অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆತ್ಮಹತ್ಯೆಗೆ ಪ್ರಯತ್ನಿಸಿದ ಭಕ್ತ

ಆತ್ಮಹತ್ಯೆಗೆ ಪ್ರಯತ್ನಿಸಿದ ಭಕ್ತ

‘ಮನವೆಂಬ ನಾವೆ’ ಈ ಲೇಖನ ಮಾಲೆಯಲ್ಲಿ ಮನೋ ರೋಗ ವಿವಿಧ ರೀತಿಯಲ್ಲಿ ಪ್ರಕಟವಾಗುವುದನ್ನೂ, ಮನೋವೈದ್ಯರ ಔಷಧೋಪಾರ, ಆಪ್ತ ಸಮಾಲೋಚನೆಗಳ ಮೂಲಕ ವಿವಿಧ ಮನೋರೋಗಿಗಳನ್ನು ಗುಣಪಡಿಸುವ ಪ್ರಯತ್ನಗಳನ್ನೂ ಸಹೃದಯ ಓದುಗರು ಗಮನಿಸಿರಬಹುದು. ಉಳಿದೆಲ್ಲಾ ವೈದ್ಯಕೀಯ ವಿಭಾಗಗಳಿಗೂ, ಮನೋ ವೈದ್ಯಕೀಯ ವಿಭಾಗಕ್ಕೂ ಒಂದು ಪ್ರಮುಖ ವ್ಯತ್ಯಾಸವಿದೆ. ಮಾನವನ ಶರೀರದ ಉಳಿದೆಲ್ಲ ಅಂಗಾಂಗಗಳನ್ನೂ ವಿವಿಧ ಉಪಕರಣಗಳ ಮೂಲಕ ‘ನೋಡ’ಬಹುದಾಗಿದೆ. ಅಂಗಾಂಗಗಳನ್ನೇ ಬಗೆದು ಒಳಗೆ ಹುದುಗಿರುವ ರೋಗ ಮೂಲಗಳನ್ನು ಪತ್ತೆಹಚ್ಚಬಹುದಾಗಿದೆ. ಈ ಸೌಲಭ್ಯ ಮನೋವೈದ್ಯರಿಗಿಲ್ಲ. ಮನುಷ್ಯನೊಬ್ಬನ ಭಾವನೆ, ಚಿಂತನೆಗಳನ್ನು ನಿಖರವಾಗಿ ‘ಕಂಡುಹಿಡಿಯಬಲ್ಲ’ ಉಪಕರಣ ಲಭ್ಯವಿಲ್ಲ. 21ನೇ ಶತಮಾನದಲ್ಲೂ ರೋಗಿಯೊಡನೆ ಮಾತನಾಡಿ, ಅವನ ವರ್ತನೆಯನ್ನು ಅವಲೋಕಿಸಿ ಅವನ ಮನಃಸ್ಥಿತಿಯನ್ನು ಊಹಿಸಬೇಕಾಗಿದೆ. ಮಿತಭಾಷಿ, ಸಂಕೋಚ ಸ್ವಭಾವದ ರೋಗಿಗಳಿದ್ದರಂತೂ ಅವರ ಮನಸ್ಸಿಗೆ ಪಾತಾಳಗರಡಿ ಹಾಕಲು ಮನೋವೈದ್ಯರಿಗೂ ದುಸ್ಸಾಧ್ಯ. ಮೋವೈದ್ಯರ ಊಹೆಗಳೂ ಸುಳ್ಳಾಗುವ ಸಾಧ್ಯತೆ ಹೆಚ್ಚು. ಇನ್ನು ಅವರ ಚಿಕಿತ್ಸೆ ಫಲಕಾರಿಯಾಗುವ ಬಗೆ ಹೇಗೆ?
ಸುಮಾರು 40 ವರ್ಷದ ವ್ಯಕ್ತಿ ಕಳೆದೊಂದು ವರ್ಷದಿಂದ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ತಿಂಗಳಲ್ಲಿ ಅವನ ಕುಟುಂಬದವರು ವೈದ್ಯರ ಅನುಮತಿ ಮೇರೆೆ ಅವನನ್ನು ಕುಲದೇವರ ದೇವಸ್ಥಾನಕ್ಕೆ ಪೂಜೆಗೆ ಕರೆದೊಯ್ದರು. ದೇವಸ್ಥಾನದಲ್ಲಿ ಎಲ್ಲರೂ ದೇವರ ದರ್ಶನದಲ್ಲಿ ಮಗ್ನರಾಗಿದ್ದಾಗ ಈ ವ್ಯಕ್ತಿ ಎಲ್ಲರ ಕಣ್ಣು ತಪ್ಪಿಸಿ ಬಸ್ಸು ಹಿಡಿದು ವಾಪಸ್ಸಾಗಿ, ಮನೆಗೆ ಬಂದು ಸಕ್ಕರೆ ಖಾಯಿಲೆಯ, ರಕ್ತದೊತ್ತಡದ ಮಾತ್ರೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ನುಂಗಿ ಬಿಟ್ಟಿದ್ದಾನೆ. ಇವನು ಮಾತ್ರೆ ನುಂಗುತ್ತಿರುವುದನ್ನು ಗಮನಿಸಿದ ಸಂಬಂಧಿಯೊಬ್ಬ ತಕ್ಷಣ ಇತರರಿಗೆ ವಿಷಯ ತಿಳಿಸಿ ಇವನನ್ನು ತಕ್ಷಣ ಆಸ್ಪತ್ರೆಗೆ ಕರೆ ತಂದಿದ್ದಾನೆ. ತಕ್ಷಣ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಅಲ್ಲಿ ಚೇತರಿಸಿಕೊಂಡ ರೋಗಿಯನ್ನು ನಂತರ ಇವನನ್ನು ಮನೋವೈದ್ಯರ ಬಳಿ ಕರೆ ತಂದರು. ಇವನು ಹೀಗೆ ಮಾಡಲು ಕಾರಣವೇನು?
ಇವನು ಪದವೀಧರ. ಅವಿಭಕ್ತ ಕುಟುಂಬ. ಉಳಿದ ಅಣ್ಣಂದಿರು ಉದ್ಯೋಗದಲ್ಲಿದ್ದಾರೆ. ಈತ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾನೆ. ವಿವಾಹಿತ, 4 ವರ್ಷದ ಮುದ್ದಾದ ಮಗಳಿದ್ದಾಳೆ. ಇವನಿಗೆ ಸುಮಾರು ಹತ್ತು ವರ್ಷಗಳ ಮುಂಚೆ ಒಮ್ಮೆ ಮನೋರೋಗ ಕಾಣಿಸಿಕೊಂಡಿದ್ದು ಮನೋವೈದ್ಯರೊಬ್ಬರ ಬಳಿ ಸುಮಾರು ದಿನ ಚಿಕಿತ್ಸೆ ಪಡೆದು ಗುಣವಾಗಿದ್ದ. ಆರೇಳು ವರ್ಷ ಚೆ್ನಾಗಿದ್ದ ಇವನು ಕಳೆದೊಂದು ವರ್ಷದಿಂದ ಮತ್ತೆ ರೋಗಿಯಾದ.
ಜೆರಾಕ್ಸ್ ಅಂಗಡಿಯ ಎದುರು ಸಾಲಿನ ಅಂಗಡಿಯೊಂದರ ಯಜಮಾನ ನನ್ನ ಬಗ್ಗೆ ಗಿರಾಕಿಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾನೆ. ಅವನ ಪ್ರಚಾರದಿಂದ ಬೀದಿಯಲ್ಲಿ ಓಡಾಡುವ ಪಡ್ಡೆ ಹುಡುಗರೂ ನನ್ನನ್ನು ಗೇಲಿ ಮಾಡುತ್ತಾರೆಂದು ಅವನ ಕೊರಗು. ಈ ಕಾರಣದಿಂದ ಆತ ಹೆದರಿ ಅನೇಕ ದಿನ ಅಂಗಡಿ ತೆಗೆಯುತ್ತಲೇ ಇರಲಿಲ್ಲ. ತೆಗೆದರೂ ಅವನ ಜೊತೆ ಯಾರಾದರೂ ಇರಲೇಬೇಕಾಗುತ್ತಿತ್ತು. ಹಾಗಾಗಿ ಅವನ ಅತ್ತಿಗೆಯೋ, ಹೆಂಡತಿಯೋ ಜೊತೆಯಲ್ಲಿ ಕೂರುತ್ತಿದ್ದರು. ಅಂಗಡಿಯಲ್ಲಿ ಕುಳಿತ ಈತ ಒಂದೇ ಸಮನೆ ದೇವರ ಸ್ತೋತ್ರವನ್ನೋ, ಜಪವನ್ನೋ ಮಾಡುತ್ತ ಕುಳಿತಿರುತ್ತಿದ್ದ. ರಾಘವೇಂದ್ರ ಸ್ವಾಮಿಗಳ ಭಕ್ತ ಈತ. ಪ್ರತಿದಿನ ತಪ್ಪದೆ ಮಠಕ್ಕೆ ಹೋಗಿಬರುತ್ತಿದ್ದ. ಇವನ ಎದುರು ಅಂಗಡಿಯಾತನ ಮೇಲಿನ ಅನುಮಾನಕ್ಕೆ ಚಿಕಿತ್ಸೆ ಕೊಡಿಸಲು ಇವನ ಅಣ್ಣ ಮನೋವೈದ್ಯರಲ್ಲಿಗೆ ಕರೆತಂದರು. ಮತ್ತೆ ಚಿಕಿತ್ಸೆ ಶುರುವಾಯಿತು.
ಚಿಕಿತ್ಸೆ ನಡೆದಿರುವಾಗಲೇ ಅವನ ವರ್ತನೆ ಬದಲಾಯಿತು. ಸ್ತೋತ್ರ ಜಪಿಸುವುದನ್ನು ನಿಲ್ಲಿಸಿಬಿಟ್ಟ. ಧೈರ್ಯ ಹೆಚ್ಚಾಗಿ ಒಬ್ಬನೇ ಅಂಗಡಿಯಲ್ಲಿ ಕೂರಲಾರಂಭಿಸಿದ. ಉತ್ಸಾಹ ಹೆಚ್ಚಾಗಿ ಎಲ್‌ಐಸಿಯ ಪಾಲಿಸಿಗಳನ್ನು ಮಾರಲಾರಂಭಿಸಿದ. ಹೆಚ್ಚು ಮಾತು, ಖುಷಿ, ಬೆಳಗ್ಗೆ ಸಂಜೆ ಾಕಿಂಗ್‌ಗೆ ಹೋಗಲಾರಂಭಿಸಿದ. ಈಗ ದೇವರನಾಮಗಳಿಗೆ ಬದಲಾಗಿ ಸಿನಿಮಾ ಹಾಡುಗಳನ್ನು ಗುನುಗಲಾರಂಭಿಸಿದ. ಮನೆಯಲ್ಲಿರುವಾಗಲೂ ತಂಪು ಕನ್ನಡಕ ಧರಿಸಿದ. ಈ ಬದಲಾದ ವರ್ತನೆಗಳನ್ನು ಗಮನಿಸಿದ ವೈದ್ಯರು ಮತ್ತೆ ಚಿಕಿತ್ಸೆ ಬದಲಾಯಿಸಿದರು.
ಈಗ ಇವನ ಹೊಸ ವರಸೆ ಶುರುವಾಯ್ತು. ಎದುರಂಗಡಿಯವರು ಮಾತ್ರವಲ್ಲ, ಎದುರು ಮನೆಯವರೂ ನನ್ನ ಬಗ್ಗೆ ಏನೋ ಮಾತನಾಡಿಕೊ ಳ್ಳುತ್ತಿದ್ದಾರೆಂದು ಇವನ ಭ್ರಮೆ! ಮತ್ತೆ ಮಂಕಾಗಿ ಬಿಟ್ಟ. ಭಯಗ್ರಸ್ಥನಾದ, ಎದುರು ಮನೆಯವರು ಸಿಕ್ಕಾಗಲೆಲ್ಲ, ‘ನಾನು ಒಳ್ಳೆಯವನು. ಯಾರಿಗೂ ತೊಂದರೆ ಕೊಟ್ಟಿಲ್ಲ. ನನ್ನ ಬಗ್ಗೆ ಯಾಕೆ ಾಗೆ ಮಾತನಾಡುತ್ತೀರಿ’ ಎಂದು ಕೇಳಲಾರಂಭಿಸಿದ. ಇವನ ಖಾಯಿಲೆ ಬಗ್ಗೆ ತಿಳಿಯದ ಎದುರು ಮನೆಯವರು ಕಕ್ಕಾಬಿಕ್ಕಿ. ಈ ಹಂತದಲ್ಲಿಯೇ ಚಿಕಿತ್ಸೆ. ಮಧ್ಯದಲ್ಲೇ ಇವನ ಅಣ್ಣಂದಿರು ಮನೆ ದೇವರಿಗೆ ಪೂಜೆ ಮಾಡಿಸಿಕೊಂಡು ಬರಲು ಹೊರಟಿದ್ದು. ಮಧ್ಯದಲ್ಲೇ ತಪ್ಪಿಸಿಕೊಂಡು ಮನೆಗೆ ಬಂದ ಈತ ಜಾಸ್ತಿ ಮಾತ್ರೆ ನುಂಗಿಬಿಟ್ಟ. ವಿಚಾರಿಸಿದರೆ ಸರಿಯಾಗಿ ನಿದ್ರೆ ಬರಲೆಂದು ಹೆಚ್ಚು ಮಾತ್ರೆ ನುಂಗಿದೆ ಎನ್ನುತ್ತಾನೆ. ನಿದ್ರೆ ಮಾಡಲು ಬಿಪಿ ಮಾತ್ರೆ ಯಾಕೆ ನುಂಗಿದೆ ಎಂದರೆ ಅವನಲ್ಲಿ ಉತ್ತರವಿಲ್ಲ. ಕಳೆದೆರಡು ವಾರದಿಂದ ಅವನು ಮಗಳನ್ನು ಮುಟ್ಟುತ್ತಿಲ್ಲ. ಏೆಂದು ವಿಚಾರಿಸಿದರೆ, ಜನರಿಗೆ ನಾನು ಎಲ್ಲ ಸ್ತ್ರೀಯರನ್ನೂ ಕಾಮದ ಕಣ್ಣಿನಿಂದ ನೋಡುತ್ತೇನೆ ಎಂದು ತಪ್ಪು ಅಭಿಪ್ರಾಯವಾಗಿದೆ. ಅದಕ್ಕೆ ಮಗಳನ್ನೂ ಮುಟ್ಟಿಸಿಕೊಳ್ಳೆನು ಎನ್ನುತ್ತಾನೆ. ಮತ್ತೆ ಸ್ತೋತ್ರ, ಜಪ ಶುರು ಮಾಡಿದ್ದಾನೆ.
ಇವನ ಮನೋರೋಗ ಶೀಘ್ರದಲ್ಲಿ ಗುಣವಾಗುತ್ತಿಲ್ಲ. ಕೆಲವು ರೋಗಿಗಳಲ್ಲಿ ಹಾಗೆಯೇ. ಚಿಕಿತ್ಸೆಯ ಪರಿಣಾಮ ನಿಧಾನವಾಗಿ ಗೋಚರಿಸುತ್ತದೆ. ಅಲ್ಲಿಯವರೆಗೆ ಮನೋವೈದ್ಯರೂ, ಮನೆಯವರೂ ತಾಳ್ಮೆಯಿಂದ ಕಾಯಬೇಕಾಗುತ್ತದೆ. ರೋಗಕ್ಕಿಂತ ಮುಖ್ಯವಾದ ಸಮಸ್ಯೆ, ಈ ವ್ಯಕ್ತಿ ಬಿಚ್ಚುಮನಸ್ಸಿನಿಂದ ಮಾತನಾಡದೇ ಇರುವುದು. ಮನೋವೈದ್ಯರು ರೋಗಿಯು ತನ್ನ ಸಮಸ್ಯೆಗಳನ್ನು ವಿವರಿಸಿದಾಗಷ್ಟೇ ಅವನ ಖಾಯಿಲೆಯ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ರೋಗಿಯು ನಾಚಿಕೆಯಿಂದಲೋ, ಸ್ವಭಾವದಿಂದಲೋ ಮಿತಭಾಷಿಯಾಗಿ ಬಿಟ್ಟರೆ ಮನೋೈದ್ಯರು ಇವನ ವರ್ತನೆಗೆ ಕಾರಣವೇನಿರಬಹುದೆಂದು ಊಹಿಸಿ ಚಿಕಿತ್ಸೆ ಮಾಡಬೇಕಾಗುತ್ತದೆ.
ದೈವಭಕ್ತಿಯೂ ಕೆಲವೊಮ್ಮೆ ಮನೋರೋಗದ ಲಕ್ಷಣವಾಗಿರಬಹುದು. ದಿಢೀರೆಂದು ಕಾಣಿಸಿಕೊಳ್ಳುವ ಭಕ್ತಿ, ಸಹಜತೆಯನ್ನು ಮೀರಿದ ಅತೀವ ಭಕ್ತಿ, ಹಗಲು ರಾತ್ರಿ, ಊಟ, ನಿದ್ರೆಯೆನ್ನದ ಭಕ್ತಿ, ಇವೆಲ್ಲ ಮನೋರೋಗ ಹಿನ್ನೆಲೆಯಲ್ಲಿ ಉದ್ಭವಿಸಬಹುದು. ಅನಿರೀಕ್ಷಿತವಾಗಿ ಮತಾಂತರಗೊಳ್ಳುವವರು, ಮೈ ಮೇಲೆ ದೈವ ಬಂದು ಕುಣಿದಾಡುವವರು, ಬೂದಿ, ವಿಭೂತಿ, ಕುಂಕುಮ, ಅರಿಶಿಣ ಎರಚಿಕೊಂಡು ಪೂಜೆಗೈಯ್ಯುವವರು ಮನೋರೋಗಿಗಳಾಗಿರುವ ಸಾಧ್ಯತೆ ಇದೆ. ಮೇಲ್ಕಂಡ ವ್ಯಕ್ತಿಗೆ ಸುತ್ತಮುತ್ತಲಿನವರ ಬಗ್ಗೆ ಕಾಲ್ಪನಿಕ ಭಯ ಹೆಚ್ಚಾದಾಗೆಲ್ಲ ಭಕ್ತಿಯೂ ಹೆಚ್ಚುತ್ತಿತ್ತು.
ತೀವ್ರ ಭಕ್ತಿಯೂ ಮನೋರೋಗದ ಲಕ್ಷಣವಾಗಿರಬಹುದು. ಭಕ್ತಿಯೇ ಬಂಧನವಾಗಿ ‘ಮನವೆಂಬ ನಾವೆ’ಯ ಪಯಣಕ್ಕೆ ಅಡ್ಡಿಯಾದಾಗ ಮನೋ ವೈದ್ಯರು ಚಿಕಿತ್ಸೆಯ ಮೂಲಕ ಭಕ್ತಿಯನ್ನು ಕಡಿದು ಸುಗಮಯಾನಕ್ಕೆ ನೆರವಾಗಬಲ್ಲರು.


ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate