অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ತಚಂದನ

ಚಂದನ ಎಂದರೆ ಶ್ರೀಗಂಧ ಎಂದು ಎಲ್ಲರಿಗೂ ಗೊತ್ತು. ಆದರೆ ಅಪರೂಪದ ಸಸ್ಯವೆನಿಸಿದ ರಕ್ತ ಚಂದನ ಮರ ಕಂಡವರು ವಿರಳ. ಚೆನ್ನಾಗಿ ಬಲಿತ ಮರದ ಕೊರಡನ್ನು ತೇದರೆ ರಕ್ತ ದಂತೆ ಕೆಂಪಾದ ಗಂಧ ಬರುವುದು ಇದರ ವಿಶೇಷತೆ.

ಬಾಹುಬಲಿಯ ಮಸ್ತಕಾಭಿಷೇಕದ ಸಂದರ್ಭ ದಲ್ಲಿ ಕೊಡಗಳಲ್ಲಿ ರಕ್ತಚಂದನವನ್ನು ಅಭಿಷೇಕ ಮಾಡುವುದನ್ನು ನೀವೂ ನೋಡಿರಬಹುದು. ಎಳೆಯ ಮಗುವಿನ ಮೈಗೆ ದಿನಾ ಚಂದನ ಲೇಪಿಸಿ ಬಳಿಕ ಸ್ನಾನ ಮಾಡಿಸುವ ಪದ್ಧತಿಯಿದೆ. ಇದರಿಂದ ಅನೇಕ ಚರ್ಮರೋಗಗಳು ಕಾಣೆಯಾಗಿ ಚರ್ಮ ಕಾಂತಿಯುಕ್ತವಾಗುತ್ತದೆ. ಆಯುರ್ವೇ ದದಲ್ಲಿ ಅದರ ಅನೇಕ ಔಷಧೋಪಯೋಗಗಳ ವಿವರಗಳಿವೆ.

ಕರಾವಳಿಯಲ್ಲಿ ರಕ್ತ ಚಂದನದ ಗಿಡ ನೆಟ್ಟು ಬೆಳೆಸಲು ಪ್ರಯತ್ನಿಸಿದವರು ಕಡಿಮೆ. ಔಷಧೀಯ ವನಗಳಲ್ಲಿ ಮಾತ್ರ ಇವು ಕಾಣಸಿಗುತ್ತದೆ. ಅಂಥದ್ದ ರಲ್ಲಿ ಪುತ್ತೂರಿನ ಜೇನು ಬೆಳೆಗಾರರ ಸಂಘದ ಅಧ್ಯಕ್ಷರಾದ ವಾದ್ಯಕೋಡಿ ಶಾಮಭಟ್ಟರು ತಮ್ಮ ಕೃಷಿಭೂಮಿಯಲ್ಲಿ ಈ ಮರಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ. ಇದರ ಬೆಳವಣಿಗೆ ಶ್ರೀಗಂಧಕ್ಕಿಂತಲೂ ಶೀಘ್ರ ಎನ್ನುವ ಅವರು ಇದು ಎತ್ತರವಾಗುವ ಬದಲು ದಪ್ಪವಾಗುತ್ತ ಹೋಗುವುದರಿಂದ ತುಂಬ ಲಾಭದಾಯಕವೆನ್ನುತ್ತಾರೆ. ಸರಿಯಾಗಿ ಬೆಳೆದರೆ ಮರ ಬರೋಬ್ಬರಿ ಎಂಟು ಮೀಟರ್ ಎತ್ತರವಾ ಗುತ್ತದೆ. ವ್ಯಾಸ 50ರಿಂದ 150 ಸೆ. ಮೀ. ಇರುತ್ತದೆ. ಇಪ್ಪತ್ತು ವರ್ಷಗಳಲ್ಲಿ ಕಟಾವಿಗೆ ಬರುತ್ತದೆ. ಚಂದನಕ್ಕೆ ರೋಗ ಮತ್ತು ಕೀಟದ ಬಾಧೆ ವಿರಳ. ಬೇಸಿಗೆಯಲ್ಲಿ ಬುಡ ತಂಪಾಗುವಷ್ಟು ನೀರು, ಮಳೆಗಾಲ ದಲ್ಲಿ ಬುಡದಲ್ಲಿ ನೀರು ನಿಲ್ಲದಂಥ ವ್ಯವಸ್ಥೆ ಮಾಡುವುದು ಮುಖ್ಯ. ಸಾವಯವ ಗೊಬ್ಬರವಿದ್ದರೆ ಒಳಿತು. ಇಲ್ಲವಾದರೆ ಮಣ್ಣಿನಲ್ಲಿ ಸಿಗುವ ಸತ್ವದಿಂದಲೇ ಬೆಳೆಯುತ್ತದೆ. ಮೊದಲ ಮೂರೇ ವರ್ಷದಲ್ಲಿ ಐದು ಮೀಟರ್ ಎತ್ತರವಾ ಗುವ ಮರ, ಅನಂತರ ಎತ್ತರವಾಗದೆ ದಪ್ಪವಾಗುತ್ತ ಬೆಳೆಯುತ್ತದೆ. ಶುಷ್ಕ ಹವೆಯಲ್ಲಿಯೂ ಇದರ ಕೃಷಿ ಸಾಧ್ಯ. ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದವರೆಗಿನ ಪ್ರದೇಶಗಳಿಗೆ ಇವು ಹೊಂದುತ್ತದೆ.

20 ವರ್ಷ ಪೋಷಿಸಿದರೆ ಲಾಭದಾಯಕ ಬೆಳೆ

ವೈಜ್ಞಾನಿಕವಾಗಿ ಟೆರೋಕಾರ್ಪಸ್ ಸನ್‌ಥಾಲಿನಸ್ ವರ್ಗಕ್ಕೆ ಸೇರಿದ ಚಂದನ, ದಕ್ಷಿಣ ಭಾರತದ ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ಸಿಗುತ್ತವೆ. ಇದರ ಬೆಲೆ ಹೆಚ್ಚಿರುವುದರಿಂದ ಮರಗಳ್ಳರಿಗೆ ಬಲಿಯಾಗಿ ಅಳಿವಿನ ಅಂಚು ತಲಪಿದೆ. ಔಷಧ ಮತ್ತು ಸೌಂದರ್ಯ ಪ್ರಸಾದನಗಳಿಗೆ ಅತಿ ಹೆಚ್ಚು ಬಳಕೆಯಾಗುತ್ತದೆ. ಶ್ರೀಗಂಧಕ್ಕಿಂತ ಮೂರು ಪಟ್ಟು ಬೆಲೆ ಅಧಿಕವಿದ್ದರೂ ಸರಕಾರ ಶ್ರೀಗಂಧದ ಕೃಷಿಗೇ ಅಧಿಕ ಆದ್ಯತೆ ನೀಡಿದೆ. ಇಪ್ಪತ್ತು ವರ್ಷ ಸಾಕಿದರೆ ಒಂದೊಂದು ಮರವೂ ಲಕ್ಷಾಂತರ ರೂ. ಆದಾಯ ತರಬಲ್ಲುದು ಎನ್ನುತ್ತಾರೆ ಶಾಮಭಟ್ಟರು. ಬೆಲೆ ಒಂದು ಕಿಲೋಗೆ ಸಾವಿರ ರೂ.ನಿಂದ ಶುರುವಾಗುತ್ತದೆ. ಉತ್ತಮ ವರ್ಗಕ್ಕೆ ಬೆಲೆ ಇನ್ನೂ ಹೆಚ್ಚು. ಒಂದು ಮರದಿಂದ ಕನಿಷ್ಠ ಎರಡು ಕ್ವಿಂಟಾಲು ಕೊರಡು ನಿರೀಕ್ಷಿಸಬಹುದು. ಒಮ್ಮೆ ಗಿಡ ಬದುಕಿದರೆ ಮತ್ತೆ ಹೆಚ್ಚಿನ ಆರೈಕೆ ಬಯಸದೆ ಬೆಳೆಯುತ್ತದೆ. ಮಂಡ್ಯದ ಹುಲಿಕೆರೆ ಹಾಗೂ ಬಸವನಬೆಟ್ಟದಲ್ಲಿ ಅರಣ್ಯ ಇಲಾಖೆ ರೈತರಿಗೆ ಇದರ ಸಸಿಗಳನ್ನು ಒದಗಿಸಿದೆ. ಇಲ್ಲಿಯೂ ರೈತರಿಗೆ ಗಿಡ ಕೊಟ್ಟು ಮಾರ್ಗದರ್ಶನ ನೀಡಬೇಕೆಂಬ ಸಲಹೆ ಭಟ್ಟರದು.

ಮೊಡವೆಗೆ ಮದ್ದು: ರಕ್ತ ಚಂದನ ಮರದ ತೊಗಟೆಯನ್ನು ಗೀರಿದರೆ ರಕ್ತದಂತಹ ದ್ರವ ಜಿನುಗುತ್ತದೆ. ಚಂದನವನ್ನು ತೇದು ಮುಖಕ್ಕೆ ಹಚ್ಚಿದರೆ ಮೊಡವೆಗಳ ಬಾಧೆ ತಗ್ಗುತ್ತದೆ. ಅದರ ಚೂರ್ಣವನ್ನು ಕೆನೆಯಲ್ಲಿ ಕದಡಿ ಮುಖಕ್ಕೆ ಲೇಪಿಸು ವುದು ಸೌಂದರ್ಯ ವರ್ಧಕ ಎಂದು ಅದರ ಗುಣ ಗಳನ್ನೂ ಹೊಗಳುತ್ತಾರೆ. ಚದುರಂಗದ ಕಾಯಿಗಳ ತಯಾರಿಕೆಗೆ ರಕ್ತ ಚಂದನದ ಕೊರಡಿಗೆ ಇನ್ನೂ ಬೇಡಿಕೆಯಿದೆ ಎನ್ನುತ್ತಾರೆ ಕೃಷಿಕ ಶಾಮಭಟ್.

ಮೂಲ: ಪ.ರಾಮಕೃಷ್ಣ ಶಾಸ್ತ್ರಿ

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate