ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಅಥವಾ ಪಾಲಿಸಬೇಕಾದ ನಿಯಮಗಳು :
ಯೋಗಾಸನಗಳನ್ನು ಮಾಡಲು ಸಂಧ್ಯಾಕಾಲ ಪ್ರಶಸ್ತವಾದ ಸಮಯ ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕಿಂತ 96 ನಿಮಿಷಗಳ ಮೊದಲಿನ ಅವಧಿಯು ಯೋಗಾಸನಗಳ ಅಭ್ಯಾಸಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಆಕಸ್ಮಾತ್À ಬೆಳಿಗ್ಗೆ ಮಾಡಲಿಕ್ಕಾಗದೆ ಸಂಜೆ ಮಾಡುವುದಾದಲ್ಲಿ ಊಟವಾದ 21/2-3 ಗಂಟೆಗಳ ನಂತರ ಅಭ್ಯಾಸ ಮಾಡಬೇಕು. ಆದರೆ ಬೆಳಗಿನ ಸಮಯ ಸೂಕ್ತ.
ಆಸನಗಳನ್ನು ಅಭ್ಯಾಸಮಾಡುವ ವಾತಾವರಣ ಶುದ್ಧವಾಗಿರಬೇಕು.
ಅಭ್ಯಾಸಮಾಡುವ ಕೊಠಡಿ ಚೊಕ್ಕಟವಾಗಿರಬೇಕು ಹಾಗೂ ಗಾಳಿ ಬೆಳಕು ಇರಬೇಕು.
ಆಸನಗಳನ್ನು ಅಭ್ಯಾಸ ಮಾಡುವಾಗ ಶುಭ್ರವಾದ ಹಾಗೂ ಸಡಿಲವಾದ ಉಡುಪುಗಳನ್ನು ಧರಿಸಬೇಕು.
ಪ್ರತಿಯೊಂದು ಆಸನವನ್ನು ನಿಧಾನವಾಗಿ ಉಸಿರಾಟದ ಜೊತೆಜೊತೆಗೆ ಅಭ್ಯಾಸಮಾಡಬೇಕು. ಇದರಿಂದಾಗಿ ಬರೀ ಆಸನದ ಪರಿಣಾಮವಲ್ಲದೇ ಪ್ರಾಣಾಯಾಮದ ಪರಿಣಾಮವೂ ಬೀರುವುದರಿಂದ ದೇಹ ಹಾಗೂ ಮನಸ್ಸು ಶುಚಿಗೊಳುತ್ತವೆ.
ನೀವು ಮಾಡುವ ಪ್ರತಿಯೊಂದು ಭಂಗಿಯ ಮೇಲೂ ನಿಮ್ಮ ಸಂಪೂರ್ಣ ಗಮನವನ್ನು ಹರಿಸಬೇಕು.
ಯೋಗ ಮಾಡುವಾಗ ಹಾಸಿನ ಮೇಲೆ (ಮ್ಯಾಟ್) ಮಾಡಬೇಕು.
ಯೋಗ ಮಾಡುವ ಪ್ರದೇಶದಲ್ಲಿ ಅಭ್ಯಾಸಕ್ಕೆ ಅಡಚಣೆಯಾಗುವ ವಸ್ತುಗಳಿದ್ದರೆ ಅವುಗಳನ್ನ ಬದಿಗೆ ಸರಿಸಿ ಇಡಬೇಕು.
ಅಭ್ಯಾಸವು ಪ್ರಯಾಸಕರವಾದಲ್ಲಿ ಮುಂದುವರಿಸದೇ ಅಲ್ಲಿಗೇ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳಬೇಕು.
ಪ್ರತಿಯೊಂದು ಆಸನದ ಅಭ್ಯಾಸದ ನಂತರ ಚಿಕ್ಕ ವಿರಾಮವನ್ನ ತೆಗೆದುಕೊಳ್ಳಬೇಕು.
ಅಭ್ಯಾಸ ಸಂಪೂರ್ಣ ಮುಗಿದ ಮೇಲೆ ಧೀರ್ಘ ವಿಶ್ರಾಂತಿ ಕ್ರಿಯೆಯನ್ನು ಆಚರಿಸಿಯೇ ಮೇಲೇಳಬೇಕು.
ಸೂರ್ಯ ನಮಸ್ಕಾರ ಮಾಡುವಾಗ ಪ್ರತಿ ಹಂತದಲ್ಲಿ ಆಯಾ ಶ್ಲೋಕವನ್ನು ಹೇಳಿಕೊಂಡರೆ ಒಳ್ಳೆಯದು.
ಶರೀರದಲ್ಲಿ ಯಾವುದೇ ತೀವ್ರತರವಾದ ವ್ಯಾಧಿಯಿದ್ದಾಗ ಅಭ್ಯಾಸ ಬೇಡ.
ಆಸನಗಳನ್ನು ಕೊನೆಯ ಹಂತದಲ್ಲಿ ಹೇಗೆ ಹಿಡಿದಿಟ್ಟುಕೊಳ್ಳುತ್ತೀರೋ, ಆ ಕೊನೆಯ ಹಂತಕ್ಕೆ ಮುಟ್ಟುವುದು ಹಾಗೂ ಪುನಃ ಸ್ಥಿತಿಗೆ ಮರಳುವುದು ಅಷ್ಟೇ ಪ್ರಾಮುಖ್ಯತೆ ವಹಿಸುತ್ತದೆ. ಹಾಗಾಗಿ ಅಭ್ಯಾಸಗಳನ್ನು ಶುರುವಿನಿಂದ ಪೂರ್ಣಗೊಳ್ಳುವವರೆಗೂ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು.