ನಮ್ಮ ಹೃದಯ ಶುದ್ಧ ರಕ್ತವನ್ನು ಪಂಪ್ ಮಾಡಿ ದೇಹದ ಎಲ್ಲಾ ಭಾಗಗಳಿಗೂ ಕಳಿಹಿಸುತ್ತದೆ. ಈ ರೀತಿ ಪಂಪ್ ಮಾಡಲು ಒಂದು ಮಿತಿಯಲ್ಲಿ ಒತ್ತಡ ಬೇಕಾಗುತ್ತದೆ. ನಿಯಮಿತವಾದ ಈ ಒತ್ತಡಕ್ಕೆ ರಕ್ತದೊತ್ತಡ ಎನ್ನುತ್ತೇವೆ. ಈ ಒತ್ತಡ ಜಾಸ್ತಿಯಾದಾಗ ಅಧಿಕ ರಕ್ತದೊತ್ತಡ (Hypertension) ಮತ್ತು ಕಡಿಮೆಯಾದಾಗ ಕಡಿಮೆ ರಕ್ತದೊತ್ತಡ (Hypertension) ಉಂಟಾಗುತ್ತದೆ.
ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ರಕ್ತದೊತ್ತಡ 120/80 mm Hg ಇರುತ್ತದೆ. ಇನ್ನೂ ಕೆಲವು ಆರೋಗ್ಯವಂತರಲ್ಲಿ 1*0/90 ಅಥವಾ 110/70 mmHg ಕೂಡ ಇರುತ್ತದೆ. ಇದಕ್ಕೆ ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಇದರಲ್ಲಿ ವ್ಯತ್ಯಾಸವುಂಟಾದಾಗ ಗಮನ ಹರಿಸಬೇಕಾದ್ದು ಅತ್ಯವಶ್ಯಕ. ವಯಸ್ಸು ಏರಿದಂತೆ ಒತ್ತಡದಲ್ಲಿ ಏರಿಕೆ ಉಂಟಾಗಬಹುದು.
ಅಧಿಕ ರಕ್ತದೊತ್ತಡವನ್ನು ನಾಲ್ಕು ಹಂತಗಳಾಗಿ ವಿಂಗಡಿಸಬಹುದು:.
ಅಧಿಕ ರಕ್ತದೊತ್ತಡದಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ ಮತ್ತು ದ್ವಿತೀಯ ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್). ದ್ವಿತೀಯ ಅಧಿಕ ರಕ್ತದೊತ್ತಡ ನಿರ್ದಿಷ್ಟವಾದ ವೈದ್ಯಕೀಯ ಕಾರಣಗಳಿಂದ ಬರುತ್ತದೆ. ಅಂದರೆ ಹೃದಯದ ತೊಂದರೆ, ಮೂತ್ರಪಿಂಡಗಳ ಸಮಸ್ಯೆ, ಥೈರಾಯಿಡ್ ಇತ್ಯಾದಿ. ಪ್ರಾಥಮಿಕ ಅಧಿಕ ರಕ್ತದೊತ್ತಡ ಏರಲು ಹಲವಾರು ಕಾರಣಗಳು ಸಹಕರಿಸುತ್ತವೆ.
ಅಧಿಕ ರಕ್ತದೊತ್ತಡವು ಹಲವಾರು ವರ್ಷಗಳವರೆಗೆ ಯಾವ ಲಕ್ಷಣಗಳನ್ನೂ ತೋರಿಸದೇ ಇರಬಹುದು. ಕೆಲವೊಮ್ಮೆ ಬೇರೆ ಕಾರಣಗಳಿಗೆ ಪರೀಕ್ಷೆ ಮಾಡಿಸಿದಾಗ ರಕ್ತದೊತ್ತಡ ಹೆಚ್ಚಿರುವುದು ತಿಳಿಯುತ್ತದೆ. ಇದರ ಪ್ರಥಮ ಲಕ್ಷಣವೇ ಬೆಳಿಗ್ಗೆ ಏಳುವಾಗ ತಲೆನೋವು ಕಾಣಿಸಿಕೊಳ್ಳುವುದು, ಅದರಲ್ಲೂ ತಲೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುವುದು. ತಲೆಭಾರ, ತಲೆಸುತ್ತುವುದು, ಉಸಿರುಗಟ್ಟಿದಂತೆ ಆಗುವುದು, ನಿದ್ರಾಹೀನತೆ, ಆಯಾಸ, ಕಿವಿ ಮತ್ತು ಮುಖ ಕೆಂಪಾಗುವುದು, ಹೃದಯ ಬಡಿತ ಏರುವಿಕೆ, ಎದೆಯಲ್ಲಿ ಬಿಗಿತ, ಕೈಗಳು ಮತ್ತು ಭುಜಗಳಲ್ಲಿ ನೋವು, ಅಧಿಕ ಮೂತ್ರ ವಿಸರ್ಜನೆ ಮುಂತಾದವುಗಳು.
ಅಧಿಕ ರಕ್ತದೊತ್ತಡ ನಿರ್ಲಕ್ಷಿಸಿದರೆ ಕಣ್ಣು, ಹೃದಯ, ಮಿದುಳು ಮತ್ತು ಮೂತ್ರಪಿಂಡಗಳ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು. ಹೃದಯದ ವೈಫಲ್ಯ, ಹೃದಯಾಘಾತ, ಮೂತ್ರಪಿಂಡದ ಕಾಯಿಲೆ, ಮಿದುಳಿನಲ್ಲಿ ರಕ್ತಸ್ರಾವ, ಪಾರ್ಶ್ವವಾಯು, ಮೂರ್ಛೆರೋಗ ಮುಂತಾದವುಗಳಿಗೂ ಕಾರಣವಾಗಬಹುದು.
ನೈಸರ್ಗಿಕ ಚಿಕಿತ್ಸೆಯಿಂದ ತಕ್ಷಣವೇ ಗುಣವಾಗದಿದ್ದರೂ ನಿಯಮಿತವಾದ, ದೀರ್ಘವಾದ ಚಿಕಿತ್ಸೆಯಿಂದ ಪರಿಣಾಮಕಾರಿ ಫಲಿತಾಂಶ ಹೊಂದಬಹುದು. ಔಷಧಿಗಳನ್ನು ಸೇವಿಸುತ್ತಿರುವವರು ಕೂಡ ಅದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಾ ಕೊನೆಗೆ ನಿಲ್ಲಿಸಬಹುದು. ರಕ್ತದೊತ್ತಡ ಎಷ್ಟಿದೆ ಎನ್ನುವುದರ ಮೇಲೆ ಚಿಕಿತ್ಸೆಯ ಅವಧಿ ಅವಲಂಭಿಸಿರುತ್ತದೆ. ಇದರಲ್ಲಿ ಮುಖ್ಯವಾಗಿ ಈ ಕೆಳಗಿನ ವಿಷಯಗಳ ಮೇಲೆ ಗಮನವಿಡಬೇಕು.
ಪ್ರಾಣಾಯಾಮ, ಧ್ಯಾನ ಮತ್ತು ಯೋಗನಿದ್ರೆಗಳು ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತವೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಗುರುವಿನ ಮಾರ್ಗದರ್ಶನದಲ್ಲಿ ಅನುಸರಿಸಿದರೆ ನಿರೀಕ್ಷಿತ ಫಲಿತಾಂಶ ಖಚಿತ. ದೇಹ ಮತ್ತು ಮನಸ್ಸಿನ ಒತ್ತಡಗಳನ್ನು ಹೊರಹಾಕಲು ಯೋಗ ಒಂದು ಅತ್ಯುತ್ತಮ ಸಾಧನ. ಮೊದಲನೆ ಮತ್ತು ಎರಡನೆ ಹಂತದಲ್ಲಿರುವವರಿಗೆ ಯೋಗನಿದ್ರೆ ಅತ್ಯುತ್ತಮ ಚಿಕಿತ್ಸೆ. ಮೂರನೆಯ ಮತ್ತು ನಾಲ್ಕನೆಯ ಹಂತಗಳಲ್ಲಿ ಮತ್ತು ಹಲವಾರು ವರ್ಷಗಳಿಂದ ರಕ್ತದೊತ್ತಡದಿಂದ ಬಳಲುತ್ತಿರುವವರು ಆಂಟಿ ಹೈಪರ್‌ಟೆನ್ಸಿವ್ ಔಷಧಿಗಳ ಜೊತೆಗೆ ಯೋಗನಿದ್ರೆ ಅಭ್ಯಾಸ ಮಾಡಬಹುದು.
ಇವುಗಳ ಜೊತೆಗೆ ಮಾಡಬೇಕಾದ ಇತರ ಚಿಕಿತ್ಸೆಗಳೆಂದರೆ–
ಬೆನ್ನುಹುರಿಸ್ನಾನ, ಸಂಪೂರ್ಣ ತೊಟ್ಟಿಸ್ನಾನ, ಎದೆ ಪಟ್ಟಿ, ಕಣ್ಣಿನ ಪಟ್ಟಿ, ಮಣ್ಣಿನ ಸ್ನಾನ, ಕಟಿ ಸ್ನಾನ, ಮಸಾಜ್ ಮುಂತಾದವುಗಳು ಕೂಡ ಅಧಿಕ ರಕ್ತದೊತ್ತಡದಲ್ಲಿ ಬಹು ಉಪಯುಕ್ತ.
(ಮಾಹಿತಿಗೆ: 9480289648/08162281999)
ಸಂಸ್ಕೃತದಲ್ಲಿ ಯೋಗದ ಅರ್ಥ ದೇಹವನ್ನು ಮನಸ್ಸಿನೊಂದಿಗೆ ಸೇರಿಸುವುದು. ನಿದ್ರಾ ಅಂದರೆ ನಿದ್ರೆ. ಯೋಗನಿದ್ರೆಯನ್ನು ಅಭ್ಯಾಸ ಮಾಡುವವರು ನಿದ್ರೆ ಮಾಡುವಂತೆ ಕಂಡರೂ, ಆಂತರಿಕವಾಗಿ ಅವರು ಎಚ್ಚರವಾಗಿಯೇ ಇರುತ್ತಾರೆ. ಇದರಿಂದ ಸಂಪೂರ್ಣ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ವಿಶ್ರಾಂತಿ ದೊರೆಯುತ್ತದೆ. ಇದು ನರವ್ಯೂಹವನ್ನು ಚೇತರಿಸುತ್ತದೆ. ಖಿನ್ನತೆ ಮತ್ತು ಉದ್ರೇಕಗಳನ್ನು ದೂರಮಾಡುತ್ತದೆ. ಎಚ್ಚರ ಸ್ಥಿತಿಯಿಂದ, ಸ್ವಪ್ನಾವಸ್ಥೆಗೆ, ನಂತರ ಗಾಢ ನಿದ್ರೆ ಇವು ಯೋಗನಿದ್ರೆಯ ಮೂರು ಆಯಾಮಗಳು. ಇದನ್ನು ಮಾಡುವಾಗ ಎಚ್ಚರ ಸ್ಥಿತಿಯಲ್ಲಿದ್ದು ಮಾರ್ಗದರ್ಶಕರ ವಿವರಣೆಯನ್ನು ಆಲಿಸುತ್ತ ಅದರಂತೆ ಪಾಲಿಸಬೇಕು. ಮೂರು ವಾರಗಳ ನಿಗದಿತ ಅವಧಿಯಲ್ಲಿ ಯೋಗನಿದ್ರೆ ಮಾಡಿದವರಲ್ಲಿ ಸಿಸ್ಟೋಲಿಕ್ ಬಿಪಿ 15-20 mm Hg ಮತ್ತು ಡಯಾಸ್ಟೋಲಿಕ್ ಬಿಪಿ 10 mm Hg ಕಡಿಮೆಯಾಗಿದ್ದು ಕಂಡುಬಂದಿದೆ.
ನೆನಪಿಡಿ....
ಸರ್ವಾಂಗಾಸನ ಮತ್ತು ಶಿರ್ಸಾಸನಗಳು ಹೃದಯಕ್ಕೆ ಅಶುದ್ಧ ರಕ್ತವನ್ನು ಹೆಚ್ಚು ಪೂರೈಸುವುದರಿಂದ ಮತ್ತು ಕಪಾಲಭಾತಿ, ಭಸ್ತ್ರಿಕಾ ಪ್ರಾಣಾಯಾಮ ಮತ್ತು ಸೂರ್ಯಾಭ್ಯಾಸಗಳು ಹೃದಯದ ಬಡಿತವನ್ನು ಹೆಚ್ಚಿಸುವುದರಿಂದ ಅಧಿಕ ರಕ್ತದೊತ್ತಡ ಇರುವವರು ಯೋಗ ವೈದ್ಯರ ನೆರವಿಲ್ಲದೇ ಮಾಡಬಾರದು.
ಮೂಲ :ಪ್ರಜಾವಾಣಿ
ಕೊನೆಯ ಮಾರ್ಪಾಟು : 1/28/2020