অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಸ್ತಮಾ

ಅಸ್ತಮಾ

ಮಳೆಗಾಲ, ಚಳಿಗಾಲ ಸಮೀಪಿಸುತ್ತಿದ್ದಂತೆ ಅಸ್ತಮಾ ಖಾಯಿಲೆ ಉಲ್ಬಣಗೊಳ್ಳುವ ಸಂಭವತೆ ಹೆಚ್ಚು. ಧೂಳು, ಗಾಳಿ, ವಾತಾವರಣದಲ್ಲಾಗುವ ಬದಲಾವಣೆಗಳಿಂದಾಗಿ ಶೀತ, ನೆಗಡಿ, ಕಫಕಟ್ಟುವುದು ಇಂತಹ ಸಮಸ್ಯೆಗಳು ಕಾಡುತ್ತವೆ. ಇದು ನಿಧಾನವಾಗಿ ಅಸ್ತಮವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇದನ್ನು ನಿವಾರಿಸಲು ಪ್ರಕೃತಿಚಿಕಿತ್ಸೆಗಳು ಬಹಳ ಸಹಾಯಮಾಡುತ್ತದೆ. ಸಮಯೋಚಿತ ಪ್ರಕೃತಿಚಿಕಿತ್ಸೆಯಿಂದಾಗಿ ನಾವು ಅಸ್ತಮಾ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬಹುದು.

ಅಂತಹ ಪ್ರಕೃತಿಚಿಕಿತ್ಸೆಗಳಲ್ಲೊಂದು ಜಲನೇತಿ. ಈ ಜಲನೇತಿ ಕ್ರಿಯೆಯನ್ನು ಮಾಡುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಶ್ವಾಸಕೋಶದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಅಸ್ತಮಾ ನಿಯಂತ್ರಣಕ್ಕೆ ಸಹಕರಿಸುತ್ತದೆ. ಇದನ್ನು ಒಂದು ತಿಂಗಳುಗಳಕಾಲ ದಿನಬಿಟ್ಟು ದಿನ ಮಾಡುತ್ತಾ ಬರಬೇಕು. ನಂತರದಲ್ಲಿ ವಾರಕ್ಕೆರಡುದಿನ ಮಾಡಿದರೆ ಸಾಕು. ಹೀಗೆ ಮಾಡಿದಲ್ಲಿ ಅಸ್ತಮಾ ಸಮಸ್ಯೆ ಹತೊಟಿಗೆ ಬರುವುದು.

ಅಂತೆಯೇ ಇದರ ಜೊತೆಯಲ್ಲಿಯೇ ಮಾಡಬಹುದಾದ ಪ್ರಕ್ರಿಯೆ ‘ಸೂತ್ರನೇತಿ’. ಇದೂ ಸಹ ಗಂಟಲಿನ ಭಾಗವನ್ನು ಶುದ್ಧಗೊಳಿಸುವುದಲ್ಲದೇ ಉಸಿರಾಟದ ಹಾದಿಯನ್ನು ಸುಗಮಗೊಳಿಸುತ್ತದೆ. ಅಲರ್ಜಿಯನ್ನು ಕೆರಳಿಸುವ ವಸ್ತುಗಳಮೇಲೆ ಪರಿಣಾಮಬೀರಿ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಇದು ಅಸ್ತಮಾ ನಿಯಂತ್ರಣಕ್ಕೆ ಸಹಕಾರಿ.

ಇವುಗಳ ಜೊತೆಯಲ್ಲಿಯೇ ಮಾಡಬಹುದಾದ ಇನ್ನೊಂದು ಪ್ರಕೃತಿಚಿಕಿತ್ಸೆ ‘ವಮನಧೌತಿ’. ಹಿಮ್ಮಡಿಗಳಮೇಲೆ ಕುಳಿತಿಕೊಂಡು ಉಪ್ಪು ಸೇರಿಸಿದ ಉಗುರುಬೆಚ್ಚಗಿನ ನೀರನ್ನು7-8 ಗ್ಲಾಸ್ ಕುಡಿದು, ನಿಧಾನವಾಗಿ ಎದ್ದುನಿಂತು ಕುಡಿದ ಎಲ್ಲ ನೀರನ್ನು ಹೊರಹಾಕುವ (ವಾಂತಿ ಮಾಡುವ) ಈ ಪ್ರಕ್ರಿಯೆಯಿಂದಾಗಿ ಅಸ್ತಮಾ ಸಮಸ್ಯೆ ಹತೋಟಿಗೆ ಬರುತ್ತದೆ. ಬಾಯಿಯಿಂದ ಹೊಟ್ಟೆಯವರೆಗಿನ ಅನ್ನನಾಳವನ್ನು ಹಾಗೂ ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಇದಾಗಿದ್ದು ಅಸ್ತಮಾ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.

ಹೀಗೆ ಈ ಮೂರು ಪ್ರಕೃತಿ ಚಿಕಿತ್ಸೆಗಳು ಅಸ್ತಮಾ ಸಮಸ್ಯೆಗೆ ಒಳ್ಳೆಯದು. ಅಲ್ಲದೇ ಆಹಾರ ಪದ್ಧತಿಯನ್ನೂ ಸಹ ಅಸ್ತಮಾ ಹೊಂದಿದವರು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ಮುಖ್ಯವಾಗಿ ಅಸ್ತಮಾ ಇರುವವರು ಉಸಿರಾಟಕ್ಕೆ ಸಮಸ್ಯೆ ಆಗುತ್ತಿದ್ದಲ್ಲಿ ರಾತ್ರಿ ಅನ್ನ, ಚಪಾತಿ ಇಂತಹ ಆಹಾರವನ್ನು ಕಡಿಮೆಮಾಡಬೇಕು. ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಕಫವನ್ನು ಉಂಟುಮಾಡುವಂತಹ ಹಾಲು, ಮೊಸರು ಇವುಗಳನ್ನು ರಾತ್ರಿ ಮಲಗುವಾಗ ತೆಗೆದುಕೊಳ್ಳದೇ ಹಗಲಿನ ಸಮಯದಲ್ಲೇ ಸೇವಿಸುವುದು ಒಳಿತು.

ಹೀಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಮಯೋಚಿತವಾಗಿ ತೆಗೆದುಕೊಂಡು ಈ ಪ್ರಕೃತಿ ಚಿಕಿತ್ಸೆಗಳ ಮೂಲಕ ಅಸ್ತಮಾವನ್ನು ಕಡಿಮೆಮಾಡಿಕೊಳ್ಳಬಹುದು. ಆ ಮೂಲಕ ಪ್ರಯತ್ನಿಸಿ ನಮ್ಮ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಮಾಡೋಣ.

ಮೂಲ: ಡಾ|| ವೆಂಕಟ್ರಮಣ ಹೆಗಡೆ

ಕೊನೆಯ ಮಾರ್ಪಾಟು : 2/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate