ಪ್ರಸ್ತಾವನೆ
ರಾಷ್ಟೀಯ ಗ್ರಾಮೀಣ ಆರೋಗ್ಯ ಅಭಿಯಾನ ಹಿನ್ನಲೆ
ಆರೋಗ್ಯ ಪಡೆಯುವುದು ಸಮುದಾಯದ ಹಕ್ಕಾಗಿದ್ದರೂ ದೇಶದ ಗ್ರಾಮೀಣ ಆರೋಗ್ಯ ಪರಿಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಆರೋಗ್ಯ ಸೇವೆಯ ವ್ಯವಸ್ಥೆ ಸುಧಾರಿಸಬೇಕಾಗಿದೆ, ಮುಂದುವರಿಯಬೇಕಾಗಿದೆ. ವಿವಿಧ ಸಂಸ್ಥೆಗಳು ಮತ್ತು ಕಾರ್ಯಕ್ರಮಗಳನ್ನು ಸ್ವಮನ್ವಯಗೊಳಿಸಬೇಕಾಗಿದೆ. ಸಮುದಾಯ ಮತ್ತು ಸರ್ಕಾರದ ಇಚ್ಛಾಶಕ್ತಿ ಹಾಗೂ ಭಾಗವಹಿಸುವುದನ್ನು ಪ್ರೇರೇಪಿಸಬೇಕಾಗಿದೆ ಹಾಗೂ ಪ್ರೋತ್ಸಾಹಿಸಬೇಕಾಗಿದೆ. ಇದಕ್ಕಾಗಿ ರೂಪುಗೊಂಡ ಆಂದೋಲನವೇ ರಾಷ್ಟೀಯ ಗ್ರಾಮೀಣ ಆರೋಗ್ಯ ಅಭಿಯಾನ.
ಅಭಿಯಾನ ಹೇಗೆ ಬಂತು?
- ಆರೋಗ್ಯ ಸೇವೆ ಉತ್ತಮವಾಗಿ ಇರುವ ಕಡೆ ಜನಸಂಖ್ಯೆ ಬೆಳವಣಿಗೆ ಇಳಿಮುಖವಾಗಿದೆ. ಆರೋಗ್ಯ ಸೇವೆ ಉತ್ತಮವಾಗಿ ಇಲ್ಲದ ಕಡೆ ಜನಸಂಖ್ಯೆ ಬೆಳವಣಿಗೆ ಏರಿಕೆಯಾಗಿದೆ. ಇದು 2001ರ ಜನಗಣತಿಯಿಂದ ತಿಳಿದು ಬಂದಿದೆ. ಏಕೆ?(ಉತ್ತಮ ಆರೋಗ್ಯ ಸೇವೆಗಳಿದ್ದಲ್ಲಿ ಶಿಶು ಮರಣ ಸಂಖ್ಯೆ ಕಡಿಮೆಯಾಗುತ್ತದೆ, ಜನಗಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತದೆ, ಜಾಗೃತಿ ಮೂಡುತ್ತದೆ ಹಾಗೂ ಈ ಎಲ್ಲಾ ಕಾರಣಗಳಿಗೆ ಜನಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ.)
- ಆರೋಗ್ಯಕ್ಕಾಗಿ 1990ರಲ್ಲಿ ದೇಶದ ಒಟ್ಟು ಉತ್ಪನ್ನದಲ್ಲಿ 100 ರೂಪಾಯಿಯಲ್ಲಿ 1 ರೂಪಾಯಿ 30 ಪೈಸೆ ಮಾತ್ರ ಖರ್ಚು ಮಾಡಿದ್ದರೆ 1999ರಲ್ಲಿ ಇದು ಕೇವಲ 90 ಪೈಸೆ ಇಳಿದಿದೆ.
- ಸ್ವಚ್ಛತೆ-ಒಳಚರಂಡಿ ವ್ಯವಸ್ಥೆ, ಪೌಷ್ಠಿಕ ಆಹಾರ ಪೂರೈಕೆ ಶುದ್ಧ ಕುಡಿಯುವ ನೀರು ಪೂರೈಕೆ, ಮುಂತಾದ ವ್ಯವಸ್ಥೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು.
- ಚಿಕಿತ್ಸಾ ಸೇವೆಗಳು ಬಡವರ ಪರವಾಗಿ ಇಲ್ಲದಿರುವುದು.
- 100 ರಲ್ಲಿ ಕೇವಲ 10 ಮಂದಿಗೆ ಮಾತ್ರ ಆರೋಗ್ಯ ವಿಮಾ ಸೌಲಭ್ಯ ಹೊಂದಿರುವುದು.
- ಆಸ್ಪತ್ರೆಗಳಿಗೆ ದಾಖಲಾದ ಭಾರತೀಯರು ಅವರ ಆದಾಯದಲ್ಲಿ 100 ರೂ.ನಲ್ಲಿ 58 ರೂ.ಗಳನ್ನು ಆಸ್ಪತ್ರೆ ವೆಚ್ಚಕ್ಕೇ ಖರ್ಚು ಮಾಡುತ್ತಿರುವುದು.
- ಚಿಕಿತ್ಸೆಗಾಗಿ ಆಸ್ಪತ್ರೆ ಸೇರುವ ಭಾರತೀಯರಲ್ಲಿ 100ಕ್ಕೆ 40 ರಷ್ಟು ಮಂದಿ ಭಾರಿ ಸಾಲ ಮಾಡುತ್ತಿರುವುದು.
- ಆಸ್ಪತ್ರೆ ಸೇರುವ ಭಾರತೀಯರಲ್ಲಿ 100ಕ್ಕೆ 25 ಮಂದಿ ಬಡತನ ರೇಖೆಗಿಂತ ಕೆಳಗೆ ಜಾರುತ್ತಿದ್ದಾರೆ.
- ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಮರಣ ಪ್ರಮಾಣ ಕಡಿಮೆಯಾಗದಿರುವುದು.
- ತಾಯಿ ಮತ್ತು ಶಿಶು ಮರಣ ಪ್ರಮಾಣದಲ್ಲಿ ಇಳಿಕೆ ಆಗದಿರುವುದು.
- ಎಚ್.ಐ.ವಿ / ಏಡ್ಸ್ ನಿಯಂತ್ರಣದ ಸವಾಲು ಎದುರಾಗಿರುವುದು.
- ಸರಕಾರಿ ಸೇವೆಯನ್ನು ಕೇವಲ ನೂರರಲ್ಲಿ 34 ಮಂದಿ ಮಾತ್ರ ಬಳಸುತ್ತಿರುವುದು.
- ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಮುದಾಯ ಭಾಗವಹಿಸದೇ ಇರುವುದು. ಕಾರ್ಯಕ್ರಮ ನಮ್ಮದು ಎಂಬ ಭಾವನೆ ಇಲ್ಲದಿರುವುದು.
ಮೇಲಿನ ಕಾರಣಗಳಿಂದಾಗಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಬೇರೆ ಬೇರೆ ಸಂಘಸಂಸ್ಥೆಗಳು ಒಗ್ಗೂಡಿದವು. ಜನಾರೋಗ್ಯ ಆಂದೋಲನ ರೂಪಿಸಿದವು. ಸರ್ಕಾರದ ಮೇಲೆ ಒತ್ತಡ ಹೇರಿದವು. ಇದನ್ನು ಸರಿಪಡಿಸಲು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ರೂಪುಗೊಂಡಿತು.
ಉದ್ದೇಶ
ಮೇಲಿನ ಕಾರಣಗಳಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭಗೊಂಡಿರುವುದು ಸರಿಯಷ್ಟೆ. ಇದು ಕೆಲವು ನಿರ್ದಿಷ್ಟ ಉದ್ದೇಶಗಳನ್ನು ಇಟ್ಟುಕೊಂಡಿದೆ. ಆ ಉದ್ದೇಶಗಳನ್ನು ಈಡೇರಿಸುವ ಗುರಿಗಳನ್ನು ನಿಗದಿಪಡಿಸಿಕೊಂಡಿದೆ. ಗ್ರಾಮೀಣ ಆರೋಗ್ಯ ಅಭಿಯಾನದ ಉದ್ದೇಶಗಳ ಸಾರಾಂಶ ಕೆಳಗಿನಂತಿವೆ:
- ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು.
- ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರೂ ಸೇರಿದಂತೆ ಎಲ್ಲರ ಆರೋಗ್ಯ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ತರುವುದು.
- ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯು ಎಲ್ಲರಿಗೂ ಸಿಗುವಂತೆ ಮಾಡುವುದು. ಎಲ್ಲರೂ ಅದನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.
- ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳ ನಡುವೆ ಪಾಲುದಾರಿಕೆಯನ್ನು ರೂಪಿಸುವುದು.
- ಪ್ರಾಥಮಿಕ ಆರೋಗ್ಯ ಕಾರ್ಯಕ್ರಮ ಮತ್ತು ಮೂಲ ಸೌಕರ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳು ಭಾಗವಹಿಸುವುದು. ಅಲ್ಲದೇ ಸಮುದಾಯವನ್ನು ಇದರಲ್ಲಿ ಸೇರಿಸಿಕೊಳ್ಳುವುದು.
- ಸಮತೆ ಮತ್ತು ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಅವಕಾಶ ಒದಗಿಸಿಕೊಡುವುದು.
- ಸ್ಥಳೀಯ ಆರೋಗ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗೆ ಅವಕಾಶ ಮಾಡಿಕೊಡುವುದು(ಜಿಟexibiಟiಣಥಿ)
- ವಿವಿಧ ಆರೋಗ್ಯ ಸೇವೆಗಳನ್ನು ಒಟ್ಟುಗೂಡಿಸುವುದು.
- ಸ್ಥಳೀಯ ಆರೋಗ್ಯ ಪದ್ಧತಿಯನ್ನು ವೈಜ್ಞಾನಿಕವಾಗಿ ತಿಳಿದು ಅವುಗಳನ್ನು ಉತ್ತೇಜಿಸುವುದು. ಹಾಗೂ ಬಳಸಿಕೊಳ್ಳವುದು (ಆಯುರ್ವೇದ /ಯೋಗ /ಯುನಾನಿ /ಸಿದ್ಧ /ಹೋಮಿಯೋಪತಿ) ಆದರೆ ನಕಲಿ ವೈದ್ಯರಿಂದ ಎಚ್ಚರದಿಂದಿರುವುದು.
- ಆರೋಗ್ಯ ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ (ತಾಲ್ಲೂಕು) ಆರೋಗ್ಯ ಕೇಂದ್ರಗಳನ್ನು ಬಲಪಡಿಸುವುದು.
- ಸಾರ್ವಜನಿಕರಿಗೆ ಆರೋಗ್ಯ ಸೇವೆಗಳು 100ಕ್ಕೆ 34 ಭಾಗ ಮಾತ್ರ ಬಳಕೆಯಾಗುತ್ತಿವೆ. 100ಕ್ಕೆ 100 ಮಂದಿಗೂ ಆರೋಗ್ಯ ಸೇವೆಗಳು ಸಿಗುವಂತೆ ಮಾಡುವುದು.
- ಜಿಲ್ಲಾ ಆರೋಗ್ಯ ಯೋಜನೆ ರೂಪಿಸುವುದು. ಈ ಯೋಜನೆಯಲ್ಲಿ ಒಳಚರಂಡಿ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಸೇರಿಸುವುದು.
- ರೋಗ ನಿಯಂತ್ರಣ ಯೋಜನೆಗಳನ್ನು ಬಲಪಡಿಸುವುದು.
- ಖಾಸಗಿ ಮತ್ತು ಸರಕಾರಿ ವಲಯಗಳು ಒಟ್ಟಿಗೆ ಪಾಲ್ಗೊಳ್ಳುವಂತೆ ಮಾಡಿ ಸಾರ್ವಜನಿಕ ಆರೋಗ್ಯದ ಗುರಿ ಸಾಧಿಸುವುದು.
- ಆರೋಗ್ಯಕ್ಕಾಗಿ ಹೊಸ ಹಣಕಾಸು ವ್ಯವಸ್ಥೆಯನ್ನು ಮಾಡುವುದು.
- ಇವೇ ಮೊದಲಾದ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಸಾಂಸ್ಥಿಕ ವ್ಯವಸ್ಥೆಯ ರೂಪ ಕೊಡಲು ಉದ್ದೇಶಿಸಲಾಗಿದೆ.
ಈ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ನಿರ್ದಿಷ್ಟ ಗುರಿಗಳನ್ನು ಇರಿಸಿಕೊಳ್ಳಲಾಗಿದೆ.
ಗುರಿಗಳು
- ತಾಯಿ ಮತ್ತು ಮಗುವಿನ ಮರಣದ ಪ್ರಮಾಣವನ್ನು ಇಳಿಸುವುದು.
- ಸಾಂಕ್ರಾಮಿಕ ರೋಗಗಳನ್ನು ಅಂದರೆ, ಕ್ಷಮೆ, ಮಲೇರಿಯಾ, ಡೆಂಗ್ಯು ಮುಂತಾದ ಖಾಯಲೆಗಳನ್ನು ನಿಯಂತ್ರಣ ಮಾಡುವುದು.
- ಸ್ಥಳೀಯವಾಗಿ ಉದ್ಭವಿಸಬಹುದಾದ ರೋಗಗಳನ್ನು ನಿಯಂತ್ರಿಸುವುದು.
- ಗುಣಾತ್ಮಕ ಆರೋಗ್ಯ ಸೇವೆಗಳು ಎಲ್ಲರಿಗೂ ಸಿಗುವಂತೆ ಸೌಲಭ್ಯಗಳನ್ನು ಹೆಚ್ಚು ಮಾಡುವುದು.
- 1000 ಜನಸಂಖ್ಯೆಗೆ ಒಬ್ಬರಂತೆ ಗ್ರಾಮಮಟ್ಟದಂತೆ ‘ಆಶಾ’ ಆರೋಗ್ಯ ಕಾರ್ಯಕರ್ತೆಯರನ್ನು ನೇಮಿಸುವುದು. ಅವರೊಂದಿಗೆ ಅಗತ್ಯವಾಗಿ ಸಾಮಾನ್ಯವಾಗಿರುವ ಔಷಧಗಳ ಕಿಟ್ ಇರುವಂತೆ ಮಾಡುವುದು.
- ಎಲ್ಲಾ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳಾದ ವೈದ್ಯರು ಔಷಧಿ, ದಾದಿಯರು, ವಾಹನ ಸೌಕರ್ಯ, ಸಂಪರ್ಕ ಸಾಧನಗಳನ್ನು ಒದಗಿಸುವುದು. ಸಕಾಲದಲ್ಲಿ ಸಾರ್ವಜನಿಕರಿಗೆ ಈ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡುವುದು.
- ಪಂಚಾಯಿತಿ ರಾಜ್ ಸಂಸ್ಥೆಗಳು, ಸಮುದಾಯವೇ ಆರೋಗ್ಯ ಕಾರ್ಯಕ್ರಮಗಳ ಜವಾಬ್ದಾರಿ ವಹಿಸುವ ಅವಕಾಶಗಳನ್ನು ಒದಗಿಸುವುದು ಹಾಗೂ ಉಸ್ತುವಾರಿಯನ್ನು ಮಾಡುವ ಅವಕಾಶ ನೀಡುವುದು.
- ಪ್ರತಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯು ಆ ಗ್ರಾಮದ ಆರೋಗ್ಯ ಯೋಜನೆಯನ್ನು ತಯಾರಿಸಿ ಅದನ್ನು ಜಾರಿಗೊಳಿಸುವ ಅವಕಾಶ ಒದಗಿಸಿಕೊಡುವುದು.
ಈ ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಲು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವೆಲ್ಲವೂ ಕಾಲಮಿತಿಯೊಳಗೇ ಆಗಬೇಕಾಗಿದೆ. 2010ರಲ್ಲಿ ಇಂತಿಷ್ಟು ಕಾರ್ಯಗಳು, 2012ರೊಳಗೆ ಇಂತಿಷ್ಟು ಸೌಲಭ್ಯಗಳು, 2015ರೊಳಗೆ ಎಲ್ಲರಿಗೂ ಆರೋಗ್ಯದ ಎಲ್ಲಾ ರೀತಿಯ ಸೌಲಭ್ಯಗಳು ಸಿಗುವಂತೆ ಮಾಡುವುದೇ ಗುರಿಯಾಗಿದೆ. ಈ ಗುರಿ ಉದ್ದೇಶಗಳನ್ನು ಈಡೇರಿಸಲು ಸಾಂಸ್ಥಿಕ ರೂಪಕೊಡಲಾಗಿದೆ.
ರಚನೆ
ಈ ಅಭಿಯಾನದ ಸಾಂಸ್ಥಿಕ ರಚನೆಗಳಲ್ಲಿ ಮುಖ್ಯ ಘಟಕ ಎಂದರೆ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಇದು ಸಮುದಾಯವೇ ಆರಿಸಿದ ಸಮಿತಿಯಾಗಿರುತ್ತದೆ.
- ‘ಆಶಾ’ ಯೋಜನೆಯ ಅನುಷ್ಠಾನವನ್ನು ಗ್ರಾಮ ಪಂಚಾಯಿತಿಯ ಮೂಲಭೂತ ಸೌಕರ್ಯ ಸ್ಥಾಯಿ ಸಮಿತಿ ನೋಡಿಕೊಳ್ಳುತ್ತದೆ.
- ಸಾರ್ವಜನಿಕ ಆಸ್ಪತ್ರೆಗಳನ್ನು ಸಮುದಾಯವೇ ನಿರ್ವಹಿಸಲು ಸಾಧ್ಯವಾಗುವಂತೆ ಆಸ್ಪತ್ರೆ ನಿರ್ವಹಣಾ ಸಮಿತಿ / ಆರೋಗ್ಯ ರಕ್ಷಾ ಸಮಿತಿ ಇರುತ್ತದೆ.
- ಜಿಲ್ಲಾ ಪಂಚಾಯ್ತಿಯ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಅಭಿಯಾನ ಸಮಿತಿ ಇರುತ್ತದೆ. ಇದರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಯೋಜಕರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಖಾಸಗಿ ವೃತಿಪರರ ಪ್ರತಿನಿಧಿಗಳು ಇದರಲ್ಲಿ ಸದಸ್ಯರಾಗಿರುತ್ತಾರೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಕಾರ್ಯ ಯೋಜನಾ ಸಮಿತಿ ಇರುವುದು ಇದು ಈ ಅಭಿಯಾನದ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತದೆ.
- ರಾಜ್ಯ ಮಟ್ಟದ ಆರೋಗ್ಯ ಕಾರ್ಯಪಡೆ ಇರುತ್ತದೆ. ಇದಕ್ಕೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಆರೋಗ್ಯ ಸಚಿವರು ಸಹ ಅಧ್ಯಕ್ಷರಾಗಿರುತ್ತಾರೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರು ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ. ಈ ಕಾರ್ಯಪಡೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಖಾಸಗಿ ವೃತ್ತಿಪರರ ಪ್ರತಿನಿಧಿಗಳು ಸದಾ ಇರುತ್ತಾರೆ.
- ರಾಷ್ಟ್ರ ಮಟ್ಟದಲ್ಲಿ ಸಂಚಲನಾ ತಂಡ ಇರುವುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇದರ ಮುಖ್ಯಸ್ಥರು, ಈ ತಂಡದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರು, ಪಂಚಾಯಿತಿ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಸಚಿವರು, ಸಾರ್ವಜನಿಕ ಆರೋಗ್ಯ ತಜ್ಞರು ಸದಸ್ಯರಾಗಿರುತ್ತಾರೆ. ಈ ತಂಡವು ರಾಷ್ಟ್ರೀಯ ಆರೋಗ್ಯ ಅಭಿಯಾನದ ನೀತಿಗಳನ್ನು ರೂಪಿಸುವುದು ಮತ್ತು ಸಲಹೆ ಮಾರ್ಗದರ್ಶನ ನೀಡುತ್ತದೆ.
ಸಮಿತಿಗಳ ಉದ್ದೇಶ
- ಗ್ರಾಮ ಆರೋಗ್ಯ ಸಮಿತಿಗಳು ಸ್ಥಳೀಯ ಗ್ರಾಮಪಂಚಾಯಿತಿ ಜೊತೆ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದು.
- ಸಮುದಾಯದಲ್ಲಿ ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವುದು.
- ಆರೋಗ್ಯ ಸೇವೆಯಲ್ಲಿ ಜನರು ಭಾಗವಹಿಸಿದರೆ ಅದರ ಉಪಯೋಗವನ್ನು ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯವಾಗುತ್ತದೆ.
- ಹೆಚ್.ಐ.ವಿ/ಏಡ್ಸ್ ಮತ್ತಿತರ ಸೋಂಕು ತಡೆಗಟ್ಟು ಕೆಲಸದಲ್ಲಿ ಜನರ ವಿಶ್ವಾಸ ಮತ್ತು ಪಾಲುದಾರಿಕೆ ಇರುವುದು ಮತ್ತು ಜನರಲ್ಲಿ ಇರುವ ತಪ್ಪು ತಿಳುವಳಿಕೆಗಳನ್ನು ದೂರ ಮಾಡುವುದು ತುಂಬಾ ಅಗತ್ಯ. ಇದಕ್ಕೆ ಮಹಿಳೆಯರು, ಜನಸಾಮಾನ್ಯರು, ಆಸಕ್ತಿ ಇರುವವರು, ಊರಿನ ಪ್ರಮುಖ ವ್ಯಕ್ತಿಗಳು, ತಿಳುವಳಿಕೆ ಇರುವವರ ಸಹಕಾರ ಬೇಕಾಗುತ್ತದೆ.
- ಆರೋಗ್ಯ ವ್ಯವಸ್ಥೆಯಲ್ಲಿ ಜನರ ಒಡೆತನವಿದ್ದರೆ ಅವರಲ್ಲಿ ಮತ್ತು ಇಲಾಖೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಜವಾಬ್ದಾರಿ ಹುಟ್ಟುತ್ತದೆ. ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ ಮತ್ತು ಅದರ ಪರಿಣಾಮ ಉತ್ತಮವಾಗಿರುತ್ತದೆ.
- ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ತಾವೇ ಜವಾಬ್ದಾರಿ ಎಂಬ ಭಾವನೆ ಜನರಲ್ಲಿ ಬೆಳೆಯುತ್ತದೆ. ಇದರಿಂದ ಕುಂದುಕೊರತೆಗಳನ್ನು ಪ್ರಶ್ನೆ ಮಾಡುವ ಅಭ್ಯಾಸ ಬೆಳೆಯುತ್ತದೆ. ಅಲ್ಲದೇ ಸ್ವಂತ ಜವಾಬ್ದಾರಿಯೂ ಬೆಳೆಯುತ್ತದೆ.
- ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಮೂಲಕ ಜನರಿಗೆ ಸರಕಾರದಿಂದ ಸಿಗಬೇಕಾದ ಸೇವೆಗಳ ಕುರಿತು ತಿಳುವಳಿಕೆ ಮೂಡಿಸಬೇಕು. ಅವರು ಗ್ರಾಮ ಪಂಚಾಯಿತಿಯ ಮೂಲಕ ಸಂಬಂಧಪಟ್ಟ ಇಲಾಖೆಗಳ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಅವರಿಗೆ ಹಕ್ಕಾಗಿ ಸಿಗಬೇಕಾದ ಸೇವೆಗಳು ಸಿಗುತ್ತವೆ. ಜನರೇ ತಮ್ಮ ಸ್ವಂತ ಪ್ರಯತ್ನದಿಂದ ಆರೋಗ್ಯ ಪರಿಸ್ಥಿತಿಯ ಸುಧಾರಣೆ ಮಾಡಬಹುದು.
- ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯು ಕೇವಲ ಸರಕಾರವನ್ನೇ ಆಶ್ರಯಿಸಬೇಕಾಗಿಲ್ಲ. ಪಂಚಾಯಿತಿ ರಾಜ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿಯವರ ಸಹಕಾರದಿಂದ ತನ್ನ ಗ್ರಾಮದಲ್ಲಿ ಒಳ್ಳೆಯ ಆರೋಗ್ಯ ಸೇವೆ ಸಿಗುವಂತೆ ಮಾಡಲು ಸಾಧ್ಯವಿದೆ.
- ಒಂದು ಗ್ರಾಮದ ಒಟ್ಟು ಆರೋಗ್ಯ ಸುಧಾರಿಸಲು ಹಲವಾರು ಸೇವಾ ಸಂಸ್ಥೆಗಳು, ಇಲಾಖೆಗಳು ಜೊತೆಗೂಡಿ ಕೆಲಸ ಮಾಡಬೇಕು. ಇವುಗಳ ನಡುವೆ ಹೊಂದಾಣಿಕೆ ರೂಪಿಸುವುದು ಮತ್ತು ಅವರನ್ನು ಕೆಲಸ ಮಾಡುವಂತೆ ಪ್ರೇರೆಪಿಸುವುದು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗೆ ಸಾಧ್ಯವಿದೆ.
- ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಇರುವ ತಿಳುವಳಿಕೆ ಹಾಗೂ ಮುಂಜಾಗ್ರತೆಯನ್ನು ಹೆಚ್ಚಿಸುವುದು ಸುಲಭವಾಗುತ್ತದೆ.
- ಅಭಿವೃದ್ಧಿಗೂ ಆರೋಗ್ಯಕ್ಕೂ ಇರುವ ಸಂಬಂಧವನ್ನು ಜನರ ಮನಸ್ಸಿಗೆ ಮುಟ್ಟುವಂತೆ ಮಾಡಲು ಸಾಧ್ಯವಾಗುತ್ತದೆ.
- ಒಟ್ಟಿನಲ್ಲಿ ಗ್ರಾಮದಲ್ಲಿ ಆರೋಗ್ಯಕ್ಕಾಗಿ ಸಿಗುವ ಬೇರೆ ಬೇರೆ ಮೂಲಗಳ ಹಣ ಮತ್ತು ಸೌಲಭ್ಯಗಳನ್ನು ಆರೋಗ್ಯ ಸೇವೆಗೆ ಒದಗಿಸುವ ಪ್ರಯತ್ನ ಮಾಡಲು ಗ್ರಾಮ ಆರೋಗ್ಯ ಸಮಿತಿ ಅವಕಾಶ ಇರುತ್ತದೆ. ಈ ಉದ್ದೇಶಗಳಿಂದಾಗಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಪಾತ್ರ ಬಹಳ ಮುಖ್ಯವಾಗಿದೆ.
ತರಬೇತಿ ಉದ್ದೇಶ
- ಸಮುದಾಯದ ಆರೋಗ್ಯ ಸುಧಾರಣೆಯಲ್ಲಿ ಜನರ ಸಹಭಾಗಿತ್ವವನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ, ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ಸಮುದಾಯದ ಜೊತೆಗೂಡಿ ಕಾರ್ಯ ನಿರ್ವಹಿಸುವ ಅಗತ್ಯವನ್ನು ಮನವರಿಕೆ ಮಾಡುವುದು.
- ಆರೋಗ್ಯ ಸೇವೆಗಳನ್ನು ಪಡೆಯುವುದು ಸಮುದಾಯದ ಹಕ್ಕು, ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುವುದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ ಎನ್ನುವಂತಹ ವಾತಾವರಣವನ್ನು ನಿರ್ಮಿಸುವುದು.
- ಆರೋಗ್ಯ ಸೇವೆಗಳು ಮತ್ತು ವಿವಿಧ ಆರೋಗ್ಯ ಸೌಲಭ್ಯಗಳು ಸಮುದಾಯಕ್ಕೆ, ಅದರಲ್ಲೂ ಮುಖ್ಯವಾಗಿ ಮಹಿಳೆಯರು, ಮಕ್ಕಳು ಮತ್ತು ಸಮಾಜದ ದುರ್ಬಲ ವರ್ಗದ ಜನರಿಗಿ ಪರಿಣಾಮಕಾರಿಯಾಗಿ ಲಭ್ಯವಾಗದಿರುವ ಕಾರಣಗಳನ್ನು ಕಂಡುಕೊಳ್ಳುವುದು. ಪರಿಹಾರಗಳನ್ನು ಕಂಡುಕೊಳ್ಳುಲು ಸಹಾಯ ಮಾಡುವುದು.
- (ಸಮಿತಿಯ ಸದಸ್ಯರು) ಸಮುದಾಯವು ತನ್ನ ಪಾಲ್ಗೊಳ್ಳುವಿಕೆಯ ಮೂಲಕ ಆರೋಗ್ಯ ಸೇವೆಗಳ ಪೂರೈಕೆಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವಂತೆ ಮಾಡುವಲ್ಲಿ ಸಂವಿಧಾನಬದ್ಧ ವೇದಿಕೆಯಾದ ಗ್ರಾಮ ಸಭೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಪ್ರೇರೆಪಿಸುವುದು.
- ಅಭಿಯಾನದ ಉದ್ದೇಶಿತ ಆಶಯ, ಗುರಿ, ಸಾಂಸ್ಥಿಕ ರಚನೆ ಮತ್ತು ಅಳವಡಿಸಿಕೊಳ್ಳಲಾಗಿರುವ ಕಾರ್ಯತಂತ್ರಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಂಡು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅಗತ್ಯವಿರುವ ಅರಿವು, ಕೌಶಲ ಹಾಗೂ ವಿಧಾನಗಳನ್ನು ಸದಸ್ಯರಿಗೆ ತಿಳಿಸುವುದು.
ಸೂಚನೆಗಳು
- ತರಬೇತಿಯನ್ನು ನಡೆಸಲು ಬರುವುದಕ್ಕೆ ಸಾಕಷ್ಟು ಪೂರ್ವಭಾವಿ ತಯಾರಿ ಮಾಡಿಕೊಂಡು ಬರುವುದು. ಈ ತಯಾರಿಗಾಗಿ ಸಾಕಷ್ಟು ಸಮಯವನ್ನು ನೀಡುವುದು.
- ತರಬೇತಿಯ ಸಂದರ್ಭದಲ್ಲಿ ನಿಮ್ಮ ಸಾಮಾನ್ಯ ನಡತೆ ಮತ್ತು ಚಲನವಲನಗಳ ಬಗ್ಗೆ ಎಚ್ಚರವಿರಲಿ.
- ತರಬೇತುದಾರರು ತಮ್ಮ ವೈಯಕ್ತಿಕ ಸೈದ್ಧಾಂತಿಕ ವಿಷಯಾಧಾರಿತ ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು. ತರಬೇತಿ ಕಾರ್ಯಕ್ರಮದ ಸುಗಮಕಾರರಾಗಿ ವಾಸ್ತವಾಂಶವನ್ನು ಮರೆಮಾಚಬೇಡಿ.
- ತರಬೇತಿಯ ಸಂದರ್ಭದಲ್ಲಿ ತರಬೇತಿ ಸಾಮಗ್ರಿಗಳ ಜೊತೆಗೆ ಸೂಕ್ತವಾದ ಪುಸ್ತಕಗಳು, ಹಿಂದಿನ ವರದಿಗಳು, ಮತ್ತು ಸಂಬಂಧಿಸಿದ ಪತ್ರಿಕಾ ಲೇಖನಗಳು ಇದ್ದರೆ ಒಳ್ಳೆಯದು.
- ಇನ್ನಿತರ ತರಬೇತುದಾರರ ಜೊತೆ ಚರ್ಚಿಸುವುದರಿಂದ ಸಂಬಂಧಿಸಿದ ಸಿಬ್ಬಂದಿಯಿಂದ ಮತ್ತು ಸಾಧ್ಯವಾದರೆ ತರಬೇತಿಯನ್ನು ರೂಪಿಸುವಲ್ಲಿ ಪಾಲ್ಗೊಂಡಿದವರಿಂದ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿ, ಇದು ತರಬೇತಿಯ ವ್ಯವಸ್ಥಿತ ನಿರ್ವಹಣೆಗೆ ಮತ್ತಷ್ಟು ಸಹಕಾರಿಯಾಗುತ್ತದೆ.
- ಇತರ ತರಬೇತುದಾರರ ಸಂಘಟಿಸುವ ತರಬೇತಿಯಲ್ಲಿ ಪಾಲ್ಗೊಂಡು, ಅವರ ತರಬೇತಿಯನ್ನು ವೀಕ್ಷಿಸಿ, ಉತ್ತಮ ಅಂಶಗಳನ್ನು ಗುರುತು ಮಾಡಿಕೊಳ್ಳಿ. ಇದು ನಿಮ್ಮ ಸಮಯ ನಿರ್ವಹಣೆ ಕೌಶಲಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
- ತರಬೇತಿ ಕಾರ್ಯಕ್ರಮವಿರುವ ಮುಂಚೆ ತರಬೇತಿ ನಡೆಯುವ ಸ್ಥಳಕ್ಕೆ ವೀಕ್ಷಣಾ ಭೇಟಿಯನ್ನು ಮಾಡಿ ವಸತಿ, ಉಟೋಪಚಾರ ಮತ್ತು ಪರಿಕರ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಿ, ಈ ಸ್ಥಳವು ನೀವು ನಡೆಸುವ ಬೇರೆ ಬೇರೆ ಚಟುವಟಿಕೆಗಳಿಗೆ ಸೂಕ್ತವಾಗಿದೆಯೇ ಎಂಬುದನ್ನು ಗಮನಿಸಿ, ಇಲ್ಲಿರುವ ಕೊರತೆಗಳ ಬಗ್ಗೆ ತರಬೇತಿ ಸಂಘಟಕರ ಗಮನಕ್ಕೆ ತಂದು ನಿವಾರಿಸುವಂತೆ ಮನವಿ ಮಾಡಿಕೊಳ್ಳಿ.
- ಮುಖ್ಯ ಅತಿಥಿಗಳು, ಸಂಪನ್ಮೂಲ ವ್ಯಕ್ತಿಗಳು, ತಜ್ಞರು ಮತ್ತು ಆಹ್ವಾನಿತರು ಇವರನ್ನು ಪರಿಚಯಿಸಿ ಸ್ವಾಗತಿಸಿ ಮತ್ತು ಇವರ ವಿಷಯ ಮಂಡನೆಯೇನಾದರೂ ನಡೆದಾಗ ಮುಗಿದ ಮೇಲೆ ವಂದನೆಗಳನ್ನು ಅರ್ಪಿಸಿ.
- ಒಂದು ಪಕ್ಷ ನಿಮಗೇನಾದರೂ ಯಾವುದೇ ಸಾಮಾಗ್ರಿ / ಲಭ್ಯವಿರುವ ವ್ಯಕ್ತಿಗಳ ಲಭ್ಯವಿರುವ ವಸ್ತುವಿನ ಸೂಕ್ತ ವ್ಯವಸ್ಥೆ ಮಾಡಲು ಸಹಾಯ ಬೇಕಾದಲ್ಲಿ ಇವರ ಜವಾಬ್ದಾರಿಯನ್ನು ನಿರ್ಧರಿಸುವ ದೃಷ್ಟಿಯಿಂದ ಸಾಕಷ್ಟು ವ್ಯವಸ್ಥಿತ ಯೋಜನೆಯನ್ನು ಮುಂಚೆಯೇ ಮಾಡಿಕೊಳ್ಳುವುದು.
- ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ಒಳಗೊಂಡಿರುವ ನಾಲ್ಕು ಮುಖ್ಯ ಅಂಶಗಳನ್ನು ಗಮನಿಸಿ. 1. ಪೂರ್ವ ತಯಾರಿ. 2. ಪ್ರಕ್ರಿಯೆ ನಿರ್ವಹಣೆ 3. ಸಂಪನ್ಮೂಲ ನಿರ್ವಹಣೆ 4. ಮಾನವ ಸಂಬಂಧಗಳ ನಿರ್ವಹಣೆ.
- ಅಭಿಪ್ರಾಯ ಭೇದ ಹೊಂದಿರುವವರನ್ನು ಕ್ರಿಯೆಗೆ ತಡೆ ಒಡ್ಡುವವರನ್ನು ಮತ್ತು ಪ್ರತಿರೋಧ ಮಾಡುವವರನ್ನು ನಿರ್ವಹಿಸುವ ಸಾಮಥ್ರ್ಯವನ್ನು ಮತ್ತು ಕೌಶಲವನ್ನು ಬೆಳೆಸಿಕೊಳ್ಳಿ. ಇಲ್ಲದಿದ್ದಲ್ಲಿ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಅಸ್ತವ್ಯಸ್ಥತೆ ಮತ್ತು ಗೊಂದಲಗಳುಂಟಾಬಹುದು.
- ತರಬೇತಿ ಸಾಮಗ್ರಿ, ಸಮಯ, ಸಾಕಷ್ಟು ಸಂಪನ್ಮೂಲಗಳಿರುವ ಬಗ್ಗೆ ಖಾತರಿಪಡಿಸಿಕೊಳ್ಳಿ ಮತ್ತು ಕುಡಿಯುವ ನೀರು, ಆಹಾರ ಪದಾರ್ಥಗಳು ಮತ್ತು ವಿದ್ಯುಚ್ಛಕ್ತಿ ಪೋಲಾಗುವುದನ್ನು ತಪ್ಪಿಸಿ.
- ತರಬೇತಿಯ ಸಂದರ್ಭದಲ್ಲಿ ಇನ್ನಿತರ ಕೆಲಸದ ಒತ್ತಡಗಳಿಂದ ದೂರವಿರಿ ಮತ್ತು ನಿಮ್ಮ ಮಾನಸಿಕ ಮನೋಬಲವನ್ನು ಹೆಚ್ಚಿಸಿಕೊಳ್ಳಿ. ಆತ್ಮವಿಶ್ವಾಸ ಹಾಗೂ ಅಚಲ ನಂಬಿಕೆಯಿಂದ ಅಧಿವೇಶನಗಳನ್ನು ಪ್ರಾರಂಭಿಸಿ.
- ಪರಸ್ಪರ ವಿಶ್ವಾಸ ಮತ್ತು ಹಸನ್ಮುಖಿ ವಾತಾವರಣವನ್ನು ಸೃಷ್ಟಿಸಿ, ಇದು ಧನಾತ್ಮಕ ಕಲಿಕೆಯ ಅನುಭವಕ್ಕೆ ಪರಿಣಾಮಬೀರುತ್ತದೆ.
- ತರಬೇತಿ ಕಾರ್ಯಕ್ರಮದ ತಯಾರಿಗಾಗಿ ಹೇರಳವಾದ ಸಮಯವನ್ನು ವ್ಯಯಮಾಡಿರಿ. ಇದು ತರಬೇತಿ ಯಶಸ್ಸಿಗೆ ಚೈತನ್ಯ ನೀಡುತ್ತದೆ. ಇನ್ನಿತರ ಸಂಪನ್ಮೂಲ ವ್ಯಕ್ತಿಗಳು ಮತ್ತು ತರಬೇತುದಾರರ ಜೊತೆ ಸಂವಾದ ನಡೆಸುವುದರಿಂದ ಪೂರ್ವ ತಯಾರಿಕೆ ಅನುಕೂಲವಾಗುತ್ತದೆ.
ಸಂಶೋಧನೆ ಮತ್ತು ನಿರೂಪಣೆ
ಪುಸ್ತಕಗಳು, ಲೇಖನಗಳು, ನೈಜ ಪ್ರಕರಣಗಳು ಮತ್ತು ಯಶೋಗಾಥೆಗಳು ಸಮುದಾಯದಲ್ಲಿ ವಾಡಿಕೆಯಲ್ಲಿರುವ ವಾಸ್ತವಾಂಶಗಳನ್ನು ಅರಿಯುವಲ್ಲಿ ಇದರ ಬಗೆಗಿನ ಜ್ಞಾನವನ್ನು ಉನ್ನತೀಕರಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತವೆ. ಇದಲ್ಲದೆ ಸಮುದಾಯ ಮತ್ತು ಅದರ ಸಮಸ್ಯೆಗಳ ಹಿನ್ನೆಲೆಗಳನ್ನು ಅಧ್ಯಯನ ಮಾಡುವುದು ಒಳಿತು. ಇದು ತರಬೇತಿಯ ಅವಧಿಯಲ್ಲಿ ಸಹಾಯವಾಗುತ್ತದೆ.
ಸ್ವಾಗತ
ಇಲ್ಲಿ ಯಾರು ಸ್ವಾಗತಿಸಬೇಕು. ಎಂಬ ಜಿಜ್ಞಾಸೆಬೇಡ, ಇದು ನಮ್ಮ ಸ್ವಂತ ಕಾರ್ಯಕ್ರಮವೆಂಬುದನ್ನು ಅರಿಯಬೇಕು. ಆದ್ದರಿಂದ ಎಲ್ಲರನ್ನು ನಾವೇ ಸ್ವಾಗತಿಸುವುದು ಒಳಿತು. ಇದು ಸೈನಿಕ ಶಿಬಿರವಲ್ಲ, ಆದರೆ ಇದು ನಮ್ಮ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ನಮ್ಮ ಕಲಿಕೆಯ ಸ್ಥಳ ಎಂಬುದನ್ನು ಮನಗಾಣಬೇಕು. ಆದುದರಿಂದ ಶಿಬಿರಾರ್ಥಿಗಳನ್ನು ವೈಯುಕ್ತಿಕವಾಗಿ ಸ್ವಾಗತಿಸುವುದು ನಮ್ಮ ಕರ್ತವ್ಯ, ಇದರಿಂದ ಪ್ರಯಾಣದಿಂದ ಬಳಲಿರುವ ಶಿಬಿರಾರ್ಥಿಗಳ ಮನಸ್ಸಿಗೆ ಸಂತಸವನ್ನುಂಟುಮಾಡುತ್ತವೆ. ತರಬೇತಿ ನಡೆಯುವ ಸ್ಥಳವು ಶಿಬಿರಾರ್ಥಿಗಳಿಗೆ ತಮ್ಮ ಸ್ವಂತ ಮನೆಯೆಂಬ ಭಾವನೆ ರೀತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿ, ಸಾಧ್ಯವಾದರೆ ಮಹಿಳಾ ಶಿಬಿರಾರ್ಥಿಗಳಿಗೆ ಪುಟ್ಟ ಹೂವುಗಳನ್ನು ನೀಡುತ್ತಾ ಸ್ವಾಗತಿಸಿ, ಇದು ನಿಮಗೆ ಅನುಕೂಲವಾಗಬಹುದು. ಹೂವುಗಳು ಇಲ್ಲದಿದ್ದಲ್ಲಿ ನಗುನಗುತ್ತಾ ಸ್ವಾಗತಿಸಿ.
ವಾರ್ಡ್ ಸಭೆ
- ವಾರ್ಡ್ ಸಭೆ
- 6 ತಿಂಗಳಿಗೊಂದು ವಾರ್ಡ್ ಸಭೆ.
- ಕೋರಂ
- ವಾರ್ಡಿನ ಮತದಾರರ 1/10ರಷ್ಟು ಅಥವಾ 20 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು.
- ಮಹಿಳೆಯರ ಸಂಖ್ಯೆ 30% ಕಡಿಮೆ ಇಲ್ಲದಷ್ಟು.
- ಅನುಸೂಚಿತ ಜಾತಿ / ಪಂಗಡ ವ್ಯಕ್ತಿಗಳು ವಾರ್ಡ್ ಸಭೆಯಲ್ಲಿನ ಅವರ ಜನಸಂಖ್ಯೆಯ ಅನುಪಾತಕ್ಕನುಸಾರವಾಗಿ.
- ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ಆ ವಾರ್ಡಿನ ಸದಸ್ಯ ಅಥವಾ ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಿದ ಅದೇ ವಾರ್ಡಿನ ಇತರ ಸದಸ್ಯ ವಹಿಸುವುದು.
- ವಾರ್ಡ್ ಸಭೆಯ ಕಾರ್ಯಸೂಚಿಯನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು.
- ಒಂದು ವಾರಕ್ಕೆ ಕಡಿಮೆ ಇಲ್ಲದಂತೆ ಮುಂಚಿತವಾಗಿ ವಾರ್ಡ್ ಸಭೆಗೆ ಸಾಕಷ್ಟು ಪ್ರಚಾರ ನೀಡಬೇಕು.
- ವಾರ್ಡ್ ಸಭೆಯ ಪ್ರಕಾರ್ಯಗಳು
- ಅನುಷ್ಟಾನಗೊಳಿಸಬೇಕಾದ ಯೋಜನೆಗಳ ಮತ್ತು ಕಾರ್ಯಕ್ರಮಗಳ ಪ್ರಸ್ತಾಪಗಳನ್ನು ಗ್ರಾಮ ಪಂಚಾಯಿತಿಯ ಯೋಜನೆಯಲ್ಲಿ ಸೇರಿಸಿಕೊಳ್ಳಲು ಗ್ರಾಮ ಸಭೆಗೆ ಮಂಡಿಸಲು ಕಳುಹಿಸಿಕೊಡುವುದು.
- ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯನ್ನು ಸಿದ್ಧಪಡಿಸಿ ಗ್ರಾಮ ಪಂಚಾಯಿತಿಗೆ ಕಳುಹಿಸಿಕೊಡುವುದು.
- ನಿವೃತ್ತಿ ವೇತನ, ಸಬ್ಸಿಡಿಯಂತಹ ನೆರವನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಗಳ ಅರ್ಹತೆಯ ಬಗ್ಗೆ ಸತ್ಯಾಪನೆ ಮಾಡುವುದು.
- ಮುಂದಿನ 6 ತಿಂಗಳ ಅವಧಿಯ ಉದ್ದೇಶಿತ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುವುದು.
- ತೆರಿಗೆ ಸಂದಾಯ ಮಾಡಲು ಹಾಗೂ ಸಾಲ ಮರುಪಾವತಿ ಮಾಡಲು ಜನರ ಮನವೊಲಿಸುವುದು.
- ಹಿಂದಿನ ವಾರ್ಡ್ ಸಭೆಯ ತೀರ್ಮಾನಗಳ ಅನುಸರಣಾಕ್ರಮಗಳ ಮಾಹಿತಿ ಪಡೆಯುವುದು.
- ಅಭಿವೃದ್ಧಿ ಕಾಮಗಾರಿಗಾಗಿ ಸ್ವಯಂಸೇವಾ ಕಾರ್ಮಿಕರು, ಹಣ ಮತ್ತು ವಸ್ತು ರೂಪದಲ್ಲವಂತಿಕೆ ಒದಗಿಸುವುದು.
- ಸಾರ್ವಜನಿಕ ಸೌಲಭ್ಯಗಳಾದ ಬೀದಿ ದೀಪ, ನಲ್ಲಿಗಳು ಇತ್ಯಾದಿಗಳಿಗಾಗಿ ಸ್ಥಳಗಳನ್ನು ಗುರುತಿಸುವುದು.
- ನೀರು ಸರಬರಾಜು ಮತ್ತು ಬೀದಿ ದೀಪ ವ್ಯವಸ್ಥೆಗಳಲ್ಲಿ ಕೊರತೆಗಳನ್ನು ಗುರುತಿಸಿ ಪರಿಹಾರ ಸೂಚಿಸುವುದು.
- ಸ್ವಚ್ಛತೆ, ಪರಿಸರ ಮಾಲಿನ್ಯ ನಿವಾರಣೆ ಮುಂತಾದ ಸಾರ್ವಜನಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವುದು.
- ನೈರ್ಮಲ್ಯ ವ್ಯವಸ್ಥೆಗಳ ಸಂಬಂಧದಲ್ಲಿ ಗ್ರಾಮ ಪಂಚಾಯಿತಿಗೆ ನೆರವು ನೀಡುವುದು.
- ವಯಸ್ಕರ ಶಿಕ್ಷಣ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವುದು.
- ಆರೋಗ್ಯ ಕೇಂದ್ರಗಳ ಚಟುವಟಿಕೆಗಳಿಗೆ ನೆರವು ನೀಡುವುದು.
- ವಿವಿಧ ಸಮೂಹಗಳ ನಡುವೆ ಐಕ್ಯತೆ ಬೆಳೆಸುವುದು.
- ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯಗಳಿಗೆ ಬಹುಮತದ ಅಂಗೀಕಾರ.
ಗ್ರಾಮ ಸಭೆ
- ಗ್ರಾಮ ಸಭೆಯು ಕನಿಷ್ಟ 6 ತಿಂಗಳಿಗೊಮ್ಮೆ ನಡೆಯತಕ್ಕದ್ದು
- ಗ್ರಾಮ ಸಭೆಯ ಶೇ. 10ಕ್ಕಿಂತ ಕಡಿಮೆಯಿಲ್ಲದ ಸದಸ್ಯರ ಕೋರಿಕೆಯ ಮೇರೆಗೆ ವಿಶೇಷ ಸಭೆಯನ್ನು ಕರೆಯಬೇಕು
- ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ/ಉಪಾಧ್ಯಕ್ಷ/ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಿದ ಸದಸ್ಯ ವಹಿಸುವರು
- ಕೋರಂ
- ಗ್ರಾಮ ಸಭೆ ಸದಸ್ಯರ ಒಟ್ಟು ಸಂಖ್ಯೆಯ 1/10ಕ್ಕೆ ಕಡಿಮೆಯಿಲ್ಲದಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು
- ಪ್ರತಿ ವಾರ್ಡ್ ಸಭೆಯಿಂದ ಕನಿಷ್ಟ 10 ಸದಸ್ಯರು ಗ್ರಾಮ ಸಭೆಯಲ್ಲಿ ಭಾಗವಹಿಸಬೇಕು
- 30%ಕ್ಕಿಂತ ಕಡಿಮೆಯಿಲ್ಲದಷ್ಟು ಮಹಿಳೆಯರು
- ಅನುಸೂಚಿ ಜಾತಿ / ಪಂಗಡದ ವ್ಯಕ್ತಿಗಳು ಅವರ ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ
- ಗ್ರಾಮ ಪಂಚಾಯಿತಿ ಅಧ್ಯಕ್ಷರು / ಅಧ್ಯಕ್ಷರ ಅನುಪಸ್ಥಿತಿಯಲ್ಲಿ, ಉಪಾಧ್ಯಕ್ಷರು ಅಥವಾ ಸದಸ್ಯರು ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಬೇಕು
- ಗ್ರಾಮ ಸಭೆಯ ಪ್ರಕಾರ್ಯಗಳು
- ಗ್ರಾಮ ಪಂಚಾಯಿತಿಯ ವಾರ್ಷಿಕ ಯೋಜನೆಯನ್ನು ಅನುಮೋದಿಸುವುದು
- ವಾರ್ಡ್ ಸಭೆಯ ಶಿಫಾರಸ್ಸಿನ ಅನ್ವಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಸ್ತಾವನೆ ತಯಾರಿಸಿ ಆದ್ಯತೆ ನಿಗಧಿಪಡಿಸುವುದು
- ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವುದು ಮತ್ತು ಆದ್ಯತೆ ನಿಗಧಿಪಡಿಸುವುದು
- ಮತೀಯ ಸೌಹಾರ್ದವನ್ನು ಕಾಪಾಡುವುದು
- ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ನೆರವು ನೀಡುವುದು
- ಅಭಿವೃದ್ಧಿ ಕಾರ್ಯಕ್ರಮಗಳ ನಿರ್ವಹಣೆಯ ಸಂಬಂಧದಲ್ಲಿ ಮಾಹಿತಿ ಒದಗಿಸುವುದು
- ಮುಂದಿನ 6 ತಿಂಗಳುಗಳ ಅವಧಿಯಲ್ಲಿ ಮಾಡಲು ಉದ್ದೇಶಿಸಿದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುವುದು
- ಪಂಚಾಯತಿ ಪ್ರದೇಶಕ್ಕೆ ಸಂಬಂಧಸಿದಂತೆ ಗ್ರಾಮ ಪಂಚಾಯಿತಿ ತೀರ್ಮಾನಗಳು ಸೂಕ್ತವಾಗಿಯೇ ಎಂದು ಮಾಹಿತಿ ಪಡೆಯುವುದು
- ಗ್ರಾಮ ಸಭೆಯ ತೀರ್ಮಾನದ ಅನ್ವಯ ಗ್ರಾಮ ಪಂಚಾಯಿತಿಯು ಕೈಗೊಂಡ ಅನುಸರಣಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯುವುದು
- ಗ್ರಾಮ ಪಂಚಾಯಿತಿಯ ಹಿಂದಿನ ಹಣಕಾಸು ವರ್ಷದ ಲೆಕ್ಕಪತ್ರಗಳ ವಿವರಣೆ ಲೆಕ್ಕಪರಿಶೋಧನಾ ಟಿಪ್ಪಣಿ ಹಾಗೂ ಉತ್ತರಗಳನ್ನು ಮಂಡಿಸುವುದು
- ಅಭಿವೃದ್ಧಿ ಕಾಮಗಾರಿಗಾಗಿ ಸ್ವಯಂಸೇವಾ ಕಾರ್ಮಿಕರನ್ನು, ಹಣ ಮತ್ತು ವಸ್ತು ರೂಪದಲ್ಲಿ ವಂತಿಗೆ ಒದಗಿಸುವುದು, ಹಾಗೂ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದು
- ತೆರಿಗೆ ಸಂದಾಯ ಮಾಡುವಂತೆ ಹಾಗೂ ಸಾಲ ಮರುಪಾವತಿ ಮಾಡುವಂತೆ ಮನವೊಲಿಸುವುದು
- ಸಾರ್ವಜನಿಕ ಸೌಲಭ್ಯ ಯೋಜನೆಗಳಿಗಾಗಿ ಸ್ಥಳಗಳನ್ನು ಸಲಹೆ ಮಾಡುವುದು
- ನೀರು ಸರಬರಾಜು ಮತ್ತು ಬೀದಿ ದೀಪ ವ್ಯವಸ್ಥೆಯಲ್ಲಿ ಕೊರತೆಯನ್ನು ಗುರುತಿಸಿ ಪರಿಹಾರ ಸೂಚಿಸುವುದು
- ಸ್ವಚ್ಛತೆ, ಪರಿಸರ ಮಾಲಿನ್ಯ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸುವುದು
- ಅಂಗನವಾಡಿ, ಸ್ವಸಹಾಯ, ಯುವಕ ಸಂಘ ಚಟುವಟಿಕೆಗಳಿಗೆ ಸಹಕರಿಸುವುದು
- ಬಾಲಕಾರ್ಮಿಕರನ್ನು ಗುರುತಿಸಿ ಅವರ ಪುನರ್ವಸತಿಗಾಗಿ ಕ್ರಮ ಕೈಗೊಳ್ಳುವುದು
- ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿನ ಗೋಮಾಳ, ಕೆರೆ, ತೋಪು, ಬಾವಿ ಇತ್ಯಾದಿಯನ್ನು ಒಳಿಸಿ ಸಂರಕ್ಷಿಸುವುದು
- ಮಧ್ಯಪಾನ, ಮಾದಕ ವಸ್ತು ಹಾಗೂ ಜೂಜಾಟ ಕೇಂದ್ರಗಳನ್ನು ತೆರೆಯಲು ಲೈಸೆನ್ಸ್ ನೀಡದಿರುವಂತೆ ಗ್ರಾ. ಪಂ. ಗೆ ನಿರ್ದೇಶಿಸುವುದು
- ಬಜೆಟ್ಟಿನಲ್ಲಿ ಮಾಡಿದ ಏರ್ಪಾಡು, ನಿಧಿ ಹಂಚಿಕೆ, ಕಾಮಗಾರಿಗಳ ಅಂದಾಜು ಬಗ್ಗೆ ಚರ್ಚಿಸುವುದು
- ಗ್ರಾಮ ಸಭೆಯ ಅಭಿವೃದ್ಧಿ ಕಾರ್ಯಕ್ರಮ ಅನುಷ್ಟಾನಕ್ಕಾಗಿ 10ಕ್ಕೆ ಕಡಿಮೆಯಿಲ್ಲದ ಸದಸ್ಯರನ್ನು ಒಳಗೊಂಡಂತೆ ಉಪಸಮಿತಿಗಳನ್ನು ರಚಿಸಿ(ಇದರಲ್ಲಿ 50%ಕ್ಕಿಂತ ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು)(61ಎ)
- ನಿಯೋಜಿಸಲ್ಪಟ್ಟ ಅಧಿಕಾರಿ ಗ್ರಾಮ ಸಭೆಯ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು
- ಪಂಚಾಯತಿ ಜಮಾಬಂದಿ ಹಾಗೂ ಅದರ ಬಗ್ಗೆ ಕೈಗೊಂಡ ಕ್ರಮದ ಕುರಿತು ಚರ್ಚಿಸುವುದು
- ವಿಷಯಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಸದಸ್ಯರ ಬಹುಮತದಿಂದ ಅಂಗೀಕರಿಸಿ ಸಭೆಯಲ್ಲೇ ಓದಿ ದಾಖಲಿಸಬೇಕು
- ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಧಿಕಾರಿಗಳು ಅಧ್ಯಕ್ಷರು ಸೂಚನಾ ಪತ್ರ ಕಳಿಹಿಸಿದಲ್ಲಿ ಗ್ರಾಮ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು
- ನಿಯೋಜಿತ ನೋಡಲ್ ಅಧಿಕಾರಿ ಗ್ರಾಮ ಸಭೆ ನಡೆಯುವ ಬಗ್ಗೆ ಮೇಲುಸ್ತುವಾರಿ ವಹಿಸಿ, ತೆಗೆದುಕೊಂಡ ತೀರ್ಮಾನಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸಲು ಕ್ರಮವಹಿಸಬೇಕು
ಗ್ರಾಮ ಪಂಚಾಯಿತಿಯ ಪ್ರಕಾರ್ಯಗಳು
- ಪ್ರತಿ ವರ್ಷ ಶೇ.10 ರಷ್ಟು ಕುಟುಂಬಗಳಿಗೆ ಕಡಿಮೆ ಇಲ್ಲದಂತೆ ಶೌಚಗೃಹಗಳನ್ನು ಒದಗಿಸುವುದು
- ಸಾಕಷ್ಟು ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು
- ನೀರು ಪೂರೈಕೆ ಕಾಮಗಾರಿಗಳನ್ನು ನಿರ್ವಹಿಸುವುದು
- ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ಪರಿಷ್ಕರಿಸುವುದು ಮತ್ತು ವಸೂಲು ಮಾಡುವುದು
- ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು
- ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗ ನಿರೋಧಕ ಚುಚ್ಚುಮದ್ದುಗಳನ್ನು ನೀಡುವ ಕಾರ್ಯಕ್ರಮವನ್ನು ಸಾಧಿಸುವುದು
- ಜನನ ಮತ್ತು ಮರಣಗಳ ತ್ವರಿತ ನೋಂದಣಿ ಮತ್ತು ಅದನ್ನು ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು
- ನೈರ್ಮಲ್ಯ ವ್ಯವಸ್ಥೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆಯನ್ನು ಒದಗಿಸುವುದು
- ಸಾರ್ವಜನಿಕ ರಸ್ತೆಗಳ ನಿರ್ಮಾಣ, ದುರಸ್ತಿ ಮತ್ತು ನಿರ್ವಹಣೆ
- ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳ ಮೇಲಿನ ಒತ್ತುವರಿಯನ್ನು ತೆಗೆದುಹಾಕುವುದು
- ಸಾಕಷ್ಟು ರಸ್ತೆ ದೀಪಗಳನ್ನು ಒದಗಿಸುವುದು ಮತ್ತು ವಿದ್ಯುತ್ ಶುಲ್ಕವನ್ನು ನಿಯತವಾಗಿ ಸಂದಾಯ ಮಾಡುವುದು
- ಅನೈರ್ಮಲ್ಯಕರ ಗುಂಡಿಗಳನ್ನು ತುಂಬಿಸುವುದು ಮತ್ತು ಅನಾರೋಗ್ಯಕರ ಪ್ರದೇಶಗಳನ್ನು ಆರೋಗ್ಯಕರವನ್ನಾಗಿ ಮಾಡುವುದು
- ಹುಚ್ಚು ನಾಯಿಗಳನ್ನು ಮತ್ತು ಮಾಲೀಕರಿಲ್ಲದ ನಾಯಿಗಳನ್ನು ಸಾಯಿಸುವುದು
- ಸಮುದಾಯ ಆಸ್ತಿಗಳನ್ನು ನಿರ್ವಹಿಸುವುದು
- ಆನಗಣತಿ, ಬೆಳೆಗಣತಿ, ಜಾನುವಾರುಗಣತಿ, ನಿರುದ್ಯೋಗಿಗಳ ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಗಣತಿಗೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು
- ನಿರುಪಯುಕ್ತ ವಸ್ತುಗಳನ್ನು ಮತ್ತು ಗೊಬ್ಬರವನ್ನು ರಾಶಿಹಾಕಲು ವಾಸದ ಮನೆಗಳಿಂದ ದೂರದಲ್ಲಿರುವ ಜಾಗಗಖನ್ನು ಪ್ರತ್ಯೇಕವಾಗಿ ಗುರುತಿಸುವುದು
- ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು
ಸ್ಥಾಯಿ ಸಮಿತಿಗಳು
- ಉತ್ಪಾದನಾ ಸಮಿತಿ-
- ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರು
- ಕೃಷಿ ಉತ್ಪಾದನೆ
- ಪಶು ಸಂಗೋಪನೆ
- ಗ್ರಾಮಾಂತರ ಕೈಗಾರಿಕೆಗಳು
- ಬಡತನ ನಿವಾರಣಾ ಕಾರ್ಯಕ್ರಮಗಳು
- ಸೌಕರ್ಯಗಳ ಸಮಿತಿ-
- ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರು
- ಶಿಕ್ಷಣ
- ಸಾರ್ವಜನಿಕ ಆರೋಗ್ಯ
- ಲೋಕೋಪಯೋಗಿ ಕಾಮಗಾರಿಗಳು, ಇತ್ಯಾದಿ
- ಸಾಮಾಜಿಕ ನ್ಯಾಯ ಸಮಿತಿ-
- ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೇ ಅಧ್ಯಕ್ಷರು
- ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಹಿತಾಸಕ್ತಿಗೆ ಉತ್ತೇಜನ
- ಸಾಮಾಜಿಕ ಅನ್ಯಾಯ ಮತ್ತು ಶೋಷಣೆಗಳಿಂದ ಅಂತಹ ಜಾತಿಗಳನ್ನು ರಕ್ಷಿಸುವುದು
- ಮಹಿಳೆ ಮತ್ತು ಮಕ್ಕಳ ಕಲ್ಯಾಣ
- ಸ್ಥಾಯಿ ಸಮಿತಿಯು ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 3 ರಿಂದ 5 ಸದಸ್ಯರನ್ನು ಹೊಂದಿರತಕ್ಕದ್ದು
- ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ಒಬ್ಬ ಮಹಿಳಾ ಸದಸ್ಯೆ ಮತ್ತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಒಬ್ಬ ಸದಸ್ಯನು ಇರತಕ್ಕದ್ದು
- ಪ್ರತಿಯೊಂದು ಸ್ಥಾಯಿ ಸಮಿತಿ ರೈತರ ಕ್ಲಬ್‍ಗಳ ಮಹಿಳಾ ಮಂಡಳಿಗಳ ಸದಸ್ಯರನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು
- ಸ್ಥಾಯಿ ಸಮಿತಿಗಳು ಗ್ರಾಮ ಪಂಚಾಯಿತಿಯು ಅವುಗಳಿಗೆ ವಹಿಸಿಕೊಟ್ಟಿರುವ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು.
ಮೂಲ: ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ತರಬೇತಿದಾರರ ಕೈಪಿಡಿ