অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಡುವ ಬಾಲ್ಯದ ಗಾಯಗಳು

ಕಾಡುವ ಬಾಲ್ಯದ ಗಾಯಗಳು

ಮಾನವ ಜೀವನದಲ್ಲಿ ‘ಬಾಲ್ಯ’ ಅತೀ ಮುಖ್ಯ ಘಟ್ಟ. ಈ ಮಾತು ಮನೋ ವಿಜ್ಞಾನ ಕ್ಕಂತೂ ನೂರಕ್ಕೆ ನೂರು ಸತ್ಯ. ‘ಆರರಲ್ಲಿ ಕಲಿತದ್ದು ಅರವತ್ತರವರೆಗೆ’ ‘ಗಿಡವಾಗಿ ಒಗ್ಗದ್ದು ಮರವಾಗಿ ಬಗ್ಗೀತೆ?’ ಎಂಬ ಗಾದೆಗಳು ಬಾಲ್ಯದ ಬೆಳವಣಿಗೆಯ ಮಹತ್ವವನ್ನು ವಿವರಿಸುತ್ತವೆ. ಬಾಲ್ಯದ ಬೆಳವಣಿಗೆಗೆ ಮಹತ್ವವಾದದ್ದು – ಮನೆಯ ವಾತಾವರಣ. ತಂದೆ – ತಾಯಿಗಳ ವಾತ್ಸಲ್ಯ, ಒಡಹುಟ್ಟಿದವರ ಆತ್ಮೀಯ ಒಡನಾಟ, ಬಂಧುಮಿತ್ರರ ವಿಶ್ವಾಸ ಈ ವಾತಾವರಣದಲ್ಲಿ ಬೆಳೆದವರ ಮನಃಸ್ಥಿತಿಯೇ ಬೇರೆ. ಬಡತನ, ಇಕ್ಕಟ್ಟು, ವಾತ್ಸಲ್ಯ ರಹಿತ ತಂದೆ – ತಾಯಿ, ವಿಶ್ವಾಸಘಾತುಕ ಬಂಧುಮಿತ್ರರ ವಾತಾವರಣದಲ್ಲಿ ಬೆಳೆದವರ ಮನಃಸ್ಥಿತಿಯೇ ಬೇರೆ. ಇಂತಹ ವಿಷಮಯ ವಾತಾವರಣದಲ್ಲಿ ಬೆಳೆದವರು ಜೀವನಪರ್ಯಂತ ಅಭದ್ರತೆ, ಆತಂಕ, ಅನುಮಾನ, ಆವೇಶಗಳ ಸುಳಿಯಲ್ಲಿ ಸಿಕ್ಕಿ ನರಳುತ್ತಾರೆ. ವಿವಾಹವಾದ ಮೇಲೆ ಶ್ರೀಮಂತಿಕೆ, ಅನುಕೂಲ, ವಾತ್ಸಲ್ಯಮಯ ಕುಟುಂಬ ದೊರಕಿದರೂ ಇವರ ಮನದಾಳದ ಬಿರುಗಾಳಿ ಶಾಂತವಾಗುವುದಿಲ್ಲ. ತಾವೂ ನೋವು ತಿನ್ನುವುದರ ಜೊತೆಗೆ ಸಂಗಾತಿಗಳೂ ಹಾಗೂ ಮಕ್ಕಳೂ ಹಿಂಸೆ ಪಡುವಂತೆ ವರ್ತಿಸುತ್ತಾೆ. ಭೌತಿಕ ಸುಖಸೌಲಭ್ಯಗಳು ಇವರ ಮನದೊಳಗಿನ ಜ್ವಾಲಾಮುಖಿಯನ್ನು ಶಮನ ಮಾಡಲಾರವು. ಇವರಿಗೆ ಮನೋವೈದ್ಯರ ಸಹಾಯ ಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಲ್ಯದಲ್ಲಿ ಮನೆಯ ವಾತಾವರಣ ಉತ್ತಮಗೊಳಿಸುವುದರಿಂದ ಇಂತಹ ಮನೋರೋಗಗಳು ಉದ್ಭವಿಸುವುದನ್ನು ತಡೆಯಬಹುದೆಂದು ಪ್ರತಿಯೊಬ್ಬ ತಂದೆ, ತಾಯಿ ಅರಿಯಬೇಕಾಗಿದೆ.
ಸುಮಾರು 50 ವರ್ಷ ವಯಸ್ಸಿನ ಗೃಹಸ್ಥರು ತಮ್ಮ ಪತ್ನಿಯ ವರ್ತನಾ ಸಮಸ್ಯೆಯ ಬಗ್ಗೆ ಚರ್ಚಿಸಲು ಮನೋವೈದ್ಯರ ಬಳಿ ಬಂದರು. ಮನೋವೈದ್ಯರು ನೀಡಿದ್ದ ಔಷಧಿ ಸೇವನೆ ನಿಲ್ಲಿಸಿರುವ ತಮ್ಮ ಪತ್ನಿ ಮತ್ತೆ ರೋಗಕ್ಕೆ ತುತ್ತಾಗಿ ತೀವ್ರವಾಗಿ ವರ್ತಿಸಿದರೆ ಏನು ಮಾಡುವುದು? ಎಂದು ಅವರಿಗೆ ಆತಂಕ.
ಅವರಿಗೆ ಮದುವೆಯಾಗಿ ಸುಮಾರು 23 ವರ್ಷಗಳಾಗಿವೆ. ಪತ್ನಿಗೆ ಈಗ 48 ವರ್ಷ. 22 ವಯಸ್ಸಿನ ಮಗನಿದ್ದಾನೆ. ಮದುವೆಯಾದಾಗಿನಿಂದಲೂ ಪತ್ನಿಯ ರೋಷ, ಆವೇಶ ಇವರಿಗೆ ಬದುಕಿನಲ್ಲಿ ಬಿಸಿತುಪ್ಪವಾಗಿದೆ. ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ವಿದೇಶಗಳಲ್ಲಿ ಉದ್ಯೋಗ ಮಾಡಿ ಹೇರಳವಾಗಿ ಹಣ ಸಂಪಾದಿಸಿ ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿರುವ ಈತನಿಗೆ, ಪತ್ನಿಯ ವರ್ತನೆ ಮಗ್ಗುಲಲ್ಲಿನ ಕೆಂಡದಂತಾಗಿದೆ. ಆಕೆ ಗ್ರಾಮಾಂತರ ಪ್ರದೇಶದವಳು. ತಂದೆ, ತಾಯಿಯ ಹತ್ತು ಮಕ್ಕಳಲ್ಲಿ ಕೊನೆಯವಳು. ಆರನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡಳು. ತಂದೆ ಮಹಾ ಬೇಜವಾಬ್ದಾರಿ ಮನುಷ್ಯ. ಹತ್ತು ಮಕ್ಕಳಿದ್ದರೂ ಎಂದೂ ಸಂಸಾರದ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಹಿರಿಯ ಮಕ್ಕಳೇ, ಚಿಕ್ಕ ಮಕ್ಕಳಿಗೆ ಅಪ್ಪ, ಅಮ್ಮನ ಸ್ಥಾನ ತುಂಬಬೇಕಾಯಿತು. ಅಣ್ಣ, ಅಕ್ಕಂದಿರದ್ದೂ ಪ್ರಬುದ್ಧತೆಯ ವಯಸ್ಸಲ್ಲವಲ್ಲ. ಅಕ್ಕಂದಿರ ದರ್ಪದ ಮಧ್ಯೆ ಈ ಕೊನೆ ತಂಗಿ ಬೆಳೆದಳು. ಆಗಾಗ ಅಣ್ಣ ನಾದವನು ತನ್ನ ಕಾಮತೃಷೆಯನ್ನು ಈಡೇರಿಸಿಕೊಳ್ಳಲು ಇವಳನ್ನು ಬಳಸುವ ಪ್ರಯತ್ನ ನಡೆಸಿದ್ದೂ ಉಂಟು. ಈಕೆ ಅದನ್ನು ವಿರೋಧಿಸುತ್ತ, ತನ್ನನ್ನು ತಾನು ಕಾಪಾಡಿಕೊಳ್ಳುತ್ತ, ಮನೆಯ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತ, ಓದನ್ನು ಮುಂದುವರಿಸಬೇಕಾಗಿತ್ತು. ಜೀವನ ನೌಕೆಯನ್ನು ಕಷ್ಟಪಟ್ಟು ಮುಂದುವರಿಸಿ .ಇಟಞ ಪದವೀಧರಳೂ ಆದಳು. ವಿದೇಶದಲ್ಲಿ ಉತ್ತಮ ಹುದ್ದೆಯಲ್ಲಿದ್ದ ಗಂಡನನ್ನೂ ಪಡೆದಳು. ಮದುವೆಯಾಗಿ ವಿದೇಶಕ್ಕೂ ಹೊರಟಳು.
ಸ್ವಭಾವತಃ ಸಂಕೋಚ ಸ್ವಭಾವದಳು, ಕರುಣಾಮಯಿಯಾದ ಈಕೆಯನ್ನು ಗಂಡನು ತುಂಬುಹೃದಯದಿಂದ ಸ್ವಾಗತಿಸಿ ಹೊಸ ಜೀವನ ಪ್ರಾರಂಭಿಸಿದರು. ಆದರೆ ದಿನಗಳೆದಂತೆ ಈಕೆಯ ಸ್ವಭಾವವೈಚಿತ್ರ್ಯ ಗಂಡನ ಕಣ್ಣಿಗೆ ಗೋಚರಿಸಲಾ ರಂಭಿಸಿದವು. ಯಾವ ನಿರ್ಧಾರ ಕೈಗೊಳ್ಳಲೂ ಹಿಂಜರಿಯುತ್ತಿದ್ದಳು. .ಇಟಞ ಪದವೀಧರಳಾಗಿದ್ದರೂ ಅನೇಕ ಮೂಢನಂಬಿಕೆಗಳ ಗೂಡಾಗಿದ್ದಳು. ಮಗನ ಬಗ್ಗೆ ಅತೀವ ಆತಂಕ. ಬೇರೆಯವರು ತನ್ನನ್ನು ಕಡೆಗಾಣಿಸಿ ಬಿಡಬಹುದೆಂದು ಅನುಮಾನ. ಅವಳ ಎಣಿಕೆಗೆ ವಿರುದ್ಧವಾಗಿ ಏನಾದರೂ ನಡೆದರೆ ಅತೀವ ಆಕ್ರೋಶ. ರೋಷದಲ್ಲಿ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಡು ತ್ತಿದ್ದಳು. ಜೋರಾಗಿ ಕಿರುಚುತ್ತಿದ್ದಳು. ತಲೆಯನ್ನು ಗೋಡೆಗೋ, ನೆಲಕ್ಕೋ ಚಚ್ಚಿಕೊಳ್ಳುತ್ತಿದ್ದಳು.
ಮದುವೆಯಾದ ಹೊಸದರಲ್ಲಿ ಇವೆಲ್ಲ ಅಲ್ಪವಾಗಿತ್ತು. ಒಂದು ಮಗುವಿನ ಜನನದ ನಂತರ ಬಾಣಂತನದ ಸಮಯದಲ್ಲಿ ಅತೀ ತೀವ್ರವಾಯಿತು. ಈಕೆಯ ಒಂದೆರಡು ದಿನದ ನಿರಂತರ ರೋಷದ ವರ್ತನೆ ಕಂಡು ಗಾಬರಿಯಾದ ಗಂಡ, ವಿದೇಶದಲ್ಲೇ ಮನೋವೈದ್ಯರ ಮೊರೆ ಹೋದರು. ಒಳರೋಗಿಯಾಗಿ ಈಕೆಯನ್ನು ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ಪ್ರಾರಂಭಿಸಿದರು.
ವಾಪಸ್ಸು ಮನೆಗೆ ಬಂದು ಸಹಜ ಜೀವನ ಆರಂಭಿಸಿದ ಈಕೆ, ಅನೇಕ ವರ್ಷ ಔಷಧಿಗಳನ್ನು ಸೇವಿಸುತ್ತಾ, ಅಲ್ಪ ಪ್ರಮಾಣದಲ್ಲಿ ರೋಷ ಪ್ರದರ್ಶಿಸುತ್ತಾ ನಡೆದಳು. ಕೆಲ ವರ್ಷದ ನಂತರ ಮಾತ್ರೆಗಳನ್ನು ನಿಲ್ಲಿಸಿಬಿಟ್ಟಳು. ಮತ್ತೆ ರೋಷ ಏರುತ್ತಾ ಹೋಯ್ತು. ಇವಳನ್ನು ವಿದೇಶದಲ್ಲಿ ಒಬ್ಬನೇ ಸಂಭಾಳಿಸಲು ಆಗದೆಂದು ಲೆಕ್ಕ ಹಾಕಿದ ಗಂಡ ವಾಪಸ್ಸು ಭಾರತಕ್ಕೆ ಗಂಟುಮೂಟೆ ಕಟ್ಟಿದರು.
ಭಾರತದಲ್ಲಿ ಮನೋವೈದ್ಯರ ಸಲಹೆಯ ಮೇರೆಗೆ ಮತ್ತೆ ಔಷಧಿ ಪ್ರಾರಂಭಿಸಿದ ಈಕೆ ಶಾಂತವಾಗಿದ್ದರು. ಮತ್ತೆ ಮಾತ್ರೆ ನಿಲ್ಲಿಸಿಬಿಟ್ಟಳು. ನನಗೆ ಮಾತ್ರೆ ಅವಶ್ಯಕತೆ ಇಲ್ಲ. ನನಗೇನೂ ಆಗಿಲ್ಲವೆಂದು ಆಕೆಯ ತರ್ಕ. ಮತ್ತೆ ಗಂಡ ಆಕೆಯ ಅಣ್ಣನನ್ನು ಮಧ್ಯಸ್ಥಿಕೆಗೆ ಕರೆದು ಆತನ ಸಲಹೆಯಿಂದ ಮಾತ್ರೆ ಮುಂದುವರೆಯಿತು.
ಈಗ ಎಂಟು ತಿಂಗಳೆಂದ ಆಕೆ ಮತ್ತೆ ಮಾತ್ರೆ ನಿಲ್ಲಿಸಿಬಿಟ್ಟಿದ್ದಾಳೆ. ವಿಚಿತ್ರ ನಿಯಮಗಳನ್ನು ಅನುಸರಿಸ ುತ್ತಾಳೆ. ಸೋಮವಾರ ಈರುಳ್ಳಿ ತಿನ್ನಬಾರದು, ಮಂಗಳವಾರ, ಶುಕ್ರವಾರ ಮನೆಗೆ ಏನೂ ತರಬಾರದು, ಬುಧವಾರ ಗಿಡ ಕತ್ತರಿಸಬಾರದು ಇತ್ಯಾದಿ. ಮಗ ಹಾಗೂ ಗಂಡನೇನಾದರೂ ಮರೆತು ನಿಯಮ ಮುರಿದರೆ ಈಕೆಗೆ ಭಯಂಕರ ರೋಷ. ‘ಬೇಕೆಂದೇ ನನ್ನನ್ನು ಅವಮಾನಿಸುತ್ತೀರಿ. ನಾನು ನೆಮ್ಮದಿಯಾಗಿರುವುದು ನಿಮಗಿಷ್ಟವಿಲ್ಲವೆ? ಎಂದು ಕಿರುಚುತ್ತಾಳೆ. ತಲೆ ಚಚ್ಚಿಕೊಂಡು ಅಳುತ್ತಾಳೆ. ನೆಲಕ್ಕೆ ಚಚ್ಚಿಕೊಳ್ಳುವುದನ್ನು ತಡೆಯಲು ಹೋದರೆ ಇವರಿಗೆ ಹೊಡೆಯುತ್ತಾಳೆ. ಸೂಕ್ಷ್ಮ ಸ್ವಭಾವದ ಮಗ ಈ ಆರ್ಭಟವನ್ನು ನೋಡಿ ಮಂಕಾಗಿಬಿಡುತ್ತಾನೆ. ಈಕೆ ಶಾಂತವಾಗಲು ಐದಾರು ಗಂಟೆಗಳೇ ಬೇಕಾಗುತ್ತದೆ. ಈಕೆಗೆ ಯಾರೂ ಸ್ನೇಹಿತೆಯರಿಲ್ಲ. ಯಾರಾದರೂ ಇವಳ ವಿರುದ್ಧವಾಗಿ ಮಾತಾಡಿದರೆ ಮೇಲುನೋಟಕ್ಕೆ ನಕ್ಕು ಸುಮ್ಮನಾಗಿ, ಮನೆಗೆ ಬಂದು ಅವರ ಬಗ್ಗೆ ಹೀನಾಮಾನವಾಗಿ ಬಯ್ದುಕೊಳ್ಳುತ್ತಾಳೆ. ಮಗನು ಅರ್ಧ ಘಂಟೆ ತಡವಾಗಿ ಬಂದರೂ ಅತೀವ ಆತಂಕದಿಂದ ನಿಮಿಷಕ್ಕೊಮ್ಮೆ ಫೋನು ಮಾಡುತ್ತಾಳೆ. ಅವನು ಯಾರ ಜೊತೆ ಸ್ನೇಹ ಮಾಡಬೇಕು, ಎಷ್ಟು ಹೊತ್ತಿಗೆ ಮಲಗಿ ಏಳಬೇಕು, ಏನೇನು ತಿನ್ನಬೇಕು ಎಲ್ಲವನ್ನೂ ಇವಳೇ ನಿರ್ಧರಿಸುತ್ತಾಳೆ. ಇವಳಿಗೆ ಯಾವಾಗ ರೋಷ ಬಂದು ಬಿಡುತ್ತದೋ ಎಂಬ ಆತಂಕದಲ್ಲೇ ಮಗ, ಗಂಡ ದಿನದೂಡುತ್ತಿದ್ದಾರೆ. ಮಾತ್ರೆ ಬೇರೆ ನಿಲ್ಲಿಸಿಬಿಟ್ಟರುವುದರಿಂದ ಎಲ್ಲಿ ಹತೋಟಿ ಮೀರಿ ಕೆರಳಿಬಿಡುತ್ತಾಳೋ ಎಂಬ ಆತಂಕ ಗಂಡನಿಗೆ.
ಇವರ ಪೂರ್ತಿ ಕಥೆಯನ್ನು ಶಾಂತವಾಗಿ ಆಲಿಸಿದ ವೈದ್ಯರಿಗೆ, ಈಕೆಯ ಸಮಸ್ಯೆಯ ಬೇರು ಕಾಣಲಾರಂಭಿಸಿತು. ಬಾಲ್ಯದಲ್ಲಿ ದರ್ಪ, ನಿರ್ಲಕ್ಷ್ಯ, ಅತ್ಯಾಚಾರದ ರುಚಿ ನೋಡಿದ ಈಕೆ ಆತಂಕ, ಅನುಮಾನ, ಅಭದ್ರತೆಗಳ ಗೂಡಾಗಿದ್ದಳು. ಉಳಿದಂತೆ ಇವಳಿಗೆ ತೀವ್ರತರದ ಮನೋರೋಗವೇನೂ ಇರಲಿಲ್ಲ. ಆದರೂ ಔಷಧಿಗಳ ಪ್ರಯೋಗದಿಂದ ಇವಳನ್ನು ಶಾಂತವಾಗಿಡಬ ಹುದಾಗಿತ್ತು. ಔಷಧಿ ಸೇವನೆಗೆ ಅವಳನ್ನು ಪ್ರೇರೇಪಿಸಲು ಮಾರ್ಗ ಹುಡುಕುವಂತೆ ಸೂಚಿಸಿದರು.
ಬಾಲ್ಯದ ನೆನಪುಗಳ ನೆರಳು ಬಲು ದೀರ್ಘ. ಬಾಲ್ಯದಲ್ಲಿ ಮನಸ್ಸಿಗಾದ ಗಾಯಗಳು ಜೀವನಪರ್ಯಂತ ಕಾಡುತ್ತವೆ. ‘ಮನವೆಂಬ ನಾವೆ’ಯ ಹಾಯಿ ಹರಿದು ಹೋದಾಗ ಅದನ್ನು ತೇಪೆ ಹಾಕಿ ಹೊಲಿದು ಪಯಣ ಮುಂದುವರಿಸಲು ಮನೋವೈದ್ಯರು ಸಹಾಯ ಮಾಡಬಲ್ಲರು.

- ಡಾ. ಪ್ರಶಾಂತ್‍.ಎನ್‍.ಆರ್‍

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate