অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೀಡುತ್ತ ಹೋಗಿ...ಉಲ್ಲಸಿತರಾಗಿ

ನೀಡುತ್ತ ಹೋಗಿ...ಉಲ್ಲಸಿತರಾಗಿ

ದಯವಿಟ್ಟು ಎಲ್ಲರ ಬಗ್ಗೆ, ಎಲ್ಲದರ  ಬಗ್ಗೆ ದೂರಬೇಡಿ, ಸಿಟ್ಟಾಗಬೇಡಿ. ಎಲ್ಲವನ್ನೂ ನೀಡುತ್ತ ಹೋಗಿ.  ದೈವಿಕತೆಯನ್ನು ಅಪ್ಪಿಕೊಳ್ಳಿ. ಏನನ್ನೂ ಯೋಜಿಸಬೇಡಿ. ಪ್ರತಿಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥದಿಂದ ಯಾರಿಗಾಗಿಯೋ ಕೆಲಸ ಮಾಡಿದಾಗ ನಮ್ಮಲ್ಲಿ ಪ್ರೀತಿಯಿಂದ ಕೂಡಿದ ಶಾಂತ ಶಕ್ತಿಯೊಂದು ಹೊರಹೊಮ್ಮುತ್ತದೆ. ಅದು ನಮ್ಮನ್ನು ಮೃದುವಾದ, ಪರಿಶುದ್ಧತೆ ಮಾಧುರ್ಯದಲ್ಲಿ  ಮುಳುಗಿಸುತ್ತದೆ. ಹಾಂ, ಹೌದು. ಆರೋಗ್ಯವೇ ನಮ್ಮ ಅರಳುವ ಶಕ್ತಿಯಾಗಿರುತ್ತದೆ.

ಇದೊಂದು ಸತ್ಯಕಥೆ. ಮಕ್ಕಳಿಗೆ ಶಾಲೆಯ ರಜ ಬಂದಾಗ ಇಡೀ ದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಇದರಿಂದ ಅಮ್ಮನಿಗೆ ವಿಪರೀತ ಕಿರಿಕಿರಿಯಾಗುತ್ತಿತ್ತು. ನಿತ್ಯದ ಕೆಲಸದಲ್ಲಿ ಏರುಪೇರಾಗುತ್ತಿತ್ತು. ಆದರೆ, ಬೇರೆಯವರ ಬಗ್ಗೆ ದಯೆ ತೋರುವುದರಿಂದ ಶಾಂತಿ, ಸಮಾಧಾನ, ಸಂತಸ ಸಿಗುತ್ತದೆ ಎಂಬ ಸತ್ಯ ಆಕೆಗೆ ಗೊತ್ತಿತ್ತು.

ಆ ದಿನ ಸಂಜೆ ಶಾಪಿಂಗ್‌ಗೆಂದು ಹೋದಾಗ ಆಕೆ, ಮಾರಾಟ ಮಳಿಗೆಯ ಕ್ಯಾಷಿಯರ್‌ ಒಬ್ಬರಿಗೆ ನಿಮ್ಮ ಇಷ್ಟದ ಚಾಕಲೇಟ್‌ ಯಾವುದು ಎಂದು ಪ್ರಶ್ನಿಸಿದಳು. ಆ ಕ್ಯಾಷಿಯರ್‌ ಹೇಳಿದ ಮೇಲೆ ತಾನು ಖರಿದೀಸಿದ ವಸ್ತುಗಳ ಜತೆ ಎರಡು ಚಾಕಲೇಟ್‌ ಖರಿದೀಸಿ ಒಂದನ್ನು   ಕ್ಯಾಷಿಯರ್‌ಗೆ ಕೊಟ್ಟರು. ಮತ್ತೊಂದು ಚಾಕಲೇಟ್‌ ಅನ್ನು ಸೇಲ್ಸ್‌ಗರ್ಲ್‌ ಒಬ್ಬಳಿಗೆ ನೀಡಿದಳು. ಆನಂತರ ಆಕೆಯಲ್ಲಿ ವಿಚಿತ್ರ ಶಾಂತಿ, ಸಮಾಧಾನ ನೆಲೆಸಿತು. ಮನೆಗೆ ಬಂದು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಳು.

ಕೊಡುವುದರ ಹಿಂದಿನ ಮಾಂತ್ರಿಕತೆಯೇ ಅಂಥಾದ್ದು. ನಿಮಗೆ ಕಿರಿಕಿರಿ ಹುಟ್ಟಿಸುವ ಸಂಗತಿಗಳಿಂದ ದೂರವಿದ್ದಾಗ ಕೆಲಕಾಲ ನಿಮ್ಮ ಮನಸ್ಸು ಹೋರಾಟದಿಂದ ದೂರವಿರುತ್ತದೆ. ಪ್ರಯಾಣ ಬೆಳೆಸದೇ ಹೊಸ ಸ್ಥಳಕ್ಕೆ ಹೋದಂತೆ ಇರುತ್ತದೆ ಅದು. ಯಾವುದೇ ಸ್ಥಾನಮಾನದ, ಪ್ರತಿಫಲದ ಅಪೇಕ್ಷೆಯಿಲ್ಲದೇ ಕೆಲಸ ಮಾಡಿದಾಗ ನಿಮ್ಮೊಳಗಿನ ದೈವಿಕತೆಯನ್ನು ನೀವು ವ್ಯಕ್ತಗೊಳಿಸುತ್ತೀರಿ. ನಿಮ್ಮ ಜಗತ್ತು ವಿಸ್ತಾರವಾಗುತ್ತದೆ. ನೀವು ಉಲ್ಲಸಿತರಾಗುತ್ತೀರಿ.

ನಾವು ಆಗಾಗ ಯಾರಿಗಾದರೂ ದಾನ ಮಾಡುತ್ತಿದ್ದಾಗ, ನೆರವು ನೀಡುತ್ತಿದ್ದಾಗ ನಮ್ಮ ಮನಸ್ಸು ವಿಶಾಲವಾಗುತ್ತದೆ. ಆದರೆ, ಹಿಡಿದಿಟ್ಟುಕೊಂಡಾಗ ಮನಸ್ಸು ಸಂಕುಚಿತಗೊಳ್ಳುತ್ತದೆ. ಎಲ್ಲ ಸಲವೂ ನಾವು ಸ್ವಾರ್ಥದಿಂದ ಹಿಡಿದಿಟ್ಟುಕೊಳ್ಳುತ್ತೇವೆ ಅಂದಲ್ಲ. ಒಂದೊಂದು ಸಲ ಆತ್ಮವಿಶ್ವಾಸದ ಕೊರತೆಯಿಂದಲೂ ಹೀಗಾಗುತ್ತದೆ.

ಉದಾ: ಕೆ ಶ್ರಾಂಕ್‌ಗೆ ಚಿಕ್ಕವಳಿದ್ದಾಗ ಮನೆಯವರಲ್ಲ ‘ಡುಮ್ಮಿ’ ಎಂದು ಕರೆಯುತ್ತಿದ್ದರು. ಬೆಳೆಯುತ್ತ ಬಂದಂತೆ ಅವಳು ಇತರರ ನೆರವಿಗೆ ಧಾವಿಸುವ ವ್ಯಕ್ತಿತ್ವ ಬೆಳೆಸಿಕೊಂಡಳು. ಆಕೆ ಜನಸೇವೆಗಾಗಿ ಕಾಯುತ್ತಿದ್ದಳು. ಆಕೆ ಪ್ರತಿಭಾವಂತ ಗಾಯಕಿಯಾಗಿರುವುದರಿಂದ ಧೈರ್ಯ ಮಾಡಿ ಕಲಾತಂಡವೊಂದಕ್ಕೆ ಸೇರಿಕೊಂಡಳು. ಈ ತಂಡ ವಿಶೇಷ ಸಾಮರ್ಥ್ಯವುಳ್ಳವರು, ವೃದ್ಧರಿಗಾಗಿ ಕಾರ್ಯಕ್ರಮಗಳನ್ನು ಮಾಡುತ್ತಿತ್ತು.

ಕೆ ಶ್ರಾಂಕ್‌ನಲ್ಲಿ ಆದ ಬದಲಾವಣೆ ತುಂಬ ಪರಿಪೂರ್ಣವಾಗಿತ್ತು. ಆಕೆ ಈಗ ಡುಮ್ಮಿಯಾಗಿರಲಿಲ್ಲ. ಗೌರವಯುತ ವ್ಯಕ್ತಿಯಾಗಿದ್ದಳು. ಆಕೆ ಸಂಗೀತ ಹಾಡಿದಾಗಲೆಲ್ಲ ಆಕೆಯ ಕೀಲುನೋವು ಜಾದೂ ಮಾಡಿದಂತೆ ಮಾಯವಾಗುತ್ತಿತ್ತು.

ಹೌದು, ನಮ್ಮ ಅನಾರೋಗ್ಯದಲ್ಲಿ ಮನಸ್ಸಿನ ಪಾತ್ರ ದೊಡ್ಡದಾಗಿರುತ್ತದೆ.  ಬೇರೆಯವರಿಗಾಗಿ ಏನನ್ನೋ ಮಾಡುತ್ತಿರುವಾಗ ಉಲ್ಲಾಸ ಮೂಡಿ ನಮ್ಮ ದೇಹದ ನೋವು ಮಾಯವಾಗಿರುತ್ತದೆ. ನಾವು ಆರೋಗ್ಯಕರವಾಗಿ ಇರಬೇಕಾದರೆ ನಮ್ಮ ಮನಸ್ಸಿನ ಗುಣಮಟ್ಟವೂ ಮಹತ್ವದ್ದಾಗಿರುತ್ತದೆ. ನಾವು ನಮ್ಮೊಳಗೆ ಬೆಳೆಯಬೇಕಾಗುತ್ತದೆ. ನಮ್ಮನ್ನು ಒಳಗೊಳಗೆ ನಮ್ಮದೇ ನಿರ್ಬಂಧಗಳಿಂದ ಹೊರ ಬರಬೇಕಾಗುತ್ತದೆ.

ನನಗಾಗಿ ಏನಿದೆ ಎನ್ನುವುದರ ಬದಲು ನಾನು ಹೇಗೆ ನೀಡಬಹುದು ಎಂದು ಪ್ರಶ್ನಿಸಿಕೊಳ್ಳಿ. ಈ ತತ್ವದ ಆಧಾರದಲ್ಲಿ ನೀವು ಕೆಲಸ ಮಾಡಿದಾಗ ನಿಮ್ಮ ಸಂತಸ ಇಮ್ಮಡಿಯಾಗುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಮತ್ತೊಬ್ಬ ವ್ಯಕ್ತಿಗೆ ಆತನ/ಆಕೆಯ ದಾರಿ ಕಂಡುಕೊಳ್ಳಲು ಟಾರ್ಚ್‌ ಬೆಳಗಿದಾಗ ನಿಮ್ಮೊಳಗಿನ ಆತ್ಮವೂ ಬೆಳಕಿನಿಂದ ಹೊಳೆಯುತ್ತದೆ.

ಹತ್ತು, ಹಲವು ಪ್ರಭಾವದಿಂದ ರೂಪುಗೊಂಡ ನಿಮ್ಮ ಸ್ವಭಾವದ ಒಳಗೆ ನಿಮ್ಮ ನಿಜರೂಪ ಇರುತ್ತದೆ. ಅದು ಸಂಪೂರ್ಣ ಸಂತಸದಿಂದ ಕೂಡಿರುತ್ತದೆ.  ನೀವು ಅಮ್ಮನಾಗಿದ್ದೀರಿ, ಅಧಿಕಾರಿಯಾಗಿದ್ದೀರಿ. ದೊಡ್ಡದೊಂದು ಕಂಪೆನಿಯ ಸಿಇಒ ಆಗಿದ್ದೀರಿ ಎಂಬುದನ್ನೆಲ್ಲ ಮರೆತುಬಿಡಿ. ಸುಮ್ಮನೇ ಕುಳಿತುಕೊಳ್ಳಿ. ನಿಮ್ಮ ಮನದಲ್ಲಿ ಮೂಡುವ ಆಲೋಚನೆಗಳನ್ನೆಲ್ಲ ನಿರ್ಲಕ್ಷ್ಯಿಸಿ. ನೀವೊಬ್ಬ ಆಕಾಶದಲ್ಲಿ ತೇಲುತ್ತಿರುವ ಹಕ್ಕಿಯ ಗರಿ ಎಂದುಕೊಳ್ಳಿ. ನಿಮ್ಮ ಸ್ವಾತಂತ್ರ್ಯವನ್ನು ಅನುಭವಿಸಿ. ನೀವು ದಿನಾ ಹೀಗೆ ಅಂದುಕೊಳ್ಳುತ್ತಿರುವಾಗ ಸಂತಸದ ಬುಗ್ಗೆಯೊಂದಕ್ಕೆ ಕೈಹಾಕುತ್ತೀರಿ. ಸಂತಸ, ಕರುಣೆ, ಪ್ರೀತಿ  ನಿಮ್ಮಲ್ಲಿ ಉಕ್ಕುತ್ತದೆ.

ಈ ವ್ಯಾಯಾಮವನ್ನು ಯಾವಾಗಲೂ ಮಾಡುತ್ತ ಇರಿ. ನಿಮ್ಮ ನಡವಳಿಕೆ ಸಂತಸದಿಂದ ಕೂಡಿರಬೇಕು.
ಕೆಲವೊಮ್ಮೆ ನೀವು ಅನಿರ್ವಾಯವಾಗಿ ಒರಟಾಗಿ ಮಾತನಾಡಿರಬಹುದು. ಆದರೂ ಸಂತಸ ನಮ್ಮ ವ್ಯಕ್ತಿತ್ವದಲ್ಲೇ ಅಡಗಿದೆ. 
ನಿಶ್ವಾಸದ ಮೂಲಕ ಋಣಾತ್ಮಕ ಸಂಗತಿಗಳನ್ನು ಹೊರಹಾಕಿ. ಸಮುದ್ರದಲ್ಲಿ ಅಲೆಗಳು ನರ್ತಿಸುವಂತೆ, ನಿಮ್ಮ ಮನದಲ್ಲಿ ವಿಚಾರಗಳು ನರ್ತಿಸುತ್ತಿರುತ್ತವೆ. ಆ ಕ್ಷಣಗಳನ್ನು ಸುಂದರವಾಗಿಸಿಕೊಳ್ಳಿ.

ನೀವು ದುಃಖದಲ್ಲಿ ಇದ್ದಾಗ ಅಹಂಕಾರವನ್ನು ಪೋಷಿಸುತ್ತ ಇರುತ್ತೀರಿ. ನೀವು ಏನನ್ನೂ ಮಾಡದೇ  ಎಲ್ಲವೂ ಒದಗಿಬರುತ್ತದೆ.
ಒಳ್ಳೆಯ ಹೃದಯವಿದ್ದಾಗ ಎಲ್ಲರನ್ನೂ ಗೆಲ್ಲಬಹುದು. ಆದರೆ, ನೀಡುವ ಹೃದಯವಿದ್ದಾಗ ಇಂತಹ ಎಲ್ಲ ಸಂಬಂಧಗಳನ್ನೂ ನಿಭಾಯಿಸಬಹುದು.

ಮೂಲ :ಭರತ್ ಮತ್ತು ಶಾಲನ್ ಸವೂರ್  ಪ್ರಜಾವಾಣಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate