ಗೃಹಿಣೀ ಗೃಹಮುಚ್ಯತೇ’ ಎಂದೂ, ಗೃಹಿಣಿಯಿಂದಲೇ ಕುಟುಂಬ ನಡೆಯು ವುದೆಂದೂ ನಂಬುವುದು ವಾಡಿಕೆ. ಗಂಡಸಿನ, ಗೃಹಸ್ಥನ ಸ್ಥಾನ ಕುಟುಂಬ ನಡೆಸುವುದರಲ್ಲಿ ಗೃಹಿಣಿಯ ನಂತರದ್ದೆಂದೂ ಇದರ ಅರ್ಥ. ಆದರೆ ಹಲವಾರು ಕಾರಣಗಳಿಂದ ಗೃಹಿಣಿಯಾದವಳು ಅಸಮರ್ಪಕವಾಗಿ ನಡೆದುಕೊಂಡರೆ…. ಆಗ ಗೃಹಸ್ಥನೇ ಒಂದೇ ಕೈಯ್ಯಲ್ಲಿ ಎರಡೂ ಹುಟ್ಟುಹಾಕುತ್ತಾ ಸಂಸಾರ ನೌಕೆ ನಡೆಸಬೇಕಾಗುತ್ತದೆ. ಹೀಗಾಗಲು, ಇಂದಿನ ಬದಲಾದ ಸಾಮಾಜಿಕ ಸಂದರ್ಭದಲ್ಲಿ ವಿದ್ಯಾವಂತ, ಉದ್ಯೋಗಸ್ಥಳಾದ ಮಹಿಳೆ ‘ಉತ್ತಮ ಗೃಹಿಣಿ’ಯಾಗಲು ಸಮಯ ಸಾಲದೆ, ‘ಪರಿಪೂರ್ಣ ಮಡದಿ’ ಯಾಗಲು ‘ಅಹಂ’ ಬಿಡದೆ, ‘ಒಳ್ಳೆಯ ಅಮ್ಮ’ನಾಗಲು ‘ತಾಳ್ಮೆ’ ಕಲಿಯದೇ ಎಡಬಿಡಂಗಿಗಳಾಗಿರುವುದು ಒಂದು ಕಾರಣವಿರಬಹುದು. ಅಥವಾ ಆಕೆ ಕುಟುಂಬ ನಡೆಸಲು ಅಸಮರ್ಥಳಾಗಿ, ಸೋಲುವಲ್ಲಿ ಆಕೆಗೆ ಗುಪ್ತಗಾಮಿಯಾಗಿ ತೊಂದರೆ ಕೊಡುವ ಮನೋರೋಗ ಕಾರಣವಿರಬಹುದು.
ನಲವತ್ತು ದಾಟಿದ ಗೃಹಸ್ಥ ತನ್ನ ಎರಡನೇ ಹೆಂಡತಿಯ ಸಿಡಿಮಿಡಿಗೆ, ಕಾರಣಗಳೇನಿರಬಹುದು? ಪರಿಹಾರ ಏನು ಮಾಡಬಹುದೆಂದು ಸಲಹೆ ಕೋರುತ್ತಾ ಮನೋವೈದ್ಯರ ಬಳಿಗೆ ಬಂದ. ಐದು ವರ್ಷದ ತನ್ನ ಎರಡನೇ ದಾಂಪತ್ಯದಲ್ಲೂ ಬಿಡಿಸಲಾಗದ ಗೋಜಲುಗಳಾಗಿ, ನನ್ನ ಹಣೆಬರಹವೇ ಕಾರಣವಿರಬಹುದೆಂದು ದುಖಪಡುತ್ತ ಕುರ್ಚಿಯಲ್ಲಿ ಕುಸಿದು ಕುಳಿತ.
ತಂದೆ ತಾಯಿಗಳ ಒಬ್ಬನೇ ಮಗನಾದ ಈತ ಪದವೀಧರ, ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. 17 ವರ್ಷಗಳ ಮುಂಚೆ ತನಗಿಂತ ಉನ್ನತ ವ್ಯಾಸಂಗ ಮಾಡಿದ್ದ ಯುವತಿಯನ್ನು ಸಾಂಪ್ರದಾಯಿಕವಾಗಿ ವಿವಾಹವಾದ . ಅವಳೂ ಒಬ್ಬಳೇ ಮಗಳು. ಅತ್ತೆ ಮನೆಗೆ ಬಂದ ಸ್ವಲ್ಪ ದಿನಗಳಲ್ಲೇ ಅತ್ತೆಮಾವ ಕಿರುಕುಳ ಕೊಡುತ್ತಾರೆಂದೂ, ಅತಿಥಿಗಳೆಲ್ಲ ಅವಮಾನಿಸುತ್ತಾರೆಂದೂ ದಿನವೂ ಗಂಡನ ಬಳಿ ಗೋಳಿಡಲಾರಂಭಿಸಿದಳು. ಮೃದು ಸ್ವಭಾವದ ಗಂಡ ಈಕೆಯನ್ನು ಸಮಾಧಾನ ಪಡಿಸುತ್ತ ಕಾಲ ದೂಡಿದ. ಬರಬರುತ್ತಾ ಆಕೆಯ ರೋಷ, ಜಗಳ, ಬೈಗುಳ ಹೆಚ್ಚಾದವು. ನಡುರಾತ್ರಿಯಲ್ಲೂ ಜಗಳವಾಡಿಕೊಂಡು ಮನೆಯಿಂದ ಹೊರಗೆ ಓಡಿಬಿಡುತ್ತಿದ್ದಳು. ಬೇಸತ್ತ ಈತ , ಆಕೆಯ ಸಮಾಧಾನಕ್ಕಾಗಿ ‘ಬೇರೆ ಮನೆ’ ಮಾಡಲು ಒಪ್ಪಿದ . ಆಕೆಯ ತಂದೆಯ ಆಸ್ತಿಯಲ್ಲಿದ್ದ ಒಂದು ಮನೆಗೆ ಸ್ಥಳಾಂತರಗೊಂಡರು. ಅಲ್ಲೂ ಮನೆ ಚಿಕ್ಕದೆಂದು ಆಕೆ ಕಿರಿಕಿರಿ ಮಾಡಹತ್ತಿದ್ದಳು. ವ್ಯಾವಹಾರಿಕವಾಗಿ ಆ ಮನೆಯೇ ಉತ್ತಮವೆಂದು ಇವನೆಷ್ಟು ಮನವೊಲಿಸಿದರೂ ಆಕೆ ಬಗ್ಗಲಿಲ್ಲ . ಈ ಹೊತ್ತಿಗೆ ಅವರಿಗೆ ಒಂದು ಹೆಣ್ಣು ಮಗುವಾಗಿತ್ತು. ಕೊನೆಗೆ ಆಕೆಯ ಸಮಾಧಾನಕ್ಕಾಗಿ ಅತ್ತೇ ಮನೆಗೇ ‘ಮನೆಯ ಅಳಿಯ’ನಾಗಿ ಹೋಗಲು ಒಪ್ಪಿದ. ಎರಡನೇ ಮಗುವಾಯಿತು. ಆಕೆಗೆ ಹೊಸ ಕಾರು, ಹೊಸ ಒಡವೆ, ಹೆಚ್ಚು ಅಲಂಕಾರ, ಹೆಚ್ಚು ಖರ್ಚು ಮಾಡುವ ಹಂಬಲ ಶುರುವಾಯಿತು. ಹಣದ ವಿಷಯಕ್ಕೆ ದಂಪತಿಗಳಲ್ಲಿ ಪದೇ ಪದೇ ಜಗಳ. ಬಂಧು ಮಿತ್ರರ ಸಲಹೆಯಂತೆ ಆಕೆಗೆ ಬುದ್ಧಿ ಕಲಿಸಲು ಆತ ಅತ್ತೆ ಮನೆಯಿಂದ ಹೊರ ನಡೆದ. ಆಗಾಗ ಹೋಗಿ ಮಡದಿ, ಮಕ್ಕಳನ್ನು ಭೇಟಿ ಮಾಡಿ ಬರುತ್ತಿದ್ದ. ಆಗಲೂ ಜಗಳ ಕಡಿಮೆಯಾಗದಿದ್ದಾಗ, ಅವರನ್ನು ಭೇಟಿ ಮಾಡುವುದನ್ನು ಪೂರ್ತಿ ನಿಲ್ಲಿಸಿಬಿಟ್ಟ. ಮಡದಿ ಸೋತು, ‘ಬುದ್ಧಿ’ ಕಲಿತು ಮನೆಗೆ ಬಾರೆಂದು ಕರೆಯುತ್ತಾಳೆಂಬ ನಿರೀಕ್ಷೆಯಲ್ಲಿದ್ದವನಿಗೆ, ಮಡದಿಯಿಂದ ಬಂದದ್ದು ಡೈವೋರ್ಸು ನೋಟೀಸು ! ಗಾಬರಿಗೊಂಡ. ಆದರೂ ಬಂಧು ಮಿತ್ರರ ಸಲಹೆಯಂತೆ ಆಕೆಗೆ ಪೂರ್ತಿ ಬುದ್ಧಿ ಕಲಿಸಲು ಡೈವೋರ್ಸು ಪ್ರಕ್ರಿಯೆಯಲ್ಲಿ ಭಾಗವಹಿಸಿದ. ಹೇಗೂ ಡೈವೋರ್ಸು ಕೇಸು ವರ್ಷಾನುಗಟ್ಟಳೆ ನಡೆಯುವುದರಿಂದ, ಒಂದಲ್ಲ ಒಂದು ದಿನ, ಅವಳೇ ಸೋತು ‘ನೀನೇ ಗತಿ’ ಎಂದು ಬರುತ್ತಾಳೆಂದು ಇವನ ಲೆಕ್ಕ.
ಡೈವೋರ್ಸಿನ ಮೊದಲ ಹಿಯರಿಂಗಿನಲ್ಲೇ ನ್ಯಾಯಾಧೀಶರು ಸುಶಿಕ್ಷತ ರಾಗಿದ್ದ ಇಬ್ಬರನ್ನೂ ಎದುರು ಬದುರು ನಿಲ್ಲಿಸಿ ಆಕೆಯ ಮುಂದೆ ಇವನನ್ನು ‘ಡೈವೋರ್ಸಿಗೆ ಒಪ್ಪಿಗೆಯೇ?’ ಎಂದು ಕೇಳಿದರು. ಹೆಂಡತಿಯ ಮುಂದೆ ‘ಇಲ್ಲ’ ಎನ್ನಲು ಹಮ್ಮು ಅಡ್ಡಬಂದು, ಆಗಲಾದರೂ ಹೆಂಡತಿ ‘ಬುದ್ಧಿ’ ಕಲಿಯುತ್ತಾಳೆಂದು ಹೌದು ಎಂದುಬಿಟ್ಟ ! ಡೈವೋರ್ಸ್ ಕೇಸಿನ ಆರನೇ ತಿಂಗಳಲ್ಲೇ ನ್ಯಾಯಾಧೀಶರು ಡೈವೋರ್ಸ್ ಘೋಷಿಸಿಬಿಟ್ಟರು! ವರ್ಷಗಟ್ಟಲೆ ಕೋರ್ಟಿಗೆ ಅಲೆಯಲು ಸಿದ್ಧನಾಗಿದ್ದ ಈತ ಈ ಅನಿರೀಕ್ಷಿತ ಡೈವೋರ್ಸ್ ಘೋಷಣೆಯಿಂದ ‘ಇಂಗುತಿಂದ ಮಂಗನಂತಾಗಿಬಿಟ್ಟ !’ ಎಂಟುವರ್ಷದ ದಾಂಪತ್ಯ ಮುರಿದೇಹೋಯಿತು.
ತಂದೆತಾಯಿಗೂ ಗೊತ್ತಿಲ್ಲದೇ ಡೈವೋರ್ಸ್ ಅರ್ಜಿ ಹಾಕಿದ್ದ ಈಕೆ ಮಕ್ಕಳ ಸುಪರ್ದಿ ಪಡೆದುಕೊಂಡಳು. ವಿಷಯ ತಿಳಿದ ಪೋಷಕರು ಅವಳನ್ನು ದೂಷಿಸಿದರು. ತನ್ನ ಅತಿಯಾದ ಖರ್ಚನ್ನು ಸರಿತೂಗಿಸಲು ಅವಳು ಸಾಕಷ್ಟು ಸಾಲ ಮಾಡಿದ್ದಳು. ಹತ್ತಾರು ಕಡೆಯಿಂದ ಸಂಕಷ್ಟಕ್ಕೆ ಸಿಲುಕಿದ ಈಕೆ ಕೆಲವು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಹೆಂಡತಿಯ ಆತ್ಮಹತ್ಯೆಗೆ ತನ್ನನ್ನೇ ಬಂಧಿಸುತ್ತಾರೆಂದು ಈತ ಸಿದ್ಧನಾದ. ಅದೃಷ್ಟವಶಾತ್, ದೋಷ ಮಗಳದ್ದು, ಅಳಿಯನದ್ದಲ್ಲ ಎಂದು ಆಕೆಯ ತಂದೆತಾಯಿ ಸುಮ್ಮನಾದರು. ಮೊಮ್ಮಕ್ಕಳನ್ನು ತಂದೆಯ ಬಳಿಗೆ ಕಳುಹಿಸಿಬಿಟ್ಟರು.
ಚಿಕ್ಕವಯಸ್ಸಿನ ಇಬ್ಬರು ಮಕ್ಕಳನ್ನೂ, ವಯಸ್ಸಾದ ತಂದೆ ತಾಯಿಯನ್ನೂ ನೋಡಿಕೊಳ್ಳುವ ಒತ್ತಡಕ್ಕೆ ಸಿಲುಕಿದ ಈತ ಮತ್ತೆ ಬಂಧುಮಿತ್ರರ ಸಲಹೆಯಂತೆ ವಯಸ್ಸು ದಾಟಿದ್ದರೂ ವಿವಾಹವಾಗದೇ ಇದ್ದ ಒಬ್ಬ ಮಹಿಳೆಯನ್ನು ಮರು ಮದುವೆಯಾದ. ಈಕೆಗೆ ಗರ್ಭಕೋಶ ಸಮಸ್ಯೆ. ಇಬ್ಬರು ಮಕ್ಕಳಿದ್ದಾರಲ್ಲಾ, ಸಾಕು ಎಂದು ಇವನ ಮನಸ್ಸು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೂ ಬೇಕೆಂದು ಆಕೆ. ಗರ್ಭಕೋಶದ ಸಮಸ್ಯೆಯಿದ್ದರೂ ನೂತನ ಕ್ರಮಗಳಿಂದ ಗರ್ಭಧರಿಸಬಹುದೆಂದು ಆಸೆ ಹುಟ್ಟಿಸುವ ವೈದ್ಯರು. ಈ ನೂತನ ಕ್ರಮಗಳಿಗೆ ಹಣ ಹೇಗೆ ಹೊಂದಿಸುವುದೆಂದು ಈತನ ಒದ್ದಾಟ . ಈ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ‘ಮಲತಾಯಿ’ ರೇಗಲಾರಂಭಿಸಿದಳು. ರಾತ್ರಿ ಈತ ಕೈಗೆ ಸಿಕ್ಕಾಗ ಅತ್ತೆ ಮಾವನ ಮೇಲೆ, ಮಕ್ಕಳ ಮೇಲೆ ದೂರು ಹೇಳುತ್ತಾ ಅಳಲಾರಂಭಿಸಿದಳು. ದಿನಾ ರಾತ್ರಿ ಹತ್ತಕ್ಕೆ ಶುರುವಾಗುತ್ತಿದ್ದ ಈ ಗೋಳಾಟ ನೋಡಿ ನೋಡಿ ಆತ ರಾತ್ರಿ ಹತ್ತು ಗಂಟೆಯಾದರೆ ಭಯಪಡುತ್ತಿದ್ದ. ನಾನೂ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗುತ್ತೇನೆಂದು ಆಗಾಗ ಹೇಳತೊಡಗಿದಳು. ಆಕೆಗೆ ಯಾರೂ ಎದುರಾಡಬಾರದೆಂದು ಕಟ್ಟಪ್ಪಣೆ ಮಾಡಿದರೂ ಆಕೆಯ ಗೋಳಾಟ ನಿಲ್ಲದಿದ್ದಾಗ, ಮನೋವೈದ್ಯರ ಬಳಿ ಸಲಹೆ ಕೇಳಿಬಂದ.
ಈ ಘಟನಾವಳಿಗಳಲ್ಲಿ ಮನಃಶಾಸ್ತ್ರದ ಪಾತ್ರ ಏನು? ಈ ವ್ಯಕ್ತಿಯ ಇಬ್ಬರು ಹೆಂಡಿರ ಸಮಸ್ಯಾತ್ಮಕ ನಡವಳಿಕೆಯಲ್ಲೂ ಮನೋರೋಗದ ಲಕ್ಷಣಗಳಿವೆ ಎಂದು ವೈದ್ಯರ ವಿಶ್ಲೇಷಣೆ. ಉಳಿದಿರುವ ಹೆಂಡತಿಯಲ್ಲಾದರೂ ಮನೋರೋಗ ಗುರುತಿಸಿ, ಚಿಕಿತ್ಸೆ ಮಾಡಿದರೆ, ಸಂಸಾರ ಸುಗಮವಾಗಬಹುದೆಂದು ಆತನ ಮನವೆಂಬ ನಾವೆಗೆ ಧೈರ್ಯತುಂಬಿ ವೈದ್ಯರು ಕಳುಹಿಸಿಕೊಟ್ಟರು.
- ಡಾ. ಪ್ರಶಾಂತ್. ಎನ್.ಆರ್.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/5/2020