‘ನಿಂತಲ್ಲಿ ನಿಲ್ಲುವುದಿಲ್ಲ, ಕುಳಿತಲ್ಲಿ ಕೂಡುವುದಿಲ್ಲ... ಸದಾ ಗಲಾಟೆ... ಮನೆಯ ಒಂದು ವಸ್ತು ಕೂಡ ಇಟ್ಟ ಜಾಗದಲ್ಲಿ ಇರುವುದಿಲ್ಲ... ಮುದ್ದು ಮಾಡಿದ್ದು ಜಾಸ್ತಿಯಾಯಿತು...’ ಎಂದು ರೇಗುವ ಪಾಲಕರ ಸಂಖ್ಯೆ ಕಡಿಮೆ ಇಲ್ಲ.
ಸಾಮಾನ್ಯವಾಗಿ ಪುಟ್ಟ ಮಕ್ಕಳು ಸದಾ ಚಟುವಟಿಕೆಯಿಂದ ಇರುತ್ತಾರೆ. ಮೊದಲು ಮಕ್ಕಳು ಏನೇ ಮಾಡಿದರೂ ಮುದ್ದಾಗಿ ಕಾಣುತ್ತದೆ. ಆದರೆ ದಿನ ಕಳೆದಂತೆ ಅದೇ ಅತಿಯಾಗಿ ಹೋಗುತ್ತದೆ. ಈ ಕೀಟಲೆಗೆ ಮದ್ದಿಲ್ಲವೇ ಎಂದು ಚಡಪಡಿಸುವಂತೆ ಆಗುತ್ತದೆ. ಮಗುವಿನ ಇಂತಹ ವರ್ತನೆ ಕೆಲವೊಮ್ಮೆ ಸಹಜವಾಗಿದ್ದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಇದು ಅಸಹಜ ಎನ್ನುವ ಮಟ್ಟಿಗೆ ವಿಪರೀತಕ್ಕೇರುವುದೂ ಇದೆ. ಈ ಸಮಸ್ಯೆ ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ್ದು ಎಂದು ತಿಳಿಯುವುದೇ ಇಲ್ಲ.
ಇದೂ ಒಂದು ಸಮಸ್ಯೆ, ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂಬ ಬಗ್ಗೆ ಹೆಚ್ಚಿನ ಪಾಲಕರು ಗಮನ ಹರಿಸುವುದೇ ಇಲ್ಲ. ಇಂತಹ ಮಕ್ಕಳು ‘ಅಟೆನ್‌ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್’ (ಎಡಿಎಚ್‌ಡಿ) ಸಮಸ್ಯೆಗೆ ಸಿಲುಕಿದ್ದಾರೆಯೇ ಎಂಬುದನ್ನು ಪಾಲಕರೇ ಗುರುತಿಸಬೇಕು ಮತ್ತು ಅಗತ್ಯವಾದ ವೈದ್ಯಕೀಯ ನೆರವು ಪಡೆಯಬೇಕು.
ದೈಹಿಕವಾಗಿ ಸಾಮಾನ್ಯ ಮಕ್ಕಳಂತೆ ಕಂಡರೂ ಇಂತಹ ಮಕ್ಕಳು ವರ್ತನೆ, ಕಲಿಕೆ ಹಾಗೂ ಆಸಕ್ತಿ ವಿಷಯಗಳಲ್ಲಿ ಭಿನ್ನವಾಗಿರುತ್ತಾರೆ. ೪ ರಿಂದ ೧೨ನೇ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಮಕ್ಕಳಲ್ಲಿ ಚಂಚಲ ಸ್ವಭಾವ ಹೆಚ್ಚಾಗುತ್ತದೆ. ಪರಿಣಾಮ ಮಕ್ಕಳಷ್ಟೇ ಅಲ್ಲದೇ ಅವರ ಪೋಷಕರು, ಸ್ನೇಹಿತರು ಹಾಗೂ ಶಿಕ್ಷಕರು ಕಿರಿ ಕಿರಿ ಅನುಭವಿಸುವಂತಾಗುತ್ತದೆ.
ಕಾರಣಗಳು
ಮಗು ತಾಯಿಯ ಗರ್ಭದಲ್ಲಿದ್ದಾಗ, ಗರ್ಭದಿಂದ ಹೊರ ಬರುವ ಸಮಯಲ್ಲಿ ಆಗುವ ತೊಂದರೆಗಳಿಂದ ಹಾಗೂ ಮಗು ಒಂದರಿಂದ ಎರಡು ವರ್ಷವಿದ್ದಾಗ ಮೆದುಳಿಗೆ ಸೋಂಕು ತಗುಲಿದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಮಗು ಗರ್ಭದಲ್ಲಿರುವಾಗ ತಾಯಿಗೆ ರಕ್ತದ ಒತ್ತಡ ಹೆಚ್ಚಾಗಿ ಮಗುವಿನ ಮೆದುಳಿನ ಮೇಲೆ ದುಷ್ಪರಿಣಾಮ ಆದಲ್ಲಿ, ಪ್ರಸವದ ಸಮಯದಲ್ಲಿ ಮಗುವಿನ ಮೆದುಳಿಗೆ ಪೆಟ್ಟು ಬಿದ್ದಲ್ಲಿ, ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೆ ಹೋದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅದರಲ್ಲೂ ಆಗತಾನೆ ಹುಟ್ಟಿದ ಮಗು ಅಳಬೇಕು. ಆಗ ಮಗುವಿನ ಶ್ವಾಸಕೋಶಗಳು ತೆರದುಕೊಂಡು ಆಮ್ಲಜನಕ ಮೆದುಳಿಗೆ ಪೂರೈಕೆಯಾಗುತ್ತದೆ. ಈ ಪ್ರಕ್ರಿಯೆಲ್ಲಿ ಮಕ್ಕಳು ಹುಟ್ಟಿದ ಕೆಲ ನಿಮಿಷಗಳವರೆಗೆ ಅಳದೇ ಹೋದಲ್ಲಿ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಈ ಸಮಸ್ಯೆ ಉಂಟಾಗಬಹುದು.
ಇನ್ನೂ ಕೆಲವು ಸಂದರ್ಭಗಳಲ್ಲಿ ಗರ್ಭಿಣಿ ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಿಂದ, ಪರಿಸರ ಮಾಲಿನ್ಯದಿಂದ, ಮಾನಸಿಕ ಒತ್ತಡ, ವಂಶವಾಹಿ ಅಂಶಗಳಿಂದ ಮೆದುಳಿನ ಬೆಳವಣಿಗೆಯಲ್ಲಿ ಏರುಪೇರಾಗಬಹುದು. ಇದರಿಂದ ಮೆದುಳಿನಲ್ಲಿ ನ್ಯೂಟ್ರೋ ಟ್ರಾನ್ಸ್‌ಮೀಟರ್‌ಗಳು ಹಾಗೂ ಸೆರೋಟೋನಿನ್ ಉತ್ಪಾದನೆಯಾಗದ ಕಾರಣ ಮಕ್ಕಳಲ್ಲಿ ವಿಚಿತ್ರ ವರ್ತನೆಗಳು ಕಾಣಿಸಿಕೊಳ್ಳುತ್ತವೆ.
ಲಕ್ಷಣಗಳು
*ಅತಿಯಾದ ಚಟುವಟಿಕೆ, ದುಡುಕುತನ, ಅಸಹನೆ, ನಿರ್ಲಕ್ಷ್ಯ
*ಯಾವುದೇ ವಿಷಯಗಳನ್ನು ಗಂಭೀರವಾಗಿ ಗಮನಿಸುವುದಿಲ್ಲ
*ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ಇದ್ದ ಆಸಕ್ತಿ, ಕೆಲವೇ ನಿಮಿಷಗಳಲ್ಲಿ ಇಲ್ಲವಾಗುತ್ತದೆ
*ಬಹಳ ಬೇಗ ಕೋಪ ಬರುತ್ತದೆ
*ಯಾವುದೇ ಸೂಚನೆ ಪಾಲಿಸುವುದಿಲ್ಲ
*ಅತಿಯಾದ ಮರೆವು, ಇದರಿಂದ ತಮ್ಮ ವಸ್ತುಗಳನ್ನು ಪದೇ ಪದೇ ಕಳೆದುಕೊಳ್ಳುತ್ತಾರೆ
*ಮಾನಸಿಕ ಸಾಮರ್ಥ್ಯದ ಕೆಲಸಗಳಲ್ಲಿ ನಿರಾಸಕ್ತಿ
*ಪ್ರಶ್ನೆಗಳಿಗೆ ನೇರವಾದ ಉತ್ತರ ನೀಡಲು ತಡಕಾಡುತ್ತಾರೆ
*ವಿಪರೀತ ಮಾತು ಹಾಗೂ ಇತರರಿಗೆ ಅಡ್ಡಿಪಡಿಸುವುದು.
ಪರಿಣಾಮಗಳು: ಅತಿ ಸಣ್ಣ ವಯಸ್ಸಿನಲ್ಲೇ ಇದು ಕಾಣಿಸಿಕೊಳ್ಳುವುದರಿಂದ, ಮಗುವಿನ ಕಲಿಕೆ ಹಾಗೂ ವ್ಯಕ್ತಿತ್ವ ವಿಕಸನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಒಂದು ಕಡೆ ವಿದ್ಯಾಭ್ಯಾಸದಲ್ಲಿ ಹಿಂದುಳಿಯುವ ಮಗು ಶಾಲೆ ಹಾಗೂ ಸ್ನೇಹಿತ ಬಳಗದಲ್ಲಿ ನಿತ್ಯ ಅವಮಾನ ಎದುರಿಸಬೇಕಾಗುತ್ತದೆ. ಇದರಿಂದ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳಬಹುದು. ಇದರ ಮುಂದುವರೆದ ಭಾಗವಾಗಿ ಖಿನ್ನತೆಗೂ ಒಳಗಾಗಬಹುದು.
ಚಿಕಿತ್ಸೆ
ಮಕ್ಕಳಲ್ಲಿ ಈ ಸಮಸ್ಯೆ ಕಾಣುತ್ತಿದ್ದಂತೆಯೇ ಮನೋವೈದ್ಯರನ್ನು ಸಂಪರ್ಕಿಸಬೇಕು. ಮೊದಲು ಮಕ್ಕಳ ಸಮಸ್ಯೆ ಹಾಗೂ ಅವರ ವರ್ತನೆಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಚಿಕಿತ್ಸೆಯಲ್ಲಿ ಮಕ್ಕಳಿಗೆ ಏಕಾಗ್ರತೆ ಹೆಚ್ಚಿಸಲು ಮಾತ್ರೆಗಳನ್ನು ನೀಡಲಾಗುತ್ತದೆ. ಅದರ ಜತೆಯಲ್ಲೇ ವರ್ತನೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಾಗುತ್ತದೆ.
ತೆಗೆದುಕೊಳ್ಳಬೇಕಾದ ಕ್ರಮಗಳು
*ಪದೇ ಪದೇ ಮಾಡುವ ತಪ್ಪಿಗೆ ದಂಡಿಸುವ ಬದಲು ಸಮಾಧಾನದಿಂದ ತಿದ್ದಬೇಕು
*ಮಾಡಿದ ತಪ್ಪನ್ನು ಮರುಕಳಿಸದಂತೆ ರೂಢಿ ಮಾಡಿಸಬೇಕು
*ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳನ್ನು ಪ್ರತ್ಯೇಕಿಸಿ ನೋಡಬಾರದು
*ಶಾಲೆಗಳಲ್ಲಿ ಮಕ್ಕಳನ್ನು ಮೊದಲನೇ ಸಾಲಿನಲ್ಲಿ ಕೂರಿಸಬೇಕು
*ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಗಮನ ವಹಿಸಬೇಕು (ಪಠ್ಯದ ಬಗ್ಗೆ ಮಕ್ಕಳನ್ನು ಪ್ರಶ್ನಿಸಬೇಕು).
ಸಮೀಕ್ಷೆಗಳೇ ನಡೆದಿಲ್ಲ
ಮುಂಬೈನಲ್ಲಿ 2013ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 6ರಿಂದ 11 ವರ್ಷದ ಮಕ್ಕಳಲ್ಲಿ ನೂರಕ್ಕೆ 12 ಮಕ್ಕಳಿಗೆ ಈ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ವಿದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಅದರ ಪತ್ತೆ ಹಾಗೂ ನಿವಾರಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚಾಗಿದ್ದು, ಈ ಕುರಿತು ಯಾವ ಸಮೀಕ್ಷೆಗಳೂ ನಡೆದಿಲ್ಲ.
–ಡಾ.ಅರುಣ್ ವಾಂಗಿಲಿ, ಮನೋವೈದ್ಯ .
ಹೊಸ ಯೋಜನೆ
ರಾಜ್ಯ ಸರ್ಕಾರ ನಿಮ್ಯಾನ್ಸ್ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ನೂತನ ಕಾರ್ಯಕ್ರಮ ಜಾರಿಗೆ ತರಲಿದೆ. ಮಾನಸಿಕ ಆರೊಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಪತ್ತೆ ಹಚ್ಚಿ, ಅವರಿಗೆ ಮನೋ ವೈದ್ಯರಿಂದ ಸಮಾಲೋಚನೆ (ಕೌನ್ಸೆಲಿಂಗ್) ಮಾಡಲಾಗುವುದು. ರಾಜ್ಯದ ಐದು ಜಿಲ್ಲೆಗಳನ್ನು ಗುರುತಿಸಿ, ವೈದ್ಯರ ತಂಡಗಳು ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ, ತಪಾಸಣೆ ನಡೆಸಲಿದೆ.
–ಗೀತಾ ನ್ಯಾಮಗೌಡರ್, ನಿರ್ದೇಶಕಿ, ಆರೋಗ್ಯ ಇಲಾಖೆ.
ಈ ಚಿಕಿತ್ಸೆಯಲ್ಲಿ ನೀಡಲಾಗುವ ಕೆಲ ಮಾತ್ರೆಗಳಿಂದ ಪ್ರಾರಂಭಿಕ ಹಂತದಲ್ಲಿ ಮಗುವಿಗೆ ಒಂದು ತಿಂಗಳವರೆಗೂ ಹಸಿವು ಕಡಿಮೆಯಾಗುತ್ತದೆ. ಆದರೆ ಹಸಿವು ಕಡಿಮೆಯಾಗುತ್ತಿದ್ದಂತೆಯೇ ಹೆದರುವ ಪೋಷಕರು ಗುಳಿಗೆ ನೀಡುವುದನ್ನೇ ನಿಲ್ಲಿಸುತ್ತಾರೆ. ಇದರಿಂದಾಗಿ ಮಗುವಿನ ಚಿಕಿತ್ಸೆಗೆ ತೊಂದರೆಯಾಗುತ್ತದೆ ಎಂಬುದು ಮನೋವೈದ್ಯರ ಅಭಿಪ್ರಾಯ.
ಹೆಚ್ಚಾಗುತ್ತಿರುವ ಸಮಸ್ಯೆ
ಕಳೆದ 8 ವರ್ಷದಿಂದ ಎಡಿಎಚ್‌ಡಿ ಬಗ್ಗೆ ಸಾಕಷ್ಟು ಅಧ್ಯಯನ ನಡೆಸುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಚಿಕಿತ್ಸೆಗಾಗಿ ಬರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ನೂರಕ್ಕೆ 10 ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಈ ಬಗ್ಗೆ ಅರಿವಿಲ್ಲದ ಕಾರಣ ಸಾಕಷ್ಟು ಮಕ್ಕಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ.
ಇಂತಹ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡದೇ ಹೋದಲ್ಲಿ ಭವಿಷ್ಯದಲ್ಲಿಯೂ ಕೌಟುಂಬಿಕ, ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜತೆಗೆ ಧೂಮಪಾನ, ಮದ್ಯ ವ್ಯಸನ ಹಾಗೂ ಮಾದಕ ವಸ್ತುಗಳ ಬಳಕೆಗೂ ಮುಂದಾಗುತ್ತಾರೆ. ಆದ್ದರಿಂದ ಈ ಬಗ್ಗೆ ಶಾಲಾ ಶಿಕ್ಷಕರು ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ.
-ಡಾ. ದೀಪಕ್ ಷಾ, ಮಕ್ಕಳ ತಜ್ಞ.
ಕೊನೆಯ ಮಾರ್ಪಾಟು : 2/15/2020