অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೈನೆಕೊಮಾಸ್ಟಿಯಾ

‘ಗೈನೆಕೊಮಾಸ್ಟಿಯಾ’ ಅಥವಾ ‘ಪುರುಷ ಸ್ತನಗಳ ಹಿಗ್ಗುವಿಕೆ’, ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ. ಪುರುಷ ಹಾಗೂ ಸ್ತ್ರೀ ಹಾರ್ಮೋ­ನುಗಳ ಅಸಮತೋಲನ­ದಿಂದ ಇದು ಬಾಧಿಸುತ್ತದೆ.

ಪ್ರೌಢಾವಸ್ಥೆಗೆ ಬಂದಿರುವ ಪುರುಷರಲ್ಲಿ ಕಂಡು ಬರುವ ಈ ಸಮಸ್ಯೆ, ಎಲ್ಲಾ ವಯೋ­ಮಾನದವರನ್ನು ಕಾಡ­ಬಹುದು. ಇದು ಹೆಚ್ಚಾಗಿ ಎರಡೂ ಸ್ತನಗಳಲ್ಲಿ ಕಂಡು ಬರುತ್ತದೆ. ಒಂದೇ ಸ್ತನಕ್ಕೆ ಬಾಧಿಸು­ವುದು ತೀರಾ ಅಪರೂಪ.

ಗೈನೆಕೊಮಾಸ್ಟಿಯಾ ದೈಹಿಕವಾಗಿ ಯಾವುದೇ ಹಾನಿ ಮಾಡದಿದ್ದರೂ, ರೋಗಿಯನ್ನು ಮಾನಸಿಕವಾಗಿ ಕುಗ್ಗಿಸು­ತ್ತದೆ. ಈ ಕಾಯಿಲೆಗೆ ತುತ್ತಾದವರು ಸಾಮಾನ್ಯವಾಗಿ ಖಿನ್ನತೆಗೆ ಒಳಗಾಗು­ತ್ತಾರೆ. ಸ್ನೇಹಿತರಿಂದಲೋ, ಆತ್ಮೀಯ­ರಿಂದಲೋ ಅಥವಾ ಅಪರಿಚಿತ­ರಿಂದಲೋ ಅಪಹಾಸ್ಯಕ್ಕೆ ಈಡಾಡುವ ಸಾಧ್ಯತೆಗಳು ಇರುವುದರಿಂದ ಸಾರ್ವ­ಜನಿಕ­ವಾಗಿ ಬೆರೆಯಲು ಹಿಂದೇಟು ಹಾಕುತ್ತಾರೆ.

‘ಗೈನೆಕೊಮಾಸ್ಟಿಯಾವನ್ನು ಲಿಪೊಮಾಸ್ಟಿಯಾದೊಂದಿಗೆ (ಸ್ತನದ ಗ್ರಂಥಿಗಳ ಬೆಳವಣಿಗೆಯಾಗದೆ ಕೊಬ್ಬು ಸ್ತನಗಳಲ್ಲಿ ಸಂಗ್ರಹವಾಗುವುದು) ತಳಕು­ ಹಾಕಬಾರದು’ ಎಂದು ಹೇಳುತ್ತಾರೆ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗಳ ಸಮೂಹದ ಎಂಡೊಕ್ರಿನೊಲಾಜಿಸ್ಟ್‌ (ನಿರ್ನಾಳ ಗ್ರಂಥಿಗಳ ಶಾಸ್ತ್ರಜ್ಞ) ಡಾ. ಅಭಯ್‌ ಗುಂಡ್‌ಗುರ್ತಿ.

ಗೈನೆಕೊಮಾಸ್ಟಿಯಾಗೆ ಏನು ಕಾರಣಗಳು ಎಂಬ ಪ್ರಶ್ನೆಗೆ ಡಾ. ಅಭಯ್‌ ಉತ್ತರಿಸುವುದು ಹೀಗೆ: ‘ಟೆಸ್ಟೊಸ್ಟಿರೊನ್‌ ಎಂಬ ಪುರುಷ ಹಾರ್ಮೋನು ಹಾಗೂ ಈಸ್ಟ್ರೊಜನ್‌ ಎಂಬ ಸ್ತ್ರೀ ಹಾರ್ಮೋನುಗಳ ಅಸಮ­ತೋಲನದಿಂದ ಗೈನೆಕೊಮಾಸ್ಟಿಯಾ ಬರುತ್ತದೆ. ಹೆಚ್ಚಾಗಿ ಟೆಸ್ಟೊಸ್ಟಿರೊನ್‌ ಕೊರತೆಯಿಂದಲೇ ಈ ಕಾಯಿಲೆ ಬಾಧಿಸುತ್ತದೆ. ಹುಟ್ಟಿನಿಂದಲೇ ಬರುವ ನ್ಯೂನತೆ­ಗ­ಳಿಂದಲೂ (ವೃಷಣದಲ್ಲಿ ಈ ಹಾರ್ಮೋನಿನ ಉತ್ಪಾದನೆಯನ್ನು ಕಡಿಮೆ ಮಾಡುವಂತಹ ತೊಂದರೆ) ಇದು ಕಾಡಬಹುದು. ದೀರ್ಘ ಸಮಯದ ಪಿತ್ತಜನಕಾಂಗದ ಕಾಯಿಲೆಯೂ ಇದಕ್ಕೆ ಕಾರಣವಾಗ­ಬಹುದು. ತೀರಾ ಅಪರೂಪದಲ್ಲಿ ಕೆಲವು ಕ್ಯಾನ್ಸರ್‌ಗಳು ಗೈನೆಕೊಮಾಸ್ಟಿಯಾ ತರುತ್ತವೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಯಾವುದೇ ಕಾರಣವಿಲ್ಲದೇ ಇದು ಬರುತ್ತದೆ.

ಗೈನೆಕೊ­ಮಾಸ್ಟಿಯಾ ಬಂದೊಡನೆ ಎದೆಗುಂದಬೇಕಾಗಿಲ್ಲ. ಚಿಕಿತ್ಸೆಯಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸ­ಬಹುದು ಎಂದು ಹೇಳುತ್ತಾರೆ ಡಾ. ಅಭಯ್‌. ಪ್ರೌಢಾವಸ್ಥೆಯಲ್ಲಿ ಕಂಡು ಬರುವ ಈ ಕಾಯಿಲೆಯನ್ನು ಯಾವುದೇ ಚಿಕಿತ್ಸೆ­ಯಿಲ್ಲದೆ ಸ್ವಯಂ ನಿಯಂತ್ರಿಸ­ಬಹುದು. ಕೆಲವು ಬಾರಿ, ಹಿಗ್ಗಿರುವ ಸ್ತನಗಳ ಗಾತ್ರವನ್ನು ಕುಗ್ಗಿಸಲು ಟ್ಯಾಬ್ಲೆಟ್‌­­ಗಳನ್ನು (ಮಾತ್ರೆ) ನೀಡ-­ಬೇಕಾಗುತ್ತದೆ. ವ್ಯಕ್ತಿಯೊಬ್ಬರು ದೀರ್ಘ ಅವಧಿಯಿಂದ ಈ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ಸ್ತನಗಳ ಗಾತ್ರ ತುಂಬಾ ದೊಡ್ಡದಾಗಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ಗೈನೆಕೊಮಾಸ್ಟಿಯಾದಿಂದ ಪ್ರಾಣಕ್ಕೆ ಯಾವ ಅಪಾಯವೂ ಇಲ್ಲ  ಎಂಬುದು ಡಾ. ಅಭಯ್‌ ನೀಡುವ ಸ್ಪಷ್ಟನೆ. ಆದರೆ, ವ್ಯಕ್ತಿಯೊಬ್ಬನ/ಳ ದೇಹದಲ್ಲಿ ಪ್ರಾಣಘಾತುಕ ಕ್ಯಾನ್ಸರ್‌ ಅವಿತು ಕುಳಿತಿರುವ ಸಾಧ್ಯತೆ ಬಗ್ಗೆಯೂ ಇದು ಸುಳಿವು ನೀಡುತ್ತದೆ. ಹಾಗಾಗಿ ಗೈನೆಕೊಮಾಸ್ಟಿಯಾವನ್ನು ನಿರ್ಲಕ್ಷಿಸು­ವುದು ಸರಿಯಲ್ಲ. ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಅವರು ಸಲಹೆ ನೀಡುತ್ತಾರೆ.

‘ಲಿಪೊಮಾಸ್ಟಿಯಾ’ಬಗ್ಗೆ ತಿಳಿಯಿರಿ

‘ಗೈನೆಕೊಮಾಸ್ಟಿಯಾ’ ವಿಚಾರ ಪ್ರಸ್ತಾ­ಪಿಸಿದಾಗಲೆಲ್ಲಾ ಅದನ್ನು ‘ಲಿಪೊಮಾಸ್ಟಿಯಾ’ದೊಂದಿಗೆ ಹೋಲಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಯಾಕೆಂದರೆ ಬರಿಗಣ್ಣಿಗೆ ಎರಡೂ ಸಮಸ್ಯೆಗಳು ಒಂದೇ ರೀತಿಯಾಗಿ ಕಾಣುತ್ತವೆ. ಅದರೆ ಎರಡರ ಗುಣಲಕ್ಷಣಗಳು ಬೇರೆ ಬೇರೆ. ಇದನ್ನು ಸೂಕ್ತ ವೈದ್ಯಕೀಯ ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವುದು ಮುಂಜಾಗ್ರತೆ ದೃಷ್ಟಿಯಿಂದ ಉತ್ತಮ.

‘ಲಿಪೊಮಾಸ್ಟಿಯಾ’ ಕುರಿತಾಗಿ ‘ಭೂಮಿಕಾ’ ಕೇಳಿದ ಪ್ರಶ್ನೆಗಳಿಗೆ ಎಚ್‌ಸಿಜಿ ಆಸ್ಪತ್ರೆಗಳ ಸಮೂಹದ ಎಂಡೊಕ್ರಿನೊಲೊಜಿಸ್ಟ್‌ ಡಾ. ಅಭಯ್‌ ಉತ್ತರಿಸಿದ್ದಾರೆ.

ಲಿಪೊಮಾಸ್ಟಿಯಾ ಎಂದರೇನು? ಇದು ಕಾಯಿಲೆಯೇ ?

ಇದು ಕಾಯಿಲೆ ಅಲ್ಲವೇ ಅಲ್ಲ. ಎದೆ ಭಾಗದಲ್ಲಿ ಸಂಗ್ರಹವಾಗುವ ಕೊಬ್ಬನ್ನು ವೈದ್ಯಕೀಯ ಪರಿಭಾಷೆಯಲ್ಲಿ ಲಿಪೊ­ಮಾಸ್ಟಿಯಾ ಎಂದು ಕರೆಯುತ್ತಾರೆ. ಸ್ಥೂಲಕಾಯದವರಲ್ಲಿ ಇದು ಕಂಡು ಬರುತ್ತದೆ. ಬೊಜ್ಜು ಇರುವ ವ್ಯಕ್ತಿಗಳು ತೂಕವನ್ನು ಕಳೆದುಕೊಂಡ ಸಂದರ್ಭ­ದಲ್ಲಿ ಇದು ಎದ್ದು ಕಾಣುತ್ತದೆ. ವೈದ್ಯಕೀಯ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಿಂದ ‘ಲಿಪೊಮಾಸ್ಟಿಯಾ’ ಮತ್ತು ‘ಗೈನೆಕೊಮಾಸ್ಟಿಯಾ’ ನಡುವಣ ವ್ಯತ್ಯಾಸ ಗುರುತಿಸಬಹುದು.

ಇದಕ್ಕೆ ಕಾರಣಗಳೇನು ?ಯಾವ ವಯಸ್ಸಿ­ನಲ್ಲಿ ಕಾಡುತ್ತದೆ?

ಸ್ಥೂಲಕಾಯವೇ ಇದಕ್ಕೆ ಪ್ರಮುಖ ಕಾರಣ. ಬೊಜ್ಜು ಇರುವ ಮಕ್ಕಳಲ್ಲಿ ಲಿಪೊಮಾಸ್ಟಿಯಾ ಹೆಚ್ಚಾಗಿ ಕಂಡು ಬರುತ್ತದೆ. ಆದರೂ, ಪ್ರೌಢಾವಸ್ಥೆ ಸೇರಿದಂತೆ ಎಲ್ಲಾ ವಯೋಮಾನ­ದವರನ್ನೂ ಇದು ಕಾಡಬಹುದು.

ಲಿಪೊಮಾಸ್ಟಿಯಾವನ್ನು ಹೇಗೆ ನಿಯಂತ್ರಿಸಬಹುದು ? ಚಿಕಿತ್ಸೆಗಳಿವೆಯೇ ?

ಜೀವನ ಶೈಲಿ, ವ್ಯಾಯಾಮ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ­ಕೊಂಡು ದೇಹದ ತೂಕ ಕುಗ್ಗಿಸುವ ಮೂಲಕ ಇದನ್ನು ನಿಯಂತ್ರಿಸ­ಬಹುದು. ಸಣ್ಣ ಶಸ್ತ್ರಚಿಕಿತ್ಸೆ­ಯಿಂದಲೂ ಇದನ್ನು ಹೋಗಲಾಡಿಸ­ಬಹುದು.

(ಮಾಹಿತಿಗೆ ದೂರವಾಣಿ ಸಂಖ್ಯೆ -–91 99011 22004)

ಮೂಲ :ಡಾ. ಅಭಯ್‌ ಗುಂಡ್‌ಗುರ್ತಿ  ಪ್ರಜಾವಾಣಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate