অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಟ ಬಿಡಿಸಲೊಂದು ಸಹಾಯವಾಣಿ

ಚಟ ಬಿಡಿಸಲೊಂದು ಸಹಾಯವಾಣಿ

‘ಇವತ್ತು ಲಾಸ್ಟ್‌ ಕಣೋ. ಇವತ್ತಿನಿಂದಲೇ ಸಿಗರೇಟಿಗೆ ಗುಡ್‌ಬೈ. ಇನ್ಮೇಲೆ ಸಿಗರೇಟು ಮುಟ್ಟೋಲ್ಲ... ಪ್ರಾಮೀಸ್‌’... ಮಿತ್ರನೆದುರು ಒಬ್ಬ ಆಣೆ–ಪ್ರಮಾಣ ಮಾಡುತ್ತಿದ್ದ. ‘ಹೋಗೋ... ಯಾವಾಗ್ಲೂ ಹಿಂಗೇ  ಹೇಳ್ತಿಯಾ. ಮತ್ತೆ ಮರುದಿನವೇ ದಂ ಎಳೆಯೋಕೆ ಶುರುಮಾಡ್ತೀಯಾ. ನಾನಂತೂ ನಂಬೋದಿಲ್ಲ’  
‘ಏನೋ ಮಾಡ್ಲಿ ಬಿಡ­ಬೇಕೂಂತ ಎಷ್ಟೊಂದು ಪ್ರಯತ್ನಿ­ಸ್ತೀನಿ. ಆದ್ರೆ, ಮನಸ್ಸು ತಡೆಯೋದಿಲ್ಲ...’ ಅಂತ ತನ್ನ ಪ್ರಯತ್ನದ ಹಿಂದಿನ ವೈಫಲ್ಯ ಒಪ್ಪಿಕೊಂಡ.
–ಇದು ಸಿಗರೇಟು ಬಿಡಬೇಕೆಂದವರ ಒಬ್ಬರ ಕಥೆಯಲ್ಲ. ಇಂಥ ನೂರಾರು ಜನರ ಸಮಸ್ಯೆಯೂ ಹೌದು. ಆದರೆ, ಇಂಥ ಚಟ ಬಿಡಿಸಲಿಕ್ಕೆ ‘ಕ್ವಿಟ್‌ಲೈನ್‌’ ಹೆಸ­ರಲ್ಲಿ ಸಹಾಯವಾಣಿಯೊಂದು ಯಶಸ್ವಿ­­­­ಯಾಗಿ ಕಾರ್ಯ ನಿರ್ವಹಿಸು­ತ್ತಿದೆ. ಇದರ ಸಹಾಯದಿಂದ ಚಟದಿಂದ ಮುಕ್ತರಾದವರು ಹಲವರು. ಅಷ್ಟೇ ಅಲ್ಲ, ಮತ್ತೆಂದೂ ದುಶ್ಚಟಗಳ ದಾಸರಾಗು­ವು­ದಿಲ್ಲ ಎಂಬ ದೃಢಸಂಕಲ್ಪದಿಂದ ಆರೋಗ್ಯ­ಕರ ಜೀವನ ನಡೆಸುತ್ತಿದ್ದಾರೆ.

ಏನಿದು ಕ್ವಿಟ್‌ಲೈನ್‌?:
ಹೆಸರೇ ಸೂಚಿಸುವಂತೆ ‘ಕ್ವಿಟ್‌’ ಅಂದರೆ ತೊಲಗುವುದು–ತಿರಸ್ಕರಿಸುವುದು, ಧಿಕ್ಕರಿಸುವುದು ಎಂದರ್ಥ. ತಂಬಾಕು, ಧೂಮಪಾನ, ಗುಟ್ಕಾ ಸೇವನೆಯಂತಹ ಚಟಗಳಿಂದ ಮುಕ್ತವಾಗಲು ಸಹಾಯ­ವಾಗುವುದೇ ‘ಕ್ವಿಟ್‌ಲೈನ್’ ಸಹಾಯ­ವಾಣಿ.

ದಿನದ 24 ತಾಸುಗಳ ಕಾಲವೂ ಕಾರ್ಯ ನಿರ್ವಹಿಸುವ ಈ ಸಹಾಯ­ವಾಣಿ ಚಟದಿಂದ ಮುಕ್ತರಾಗ­ಬಯಸು­ವವರಿಗೆ ಸ್ನೇಹಿತನಂತೆ ಮಾರ್ಗದರ್ಶನ ನೀಡುತ್ತದೆ. ಅಷ್ಟೇ ಅಲ್ಲ, ತಂಬಾಕು, ಸಿಗರೇಟು, ಪಾನ್‌, ಗುಟ್ಕಾದಿಂದ ಬಿಡುಗಡೆ ಹೊಂದಲು ಸರ್ಕಾರಿ, ಅರೆ ಸರ್ಕಾರಿ ಆಸ್ಪತ್ರೆ­­ಗಳಲ್ಲಿ ಇರುವ ಸೌಲಭ್ಯಗಳ ಕುರಿತು ಕೂಡಾ ಮಾಹಿತಿ ನೀಡುತ್ತದೆ.

ಚಟ ಬಿಡುವ ಮುನ್ನ...
ವ್ಯಕ್ತಿಯೊಬ್ಬ ಯಾವುದೇ ಚಟಕ್ಕೆ ದಾಸ­ನಾಗುವ ಹಂತಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ. ತೀವ್ರ ಮಾನಸಿಕ ಒತ್ತಡ, ಕುತೂಹಲ­ದಿಂದಲೋ ಅಥವಾ ಹಿರಿಯರು, ಚಿತ್ರ­ನಟರ ಅನುಕರಣೆಗೆ ಈಡಾಗಿ ಸಿಗರೇಟು ಸೇದುವವರೇ ಹೆಚ್ಚು. ಸಿಗರೇಟು, ತಂಬಾಕು, ಗುಟ್ಕಾದಲ್ಲಿ ನಿಕೋಟಿನ್‌ ಅಂಶ ಇರುತ್ತದೆ. ಈ ಅಂಶ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಿ, ಒಂದು ರೀತಿಯ ಮತ್ತಿನ ಅನು­ಭೂತಿ­­ ನೀಡುತ್ತದೆ. ಇದರಿಂದಾಗಿ ವ್ಯಕ್ತಿ ಒತ್ತಡದಿಂದ ಬಿಡುಗಡೆ ಹೊಂದುವ ಅನುಭವ ಪಡೆಯುತ್ತಾನೆ. ಈ ಸುಖ­ಮಯ ಅನುಭೂತಿ ತಾತ್ಕಾಲಿಕ ಕ್ಷಣ ಮಾತ್ರವಾಗಿರುತ್ತದೆ.

ಸುಮ್ಮನೇ ಕುತೂಹಲಕ್ಕೆಂದು ಸಿಗ­ರೇಟು ಸೇದುವವರು ಕಾಲಾಂತರದಲ್ಲಿ ಚೈನ್‌ ಸ್ಮೋಕರ್ ಆಗಿ ಪರಿವರ್ತಿತ­ರಾ­ಗುವ ಅಪಾಯವೂ ಇರುತ್ತದೆ. ಇದಕ್ಕೆಲ್ಲಾ ನಿಕೋಟಿನ್‌ ಕಾರಣ. ತಜ್ಞರ ಪ್ರಕಾರ ಗಾಂಜಾ, ಅಫೀಮಿಗಿಂತಲೂ ನಿಕೋಟಿನ್‌ನಲ್ಲಿ ಹೆಚ್ಚು ಮತ್ತು ಬರುವ ಅಂಶವಿದೆಯಂತೆ.  ಹಾಗಾಗಿ, ಧೂಮ­ಪಾನಿಗಳು ಕೆಲಕ್ಷಣ ಸಿಗರೇಟು ಬಿಟ್ಟರೆ ಸಾಕು ಚಡಪಡಿಸತೊಡಗುತ್ತಾರೆ. ಆದರೆ, ನಿಕೋಟಿನ್ ಆರಂಭದಲ್ಲಿ ಮಾತ್ರ ಕಿಕ್‌ ನೀಡುತ್ತ­ದೆಯಷ್ಟೇ. ಬರುಬರುತ್ತಾ ನಿಕೋಟಿನ್‌ ಅಂಶ ಹೆಚ್ಚಾದರಷ್ಟೇ ವ್ಯಕ್ತಿಯ ಮನಸ್ಸಿಗೆ ಸಮಾಧಾನವಾಗುತ್ತದೆ. ಈ ಪ್ರಮಾಣ ಹೆಚ್ಚಾದಂತೆ ವ್ಯಕ್ತಿಯ ಆರೋಗ್ಯವೂ ನಿಧಾನಕ್ಕೆ ಹದಗೆಡ­ತೊಡಗುತ್ತದೆ.

ಬಿಡುಗಡೆ ಹೇಗೆ?:
ಚಟ ಬಿಡುವ ಮುನ್ನ ಸೂಕ್ತ ಕೌನ್ಸೆ­ಲಿಂಗ್ ಮಾಡಲಾಗುತ್ತದೆ. ದುಶ್ಚಟಗ­ಳಿಂದ ಉಂಟಾಗುವ ಪರಿಣಾಮಗಳನ್ನು ಉದಾಹರಣೆ ಸಮೇತ ವಿವರಿಸ­ಲಾಗುತ್ತದೆ.
ಸಿಗರೇಟು ಬಿಡಬೇಕೆನ್ನುವವರಲ್ಲಿ ಮೊದಲ ಹಂತವಾಗಿ ಒತ್ತಡ ನಿಭಾಯಿ­ಸುವುದು ಹೇಗೆ ಎಂಬುದನ್ನು ಹೇಳಿಕೊಡ­ಲಾಗುತ್ತದೆ. ಸಿಗರೇಟು ಸೇದ­ಬೇಕೆ­ನಿಸಿ­ದಾಗ ಏನು ಮಾಡಬೇಕು? ಮನಸ್ಸನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಇದರ ನಡುವೆಯೂ ಸಿಗರೇಟು ಸೇದಬೇಕೆಂಬ ತೀವ್ರತೆ ಉಂಟಾದಲ್ಲಿ ಅಂಥವರಿಗೆ ನಿಕೋ­ಟಿನ್ ಲೇಪಿತ ಚ್ಯೂಯಿಂಗ್‌ಗಮ್‌ ನೀಡಲಾಗುತ್ತದೆ. ಇದು ಸಿಗರೇಟ್‌ ಸೇದಿದ ಅನುಭೂತಿಯನ್ನೇ ನೀಡುತ್ತಾ­ದರೂ, ನಂತರ ಸಿಗರೇಟು ಸೇದುವ ಆಸೆಯಿಂದ ಮನಸ್ಸನ್ನು ನಿಯಂತ್ರಿಸು­ವಲ್ಲಿ ಯಶಸ್ವಿಯಾಗುತ್ತದೆ.

ಮತ್ತೆ ಕೆಲವರಿಗೆ ಮಾತ್ರೆಗಳ ಮೂಲ­ಕವೂ ಧೂಮಪಾನ, ತಂಬಾಕಿನ ಚಟ­ದಿಂದ ಬಿಡುಗಡೆ ಮಾಡಿಸಲಾಗುತ್ತದೆ. ಕೇವಲ ಒಂದು ವಾರದಿಂದ ಎರಡು ವಾರಗಳ ಅವಧಿಯಲ್ಲಿ ಚಟದಿಂದ ಮುಕ್ತರಾಗಬಹುದು.

ಸಮುದಾಯ, ಕುಟುಂಬದ ಪಾತ್ರ:
ಮುಖ್ಯವಾಗಿ ಇದರಲ್ಲಿ ಸಮುದಾಯ ಅಥವಾ ಕುಟುಂಬದ ಸದಸ್ಯರ ಪಾತ್ರ ಮಹತ್ತರವಾದುದು. ಯಾವುದೇ ದುಶ್ಚಟ ಬಿಡುವಾಗ ಆರಂಭದಲ್ಲಿ ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಇಂಥ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಪ್ರೀತಿ, ಪೋತ್ಸಾಹ, ಉತ್ಸಾಹಭರಿತ ಮಾತುಗಳಿಂದ ವ್ಯಕ್ತಿಯ ಮನ ಪರಿವರ್ತಿಸಬೇಕು. ಇದಕ್ಕೆ ಅಪಾರ ತಾಳ್ಮೆ ಬೇಕು.

ಚಟದಿಂದ ಮುಕ್ತಿ ಹೊಂದಬೇಕೆನ್ನುವವರಿಗೆ ಕುಟುಂಬ ಇಲ್ಲವೇ ಸಮುದಾಯದ ಸಹಕಾರ ದೊರೆಯದಿದ್ದಲ್ಲಿ ಮುಜುಗರ, ಅವಮಾನ ಉಂಟಾಗಿ ಮಾನಸಿಕವಾಗಿ ಖಿನ್ನತೆ ಅನುಭವಿಸಬಹುದು ಎನ್ನುತ್ತಾರೆ ನಿಮ್ಹಾನ್ಸ್‌ನ ದುಶ್ಚಟ ಸೇವೆಗಳ ವಿಭಾಗದ ಮುಖ್ಯಸ್ಥೆ ಹಾಗೂ ಮಾನಸಿಕ ರೋಗ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಮಾ ಮೂರ್ತಿ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ.  ಸಿಗರೇಟ್‌ ಸೇದುವಾಗ ಬರುವ ಹೊಗೆ ಸೇದುವ ವ್ಯಕ್ತಿಯನ್ನಷ್ಟೇ ಅಲ್ಲ, ಅಕ್ಕಪಕ್ಕದವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಶುದ್ಧ ಗಾಳಿ ಸೇವನೆ ಎಲ್ಲರ ಹಕ್ಕು.  ಈ ನಿಟ್ಟಿನಲ್ಲಿ ಜನಜಾಗೃತಿ ಮೂಡುವ ಅವಶ್ಯಕತೆ ಇದೆ ಎನ್ನುತ್ತಾರೆ ಅವರು.

ಎಲ್ಲಕ್ಕಿಂತ ಮುಖ್ಯವಾಗಿ ಚಟ ಬಿಡುವಾಗ ವ್ಯಕ್ತಿ ಖಿನ್ನತೆಗೊಳಗಾಗು­ತ್ತಾನೆ. ಇದು ಸೂಕ್ಷ್ಮ ಅವಧಿ. ಈ ಸಂದರ್ಭದಲ್ಲಿ ಆತನೊಂದಿಗೆ ಪ್ರೀತಿ, ಪೋತ್ಸಾಹಕರ ಮಾತುಗಳಿಂದ ಧೈರ್ಯ ತುಂಬಬೇಕು. ಆಗ ಮಾತ್ರ ವ್ಯಕ್ತಿ ದುಶ್ಚಟ­ಗಳಿಂದ ದೂರವಾಗಬಲ್ಲ ಎಂಬುದು ವೈದ್ಯರ ಅಭಿಮತ.

ಸಿಗರೇಟು, ತಂಬಾಕು ಸೇವನೆಯಿಂದ ದೊರಕುವ ಸುಖ ಕೇವಲ ತಾತ್ಕಾಲಿಕ. ಆದರೆ, ಅದರಿಂದ ಮುಂದೆ ಬಡ್ಡಿ­ಸಮೇತ ದುಃಖ ಸಿಗುತ್ತದೆ ಎಂಬುದು ನೆನಪಿರಲಿ. ಚಟದಿಂದ ಮುಕ್ತರಾಗಬಯಸುವವರು ಮುಕ್ತವಾಗಿ ಕ್ವಿಟ್‌ಲೈನ್‌ಗೆ ಕರೆ ಮಾಡಿದಲ್ಲಿ ಸೂಕ್ತ ಸಲಹೆ, ಮಾರ್ಗದರ್ಶನ ದೊರೆಯುತ್ತದೆ. ಹಾಗಾದರೆ ಇನ್ನೇಕೆ ತಡ? ಈಗಲೇ ಕರೆ ಮಾಡಿ, ಚಟಕ್ಕೆ ಗುಡ್‌ಬೈ ಹೇಳಿ.

ಕ್ವಿಟ್‌ಲೈನ್‌ ಸಹಾಯವಾಣಿ: 1800227787. (ಇದು ಶುಲ್ಕರಹಿತ ಕರೆ. ಆಯಾ ಭಾಷೆಗಳಲ್ಲೇ ಸಹಾಯವಾಣಿ ದೊರೆಯುತ್ತದೆ. ದಿನದ 24 ಗಂಟೆಯೂ ಸಹಾಯವಾಣಿ ಲಭ್ಯ).

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate