ಯಾವುದಾದರೂ ವ್ಯಕ್ತಿಯನ್ನು ಕೀಳಂದಾಜಿಸುವಾಗ, ಅಯ್ಯೋ ಅವ್ನಾ? ನನ್ ಉಗುರು ತುದಿಗೆ ಸಮಾನ ಎಂದು ಗೇಲಿ ಮಾಡುವುದನ್ನು ಕಂಡಿದ್ದೇವೆ. ಉಗುರು ಎಂದರೆ ತೀರಾ ನಿಕೃಷ್ಟ ಎಂಬ ಭಾವ ಇಂದಿಗೂ ಇದೆ. ಆದರೆ ಉಗುರೇ ದೇಹಾರೋಗ್ಯದ ಕನ್ನಡಿ ಎಂದರೆ ನಂಬುತ್ತೀರಾ? ಹೌದು, ಒಬ್ಬ ವ್ಯಕ್ತಿಯ ಉಗುರು ನೋಡಿಯೇ ಅವನ ದೇಹಾರೋಗ್ಯವನ್ನಷ್ಟೇ ಅಲ್ಲದೆ, ಅವನ ವ್ಯಕ್ತಿತ್ವ ಹೇಗೆ ಎಂಬುದನ್ನೂ ಹೇಳಬಹುದು. ಉಗುರನ್ನು ಸ್ವಚ್ಛವಾಗಿಟ್ಟುಕೊಳ್ಳುವವರು ಶಿಸ್ತಿಗೆ, ಸ್ವಚ್ಛತೆಗೆ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಉಗುರನ್ನು ಸ್ವಚ್ಛವಾಗಿಟ್ಟುಕೊಳ್ಳದವರು ಅನೇಕ ರೋಗಗಳಿಗೆ ತಾವಾಗಿಯೇ ಆಮಂತ್ರಣ ನೀಡುತ್ತಾರೆ.
ಕೆಲವೊಮ್ಮೆ ಉಗುರಿನ ಕೆಳಭಾಗದ ಚರ್ಮದಲ್ಲಿ ಉರಿ ಮತ್ತು ತುರಿಕೆ ಕಾಣಿಸಿಕೊಂಡು ಚರ್ಮ ಏಳಬಹುದು. ಉಗುರಿನ ಸ್ವಚ್ಛತೆಯತ್ತ ಬೆಲೆ ಕೊಡದಿರುವುದೂ ಇದಕ್ಕೆ ಕಾರಣ. ಉಗುರಿಗೆ ಏನಾದರೂ ಸೋಂಕು ತಗುಲಿದ್ದರೆ ಹೀಗಾಗುತ್ತದೆ.
ಕೆಲವರ ಉಗುರು ಹಳದಿ ಬಣ್ಣದಲ್ಲಿರುವುದನ್ನು ಕಾಣಬಹುದು. ವ್ಯಕ್ತಿ ಅನೀಮಿಯಾ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಇದು ಸಂಕೇತಿಸುತ್ತದೆ. ಉಗುರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಉಗುರು ತನ್ನ ನೈಜ ಬಣ್ಣದಿಂದ ಗಾಢ ಬಣ್ಣಕ್ಕೆ ತಿರುಗುತ್ತಿದ್ದರೆ ಅದು ಅಪಾಯದ ಸೂಚನೆ. ಇದು ಚರ್ಮರೋಗದಿಂದ ಬಳಲಬಹುದಾದ ಸಾಧ್ಯತೆಗಳನ್ನು ಸೂಚಿಸುತ್ತದೆ.
ಉಗುರಿನಲ್ಲಿ ಬಿರುಕು ಬಿಡುವುದು ಮತ್ತು ಉಗುರು ಕಾಂತಿಹೀನವಾಗುವುದು ಸೋರಿಯಾಸ್ ಆರಂಭವಾಗಬಹುದಾದ ಲಕ್ಷಣ. ಇದು ಚರ್ಮದ ಮೇಲೆ ಕೆಂಪು ಚುಕ್ಕೆಗಳು ಉಂಟಾಗುವಂತೆ ಮಾಡಬಹುದು.
ಉಗುರಿನ ಮೇಲೆ ಬಿಳಿ ಚುಕ್ಕೆಯೇನಾದರೂ ಹುಟ್ಟಿದರೆ ಅದು ಕಿಡ್ನಿ ಸಮಸ್ಯೆ ಮತ್ತು ಕ್ಯಾಲ್ಷಿಯಂ ಕೊರತೆಯನ್ನು ಸೂಚಿಸುತ್ತದೆ.
ಉಗುರನ್ನು ನಿಕೃಷ್ಟದಿಂದ ನೋಡುವ ಅಗತ್ಯವಿಲ್ಲ. ಅಲ್ಲದೆ ಉಗುರಿನ ಬಗ್ಗೆ ನಿಷ್ಕಾಳಜಿ ತೋರುವುದಿಂದ ದೇಹದ ಆರೋಗ್ಯಕ್ಕೇ ಸಮಸ್ಯೆಯಾಗುತ್ತದೆ ಎಂಬುದು ನೆನಪಿರಲಿ. ಉಗುರು ಬಣ್ಣಗಳು ಸಹ ಉಗುರಿನ ಆರೊಗ್ಯಕ್ಕೆ ಹಾನಿಕರ. ಇವು ಚರ್ಮರೋಗಕ್ಕೂ ಕಾರಣವಾಗಬಲ್ಲವು. ಅತಿಯಾಗಿ ಉಗುರುಬಣ್ಣ ಬಳಸುವುದನ್ನು ಕಡಿಮೆಮಾಡಿ.
ನಿಯಮಿತವಾಗಿ ಉಗುರನ್ನು ಕತ್ತರಿಸುವುದು ಅವಶ್ಯವಾಗಿ ನಡೆಯಬೇಕಾದ ಕೆಲಸ. ದೇಹಾರೋಗ್ಯದಲ್ಲಿ ಉಗುರಿನ ಮಹತ್ವದ ಪಾತ್ರವನ್ನು ಮನಗಂಡೇ ಹಿಂದೆಲ್ಲ ಶಾಲೆಗಳಲ್ಲಿ ಉಗುರನ್ನು ನೋಡುವ ರೂಢಿಯಿತ್ತು. ಆದರೆ ಇಂದು ಅಂಥ ಪದ್ಧತಿಗಳಿಲ್ಲ. ದೇಹಾರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾದ ಉಗುರಿನ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುವುದು ಅಗತ್ಯವಲ್ಲವೇ?
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 6/29/2020
ಮಿಕ್ಸೆಡ್ ಕ್ರ್ಯಾಬ್ ಚಿಲ್ಲಿ ಮಾಡುವ ವಿಧಾನದ ಬಗ್ಗೆ ಇಲ್ಲ...