ಬೆಳಿಗ್ಗೆ ಎದ್ದು ಎಂದಿನಂತೆ ಲವಲವಿಕೆಯಿಂದಲೇ ಶಾಲೆಗೆ ಹೋದ ಐದೂವರೆ ವರ್ಷದ ಪುಟ್ಟ ಮಗ ಸಂಜೆಯ ವೇಳೆಗೆ ವಿಪರೀತ ಮಂಕಾಗಿದ್ದ. ಕಣ್ಣುಗಳು ಕಾಂತಿ ಕಳೆದುಕೊಂಡು ನಿಸ್ತೇಜವಾ ಗಿದ್ದವು. ಹಣೆ ಮುಟ್ಟಿ ನೋಡಿದರೆ ಸುಡುತ್ತಿತ್ತು. ಕೂಡಲೇ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದೆ.
ಮಗುವನ್ನು ಪರೀಕ್ಷಿಸಿದ ಮಕ್ಕಳ ತಜ್ಞ ಡಾ. ಸುದರ್ಶನ್, ‘ಇದು ವೈರಲ್ ಫಿವರ್, ಕನಿಷ್ಠ ಮೂರು ದಿನ ಇರುತ್ತೆ..’
ಎಂದವರೆ ಆತನ ಹೃದಯ ಬಡಿತ, ನಾಡಿ ಮಿಡಿತ ಜತೆಗೆ ಕಣ್ಣನ್ನು ಅಗಲಿಸಿ ಪರೀಕ್ಷಿಸಿದರು. ನನ್ನ ಕಡೆ ತಿರುಗಿ ‘ಮಗು ತುಂಬ ಬಿಳಿಚಿಕೊಂಡಿದ್ದಾನೆ, ಅನೀಮಿಕ್ ಆಗಿಬಿಟ್ಟಿದ್ದಾನೆ, ಕೂಡಲೇ ರಕ್ತಪರೀಕ್ಷೆ ಮಾಡಿಸಿ’ ಎಂದು ಬರೆದು ಕೊಟ್ಟರು. ಅವರು ಹೇಳಿದಂತೆ ರಕ್ತಪರೀಕ್ಷೆ ಮಾಡಿಸಿ ಲ್ಯಾಬ್ ರಿಪೋರ್ಟ್ ಅನ್ನು ವೈದ್ಯರಿಗೆ ತೋರಿಸಿದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕೇವಲ 3.9 ಗ್ರಾಂ ಇತ್ತು.
ನಾರ್ಮಲ್ ಆಗಿ 13 ಗ್ರಾಂಗಳಷ್ಟು ಇರಬೇಕಾದ ಹಿಮೋಗ್ಲೋಬಿನ್ ಪ್ರಮಾಣ ಇಷ್ಟು ಕೆಳಮಟ್ಟ ದಲ್ಲಿದ್ದದ್ದು ನನ್ನ ಜತೆಗೆ ವೈದ್ಯರಿಗೂ ಆತಂಕ ಹುಟ್ಟಿಸಿತ್ತು. ಜತೆಗೆ ‘ಸೆಕೆಂಡ್ ಒಪೀನಿಯನ್ ತಗೊಳ್ಳಿ, ಬೇರೆ ಕಡೆ ಇನ್ನೊಮ್ಮೆ ಬ್ಲಡ್ ಟೆಸ್ಟ್ ಮಾಡಿಸಿ ನೋಡೋಣ..’ ಎಂದರು.
ಮರು ರಕ್ತಪರೀಕ್ಷೆ ಮಾಡಿಸಿದರೆ ಅಲ್ಲೂ ಅದೇ ಫಲಿತಾಂಶ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ತುಂಬ ಬಿಳಿಚಿಕೊಂಡಿದೆ. ಈಗಾಗಲೇ ಅಡ್ಮಿಟ್ ಮಾಡಿ, ಐಸಿಯುಗೆ ಹಾಕಬೇಕು ಎಂದು ಹೇಳಿದಾಗ ನಾನು ಕಂಗಾಲು. ಅವರ ಸಲಹೆಯಂತೆ ಮರುದಿನ ಬೆಳಿಗ್ಗೆ ಮಗುವನ್ನು ಆಸ್ಪತ್ರೆಗೆ ಸೇರಿಸಿ ಐಸಿಯುನಲ್ಲಿ ಚಿಕಿತ್ಸೆ, ಜತೆಗೆ ರಕ್ತ ನೀಡಿದರು. ಬಳಿಕ ಕಬ್ಬಿಣಾಂಶವಿರುವ ಸಿರಪ್ ನೀಡಿ ಮನೆಗೆ ಕಳಿಸಿದರು.
ಹೌದು, ಇದು ರಕ್ತಹೀನತೆ (ಅನೀಮಿಯಾ) ಎಂಬ ಆರೋಗ್ಯ ಸಮಸ್ಯೆ. ಸಾಮಾನ್ಯವಾಗಿ ಮಕ್ಕಳಲ್ಲಿ ಕಬ್ಬಿಣಾಂಶ ಕೊರತೆಯಿಂದ ಬರುತ್ತದೆ. ಮಕ್ಕಳು ಬಿಳಿಚಿಕೊಳ್ಳುತ್ತಾರೆ. ವಿಪರೀತ ಸುಸ್ತು, ಚೈತನ್ಯದ ಕೊರತೆ, ಪದೇ ಪದೇ ಜ್ವರ ಬರುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಆರಂಭದಲ್ಲಿ ಕಾಣಿಸಿಕೊಳ್ಳುತ್ತವೆ. ಪೌಷ್ಟಿಕಾಂಶದ ಕೊರತೆಯಿಂದ ರಕ್ತದಲ್ಲಿನ ಹಿಮೊ ಗ್ಲೋಬಿನ್ ಅಂಶ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗಿ ಮಗು ಕ್ಷೀಣವಾಗುತ್ತಾ ಬರುತ್ತದೆ.
ವ್ಯಕ್ತಿಯ ದೇಹದ ರಕ್ತದಲ್ಲಿ ನಾರ್ಮಲ್‌ಗಿಂತ ಕಡಿಮೆ ಕೆಂಪು ರಕ್ತಕಣ (ಆರ್‌ಬಿಎಸ್) ಗಳಿದ್ದರೆ ಅನೀಮಿಯಾ ಅಥವಾ ರಕ್ತಹೀನತೆ ಎಂದೇ ತಿಳಿಯಬೇಕು. ಅಮೆರಿಕನ್ ಸೊಸೈಟಿ ಆಫ್ ಹೆಮಟಾಲಜಿ ಪ್ರಕಾರ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಗೆ ವಯಸ್ಸು, ವೈರಸ್‌ಗಳ ಸೋಂಕು ಮತ್ತು ಕೆಲ ತೀವ್ರ ಕಾಯಿಲೆಗಳಿಗೆ ಕಾರಣವಾಗುತ್ತವೆ’ ಎನ್ನುತ್ತಾರೆ ಮಕ್ಕಳ ತಜ್ಞ ಡಾ. ಸುದರ್ಶನ್.
‘ಅನೀಮಿಯಾ ಕಬ್ಬಿಣಾಂಶ ಕೊರತೆಯಿಂದ, ವಿಟಮಿನ್ ಬಿ 12 ಕೊರತೆ ಮತ್ತು ಫಾಲಿಕ್ ಆ್ಯಸಿಡ್ ಕೊರತೆಯಿಂದಲೂ ತೀವ್ರವಾಗಿ ಕಾಡಬಹುದು. ಆಹಾರ ಪದ್ಧತಿಯಲ್ಲಿ ಬದಲಾವಣೆ, ಸೂಕ್ತವಾದ ಹಣ್ಣು, ತರಕಾರಿಗಳಿಂದ ಈ ಕೊರತೆಗಳನ್ನು ನೀಗಿಸಿ ಆರೋಗ್ಯವಾಗಿರಬಹುದು’ ಎನ್ನುತ್ತಾರೆ ಈ ವೈದ್ಯರು.
ಅನೀಮಿಯಾಕ್ಕೆ ಪ್ರಮುಖ ಕಾರಣ ಅಪೌಷ್ಟಿಕತೆಯೇ ಆಗಿದೆ. ನಮ್ಮ ರಾಜ್ಯದ ಅಂಕಿ ಅಂಶಗಳನ್ನೇ ತೆಗೆದು ಕೊಂಡರೆ ಅನೀಮಿಯಾದಿಂದ ಬಳಲುವ ಮಕ್ಕಳ ಸಂಖ್ಯೆ ಅಂದಾಜು 68 ಸಾವಿರ. ಈ ಆತಂಕದ ವಿಚಾರವನ್ನು ಈ ತಿಂಗಳ ಆರಂಭದಲ್ಲಿ ನ್ಯಾಯಮೂರ್ತಿ ಎನ್.ಕೆ. ಪಾಟೀಲ ಸಮಿತಿ ಇತ್ತೀಚೆಗೆ ನೀಡಿದ ವರದಿಯಲ್ಲಿ ದಾಖಲಿಸಲಾಗಿದೆ. ಇದು ತಾಯಂದಿರಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.
ತೀವ್ರ ಕಬ್ಬಿಣಾಂಶ ಕೊರತೆ ಇರುವವರಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ. ಆಯಾಸ, ನಿಶ್ಯಕ್ತಿ, ನಿಸ್ತೇಜ ತ್ವಚೆ, ಉಸಿರಾಟದ ತೊಂದರೆ, ಮಕ್ಕಳಲ್ಲಿ ಕಸ, ಮಣ್ಣು, ಕ್ಲೇ ತಿನ್ನುವ ಅಭ್ಯಾಸ, ಕಾಲಿನ ಸಂದುಗಳಲ್ಲಿ ನೋವು, ನಾಲಿಗೆಯಲ್ಲಿ ಸೆಳೆತ, ಕೈ ಮತ್ತು ಕಾಲುಗಳಲ್ಲಿ ಶೀತವಾಗುವುದು, ಅನಿಯಮಿತ ಹೃದಯಬಡಿತ, ತಲೆನೋವು ಕಂಡುಬರುತ್ತದೆ.
ಸಂಪೂರ್ಣ ರಕ್ತಪರೀಕ್ಷೆ ಮಾಡಿಸಬೇಕು. ಇದರಲ್ಲಿ ಕೆಂಪು ರಕ್ತಕಣ, ಹಿಮೋಗ್ಲೋಬಿನ್, ಹೆಮಟೋಕ್ರಿಟ್, ಪ್ಲೇಟ್ಲೆಟ್ಸ್ ಪರೀಕ್ಷೆ ಮಾಡಿಸಬೇಕು. ಕಬ್ಬಿಣಾಂಶ ಕೊರತೆ ಇರುವ ಅನೀಮಿಯಾದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ತುಂಬ ಕಡಿಮೆ ಇರುತ್ತದೆ. ರಕ್ತಕಣಗಳು ಸಾಮಾನ್ಯ ಗಾತ್ರಕ್ಕಿಂತ ಸಣ್ಣದಾಗಿರುತ್ತದೆ. ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಂತರಿಕ ರಕ್ತಸ್ರಾವದ ಪರೀಕ್ಷೆ ಮಾಡಬೇಕು. ಪೆಲ್ವಿಕ್ ಅಲ್ಟ್ರಾಸೌಂಡ್, ಕರುಳಿನ ಸ್ಕ್ಯಾನಿಂಗ್, ಗರ್ಭಕೋಶದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಬ್ಬಿಣಾಂಶ ಕೊರತೆಯಿಂದ ಬರುವ ಅನೀಮಿಯಾ ತೀರಾ ಅಪಾಯಕಾರಿಯೇನಲ್ಲ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಹೃದಯ ವೈಫಲ್ಯ ಮತ್ತು ಹಿಗ್ಗಲಿಸಿದ ಹೃದಯ ಸಮಸ್ಯೆ ಉಂಟಾಗಬಹುದು.
ಗರ್ಭಿಣಿಯಾದಾಗ, ಮಗು ಹೆರುವ ಸಂದರ್ಭದಲ್ಲಿ, ಡಯಟ್ ಸಮಸ್ಯೆ, ಆಗಾಗ ರಕ್ತದಾನ ಮಾಡುವವರಲ್ಲಿ, ಪುಟ್ಟ ಮಗು ಮತ್ತು ಮಕ್ಕಳಲ್ಲಿ, ಅವಧಿಪೂರ್ವ ಜನಿಸಿದ ಮಗುವಿನಲ್ಲಿ ಕಬ್ಬಿಣಾಂಶ ಕೊರತೆಯಿಂದ ಅನೀಮಿಯಾ ಬರುತ್ತದೆ.
ಕಬ್ಬಿಣಾಂಶ ಕೊರತೆಯಿಂದ ಬರುವ ಅನೀಮಿಯಾ ಅತ್ಯಂತ ಸಾಮಾನ್ಯ ಪ್ರಕಾರವಾಗಿದ್ದು, ದೇಹದಲ್ಲಿ ಕಬ್ಬಿಣಾಂಶ, ಖನಿಜಾಂಶಗಳ ಕೊರತೆಯಿದ್ದರೆ ಈ ಅನೀಮಿಯಾ ಬರುತ್ತದೆ. ದೇಹಕ್ಕೆ ಕಬ್ಬಿಣಾಂಶದ ಅಗತ್ಯವಿದ್ದು, ಇದು ಪ್ರೊಟೀನ್ ಅನ್ನು ಹಿಮೋಗ್ಲೋಬಿನ್ ಅನ್ನು ದೇಹಕ್ಕೆ ಆಮ್ಲಜನಕದ ಮೂಲಕ ರಕ್ತಕಣಗಳಿಗೆ ಸರಬರಾಜು ಮಾಡುತ್ತದೆ. ರಕ್ತಕಣಗಳು ಮತ್ತು ಸ್ನಾಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿಮೋಗ್ಲೋಬಿನ್ ಅಗತ್ಯ.
ಮಹಿಳೆಯರಲ್ಲಿ, ಗರ್ಭಿಣಿಯರಲ್ಲಿ, ಋತುಸ್ರಾವದ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಸಮಸ್ಯೆ ಅನುಭವಿಸುವ ಮಹಿಳೆಯರಲ್ಲಿ ಕಬ್ಬಿಣಾಂಶ ಕೊರತೆಯ ಅನೀಮಿಯಾ ಕಾಡುತ್ತದೆ. ಆಹಾರ ಪದ್ಧತಿಯಲ್ಲಿ ಏರುಪೇರು ಅಥವಾ ಕಡಿಮೆ ಪೌಷ್ಟಿಕಾಂಶವಿರುವ ಆಹಾರ ಸೇವನೆಯಿಂದಲೂ ಕಬ್ಬಿಣಾಂಶ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಕಬ್ಬಿಣಾಂಶವಿರುವ ಆಹಾರ ಮತ್ತು ಇದಕ್ಕೆ ಪೂರಕವಾದ ಔಷಧಿಗಳಿಂದ ಈ ಕೊರತೆ ಮತ್ತು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಗರ್ಭಿಣಿಯರಲ್ಲಿ ಕಬ್ಬಿಣಾಂಶ ಕೊರತೆ ಇದ್ದರೆ ಮಗು ಅವಧಿ ಪೂರ್ವವಾಗಿ (ಪ್ರಿಮೆಚ್ಯೂರ್) ಆಗಿ ಹುಟ್ಟಬಹುದು, ಇಲ್ಲವೇ ಮಗು ಕಡಿಮೆ ತೂಕದ್ದಾಗಿರಬಹುದು. ಇದಕ್ಕಾಗಿ ಗರ್ಭಿಣಿಯರಿಗೆ ಕಬ್ಬಿಣಾಂಶವಿರುವ ಮಾತ್ರೆಗಳನ್ನು ವೈದ್ಯರು ಸಲಹೆ ಮಾಡುತ್ತಾರೆ. ಮಾಂಸ, ಮೊಟ್ಟೆ, ಹಸಿರು ತರಕಾರಿ, ಸೊಪ್ಪು ಮುಂತಾದವುಗಳಲ್ಲಿ ಅತೀ ಹೆಚ್ಚು ಕಬ್ಬಿಣಾಂಶವಿದೆ. ಗರ್ಭಿಣಿಯರಿಗೆ ಮತ್ತು ಪುಟ್ಟ ಮಕ್ಕಳಿಗೆ ಕಬ್ಬಿಣಾಂಶ ಅತಿ ಹೆಚ್ಚು ಅಗತ್ಯವಿದೆ. ಮಹಿಳೆಯರಲ್ಲಿ ಋತುಸ್ರಾವದ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವ ಆಗುವ ಕಾರಣ ಕಬ್ಬಿಣಾಂಶದ ಕೊರತೆ ಕಾಡುತ್ತದೆ. ಆಂತರಿಕ ರಕ್ತಸ್ರಾವದಿಂದಲೂ ಈ ಕೊರತೆ ಕಂಡುಬರುತ್ತದೆ. ಹೊಟ್ಟೆಯಲ್ಲಿ ಹುಣ್ಣು, ಪಾಲಿಪ್ಸ್, ಕರುಳಿನಲ್ಲಿ ತೊಂದರೆ, ಕಾಲೊನ್ ಕ್ಯಾನ್ಸರ್, ಪ್ರತಿನಿತ್ಯ ನೋವು ನಿವಾರಕ ಔಷಧಿ (ಆಸ್ಪಿರಿನ್) ತೆಗೆದುಕೊಳ್ಳುವುದರಿಂದ ಆಂತರಿಕ ರಕ್ತಸ್ರಾವ ಉಂಟಾಗುತ್ತದೆ.
ಕಬ್ಬಿಣಾಂಶ ಕೊರತೆ ನಿವಾರಣೆಗೆ ಎಲ್ಲ ತರದ ಸೊಪ್ಪುಗಳು (ಪಾಲಕ್, ಮೆಂತೆ, ಸಬ್ಬಸಿಗೆ, ಹರಿವೆ, ದಂಟು, ನುಗ್ಗೆ ಸೊಪ್ಪು, ಬಸಳೆ) ಅದರಲ್ಲೂ ಚಕ್ರಮುನಿ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ತರಕಾರಿಗಳಲ್ಲಿ ಈರುಳ್ಳಿ, ಬದನೆಕಾಯಿ, ಗೋರಿಕಾಯಿ, ಬೀಟ್ರೂಟ್, ಬೀನ್ಸ್, ಮೂಲಂಗಿ ಧಾರಾಳವಾಗಿ ಸೇವಿಸಬಹುದು. ಕೆಲವು ತರಕಾರಿಗಳನ್ನು ಹಸಿಯಾಗಿಯೂ ಇನ್ನು ಕೆಲವನ್ನು ಬೇಯಿಸಿಯೂ ತಿನ್ನಬಹುದು. ಹಣ್ಣುಗಳಲ್ಲಿ ಸೀಬೆ, ಸೇಬು, ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಮಾವಿನಹಣ್ಣು, ಬಾಳೆಹಣ್ಣು, ಅಂಜೂರ, ಒಣಹಣ್ಣುಗಳು, ಒಣದ್ರಾಕ್ಷಿ, ಖರ್ಜೂರ, ಬಾದಾಮಿ ಮಕ್ಕಳಿಗೆ ಯಥೇಚ್ಛವಾದ ಕಬ್ಬಿಣಾಂಶ ಸಿಗುತ್ತದೆ. ಜೇನುತುಪ್ಪ ದಿನನಿತ್ಯ ಆಹಾರದಲ್ಲಿ ಸೇವಿಸುತ್ತಾ ಬಂದರೆ ಕಬ್ಬಿಣಾಂಶ ಕೊರತೆ ನೀಗಿಸಬಹುದು. ಬೆಲ್ಲ ಮತ್ತು ಕಬ್ಬಿನ ರಸದಲ್ಲಿ ಉತ್ತಮ ಕಬ್ಬಿಣಾಂಶ ಸಿಗುತ್ತದೆ. ರಾಗಿಯನ್ನೂ ದಿನನಿತ್ಯ ಊಟದ ಒಂದು ಭಾಗವಾಗಿ ಬಳಸಿದರೆ ಒಳ್ಳೆಯದು.
ಮಾಂಸಾಹಾರಿಗಳಾಗಿದ್ದರೆ ಮೀನು, ಕೆಂಪು ಮಾಂಸ (ರೆಡ್ ಮೀಟ್) ಕಾಲುಸೂಪು ಸೇವಿಸಬಹುದು. ಕಿವಿ ಹಣ್ಣು, ಸ್ಟ್ರಾಬೆರಿ, ದ್ರಾಕ್ಷಿ, ಪಪ್ಪಾಯಿ, ಅನಾನಸ್, ಮಾವಿನಹಣ್ಣುಗಳಲ್ಲಿ ಕಬ್ಬಿಣಾಂಶದ ಜತೆಗೆ ವಿಟಮಿನ್ ಸಿ ಯೂ ಸಿಗುತ್ತದೆ. ಮೀನು, ಮೊಟ್ಟೆ, ಶೇಂಗಾ ಬೀಜದ ಉಂಡೆ, ದಾಳಿಂಬೆ ಮುಂತಾದವುಗಳಿಂದ ಕಬ್ಬಿಣಾಂಶದ ಜತೆಗೆ ಫಾಲಿಕ್ ಆ್ಯಸಿಡ್ ಕೂಡ ಸಿಗುತ್ತದೆ.
ಮೂಲ : ಡಾ. ವಸುಂಧರಾ ಭೂಪತಿ,ಆಯುರ್ವೇದ ತಜ್ಞೆ
ಕೊನೆಯ ಮಾರ್ಪಾಟು : 7/4/2020
ವ್ಯಕ್ತಿಯ ದೇಹದ ರಕ್ತದಲ್ಲಿ ನಾರ್ಮಲ್‌ಗಿಂತ ಕಡಿಮೆ ಕೆಂಪು ರ...