ನೀವು ತಾಯಿಯಾದಾಗ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ಸಂಗತಿಗಳ ಕಡೆ ಗಮನ ನೀಡುವುದು ಅವಶ್ಯಕ. ತಾಯಿಯಾಗುವುದು ಸುಲಭದ ಕೆಲಸವಲ್ಲ. ಇದು ಪ್ರತಿದಿನ ಹೊಸ ಸವಾಲುಗಳನ್ನು ಎದುರಿಸುವ ಚೈತನ್ಯವನ್ನು ಬೇಡುವಂಥದ್ದು. ಇಂದಿನ ದಿನಗಳಲ್ಲಿ ತಾಯಂದಿರು ತಮಗಾಗಿ ಸ್ವಲ್ಪ ಸಮಯವನ್ನು ಕೂಡ ಕೊಡಲಾಗದಿರುವುದರಿಂದಲೇ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೊಸದಾಗಿ ತಾಯಿಯಾದವರು ಮೊದಲು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು. ಹೆಚ್ಚುತ್ತಿರುವ ಒತ್ತಡದ ಜೀವನಶೈಲಿಯಿಂದಾಗಿ ಅವರು ಬಹುಬೇಗ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಿಮಗೆ ಎಷ್ಟೇ ಕೆಲಸವಿದ್ದರೂ ನಿಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಾದದ್ದು ಅತ್ಯಗತ್ಯ. ತಮಗಾಗಿ ಸ್ವಲ್ಪವಾದರೂ ಸಮಯವನ್ನು ತೆಗೆದಿಡುವ ಕಡೆಗೆ ತಾಯಂದಿರು ಗಮನನೀಡಬೇಕು.
ಹೊಸ ತಾಯಂದಿರೆ ಈ ಲೇಖನ ನಿಮಗಾಗಿ. ನಿಮ್ಮ ತಾಯ್ತತನವನ್ನು ಅನುಭವಿಸುತ್ತಲೇ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾದ ಕೆಲವು ಟಿಪ್ಸ್ ಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.
ಬಾಣಂತನದ ನಂತರ ಹೊಸದಾಗಿ ತಾಯಿಯಾದವರು ವ್ಯಾಯಾಮಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ನಡಿಗೆ ನೀವು ಅನುಸರಿಸಬಹುದಾದ ಅತ್ಯುತ್ತಮವಾದ ವ್ಯಾಯಾಮ. ಯಾವುದಾದರೂ ಒಂದು ವ್ಯಾಯಾಮಕ್ಕೆ ನಿಮ್ಮ ವೇಳಾಪಟ್ಟಿಯಲ್ಲಿ ಸಮಯವನ್ನು ಮೀಸಲಿಟ್ಟಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹಲವು ಹೊಸ ತಾಯಂದಿರಿಗೆ ಕೆಲಸ ಮತ್ತು ಮನೆಯ ನಡುವೆ ಸಮನ್ವಯ ಸಾಧಿಸಲು ಕಷ್ಟವಾಗಿ ಹೆಣಗುತ್ತಾರೆ. ಇದರಿಂದಾಗಿ ಅವರು ತಾವು ತಿನ್ನುವ ಆಹಾರದ ಕಡೆ ಅತ್ಯಲ್ಪ ಗಮನ ನೀಡುತ್ತಾರೆ. ಆರೋಗ್ಯಕರ ಆಹಾರ ಸೇವನೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯವಾದುದು.
ರೋಗಗಳ ವಿರುದ್ಧ ಹೋರಾಡಲು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕಾದದ್ದು ಅಗತ್ಯ. ರೋಗನಿರೋಧಕ ಶಕ್ತಿ ಹೆಚ್ಚಾದರೆ ರೋಗಗಳ ವಿರುದ್ಧ ಹೋರಾಡುವುದು ಸುಲಭವಾಗುತ್ತದೆ. ಆದ್ದರಿಂದ ಆರೋಗ್ಯಕರ ಪಾನೀಯಗಳು ಮತ್ತು ಆಹಾರಗಳನ್ನು ಸೇವಿಸಿ.
ನೀವು ಹೊಸ ಚೈತನ್ಯದಿಂದ ಪುಟಿಯಬೇಕೆಂದರೆ ನಿಮ್ಮ ಮೆದುಳು ಯಾವಾಗಲೂ ಆರೋಗ್ಯಕರವಾಗಿರಬೇಕು. ಹೀಗಿರುವುದು ಸಾಧ್ಯವಾಗುವುದು ನೀವು ನಿಮ್ಮ ಮೆದುಳಿಗೆ ಸೂಕ್ತವಾದ ಸೂಪರ್ ಫುಡ್ ಗಳನ್ನು ಒದಗಿಸಿದಾಗ ಮಾತ್ರ. ಇಂತಹ ಆಹಾರಗಳಲ್ಲಿ ದಾಳಿಂಬೆ ನಿಮ್ಮ ಮೆದುಳಿಗೆ ನೀಡಬಹುದಾದ ಅತ್ಯುತ್ತಮ ಆಹಾರಗಳಲ್ಲಿ ಒಂದು. ಹಸಿರೆಲೆ ತರಕಾರಿಗಳು ಈ ನಿಟ್ಟಿನಲ್ಲಿ ಬಹಳ ಪರಿಣಾಮಕಾರಿ.
ಸೂರ್ಯನಿಂದ ವಿಟಮಿನ್ ಡಿ ದೊರಕುತ್ತದೆ. ಸೂರ್ಯನ ಬೆಳಕಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳುವ ಮೂಲಕ ನಿಮ್ಮ ದೇಹಕ್ಕೆ ಇದನ್ನು ಒದಗಿಸಬಹುದು. ಸೂರ್ಯ ಸ್ನಾನ ಇದಕ್ಕೊಂದು ದಾರಿ.
ಆರೋಗ್ಯಕರ ಬಾಳ್ವೆ ಸಾಧ್ಯವಾಗಬೇಕೆಂದರೆ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ. ನಿಮಗೆ ಧೂಮಪಾನ ಅಥವ ಮದ್ಯಪಾನದಂತಹ ಅಭ್ಯಾಸಗಳಿದ್ದಲ್ಲಿ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು. ಇವು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಚ್ಚರ.
ನೀವು ಮಗುವಿಗೆ ಹಾಲೂಡಿಸುವ ಮೂಲಕ ಅದಕ್ಕೆ ಅವಶ್ಯಕವಾದ ಪೌಷ್ಟಿಕಾಂಶಕಗಳನ್ನು ಒದಗಿಸುತ್ತೀರಿ. ಜೊತೆಗೆ ಇದು ನಿಮ್ಮ ಆರೋಗ್ಯವನ್ನು ಕೂಡ ಉತ್ತಮವಾಗಿಡುತ್ತದೆ. ಸ್ತನಪಾನವು ತೂಕಕಳೆದುಕೊಳ್ಳಲು ಮತ್ತು ಸ್ತನ ಕ್ಯಾನ್ಸರ್ ನಿಂದ ದೂರವುಳಿಯಲು ನೆರವಾಗುತ್ತವೆ.
ಮೂಲ: ಹೇಮಾ
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 4/19/2020