অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಲ್ಜಮೈರ್ ರಹಸ್ಯ ಪತ್ತೆ

ಅಲ್ಜಮೈರ್ ರಹಸ್ಯ ಪತ್ತೆ

ಮೊದ ಮೊದಲು ತಮಾಷೆ ಎನ್ನಿಸುವ ಮರೆಗುಳಿ ಕಾಯಿಲೆ ಕ್ರಮೇಣ ಅಪಾಯಕಾರಿ ಎನ್ನಿಸುವುದು ಸಹಜ.

ಏಕೆಂದರೆ ಆರಂಭದಲ್ಲಿ ಸ್ನೇಹಿತರ ಹೆಸರನ್ನು ನೆನಪಿಸಿಕೊಳ್ಳಲು ಹೆಣಗುವ, ಎಲ್ಲೋ ಎತ್ತಿಟ್ಟ ವಸ್ತುವನ್ನು ನೆನಪಿಸಿಕೊಳ್ಳಲಾಗದೆ ಪರಿತಪಿಸುವ ಸನ್ನಿವೇಶಕ್ಕಷ್ಟೇ ಸೀಮಿತವಾಗುವ ಈ ಕಾಯಿಲೆ ಕ್ರಮೇಣ ತೀರಾ ಹತ್ತಿರದ ಬಂಧುಗಳ, ಮನೆ ಜನರ ಹೆಸರನ್ನೂ, ಗುರುತನ್ನೂ ಮರೆಯುವ ಹಂತ ತಲುಪುತ್ತದೆ. ತೀರಾ ಉಲ್ಬಣಗೊಂಡಾಗಲಂತೂ ಊಟ ಮಾಡಬೇಕೆಂಬುದೂ ನೆನಪಾಗದೆ, ವಿಸರ್ಜನ ಕ್ರಿಯೆಯನ್ನು ಮಾಡುವುದಕ್ಕೂ ನೆನಪಾಗದೆ ವ್ಯಕ್ತಿ ಪರಾವಲಂಬಿಯಾಗಿಯೇ ದಿನದೂಡಬೇಕಾಗುತ್ತದೆ. ಮೆದುಳಿನ ಒಂದೊಂದೇ ನರಗಳು ನಿಷ್ಕ್ರಿಯವಾಗುವ ಹಂತವದು. ದೇಹದ ಕ್ರಿಯೆಗಳನ್ನು ಸಮಯಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ಮಾಡಲು ನೆನಪಿಸುವ, ಸೂಚಿಸುವ ಮೆದುಳಿನ ನರಗಳೇ ಸುಮ್ಮನಾಗಿಬಿಟ್ಟರೆ ವ್ಯಕ್ತಿಯ ಕತೆಯೇನು? ವೈದ್ಯಕೀಯ ಭಾಷೆಯಲ್ಲಿ ಈ ಮರೆಗುಳಿ ಕಾಯಿಲೆಗೆ ಅಲ್ಜಮೈರ್ ಎಂದು ಹೆಸರು. ಈ ರೋಗ ಯಾವ ರೀತಿ ಹುಟ್ಟುಕೊಳ್ಳುತ್ತದೆಂಬ ಬಗ್ಗೆ ಇದುವರೆಗೂ ತಜ್ಞರಲ್ಲಿ ಮಾಹಿತಿಯಿರಲಿಲ್ಲ. ಆದರೆ ಇತ್ತೀಚಿನ ಸಂಶೋಧನೆಯೊಂದು ಅಲ್ಜಮೈರ್‌ನ ಕಾರಣವನ್ನು ಪತ್ತೆಹಚ್ಚಿದೆ. 
ಆಮ್ಲಾಯ್ಡ್ ಬೀಟಾ ಎಂಬ ಎರಡು ಪ್ರೋಟಿನ್ ಕಣಗಳಿಂದ ರೂಪಾಂತರಗೊಂಡ ಅಂಶವೇ ಅಲ್ಜಮೈರ್ ಕಾಯಿಲೆಗೆ ಕಾರಣ ಎಂಬುದು ಇತ್ತೀಚೆಗೆ ಪತ್ತೆಯಾಗಿದೆ. ಈ ಬೀಟಾ ಕಣವು ಒಂದು ರೀತಿಯ ಕರಗದ ಹುಣ್ಣನ್ನು ಸೃಷ್ಟಿ ಮಾಡುತ್ತದೆ. ಈ ಹುಣ್ಣು ನರಗಳಲ್ಲಿ ನಾರಿನಂಥ ಗಂಟುಗಳನ್ನು ಉಂಟುಮಾಡುತ್ತದೆ. ಈ ಗಂಟುಗಳು ನರಗಳಲ್ಲಿರುವ ಆರೋಗ್ಯವಂತ ಕಣಗಳನ್ನು ಸಾಯಿಸುತ್ತವೆ. ಇದರಿಂದಾಗಿ ನರ ದುರ್ಬಲಗೊಳ್ಳುತ್ತದೆ ಎಂಬುದು ಸಂಶೋಧನೆಯ ಸಾರ. ಈ ಸಂಶೋಧನೆಯಿಂದಾಗಿ ಅಲ್ಜಮೈರ್ ಕಾಯಿಲೆಗೆ ಪರಿಹಾರೋಪಾಯಗಳನ್ನು ಹುಡುಕುವುದೂ ಸಾಧ್ಯವಾಗಬಹುದೆಂದು ಅಂದಾಜಿಸಲಾಗಿದೆ. ಚಿಕ್ಕ ವಯಸ್ಸಿನಿಂದ ಮೆದುಳಿನ ಕಾರ್ಯ ಚಟುವಟಿಕೆಗಳಲ್ಲಿ ಹೇಗೆ ವಿಕಸನವಾಗುತ್ತ ಬರುತ್ತದೆಯೋ ಹಾಗೆಯೇ ಈ ಕಾಯಿಲೆಯಿಂದ ಬಳಲುವವರ ಮೆದುಳು ಕುಬ್ಜವಾಗತೊಡಗುತ್ತದೆ. ಅಂದರೆ ತನ್ನ ಒಂದೊಂದೇ ಕಾರ್ಯವನ್ನು ಸ್ಥಗಿತಗೊಳಿಸುತ್ತ ಮನುಷ್ಯ ಹುಟ್ಟುವಾಗ ಹೇಗಿದ್ದನೋ ಅಂಥದೇ ಸ್ಥಿತಿಗೆ ಅವನನ್ನು ಕೊಂಡೊಯ್ಯುತ್ತದೆ. 
ಮನುಷ್ಯನ ದೇಹದ ಸಮಸ್ತ ಚಟುವಟಿಕೆಗಳ ಕೇಂದ್ರವಾದ ಮೆದುಳಿನ ಯಾವುದಾದರೂ ನರ ತನ್ನ ಕೆಲಸ ಮರೆತರೆ ಅಲ್ಲಿಗೆ ಅವನ ಬದುಕು ದುಸ್ತರಗೊಂಡಂತೆ. ತೀರಾ ಅಪರೂಪದ ಕಾಯಿಲೆಯಾದ ಅಲ್ಜಮೈರ್ ಕೇವಲ ವಂಶವಾಹಿಯಿಂದ ಬರಬಹುದಾದ ಕಾಯಿಲೆ ಎಂಬುದು ಈಗಾಗಲೇ ದೃಢವಾಗಿದೆ. ಭವಿಷ್ಯದಲ್ಲಿ ಈ ಕಾಯಿಲೆಗೆ ಸೂಕ್ತ ಔಷಧವೂ ಲಭ್ಯವಾಗಬಹುದು ಎಂಬುದು ತಜ್ಞರ ಭರವಸೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate