ಬೇಸಿಗೆಯೆಂದರೆ, ಬೆವರು ತುರಿಕೆಯನ್ನು ದೂರದವರೇ ಇಲ್ಲ. ಆದರೆ ಬಿಸಿಲನ್ನು ಪ್ರೀತಿಸದೇ ಇರಲು ಸಾಧ್ಯವೇ? ಉರಿಬಿಸಿಲು ಚರ್ಮಕ್ಕೆ ಮುತ್ತಿಟ್ಟಾಗ ಆಗುವುದೇ ಈ ತುರಿಕೆ. ಚರ್ಮದ ಸತ್ತ ಜೀವಕೋಶಗಳು ಉದುರಿದಂತೆ ಎನಿಸುತ್ತದೆ. ಕೈ ಆಡಿಸುತ್ತಲೇ ಇದ್ದಾಗ ಹಿತಾನುಭವ. ಬಿಟ್ಟರೆ ಚಡಪಡಿಕೆ. ಆದರೆ ಕೆರೆತ ಹೆಚ್ಚಿದಷ್ಟೂ ಚರ್ಮ ಕೆಂಪಾಗುತ್ತದೆ. ಗಾಯವಾಗುತ್ತದೆ. ಇದು ಸನ್ ಅಲರ್ಜಿ ಎಂದು ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕೆನ್ನೆ, ಭುಜ, ಹಾಗೂ ಎದೆಯ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಚರ್ಮದ ಬಣ್ಣದಲ್ಲಿಯೇ ಸಣ್ಣ ಪ್ರಮಾಣದ ಮಚ್ಚೆಗಳಂತೆ ಕಾಣಬಹುದು. ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಅತಿ ತುರಿಕೆಯಿಂದ ಕೂಡಿರುತ್ತವೆ.
ಇವುಗಳಿಂದ ಬಚಾವಾಗಬೇಕಾದರೆ ಎಸ್‌ಪಿಎಫ್ ಪ್ರಮಾಣ ಕನಿಷ್ಠವೆಂದರೂ 26ರಷ್ಟಿರುವ ಸನ್‌ಸ್ಕ್ರೀನ್ ಲೋಷನ್ ಲೇಪಿಸಬೇಕು. ಪ್ರತಿ ನಾಲ್ಕುಗಂಟೆಗೆ ಒಮ್ಮೆ ಮರುಲೇಪನ ಮಾಡಿಕೊಳ್ಳಲು ಮರೆಯಬಾರದು. ಕೆಲವೊಮ್ಮೆ ತೀವ್ರತರನಾದ ಸಮಸ್ಯೆ ಎದುರಾದರೆ ಆ್ಯಂಟಿ ಆಕ್ಸಿಡೆಂಟ್ ಮಾತ್ರೆಗಳನ್ನು ಸೇವಿಸಿಯೂ ಹತೋಟಿಗೆ ತರಬಹುದು. ಇದರಿಂದ ಸೂರ್ಯನ ಬಿಸಿಲನ್ನು ಎದುರಿಸಬಹುದು.
ಗಾಯಗಳು ಕಂಡು ಬಂದರೆ, ದಿನಕ್ಕೆ ಎರಡು ಮೂರು ಸಲ, ಐಸ್ ಕ್ಯೂಬ್ ಬಳಸಿ ಚರ್ಮವನ್ನು ತಣಿಸಬಹುದು. ನಂತರ ಅಲೊಯಿ ಜೆಲ್ ಅಥವಾ ಕ್ಯಾಲಮೈನ್ ಲೋಷನ್ ಲೇಪಿಸಬಹುದು. ಆಗಲೂ ಗಾಯಗಳಲ್ಲಿ ತುರಿಕೆಯುಂಟಾದರೆ ಚರ್ಮತಜ್ಞರನ್ನು ಕಾಣುವುದು ಒಳಿತು.
ಬೆವರಿನ ಗ್ರಂಥಿಗಳು ಮುಚ್ಚಿಕೊಂಡಾಗ ಬೆವರುಗುಳ್ಳೆಗಳಾಗುತ್ತವೆ. ಅತಿಯಾದ ಬೆವರುವಿಕೆಯೂ ಇದಕ್ಕೆ ಕಾರಣವಾಗಿರುತ್ತದೆ. ಬೆವರಿದ ಪ್ರದೇಶಗಳಲ್ಲಿ ಗಾಳಿಯಾಡದಿದ್ದರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಬೆವರು ರಂಧ್ರಗಳು ಮುಚ್ಚಿಕೊಂಡಾಗ, ಬೆವರು ಚರ್ಮದ ಒಳಪದರಿನಲ್ಲಿಯೇ ಹರಿಯುತ್ತದೆ. ಹೀಗೆ ಹರಿಯುವ ಬೆವರಿನಿಂದಾಗಿಯೇ ಬೆವರುಗುಳ್ಳೆಗಳು ಹುಟ್ಟುವುದು. ಇದಕ್ಕೆ ಆರಾಮದಾಯಕ ಬಟ್ಟೆಗಳನ್ನು ತೊಡುವುದೇ ಪರಿಹಾರವಾಗಬಲ್ಲದು. ಮೈಮೇಲೆ ಗಾಳಿಯಾಡುವಂಥ ಬಟ್ಟೆಗಳನ್ನು ತೊಟ್ಟರೆ ಈ ಸಮಸ್ಯೆಯನ್ನು ತಡೆಗಟ್ಟಬಹುದು.
ಇದು ನಿಮಗೆ ಆಗದಿರುವ ಅಥವಾ ಒಗ್ಗದಿರುವ ಪ್ರಸಾಧನಗಳನ್ನು ಬಳಸುವುದರಿಂದಲೂ ಬರಬಹುದು. ಸೂರ್ಯನ ಪ್ರತಾಪವನ್ನು ಸಹಿಸದೇ ಈ ಒಗ್ಗದಿರುವಿಕೆ ಉಂಟಾಗುತ್ತದೆ. ಒಮ್ಮೆ ಇಂಥ ಲಕ್ಷಣಗಳು ಕಂಡು ಬಂದ ತಕ್ಷಣ ಆ ಉತ್ಪನ್ನಗಳನ್ನು ಬಳಸದೇ ಇರುವುದು ಒಳಿತು.
ಇದು ಕೆಲವೊಮ್ಮೆ ದೀರ್ಘಕಾಲೀನ ಔಷಧಿಗಳನ್ನು ಬಳಸುತ್ತಿದ್ದಲ್ಲಿ, ಸಪ್ಲಿಮೆಂಟ್‌ಗಳನ್ನು ಸೇವಿಸುತ್ತಿದ್ದಲ್ಲಿಯೂ ಇಂಥ ಸಮಸ್ಯೆ ಎದುರಾಗಬಹುದು.ಗರ್ಭ ನಿರೋಧಕಗಳು, ರಕ್ತದ ಏರೊತ್ತಡಕ್ಕಾಗಿ ಬಳಸುವ ಔಷಧಿಗಳು, ಕೆಲವೊಂದು ರೋಗನಿರೋಧಕಗಳ ಸೇವನೆಯ ಸಂದರ್ಭದಲ್ಲಿಯೂ ಇಂಥ ರ್‌್ಯಾಶಸ್ ಕಾಣಿಸಿಕೊಳ್ಳುತ್ತವೆ. ಸೋಪು, ಸುಗಂಧ ದ್ರವ್ಯಗಳ ಬಳಕೆಯೂ ಇದಕ್ಕೆ ಕಾರಣವಾಗಬಹುದು. ಇಂಥ ಕಾರಣಗಳಿಂದ ತುರಿಕೆ ಕಂಡು ಬಂದಲ್ಲಿ, ಚರ್ಮವು ಕೆಂಪಗಾದಲ್ಲಿ, ಆ ಕ್ಷಣವೇ ಆ ಉತ್ಪನ್ನದ ಬಳಕೆಯನ್ನು ನಿಲ್ಲಿಸಬೇಕು. ವೈದ್ಯರನ್ನು ಭೇಟಿ ಮಾಡಬೇಕು. ಅಲ್ಲಿಯವರೆಗೂ ಗಾಯವಾದ ಭಾಗದಲ್ಲಿ ಕ್ಯಾಲಮೈನ್ ಬಳಸಬಹುದು.
ಬೇಸಿಗೆಯ ಇನ್ನೊಂದು ಸಮಸ್ಯೆಯೆಂದರೆ ಸೊಳ್ಳೆ ಕಡಿತ, ಹುಳ ಹುಪ್ಪಟೆಗಳ ಕಡಿತ. ಬೇಸಿಗೆಯಲ್ಲಿ ಇವುಗಳ ಉಪಟಳ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಕೆಲವು ಕಡಿತಗಳು ನೋವುದಾಯಕವಾಗಿಯೂ ಇರುತ್ತವೆ. ಗಾಯವನ್ನೂ ಮಾಡುತ್ತವೆ. ಇವುಗಳಿಂದ ಬಚಾವಾಗಲು ಸುರಕ್ಷೆಯೊಂದೇ ಉಪಾಯವಾಗಿದೆ. ಆದಷ್ಟು ಕೀಟಗಳ ಕಡಿತದಿಂದ ಪಾರಾಗುವ ಪರಿಹಾರಗಳತ್ತ ಗಮನ ನೀಡಿ. ಕೀಟ ಕಡಿತ ತಡೆಯುವ ಕ್ರೀಮ್‌ಗಳನ್ನು ಬಳಸಿ. ಮಲಗುವ ಮುನ್ನ ಸೊಳ್ಳೆ ನಿವಾರಣೆಯ ಕ್ರಮಗಳನ್ನು ಅನುಸರಿಸಿ. ಸೊಳ್ಳೆ ಪರದೆಯನ್ನು ಬಳಸಿ.
ಆದರೂ ಕೀಟ ಕಡಿತದಿಂದ ಕೆಲವೊಮ್ಮೆ ನೋವಿನೊಂದಿಗೆ ಊತವೂ ಕಾಣಿಸಿಕೊಳ್ಳಬಹುದು. ಕಡಿತವುಂಟಾಗುತ್ತಲೇ ಇರುತ್ತದೆ. ಕೆರೆಯಲೇಬೇಕೆನಿಸಿದರೂ ತುಟಿಕಚ್ಚಿ ಅದನ್ನು ಸಹಿಸಬೇಕು. ಕೆರೆತದಿಂದಾಗಿ ಸೋಂಕು ಚರ್ಮದ ಇತರೆಡೆಯೂ ಹರಡುವ ಸಾಧ್ಯತೆಗಳಿರುತ್ತವೆಯೇ ಹೊರತು ಕಡಿತಕ್ಕೆ ಪರಿಹಾರವಾಗಲಾರದು. ನೋವು ಮತ್ತು ಕಡಿತವಿದ್ದರೆ ರೋಗ ನಿರೋಧಕ ಕ್ರೀಮ್ ಬಳಸಬೇಕು. ಊತವೂ ಇದ್ದರೆ ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಯಾವುದೇ ಕಡಿತವನ್ನು ಗಂಭೀರ ಸ್ವರೂಪ ತಾಳುವವವರೆಗೂ ಕಾಯುವುದು ಹಿತವಲ್ಲ.(ಮಾಹಿತಿಗೆ: 7676757575)
ಮೂಲ :ಡಾ. ವಿ. ಚೈತ್ರಾ ವಿ. ಆನಂದ ಕಾಸ್ಮೊ ಡರ್ಮ ಸ್ಕಿನ್ ಅಂಡ್ ಹೇರ್ ಕ್ಲಿನಿಕ್, ಪ್ರಜಾವಾಣಿ (http://www.prajavani.net/)
ಕೊನೆಯ ಮಾರ್ಪಾಟು : 6/25/2020
ಬೇಸಿಗೆಯಲ್ಲಿ ಬಾನಿಂದಲೇ ಕೆಂಡ ಕಾರುವ ಸೂರ್ಯ, ಧರೆಯಲ್ಲಿ ದಾ...
ಚಳಿಗಾಲ ಕಳೆದು, ಬೇಸಿಗೆ ಕಾಲಿಡುವ ಈ ಸಂಧಿಕಾಲದಲ್ಲಿ ಕೆರೆತ ...
ಬೇಸಾಯ ಶಾಸ್ತ್ರ ಪರಿಚಯ, ಉಳುಮೆ ವಿಧಾನಗಳು ಹಾಗೂ ಬೆಳೆ...