অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹತ್ತಿರ ಬಂದರೆ ಕೊಚ್ಚಿ ಬಿಡುತ್ತೇನೆ

ಹತ್ತಿರ ಬಂದರೆ ಕೊಚ್ಚಿ ಬಿಡುತ್ತೇನೆ

-ಡಾ. ಪ್ರಶಾಂತ್ ಎನ್.ಆರ್.

‘ಹುಚ್ಚು’ ಎಂದು ಮನೋರೋಗವನ್ನು ಅಡ್ಡಹೆಸರಿನಲ್ಲಿ ಕರೆಯು ವುದುಂಟು. ಮನೋವೈದ್ಯರು ಮನೋರೋಗವನ್ನು ‘ಹುಚ್ಚು’ ಎಂದು ಕರೆಯುವುದಿಲ್ಲ. ವಿವಿಧ ರೀತಿಯ ಮೆದುಳಿನ ರೋಗಗಳು ‘ಹುಚ್ಚು’ ವರ್ತನೆಗೆ ಕಾರಣ ಎಂದು ಮನೋವೈದ್ಯರ ಅಭಿಮತ. ‘ಹುಚ್ಚು’ ಎಂದಾಗ ವಿಚಿತ್ರ, ಹಾಸ್ಯಾಸ್ಪದ ವರ್ತನೆ ಎಂತಲೂ, ಅನಿರೀಕ್ಷಿತ, ಅಪಾಯಕಾರಿ ವರ್ತನೆ ಎಸಗಬಲ್ಲವ ಎಂತಲೂ ಈ ಪದದ ಧ್ವನಿ. ನಿಜ,  ಮನೋರೋಗಿ ತನ್ನ ವಿವೇಚನೆ ಕಳೆದುಕೊಂಡಿರುವ ಕಾರಣ ಅಪಾಯಕಾರಿ, ಹಿಂಸಾಚಾರಿ ಆಗಬಲ್ಲ ಅಥವಾ ಹಾಗೆ ಕಾಣಿಸಿಕೊಳ್ಳಬಲ್ಲ. ಸಹಜವಾಗಿಯೇ ‘ಹುಚ್ಚ’ನೊಬ್ಬ ಕೈಯಲ್ಲಿ ‘ಮಚ್ಚು’ ಹಿಡಿದು ಕಾಣಿಸಿಕೊಂಡಾಗ ಮನೆಯವರು, ಸುತ್ತಮುತ್ತಲವರು ನಡುಗಿ ಹೋಗುತ್ತಾರೆ. ಈ ಹುಚ್ಚು ಅರ್ಥಾತ್ ಮನೋರೋಗಿಯನ್ನು ಮದಿಸಿದ ಆನೆಯನ್ನು ಹಿಡಿಯಲು ‘ಖೆಡ್ಡಾ’ ತೋಡುತ್ತಿದ್ದಂತೆ,  ಉಪಾಯದಿಂದ ಹಿಡಿಯಲು ಪ್ರಯತ್ನಿಸುತ್ತಾರೆ. ಬೇರಾವ ಖಾಯಿಲೆಯಲ್ಲೂ ರೋಗಿಯನ್ನು ಹಿಡಿಯುವ ಪ್ರಮೇಯ ಬರುವುದಿಲ್ಲ. ಮನೋರೋಗದ ವಿಶೇಷ ಅದು. ಈ ಹಿಡಿಯುವ ಪ್ರಯತ್ನ ಕೆಲವು ಬಾರಿ ಅಪಾಯಕಾರಿಯಾಗಬಹುದು. ರೋಗಿಗೂ ಹಿಡಿಯಲು ಯತ್ನಿಸುವವರಿಗೂ ಈ ಕಾರ್ಯಕ್ಕೆ ವಿಶೇಷ ಚಾಣಾಕ್ಷತೆ ಬೇಕು.
ಒಂದು ದಿನ ‘ಮನೋರೋಗಿಗಳಿಗಾಗಿ ಆಂಬ್ಯುಲೆನ್ಸ್’ಗೆ ಒಂದು ಕರೆ ಬಂತು. ಒಂದು ಬಡಾವಣೆಯಲ್ಲಿರುವ ರೋಗಿಯ ತಮ್ಮ, ಹತ್ತಿರದ ವೈದ್ಯರ ಸಲಹೆ ಮೇರೆಗೆ ಆಂಬ್ಯುಲೆನ್ಸ್ ಸಿಬ್ಬಂದಿಯ ಸಹಾಯ ಯಾಚಿಸಿದರು. 42 ವರ್ಷದ ಸ್ನಾತಕೋತ್ತರ ಪದವೀಧರನಾದ ತಮ್ಮ ಅಣ್ಣ ಕಳೆದ 8-10 ವರ್ಷಗಳಿಂದ ಮನೋರೋಗಿ ಎಂತಲೂ, ಕೆಲವು ತಿಂಗಳಿಂದ ಆತ ಮಾತ್ರೆ ಸೇವನೆ ನಿಲ್ಲಿಸಿಬಿಟ್ಟಿದ್ದು, ಮತ್ತೆ ಅತೀ ಕೋಪಿಷ್ಠವಾಗಿ ಮನೆಯವರಿಗೆಲ್ಲ ಹೊಡೆದು ಬಡಿದು ಮಾಡುತ್ತಾನೆಂದು ಅವರ ದೂರು. ಆಂಬ್ಯುಲೆನ್ಸ್ ಸಹಾಯದಿಂದ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕೆಂದು ಅವರ ಯೋಜನೆ.
ಫೋನಿನಲ್ಲಿ ಈ ಬೇಡಿಕೆ ಸ್ವೀಕರಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ರೋಗಿಯ ವಿಳಾಸಕ್ಕೆ ತಲುಪಿದರು. ಬಹಳ ಹೆದರಿದ್ದಂತೆ ಕಂಡು ರೋಗಿಯ ತಮ್ಮ, ತಂದೆ, ತಾಯಿ ಪಿಸುಮಾತಿನಲ್ಲಿ ಸಿಬ್ಬಂದಿಗೆ ರೋಗಿಯು ಚಾಕು, ಕತ್ತರಿ, ಲಾಂಗುಗಳನ್ನು ಇಟ್ಟುಕೊಂಡಿದ್ದಾನೆಂದೂ, ‘ಹತ್ತಿರ ಬಂದರೆ ಕೊಚ್ಚಿಬಿಡುತ್ತೇನೆಂದು’ ಹೆದರಿಸುತ್ತಿದ್ದಾನೆಂದೂ ತಿಳಿಸಿದರು. ಸಿಬ್ಬಂದಿಯೂ ಒಂದು ಕ್ಷಣ ಅಧೀರರಾದರು. ಆದರೂ ಕರ್ತವ್ಯನಿಷ್ಠೆಯಿಂದ ಮನೆಯವರು ತೋರಿಸಿದ ಕೊಠಡಿಯ ಒಳಗೆ ಕಿಟಕಿಯಲ್ಲಿ ಬಗ್ಗಿ ನೋಡಿದರೆ ಅಲ್ಲಿನ ದೃಶ್ಯ ಕಂಡು ದಂಗಾದರು. ಸುಮಾರು 6 ಅಡಿ ಎತ್ತರದ, 120-130 ಕೆ.ಜಿ. ತೂಕದ ಅಜಾನುಬಾಹು, ದೈತ್ಯಾಕಾರದ ಮನುಷ್ಯ ಕೈಯಲ್ಲಿ ದರ್ಜಿಗಳು ಬಳಸುವ ದಪ್ಪ ಕತ್ತರಿ ಇಟ್ಟುಕೊಂಡು ಬೀರುವಿನೊಳಗಿದ್ದ ಎಲ್ಲಾ ಬಟ್ಟೆಗಳನ್ನೂ (ಶರ್ಟ್, ಪ್ಯಾಂಟ್, ಸೀರೆ, ರವಿಕೆ ಸೇರಿದಂತೆ) ಅಂಗೈ ಅಗಲಕ್ಕೆ ಚೌಕಾಕಾರವಾಗಿ ಕತ್ತರಿಸುತ್ತಾ ಕುಳಿತಿದ್ದಾನೆ! ಕತ್ತರಿಸಿದ ತುಂಡುಗಳನ್ನು ಬಿಸಾಡುತ್ತಿದ್ದಾನೆ. ಹತ್ತಿರದಲ್ಲೇ ಮಚ್ಚು, ಲಾಂಗ್‌ಗಳನ್ನೂ ಇಟ್ಟುಕೊಂಡಿದ್ದಾನೆ. ಈ ವ್ಯಕ್ತಿಯನ್ನು ಹಿಡಿಯುವುದಾದರೂ ಹೇಗೆ? ಆಸ್ಪತ್ರೆಗೆ ಸಾಗಿಸುವುದು ಹೇಗೆ? ಎಂದು ಚಿಂತಿಸಿದರು. ಪೊಲೀಸರ ಸಹಾಯ ಪಡೆಯಲು ನಿರ್ಧರಿಸಿ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ತಕ್ಷಣಕ್ಕೆ ಇಬ್ಬರು ಪೇದೆಗಳೇನೋ ಬಂದರು. ಆದರೆ ಈ ದೃಶ್ಯ ಕಂಡು ಅವರೂ ಭಯಗೊಂಡರು. ಕೊನೆಗೆ ಪೊಲೀಸ್ ಪೇದೆಗಳಿಗೆ ಆಂಬ್ಯುಲೆನ್ಸ್ ಸಿಬ್ಬಂದಿ ಧೈರ್ಯ ಹೇಳಿ ತಾವು ಮುಂದುವರೆದು ಕಿಟಕಿಯಿಂದಲೇ ರೋಗಿಯೊಡನೆ ಮಾತಾಡಲು ಶುರು ಮಾಡಿದರು. ರೋಗಿ ಬಹಳ ದಿನದಿಂದ ಆಸ್ಪತ್ರೆಗೆ ಬರದಿರುವುದರಿಂದ ತಾವೇ ವಿಚಾರಿಸಲು ಬಂದಿರುವುದಾಗಿ, ಆಸ್ಪತ್ರೆಗೆ ಬಂದರೆ ರೋಗಿಗೇ ಹಿತವೆಂದು ನಯ, ವಿನಯವಾಗಿ ಮಾತನಾಡಿದರು. ಪ್ರಾರಂಭದಲ್ಲಿ ‘ನನಗೇನಾಗಿದೆ, ನಾನ್ಯಾಕೆ ಆಸ್ಪತ್ರೆಗೆ ಬರಬೇಕು, ಬರುತ್ತೇನೆ, ಮೊದಲು ಇಲ್ಲಿಂದ ಹೊರಡಿ ಇಲ್ಲದಿದ್ದರೆ ಕೊಚ್ಚಿ ಬಿಡುತ್ತೇನೆ’ ಎಂದು ಕೂಗಾಡುತ್ತ ಆಗಾಗ ಮಚ್ಚನ್ನು ಸಿಬ್ಬಂದಿಯೆಡೆಗೆ ಝಳಪಿಸುತ್ತಿದ್ದ ವ್ಯಕ್ತಿ ಕ್ರಮೇಣ ಇವರ ನಯ, ವಿನಯಕ್ಕೆ ತಣ್ಣಗಾಗುತ್ತಾ ಬಂದ.
ನಯವಾಗಿ ಮಾತನಾಡುತ್ತಲೇ, ಅವನ ಮನವೊಲಿಸಿ, ಬಾಗಿಲು ತೆಗೆಸಿ ಸಿಬ್ಬಂದಿ ಒಳಹೋಗಲು ನಲವತ್ತು ನಿಮಿಷಗಳಾದವು! ಎದೆ ಢವಗುಟ್ಟುತ್ತಿದ್ದರೂ ಕರ್ತವ್ಯನಿಷ್ಠೆಯಿಂದ ಒಳ ಹೋದ ಸಿಬ್ಬಂದಿ ಅವನು ಮಾತನಾಡುತ್ತಲೇ ಇರುವಾಗ ಸಮಯ ಹೊಂಚು ಹಾಕಿ ಅವನನ್ನು ಹಿಡಿದುಕೊಂಡು ಬಿಟ್ಟರು. ಒಮ್ಮೆ ಆಂಬುಲೆನ್ಸ್ ಸಿಬ್ಬಂದಿ ಅವನನ್ನು ಹಿಡಿದದ್ದೇ, ಪೊಲೀಸರು, ಇತರರೂ ಮುನ್ನುಗ್ಗಿ ಅವನನ್ನು ಕೈ-ಕಾಲು ಹಿಡಿದುಕೊಂಡು ಬಿಟ್ಟರು. ತನ್ನೆಲ್ಲ ಬೆದರಿಕೆಗಳನ್ನೂ ಮೀರಿ ತನ್ನನ್ನು ನಿಗ್ರಹಿಸಿ ಸಿಬ್ಬಂದಿಯ ಹಿಡಿತಕ್ಕೆ ಆ ದೈತ್ಯನೂ ಬೆದರಿ ಹೋದ. ಅವನನ್ನು ಹಿಡಿದು ಕಟ್ಟಿ ಹಾಕಿ, ಅವನ ಆಯುಧಗಳನ್ನು ದೂರಕ್ಕೆ ತಳ್ಳಿ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು!  ತಾನು ಇನ್ನೇನೂ ಮಾಡಲಾರೆನೆಂದು ಅರಿತು ಆ  ರೋಗಿ ‘ ಬಿಟ್ಟು ಬಿಡಿ ಸಾರ್ ನಾನೇ ಆಸ್ಪತ್ರೆಗೆ ಬರುತ್ತೇನೆ’ ಎಂದು ಬೇಡಲಾರಂಭಿಸಿದ. ಎಚ್ಚರಿಕೆಯಿಂದ ಅವನನ್ನು ಮನೆಯಿಂದ ಹೊರಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಯಿತು. 
ಕೆಲವು ಪ್ರಕಾರದ ಮನೋರೋಗಗಳು. ತೀವ್ರತರದವು. ವ್ಯಕ್ತಿಯ ವಿವೇಚನೆಯನ್ನೇ ಹಾಳುಗೆಡವುತ್ತವೆ. ಅಷ್ಟೇ ಅಲ್ಲ ಮರುಕಳಿಸುತ್ತವೆ. ನಿರಂತರ ಔಷಧೀಯ ಚಿಕಿತ್ಸೆ ಬೇಕು.
ಅಷ್ಟೆಲ್ಲಾ ಶ್ರಮವಹಿಸಿ ಆಸ್ಪತ್ರೆಗೆ ಸೇರಿಸಿದ ನಂತರ ರೋಗಿ ಗುಣವಾದ. ಮನೆಗೆ ಕಳಿಸಿದರು. ಮಾತ್ರೆ ನಿಲ್ಲಿಸಿಬಿಟ್ಟ! ಮತ್ತೆ ಖಾಯಿಲೆ ಮರುಕಳಿಸಿತು. ಅತೀ ಮಾತು, ಅತೀ ಕೋಪ, ಹೊಡೆದೇ ಬಿಡುತ್ತಾನೆ, ಬೈಯುತ್ತಲೇ ಇರುತ್ತಾನೆ, ನಿದ್ರೆಯಿಲ್ಲ ಇತ್ಯಾದಿ. ಮತ್ತೆ ಆರು ತಿಂಗಳ ನಂತರ ಆಂಬ್ಯುಲೆನ್ಸ್ ಸಿಬ್ಬಂದಿಯೇ ಆಸ್ಪತ್ರೆಗೆ ಸೇರಿಸಿದರು. ಈ ಬಾರಿ ಆತ ಬೆದರಿಸಲಿಲ್ಲ. ಗೊಣಗುತ್ತಲೇ ಸಿಬ್ಬಂದಿ ಜೊತೆ ಆಸ್ಪತ್ರೆಗೆ ಬಂದ.
ಈಗ ಎರಡು ವರ್ಷಕ್ಕೆ ಮುಂಚೆ ಮೂರನೇ ಬಾರಿ ಆಂಬ್ಯುಲೆನ್ಸ್ ಸಿಬ್ಬಂದಿಗೆ ಕರೆ ಬಂತು. ಅದೇ ರೋಗಿ ‘ಕೃಷ್ಣಗಿರಿಯಲ್ಲಿ ಸಂಬಂಧಿಕರ ಮನೆಯಲ್ಲಿ ಕೆರಳಿಬಿಟ್ಟಿದ್ದಾನೆ, ಕರೆದೊಯ್ಯಲು ಸಹಾಯ’ ಬೇಕೆಂದು. ಬೆಂಗಳೂರಿಗೆ ಮಾತ್ರ ಕರ್ತವ್ಯ ಸೀಮಿತವಾಗಿದ್ದರೂ, ಮಾನವೀಯತೆಗಾಗಿ ಸಿಬ್ಬಂದಿ ಅಲ್ಲಿಗೆ ಹೋದರು! ಅಲ್ಲಿ ನೋಡಿದರೆ ಅನೇಕ ವ್ಯಾಯಾಮ ಶಾಲೆ (ಜಿಮ್)ನ ಕಟ್ಟುಮಸ್ತಾದ ಹುಡುಗರು ಈ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿ, ಅವನ ಆರ್ಭಟಕ್ಕೆ ಹೆದರಿ ನಿಂತಿದ್ದರು. ಈ ಸಿಬ್ಬಂದಿಯನ್ನು ನೋಡಿ ‘ಇವನೇನು ಮಾಡಬಲ್ಲ, ನಾವೇ ಮುಟ್ಟಲಾಗಿಲ್ಲ’ ಎಂದುಕೊಂಡರು. ಆ ಆಜಾನುಬಾಹು ರೋಗಿ ಈ ಸಿಬ್ಬಂದಿಯನ್ನು ನೋಡಿದ ತಕ್ಷಣ ‘ನೀವ್ಯಾಕೆ ಬಂದ್ರೀ ಸರ್, ನಾನೇ ಬರುತ್ತಿದ್ದೆನಲ್ಲಾ’ ಎಂದು ಇಲಿಯಂತೆ ಹಿಂಬಾಲಿಸಿದ್ದನ್ನು ನೋಡಿ ಆ ಯುವಕರು ದಂಗಾಗಿ ಹೋದರು!
ಮನೋರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲೂ ವಿಶೇಷ ಚಾಕಚಕ್ಯತೆ, ಯುಕ್ತಿ, ಕೌಶಲ್ಯ ಬೇಕು. ಇಲ್ಲದಿದ್ದರೆ ಬಲವಂತವಾಗಿ ಎಳೆದಾಡಿದರೆ ರಕ್ತಪಾತವೇ ಆಗಿಬಿಡಬಹುದು.
ಮಚ್ಚು, ಲಾಂಗುಗಳನ್ನು ಹಿಡಿದ ಮನೋರೋಗಿಗಳನ್ನೂ ತಾಳ್ಮೆ, ಚಾಣಾಕ್ಷತನದಿಂದ ಹಿಂಸೆಯಿಲ್ಲದೆ ಆಸ್ಪತ್ರೆಗೆ ಸೇರಿಸಿ ಅವರ ‘ಮನವೆಂಬ ನಾವೆ’ ಶಾಂತವಾಗುವಂತೆ ವ್ಯವಸ್ಥೆ ಮಾಡಬಹುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate