ಬೇಸಿಗೆಯಲ್ಲಿ ಬಾನಿಂದಲೇ ಕೆಂಡ ಕಾರುವ ಸೂರ್ಯ, ಧರೆಯಲ್ಲಿ ದಾಹ,ಉರಿಯು ವರ್ತುಲದೊಳಗೆ ಬದುಕು ಗಿರಕಿ ಹೊಡೆಯುತ್ತದೆ.
ಮಾನವನು ಉಷ್ಣಾಂಶವನ್ನು ಎಷ್ಟರ ಮಟ್ಟಿಗೆ ಸಹಿಸಬಲ್ಲನು? ಎನ್ನುವದರ ಬಗ್ಗೆ ಅನೇಕ ಸಂಶೋಧನೆಗಳು ಅಧ್ಯಯನಗಳ ಅವ್ಯಾಹತವಾಗಿ ಸಡೆದಿವೆ. ಮರಭೂಮಿಯಲ್ಲಿ ವಾಸಿಸುವ ಜನರನ್ನು ಅಭ್ಯಸಿಸಿ ಅನೇಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ, ಚರ್ಚಿಸಿದ್ದಾರೆ. ಪ್ರಕೃತಿದತ್ತ ವರ ತಲೆಯಲ್ಲಿರುವ ಹೈಪೋಥಲಸ್ದ ಮುಂಭಾಗದಲ್ಲಿರುವ ಕೇಂದ್ರ ಉಷ್ಣಾಂಶ ಹೆಚ್ಚಾದಾಗ ಪ್ರಚೋದನೆಗೊಂಡು ಉಷ್ಣಾಂಶ ನಿಯಂತ್ರಣಕ್ಕೆ, ಕಾರ್ಯಕಲಾಪಗಳನ್ನು ಚಲಾವಣೆಗೆ ತರುತ್ತದೆ. ಚರ್ಮಕ್ಕೆ ಮೊದಲು ಬಿಸಿ ತಟ್ಟುತ್ತದೆ. ಅದರಲ್ಲಿಯ ಉಷ್ಣ ಗಹಿಕೆಗಳು ಚುರುಕಾಗುತ್ತವೆ. ನರಗಳ ಮೂಲಕ ಸಂದೇಶವನ್ನು ಉಷ್ಣಾಂಶ ನಿಯಂತ್ರಣ
ಕೇಂದ್ರಕ್ಕೆ ರವಾನಿಸುತ್ತದೆ. ಪ್ರತಿಫಲವಾಗಿ ಅದು ರಕ್ತ ಸಂಚಾರ ಹೆಚ್ಚಿಸಿ, ಶರೀರಾದ್ಯಂತ ಬೆವರು ಗ್ರಂಥಿಗಳಿಂದ ಜಾಸ್ತಿ ಬೆವರು ಹೊರ ಸೊಸುವಂತೆ ಮಾಡುತ್ತದೆ. ಒಮ್ಮೆ ಶರೀರ ಬೆವರಿದರೆ ಉಷ್ಣಾಂಶ ಕಡಿಮೆಯಾಗುತ್ತದೆ. ಬಿಸಿಲಿನ ತಾಪಕ್ಕೆ ಬೆವರಿನ ತೇವ ಆವಿಯಾಗತೊಡಗಿದಾಗ ತಣ್ಣಗಿನ ಅನುಭವವಗುತ್ತದೆ ಇದಕ್ಕೆ ಕೂಲಿಂಗ್ ಎಫೆಕ್ಟ್ ಎನ್ನುವರು. ಬೆವರಿನೊಡನೆ ಶರೀರದಲ್ಲಿಯ ನೀರು ಹೊರ ಹೋಗಿ, ಅದರ ಪ್ರಮಾಣ ಕಡಿಮೆಯಾಗುತ್ತದೆ. ಆಗ ಶರೀರ ಬಾಯಾರಿಕೆಯ ಮೂಲಕ ನೀರುಬೇಕೆಂದು ತಿಳಿಸುತ್ತದೆ. ಅದಕ್ಕೆ ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುವದು, ನೀರು ಕುಡಿಯುವುದು ಎರಡೂ ಸ್ವಾಭಾವಿಕ. ನೀರು ಕುಡಿಯದಿದ್ದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.
ಮಾನವನ ಶರೀರಾದಾದ್ಯಂತ ಸಹಸ್ರಾರು ಬೆವರು ಗ್ರಂಥಿಗಳಿರುತ್ತವೆ. ಮಹಿಳೆ ಹಾಗೂ ಪುರುಷರಲ್ಲಿ ಸಮ ಸಂಖ್ಯೆಯಲ್ಲಿ ಇರುತ್ತವೆ. ಆದರೆ ಪ್ರಕೃತಿ ನಿಯಮದಂತೆ ಮಹಿಳೆಯರ ಗ್ರಂಥಿಗಳು ಪುರುಷರ ಗ್ರಂಥಿಗಳಿಗಿಂತ ಕಮ್ಮಿ ಬೆವರನ್ನು ಉತ್ಪಾದಿಸುತ್ತವೆ. ಇದರಲ್ಲಿ ಎರಡು ವಿಧಗಳಿವೆ. ಎಕ್ರಿನ್ ಮತ್ತು ಅಪೊಕ್ರಿನ್, ತುಟಿಗಳು, ಗುಪ್ತಾಂಗಗಳು ಮೂಗಿನ ಸಲೆಯ ಒಳಭಾಗ, ಕಿವಿಯ ಒಳಭಾಗಗಳನ್ನು ಬಿಟ್ಟು ದೇಹದಡೆಲ್ಲಡೆ ಎಕ್ರಿನ್ ಗ್ರಂಥಿಗಳು ಇರುತ್ತವೆ. ಇವು ಸಣ್ಣ ಪ್ರಮಾಣದಲ್ಲಿ ಸದಾ ಬೆವರು ಸೂಚಿಸುತ್ತಿರುತ್ತವೆ. ಅಪೊಕ್ರಿನ್ ಗ್ರಂಥಿಗಳು ಕಂಕುಳಲ್ಲಿ ಬೆವರು ಉತ್ಪಾದಿಸುತ್ತವೆ. ಅದರ ಪ್ರಮಾಣ ಹೆಚ್ಚಿರುವುದರಿಂದ ಅನುಭವಕ್ಕೆ ಬರುತ್ತದೆ. ಈ ಅಪೊಕ್ರಿನ್ ಗ್ರಂಥಿಗಳು ಬರೀ ಬಿಸಿನ ತಾಪಕ್ಕಲ್ಲದೆ, ಮನಸು ಉದ್ರೇಕಗೊಂಡಾಗಲೂ ಬೆವರು ಸುರಿಸುತ್ತವೆ. ಬೆವರಿನಲ್ಲಿ ಶೇ. 99 ನೀರು, ಮಿಕ್ಕ ಭಾಗ ಮಾತ್ರ ಸೋಡಿಯಂ ಕ್ಲೊರೈಡ್, ಪೊಟ್ಯಾಸಿಯಂ, ಗ್ಲೂಕೋಸ್ ಮತ್ತು ಇತರ ರಾಸಾಯನಿಕ ವಸ್ತುಗಳಿರುತ್ತವೆ.
ಬೆವರು ಉತ್ಪತ್ತಿಯಾದಾಗ ಯಾವ ವಾಸನೆಯು ಇರುವದಿಲ್ಲ. ನಂತರ ಅದು ಚರ್ಮದ ಮೇಲಿರುವ ಬ್ಯಾಕ್ಟೀರಿಯಾ ಜತೆ ಸೇರಿ ವಾಸನೆಯಾಗುತ್ತದೆ. ಈ ಸಮಸ್ಯೆಗೆ ಪರಿಹಾರಗಳು ಸಾಕಷ್ಟಿವೆ. ಆದರೆ ಬೆವರಿನ ವಾಸನೆಯನ್ನು ತಡೆಗಟ್ಟುವ ನೆವದಲ್ಲಿ ಬೆವರುವುದನ್ನು ತಡೆಗಟ್ಟಬಾರದು. ಬೇಸಿಗೆಯಲ್ಲಿ ಬೆವರುವುದು ಉಸಿರಾಡುವಷ್ಟೇ ಸಹಜ. ಪ್ರಕತಿ ನಿಯಮಿತ ರೀತಿಗೆ ಅಡ್ಡಿಯಾದರೆ ಶರೀರಕ್ಕೆ ಹಾನಿ ಆಗುತ್ತದೆ.
ಮೂಲ: ಡಾ. ಕರವೀರಪ್ರಭು ಕ್ಯಾಲಕೊಂಡ, ವಿಜಯ ಕರ್ನಾಟಕ
ಕೊನೆಯ ಮಾರ್ಪಾಟು : 6/20/2020
ಬೇಸಾಯ ಶಾಸ್ತ್ರ ಪರಿಚಯ, ಉಳುಮೆ ವಿಧಾನಗಳು ಹಾಗೂ ಬೆಳೆ...
ಚರ್ಮದ ಸತ್ತ ಜೀವಕೋಶಗಳು ಉದುರಿದಂತೆ ಎನಿಸುತ್ತದೆ. ಕೈ ಆಡಿಸ...