ವೃತ್ತಿ ಶಿಕ್ಷಣದಲ್ಲಿ ದುರ್ಲಭವಾದದ್ದು ವೈದ್ಯಕೀಯ ಶಿಕ್ಷಣ. ಅದರಲ್ಲೂ ಸರ್ಕಾರೀ ಸೀಟು ಗಿಟ್ಟಿಸಲು ವ್ಯಕ್ತಿ ಪ್ರತಿಭಾವಂತನೇ ಆಗಿರಬೇಕು. ಜಾತಿ ಮೀಸಲಾತಿ ಇದ್ದರೂ ಆ ಜಾತಿಯ ಉಳಿದವರಿಗಿಂತ ಈತ ಪ್ರತಿಭಾವಂತನಾಗಿರಬೇಕು.ವೈದ್ಯಕೀಯ ಶಿಕ್ಷಣದಲ್ಲಿ ಕುಡಿತದಿಂದ ಉಂಟಾಗುವ ಖಾಯಿಲೆಗಳು, ಪರಿಣಾಮಗಳ ಬಗ್ಗೆ ಕಲಿಯುವುದೂ ಒಂದು ಮುಖ್ಯ ಭಾಗ. ಸರ್ಕಾರೀ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ ಪ್ರತಿಭಾವಂತ, ಮನಸ್ಸಿಟ್ಟು ವ್ಯಾಸಂಗ ಮಾಡಿದ ವೈದ್ಯ ಕುಡಿತದ ಎಲ್ಲಾ ಪರಿಣಾಮಗಳನ್ನು ಅರಿತೂ ತಾನೇ ಕುಡುಕನಾಗ ಹೊರಟರೆ ಹೇಗೆ ಅರ್ಥೈಸುವುದು? ‘ಪುರಾಣ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬಂತಾಗುವುದಿಲ್ಲವೆ ಎಂದು ಅನ್ನಿಸಬಹುದು. ಆದರೆ ವೈಯುಕ್ತಿಕ ಜೀವನದಲ್ಲಿ ಹುಟ್ಟುವ ಕಾರ್ಕೋಟಕ ವಿಷವನ್ನು ಜೀರ್ಣಿಸಿಕೊಳ್ಳಲು ಈ ಕುಡಿತದ ಉಪಯೋಗವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಾಣದು. ಎಲ್ಲಾ ಅರಿತೂ ಕುಡುಕನಾಗ ಹೊರಟ ವೈದ್ಯನಿಗೆ ಯಾವ ಮದ್ದು?
ಸುಮಾರು 35 ವರ್ಷ ವಯಸ್ಸಿನ ವೈದ್ಯ ಮನೋವೈದ್ಯರಲ್ಲಿಗೆ ಬಂದ. ಸಂಸಾರದಲ್ಲಿ ಬಿರುಕು ಉಂಟಾಗಿದ್ದು, ಈ ನೋವು ತಡೆಯಲಾರದೆ ಕುಡಿಯಲು ಪ್ರಾರಂಭಿಸಿದೆ, ಬರುಬರುತ್ತಾ ಕುಡಿತ ಹೆಚ್ಚಾಗುತ್ತಿದೆ. ನಿದ್ದೆ ಬಾರದಾಗಿದೆ. ಪರಿಹಾರ ಮಾಡಿ ಎಂದು ಮನವಿ ಮಾಡಿದ
ಈತ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಜನಿಸಿದವ. ತಂದೆ – ತಾಯಿ ಬಡವರು. ಇಬ್ಬರು ಗಂಡು ಮಕ್ಕಳು. ತಂದೆ, ತಾಯಿ, ಇಬ್ಬರೂ ಕೂಲಿನಾಲಿ ಮಾಡಿ ಜೀವಿಸುವವರು. ಈ ಹುಡುಗ ಮುಂಚಿನಿಂದಲೂ ಓದಿನಲ್ಲಿ ಚುರುಕು. ಇವನನ್ನು ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಸೇರಿಸಿದರು. ಇವನೂ ಶ್ರದ್ಧೆಯಿಂದ ವ್ಯಾಸಂಗ ಮಾಡಿದ. ಎಸ್‌ಎಸ್‌ಎಲ್‌ಸಿ, ಪಿಯುಸಿಗಳನ್ನು ಅತ್ಯುತ್ತಮ ಅಂಕಪಡೆದು ಪಾಸು ಮಾಡಿದ. ಮೀಸಲಾತಿ, ಅರ್ಹತೆ ಎರಡೂ ಬೆರೆತು ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶವೂ ಆಯಿತು. ಈ ಮಧ್ಯೆ ಇವನ ಅಣ್ಣ ದುಶ್ಚಟಗಳ ದಾಸನಾದ. ಕುಡಿದೂ ಕುಡಿದೂ ಮನೋರೋಗಿಯಾಗಿ ಮನೆಬಿಟ್ಟು ಬೀದಿ ಸುತ್ತಲಾರಂಭಿಸಿದ. ಅವನ ನಡವಳಿಕೆ ನೋಡಿ ಮನೆಯವರಿಗೆಲ್ಲಾ ಜಿಗುಪ್ಸೆ, ಅಸಹ್ಯ. ಅವನನ್ನು ಮನೆಗೆ ಸೇರಿಸುವುದನ್ನೇ ಬಿಟ್ಟುಬಿಟ್ಟರು.
ಇವೆಲ್ಲಾ ನೋವನ್ನು ನುಂಗಿಕೊಂಡು ಈ ವಿದ್ಯಾರ್ಥಿ ವ್ಯಾಸಂಗ ಮುಂದುವರೆಸಿದ. ಕಾಲಕ್ರಮೇಣ ಇವನ ವೈದ್ಯಕೀಯ ಪದವಿಯೂ ಮುಗಿಯಿತು. ಈ ಪದವಿ ಪಡೆಯುವುದಕ್ಕಾಗಿ ಈತ ಹಗಲೂ ರಾತ್ರಿ ಶ್ರಮಪಟ್ಟಿದ್ದ. ಸ್ನೇಹ ಬೆಳೆಸಲಿಲ್ಲ, ಸಿನಿಮಾ ನೋಡಲಿಲ್ಲ, ಹವ್ಯಾಸ ಬೆಳೆಸಿಕೊಳ್ಳಲಿಲ್ಲ, ಹೊಟೇಲ್‌ಗೆ ಹೋಗಲಿಲ್ಲ. ಪದವಿ ನಂತರ ಸ್ನಾತಕೋತ್ತರ ಪದವಿಗೆ ಓದಿದ. ಅದರಲ್ಲೂ ಗೆದ್ದ. ಸ್ನಾತಕೋತ್ತರ ಪದವಿಯನ್ನೂ ಪಡೆದ, ಇವನು ಸ್ನಾತಕೋತ್ತರ ಪದವೀಧರನಾಗಿ ವೈದ್ಯವೃತ್ತಿ ಆರಂಭಿಸಿದ ಮೇಲೆ ಅವನ ಪಂಗಡದವರಿಗೆ ಮನವೊಲಿಸಿ ತಮ್ಮ ಮಗಳನ್ನು ಇವನಿಗೆ ವಿವಾಹ ಮಾಡಿಕೊಟ್ಟರು. ಆಕೆ ಇಂಜಿನಿಯರ್.
ಮದುವೆಯ ನಂತರ ತನ್ನೆಲ್ಲ ಸಂಕಷ್ಟ ತೀರಿತೆಂದು ಈತ ಹಿಗ್ಗಿದ, ಇಬ್ಬರು ಮಕ್ಕಳೂ ಆದರು. ಬಹಳ ಸಂತಸಪಟ್ಟ. ನನ್ನಷ್ಟು ಭಾಗ್ಯವಂತರು ಯಾರೂ ಇಲ್ಲವೆಂದು ನಲಿದಾಡಿದ. ಮಡದಿಗೂ ಸ್ನಾತಕೋತ್ತರ ಪದವಿ ಮಾಡು ಎಂದು ಉತ್ತೇಜಿಸಿದ. ಆಕೆಯೂ ಸ್ನಾತಕೋತ್ತರ ಪದವಿ ಮುಗಿಸಿದಳು. ಸ್ವಂತ ಮನೆ ಕಟ್ಟಲು ಪ್ರಾರಂಭಿಸಿದ. ಸಾಲ, ಸೋಲ ಮಾಡಿ, ತಾನೇ ಮುಂದೆ ನಿಂತು ಒಂದೊಂದು ಹಂತವನ್ನೂ ಗಮನವಿಟ್ಟು ಕಟ್ಟಿಸಿದ. ಮನೆಯೂ ಮುಗಿಯಿತು. ಸಂಸಾರಕ್ಕೆ ಇನ್ನೇನು ಬೇಕು?
ಇವನದ್ದೊಂದು ದೋಷವಿತ್ತು. ಶೀಘ್ರಕೋಪ, ಹಠಮಾರಿತನ. ಹತ್ತು ವರ್ಷ ಇವನ ಐಲಾಟಗಳನ್ನು ಸಹಿಸಿದ್ದ ಮಡದಿ, ಮನೆ ಕಟ್ಟಿ ಮುಗಿಸಿದ ಆರನೇ ತಿಂಗಳಲ್ಲಿ ಒಂದು ಜಗಳದ ನಂತರ ತಾಳ್ಮೆ ಕಳೆದುಕೊಂಡಳು. ಇವನೊಡನೆ ಇರಲಾಗದು ಎಂದು ನಿರ್ಧರಿಸಿ ತವರು ಮನೆಗೆ ನಡೆದುಬಿಟ್ಟಳು, ಮಕ್ಕಳನ್ನೂ ಕರೆದುಕೊಂಡು. ತನ್ನ ಕೋಪಿಷ್ಟ ಸ್ವಭಾವದ, ಹಠಮಾರಿತನದ ದೋಷದ ಅರಿವಿದ್ದ ಈತ ಮಡದಿಯಲ್ಲಿ ಕ್ಷಮಾಪಣೆ ಯಾಚಿಸಿದ; ಮನಸ್ಸು ಶಾಂತವಾದ ಮೇಲೆ ಬರುತ್ತೇನೆ ಎಂದು ಹೇಳುತ್ತಿದ್ದ ಮಡದಿ ಆರು ತಿಂಗಳಾದರೂ ವಾಪಸ್ಸು ಬರಲಿಲ್ಲ. ಈತ ಸ್ವಪ್ರಯತ್ನ, ಸ್ನೇಹಿತರು, ಪಂಗಡದ ಮುಖಂಡರು, ನ್ಯಾಯಾಲಯ ಎಲ್ಲಾ ವಿಧದಿಂದಲೂ ಈಕೆಯನ್ನು ವಾಪಸ್ಸು ಕರೆತರುವುದರಲ್ಲಿ ಸೋತ. ಶುರುವಿನಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಅಪ್ಪನ ಬಳಿಗೆ ಕಳಿಸುತ್ತಿದ್ದ ತಾಯಿ ಬರಬರುತ್ತಾ ಅದನ್ನೂ ನಿಲ್ಲಿಸಿಬಿಟ್ಟಳು. ಮಕ್ಕಳ ಮೇಲೆ ಮಹಾಮಮತೆ ಇಟ್ಟುಕೊಂಡಿದ್ದ ಈತ ಪೂರ್ತಿ ಚೂರು ಚೂರಾಗಿಬಿಟ್ಟ.
ತಾನೇ ಸ್ವಂತ ನಿರ್ಮಿಸಿದ್ದ ಮನೆ ಪೂರ್ತಿ ಭಣ ಭಣ ಎನ್ನುತ್ತಿತ್ತು. ಕೆಲಸ ಮಾಡಲು ಆಸಕ್ತಿಯಿಲ್ಲ. ಆದರೂ ಸಾಲಕ್ಕೆ ಕಂತು ಕಟ್ಟಬೇ ಕಾದ ಅನಿವಾರ್ಯತೆ. ಕೆಲಸಕ್ಕೆ ಬರುತ್ತಾನೆ. ಅರೆ ಮನಸ್ಸಿನಲ್ಲಿ ಮಾಡುತ್ತಾನೆ. ಕೆಲಸದ ನಂತರ ಮನೆಗೆ ಹೋಗಲೂ ಬೇಜಾರು. ಅತೀವ ಒಂಟಿತನ ಕಾಡುತ್ತದೆ. ಸ್ನೇಹಿತರಿಲ್ಲ, ಹವ್ಯಾಸವಿಲ್ಲ, ವ್ಯಾಸಂಗ ಮಾಡುವ ಹುಮ್ಮಸ್ಸಿನಲ್ಲಿ ಬದುಕಲ್ಲಿ ಬೇರೇನೂ ಬೆಳೆಸಿಕೊಳ್ಳಲಿಲ್ಲ.
ಈ ಹೊತ್ತಿನಲ್ಲಿ ವೈದ್ಯನೊಬ್ಬನ ಸ್ನೇಹವಾ ಯಿತು. ಅವನು ಮದ್ಯವ್ಯಸನಿ. ಇವನಿಗೆ ಅವನೊಬ್ಬನೇ ಆಪ್ತ ಮಿತ್ರ. ಮೊದಲೆಲ್ಲ ಮದ್ಯ ಸೇವಿಸುವವರನ್ನು ಕಂಡರೆ ಅಸಹ್ಯಪಟ್ಟು ಕೊಳ್ಳುತ್ತಿದ್ದ ಈತ ಕ್ರಮೇಣ ತಾನೂ ಬಾಟಲ್ ಎತ್ತಲಾರಂಭಿಸಿದ. ಮನದ ನಿರಾಶೆ, ಆತಂಕ, ದುಃಖಗಳನ್ನು ಮದ್ಯಪಾನ ಮಾಡಿ ಮರೆಯ ಲಾರಂಭಿಸಿದ. ತನ್ನ ಅಣ್ಣನೂ, ಕುಡುಕನಾಗಿ ಮನೋರೋಗಿಯಾಗಿರುವುದು ಗೊತ್ತು. ಮದ್ಯಪಾನ ಬಿಟ್ಟರೆ ಇವನಿಗೆ ಬೇರೆ ಯಾವ ಚಟುವಟಿಕೆಯಲ್ಲೂ ಮನಸ್ಸಿಲ್ಲ. ಕ್ರಮೇಣ ಮದ್ಯಪಾನ ಹೆಚ್ಚಾಗುತ್ತಾ ಇದೆ. ನಿದ್ರೆ ಮಾತ್ರೆ ನುಂಗಿದರೂ ನಿದ್ದೆಯಿಲ್ಲದಂತಾಗಿದೆ.
ಇವನ ಕೌಟುಂಬಿಕ ಹಿನ್ನೆಲೆ, ಜಿಗುಟು ಸ್ವಭಾವ, ಜೀವನದಲ್ಲಿ ಎದುರಾದ ಸಮಸ್ಯೆಗಳ ಒಟ್ಟು ಪರಿಣಾಮ ಈ ಕುಡಿತ – ಎಂದು ಮನೋವೈದ್ಯರು ನಿಷ್ಕರ್ಷಿಸಿದರು. ಇವನ ಮನಸ್ಸಿನ ಖಿನ್ನತೆ ಕಡಿಮೆಯಾದರೆ ಕುಡಿತವೂ ಕಡಿಮೆ ಆಗಬಹುದು ಎಂದು ಅವರ ಲೆಕ್ಕಾಚಾರ. ಖಿನ್ನತೆ ಕಳೆಯುವ ಔಷಧೋಪಚಾರ ಪ್ರಾರಂಭಿಸಿದರು.
ಜ್ಞಾನಪಡೆದಿರುವ ನಾವಿಕನೂ, ಅನುಭವದ ಕೊರತೆಯಿಂದ ಮನವೆಂಬ ನಾವೆಯನ್ನು ಅಡ್ಡಾದಿಡ್ಡಿ ಚಾಲಿಸಿ ಅಪಘಾತಕ್ಕೆ ಒಳಗಾಗಬಹುದು. ಅಪಘಾತಕ್ಕೀಡಾದ ‘ಮನವೆಂಬ ನಾವೆ’ ಮನೋವೈದ್ಯರ ಚಿಕಿತ್ಸೆಯಿಂದ ದುರಸ್ತಿಯಾಗುವ ಸಾಧ್ಯತೆ ಇದೆ.
-ಡಾ. ಪ್ರಶಾಂತ್ ಎನ್.ಆರ್.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 7/4/2020