈಸ್ಟ್ರಿನನ್ನು ಸೂಜಿಯ ಮೂಲಕ ದೇಹದೊಳಗೆ ಸೇರಿಸಿದರೆ ಬೆಳ್ಳಿಬಣ್ಣದ ಪಟ್ಟೆಗಳು ಬೆಳೆಯುವ ಪುಕ್ಕಗಳ ಮೇಲೆ ಕಾಣಿಸಿಕೊಳ್ಳುವುವು. ಗಂಜಲದಲ್ಲಿ ಈಸ್ಟ್ರಿನ್ ಅಂಶವಿದ್ದರೆ ಸೂಕ್ಷ್ಮದರ್ಶಕದಡಿ ನೋಡಿ ನಿರ್ಧಾರಮಾಡಬಹುದು. ಈ ಪರೀಕ್ಷೆಗೆ ಸುಮಾರು 48 ಗಂಟೆ ಹಿಡಿಯುವುದು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಅತಿಶಬ್ದದಿಂದ (ಅಲ್ಟ್ರಾಸಾನಿಕ್ಸ್) ಕುರಿಗಳ ಗರ್ಭನಿದಾನ ಪರೀಕ್ಷೆ ಮಾಡುವರು. ಈ ಪರೀಕ್ಷೆ ಮಾಡುವಾಗ ಉಂಟಾಗುವ ಎಕ್ಸ್ ಕಿರಣಗಳು ಪಿಂಡಕ್ಕೆ ಯಾವುದೇ ರೀತಿಯ ದುಷ್ಪರಿಣಾಮವನ್ನುಂಟು ಮಾಡುವುದಿಲ್ಲ.

ಗಬ್ಬದ ಪರೀಕ್ಷೆ

ಗುದದ್ವಾರದ ಮೂಲಕ ಕೈಯಿಟ್ಟು ನೆಟ್ಟಗರುಳಿನ ಕೆಳಗಿರುವ ಗರ್ಭಕೋಶವನ್ನು ಕೈಬೆರಳುಗಳ ಮೂಲಕ ಮುಟ್ಟಿ ಪಿಂಡ ಬೆಳೆಯುತ್ತಿರುವ ಗರ್ಭದ ಶೃಂಗ, ಪಿಂಡದ ಬೆಳೆವಣಿಗೆಗಳನ್ನು ತಿಳಿಯಬಹುದು. ದೊಡ್ಡ ಗಾತ್ರದ ಸಾಕುಪ್ರಾಣಿಗಳಲ್ಲಿ ಈ ವಿಧಾನವನ್ನು ಅನುಸರಿಸಬಹುದು. ಉದಾಹರಣೆಗೆ, ಕುದುರೆ ಮತ್ತು ಹಸು. ಇದು ಅಷ್ಟು ಸುಲಭದ ಕೆಲಸವಲ್ಲ. ಗರ್ಭಕೋಶದ ಆಕಾರ, ರಚನೆ, ಗರ್ಭಧಾರಣೆ, ಪಿಂಡದ ಬೆಳೆವಣಿಗೆ ಹಾಗೂ ಪ್ರಸವಶಾಸ್ತ್ರತಜ್ಞರು ಮಾಡುವ ಕೆಲಸವಿದು. ಕುಶಲಿಗಳಲ್ಲದವರು ಈ ಪರೀಕ್ಷೆಯನ್ನು ತಾವೇ ಮಾಡಲು ಹೋದರೆ ಪ್ರಾಣಿಗೆ ಅನೇಕ ರೀತಿಯ ಹಾನಿಗಳುಂಟಾಗಬಹುದು. ಪಿಂಡದ ಗುಂಡಿಗೆ ಒಡೆದು ಪಿಂಡ ಸಾಯಬಹುದು. ನೆಟ್ಟಗರುಳಿನಲ್ಲಿ (ರೆಕ್ಟಂ) ತೂತು ಉಂಟಾಗಬಹುದು. ಹಸು ಕಂದು ಹಾಕುವುದು. ಇತರ ಚಿಕ್ಕಪ್ರಾಣಿಗಳಲ್ಲಿ ಉದರಭಾಗದಲ್ಲಿ ಪಿಂಡದ ಬೆಳೆವಣಿಗೆಯನ್ನು ಗಮನಿಸಿ ಗಬ್ಬದ ಅವಧಿಯನ್ನು ನಿರ್ಧರಿಸುವರು.


ಪ್ರಾಣಿ ಗಬ್ಬವಾದ ಮೇಲೆ ಅದರ ಗರ್ಭಕೋಶ, ಅಂಡಾಶಯಗಳು ಮತ್ತು ದೇಹದ ಅಂಗಾಂಶಗಳೆಲ್ಲ ಅನೇಕ ವಿಧದಲ್ಲಿ ಗಬ್ಬದ ಪ್ರಭಾವಕ್ಕೆ ಒಳಗಾಗುತ್ತವೆ. ಮರಿಹಾಕಿದ ಮೇಲೆ ಈ ಪ್ರಭಾವಗಳಿರುವುದಿಲ್ಲ. ಆದರೆ ಕೆಲವಾರು ಸೂಕ್ಷ್ಮ ಬದಲಾವಣೆಗಳು ಆಜೀವ ಪರ್ಯಂತ ಇರುತ್ತವೆ. ಉದಾಹರಣೆಗೆ ಕೆಚ್ಚಲು ದೊಡ್ಡದಾಗುವುದು ಮತ್ತು ಗರ್ಭಕೋಶ ವಿಶಾಲವಾಗುವುದು. ಆದರೂ ಮರಿ ಹಾಕಿದ ನಾಲ್ಕು ವಾರಗಳ ಅನಂತರ ಇವುಗಳೆಲ್ಲ ಸಾಮಾನ್ಯಸ್ಥಿತಿಗೆ ಬರುವುವು. ಕೆಚ್ಚಲುಗಳಲ್ಲಿ ಮಾತ್ರ ಯಾವ ಬದಲಾವಣೆಯೂ ಆಗದೆ ಹಾಲು ಉತ್ಪತ್ತಿಯಾಗುತ್ತಾ ಹೋಗುತ್ತದೆ. ಒಂದೇ ಮರಿ ಹಾಕುವ ಪ್ರಾಣಿಗಳಲ್ಲಿ ಗರ್ಭದ ಒಂದು ಕೋಡು ತನ್ನ ಸುರುಳಿಯಾಕಾರದಿಂದ ಬಿಡುಗಡೆಯಾಗಿ ನೆಟ್ಟಗಾಗುತ್ತದೆ. ಅಲ್ಲದೆ ಸಾಕಷ್ಟು ವಿಶಾಲವಾಗುತ್ತದೆ. ಉಳಿದ ಕೋಡಿನಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಹಲವಾರು ಮರಿಗಳನ್ನು ಹಾಕುವ ಪ್ರಾಣಿಗಳಲ್ಲಿ ಎರಡು ಕೋಡುಗಳೂ ವಿಶಾಲವಾಗಿ ಅವುಗಳಲ್ಲಿ ಪಿಂಡಗಳು ಬೆಳೆಯುವುವು. ಪಿಂಡ ಹೊತ್ತ ಕೋಡಿನಲ್ಲಿ ಅನೇಕ ಬದಲಾವಣೆಗಳು ಕಾಣಬರುತ್ತವೆ. ರಕ್ತಚಲನೆ ಹೆಚ್ಚಾಗುವುದು. ಗರ್ಭಕೋಶದ ಧಮನಿಯ ಗಾತ್ರ ಹೆಚ್ಚಿ ರಕ್ತದ ಮಿಡಿತ ಬಲವಾಗುವುದು. ಪಿಂಡ ಬೆಳೆಯುತ್ತ ಹೋದಂತೆ ಅದಕ್ಕೆ ಅನು ಮಾಡಿಕೊಡಲು ದೊಡ್ಡ ತಂತು (ಬ್ರಾಡ್ ಲಿಗಮೆಂಟ್) ಸಹ ಉದ್ದದಲ್ಲಿ ಬೆಳೆಯುತ್ತದೆ. ಇದರಿಂದ ಗರ್ಭಕೋಶ ಪಿಂಡದ ಭಾರವನ್ನು ಹೊತ್ತುಕೊಂಡು ಒಡಲಿನ ಮೇಲ್ಭಾಗದಲ್ಲಿರಲು ಅನುಕೂಲವಾಗುತ್ತದೆ. ಈ ರೀತಿ ಪಿಂಡ ಪ್ರವೃದ್ಧವಾಗುತ್ತಿರುವಂತೆ ಗರ್ಭಕೋಶದ ಮಾಂಸದ ಪೊರೆ ಬೆಳೆಯುವುದರಿಂದ ಶಕ್ತಿಯುತವಾಗುವುದಲ್ಲದೆ ದಪ್ಪವಾಗಿ ಗಟ್ಟಿಯಾಗುವುದು. ಇದರಿಂದ ಪಿಂಡದ ಭಾರವನ್ನು ಹೊರುವ ಶಕ್ತಿಯೂ ಇದಕ್ಕೆ ಬರುತ್ತದೆ. ಗರ್ಭಕೋಶದ ಲೋಳೆಪೊರೆಯಲ್ಲಿ ಗಮನೀಯ ಬದಲಾವಣೆ ಗಳಾಗುವುವು. ಹರಡಿದ ಜರಾಯುವನ್ನು ಪಡೆದಿರುವ ಪ್ರಾಣಿಗಳಾದ ಕುದುರೆ ಮತ್ತು ಹಂದಿಗಳಲ್ಲಿ ಲೋಳೆಪೊರೆ ದಪ್ಪವಾಗುವುದು; ಬಹಳ ರಕ್ತಪ್ರಸಾರ ಸಹ ಆಗುವುದು. ಮೆಲುಕು ಹಾಕುವ ಪ್ರಾಣಿಗಳ ಗರ್ಭಕೋಶದಲ್ಲಿ ಪಿಂಡದ ಚೀಲ ಗುಂಡಿಗಳಂಥ ರಚನೆಗಳಿಂದ ಬಂಧಿತವಾಗಿರುವುದು. ಪಿಂಡ ಬೆಳೆದ ಹಾಗೆಲ್ಲ ಗುಂಡಿಗಳ ಗಾತ್ರ ಮತ್ತು ಸಂಖ್ಯೆ ಹೆಚ್ಚಾಗುತ್ತದೆ. ಇವು ಅಣಬೆಯಾಕಾರದಲ್ಲಿ ಬೆಳೆದು ಹಸುವಿನಲ್ಲಿ ಹೊರ ಉಬ್ಬಿನ ರೂಪದಲ್ಲಿಯೂ ಕುರಿಗಳಲ್ಲಿ ಒಳತಗ್ಗಿನ ರೂಪದಲ್ಲಿಯೂ ಇರುವುವು. ನಾಯಿ ಮತ್ತು ಬೆಕ್ಕುಗಳಲ್ಲಿ ಪಿಂಡದ ಚೀಲ ಗರ್ಭಕೋಶದ ಲೋಳೆಪೊರೆಗೆ ಕೆಲವು ಭಾಗಗಳಲ್ಲಿ ಅಂಟಿಕೊಂಡಿರುವುದು.


ಗಬ್ಬದ ಲಕ್ಷಣಗಳು

ಗಬ್ಬವಾದ ಮೇಲೆ ಮೊದಲೆರಡು ತಿಂಗಳು ಗರ್ಭಧಾರಣೆ ಆಗಿದೆಯೆ ಇಲ್ಲವೆ ಎಂದು ಗೊತ್ತಾಗುವುದಿಲ್ಲ. ಕಾಲಕಳೆದಂತೆ ಕೆಲವಾರು ಲಕ್ಷಣಗಳ ಸಹಾಯದಿಂದ ಗರ್ಭಧಾರಣೆಯನ್ನು ಗುರುತಿಸಬಹುದು. ಗರ್ಭಧರಿಸಿದ ಮೇಲೆ ಹೆಣ್ಣು ಗಂಡಿನೊಡನೆ ಕೂಡುವ ಬಯಕೆಯನ್ನು ತೋರಿಸುವುದಿಲ್ಲ. ಕೆಲವು ವೇಳೆ ಗಂಡಿನೊಂದಿಗೆ ಕೂಡುವ ಲಕ್ಷಣ ತೋರಿಸಬಹುದಾದರೂ ಆಗ ಹೋರಿಯಿಂದ ವೀರ್ಯ ಸಂಚಯನ ಮಾಡಿಸಿದರೆ ಹಸು ಕಂದು ಹಾಕುವುದು. ಬೆದರುವ, ಕಾಟಕೊಡುವ ಕುದುರೆಗಳು ಗಬ್ಬವಾದ ಮೇಲೆ ಸಾಧುವಾಗುವುವು. ಹಸುಗಳು ಸಹ ಸಾಧುವಾಗುವುವು. ಗಬ್ಬವಾದ ಮೇಲೆ ಪ್ರಾಣಿಗಳು ಮೈತುಂಬಿಕೊಳ್ಳುವುದು. ಕೆಲಸ ಮಾಡಲಾಗದೆ ಬೇಗನೆ ಬಳಲುವುವು. ಕುದುರೆಗಳು ಬೇಗನೆ ಬೆವರುವುವು. ಹಂದಿ ಮತ್ತು ನಾಯಿಗಳು ಆದಷ್ಟು ಆರಾಮವಾಗಿ ಇರಲು ಬಯಸುವುವು.


ಒಡಲು: ಒಡಲು ಮೈತುಂಬಿ ಗುಂಡಾಗುತ್ತದೆ. ಗಬ್ಬವಾದ ಮೇಲೆ ಕಾಣಿಸಿಕೊಳ್ಳುವ ಪ್ರಧಾನ ಲಕ್ಷಣವಿದು. ಒಳಗೆ ಪಿಂಡ ಬೆಳೆದಂತೆ ಉದರದ ಆಕಾರ ಬದಲಾವಣೆ ಹೊಂದುವುದು. ಈಯುವ ಕಾಲ ಬಂದಾಗ ಪಕ್ಕೆಗಳಲ್ಲಿ ಗುಳಿ ಬೀಳುವುದು. ಬೆನ್ನು ಮೂಳೆಗಳು ಮೇಲೆದ್ದು ಕಾಣುವುವು. ರೊಂಡಿಯ ಮಾಂಸಗಳು ಇಳಿಬೀಳುವುವು. ಪಿರ್ರೆಯ ಭಾಗ ಕುಗ್ಗುವುದು. ಬಾಲದ ಬುಡದ ಬಳಿ ಗುಳಿ ಚೆನ್ನಾಗಿ ತೋರುವುದು.


ಕೆಚ್ಚಲು: ಗಬ್ಬವಾದ ಮೇಲೆ ಕ್ರಮೇಣ ಕೆಚ್ಚಲು ದಪ್ಪವಾಗುತ್ತ ಹೋಗುವುದು. ಮೊಲೆತೊಟ್ಟುಗಳು ಉದ್ದವಾಗುವುದು. ಕೆಚ್ಚಲು ಮೇಲಿನ ಸುಕ್ಕು ಇಲ್ಲವಾಗುವುದು. ಮರಿಹಾಕುವ ಅವಧಿ ಹತ್ತಿರವಾದಂತೆ ಹಳದಿಬಣ್ಣದ ಅಂಟು ಹಾಲು ಉತ್ಪತ್ತಿಯಾಗುವುದು. ಹಾಲು ಕೊಡುತ್ತಿದ್ದ ಹಸುವಿನ ಹಾಗೂ ಕುದುರೆಯ ಕೆಚ್ಚಲು ಅವು ಗಬ್ಬವಾದ ಮೇಲೆ ಸ್ವಲ್ಪ ಒಣಗಿಹೋಗುವುವು. ಹಸುವಿನಲ್ಲಿ ಏಳು ತಿಂಗಳವರೆಗೆ, ಕುದುರೆಗಳಲ್ಲಿ ಎಂಟರಿಂದ ಒಂಬತ್ತು ತಿಂಗಳವರೆಗೆ ಹಾಲು ಕಡಿಮೆಯಾಗುತ್ತ ಹೋಗಿ, ಆಮೇಲೆ ನಿಂತುಹೋಗುವುದು.


ಗರ್ಭವನ್ನು ಹೊತ್ತ ಪ್ರಾಣಿಯ ದೇಹಭಾರ ಹೆಚ್ಚುತ್ತ ಹೋಗುವುದು. ಮೇಲಾಗಿ ಒಡಲಿನ ಅಕ್ಕಪಕ್ಕಗಳಲ್ಲಿ ಪಿಂಡದ ಓಡಾಟ ಕಾಣಬರುವುದು. ಕುದುರೆಯ ಒಡಲಿನ ಎಡಪಾರ್ಶ್ವದಲ್ಲಿ, ಹಸುವಿನ ಬಲಭಾಗದಲ್ಲಿ ಪಿಂಡದ ಆಂತರಿಕ ಓಡಾಟ ಕಾಣಬರುವುದು. ಗಬ್ಬ ಹೊತ್ತ ಪ್ರಾಣಿ ತಣ್ಣೀರು ಕುಡಿದಾಗ ಅಥವಾ ಸ್ವಲ್ಪ ದೂರ ನಡೆದು ಒಮ್ಮೆಗೆ ನಿಂತುಕೊಂಡಾಗ ಪಿಂಡ ಮಾತ್ರ ಓಡಾಡುವುದು. ಅಲ್ಲದೆ ಹಸುಗಳು ಎಡಕ್ಕೆ ಮತ್ತು ಕುದುರೆಗಳು ಬಲಕ್ಕೆ ಬೇಗನೆ ತಿರುಗಿದರೂ ಈ ಓಡಾಟ ಕಾಣುವುದು. ಮಲಗಿ ಎದ್ದ ಪ್ರಾಣಿಗಳ ಒಡಲಿನಲ್ಲಿ ಈ ಓಡಾಟವನ್ನು ಗುರುತಿಸಬಹುದು. ಚಿಕ್ಕಪ್ರಾಣಿಗಳಲ್ಲಿ ಈ ರೀತಿಯ ಪಿಂಡದ ಓಡಾಟ ಕಾಣಬರುವುದಿಲ್ಲ. ಆದರೆ ಒಡಲಿನ ಮೇಲೆ ಕೈಯಿಟ್ಟು ಸ್ವಲ್ಪ ಒತ್ತಿಹಿಡಿದರೆ ಪಿಂಡದ ಇರುವನ್ನು ಸುಲಭವಾಗಿ ಗುರುತಿಸಬಹುದು.

ಗಬ್ಬವಾದ ಪ್ರಾಣಿಯ ಉಪಚಾರ

ಗಬ್ಬವಾದ ಪ್ರಾಣಿಗೆ ಸಾಕಷ್ಟು ವ್ಯಾಯಾಮ ಮತ್ತು ಒಳ್ಳೆಯ ಆಹಾರ ಅವಶ್ಯಕ. ಪಿಂಡದ ಬೆಳೆವಣಿಗೆ ಹಾಗೂ ಪ್ರಾಣಿಯ ಆರೋಗ್ಯರಕ್ಷಣೆಗೆ ಬೇಕಾಗುವ ಸಮತೂಕ ಆಹಾರವನ್ನು ಕೊಡಬೇಕು. ಹೊಟ್ಟೆಯಲ್ಲಿ ಉರಿಯನ್ನು ಉಂಟುಮಾಡುವ, ಭೇದಿಯನ್ನು ಉಂಟುಮಾಡುವ ಆಹಾರವನ್ನು ಕೊಡಬಾರದು. ಆಹಾರದಲ್ಲಿ ತೀವ್ರ ಬದಲಾವಣೆ ಸಹ ಮಾಡಬಾರದು. ತಣ್ಣನೆಯ ಮತ್ತು ಶುಚಿಯಾದ ನೀರನ್ನು ಆದಷ್ಟು ಹೆಚ್ಚಾಗಿ ಕೊಡಬೇಕು. ಕುರಿಗಳು ತಿನ್ನುವ ಹಸುರು ಮೇವಿನಲ್ಲಿ ಸಾಕಷ್ಟು ನೀರಿನ ಅಂಶವಿರುವುದರಿಂದ ಅವಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ಪಿಂಡದ ಚೀಲದ ರಕ್ಷಣೆಗೆ ನೀರು ಬಹಳ ಅವಶ್ಯಕವಾದುದು. ಅಲ್ಲದೆ ಕೆಚ್ಚಲ ಬೆಳೆವಣಿಗೆಗೂ ನೀರು ಬೇಕಾಗುವುದು.

ಕುದುರೆ

ಅದರ ಒಡಲು ದಪ್ಪವಾಗುವವರೆಗೂ ಯಥಾಪ್ರಕಾರ ಅದನ್ನು ಪೋಷಿಸಬೇಕು. ಅದಕ್ಕೆ ಬಹಳ ಹಗುರವಾದ ಕೆಲಸ ಕೊಡಬೇಕು. ಸಾಕಷ್ಟು ನೆರಳನ್ನು ಸಹ ಕಲ್ಪಿಸಬೇಕು. ಹನ್ನೊಂದು ತಿಂಗಳ ಮಧ್ಯಭಾಗ ಮುಟ್ಟಿದರೆ ಅದನ್ನು ಮಧ್ಯಾಹ್ನ ಹುಲ್ಲುಮೇಯಲು ಬಿಟ್ಟು ಅನಂತರ ಸ್ವಲ್ಪ ಕೆಲಸಮಾಡಿಸಬೇಕು. ಸವಾರಿಗೆ ಉಪಯೋಗಿಸಬಾರದು. ಕೊನೆಯ ತಿಂಗಳಲ್ಲಿ ಹೆಚ್ಚಿನ ಆಹಾರ ಹಾಗೂ ನೀರನ್ನು ಕೊಡಬೇಕು. ಒಳ್ಳೆಯ ಕುದುರೆಗೆ ಮಸಾಲೆ ಸೊಪ್ಪು ಹಾಗೂ ಹಸಿರು ಹುಲ್ಲನ್ನು ಒದಗಿಸಬೇಕು. ಮರಿಹಾಕುವ ದೊಡ್ಡಿಯನ್ನು ಶುಚಿಯಾಗಿ ಇಟ್ಟಿರಬೇಕು. ಕುದುರೆಗೆ ಮಾಲೀಸುಮಾಡುವಾಗ ನೋವಾಗದಂತೆ ಎಚ್ಚರವಹಿಸಬೇಕು. ಚೊಚ್ಚಲು ಬಸಿರಿನ ಕುದುರೆಯ ಒಡಲನ್ನು ಆಗಾಗ್ಗೆ ನಯವಾಗಿ ಒತ್ತಬೇಕು. ಮೇಲಾಗಿ ಕೆಚ್ಚಲು, ಒಡಲಿನ ಮೇಲೆ ಆಗಾಗ್ಗೆ ಕೈಯಾಡಿಸುತ್ತ ಇರಬೇಕು.

ಹಸು

ಗಬ್ಬವಾದ 7 ತಿಂಗಳ ಅನಂತರ ಹಾಲು ಕರೆಯುವುದನ್ನು ನಿಲ್ಲಿಸಬೇಕು. ಇದರಿಂದ ಪಿಂಡದ ಬೆಳೆವಣಿಗೆ ಚೆನ್ನಾಗಿ ಆಗುತ್ತದೆ. ಹಸುವನ್ನು ಯಾವ ರೀತಿಯ ಕಷ್ಟಕ್ಕೂ ಈಡುಮಾಡಬಾರದು. ಮಳೆ, ಗಾಳಿ, ಬಿಸಿಲುಗಳ ತೀವ್ರತೆಯಿಂದ ರಕ್ಷಿಸಬೇಕು. ಹೋರಿಯಿಂದ ಆಗುವ ತೊಂದರೆಯನ್ನು ತಪ್ಪಿಸಬೇಕು. ಭೇದಿ ಉಂಟುಮಾಡುವ ಹಾಗೂ ಮತ್ತುಬರಿಸುವ ಔಷಧಿಗಳನ್ನು ನಿಲ್ಲಿಸಬೇಕು. ಕರುಹಾಕುವ ಕಾಲಬಂದಾಗ ಯಾವ ಅಡೆತಡೆಗಳಿಲ್ಲದ ಒಂದು ಕೊಠಡಿಯಲ್ಲಿ ಈಯಲು ಬಿಡಬೇಕು.

ಕುರಿ ಮತ್ತು ಮೇಕೆ

ಇವನ್ನು ಮರಿಹಾಕುವ ರೊಪ್ಪದಲ್ಲಿಟ್ಟು ಎಲ್ಲ ವಿಷಯ ಗಳಲ್ಲಿಯೂ ಗಮನ ಹರಿಸಬೇಕು. ಅವನ್ನು ಒರಟಾಗಿ ಕಾಣದೆ ಓಡಾಡಿಸದೆ ಇಡಬೇಕು. ನಾಯಿಯ ಕಾಟವನ್ನು ತಪ್ಪಿಸಬೇಕು.

ಹಂದಿ

ಇವನ್ನು ಹಳೆಯ ಮನೆಯೊಂದರಲ್ಲಿ ಇಡಬೇಕು. ರಾತ್ರಿಯ ವೇಳೆಯಲ್ಲಿ ಒಳ್ಳೆಯ ಆಹಾರ ಹಾಗೂ ತಳಹಾಸುಗಳನ್ನು ಕೊಡಬೇಕು. ಬೇರೆ ಯಾವ ರೀತಿಯ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಮರಿ ಹಾಕುವ ಹಂದಿಗಳನ್ನು ಬೇರೆ ಬೇರೆಯಾಗಿ ಉಣಿಸಬೇಕು. ಇಲ್ಲದಿದ್ದರೆ ಒಂದೊಂದು ಹಂದಿಗೂ ಸರಿಯಾಗಿ ಆಹಾರ ಸಿಗದು.

ನಾಯಿ

ಸರಿಯಾಗಿ ಓಡಾಡಿಸಬೇಕು. ಒಳ್ಳೆಯ ಆಹಾರ, ಪಿಷ್ಟರಹಿತ ತಿಂಡಿ, ಆಗಾಗ್ಗೆ ಯಕೃತ್ತಿನ ಚೂರುಗಳನ್ನು ಅಥವಾ ಬೇಯಿಸಿದ ಯಕೃತ್ತನ್ನು ಕೊಡಬೇಕು. ಬೆಚ್ಚನೆಯ ಸ್ಥಳಗಳಲ್ಲಿ ಇವನ್ನು ಇಟ್ಟು ತಳಹಾಸು ಹಾಗೂ ಮೆತ್ತೆಯನ್ನು ಕೊಡಬೇಕು. ಹಾಸಿಗೆ ಹಾಗೂ ಹಚ್ಚಡಗಳನ್ನು ಹಾಕಿ ಬೆಚ್ಚಗೆ ಮಲಗಿಸಬೇಕು.

ಮೂಲ : ವಿಕಿಪೀಡಿಯ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate