ಭಾರತ ಆಧ್ಯಾತ್ಮಿಕ ಜಿಜ್ಞಾಸೆಗಳ ನಾಡು. ದೇಶದ ಉದ್ದಗಲಕ್ಕೂ ಸಾಧು, ಸಂತರು ಹುಟ್ಟಿರುವ ದೇಶ. ಬದುಕಿನ ಅರ್ಥವೇನು, ಮಾನವನ ಎಲ್ಲಾ ರೀತಿಯ ಸಾಹಸ, ಹೋರಾಟಗಳ ಉದ್ದೇಶವೇನು ಎಂದು ಬಗೆದು ನೋಡಿಬಿಟ್ಟವರ ದೇಶ. ಆಧ್ಯಾತ್ಮಿಕ ಜಿಜ್ಞಾಸುವಿಗೆ ಕುತೂಹಲದಿಂದ ಹುಟ್ಟುವ ಪ್ರಶ್ನೆ ಮನೋರೋಗಿಯೊಬ್ಬನಿಗೆ ಬೇಸರದಿಂದ ಹುಟ್ಟಬಹುದು. ಸಾಧಕನೊಬ್ಬನಿಗೆ ಈ ಮಾಯಾ ಪ್ರಪಂಚದಲ್ಲಿ ಮಾಡುವ ಎಲ್ಲಾ ಪ್ರಯತ್ನಗಳೂ ವ್ಯರ್ಥ ಎನ್ನಿಸುವಂತೆ, ಮನೋರೋಗಿಗೂ ಅನ್ನಿಸಬಹುದು. ಅನಿಸಿಕೆಗಳು ಒಂದೇ ಆದರೂ ಅವುಗಳು ಮೂಲ ಬೇರೆ ಬೇರೆ. ಒಂದರಲ್ಲಿ ಸಾಧಕನ ತೋರಿಕೆಯ ಪ್ರಪಂಚದ ಮರ್ಮ ಭೇದಿಸುವ ತಪಸ್ಸು ಇನ್ನೊಂದರಲ್ಲಿ ಮನೋರೋಗಿಯೊಬ್ಬನ ಸೋತು ಹೋದ, ನಿವೀರ್ಯಗೊಂಡ ಮನಸ್ಸು.
ಅರವತ್ತು ದಾಟಿದ ಗೃಹಸ್ಥನನ್ನು ಪತ್ನಿ ಮತ್ತು ಪುತ್ರ ಮನೋವೈದ್ಯರಲ್ಲಿಗೆ ಕರೆತಂದರು. ಕಳೆದೆರಡು ತಿಂಗಳಿಂದ ಈತನಿಗೆ ಆರೋಗ್ಯ ಸರಿಯಲ್ಲ. ಯಾವಾಗಲೂ ನಾನು ಸಾಯಬೇಕು, ಸತ್ತು ಹೋಗುತ್ತೇನೆ, ನನ್ನ ಕೈಲಿ ಜೀವನ ಸಂಭಾಳಿಸಲು ಆಗುವುದಿಲ್ಲ ಎನ್ನುತ್ತಿರುತ್ತಾರೆ ಎಂದು ಅವರ ದೂರು.
ಬಡತನದ ಕುಟುಂಬದಲ್ಲಿ ನಾಲ್ವರಲ್ಲಿ ಹಿರಿಯನಾಗಿ ಈ ವ್ಯಕ್ತಿ ಹುಟ್ಟಿದ್ದ . ತಿನ್ನಲು ಅನ್ನಕ್ಕೂ ಕಷ್ಟ. ಹೊಲದಲ್ಲಿ ದುಡಿದು, ತನ್ನ ಶುಲ್ಕ ತಾನೇ ಸಂಪಾದನೆ ಮಾಡಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ. ಕೆಲ ವರ್ಷದ ನಂತರ ಈ ಕುಟುಂಬ ಚಹ ಹೋಟೆಲ್ ಮಾಡಿತು. ಅಲ್ಲೂ ಉದ್ಯೋಗ, ಜೊತೆ ಜೊತೆಗೆ ವ್ಯಾಸಂಗ. ತಂದೆ ತೀರಿಹೋದ ನಂತರ ಈತನೇ ತನ್ನೆಲ್ಲ ತಂಗಿ, ತಮ್ಮಂದಿರ ಜವಾಬ್ದಾರಿ ಹೊತ್ತ. ತಾನೂ ವಿವಾಹವಾಗಿ ಎಲ್ಲರ ಜವಾಬ್ದಾರಿ ಹೊತ್ತು ನಿಭಾಯಿಸಿದ ವ್ಯಕ್ತಿ. ಫೈನಾನ್ಸ್ ಕಂಪನಿಯಲ್ಲಿ ಗುಮಾಸ್ತನಾಗಿ ಸೇರಿ, ನಂತರ ಪಾಲುದಾರನಾಗಿ, ಭೂಮಿ ವ್ಯವಹಾರ ಮಾಡಿ ಹಣಕಾಸು ಸಂಪಾದಿಸಿದ. ನಾಲ್ವರು ಮಕ್ಕಳಲ್ಲಿ ಎಲ್ಲರೂ ಇಂಜಿನಿಯರ್‌ಗಳು. ವಿದೇಶದಲ್ಲೂ ಇದ್ದಾರೆ. ಇಷ್ಟೆಲ್ಲ ಜೀವನದ ಕಿಚ್ಚು ಹಾಯ್ದು ಬಂದ ವ್ಯಕ್ತಿ ಇದ್ದಕ್ಕಿದ್ದಂತೆ ಒಂದು ವರ್ಷದ ಮೊದಲು ಕುಸಿದುಹೋದ.
ಕಳೆದ ಜನವರಿಯಲ್ಲಿ ಸಂಬಂಧಿಕರೊಬ್ಬರ ಸಾವಾಯಿತು. ಸಂಸ್ಕಾರದಲ್ಲಿ ಭಾಗವಹಿಸಲು ಹೋದ ಈತ ಮರಳುತ್ತಾ ‘ನಾನೂ ಸತ್ತರೆ ಮನೆಯವರ ಗತಿ ಏನು? ಮಕ್ಕಳಿಗಿನ್ನೂ ಮದುವೆ ಮಾಡಿಲ್ಲವಲ್ಲಾ’ ಎಂದು ಚಿಂತಿಸಿದ. ಹತ್ತು ದಿನಗಳ ನಂತರ ಈತನ ಸ್ನೇಹಿತನೂ ಸತ್ತು ಹೋದ. ಈ ವ್ಯಕ್ತಿ ಬಹಳ ಗಾಬರಿಗೀಡಾಗಿಬಿಟ್ಟ. ಕಾರು ಹತ್ತಲೂ ಭಯ. ಅಪಘಾತವಾಗಿ ಬಿಡಬಹುದು! ಮಂಕಾಗಿ ಕೊಠಡಿ ಸೇರಿಬಿಟ್ಟ. ಹಸಿವಿಲ್ಲ, ಮಾತುಕತೆ ಇಲ್ಲ. ಯಾವಾಗಲೂ ನರಳುತ್ತಾ ಮಲಗಿರುತ್ತಿದ್ದ. ನಿದ್ದೆಯಿಲ್ಲ , ಬೆಳಕಿಗೆ ಬರಲೂ ಬೇಸರ. ಕತ್ತಲೆ ಕೋಣೆಯೊಳಗೇ ಮಲಗಿ ಚಿಂತಿಸುತದ್ದ. ಮಗನಿಗೆ ಉನ್ನತ ವ್ಯಾಸಂಗಕ್ಕೆ ಸೀಟು ಸಿಕ್ಕಿತ್ತು. ಖುಷಿಗಿಂತ ಹೆಚ್ಚಾಗಿ ಹಣ ಹೇಗೆ ಹೊಂದಿಸುವುದು ಎಂಬ ಚಿಂತೆ! ಯಾರೂ ಎಲ್‌ಐಸಿ ಪಾಲಿಸಿ ಮಾಡಿಸದಿದ್ದರೆ ನನ್ನ ಗತಿಯೇನು ಎಂದು ಆತಂಕ. ಕೊನೆಗೆ ಇವನನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದರು. ಚತುರರಾದ ಆದರೆ ಮನೋವೈದ್ಯರಲ್ಲದ ಆ ಡಾಕ್ಟರು ಖಿನ್ನತೆ ನೀಗಿಸುವ ಮಾತ್ರೆಗಳನ್ನು ಕೊಟ್ಟರು.
ಈ ವ್ಯಕ್ತಿ ಎಂಟೇ ದಿನಗಳಲ್ಲಿ ಚಿಗುರಿಕೊಂಡ. ಮುಂದಿನ ಒಂದು ತಿಂಗಳು ಈತನನ್ನು ಹಿಡಿಯುವವರೇ ಇಲ್ಲ. ಅತಿಯಾದ ಮಾತು, ನಿರಂತರ ಚಟುವಟಿಕೆ, ಅತೀ ಎನ್ನಿಸವಷ್ಟು ಆಸೆ, ಖರ್ಚು. ಹೊಸದಾಗಿ ಮೊಬೈಲ್ ಕೊಂಡುಕೊಂಡ, ಕಾರ್ ಬದಲಾಯಿಸಿದ, ಯಾವಾಗಲೂ ಫೋನ್‌ನಲ್ಲಿ ಮಾತಾಡುತ್ತಿದ್ದ. ಗಂಟೆಗಟ್ಟಲೆ ಇಂಟರ್‌ನೆಟ್ ನೋಡುತ್ತಿದ್ದ. ಮನೆಯವರಿಗೆಲ್ಲ ವಿಚಿತ್ರವೆನ್ನಿಸಿತು. ಈ ವ್ಯಕ್ತಿ ಸ್ವಭಾವತಃ ಹೀಗಿರಲಿಲ್ಲ. ಕ್ರಮೇಣ ಈ ಅತಿಯಲ್ಲ ಶಾಂತವಾಯಿತು. ಮನೆಯ ಮೇಲೆ ಮತ್ತೊಂದು ಮಹಡಿ ಕಟ್ಟಿಸಿದ. ಮಗಳ ಮದುವೆ ನಿಶ್ಚಯ ಮಾಡಿದ.
ಈಗೆರಡು ತಿಂಗಳ ಹಿಂದೆ ಮಗಳ ಮದುವೆ ಸಂದರ್ಭದಲ್ಲಿ ಮತ್ತೆ ಈತ ಕುಸಿದುಹೋದ. ಮಂಕಾಗಿಬಿಟ್ಟ. ಮತ್ತೆ ಹಸಿವಿಲ್ಲ, ನಿದ್ದೆಯಿಲ್ಲ, ಅಲಸ್ಯ, ಸ್ನಾನವೂ ಬೇಡ. ಸುಮ್ಮನೆ ಮಲಗಿರೋಣ ಎನ್ನಿಸುತ್ತದೆ. ‘ಜೀವನದ ಎಲ್ಲಾ ಜವಾಬ್ದಾರಿ ಗಳನ್ನು ನನ್ನಲ್ಲಿ ನಿಭಾಯಿಸಲು ಆಗುವುದಿಲ್ಲ. ನಾನು ಅತಿಯಾಗಿ ಖರ್ಚುಮಾಡಿ ತಪ್ಪು ಮಾಡಿಬಿಟ್ಟೆ. ನನ್ನಿಂದ ಮನೆಯವರಿಗೆಲ್ಲಾ ಎಷ್ಟು ಕಷ್ಟ! ನಾನು ಮಾಡಿದ್ದೆಲ್ಲ ವ್ಯರ್ಥವಾಗಿ ಹೋಯಿತು. ಮನೆ ಕಟ್ಟಿಸುವಾಗ ಮಾಡಿದ ಸಾಲ ಹೇಗೆ ತೀರಿಸಲಿ? ಅವರೆಲ್ಲ ಬಂದು ಕೇಳಿದರೆ ನಾನು ಕೊಡಲಾಗದಿದ್ದರೆ ಮರ್ಯಾದೆ ಹೋಗುತ್ತಲ್ಲಾ! ಇಷ್ಟೆಲ್ಲಾ ಆದ ಮೇಲೆ ಬದುಕಿ ಏನು ಪ್ರಯೋಜನ? ಈ ಸಂಕಷ್ಟಕ್ಕೆ ಸಾವೇ ಪರಿಹಾರ. ಏನು ಮಾಡಿ ಸತ್ತು ಹೋಗಲಿ? ಆತ್ಮಹತ್ಯೆ ಹೇಗೆ ಮಾಡಿಕೊಳ್ಳಲಿ’ ಎಂದೆಲ್ಲ ಚಿಂತಿಸುತ್ತಾನೆ. ಯಾವಾಗಲೂ ಎದೆ ಬಡಿತ, ಆತಂಕ. ಮನೆಯವರ ಬಲವಂತಕ್ಕೆ ಒಂದಷ್ಟು ಊಟ ಮಾಡುತ್ತಾನೆ. ಮೊದಲು 3 ನ್ಯೂಸ್‌ಪೇಪರ್ ಓದುತ್ತಿದ್ದ ವ್ಯಕ್ತಿ ಈಗ ಪೇಪರನ್ನು ಕೈಲೂ ಮುಟ್ಟುವುದಿಲ್ಲ. ಮನೆಯವರ ಪ್ರಕಾರ, ವಸ್ತು ಸ್ಥಿತಿ ಅಷ್ಟೇನೂ ಘೋರವಾಗಿಲ್ಲ. ಆತನು ಚಿಂತಿಸುತ್ತಿರುವ ಸಮಸ್ಯೆಗಳೆಲ್ಲ ನಿಜವೇ ಆದರೂ, ಈತ ಆತಂಕ ಪಡುತ್ತಿರುವಷ್ಟು ಅಪರಿಹಾರ್ಯವಲ್ಲ ಎಂದು ಕುಟುಂಬದ ಅಭಿಪ್ರಾಯ. ಅದೂ ಅಲ್ಲದೇ ಪೂರ್ಣ ಬಡತನದಿಂದ ಮೇಲೆದ್ದು ಬಂದ ವ್ಯಕ್ತಿ . ಈಗ್ಯಾಕೆ ಸಣ್ಣ ಪ್ರಮಾಣದ ಸಾಲಕ್ಕೆ ಇಷ್ಟು ಕುಸಿದು ಹೋಗುತ್ತಿದ್ದಾನೆ. ಅದೂ ಮಧ್ಯೆ ಸ್ವಲ್ಪ ದಿನ ಅತೀ ಉತ್ಸಾಹದ ಚಿಲುಮೆಯಾಗಿದ್ದವನು ಮತ್ತೇಕೆ ಕುಸಿದುಹೋದ?
ಮನೋವೈದ್ಯರ ಪ್ರಕಾರ ಇದೊಂದು ವಿಚಿತ್ರ ಖಾಯಿಲೆಯ ಲಕ್ಷಣ. ಚೆನ್ನಾಗಿದ್ದ ವ್ಯಕ್ತಿ ಖಿನ್ನತೆ, ಮಂಕು, ನಿರುತ್ಸಾಹ ಹಾಗೂ ಅತ್ಯುತ್ಸಾಹ, ಅತೀ ಚಟುವಟಿಕೆ, ಅತ್ಯಾನಂದಗಳ ಆರ್ವತನಗಳಲ್ಲಿ ಸಿಲುಕಿಬಿಡುತ್ತಾನೆ. ಕೆಲವು ದಿನ ಖಿನ್ನತೆ, ಕೆಲವು ದಿನ ಉನ್ಮತ್ತತೆ, ಈ ವರ್ತನ ರೂಪೀ ಖಾಯಿಲೆಗೆ BIPOLAR AFFECTIVE DISORDER ಎನ್ನುತ್ತಾರೆ. ಇದು ವ್ಯಕ್ತಿಯ ಸ್ವಯಂಕೃತಾಪರಾಧವಲ್ಲ. ಮಿದುಳಿನ ದೋಷದಿಂದ ಹುಟ್ಟುವ ವರ್ತನಾ ಸಮಸ್ಯೆ.
ಇದಕ್ಕೂ ವಿಜ್ಞಾನಿಗಳು ಪರಿಹಾರವನ್ನು ಕಂಡು ಹಿಡಿದಿದ್ದಾರೆ. ಔಷಧಿಗಳ ಪ್ರಯೋಗದಿಂದ ಆವರ್ತನದಲ್ಲಿ ಸಿಲುಕಿರುವ ಮನಸ್ಸನ್ನು ಸಂತುಲಿತ ಸ್ಥಿತಿಯಲ್ಲಿ ಇರಿಸಬಹುದು.
ಬೈಪೊಲಾರ್ ಖಾಯಿಲೆ ಎಂಬ ಉಬ್ಬರ – ಇಳಿತಗಳ ಆರ್ವತನದಲ್ಲಿ ಸಿಲುಕಿದ ಮನವೆಂಬ ನಾವೆಗೆ ಮದ್ದು ಪಯೋಗಿಸಿ ಶಾಂತಗೊಳಿಸಬಹುದು.
-ಡಾ. ಪ್ರಶಾಂತ್ ಎನ್.ಆರ್.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 2/15/2020