“ಡಾಕ್ಟ್ರೇ, ನನಗೆ ಈಗ ಎರಡು ವರ್ಷಗಳ ಹಿಂದೆ ಒಂದು ‘ಆಕ್ಸಿಡೆಂಟ್’ ಆಯಿತು. ಬಸ್ಸಲ್ಲಿ ಸಿಕ್ಕಿಹಾಕ್ಕೊಂಡಿದ್ದೆ. ಕೂಗ್ತಾ ಇದ್ದ ನನ್ನನ್ನು ಹೇಗೋ ಮಾಡಿ ‘ಬಚಾವ್’ ಮಾಡಿದ್ರು. ಗಾಯಗಳನ್ನು ಬಿಟ್ಟರೆ ಅದೃಷ್ಟವಶಾತ್ ನನಗೆ ಬೇರೇನೂ ಆಗಲಿಲ್ಲ. ಆದರೆ ನಾನು ಸಿಕ್ಕಿ ಹಾಕಿಕೊಂಡಿದ್ದ ಅರ್ಧ ಗಂಟೆಯಲ್ಲಿ ಆದ ಜೀವಭಯ ನನಗೆ ಅದರಿಂದ ಹೊರಬಂದು ಎರಡು ವರ್ಷಗಳಾದ್ರೂ ಇನ್ನೂ ಹೋಗಿಲ್ಲ. ಈಗಲೂ ಬಸ್‌ನಲ್ಲಿ ಪ್ರಯಾಣ ಮಾಡೋಕೆ ಹೆದರಿಕೆ.
ಕೆಲಸ ಮಾಡ್ಬೇಕಾದ್ರೆ ಕೆಲವು ಸಲ ಇದ್ದಕ್ಕಿದ್ದಂತೆ ಮೈ ಬೆವರಿ, ಎದೆ ಬಡಿತ ಜಾಸ್ತಿ ಆಗತ್ತೆ, ಮತ್ತೆ ಅದೇ ದೃಶ್ಯ, ನಾನು ಸಿಕ್ಕಿ ಬಿದ್ದಿದ್ನಲ್ಲಾ ಅದೇ ತರಹ. ಈಗಲೂ ಅದೇ ತರ ನಡೀತಿದೆಯೇನೋ ಎಂಬ ಅನುಭವ. ಇದರಿಂದ ನನಗೆ ಯಾವುದೂ ಬೇಡವಾಗಿದೆ, ಯಾವ ಕೆಲಸನೂ ಮಾಡೋಕ್ಕಾಗ್ತಿಲ್ಲ. ಹಾಗೆ ನೋಡಿದ್ರೆ ಆ ಅಪಘಾತದಲ್ಲಿ ನನಗೇನೂ ಆಗಿಲ್ಲ, ಆದರೆ ಅದು ಹುಟ್ಟಿಸಿರೋ ಭಯ ನನ್ನನ್ನು ಈ ರೀತಿ ಮಾಡಿಬಿಟ್ಟಿದೆ.”
ಆಘಾತದ ನಂತರದ ಆತಂಕ ಕಾಯಿಲೆಯಾಗಿ ಬದಲಾದ ಸ್ಥಿತಿಯನ್ನು ಅಂದರೆ Post traumatic stress disorder (PTSD) ಎಂಬ ಕಾಯಿಲೆಯನ್ನು ವಿವರಿಸುತ್ತವೆ. ಹೆಸರೇ ಹೇಳುವಂತೆ ಈ ಕಾಯಿಲೆಯ ಆರಂಭ ‘ಆಘಾತ’ದ ನಂತರ. ‘ಆಘಾತ’ವಾದರೂ ಅಷ್ಟೆ, ದಿನನಿತ್ಯ ಕೇಳಬಹುದಾದ ಆಘಾತದ ಸುದ್ದಿಗಳೋ ಅಥವಾ ಚಿಕ್ಕಪುಟ್ಟ ಅಪಘಾತಗಳೋ ಅಲ್ಲ. ಒಬ್ಬ ವ್ಯಕ್ತಿಗೆ ಸ್ವತಃ ತನ್ನ ಪ್ರಾಣಕ್ಕೇ ಅಪಾಯ ಒದಗಬಹುದಾದ ಅಥವಾ ತನ್ನ ಸುತ್ತಲಿನ ಜನರ ಪ್ರಾಣಕ್ಕೆ ತೊಂದರೆಯಾಗಬಹುದಾದ ಘಟನೆ ನಡೆದಾಗ ಅದು ತೀವ್ರ ಭಯ, ನಿಸ್ಸಹಾಯಕತೆ, ಆತಂಕಗಳನ್ನು ತರುವುದು ಸಹಜ.
ಇದು ಘಟನೆಯ ನಂತರವೂ ಮುಂದುವರಿದಾಗ ಅದು ಕಾಯಿಲೆಯಾಗಿ ಬದಲಾಗುತ್ತದೆ. ತೀವ್ರತರವಾದ ಅಪಘಾತಗಳು, ದೈಹಿಕ ಹಿಂಸೆ, ಅತ್ಯಾಚಾರ, ಪ್ರವಾಹ/ ಭೂಕಂಪ/ ಯುದ್ಧಗಳಂತ ಸನ್ನಿವೇಶಗಳು ಇಂಥ ಕಾಯಿಲೆಗೆ ಕಾರಣವಾಗಬಹುದು. ಆದರೆ ವಿಚ್ಛೇದನ, ಕಾಯಿಲೆ, ಆತ್ಮೀಯರ ಸಾವು ಇವೆಲ್ಲವೂ ಮನಸ್ಸಿಗೆ ಬಹು ದುಃಖ ತರಬಹುದಾದರೂ ಇವು ‘ಆಘಾತದ ಅನಂತರದ ಆತಂಕದ ಕಾಯಿಲೆ’ಯ ಕಾರಣಗಳಾಗಲು ಸಾಧ್ಯವಿಲ್ಲ.
ಈ ಕಾಯಿಲೆಯಿಂದ ನರಳುವ ವ್ಯಕ್ತಿಗಳ ಮುಖ್ಯ ಸಮಸ್ಯೆ ತೀವ್ರವಾದ ‘ಭಯ’. ಈ ಭಯ ಮತ್ತು ಅದರ ಪರಿಣಾಮಗಳು ಆಘಾತದ ಸಮಯದಲ್ಲಿ ಆ ವ್ಯಕ್ತಿ ಅನುಭವಿಸಿದ ಸಂದರ್ಭವನ್ನು ಯಥಾವತ್ ಹೋಲುತ್ತದೆ. ಇದರ ಲಕ್ಷಣಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.
*ಆಘಾತದ ಘಟನೆಯನ್ನು ಅನುಭವಿಸುವುದು (Reliving the traumatic event).
*ದುಸ್ವಪ್ನಗಳು, ಕಲ್ಪನೆಯಲ್ಲಿ ಭ್ರಮೆಗಳು ಇವುಗಳಲ್ಲಿ ಈಗಲೂ ಕಣ್ಣ ಮುಂದೆ ಆ ಘಟನೆ ನಡೆಯುತ್ತಿದೆಯೋ ಎಂಬಂತೆ ಭಯ, ಬೆವರುವಿಕೆ, ಎದೆಬಡಿತ ಹೆಚ್ಚುವುದು, ಗಾಬರಿ ಇವೆಲ್ಲವನ್ನೂ ಅನುಭವಿಸುವುದು.
*ಆತಂಕದಿಂದ ಸದಾ ತುದಿಗಾಲ ಮೇಲೆ ನಿಂತಂತೆ ಚಡಪಡಿಸವುದು-overly alertness - ನಿದ್ರಾಹೀನತೆ, ಕಿರಿಕಿರಿ, ಏಕಾಗ್ರತೆಯಿರದಿರುವುದು, ಬೆಚ್ಚಿ ಬೀಳುವುದು, ಅಪಾಯದ ಸೂಚನೆಗಾಗಿ ಸದಾ ಹುಡುಕುತ್ತಿರುವುದು.
*ಆಘಾತ ನೆನಪಿಸುವ ಗುರುತು ಎದುರಿಸದಿರುವ, ಅವುಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ.
*ಘಟನೆಯನ್ನು ನೆನಪಿಸುವ ಸ್ಥಳಗಳು, ಭಾವನೆಗಳು, ಜನ, ಯೋಚನೆ, ಇವನ್ನು ತಪ್ಪಿಸುವುದು. ಭಾವನಾತ್ಮಕ ನಿರ್ವಿಕಾರ ಭಾವನೆಗಳನ್ನೇ ಕಳೆದುಕೊಳ್ಳುವುದು. ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿಯಿರದಿರುವುದು, ಕುಟುಂಬದವರೊಡನೆ ಸ್ಪಂದಿಸದಿರುವುದು.
ಹಾಗಿದ್ದರೆ ಯಾವುದೇ ವ್ಯಕ್ತಿಯಲ್ಲಿಯೂ ಪ್ರಾಣಕ್ಕೆ ಕುತ್ತು ತರುವ ಘಟನೆ ನಡೆದಾಗ ಈ ಲಕ್ಷಣಗಳು ಕಾಣಿಸಬೇಕಲ್ಲವೆ? ಅವರೆಲ್ಲರಿಗೂ ಕಾಯಿಲೆ ಬಂದಿದೆ ಎಂದು ಹೇಳಬಹುದೇ? ಖಂಡಿತ ಇಲ್ಲ. ಇಂಥ ಘಟನೆಯನ್ನು ಎದುರಿಸುವ ಎಲ್ಲರಿಗೂ ಸಹಜವಾಗಿ ಪ್ರತಿಕ್ರಿಯೆ ಸಾಮಾನ್ಯವೇ. ಆದರೂ, ಕೆಲವರಲ್ಲಿ ಈ ಲಕ್ಷಣಗಳು ಒಂದು ತಿಂಗಳಿಗೂ ಮೀರಿ ಮುಂದುವರಿಯುತ್ತದೆ. ಜೊತೆಗೇ ಕೌಟುಂಬಿಕ ಬೆಂಬಲ, ಸಾಮಾಜಿಕ ಬೆಂಬಲ, ಸ್ವತಃ ವ್ಯಕ್ತಿಯ ವ್ಯಕ್ತಿತ್ವ ಇವೆಲ್ಲವೂ ಒಬ್ಬ ವ್ಯಕ್ತಿ ಎಷ್ಟು ಬೇಗ ಘಟನೆಯ ಆಘಾತದಿಂದ ಚೇತರಿಸಿಕೊಳ್ಳಬಲ್ಲ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಇಂಥ ಘಟನೆಗಳ ನಂತರ ಚಿಕಿತ್ಸೆ ಎಲ್ಲರಿಗೂ ಬೇಡ. ಆದರೆ ತನ್ನ ಆರೈಕೆ, ಕುಟುಂಬದವರು - ಆತ್ಮೀಯರ ಬಳಿ ಹಂಚಿಕೊಂಡು ಹಗುರಾಗುವುದು, ಅವರೂ ಅದರ ಬಗ್ಗೆ ಅನಗತ್ಯ ಕುತೂಹಲ-ಟೀಕೆ -ಅಜ್ಞಾನದ ಸಲಹೆಗಳನ್ನು ಬದಿಗಿಟ್ಟು, ಕಿವಿಗೊಟ್ಟು ಕೇಳುವುದು, ಸಾಂತ್ವನದ , ಧೈರ್ಯದ, ಬೆಂಬಲದ ಮಾತುಗಳನ್ನು ಹೇಳುವುದು ತುಂಬಾ ಸಹಾಯಕಾರಿ.
ಒಮ್ಮೊಮ್ಮೆ ತಿಂಗಳಿಗೂ ಮೀರಿ ಮುಂದುವರೆದರೆ ಮನೋವೈದ್ಯರು ಆತಂಕ ನಿವಾರಿಸುವ ಔಷಧಿಗಳ ಜೊತೆಗೆ ಆಘಾತದ ನೋವನ್ನು ಎದುರಿಸುವ ಅದರೊಂದಿಗೇ ಬರುವ ನಂಬಿಕೆ - ಯೋಚನೆಗಳನ್ನು ಬದಲಿಸುವ ಮನೋ ಚಿಕಿತ್ಸೆಯನ್ನು ಕೊಡಬಲ್ಲರು. ‘ಗುಣಮುಖ’ವಾಗುವಿಕೆ ಈ ಕಾಯಿಲೆಯಲ್ಲಿ ಒಂದು ಘಟನೆ ಎನ್ನುವುದಕ್ಕಿಂತ ಒಂದು ‘ಪ್ರಕ್ರಿಯೆ’,
ಹಾಗಾಗಿ ಈ ಕೆಳಗಿನ ಅಂಶಗಳನ್ನು ಯಾವುದೇ ತೀವ್ರತರವಾದ ಆಘಾತಕ್ಕೊಳಗಾದ ವ್ಯಕ್ತಿ ಗಮನಿಸಿ, ಪಾಲಿಸಬೇಕು.
*ಆತ್ಮೀಯರೊಂದಿಗೆ ಸಮಯ ಕಳೆಯಿರಿ.
*ಆಘಾತದ ಬಗ್ಗೆ ತಿಳಿದುಕೊಳ್ಳಿ ಮತ್ತು ಏನನ್ನು ನಿರೀಕ್ಷಿಸಬೇಕು ಎಂಬ ಮಾಹಿತಿ ಪಡೆದುಕೊಳ್ಳಿ.
*ಕೆಲಸ, ಅಧ್ಯಯನ ಇವುಗಳನ್ನು ಮುಂದುವರಿಸಿ
*ನಿಮಗೆ ಏನನ್ನಿಸುತ್ತದೆ ಅಥವಾ ಏನಾಯಿತು ಎಂಬುದರ ಬಗ್ಗೆ ಮಾತನಾಡಿ.
*ಆಘಾತದ ನೆನಪುಗಳನ್ನು ತರುವ ವಸ್ತು-ಸಂದರ್ಭ - ಜನರನ್ನು ಹೆದರದೇ ಎದುರಿಸಿ.
*ಟಿ.ವಿ. / ಪತ್ರಿಕೆಗಳಲ್ಲಿ ಬರುವ ಸುದ್ದಿ / ಫೋಟೊಗಳು ನೆನಪುಗಳನ್ನು ಮರುಕಳಿಸಬಹುದು.ಇದನ್ನು ನಿರೀಕ್ಷಿಸಿ, ಎದುರಿಸಿ.
*ವರ್ಷದಲ್ಲಿ ಬರುವ ಆಘಾತ ನಡೆದ ದಿನದಂದು ಮತ್ತೆ ಎಲ್ಲವೂ ಕಣ್ಣಮುಂದೆ ನಡೆಯುತ್ತಿರುವಂತೆ ಭಾಸವಾಗಬಹುದು. ಇದು ಸಹಜ. ನಿಮಗೆ ಸಂತಸ ತರಬಲ್ಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
*ಕಾಯಿಲೆಯನ್ನು ನಿಭಾಯಿಸಲು ಮದ್ಯವ್ಯಸನಕ್ಕೆ ಒಳಗಾಗಬೇಡಿ.
*ಅತಿ ಒತ್ತಡಕ್ಕೆ ಒಳಗಾಗದಿರುವಂತೆ ಎಚ್ಚರವಹಿಸಿ.
ಇಷ್ಟು ಮಾಹಿತಿ, ಅವುಗಳನ್ನು ಪಾಲಿಸುವ ಪ್ರಾಮಾಣಿಕ ಪ್ರಯತ್ನ ಆಘಾತದ ನಂತರದ ಆತಂಕ, ಕಾಯಿಲೆಯಾಗದಂತೆ ತಡೆಗಟ್ಟಬಹುದು.
ಮೂಲ :ಪ್ರಜಾವಾಣಿ
ಕೊನೆಯ ಮಾರ್ಪಾಟು : 2/15/2020