ಭಾರತದ ಸಂಸ್ಕೃತಿಯಲ್ಲಿ ರಾಮಾಯಣದ ಮಹತ್ವ ಎಲ್ಲರಿಗೂ ತಿಳಿದದ್ದೇ. ರಾಮ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೇ ಹೊರಟು ಬಿಟ್ಟ. ಈ ಕಾಲದಲ್ಲೂ ಇಂತಹ ಆದರ್ಶವನ್ನು ಪಾಲಿಸುವ ಮಕ್ಕಳಿರುತ್ತಾರೆಂದರೆ ನಂಬಲಸಾಧ್ಯ. ಆದರೂ ಇಂತಹ ಆಧುನಿಕ ಮಾತಾಪಿತೃ ವಾಕ್ಯ ಪರಿಪಾಲಕರು ಮನೋರೋಗಿಗಳಾಗಿ ಆಗಾಗ ಮನೋವೈದ್ಯರ ಬಳಿ ಬರುತ್ತಿರುತ್ತಾರೆ. ತಂದೆ – ತಾಯಿಗಳ ಮಾತನ್ನು ವಿಧೇಯರಾಗಿ ಪಾಲಿಸುವುದು ಒಳ್ಳೆಯ ಗುಣವಲ್ಲವೇ? ಇವರೇಕೆ ಮನೋವೈದ್ಯರ ಬಳಿ ಬರುವಂತಾಗುತ್ತದೆ?
ಮೇಲುನೋಟಕ್ಕೆ ತಂದೆ – ತಾಯಿ ಮಾತನ್ನು ಪಾಲಿಸುವುದು ಒಳ್ಳೆಯ ಗುಣವಾಗಿ ಕಂಡರೂ, ಅನೇಕರಲ್ಲಿ ಇದು ಸ್ವ-ಚಿಂತನಾ ಸಾಮರ್ಥ್ಯ ಬೆಳೆಯದಿರುವ, ಸ್ವಂತ ಚಿಂತನೆ ಬೆಳೆದಿದ್ದರೂ ಅದನ್ನು ಧೈರ್ಯವಾಗಿ ಹೇಳಲು ಹೆದರುವ, ಸ್ವಂತ ನಿರ್ಧಾರ ತೆಗೆದುಕೊಳ್ಳಲು ಹಿಂಜರಿವ ಲಕ್ಷಣವಾಗಿರುತ್ತದೆ. ಇಂತಹವರು ಒಂದು ಹಂತದವರೆಗೂ ನೆಮ್ಮದಿಯಾಗಿ ಮಾತಾಪಿತೃ ವಾಕ್ಯ ಪರಿಪಾಲಕರಾಗಿದ್ದು, ಸ್ವಂತ ನಿರ್ಧಾರ ತೆಗೆದುಕೊಳ್ಳಲೇಬೇಕಾದಾಗ ಒತ್ತಡಕ್ಕೆ ಸಿಲುಕಿ, ಮನೋರೋಗಿಗಳಾಗಿ ಮನೋವೈದ್ಯರ ಬಳಿ ಬರುತ್ತಾರೆ.
25 ವರ್ಷದ ಅವಿವಾಹಿತ ಯುವತಿ ತಾಯಿಯೊಂದಿಗೆ ಮನೋವೈದ್ಯರ ಬಳಿ ಬಂದಳು. ಈಕೆ ಬಿಇ ಪದವೀಧರೆ. ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ. ಒಬ್ಬಳೇ ಮಗಳು. ಈಕೆಯ ಸಮಸ್ಯೆ ನಿರಂತರವಾಗಿ ಅಳುಬರು ತ್ತಿರುವುದು. ಯಾವಾಗಲೂ ದುಃಖಿತಳಾಗಿರುವುದು. ಹೆಚ್ಚು ಸಿಟ್ಟುಗೊಳ್ಳು ವುದು, ಭವಿಷ್ಯದ ಬಗ್ಗೆ ಆತಂಕಪಡುತ್ತಿರುವುದು ಇತ್ಯಾದಿ. ಇವೆಲ್ಲ ವರ್ತನೆ ಗಳ ನಡುವೆಯೂ ಆಕೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದಳು. ದಿನನಿತ್ಯದ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದಳು. ಹೊರಗಿನವರೊಂದಿಗೆ ನಗು ನಗುತ್ತಾ ವ್ಯವಹರಿಸುತ್ತಿದ್ದಳು. ಆದರೆ ಮನೆಗೆ ಬಂದೊಡನೇ, ಏನೋ ದುಃಖ ಅವಳನ್ನು ಆವರಿಸುತ್ತಿತ್ತು. ಮಂಕಾಗಿ ಬಿಡುತ್ತಿದ್ದಳು. ಸಿಡುಕುತ್ತಿದ್ದಳು. ಚಿಕ್ಕ ಚಿಕ್ಕ ಮಾತಿಗೂ ಅಳುತ್ತಿದ್ದಳು. ಇವಳ ಕಥೆಯನ್ನು ಆಲಿಸಿದ ಮನೋವೈದ್ಯರು ಇವಳಿಗೆ ‘ಖಿನ್ನತೆ’ಯ ಖಾಯಿಲೆಯೆಂದು ಗುರುತಿಸಿ ಚಿಕಿತ್ಸೆ ಪ್ರಾರಂಭಿಸಿದರು. ಆದರೆ ಖಿನ್ನತೆ – ಏಕೆ? ಮೇಲುನೋಟಕ್ಕೆ ಆಕೆಯ ಜೀವನದಲ್ಲಿ ಯಾವ ಸಮಸ್ಯೆಯೂ ಕಾಡುತ್ತಿರಲಿಲ್ಲ. ಹಣಕಾಸಿನದ್ದಾಗಲೀ, ಕೌಟುಂಬಿಕ ಸಮಸ್ಯೆಗಳಾಗಲೀ ಏನೂ ಕಾಣಲಿಲ್ಲ.
ಅನೇಕ ಬಾರಿ ವ್ಯಕ್ತಿಯೊಬ್ಬರ ಮನೋರೋಗದ ಹಿನ್ನೆಲೆ ಚಕ್ಕನೆ ಮನೋವೈದ್ಯರ ಗ್ರಹಿಕೆಗೂ ಬರುವುದಿಲ್ಲ. ಸುಮಾರು ದಿನ ರೋಗಿಯನ್ನು ಗಮನಿಸಿದಾಗಲೇ ರೋಗದ ಹಿನ್ನೆಲೆ ಕಂಡುಬರುತ್ತದೆ. ಮೂರು ಭೇಟಿಗಳಾದ ನಂತರ ಆಕೆ ತನ್ನ ಒಳಮನಸ್ಸಿನ ದುಗುಡಗಳನ್ನು ವ್ಯಕ್ತಪಡಿಸಿದಳು. ಆಕೆಯ ತಂದೆ ದರ್ಪಿಷ್ಠ. ಆತನೂ ವಿದ್ಯಾವಂತನಾಗಿ, ಉತ್ತಮವಾದ ಹುದ್ದೆಯಲ್ಲಿದ್ದರೂ, ಬಹಳ ಸಂಪ್ರದಾಯಸ್ಥ. ಹೆಣ್ಣು ಮಕ್ಕಳು ಎಂತಹ ಬಟ್ಟೆ ತೊಡಬೇಕು, ಯಾರ‌್ಯಾರ ಜತೆ ವ್ಯವಹರಿಸಬೇಕು, ವ್ಯವಹರಿಸಬಾರದು, ಎಲ್ಲೆಲ್ಲಿ ಹೋಗಬೇಕು, ಹೋಗಬಾರದೆಂಬ ಬಗ್ಗೆ ಬಹಳ ಕಟ್ಟುನಿಟ್ಟು. ಈಕೆಗೆ ಎಲ್ಲರ ಜತೆ ಸ್ನೇಹದಿಂದ ವ್ಯವಹರಿಸಲು ಇಷ್ಟ. ಆಧುನಿಕ ಉಡುಗೆಗಳನ್ನು (ಉದಾ: ಜೀನ್ಸ್ ಪ್ಯಾಂಟು) ತೊಡಲು ಇಷ್ಟ. ಉಳಿದ ಹೆಣ್ಣು ಮಕ್ಕಳಂತೆ ಶಾಪಿಂಗ್ ಮಾಡಲು ಇಷ್ಟ. ಪ್ರವಾಸ ಹೋಗಲು ಇಷ್ಟ. ಆದರೆ ಇವ್ಯಾವುದೂ ಆಕೆಯ ತಂದೆಗೆ ಸಮ್ಮತವಿಲ್ಲ. ಚಿಕ್ಕವಯಸ್ಸಿನಿಂದಲೂ ಹೀಗೆ ಆಸೆಪಡುತ್ತಲೇ, ತಂದೆಯ ಮಾತಿಗೆ ಕಟ್ಟುಬಿದ್ದು, ನಿರಾಸೆ ಅನುಭವಿಸುತ್ತಾ ಬೆಳೆದುಬಂದಳು.
ಕ್ರಮೇಣ ಇವಳಿಗೆ ತನ್ನ ಮೇಲೆಯೇ, ವಿದ್ಯೆ, ವೃತ್ತಿಯ ಮೇಲೇ ಜಿಗುಪ್ಸೆ ಬರ ಹತ್ತಿತು. ವಿಚಾರ ಸ್ವಾತಂತ್ರ್ಯ, ಆಚಾರ ಸ್ವಾತಂತ್ರ್ಯ ಇಲ್ಲದ ಮೇಲೆ ನನ್ನ ಬದುಕಿಗೆ ಏನು ಅರ್ಥ ಎನ್ನಿಸತೊಡಗಿತು. ಈ ಸ್ವಾತಂತ್ರ್ಯ ದೊರಕಿಸದ ವಿದ್ಯೆ ಏಕೆ ಬೇಕು, ವೃತ್ತಿ ಏಕೆ ಬೇಕು ಎನ್ನಿಸಿತು. ಸ್ವಾತಂತ್ರ್ಯವಿಲ್ಲದ ಬದುಕು ಭಾರವೆನಿಸಿತು. ಹುಟ್ಟಿದಂದಿನಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗದ ನಾನು ಭವಿಷ್ಯದಲ್ಲಿ ಹೇಗೆ ಜೀವನ ಸಾಗಿಸಿಯೇನು? ನನ್ನ ಕೈಯಲ್ಲಾಗುತ್ತಾ? ಎನ್ನುವ ಆತಂಕ ಹುಟ್ಟಿಕೊಂಡಿತು. ಈ ದುಃಖ, ಆತಂಕಗಳಲ್ಲಿ ಸಿಲುಕಿದ ಈಕೆ ಕೆಲಸದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳ ಹತ್ತಿದಳು. ಮೇಲಧಿಕಾರಿಗಳ ಜತೆ ಚರ್ಚಿಸಲೂ ಆತಂಕ. ಪರಿಚಯವಿಲ್ಲದವರೊಡನೆ ವ್ಯವಹರಿಸಲೂ ಆತಂಕ. ಇದು ಇವಳ ಸ್ಥಿತಿ. ಇದೆಲ್ಲ ಹೇಳಿಕೊಳ್ಳುವಾಗ ಅವಳ ಕಣ್ಣಲ್ಲಿ ಧಳಧಳ ಕಣ್ಣೀರು ಹರಿಯುತ್ತಿತ್ತು.
28 ವರ್ಷದ ವೈದ್ಯನೊಬ್ಬ ಮನೋವೈದ್ಯರಲ್ಲಿಗೆ ಸಹಾಯ ಯಾಚಿಸಿ ಬಂದ. ಈತ ಒಬ್ಬನೇ ಮಗ. ವಿದ್ಯಾವಂತ, ಸ್ಥಿತಿವಂತ ತಂದೆ – ತಾಯಿಗಳು. ಇವನಿಗೂ ನಿರಂತರ ದುಃಖ, ಆತಂಕ, ದುಃಖ ಏನಪ್ಪಾ ಅಂದ್ರೆ, ನನ್ನ ತಂದೆ – ತಾಯಿಗಳಿಗೆ ಖುಷಿಯಾಗುವಂತೆ ನಡೆದುಕೊಳ್ಳಲಾಗುತ್ತಿಲ್ಲವಲ್ಲಾ ಎಂದು. ತಂದೆ – ತಾಯಿಗಳನ್ನು ತೃಪ್ತಿ ಪಡಿಸಲಾಗದವನು ಭವಿಷ್ಯದಲ್ಲಿ ಯಶಸ್ವಿ ಹೇಗಾದೇನು ಎಂಬ ಆತಂಕ. ವೈದ್ಯಕೀಯದ ನಂತರ ಸ್ನಾತಕೋತ್ತರ ವ್ಯಾಸಂಗಕ್ಕೆ ಇವನು ಆರಿಸಿಕೊಂಡ ವಿಷಯ ತಂದೆತಾಯಿಗಳಿಗೆ ಸಮಾಧಾನವಿಲ್ಲ. ವ್ಯಾಸಂಗಕ್ಕೆ ಆಯ್ದುಕೊಂಡ ಊರು ಅವರಿಗೆ ಒಪ್ಪಿಗೆಯಿಲ್ಲ. ಅಲ್ಲಿ ವ್ಯಾಸಂಗಕ್ಕೆ ಹೋದ ಹುಡುಗ ಬೆಳೆಸಿಕೊಂಡ ಸ್ನೇಹ ಅವರಿಗೆ ಸಮ್ಮತಿಯಿಲ್ಲ… ಇತ್ಯಾದಿ ಇತ್ಯಾದಿ. ಇವನ ಸ್ನೇಹ ಮುಂದುವರೆದು ಹುಡುಗಿಯೊಬ್ಬಳೊಡನೆ (ಆಕೆಯೂ ವೈದ್ಯೆಯೇ, ಒಂದೇ ಜಾತಿಯೇ) ಪ್ರೇಮಕ್ಕೆ ತಿರುಗಿದಾಗ ಈ ತಂದೆ – ತಾಯಿಗಳಿಗೆ ಆಕಾಶವೇ ಕಳಚಿಬಿತ್ತು. ಅವನನ್ನು ಒಬ್ಬ ಶಾಲಾ ಹುಡುಗನಂತೆ ಎಳೆದುಕೊಂಡು ಬಂದು ಅವನ ಉಪಾಧ್ಯಾಯರ ಎದುರು ‘ನೀವೇ, ಇವನಿಗೆ ಬುದ್ಧಿ ಹೇಳಿ ಮೇಷ್ಟ್ರೇ’ ಎಂದು ನಿಲ್ಲಿಸಿಬಿಟ್ಟರು! ಈ ತರುಣನಿಗೂ ತಂದೆ – ತಾಯಿಗಳದ್ದೇ ದುಃಖ, ಆತಂಕ.
ಇಂದಿನ ತಂದೆತಾಯಿಗಳು ಮಕ್ಕಳು ಚೆನ್ನಾಗಿರಲೆಂಬ ಮೋಹಕ್ಕೋ, ಸಮಾಜದಲ್ಲಿನ ಪ್ರತಿಷ್ಠೆಗೋ ಮಕ್ಕಳನ್ನು ಹೆಚ್ಚು ಹೆಚ್ಚು ವ್ಯಾಸಂಗ ಮಾಡಲೆಂದು ಉತ್ತೇಜಿಸುತ್ತಾರೆ. ಹೆಚ್ಚು ವ್ಯಾಸಂಗ ಮಾಡಿ, ಬುದ್ಧಿ ಬಲಿತು, ಸುತ್ತಲಿನ ಪ್ರಪಂ ಚವನ್ನು ಸ್ವಂತ ಕಣ್ಣುಗಳಿಂದ ನೋಡಲಾರಂಭಿಸುವ ಮಕ್ಕಳು ಮತ್ತೆ ತಂದೆ ತಾಯಿ ಗಳ ಮಡಿಲಲ್ಲಿ ಸೇರಿಕೊಳ್ಳಲು ಸಾಧ್ಯವೆ? ಹೆಚ್ಚು ಓದಿದಷ್ಟೂ, ಹೊರಜಗತ್ತಿನ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ ಮನಸ್ಸು, ಚಿಂತನೆ, ಕನಸುಗಳು ಬದಲಾಗುತ್ತವೆ. ತಂದೆ – ತಾಯಿಗಳ ಚೌಕಟ್ಟಿಗೆ ಹೊಂದುವುದಿಲ್ಲ. ಆದ್ದರಿಂದಲೇ ಬಹುಪಾಲು ಮಕ್ಕಳು ತಂದೆ ತಾಯಿಗಳ ಮಾತನ್ನು ಗೌರವಿಸುವಂತೆ ಕಾಣುವುದಿಲ್ಲ. ಇಲ್ಲಿ ಗೌರವದ ಪ್ರಶ್ನೆಗಿಂತ ಸ್ವಂತ ನಿರ್ಧಾರ ಮಾಡುವ ಸಾಮರ್ಥ್ಯ ಮುಖ್ಯವಾದದ್ದು. ಪ್ರತಿಯೊಬ್ಬರೂ ಜೀವನದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಲೇಬೇಕು. ಇದು ಪ್ರಕೃತಿಯ ನಿಯಮ. ತಂದೆ ತಾಯಿಗಳೂ ಇದನ್ನು ಒಪ್ಪಬೇಕು, ಗೌರವಿಸಬೇಕು.
ಮೆದು ಸ್ವಭಾವದ, ಸೂಕ್ಷ್ಮ ಮನಸ್ಸಿನ ಈ ಇಬ್ಬರೂ ಸ್ವಂತ ನಿರ್ಧಾರದಂತೆ ಜೀವಿಸಲಾಗದೇ, ಮಾತಾಪಿತೃಗಳ ವಚನ ಪರಿಪಾಲನೆಯನ್ನೂ ಮಾಡಲಾಗದೇ ತೊಳಲಾಡುತ್ತಿದ್ದರು. ಬದುಕಿನ ಪ್ರವಾಹದಲ್ಲಿ ತೇಲಲು ಹೊರಟಿದ್ದ ಇವರ ಮನವೆಂಬ ನಾವೆಗಳು, ‘ಮಾತಾಪಿತೃ ವಾಕ್ಯ ಪರಿಪಾಲನೆ’ ಎಂಬ ಜೊಂಡಿನಿಂದ ಹಿಂದಕ್ಕೆ ಎಳೆದಾಡುತ್ತಿವೆ ಎಂದು ಮನೋವೈದ್ಯರು ಗಮನಿಸಿದರು. ಹೆಚ್ಚು ಅಪಾಯವಾಗದಂತೆ ಈ ಜೊಂಡನ್ನು ಬಿಡಿಸಿಕೊಂಡು ಪಯಣ ಮುಂದು ವರೆಸಲು ಮಾರ್ಗೋಪಾಯ ಸೂಚಿಸಿದರು.
- ಡಾ. ಪ್ರಶಾಂತ್.ಎನ್.ಆರ್
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 2/15/2020