ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಅಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇಟ್ಟುಕೊಂಡು, ರಚಿಸುವ ಪದ್ಧತಿಯೇ ಪ್ರಕೃತಿ ಚಿಕಿತ್ಸೆ. ಅದಕ್ಕೆ ಗುರುತರವಾದ ಆರೋಗ್ಯ ವರ್ಧಕ, ರೋಗ ತಡೆಗಟ್ಟುವ, ಚಿಕಿತ್ಸಾತ್ಮಕ ಹಾಗೂ ಮೊದಲಿನ ಶಕ್ತಿ ಮತ್ತು ಆರೋಗ್ಯವನ್ನು ನೀಡುವ ಸಾಮರ್ಥ್ಯವಿದೆ.
ಬ್ರಿಟೀಷ್ ನೇಚುರೋಪತಿಕ್ ಅಸೋಸಿಯೇಶನ್ (ಬ್ರಿಟಿಷ್ ಪ್ರಕೃತಿ ಚಿಕಿತ್ಸಾ ಸಂಘ) ನ ಪ್ರಣಾಳಿಕೆಗೆ ಅನುಸಾರವಾಗಿ, “ಪ್ರಕೃತಿ ಚಿಕಿತ್ಸೆಯು ದೇಹದೊಳಗೆ ಅಸ್ಥಿತ್ವದಲ್ಲಿರುವ ಚೈತನ್ಯದ ರೋಗಪರಿಹಾರಕ ಶಕ್ತಿಯನ್ನು ಗುರುತಿಸುವಂತಹ ಒಂದು ಪದ್ಧತಿಯಾಗಿದೆ.” ಆದುದರಿಂದ, ಅದು, ಮಾನವ ವ್ಯವಸ್ಥೆಗೆ, ರೋಗಗಳನ್ನು ಶಮನ ಮಾಡಲು, ಅನಗತ್ಯ ಅಥವಾ ಅನುಪಯುಕ್ತ ವಸ್ತುಗಳನ್ನು ಹೊರದಬ್ಬುವುದರ ಮೂಲಕ, ರೋಗದ ಕಾರಣಗಳನ್ನು, ಉದಾಹರಣೆಗೆ, ವಿಷವಸ್ತುಗಳನ್ನು, ದೂರಮಾಡಲು ನೆರವಾಗುತ್ತದೆ.
ಈ ಚಿಕಿತ್ಸಾ ವಿಧಾನದ ಅನುಸಾರವಾಗಿ, ಆಹಾರವನ್ನು ಅದರ ಸಹಜ ರೂಪದಲ್ಲೇ ತೆಗೆದುಕೊಳ್ಳತಕ್ಕದ್ದು. ಕಾಲಕಾಲಕ್ಕೆ ಲಭ್ಯವಾಗುವ ತಾಜಾ ಹಣ್ಣುಗಳು, ತಾಜಾ ಹಸಿರು ಸೊಪ್ಪು ತರಕಾರಿಗಳು, ಮತ್ತು ಮೊಳಕೆ ಕಾಳುಗಳು ಅತ್ಯುತ್ತಮ ಆಹಾರ. ಈ ಆಹಾರ ಕ್ರಮಗಳು ಮೂರು ಸಾಮಾನ್ಯ ವರ್ಗಗಳಾಗಿ ವಿಂಗಡಿಸಲ್ಪಟ್ಟಿವೆ. ಅವುಗಳೆಂದರೆ:
ಕ್ಷಾರೀಯವಾಗಿರುವ ಈ ಆಹಾರ ಕ್ರಮಗಳು, ಆರೋಗ್ಯವನ್ನು ಸುಧಾರಿಸುವಲ್ಲಿ ನೆರವಾಗುತ್ತವೆ, ದೇಹವನ್ನು ಶುದ್ದೀಕರಿಸುತ್ತವೆ, ಮತ್ತು ದೇಹವನ್ನು ರೋಗಕ್ಕೆ ನಿರೋಧಕವಾಗಿಸುತ್ತದೆ. ಇದನ್ನು ಸಾಧಿಸಲು, ಸರಿಯಾದ ಆಹಾರದ ಸಂಯೋಜನೆಯ ಅಗತ್ಯವಿದೆ. ದೇಹದ ಆರೋಗ್ಯವನ್ನು ನಿರ್ವಹಿಸಲು, ನಮ್ಮ ಆಹಾರವು 20% ಆಮ್ಲ ಮತ್ತು 80% ಕ್ಷಾರದ ಅಂಶವನ್ನು ಒಳಗೊಂಡಿರಬೇಕು. ಉತ್ತಮ ಆರೋಗ್ಯವನ್ನು ಬಯಸುವ ಯಾವುದೇ ವ್ಯಕ್ತಿಗೆ ಸಮತೋಲಿತ ಆಹಾರ ಸೇವನೆಯು ಅಗತ್ಯ. ಪ್ರಕೃತಿ ಚಿಕಿತ್ಸೆಯಲ್ಲಿ ಆಹಾರವನ್ನೇ ಔಷಧಿಯೆಂದೇ ಪರಿಗಣಿಸಲಾಗಿದೆ.
ಉಪವಾಸವಿರುವುದೆಂದರೆ, ಮೂಲತಃ ಸ್ವಯಂಕೃತವಾಗಿ ಸ್ವಲ್ಪ ಸಮಯ ಭಾಗಶಃ ಅಥವಾ ಸಂಪೂರ್ಣವಾಗಿ ಎಲ್ಲಾ ರೀತಿಯ ಅಥವಾ ಕೆಲವು ಆಹಾರ, ನೀರು, ಅಥವಾ ಎರಡನ್ನೂ ಸೇವಿಸುವುದರಿಂದ ದೂರವಿರುವುದು. ಪುರಾತನ ಆಂಗ್ಲ ಭಾಷೆಯಿಂದ ಪಡೆದ ಪದ ’ಫಿಯೆಸ್ಟಾನ್” ಅಂದರೆ, ಉಪವಾಸವಿರುವುದು, ವೀಕ್ಷಿಸುವುದು, ಮತ್ತು ಕಟ್ಟುನಿಟ್ಟಾಗಿರುವುದು. ಸಂಸ್ಕೃತದಲ್ಲಿ ’ವೃತ’ ಅಂದರೆ,’ ’ದೃಢ ನಿಶ್ಚಯ’ ಹಾಗೂ ’ಉಪವಾಸ’ ಅಂದರೆ ’ದೇವರ ಸನಿಹದಲ್ಲಿ’ ಎಂದು ಅರ್ಥ. ಯಾವುದರಿಂದ ಉಪವಾಸವಿರುತ್ತಾರೆ ಎನ್ನುವುದನ್ನು ಹೊಂದಿಕೊಂಡು ನಿರಾಹಾರವು ಸಂಪೂರ್ಣವಾಗಿರಬಹುದು ಅಥವಾ ಭಾಗಶಃ ಆಗಿರಬಹುದು ಹಾಗೂ ಅವಧಿಯನ್ನು ಪರಿಗಣಿಸಿದರೆ ಅದು ಸುದೀರ್ಘವಾಗಿರಬಹುದು ಅಥವಾ ತಡೆತಡೆದು ನಡೆಯುತ್ತಿರುವುದಾಗಿರಬಹುದು. ನಿರಾಹಾರಿಯಾಗಿರುವುದು ಆರೋಗ್ಯ ರಕ್ಷಣೆಗೆ ಬಹಳ ಉತ್ತಮವಾದ ಚಿಕಿತ್ಸಾ ವಿಧಾನವಾಗಿದೆ. ನಿರಾಹಾರದಲ್ಲಿ, ಮಾನಸಿಕ ಸಿದ್ಧತೆ ಪ್ರಮುಖ ಪೂರ್ವ ಸ್ಥಿತಿಯಾಗಿದೆ. ಸುದೀರ್ಘ ನಿರಶನವನ್ನು ಪರಿಣತ ಪ್ರಕೃತಿ ಚಿಕಿತ್ಸಕರ ಮಾರ್ಗದರ್ಶನದಲ್ಲಿ ಮಾತ್ರ ನಡೆಸತಕ್ಕದ್ದು.
ನಿರಶನದ ಅವಧಿಯು ರೋಗಿಯ ವಯಸ್ಸು, ರೋಗದ ಸ್ವಭಾವ, ಮತ್ತು ಮುಂಚೆ ಬಳಸಿದ ಔಷಧಿಗಳ ಪ್ರಮಾಣ ಮತ್ತು ವಿಧಗಳನ್ನು ಹೊಂದಿಕೊಂಡಿದೆ. ಕೆಲವೊಮ್ಮೆ ಎರಡು ಅಥವಾ ಮೂರು ದಿನಗಳ ಸಣ್ಣ ಅವಧಿಯ ಉಪವಾಸಗಳೊಂದಿಗೆ ಆರಂಭಿಸಿ ಉಪವಾಸವಿರುವ ದಿನಗಳನ್ನು ಮುಂದುವರಿಸುತ್ತಾ ನಿಧಾನವಾಗಿ ಹೆಚ್ಚಿಸುತ್ತಾ ಹೋಗುವುದು ಹೆಚ್ಚು ಸಮಂಜಸವಾಗಿರುತ್ತದೆ. ಯಾವಾಗ ರೋಗಿಗಳು ಸರಿಯಾದ ವಿಶ್ರಾಂತಿ ಮತ್ತು ವೃತ್ತಿಪರ ಶುಶ್ರೂಷೆಯಲ್ಲಿರುತ್ತಾರೋ ಆಗ, ಉಪವಾಸವಿರುವ ರೋಗಿಗೆ ಯಾವುದೇ ಹಾನಿಯಾಗದು.
ನಿರಶನವು ನೀರು, ಹಣ್ಣಿನ ರಸಗಳು ಅಥವಾ ಹಸಿ ತರಕಾರಿಯ ರಸಗಳ ಜೊತೆಗೂ ಇರಬಹುದು. ಅತ್ಯಂತ ಉತ್ತಮವಾದ, ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ವಿಧಾನವೆಂದರೆ ಲಿಂಬೆ ರಸದೊಂದಿಗಿನ ನಿರಶನ. ಉಪವಾಸ ಮಾಡುವಾಗ, ದೇಹವು ತನ್ನಲ್ಲಿ ಸಂಗ್ರಹವಾಗಿರುವ ಅಗಾಧ ಪ್ರಮಾಣದ ತ್ಯಾಜ್ಯವನ್ನು ದಹಿಸಿ ವಿಸರ್ಜಿಸುತ್ತದೆ. ಕ್ಷಾರೀಯ ಹಣ್ಣುಗಳ ರಸಗಳನ್ನು ಸೇವಿಸುವುದರ ಮೂಲಕ ನಾವು ಈ ಶುದ್ಧೀಕರಣದ ಪ್ರಕ್ರಿಯೆಯಲ್ಲಿ ನೆರವಾಗಬಹುದು. ಹಣ್ಣಿನ ರಸಗಳಲ್ಲಿರುವ ಸಕ್ಕರೆಗಳು ಹೃದಯವನ್ನು ಸಬಲಗೊಳಿಸುವುದರಿಂದ ಹಣ್ಣಿನ ರಸ ಸೇವನೆಯೊಂದಿಗೆ ಉಪವಾಸವು ಅತ್ಯಂತ ಉತ್ತಮ ವಿಧವಾದ ಉಪವಾಸವಾಗಿದೆ. ಎಲ್ಲಾ ಹಣ್ಣಿನ ರಸಗಳೂ ಸೇವಿಸುವ ಮೊದಲು ತಾಜಾ ಹಣ್ಣಿನಿಂದಲೇ ತಯಾರಿಸಿರಬೇಕು. ಡಬ್ಬಗಳಲ್ಲಿ ದಾಸ್ತಾನು ಮಾಡಿರಿಸಿದ ಅಥವಾ ಶೈತ್ಯೀಕರಸಿದ ಹಣ್ಣಿನ ರಸವನ್ನು ಸೇವಿಸಬಾರದು. ಎಲ್ಲಾ ರೀತಿಯ ಉಪವಾಸ ಆರಂಭಿಸುವ ಮೊದಲೇ ತೆಗೆದುಕೊಳ್ಳಬೇಕಾದ ಒಂದು ಎಚ್ಚರಿಕೆಯ ಹೆಜ್ಜೆಯೆಂದರೆ, ಕರುಳನ್ನು ಸಂಪೂರ್ಣವಾಗಿ ಖಾಲಿಮಾಡಿಕೊಳ್ಳುವುದು. ಇದು ಎನಿಮಾ ಕೊಟ್ಟು ಮಲವಿಸರ್ಜನೆಯನ್ನು ಸುಗಮಗೊಳಿಸುವುದರ ಮೂಲಕ ಸಾಧ್ಯವಾಗುತ್ತದೆ. ಇದರಿಂದ ರೋಗಿಯ ದೇಹದಲ್ಲಿ ಉಳಿದ ಕಲ್ಮಷಗಳು ಕೊಳೆತು, ಅಥವಾ ವಾಯುವಿನಿಂದ ರೋಗಿಯು ಇರುಸುಮುರುಸನ್ನು ಅನುಭವಿಸಬೇಕಾಗಿ ಬರುವುದಿಲ್ಲ. ಉಪವಾಸದ ಅವಧಿಯಲ್ಲಿ ಪ್ರತಿ ಎರಡನೆಯ ದಿನ ಎನಿಮಾವನ್ನು ಬಳಕೆ ಮಾಡಬೇಕು. ಒಟ್ಟು ದ್ರವದ ಸೇವನೆಯು ಆರರಿಂದ ಎಂಟು ಗ್ಲಾಸುಗಳಷ್ಟಿರಬೇಕು. ಉಪವಾಸದ ಸಮಯದಲ್ಲಿ, ದೇಹದಲ್ಲಿ ಸಂಗ್ರಹವಾಗಿರುವ ವಿಷಯುಕ್ತ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆ ಮಾಡುವಾಗ, ಹೆಚ್ಚಿನ ಶಕ್ತಿಯು ವ್ಯಯವಾಗುತ್ತದೆ.
ಆದುದರಿಂದ, ಉಪವಾಸದ ಅವಧಿಯಲ್ಲಿ ರೋಗಿಯು ಎಷ್ಟು ಸಾಧ್ಯವೋ ಅಷ್ಟು ದೈಹಿಕ ವಿಶ್ರಾಂತಿ ಮತ್ತು ಮಾನಸಿಕ ನೆಮ್ಮದಿಯನ್ನು ಹೊಂದುವುದು ಅತಿ ಮುಖ್ಯವಾಗಿರುತ್ತದೆ.
ಉಪವಾಸವು ಯಶಸ್ವಿಯಾಗುವುದು ಅದನ್ನು ಹೇಗೆ ಮುರಿಯಲಾಗುತ್ತದೆ
ಅನ್ನುವುದಕ್ಕೆ ಅನುಗುಣವಾಗಿದೆ. ಉಪವಾಸವನ್ನು ಮುರಿಯುವುದರ ಮುಖ್ಯ ನಿಯಮಗಳೆಂದರೆ: ಅತಿಯಾದ ಆಹಾರ ಸೇವನೆ ಸಲ್ಲದು, ನಿಧಾನವಾಗಿ ತಿನ್ನಿ, ಆಹಾರವನ್ನು ಸಂಪೂರ್ಣವಾಗಿ ಅಗಿದು ತಿನ್ನಿ ಹಾಗೂ ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ತಿರುಗಿ ಬರಲು ಹಲವು ದಿನಗಳ ಸಮಯಾವಕಾಶವನ್ನು ತೆಗೆದುಕೊಳ್ಳಿ.
ಇತಿಹಾಸದ ಹೆಚ್ಚಿನ ಸಂಸ್ಕೃತಿಗಳ ಶರೀರ ಶಾಸ್ತ್ರಜ್ಞರು, ಪುರಾತನದಿಂದ ಆಧುನಿಕ ಯುಗದವರೆಗೆ, ಹಲವಾರು ರೋಗಗಳ ಪರಿಹಾರಕ್ಕೆ ಸುದೀರ್ಘಾವಧಿಯ ಉಪವಾಸವನ್ನು ಶಿಫಾರಸು ಮಾಡಿರುತ್ತಾರೆ. ಹಿಂದಿನ ವೀಕ್ಷಣೆಗಳು ವೈಜ್ಞಾನಿಕ ತಳಹದಿ ಇಲ್ಲದ ಅಧ್ಯಯನಗಳಾಗಿದ್ದರೂ ಅಥವಾ ಅರ್ಥೈಕೆಗಳಾಗಿದ್ದರೂ, ಅವು ಚಿಕಿತ್ಸಾತ್ಮಕ ಕ್ರಮವಾಗಿ ಉಪವಾಸದ ಬಳಕೆಯತ್ತ ಬೊಟ್ಟು ಮಾಡಿವೆ. ಹಿಂದಿನ ವೀಕ್ಷಣೆಗಳು ಪ್ರಾಣಿಗಳ ನಡವಳಿಕೆಯ ಆಧಾರದಲ್ಲಿದ್ದರೆ, ಇಂದಿನವುಗಳು ಪ್ರಾಣಿಗಳ ಶರೀರ ಶಾಸ್ತ್ರದ ಮೇಲೆ ಆಧರಿತವಾಗಿವೆ. ಒಬ್ಬ ವ್ಯಕ್ತಿಯ ಆರೋಗ್ಯವನ್ನು ಉತ್ತೇಜಿಸುವಲ್ಲಿ ಉಪವಾಸವನ್ನು ಎಷ್ಟರ ಮಟ್ಟಿಗೆ ಫಲಕಾರಿಯಾಗಿ ಬಳಸಬಹುದು ಎನ್ನುವುದನ್ನು ಈ ಲೇಖನದಲ್ಲಿ ಶಾರೀರಿಕ ಮತ್ತು ಮಾನಸಿಕ ಲಾಭಗಳನ್ನು ವಿವರಿಸುವ ಸಾಹಿತ್ಯಗಳನ್ನು ಉಲ್ಲೇಖಿಸುವುದರ ಮೂಲಕ ತಿಳಿಯಪಡಿಸಲು ಪ್ರಯತ್ನಿಸುತ್ತೇವೆ.
ಉಪವಾಸದಿಂದುಂಟಾಗುವ ಶಾರೀರಿಕ ಪರಿಣಾಮಗಳಲ್ಲಿ ಅತಿ ಮುಖ್ಯವಾದುವುಗಳೆಂದರೆ, (ಕ್ಯಾಲೊರಿಗಳ ನಿರ್ಬಂಧಿಸುವಿಕೆ ಮತ್ತು ಬಿಟ್ಟು ಬಿಟ್ಟು ನಡೆಸುವ ಉಪವಾಸ) ಇವುಗಳು: ಇನ್ಸುಲಿನ್ ಸೂಕ್ಷ್ಮತೆ (ಸೆನ್ಸಿಟಿವಿಟಿ)ಯಲ್ಲಿ ಹೆಚ್ಚಳ, ಇದು ಪ್ಲಾಸ್ಮಾದ ಗ್ಲೂಕೋಸ್ ಮಟ್ಟವನ್ನು ಮತ್ತು ಇನ್ಸುಲಿನ್ ಸಾಂದ್ರತೆಯನ್ನು ಕುಗ್ಗಿಸಿ ಗ್ಲೂಕೋಸ್-ಸಹಿಷ್ಣುತೆಯನ್ನು ಸುಧಾರಿಸುತ್ತದೆ, ಜೊತೆಗೆ ಪ್ರೋಟೀನ್, ಕೊಬ್ಬು (ಲಿಪಿಡ್) ಮತ್ತು ಡಿ ಎನ್ ಎಗಳಿಗೆ ಆಮ್ಲಜನಕದಿಂದಾಗುವ ಹಾನಿಯು ತಗ್ಗುವುದರ ಮೂಲಕ ನಮಗೆ ತಿಳಿದುಬರುವ, ಆಮ್ಲಜನಕದ ಒತ್ತಡ (ಸ್ಟ್ರೆಸ್) ದ ಮಟ್ಟವನ್ನು ತಗ್ಗಿಸುತ್ತದೆ. ಹಾಗೂ, ವಿವಿಧ ರೀತಿಯ ಒತ್ತಡಗಳಾದ, ಉಷ್ಣ, ಆಮ್ಲಜನಕ ಹಾಗೂ ಚಯಾಪಚಯದ ಒತ್ತಡಗಳಿಗೆ ನಿರೋಧಕತೆ, ಮತ್ತು ರೋಗನಿರೋಧಕ ಕ್ರಿಯಗಳನ್ನು ಹೆಚ್ಚಿಸುತ್ತದೆ.
ಸಮಗ್ರ ಮತ್ತು ಕೋಶೀಯ ಶಾರೀರಿಕ ಕ್ರಿಯೆಗಳು ಕ್ಯಾಲೊರಿ ನಿರ್ಬಂಧಿಸುವಿಕೆ (ಸಿ ಆರ್) ಯಿಂದ ಅಥವಾ ಬಿಟ್ಟು ಬಿಟ್ಟು ನಡೆಸುವ ಉಪವಾಸ ಪ್ರಕ್ರಿಯೆ (ಐ ಎಫ್) ಯಿಂದ ತೀವ್ರವಾಗಿ ಪರಿಣಾಮಕ್ಕೊಳಗಾಗುತ್ತವೆ. ಸಮಗ್ರ ಶರೀರ ಕ್ರಿಯೆಗೆ ಸಂಬಂಧಿಸಿದಂತೆ, ದೇಹದ ಕೊಬ್ಬಿನಾಂಶದಲ್ಲಿ, ಮತ್ತು ಒಟ್ಟು ತೂಕದಲ್ಲಿ ಗಣನೀಯ ಇಳಿತ ಕಂಡುಬರುತ್ತದೆ. ಇದು, ಹೃದಯ- ರಕ್ತನಾಳದ ವ್ಯವಸ್ಥೆಯ ಆರೋಗ್ಯಯುತವಾದ ಸುಧಾರಣೆಯನ್ನು ತರುತ್ತದೆ, ಹಾಗೂ ಮಯೋಕಾರ್ಡಿಯಲ್ ಇನ್ಫ್ರಾಕ್ಷನ್ ನ ಘಟನೆಗಳನ್ನು ಕಡಿಮೆ ಮಾಡುತ್ತದೆ. ಹೃದಯದ ರಕ್ಷಣೆಯ ಜೊತೆಗೆ, ಮಾನವನ ಪೌಷ್ಠಿಕಾಂಶದ ಭಂಡಾರವಾಗಿರುವ ಪಿತ್ತಜನಕಾಂಗದಲ್ಲಿ ಒತ್ತಡಕ್ಕೆ ಹೆಚ್ಚಿನ ಸಹಿಷ್ಣುತಾ ಗುಣವು ಬೆಳೆಯುತ್ತದೆ. ಕೀಟೋನ್ ಕಾಯಗಳಂತಹ ಶಕ್ತಿಯ ಸಂಗ್ರಾಹಕ (ಉದಾಹರಣೆಗೆ, ಬೀಟಾ- ಹೈಡ್ರಾಕ್ಸಿ ಬ್ಯುಟರೇಟ್) ಗಳ ಉಪಸ್ಥಿತಿಯು ಜೀವನದಲ್ಲಿ ಕಾಣಿಸಿಕೊಳ್ಳುವ ಹೆಚ್ಚುವರಿ ಒತ್ತಡಗಳನ್ನು ನಿಭಾಯಿಸುವಲ್ಲಿ ನೆರವಾಗುತ್ತದೆ. ಹೆಚ್ಚುವರಿಯಾಗಿರುವ ಮತ್ತು ದುಷ್ಪರಿಣಾಮ ಬೀರುವ ರಕ್ತದ ಗ್ಲೂಕೋಸ್ ಮಟ್ಟವು, ಇನ್ಸುಲಿನ್ (ಐ ಎನ್ ಎಸ್) ಹಾಗೂ ಗ್ಲೂಕೋಸ್ ಸಹಿಷ್ಣುತೆ ಮತ್ತು ಶಕ್ತಿಯ ಮೂಲವಾಗಿ ಗ್ಲೂಕೋಸಿನ ಬಳಕೆಯ ಮೂಲಕ ತಡೆಯಲ್ಪಡುತ್ತದೆ.
ಮಣ್ಣು ಚಿಕಿತ್ಸೆಯು ಅತ್ಯಂತ ಸರಳ ಹಾಗ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವಾಗಿದೆ. ಇದಕ್ಕಾಗಿ ಬಳಕೆಯಾಗುವ ಮಣ್ಣು ಭೂಮಿಯ ಮೇಲ್ಭಾಗದಿಂದ 3 ಅಥವಾ 4 ಅಡಿ ಆಳದಿಂದ ತೆಗೆದಿರುವ ಸ್ವಚ್ಛವಾದ ಮಣ್ಣಾಗಿರಬೇಕು. ಮಣ್ಣಿನಲ್ಲಿ ಕಲ್ಲು ಅಥವಾ ರಸ ಗೊಬ್ಬರ ಇವೇ ಮೊದಲಾದ ಯಾವುದೇ ವಿಧವಾದ ಕಲುಷಿತ ವಸ್ತುಗಳು ಮಿಶ್ರವಾಗಿರಬಾರದು.
ಮಣ್ಣು ಆರೋಗ್ಯ ಹಾಗೂ ಅನಾರೋಗ್ಯದ ಸ್ಥಿತಿಗಳೆರಡರಲ್ಲೂ ದೇಹದ ಮೇಲೆ ಗುರುತರವಾದ ಪರಿಣಾಮ ಬೀರಬಲ್ಲ ಪ್ರಕೃತಿಯ ಐದು ಅಂಶಗಳಲ್ಲಿ ಒಂದಾಗಿದೆ. ಮಣ್ಣಿನ ಬಳಕೆಯ ಅನುಕೂಲಗಳೆಂದರೆ:
ಬಳಸುವ ಮೊದಲು ಮಣ್ಣನ್ನು ಒಣಗಿಸಿ, ಪುಡಿ ಮಾಡಿ, ಸೋಸಿ ಕಲ್ಲು, ಹುಲ್ಲಿನ ಕಣಗಳನ್ನು ಮತ್ತು ಇತರ ಕಲ್ಮಷಗಳನ್ನು ಪ್ರತ್ಯೇಕಿಸತಕ್ಕದ್ದು.
ತೋಯಿಸಿದ ಮಣ್ಣನ್ನು ತೆಳುವಾದ ಒದ್ದೆ ಮಸ್ಲಿನ್ ಬಟ್ಟೆಯಲ್ಲಿ ಹರಡಿ, ರೋಗಿಯ ಉದರದ ಗಾತ್ರಕ್ಕೆ ಸರಿಯಾಗಿ ಚಪ್ಪಟೆಯಾದ ಇಟ್ಟಿಗೆಯಂತೆ ಮಾಡಿ ಲೇಪಿಸಿ. ಈ ಮಣ್ಣಿನ ಪ್ಯಾಕಿನ ಲೇಪನವನ್ನು 20 ರಿಂದ 30 ನಿಮಿಷ ಹಾಗೆಯೇ ಬಿಡಿ.ಮಣ್ಣಿನ ಪ್ಯಾಕಿನ ಮೇಲೆ ಹಾಗೂ ಚಳಿಯ ಹವಾಮಾನದಲ್ಲಿ ಲೇಪಿಸುವಾಗ, ದೇಹದ ಮೇಲೆ ಕಂಬಳಿಯನ್ನು ಹೊದೆಯಿಸಿ.
ಉದರ ಭಾಗಕ್ಕೆ ಲೇಪಸಿದಾಗ, ಎಲ್ಲ ರೀತಿಯ ಅಜೀರ್ಣವನ್ನೂ ಶಮನ ಮಾಡುತ್ತದೆ. ಅದು ಕರುಳಿನ ಉಷ್ಣವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದ್ದು, ಕ್ರಮಾಕುಂಚನ (ಪೆರಿಸ್ಟಾಲ್ಸಿಸ್ )ವನ್ನು ಉತ್ತೇಜಿಸುತ್ತದೆ.
ತೋಯಿಸಿದ ಮಣ್ಣನ್ನು ಮುಖದ ಮೇಲೆ ಲೇಪಿಸಿ 30 ನಿಮಿಷಗಳ ಕಾಲ ಒಣಗಲು ಬಿಡಲಾಗುತ್ತದೆ. ಇದು ಚರ್ಮದ ಕಾಂತಿಯನ್ನು ಸುಧಾರಿಸಲು ನೆರವಾಗುತ್ತದೆ. ಜೊತೆಗೆ, ಮುದ್ದಣಿಗಳು ಮತ್ತು ಚರ್ಮದ ರಂಧ್ರಗಳನ್ನು ತೆರೆದು, ತನ್ಮೂಲಕ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ. ಕಣ್ಣಿನ ಸುತ್ತಲಿನ ಕಪ್ಪು ವೃತ್ತವನ್ನು ತೊಡೆದುಹಾಕಲು ನೆರವಾಗುತ್ತದೆ. 30 ನಿಮಿಷಗಳ ನಂತರ, ತಣ್ಣೀರಿನಲ್ಲಿ ಚೆನ್ನಾಗಿ ಮುಖ ತೊಳೆದುಕೊಳ್ಳಬೇಕು.
ರೋಗಿಗೆ ಮಲಗಿದ ಅಥವಾ ಕುಳಿತ ಭಂಗಿಗಳಲ್ಲಿ ಮಣ್ಣನ್ನು ಲೇಪಿಸಬಹುದು. ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಮತ್ತು ಚರ್ಮದ ಅಂಗಾಂಶಗಳನ್ನು ಸಶಕ್ತಗೊಳಿಸಿ, ಚರ್ಮದ ಸ್ಥಿತಿಯನ್ನು ಸುಧಾರಿಸುತ್ತದೆ. ಸ್ನಾನದ ಸಮಯದಲ್ಲಿ ಶೀತವಾಗದಂತೆ ಎಚ್ಚರಿಕೆಯಿರಬೇಕು. ನಂತರ, ಸಂಪೂರ್ಣವಾಗಿ ತಣ್ಣೀರಿನ ಶಕ್ತಿಯುತವಾದ ಸಿಂಪಡನೆಯಿಂದ ರೋಗಿಯ ಮೈತೊಳೆಯಬೇಕು. ರೋಗಿಗೆ ಚಳಿಯಾಗುತ್ತಿದೆಯೆಂದಾದಲ್ಲಿ ಬೆಚ್ಚಗಿನ ನೀರನ್ನು ಬಳಸಬೇಕು. ನಂತರ ರೋಗಿಯ ಮೈ ಒರೆಸಿ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಿಸಿ. ಮಣ್ಣಿನ ಸ್ನಾನದ ಅವಧಿ 45 ರಿಂದ 60 ನಿಮಿಷಗಳು.
ಜಲ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಅಂಗವಾಗಿದೆ. ಇದು, ಹಲವು ರೀತಿಯ ಅನಾರೋಗ್ಯವನ್ನು ನೀರಿನ ವಿವಿಧ ರೂಪಗಳನ್ನು ಬಳಸಿ ಶಮನ ಮಾಡುವ ವಿಧವಾಗಿದೆ. ಇದು ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಒಂದು ಪದ್ಧತಿ. ಜಲೋಶ್ಣೀಯ ಚಿಕಿತ್ಸೆಯು ಇದರ ಜೊತೆಗೆ, ತಂಪು ಅಥವಾ ಬಿಸಿ ನೀರಿನ ಸ್ನಾನದಲ್ಲಿರುವಂತೆ ತನ್ನ ತಾಪಮಾನದ ಪರಿಣಾಮವನ್ನು, ತಂಪು ಅಥವಾ ಬಿಸಿ ನೀರಿನ ಸ್ನಾನ, ಆವಿ ಸ್ನಾನ (ಸೌನಾ), ಹೊದಿಕೆ/ಆವರಣ ಇತ್ಯಾದಿಗಳನ್ನು, ಹಾಗೂ ತನ್ನ ಎಲ್ಲಾ ಅಂದರೆ, ಘನ, ದ್ರವ, ಆವಿ, ಮಂಜುಗಡ್ಡೆ, ಮತ್ತು ಹಬೆಯ ರೂಪಗಳಲ್ಲಿ, ಆಂತರಕವಾಗಿ ಹಾಗೂ ಬಾಹ್ಯದಲ್ಲಿ ಬಳಸಿಕೊಳ್ಳುತ್ತದೆ. ನೀರು ನಿಸ್ಸಂದೇಹವಾಗಿ ರೋಗಗಳ ಅತ್ಯಂತ ಪುರಾತನ ಶಮನಕಾರಿಯಾಗಿದೆ. ಈ ಮಹೋನ್ನತ ಶಮನಕಾರಿಯು ಈಗ ಕ್ರಮಗತಗೊಳಿಸಲ್ಪಟ್ಟು, ಒಂದು ವಿಜ್ಞಾನವಾಗಿ ಮಾರ್ಪಟ್ಟಿದೆ. ಜಲೀಯ ಲೇಪನಗಳು, ಸಾಮಾನ್ಯವಾಗಿ, ವಿಭಿನ್ನ ಉಷ್ಣತೆಗಳಲ್ಲಿ ನೀಡಲಾಗುತ್ತದೆ. ಈ ಉಷ್ಣತೆಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:
ಈ ವಿಧಾನಗಳ ಯಶಸ್ವೀ ಬಳಕೆಯಾಗಬೇಕಾದರೆ ನಿರ್ದಿಷ್ಟವಾದ ಆಂತರಿಕ ಚೈತನ್ಯವಿರುವುದೂ ಅಗತ್ಯವಿದೆ. ಆ ಶಕ್ತಿಯು ತುಂಬಾ ಕೆಳಮಟ್ಟದಲ್ಲಿದೆಯೆಂದಾದರೆ, ಇವು ಪ್ರಯೋಜನಕಾರಿಯಾಗುವುದಿಲ್ಲ. ತೀವ್ರ ಪರಿಸ್ಥಿತಿಯಿರುವಲ್ಲಿ, ಚೈತನ್ಯ ತುಂಬಿರುವಲ್ಲಿ, ಚೈತನ್ಯಯುತವಾದ ಪ್ರತಿಕ್ರಿಯೆಯಿರುವುದು ಖಂಡಿತ. ದೀರ್ಘಾವಧಿಯ ಸಂದರ್ಭಗಳಲ್ಲಿ, ಚೈತನ್ಯವು ತುಂಬಾ ಕೆಳಮಟ್ಟದಲ್ಲಿರುವಾಗ, ಈ ಸ್ನಾನ ಅಷ್ಟು ಪರಿಣಾಮಕಾರಿಯಾಗುವುದಿಲ್ಲ. ಆದರೆ, ಇಂತಹ ಸಂದರ್ಭಗಳಲ್ಲಿ, ಪ್ಯಾಕ್ ಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಯಾಕೆಂದರೆ ಅವುಗಳು ತಮ್ಮ ಅನ್ವಯಿಕೆಯಲ್ಲಿ ಹೆಚ್ಚು ಮೃದುವಾಗಿರುತ್ತವೆ.
ನೀರನ್ನು ಹಲವು ರೂಪದಲ್ಲಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಹಲವು ರೀತಿಯ ಚಿಕಿತ್ಸೆಗಳು ಇಲ್ಲಿವೆ:
ಜಲಚಿಕಿತ್ಸೆಯಲ್ಲಿ ಒಂದು ವಿಧಾನವೆಂದರೆ ದೊಡ್ಡ ಕರುಳಿನ ಚಿಕಿತ್ಸೆ
ದೊಡ್ಡಕರುಳಿನ ಜಲಚಿಕಿತ್ಸೆ
ಇದು ದೊಡ್ಡ ಕರುಳನ್ನು ಶುದ್ಧೀಕರಿಸಿ, ತೊಳೆದುಹಾಕುವ ಒಂದು ಪ್ರಕ್ರಿಯೆಯಾಗಿದೆ. ಈ ಚಿಕಿತ್ಸಾ ವಿಧಾನವು ಎನಿಮಾಗೆ ಸಮವಾಗಿದ್ದು, ಹೆಚ್ಚು ಸಂಪೂರ್ಣವಾಗಿದೆ. ಅದು ಸ್ವಚ್ಛ, ಶೋಧಿಸಿದ ನೀರಿನಲ್ಲಿ ಮೃದುವಾದ ಒತ್ತಡದೊಂದಿಗೆ (ಯಾತನೆಯಿಲ್ಲದೆ) ದೊಡ್ಡ ಕರುಳಿನಲ್ಲಿ ನಿಂತಿರುವ ಮಲವನ್ನು ತೊಳೆದುಹಾಕುವುದಾಗಿದೆ. ಎಷ್ಟ ಸಾರಿ ಇದನ್ನು ಮಾಡಬೇಕೆನ್ನುವುದು ವ್ಯಕ್ತಿಯನ್ನು ಹೊಂದಿಕೊಂಡಿದೆ. ಹೆಚ್ಚಿನ ಜನರಿಗೆ ದೊಡ್ಡಕರುಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಇಂತಹ 3-6 ಚಿಕಿತ್ಸೆಗಳ ಅಗತ್ಯವಿರುತ್ತದೆ.
ಜಲಚಿಕಿತ್ಸೆಯ ಪ್ರಯೋಜನಗಳು ಹಾಗೂ ಶಾರೀರಿಕ ಪರಿಣಾಮಗಳು
ಜಲಚಿಕಿತ್ಸೆಯ ಶಮನಕಾರೀ ಹಾಗೂ ಗುಣಮುಖವಾಗಿಸುವ ಗುಣಗಳು ಅದರ ಯಾಂತ್ರಿಕ ಹಾಗೂ ಅದರ ಶಾಖದ ಪರಿಣಾಮದ ಮೇಲೆ ಅವಲಂಬಿತವಾಗಿವೆ. ಅದು ಬಿಸಿ ಹಾಗೂ ತಂಪು ಉತ್ತೇಜಕಗಳಿಗೆ ದೇಹದ ಪ್ರತಿಕ್ರಿಯೆಯನ್ನು ಬಳಸಿಕೊಳ್ಳುತ್ತದೆ, ಜೊತೆಗೆ ಸುದೀರ್ಘವಾದ ಶಾಖದ ಅನ್ವಯಕ್ಕೆ, ನೀರಿನ ಒತ್ತಡಕ್ಕೆ, ಹಾಗೂ ಅದು ನೀಡುವ ಅನುಭವಗಳನ್ನು ಬಳಸಿಕೊಳ್ಳುತ್ತದೆ. ಚರ್ಮದ ಮಟ್ಟದಲ್ಲಿ ಅನುಭವಿಸಿದ ಸಂದೇಶಗಳನ್ನು ನರಗಳು ದೇಹದ ಆಳಕ್ಕೆ ಒಯ್ಯುತ್ತವೆ. ಹಾಗೂ ಅಲ್ಲಿ, ಒತ್ತಡದ ಹಾರ್ಮೋನುಗಳ ಉತ್ಪಾದನೆ, ರಕ್ತ ಪರಿಚಲನೆಯಲ್ಲಿ ಹಾಗೂ ಜೀರ್ಣಕ್ರಿಯೆಯಲ್ಲಿ ಚೈತನ್ಯ ತುಂಬುವುದು, ರಕ್ತ ಪ್ರವಾಹವನ್ನು ಉತ್ತೇಜಿಸುವುದು, ಮತ್ತು ನೋವಿಗೆ ತುತ್ತಾಗುವುದನ್ನು ತಗ್ಗಿಸುವ ಕೆಲಸಗಳನ್ನು ಮಾಡುತ್ತವೆ. ಸಾಮಾನ್ಯವಾಗಿ ಶಾಖವು ದೇಹದ ಆಂತರಿಕ ಅಂಗಗಳ ಕಾರ್ಯಗಳನ್ನು ನಿಧಾನಿಸವದರ ಮೂಲಕ ದೇಹಕ್ಕೆ ಸಮಾಧಾನ, ವಿರಾಮವನ್ನು ನೀಡುತ್ತದೆ. ಶೀತವು ಇದಕ್ಕೆ ತದ್ವಿರುದ್ಧವಾಗಿ, ಉತ್ತೇಜನ ಹಾಗೂ ಚೈತನ್ಯ ನೀಡಿ ಆಂತರಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.
ಅದರ ಯಾಂತ್ರಿಕ ಪರಿಣಾಮವು ಸ್ನಾನದ ಸಮಯದಲ್ಲಿ ಉಂಟಾಗುತ್ತದೆ. ಸ್ನಾನದ ಸಮಯದಲ್ಲಿ ನೀರಿನಲ್ಲಿ,ಕೊಳದಲ್ಲಿ, ವರ್ಲ್ ಪೂಲಿನಲ್ಲಿ, ಮುಳುಗುವಾಗ, ದೇಹದ ತೂಕವು 50% ರಿಂದ 90% ದಷ್ಟು ಕಡಿಮೆಯಾಗುತ್ತದೆ. ಹಗುರವಾದಂತನಿಸುತ್ತದೆ. ದೇಹವು ಗುರುತ್ವ ಶಕ್ತಿಯ ಎಳೆತದಿಂದ ಮುಕ್ತವಾಗುತ್ತದೆ. ನೀರಿಗೆ ದ್ರವಸ್ಥಿತಿ ಒತ್ತಡದ ಪರಿಣಾಮವೂ ಇದೆ. ನೀರು ದೇಹವನ್ನು ಮೃದುವಾಗಿ ನೀವಿದಾಗ (ನಾದಿದಾಗ) ಮಾಲೀಸು ಮಾಡಿದ ಅನುಭವವಾಗುತ್ತದೆ. ಚಲನೆಯಲ್ಲಿರುವ ನೀರು, ತ್ವಚೆಯ ಸ್ಪರ್ಶ ಸ್ವೀಕರಿಸುವ ಸ್ಥಾನಗಳನ್ನು ಉತ್ತೇಜಿಸುತ್ತದೆ, ಅದು ತನ್ಮೂಲಕ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಬಿಗಿಯಾದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
ಮಾಲೀಸು (ಅಂಗಮರ್ದನ) ಚಿಕಿತ್ಸೆ
ಅಂಗಮರ್ದನವು ಉತ್ತಮ ನಿಶ್ಚಲ ವ್ಯಾಯಾಮವಾಗಿದೆ. ಈ ಪದವು ಗ್ರೀಕ್ ಪದವಾದ ’ಮಾಸಿಯೆರ್’ ಎನ್ನುವ ಪದದಿಂದ ಹುಟ್ಟಿಕೊಂಡಿದೆ. ಮಾಸಿಯೆರ್ ಅಂದರೆ ನಾದುವುದು, ಫ್ರೆಂಚ್ ಪದ ’ನಾದುವುದರ ಘರ್ಷಣೆ’ , ಅಥವಾ ಅರಾಬಿಕ್ ಪದವಾದ ’ಮಾಸ್ಸಾ’ ಅಂದರೆ, ಸ್ಪರ್ಷಿಸು, ಅನುಭವಿಸು ಅಥವಾ ಹಿಡಿ ಎಂದರ್ಥ. ಇಲ್ಲವೇ ಲ್ಯಾಟಿನ್ ಭಾಷೆಯ ಮಸಾ ಅಂದರೆ, ರಾಶಿ ಅಥವಾ ಹಿಟ್ಟು ಎಂದು ಅರ್ಥ. ಅಂಗಮರ್ದನವು ಮೃದು ಅಂಗಾಂಶಗಳನ್ನು ದೈಹಿಕ (ಅಂಗರಚನೆ), ಕ್ರಿಯಾತ್ಮಕ (ಶಾರೀರಿಕ), ಹಾಗೂ ಇನ್ನು ಕೆಲವು ಸಂದರ್ಭಗಳಲ್ಲಿ ಮಾನಸಿಕ ಗುರಿ ಮತ್ತು ಉದ್ದೇಶಗಳೊಂದಿಗೆ ನಮಗೆ ಬೇಕಾದಂತೆ ತಿರುಗಿಸುವುದು. ನಗ್ನ ಶರೀರದ ಮೇಲೆ ಸರಿಯಾಗಿ ಅಂಗಮರ್ದನ ಮಾಡಿದಲ್ಲಿ, ಅದು ಅತ್ಯಂತ ಉತ್ತೇಜಕ ಹಾಗೂ ಚೈತನ್ಯ ತುಂಬುವ ಪ್ರಕ್ರಿಯೆಯಾಗುತ್ತದೆ.
ಅಂಗಮರ್ದನವು ಪ್ರಕೃತಿ ಚಿಕಿತ್ಸೆಯ ಒಂದು ವಿಧಾನವಾಗಿದ್ದು, ಉತ್ತಮ ಆರೋಗ್ಯದ ನಿರ್ವಹಣೆಯಲ್ಲಿ ಪಾತ್ರವಹಿಸುತ್ತದೆ. ಮಾಲೀಸು ಮಾಡುವುದೆಂದರೆ, ದೇಹದ ಮೇಲೆ ಮತ್ತು ದೇಹವನ್ನು ಒತ್ತಡದ ರಚನಾತ್ಮಕವಾದ, ಬಳಕೆ ಮಾಡುವುದು. – ರಚನೆಯುಳ್ಳ ರಚನೆಯಿಲ್ಲದ, ಸ್ಥಿರ, ಅಥವಾ ಚಲಿಸುತ್ತಿರುವ – ಒತ್ತಡ, ಚಲನೆ ಅಥವಾ ಕಂಪನ, ದೈಹಿಕವಾಗಿ ಅಥವಾ ಯಾಂತ್ರಿಕ ಸಲಕರಣೆಗಳಿಂದ ಮಾಡುವುದಾಗಿದೆ. ಗುರಿ ಅಂಗಾಂಶಗಳು ಸ್ನಾಯುಗಳು, ಅಸ್ಥಿಬಂಧಗಳು, ಚರ್ಮ, ಸಂದುಗಳು, ಇತರ ಸಂಯೋಜಕ ಅಂಗಾಂಶಗಳು, ಮತ್ತು ದುಗ್ಧರಸ ನಾಳಗಳನ್ನು ಒಳಗೊಂಡಿರಬಹುದು. ಹಸ್ತ, ಬೆರಳು, ಮೊಣಕೈ, ಮಂಡಿ, ಮುಂದೋಳು, ಮತ್ತು ಪಾದಗಳ ಮೂಲಕ ಮಾಲೀಸು ಮಾಡಬಹುದಾಗಿದೆ. ಸುಮಾರು 80 ವಿಭಿನ್ನ ವಿಧದ ಮಾಲೀಸಿನ ವಿಧಾನಗಳಿವೆ. ಅದು ರಕ್ತ ಪರಿಚಲನೆಯನ್ನು ಸುಧಾರಿಸುವ ಮತ್ತು ದೇಹದ ಅಂಗಾಂಗಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಚಳಿಗಾಲದಲ್ಲಿ, ಮಾಲೀಸು ಮಾಡಿದ ನಂತರ ಸೂರ್ಯ ಸ್ನಾನವು ಆರೋಗ್ಯ ರಕ್ಷಣೆಯ ಹಾಗೂ ಶಕ್ತಿಯನ್ನು ಸಂರಕ್ಷಿಸುವ ಅತ್ಯಂತ ಚಿರಪರಿಚಿತ ವಿಧಾನವಾಗಿದೆ. ಅದು ಮಾಲೀಸು ಮತ್ತು ಸೂರ್ಯ ಕಿರಣಗಳ ದ್ವಿಮುಖ ಲಾಭವನ್ನು ನೀಡುತ್ತದೆ. ರೋಗಗ್ರಸ್ತ ಸ್ಥಿತಿಯಲ್ಲಿ, ಅಂಗಮರ್ಧನದ ನಿರ್ದಿಷ್ಟ ತಂತ್ರಗಳನ್ನು ಉಪಯೋಗಿಸಿ, ಚಿಕಿತ್ಸಾತ್ಮಕ ಪರಿಣಾಮವನ್ನು ಪಡೆದುಕೊಳ್ಳಬಹುದಾಗಿದೆ. ವ್ಯಾಯಾಮ ಮಾಡಲಸಾಧ್ಯವಾದವರಿಗೆ ಅಂಗಮರ್ದನವು ವ್ಯಾಯಾಮದ ಲಾಭವನ್ನು ಪಡೆಯುವ ಒಂದು ಪರ್ಯಾಯ ವಿಧಾನವಾಗಿದೆ. ವ್ಯಾಯಮದ ಪರಿಣಾಮವನ್ನೇ ಅಂಗಮರ್ದನದ ಮೂಲಕ ಪಡೆಯಬಹದಾಗಿದೆ. ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಸುವಾಸನಾಭರಿತ ಎಣ್ಣೆ ಮೊದಲಾದ ಎಣ್ಣೆಗಳು ಚಿಕಿತ್ಸಾತ್ಮಕ ಗುಣಗಳನ್ನು ಹೊಂದಿರುವುದಲ್ಲದೆ, ಅವುಗಳನ್ನು ಅಂಗಮರ್ದನದ ಸಮಯದಲ್ಲಿ ತೈಲ ಲೇಪನವಾಗಿ ಬಳಸುತ್ತಾರೆ.
ಅಂಗಮರ್ದನದಲ್ಲಿ ಏಳು ವಿಧವಾದ ಕುಶಲ ಬಳಕೆಗಳಿವೆ. ಅವುಗಳೆಂದರೆ: ಸ್ಪರ್ಶ, ಎಫ್ಲುಯೆರೇಜ್ (ಸವರುವಿಕೆ), ಘರ್ಷಣೆ (ಉಜ್ಜುವಿಕೆ), ಪೆಟ್ರಿಸಾಜ್ (ತೀಡುವುದು), ಟ್ಯಾಪೋಟ್ ಮೆಂಟ್ (ಸಂಘಾತ) ಕಂಪನ (ಅಲುಗಾಡಿಸುವಿಕೆ ಅಥವಾ ನಡುಗುವಿಕೆ) ಮತ್ತು ಸಂದುಗಳ ಚಲನೆ. ಚಲನೆಗಳು ರೋಗ ಸ್ಥಿತಿಗೆ ಮತ್ತು ಯಾವ ಭಾಗಕ್ಕೆ ಅನ್ವಯಿಸಲಾಗುತ್ತದೆ ಅನ್ನುವುದನ್ನು ಹೊಂದಿಕೊಂಡು ಬದಲಾಗುತ್ತದೆ.
ಹಲವು ಅಸ್ವಸ್ಥೆಯ ಸಂದರ್ಭಗಳಲ್ಲಿ ಬಳಕೆಯಾಗುವ ಇನ್ನೊಂದು ವಿಧವಾದ ಅಂಗಮರ್ದನವೆಂದರೆ ಕಂಪನನ ಮಾಲೀಸು, ಪುಡಿ ಮಾಲೀಸು, ನೀರಿನ ಮಾಲೀಸು, ಒಣ (ಶುಷ್ಕ) ಮಾಲೀಸು. ಬೇವಿನ ಎಲೆಯ ಪುಡಿ, ಗುಲಾಬಿ ದಳಗಳನ್ನೂ ಮಾಲೀಸು ಮಾಡುವಾಗ ತೈಲ ಲೇಪನವಾಗಿ ಬಳಸಲ್ಪಡುತ್ತವೆ.
ಮಾಲೀಸಿನ ಶಾರೀರಿಕ ಪರಿಣಾಮಗಳು
ಅನೈಚ್ಛಿಕ ಪರಿಣಾಮಗಳು (ನರ ವ್ಯೂಹದಿಂದ ಹುಟ್ಟುವ ಪ್ರತಿಕ್ರಿಯೆಗಳು)
ಯಾಂತ್ರಿಕ ಪರಿಣಾಮಗಳು (ದೈಹಿಕವಾಗಿ ಅನ್ವಯ ಮಾಡಿದ ಒತ್ತಡದ ಪರಿಣಾಮವಾಗಿ ಉಂಟಾಗುವ ಪ್ರತಿಕ್ರಿಯೆಗಳು)
ಅಂಗಮರ್ದನದ ಪ್ರಯೋಜನಗಳು
ದೇಹದ ಎಲ್ಲ ಭಾಗಗಳೊಂದಿಗೆ ವ್ಯವಹರಿಸುವ ಸಾಮಾನ್ಯವಾದ ಅಂಗಮರ್ದನವು, ಹಲವು ವಿಧಗಳಲ್ಲಿ ಲಾಭದಾಯಕವಾಗಿದೆ. ಅದು ನರ ವ್ಯವಸ್ತೆಯನ್ನು ಸುಧಾರಿಸುತ್ತದೆ, ಉಸರಾಟದ ಮೇಲೆ ಪ್ರಭಾವ ಬೀರುತ್ತದೆ ಮತ್ತು ವಿವಿಧ ತ್ಯಾಜ್ಯ ವಿಸರ್ಜನಾ ಅಂಗಗಳ, ಅಂದರೆ ಶ್ವಾಸಕೋಶ, ತ್ವಚೆ, ಮೂತ್ರಪಿಂಡ, ಮತ್ತು ಕರುಳುಗಳ ಮೂಲಕ ವಿಷಯುಕ್ತ ವಸ್ತುಗಳು ಮತ್ತು ತ್ಯಾಜ್ಯ ವಸ್ತುಗಳ ವಿಸರ್ಜನೆಯನ್ನು ಚುರುಕುಗೊಳಿಸುತ್ತದೆ. ಜೊತೆಗೆ, ಅದು ರಕ್ತ ಪರಿಚಲನೆಯನ್ನು ಉತ್ತೇಜಿಸಿ, ಚಯಾಪಚಯಕ್ರಿಯೆಗಳನ್ನು ವೃದ್ಧಿಸುತ್ತದೆ. ಮಾಲೀಸು ಮುಖದ ಸುಕ್ಕುಗಳನ್ನು ತೆಗೆದುಹಾಕುಚುದಲ್ಲದೆ, ಕುಳಿಬಿದ್ದ ಕೆನ್ನೆ, ಕತ್ತುಗಳನ್ನು ತುಂಬಲು, ಸೆಟೆತವನ್ನು ಕಡಿಮೆಮಾಡಲು, ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡಲು ಮತ್ತು ನಿಶ್ಚೇಷ್ಟಿತತೆ / ಮರಗಟ್ಟುವಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಸಮಾನ ಆಸಕ್ತಿಯ ವಿಜ್ಞಾನಿಗಳಿಂದ ಮರುಪರಿಶೀಲನೆಗೊಳಗಾಗುವ ವೈದ್ಯಕೀಯ ಸಂಶೋಧನೆಗಳು ಮಾಲೀಸಿನ ಲಾಭಗಳು ನೋವು ನಿವಾರಣೆ, ಆತಂಕ, ಮತ್ತು ಖಿನ್ನತೆಗಳು ಕಡಿಮೆಯಾಗುವುದು, ಮತ್ತು ತಾತ್ಕಾಲಿಕವಾಗಿ ರಕ್ತದೊತ್ತಡ, ಹೃದಯ ಬಡಿತ, ಮತ್ತು ಆತಂಕ ಸ್ಥಿತಿಗಳು ಕಡಿಮೆಯಾಗುವುದನ್ನು ಒಳಗೊಂಡಿದೆ ಎಂದು ಹೇಳುತ್ತವೆ. ಮಾಲೀಸು ಮಾಡುವುದರಿಂದ ಏನಾಗಬಹುದು ಎನ್ನುವ ತತ್ವಗಳು ನೋಸಿಸೆಪ್ಷನ್ ತಡೆ ( ಗೇಟ್ ಕಂಟ್ರೋಲ್ ತತ್ವ), ಎನ್ಡಾರ್ಫನ್ ಗಳು ಮತ್ತು ಸೆರೊಟೋನಿನ್ ಗಳ ಸ್ರಾವವನ್ನು ಉತ್ತೇಜಿಸುವ ಪಾರಾ ಸಿಂಪಥಟಿಕ್ ನರ ವ್ಯೂಹವನ್ನು ಕ್ರಿಯಾಶೀಲಗೊಳಿಸುವುದು,ಫೈಬ್ರಾಸಿಸ್ ಅಥವ ಕಲೆಗಳ ಅಂಗಾಂಶಗಳ ಬೆಳವಣಿಗೆಯನ್ನು ತಡೆಗಟ್ಟುವುದು, ದುಗ್ಧ ರಸದ ಪ್ರವಾಹವನ್ನು ಹೆಚ್ಚಿಸುವುದು, ನಿದ್ದೆಯನ್ನು ಸುಧಾರಿಸುವುದು. ಆದರೆ, ಇಂತಹ ಪರಿಣಾಮಗಳು ಇನ್ನೂ ಹೆಚ್ಚಾದ ಚಿಕಿತ್ಸಾ ಅಧ್ಯಯನಗಳ ಮೂಲಕ ಸಾಧಿಸಲ್ಪಡಬೇಕಿವೆ.
ಆಕ್ಯು ಪ್ರೆಶರ್
ಆಕ್ಯು ಪ್ರೆಶರ್ ಎನ್ನುವುದು ಚಿಕಿತ್ಸೆಯ ಒಂದು ಪುರಾತನ ವಿಧಾನವಾಗಿದ್ದು, ಅದು ಬೆರಳು ಅಥವಾ ಯಾವುದೇ ಮೊಂಡಾದ ವಸ್ತುವನ್ನು ಬಳಸಿ ಆಕ್ಯು ಪಾಯಿಂಟ್ (ಶಕ್ತಿ ಸಂಗ್ರಹಿತ ಬಿಂದುಗಳು) ಎಂದು ಕರೆಯಲ್ಪಡುವ ದೇಹದ ಮೇಲ್ಮೈ ನ ಬಿಂದುಗಳನ್ನು ಲಯಬದ್ಧವಾಗಿ ಒತ್ತುವುದಾಗಿದೆ. ಇದರಿಂದ ದೇಹದಲ್ಲಿನ ಸ್ವಾಭಾವಿಕವಾಗಿ ಗುಣಮುಖವಾಗುವ ಶಕ್ತಿಯು ಉತ್ತೇಜನೆಗೊಳಪಡುತ್ತದೆ. ಈ ಬಿಂದುಗಳನ್ನು ಒತ್ತಿದಾಗ, ಅವುಗಳು ಸ್ನಾಯುವಿನ ಒತ್ತಡವನ್ನು ಕಡಿಮೆಮಾಡಿ, ರಕ್ತ ಪರಚಲನೆಯನ್ನು ಉತ್ತೇಜಿಸುತ್ತವೆ ಮತ್ತು ದೇಹದ ಅಂತಃಶಕ್ತಿಯು ಗುಣಮುಖವಾಗುವ ಪ್ರಕ್ರಿಯೆಯಲ್ಲಿ ನೆರವಾಗುತ್ತವೆ.
ಆಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ) ಮತ್ತು ಆಕ್ಯುಪ್ರೆಶರ್ ವಿಧಾನಗಳೆರಡೂ ಒಂದೇ ಬಿಂದುವಿನ ಮೇಲೆ ಕೆಲಸ ಮಾಡುತ್ತವೆ, ಆಕ್ಯು ಪ್ರೆಶರ್ ಬೆರಳು ಅಥವಾ ಇನ್ನಾವುದೇ ಮೊಂಡಾದ ವಸ್ತುವಿನ ಮೃದುವಾದ ಒತ್ತಡವನ್ನು ಬಳಸಿದರೆ, ಸೂಜಿಚಿಕಿತ್ಸೆಯಲ್ಲಿ ಮೊನಚಾದ ಸೂಜಿಯನ್ನು ಬಳಸಲಾಗುತ್ತದೆ. ಆಕ್ಯುಪ್ರೆಶರ್ ಸುಮಾರು 5,000 ವರ್ಷಗಳ ಮೊದಲೇ ಬಳಕೆಯಲ್ಲಿತ್ತು. ಈ ಸಂಪೂರ್ಣವಾದ ಚಿಕಿತ್ಸಾ ಪದ್ಧತಿಯು ಸುಮಾರು 3,000 ಕ್ಕಿಂತಲೂ ಹೆಚ್ಚಿನ ವ್ಯಾಧಿಗಳ ಚಿಕಿತ್ಸೆಯಲ್ಲಿ ಬಳಕೆಯಾಗಿರುವ ದಾಖಲೆಗಳಿವೆ. ಈಗ ಆಕ್ಯು ಬಿಂದುಗಳ ಮೂಲಕ ಟ್ರಾನ್ಸ್ ಕ್ಯುಟೇನಿಯಸ್ ಇಲೆಕ್ಟ್ರಿಕ್ ನರ್ವಸ್ ಸ್ಟಿಮ್ಯುಲೇಶನ್ (ಅಂದರೆ TENS) ಮತ್ತು ಲೇಸರ್ ಹಾಗೂ ಎಲ್ ಇ ಡಿ ಡಯೋಡಿನಿಂದ ಲೇಸರ್ ಬೆಳಕನ್ನು ಹಾಯಿಸಿದರೆ, ನಿರ್ದಿಷ್ಟ ಹಾಗೂ ಹೆಚ್ಚು ಬಾಳುವ ಪರಿಣಾಮಗಳು ಉಂಟಾಗುತ್ತವೆ ಎಂಬುದು ಖಾತರಿಯಾಗಿವೆ.
ಈ ಎರಡೂ ತತ್ವಗಳೂ ಒಂದೇ ನಿಯಮದ ಮೇಲೆ ಆಧಾರಿತವಾಗಿವೆ. ಸೂಜಿಯ ಬದಲು, ಒತ್ತಡ, ಇಲೆಕ್ಟ್ರಿಕ್ (ವಿದ್ಯುತ್) ಉತ್ತೇಜನ, ಅಥವಾ ಲೇಸರ್ ಬೆಳಕನ್ನು ಬಳಸುವುದರ ಮೂಲಕ, ದೇಹದುದ್ದಕ್ಕೂ ನೆಲೆನಿಂತಿರುವ, ಮೆರಿಡಿಯನ್ ಎಂದು ಕರೆಯಲ್ಪಡುವ, ಶಕ್ತಿಯ ರೇಖೆಯ ಮೇಲೆ ಇರುವ ನಿರ್ದಿಷ್ಟ ಅನೈಚ್ಛಿಕ ಬಿಂದುಗಳ ಉತ್ತೇಜನೆಗೆ ಕಾರಣವಾಗುತ್ತವೆ. ದೇಹದಲ್ಲಿ ಇಂತಹ 14 ಮುಖ್ಯ ಮೆರಿಡಿಯನ್ನುಗಳಿವೆ. ಇವುಗಳಲ್ಲಿ ಪ್ರತಿಯೊಂದೂ ಒಂದೊಂದು ನಿರ್ದಿಷ್ಟ ಅಂಗಾಂಗವನ್ನು ಪ್ರತಿನಿಧಿಸುತ್ತವೆ. ದೇಹದ ಚೈತನ್ಯ ಶಕ್ತಿಯು ಈ ಮೆರಿಡಿಯನ್ನುಗಳ ಮೂಲಕ ಸಂತುಲಿತ ರೀತಿಯಲ್ಲಿ, ಸಮಪ್ರಮಾಣದಲ್ಲಿ ಹರಿಯಲು ಸಾಧ್ಯವಾದರೆ, ಅದರ ಪರಿಣಾಮವೇ ಉತ್ತಮ ಆರೋಗ್ಯ. ನಿಮಗೆ ನೋವು ಅಥವಾ ಅಸೌಖ್ಯದ ಅನುಭವವಾಗುತ್ತಿದೆಯೆಂದಾದರೆ, ದೇಹದೊಳಗಿನ ಈ ಶಕ್ತಿಯ ಹರಿವಿನಲ್ಲಿ ಎಲ್ಲೋ ಸೋರಿಕೆಯಿದೆ ಅಥಾವಾ ತಡೆಯಿದೆ ಎಂದು ಅರ್ಥ.
ಸರಿಯಾದ ಬಿಂದುವನ್ನು ಕಂಡುಹಿಡಿಯಲು, ಆ ಪ್ರದೇಶದಲ್ಲಿ ಮೃದುವಾಗಿ ತಡಕಾಡಿ, ನೋವಿರುವ, ಮೃದುವಾಗಿರುವ, ಸೂಕ್ಷ್ಮ ಪ್ರದೇಶವನ್ನು ಪತ್ತೆಹಚ್ಚಿ. ನಂತರ, ನೋವಾಗುವವರೆಗೆ, ಆ ಬಿಂದುವಿನ ಮೇಲೆ ಒತ್ತಿ. ಆ ಬಿಂದುವಿನ ಮೇಲೆ 5 ಸೆಕುಂಡುಗಳು ಒತ್ತಡ ಹೇರಿ 5 ಸೆಕುಂಡುಗಳು ಬಿಟ್ಟು ಮತ್ತೆ 5 ಸೆಕುಂಡುಗಳು ವೃತ್ತಾಕಾರದ ಚಲನೆಯಲ್ಲಿ ಒತ್ತಡ ಹೇರುವ ಮೂಲಕ, ಪ್ರೇರಣೆ ನೀಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಚಿಕಿತ್ಸಾ ಅವಧಗೆ 1 ನಿಮಿಷದ ಕಾಲವು ಸಾಕಾಗುತ್ತದೆ.
ಆಕ್ಯು ಪ್ರೆಶರ್ ತಲೆನೋವು, ಕಣ್ಣು ನೋವು, ಸೈನಸ್ ಸಮಸ್ಯೆಗಳು, ಕತ್ತು ನೋವು, ಬೆನ್ನು ನೋವು, ಆರ್ಥ್ರೈಟಿಸ್, ಸ್ನಾಯು ಸೆಳೆತ, ಮತ್ತು ಒತ್ತಡದ ಪರಿಣಾಮಗಳು, ಅಲ್ಸರಿನ ಹುಣ್ಣುಗಳ ನೋವು, ಋತುಸ್ರಾವದ ಸಮಯದ ನೋವು, ಕೆಳಬೆನ್ನಿನ ನೋವು, ಮಲಬದ್ಧತೆ, ಅಜೀರ್ಣ, ಆತಂಕ, ನಿದ್ರಾಹೀನತೆಯಲ್ಲಿ ಪರಿಣಾಮಕಾರಿಯಾಗಿದೆ.
ಆರೋಗ್ಯ ರಕ್ಷಣೆ ಹಾಗೂ ಹಾಗೂ ದೇಹದ ಸಮತೋಲನವನ್ನು ಕಾಪಾಡುವಲ್ಲಿ ಆಕ್ಯುಪ್ರೆಶರ್ ಅನುಕೂಲಕರವಾಗಿದೆ. ಆಕ್ಯುಪ್ರೆಶರಿನ ಶಮನಕಾರಿ ಸ್ಪರ್ಶವು ಒತ್ತಡವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಮತ್ತು ದೇಹವು ವಿಶ್ರಾಂತ ಸ್ಥಿತಿಗೆ ತಲಪಲು ನೆರವಾಗುತ್ತದೆ. ಒತ್ತಡದಿಂದ ಮುಕ್ತಿ ದೊರಕಿಸುವ ಮೂಲಕ ರೋಗದ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಪ್ರೇರೇಪಿಸುತ್ತದೆ.
ಸೂಜಿ ಚಿಕಿತ್ಸೆ
ಸೂಜಿ ಚಿಕಿತ್ಸೆಯೆಂದರೆ, ಚಿಕಿತ್ಸಾ ಉದ್ದೇಶಗಳಿಗಾಗಿ ಅಥವಾ ನೋವು ನಿವಾರಣೆಗಾಗಿ, ಸೂಕ್ಷ್ಮವಾದ ತೆಳುವಾದ ಸೂಜಿಗಳನ್ನು ನಿರ್ದಿಷ್ಟ ಬಿಂದುವಿನೊಳಗೆ ತೂರಿಸಿ, ಕುಶಲತೆಯಿಂದ ಬಳಸಿಕೊಳ್ಳುವುದಾಗಿದೆ. ಆಕ್ಯುಪಂಕ್ಚರ್ ಎನ್ನುವ ಪದವು ಲ್ಯಾಟಿನ್ ಭಾಷೆಯ ’ಆಕ್ಯುಸ್’ ಅಂದರೆ “ಸೂಜಿ” ಮತ್ತು “ಪನ್ಗೆರೆ” ಅಂದರೆ, ಚುಚ್ಚುವುದು ಎಂಬ ಪದಗಳಿಂದ ಉದ್ಭವಿಸಿದೆ.
ಸಾಂಪ್ರದಾಯಿಕ ಚೈನೀಸ್ ವೈದ್ಯಕೀಯ ಪದ್ಧತಿಗೆ ಅನುಸಾರವಾಗಿ, “ಕಿ” ಎನ್ನುವ ಚೈತನ್ಯ ಶಕ್ತಿಯು ಹರಿಯುವ ಮೆರಿಡಿಯನ್ ಎನ್ನುವ ರೇಖೆಯ ಮೇಲೆ ಈ ಆಕ್ಯು ಚಿಕಿತ್ಸಾ ಬಿಂದುಗಳು ಸ್ಥಿತವಾಗಿರುತ್ತದೆ. ಈ ಬಿಂದುಗಳ ಅಸ್ಥಿತ್ವಕ್ಕೆ ಯಾವುದೇ ಕೋಶವಿಜ್ಞಾನ ಅಥವಾ ಅಂಗಶಾಸ್ತ್ರದ ಪುರಾವೆಗಳಿಲ್ಲ.
ಬಹುಶಃ ಚೀನಾ ದೇಶದಲ್ಲಿ ಈ ಸೂಜಿಚಿಕಿತ್ಸೆಯು “ಬಿಯಾನ್ ಶಿ” ಅಥವಾ ಮೊನಚು ಮಾಡಿದ ಶಿಲೆಗಳೊಂದಿಗೆ ಶಿಲಾ ಯುಗದಲ್ಲೇ ಆರಂಭವಾಗಿರಬಹುದು. ಸೂಜಿ ಚಿಕಿತ್ಸೆಯು ಚೀನಾ ದೇಶದಲ್ಲಿ ಆರಂಭವಾಯಿತೆನ್ನುವ ಹೇಳಿಕೆ ಅನಿಶ್ಚಿತತೆಯಿಂದ ಕೂಡಿದೆ. ಸೂಜಿ ಚಿಕಿತ್ಸೆಯ ಕುರಿತು ಇಲ್ಲಿ ಸಿಗುವ ಅತ್ಯಂತ ಪುರಾತನ ಲಿಖಿತ ದಾಖಲೆಯೆಂದರೆ, ಕ್ರಿ. ಪೂ. 305–204 ರಲ್ಲಿ ರಚಿಸಲಾದ, ಹುವಾಂಗ್ಡಿ ನೀಜಿಂಗ್ ಎನ್ನುವ, ಹಳದಿ ಸಾಮ್ರಾಟನ ಆಂತರಿಕ ವೈದ್ಯದ ಶಾಸ್ತ್ರೀಯ ಸಾಹಿತ್ಯ (ಸೂಜಿಚಿಕಿತ್ಸೆಯ ಇತಿಹಾಸ). ಸೂಜಿಚಿಕಿತ್ಸೆಯ ಬಳಕೆಯನ್ನು ಸೂಚಿಸಬಹುದಾದ, ಕ್ರಿ ಪೂ. 1,000 ಕ್ಕೂ ಹಿಂದಿನ ಹೈರೋಗ್ಲಿಫಿಕ್ಸ್ ಪಳೆಯುಳಿಕೆಗಳೂ ದೊರತಿವೆ. ಒಂದು ದಂತಕತೆಯ ಪ್ರಕಾರ, ಚೀನಾದಲ್ಲಿ, ಯುದ್ಧದಲ್ಲಿ ಬಾಣಗಳಿಂದ ಗಾಯಗೊಂಡ ಕೆಲವು ಸೈನಿಕರು ಇತರ ಭಾಗಗಳಲ್ಲಿನ ನೋವಿನಿಂದ ಮುಕ್ತರಾದ ಅನುಭವವನ್ನು ಪಡೆದರು. ಇದರ ಪರಿಣಾಮವಾಗಿ ಜನರು ಚಿಕಿತ್ಸಾ ವಿಧನವಾಗಿ ಬಾಣಗಳ ಬಳಕೆಯಲ್ಲಿ (ನಂತರ ಸೂಜಿಗಳ) ಪ್ರಯೋಗಗಳನ್ನು ಮಾಡಲಾರಂಭಿಸಿದರು. ಚೀನಾದಿಂದ ಸೂಜಿಚಿಕಿತ್ಸೆಯು ಕೊರಿಯಾ, ಜಪನ್, ವಿಯೆಟ್ ನಾಮ್, ಮತ್ತು ಇತರ ಪೂರ್ವ ಏಶಿಯಾ ದೇಶಗಳಲ್ಲಿ ಹಬ್ಬಿತು. 16 ನ ಶತಮಾನದ ಪೋರ್ಚುಗೀಸ್ ಮಿಶನರಿಗಳು ಈ ಪದ್ಧತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪರಿಚಯಿಸಿದರು.
ಸೂಜಿಚಿಕಿತ್ಸೆಯ ಸಾಂಪ್ರದಾಯಿಕ ತತ್ವಗಳು
ಸಾಂಪ್ರದಾಯಿಕ ಚೈನೀಸ್ ವೈದ್ಯಕ್ಯ ಪದ್ಧತಿಯಲ್ಲಿ, “ ಆರೋಗ್ಯ” ಎಂದರೆ ದೇಹದೊಳಗಿನ ಯಿನ್ ಮತ್ತು ಯಾಂಗ್ ಗಳ ನಡುವಣ ಸಮತೋಲನ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಕೆಲವರು ಯಿನ್ ಮತ್ತು ಯಾಂಗ್ ಅನ್ನು ದೇಹದ ಅನುವೇದನಾ (ಸಿಂಪಥಟಿಕ್) ಮತ್ತು ಉಪಾನುಮೋದನಾ (ಪಾರಾ ಸಿಂಪಥಟಿಕ್) ನರವ್ಯವಸ್ಥೆಗೆ ಹೋಲಿಸಿದ್ದಾರೆ. ಆಕ್ಯುಪಂಕ್ಚರಿನಲ್ಲಿ ಅತಿ ಮುಖ್ಯವಾಗಿರುವುದೆಂದರೆ “ಖಿ” ಯ ಅನಿರ್ಬಂಧಿತ ಹರಿವು. ಖಿ ಯ ತತ್ವವನ್ನು ಇತರ ಭಾಷೆಗೆ ತರ್ಜುಮೆ ಮಾಡುವುದು ಕಷ್ಟ ಸಾಧ್ಯ. ಅದು ಚೀನಾ ಸಂಸ್ಕೃತಿಯ ತತ್ವದೊಳಗ್ ಹಾಸುಹೊಕ್ಕಾಗಿರುವ ಅಂಗವಾಗಿದ್ದು ಜೀವ ಚೈತನ್ಯ ಶಕ್ತಿಯೆಂದು ಹೇಳಬಹುದಾಗಿದೆ. ಖಿಯು ವಸ್ತುವಲ್ಲ ಹಾಗೆಯೇ ಯಾಂಗ್ ಕೂಡ ಮತ್ತು ಅದರ ಜೊತೆಯ ಯಿನ್ “ರಕ್ತದ ರೀತಿ ವಸ್ತುವಾಗಿದೆ (ಆಂಗ್ಲ ಭಾಷೆಯಲ್ಲಿ ದೊಡ್ಡಕ್ಷರಗಳಲ್ಲಿ ಬರೆದು ಶಾರೀರಿಕ ರಕ್ತದಿಂದ ಭಿನ್ನವಾದುದೆಂದು ಗುರುತಿಸಲಾಗುತ್ತದೆ). ಸೂಜಿಚಿಕಿತ್ಸೆಯು, ಕಡಿಮೆಯಿರುವಲ್ಲಿ ಸುಸ್ಥಿತಿಗೆ ತಂದು ,ಹೆಚ್ಚಿರುವಲ್ಲಿ ಹೊರಹರಿವಿಗೆ (ಬಸಿದುಹೋಗುವಂತೆ) ಮತ್ತು ತಡೆಗಳಿರುವಲ್ಲಿ ಅನಿರ್ಬಂಧಿತ ಹರಿವನ್ನು ಉತ್ತೇಜಿಸಿ “ರಕ್ತ” ಹಾಗೂ “ಖಿ” ನ ಹರಿವನ್ನು ನಿಯಂತ್ರಿಸುತ್ತದೆ. ವೈದ್ಯಕೀಯ ಸಾಹಿತ್ಯದ ಭಾಷ್ಯದಲ್ಲಿ ಹೇಳುವುದಾದರೆ “ನೋವಿಲ್ಲದಲ್ಲಿ, ತಡೆಯಿಲ್ಲ, ತಡೆಯಿಲ್ಲದಲ್ಲಿ ನೋವಿಲ್ಲ”.
ಸಾಂಪ್ರದಾಯಿಕ ಚೈನೀಸ್ ವೈದ್ಯಕೀಯ ಪದ್ಧತಿಯು ಮಾನವ ದೇಹವನ್ನು ಒಂದು ಸಂಪೂರ್ಣ ಸ್ಥಿತಿ ಯೆಂದು ಪರಿಗಣಿಸುತ್ತದೆ. ಹಾಗೂ ಸಾಮಾನ್ಯವಾಗಿ ನೇರವಾಗಿ ಸಂಬಂಧ ಹೊಂದಿಲ್ಲದಿದ್ದರೂ ಆಯಾ ಅಂಗಗಳ ಹೆಸರಿನ “ಕ್ರಿಯೆಗಳ ಒಂದು ವ್ಯವಸ್ಥೆ“ಯೆಂದು ಅರ್ಥಮಾಡಿಕೊಳ್ಳುತ್ತದೆ. ಈ ವ್ಯವಸ್ಥೆಗಳಿಗೆ ಚೈನಾ ಭಾಷೆಯಲ್ಲಿ ಬಳಕೆಯಾಗುವ ಪದ “ಝಾಂಗ್ ಫು”. ಝಾಂಗ್ ಅಂದರೆ “ಘನ ಅಂಗಗಳು” ಮತ್ತು ಫು ಅಂದರೆ “ ಟೊಳ್ಳು ಅಂಗಗಳು” (ಕರುಳು). ಕ್ರಿಯೆಗಳ ವ್ಯವಸ್ಥೆಯನ್ನು ಅಂಗಗಳ ವ್ಯವಸ್ಥೆಯಿಂದ ಪ್ರತ್ಯೇಕಿಸಲು, “ಝಾಂಗ್ ಫು” ವನ್ನು ಆಂಗ್ಲ ಭಾಷೆಯ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗುತ್ತದೆ. ಹೀಗೆ, ಶ್ವಾಸಕೋಶ, ಹೃದಯ, ಮೂತ್ರಪಿಂಡ, ಇತ್ಯಾದಿ. ರೋಗ ಗ್ರಸ್ತ ಸ್ಥಿತಿಯೆಂದರೆ, ಯಿನ್ ಯಾನ್ ಮತ್ತು ಕಿ ಹಾಗೂ ರಕ್ತ ಸಮತೋಲನದಲ್ಲಿ ವ್ಯತ್ಯಾಸವೆಂದು ಪರಿಗಣಿಸಲಾಗುತ್ತದೆ (ಸಂತುಲನ ಸ್ಥಿತಿಗೆ ಸಮನಾದ). ರೋಗದ ಚಿಕಿತ್ಸೆಯಲ್ಲಿ, ಕ್ರಿಯೆಗಳ ವ್ಯವಸ್ಥೆಯ ಚಟುವಟಿಕೆಯಲ್ಲಿ ವ್ಯತ್ಯಾಸವನ್ನು ತರಲು, ಆಂಗ್ಲ ಭಾಷೆಯಲ್ಲಿ “ಆಕ್ಯು ಪಾಯಿಂಟ್ “ ಅಥವಾ ಚೈನಾ ಭಾಷೆಯಲ್ಲಿ “ಕ್ಸೂ “ಎಂದು ಕರೆಯಲ್ಪಡುವ, ದೇಹದ ಸೂಕ್ಷ್ಮ ಪ್ರದೇಶಗಳ ಮೇಲೆ ಸೂಜಿಗಳು, ಒತ್ತಡ, ಶಾಖ ಮೊದಲಾದುವುಗಳ ಬಳಕೆಯನ್ನು ಪ್ರಯತ್ನಿಸಲಾಗುತ್ತದೆ. ಟಿ ಸಿ ಎಮ್ ನಲ್ಲಿ ಇದನ್ನು “ಅಸಮಾರಸ್ಯ ವಿನ್ಯಾಸದ ಚಿಕಿತ್ಸೆ” ಎಂದು ಕರೆಯಲಾಗುತ್ತದೆ.
ಸೂಜಿಚಿಕಿತ್ಸೆಯ ಬಿಂದುಗಳಲ್ಲಿ ಮುಖ್ಯವಾದುವುಗಳಲ್ಲಿ ಹೆಚ್ಚಿನವು ಮೆರಿಡಿಯನ್ ಎಂದು ಕರೆಯಲ್ಪಡುವ “ಹನ್ನೆರಡು ಮುಖ್ಯ ಬಿಂದು”ಗಳಲ್ಲಿ ಕೇಂದ್ರೀಕೃತವಾಗಿವೆ. ಮತ್ತು “ ಎಂಟು ಹೆಚ್ಚುವರಿ ಮೆರಿಡಿಯನ್” ಗಳಲ್ಲಿ ಕಂಡುಬರುತ್ತವೆ. (ದು ಮಾಯ್ ಮತ್ತು ರೆನ್ ಮಾಯ್), ಚೈನಾದ ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪಠ್ಯ ಸಾಹಿತ್ಯಗಳಲ್ಲಿ ಒಟ್ಟು “ಹದಿನಾಲ್ಕು ಕಾಲುವೆ” ಗಳ ಕುರಿತು ವಿವರಿಸಲಾಗಿದೆ. ಅವುಗಳಿಗೆ ಅನುಸಾರವಾಗಿ ಈ ಕಾಲುವೆಗಳಲ್ಲಿ “ರಕ್ತ” ಹಾಗೂ “ಖಿ (Qi)” ಪ್ರವಹಿಸುತ್ತದೆ. ಇತರ ಮೃದು ಬಿಂದುಗಳೂ (“ಆಶಿ ಬಿಂದು”ಗಳೆಂದು ಕರೆಯಲ್ಪಡುವ) ಸಹ ಸೂಜಿ ಚಿಕಿತ್ಸೆಗೆಗೊಳಗಾಗಬಹುದು ಯಾಕೆಂದರೆ ಅಲ್ಲಿ ತ್ಯಾಜ್ಯವು ಸಂಚಯವಾಗಿದೆ ಎಂದು ನಂಬಲಾಗುತ್ತದೆ.
ಸೂಜಿಚಿಕಿತ್ಸೆಯು ಪರಿಣಾಮಕಾರಿಯಾಗಿದೆ ಎಂದು ವಿಶದೀಕರಿಸಲಾಗಿರುವ ರೋಗಗಳ ಸರಣಿ, ಲಕ್ಷಣಗಳು ಅಥವಾ ಸ್ಥಿತಿಗಳು:
ವರ್ಣ ಚಿಕಿತ್ಸೆ/p>
ಸೂರ್ಯ ಕಿರಣಗಳ ಏಳು ವರ್ಣಗಳು ವಿಭಿನ್ನ ಚಿಕಿತ್ಸಾತ್ಮಕ ಗುಣಗಳನ್ನು ಹೊಂದಿವೆ. ಇವುಗಳು ನೇರಳೆ, ನೀಲಿ, ನೀಲ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು. ಆರೋಗ್ಯವನ್ನು ಕಾಪಾಡುವಲ್ಲಿ ಹಾಗೂ ಹಲವು ರೋಗಗಳ ಚಿಕಿತ್ಸೆಯಲ್ಲಿ ಈ ವರ್ಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಬಣ್ಣದ ಬಾಟಲಿಗಳಲ್ಲಿ ತುಂಬಿ ನಿರ್ದಿಷ್ಟ ಅವಧಿಗೆ ಸೂರ್ಯನ ಕಿರಣಗಳಿಗೆ ಒಡ್ಡಿದ ನೀರು ಹಾಗೂ ತೈಲಗಳನ್ನು, ವರ್ಣ ಚಿಕಿತ್ಸೆಯ ಸಾಧಗಳನ್ನಾಗಿ ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸರಳವಾದ ವರ್ಣ ಚಿಕಿತ್ಸೆಯ ವಿಧಾನಗಳು ಶಮನಹೊಂದುವ ಯಾ ಗುಣಮುಖರಾಗುವ ಪ್ರಕ್ರಿಯೆಯಲ್ಲಿ ನೆರವಾಗುತ್ತವೆ.
ಗಾಳಿ ಚಿಕಿತ್ಸೆ
ತಾಜಾ ಗಾಳಿಯು ಉತ್ತಮ ಆರೋಗ್ಯಕ್ಕೆ ಅವಶ್ಯಕ. ಗಾಳಿ ಚಿಕಿತ್ಸೆಯ ಅನುಕೂಲಗಳನ್ನು ಗಾಳಿ ಸ್ನಾನದ ಮೂಲಕ ಪಡೆಯಬಹುದು. ಪ್ರತಿಯೊಬ್ಬರೂ ಸಾಧ್ಯವಾದಷ್ಟು, ದಿನಂಪ್ರತಿ 20 ನಿಮಿಷಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಗಾಳಿ ಸ್ನಾನ ಮಾಡತಕ್ಕದ್ದು. ಇದು ಮುಂಜಾನೆಯ ತಂಪಗಿನ ಉಜ್ಜುವಿಕೆ ಮತ್ತು ವ್ಯಾಯಾಮಗಳೊಂದಿಗೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಸರಿಯಾಗಿ, ತಾಜಾ ಗಾಳಿಯಾಡುವ ಪ್ರದೇಶದಲ್ಲಿ, ವ್ಯಕ್ತಿಗಳು ವಿವಸ್ತ್ರರಾಗಿ ಅಥವಾ ಹಗುರವಾದ ವಸ್ತ್ರವನ್ನು ತೊಟ್ಟುಕೊಂಡು ಸ್ವಚ್ಛವಾದ ಏಕಾಂತ ಪ್ರದೇಶದಲ್ಲಿ ವಿಹರಿಸಬೇಕು. ಇದಕ್ಕೆ ಪರ್ಯಾಯವಾದ ಇನ್ನೊಂದು ವಿಧಾನವೆಂದರೆ ಅದಕ್ಕಾಗಿಯೇ ರಚಿಸಿದ. ತಾಜಾ ಹಾಗೂ ಸ್ವಚ್ಛ ಗಾಳಿಯ ಚಲನ ಸುಗಮಾಗುವಂತಿರುವ, ಹೊರಗಿನಿಂದ ಏನೂ ಕಾಣಿಸದಂತಿರುವ ಛಾವಣಿಯಿರದ, ಆದರೆ ಶಟರ್ ಇರುವ ಒಂದು ಕೋಣೆ.
ಕಾರ್ಯ ವಿಧಾನ
ತಂಪು ಗಾಳಿ ಅಥವ ನೀರಿನ ವಿರುದ್ಧ ಪ್ರತಿಕ್ರಿಯೆ ನೀಡುವ ಸಲುವಾಗಿ, ಪರಿಚಲನೆಯನ್ನು ನಿಯಂತ್ರಿಸುವ ನರ ಕೇಂದ್ರಗಳು, ರಕ್ತವನ್ನು ಮೇಲ್ಮೈಯ ಎಡೆಗೆ ಕಳುಹಿಸುತ್ತವೆ. ಅದರಿಂದ ತ್ವಚೆಯಲ್ಲಿ ಬೆಚ್ಚಗಿನ, ಕೆಂಪು ವರ್ಣದ, ಅಪಧಮನಿಯ ರಕ್ತವು ತುಂಬಿಕೊಳ್ಳುತ್ತದೆ. ರಕ್ತ ಪ್ರವಾಹದ ಹರಿವು ಹೆಚ್ಚಿಸಲ್ಪಡುತ್ತದೆ ಹಾಗೂ, ದೇಹದ ಮೇಲ್ಮೈನಲ್ಲಿ ತ್ಯಾಜ್ಯ ವಸ್ತುಗಳ ವಿಸರ್ಜನೆಯೂ ಅನುಕ್ರಮವಾಗಿ ಹೆಚ್ಚುತ್ತದೆ.
ಪ್ರಯೋಜನಗಳು
ಗಾಳಿಯ ಸ್ನಾನವು ದೇಹದ ಮೇಲ್ಮೈ ನಲ್ಲಿರುವ ಮಿಲಿಯಗಟ್ಟಲೆ ನರಗಳ ತುದಿಗಳಿಗೆ ಸಮಾಧಾನ ನೀಡುವ ಮತ್ತು ಶಕ್ತಿ ನೀಡುವ ಗುಣವನ್ನು ಹೊಂದಿದೆ. ನರೋದ್ರೇಕ, ನರದೌರ್ಬಲ್ಯ, ಸಂಧಿವಾತ, ಚರ್ಮ, ಮಾನಸಿಕ ಮತ್ತು ಇತರ ಹಲವಾರು ದೀರ್ಘ ಕಾಲದ ನೋವುಗಳಿಗೆ ಬಹಳ ಉತ್ತಮ ಫಲಿತಾಂಶ ನೀಡಿದೆ.
ಕಾಂತೀಯ ಚಿಕಿತ್ಸೆ
ಕಾಂತೀಯ ಚಿಕಿತ್ಸೆಯು ಒಂದು ಚಿಕಿತ್ಸಾ ಪದ್ಧತಿಯಾಗಿದ್ದು, ರೋಗಿಯ ದೇಹಕ್ಕೆ ಅಯಸ್ಕಾಂತವನ್ನು ತಗಲಿಸುವುದರ ಮೂಲಕ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಅತ್ಯಂತ ಸರಳ, ಅಗ್ಗದ, ಮತ್ತು ಯಾತನಾ ರಹಿತ ಚಿಕಿತ್ಸಾ ಪದ್ಧತಿಯಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಉಪಯೋಗಿಸುವ ಒಂದೇ ಸಾಧನವೆಂದರೆ ಅಯಸ್ಕಾಂತ.
ಅಯಸ್ಕಾಂತೀಯ ಚಿಕಿತ್ಸೆಯು ದೇಹದ ಭಾಗಕ್ಕೆ ವಿವಿಧ ಶಕ್ತಿಯ ಅಯಸ್ಕಾಂತಗಳನ್ನು ನೇರವಾಗಿ ಅನ್ವಯ ಮಾಡುವುದಾಗಿದೆ ಅಥವಾ ಸಾಮಾನ್ಯ ಚಿಕಿತ್ಸೆಯಾಗಿ ದೇಹಕ್ಕೆ ಅನ್ವಯ ಮಾಡುವುದಾಗಿದೆ. ಜೊತೆಗೆ, ವಿವಿಧ ಭಾಗಗಳಿಗೆ ಅಯಸ್ಕಾಂತೀಯ ಪಟ್ಟಿಗಳೂ ( ಬೆಲ್ಟ್) ಲಭ್ಯವಿವೆ. ಉದಾಹರಣೆಗೆ, ಉದರ, ಮಂಡಿ, ಮಣಿಕಟ್ಟು, ಇತ್ಯಾದಿ. ಅಯಸ್ಕಾಂತೀಯ ಮಾಲೆಗಳು, ಕನ್ನಡಕಗಳು, ಮತ್ತು ಬ್ರಾಸ್ಲೆಟ್ ಗಳೂ ಚಿಕಿತ್ಸೆಯಲ್ಲಿ ಬಳಕೆಯಾಗುತ್ತವೆ.
ಪ್ರಯೋಜನಗಳು: ಶಕ್ತಿಯ ಸಮತೋಲನದಲ್ಲಿ ನೆರವಾಗುತ್ತದೆ, ಅನ್ವಯಿಸಿದ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ದೇಹದ ಬೆಚ್ಚನೆಯ ತಾಪವನ್ನು ಸುಧಾರಿಸುತ್ತದೆ.
ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಲ್ಲಿ ಕಂಡುಬಂದಂತೆ, ಪ್ರಗತಿ ಕಾಣಿಸಿಲ್ಲ. ಇದಕ್ಕೆ ಅರ್ಹ ಮಾನವಶಕ್ತಿಯ ಕೊರತೆಯೇ ಕಾರಣವಾಗಿದೆ. ಆದರೆ, ಇತ್ತೀಚೆಗೆ, ಹಲವು ಸ್ವಯಂ ಸೇವಾ ಸಂಸ್ಥೆಗಳು ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯ ಆರೋಗ್ಯ ನಿಲಯಗಳನ್ನು ಮತ್ತು ಪದವಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಕ್ಕೆ ಮುಂದೆ ಬಂದಿವೆ.
ಪ್ರಸ್ತುತ, ಭಾರತದಲ್ಲಿ ಇಂತಹ 12 ಶಿಕ್ಷಣ ಸಂಸ್ಥೆ (ಕಾಲೇಜು)ಗಳು ಇವೆ.
5 ½ ವರ್ಷಗಳು (4 ½ ವ ಶಿಕ್ಷಣ + 1 yr ಇಂಟರ್ನ್ ಶಿಪ್) ಪದವಿ ಶಿಕ್ಷಣ: “ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಪದವಿ (ಬಿ ಎನ್ ವೈ ಎಸ್)”
ಈ ವೈದ್ಯಕೀಯ ಶಿಕ್ಷಣದ ಹಾದಿಯು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನಷ್ಟೇ ಬೋಧನೆ ಮಾಡುವುದಲ್ಲದೆ, ಯಶಸ್ವೀ ವೈದ್ಯರಾಗಲು ಅಗತ್ಯ ಚಿಕಿತ್ಸಾ ಸಾಧನಗಳು ಮತ್ತು ವಿಧಾನಗಳ ಮೇಲೂ ಒತ್ತು ನೀಡುತ್ತದೆ. ಈ ಶಿಕ್ಷಣ ಸಂಸ್ಥೆಗಳು ತತ್ವಗಳು, ಮತ್ತು ಪ್ರಾಯೋಗಿಕ, ಚಿಕಿತ್ಸಾತ್ಮಕ ಸೌಲಭ್ಯಗಳನ್ನು ಒಳಗೊಂಡಿದ್ದು, ಅವುಗಳು ವಿದ್ಯಾರ್ಥಿಗಳಿಗೆ ಬಹು ಆಯಾಮದ ತರಬೇತಿ ನೀಡುವಲ್ಲಿ ನೆರವಾಗುತ್ತವೆ. ಈ ಶಿಕ್ಷಣದಲ್ಲಿ, ವಿದ್ಯಾರ್ಥಿಗಳಿಗೆ ಔಷಧಿ ರಹಿತ, ನೈಸರ್ಗಿಕ ಚಿಕಿತ್ಸೆಯ ಕುರಿತು ಅಧ್ಯಯನ ಮಾಡುವ ಅವಕಾಶವನ್ನು ನೀಡಲಾಗುತ್ತದೆ.
ಕೌತುಕದ ವಿಷಯವೆಂದರೆ, ದೇಶದ ಹಲವು ಆಧುನಿಕ ವೈದ್ಯಕೀಯ ಸಂಸ್ಥೆಗಳು ಯೋಗ ಹಾಗೂ ಅದರ ವಿವಿಧ ಅಂಶಗಳ ಪರಿಣಾಮಕಾರಿತ್ವವನ್ನು ಸಾಧಿಸಲು ಗಂಭೀರ ಪ್ರಯತ್ನವನ್ನು ಮಾಡಿದವು. ಮಾನವನ ವ್ಯಕ್ತಿತ್ವದ ಸಮಗ್ರ, ಸಂತುಲಿತ ಬೆಳವಣಿಗೆಯಲ್ಲಿ ಯೋಗವನ್ನು ಸಾಧನವಾಗಿ ಬಳಸಬಹುದು ಎನ್ನುವುದನ್ನು ಒಪ್ಪಿಕೊಂಡು ಹಲವು ವಿಶ್ವವಿದ್ಯಾಲಯಗಳು ಯೋಗ ವಿಭಾಗವನ್ನೇ ಸ್ಥಾಪಿಸಿವೆ. ಇಲ್ಲಿ ಒಂದು ವರ್ಷ ಅವಧಿಯ ಶಿಕ್ಷಕರ ತರಬೇತಿ ಶಿಕ್ಷಣವು ನಡೆಯುತ್ತಿದೆ. 18 ವಿಶ್ವವಿದ್ಯಾಲಯಗಳು ಯೋಗ ಶಿಕ್ಷಣದಲ್ಲಿ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿವೆ. ಯು ಜಿ ಸಿ ಯು ವ್ವಿಶ್ವವಿದ್ಯಾಲಯಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸಲು ಧನ ಸಹಾಯ ನೀಡುವುದರ ಮೂಲಕ ಯೋಗ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಕೆಲವು ಸಂಸ್ಥಗಳು ಸರ್ಟಫಿಕೇಟ್ ಕೋರ್ಸ್ ನಿಂದ ಹಿಡಿದು ಪಿ ಹೆಚ್ ಡಿ ಪದವಿಯ ತನಕ ಯೋಗ ಶಿಕ್ಷಣವನ್ನು ನೀಡುತ್ತಿವೆ. ಹಲವು ವಿಶ್ವವಿದ್ಯಾಲಯಗಳು ಮುಂದಿನ ವರ್ಷಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸಲಿವೆ. ಹಲವು ವಿದೇಶೀಯ ವಿಶ್ವವಿದ್ಯಾಲಯಗಳಲ್ಲಿ ಯೋಗ ಶಿಕ್ಷಣವನ್ನು ಸ್ಥಾಪಿಸಲಾಗಿದ್ದು, ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. ಹಲವು ರಾಜ್ಯಗಳು ತಮ್ಮ ಶೈಕ್ಷಣಿಕ ಪಠ್ಯಕ್ರಮದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಪ್ರಸ್ತಾವನೆಯನ್ನು ನೀಡಿವೆ. ದೆಹಲಿ ಸರಕಾರದ ಕೇಂದ್ರೀಯ ವಿದ್ಯಾಲಯ ಹಾಗೂ ನವ ದೆಹಲಿ ಮುನಿಸಿಪಾಲ್ ಕಾರ್ಪೊರೇಶನ್ ನಲ್ಲಿ ಸುಮಾರು 1,000 ಯೋಗ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಭಾರತದಲ್ಲಲ್ಲದೆ ಇತರ ಹಲವು ದೇಶಗಳಲ್ಲಿ ಮನೋ-ದೈಹಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಯೋಗವನ್ನು ನಿಯಮಿತವಾಗಿ ಬಳಕೆ ಮಾಡಲಾಗುತ್ತಿದೆ.
ಹಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ಪ್ರಕೃತಿ ಚಿಕಿತ್ಸೆಯ ಶಿಕ್ಷಣವನ್ನು ಉತ್ತೇಜಿಸಲಾಗುತ್ತಿದೆ ಎನ್ನುವುದು ಬಹಳ ಪ್ರೋತ್ಸಾಹದಾಯಕ ವಿಷಯವಾಗಿದೆ ಮತ್ತು ಅದಕ್ಕೆ ಸಿಗಬೇಕಾದ ಮಾನ್ಯತೆಯನ್ನು ನೀಡಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನ, ಜರ್ಮನಿ ಮತ್ತು ಬ್ರಿಟನ್ನಿನ ಕೆಲವು ಭಾಗಗಳಲ್ಲಿ ನ್ಯಾಶನಲ್ ಕಾಲೇಜ್ ಆಫ್ ನೇಚುರೋಪತಿಕ್ ಮೆಡಿಸಿನ್, ಒರೆಗಾನ್ ಎಂಡ್ ಬ್ರಿಟಿಷ್ ಕಾಲೇಜ್ ಆಫ್ ನೇಚುರೋಪತಿ ಎಂಡ್ ಆಸ್ಟಿಯೋಪತಿ, ಲಂಡನ್ ನಂತಹ ಹಲವು ಕಾಲೇಜುಗಳು ಸ್ಥಾಪಿಸಲ್ಪಟ್ಟಿವೆ.
ಸರಕಾರೀ ನೋಂದಾಯಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯರು
ಕ್ರ. ಸಂ. |
ಉಷ್ಣತೆ/ ತಾಪಮಾನ |
oಫ್ಯಾರನ್ ಹೀಟ್ |
oಸೆಲಿಶಿಯಸ್ |
|
1. |
ತುಂಬಾ ಶೀತಲ (ಮಂಜುಗಡ್ಡೆ ಲೇಪನ) |
30-55 |
-1-13 |
|
2. |
ಶೀತಲ |
55-65 |
13-18 |
|
3. |
ತಂಪು |
65-80 |
18-27 |
|
4. |
ಉಗುರು ಬಿಸಿ |
80-92 |
27-33 |
|
5. |
ಬೆಚ್ಚಗಿನ (ತಟಸ್ತ) |
92-98 |
33-37 |
|
6. |
ಬಿಸಿ |
98-104 |
37-40 |
|
7. |
ಅತ್ಯಂತ ಬಿಸಿ |
104 ಗಿಂತ ಮೇಲೆ |
40 ಗಿಂತ ಮೇಲೆ |
ಕ್ರ. ಸಂ |
ಭಾರತೀಯ ವೈದ್ಯಪದ್ಧತಿಯ ರಾಜ್ಯ ಮಂಡಲಿಯ ಹೆಸರು |
ಪ್ರಕೃತಿ ಚಿಕಿತ್ಸಕರ ಸಂಖ್ಯೆ |
1. |
ಭಾರತೀಯ ವೈದ್ಯ ಪದ್ಧತಿಯ ಮಂಡಲಿ, ಸೆಕುಂದರಾಬಾದ್ ಆಂಧ್ರ ಪ್ರದೇಶ ಸರಕಾರ |
800 |
2. |
Kಕರ್ನಾಟಕ ಆಯುರ್ವೇದ, ಯೂನಾನಿ ಮತ್ತು ಪ್ರಕೃತಿಚಿಕಿತ್ಸೆ ವೃತ್ತಿನಿರತರ ಮಂಡಲಿ, ಬೆಂಗಳೂರು, ಕರ್ನಾಟಕ ಸರಕಾರ |
340 |
3. |
ತಮಿಳು ನಾಡು ಭಾರತೀಯ ವೈದ್ಯಪದ್ಧತಿ ಚೆನ್ನೈ, ತಮಿಳು ನಾಡು ಸರಕಾರ |
670 |
4. |
ಮಧ್ಯ ಪ್ರದೇಶ ಆಯುರ್ವೇದ, ಯೂನಾನಿ, ಪ್ರಾಕೃತಿಕ ಚಿಕಿತ್ಸಾ ಮಂಡಲಿ, ಭೋಪಾಲ, ಮಧ್ಯ ಪ್ರದೇಶ ಸರಕಾರ |
18 |
5. |
ಛತ್ತೀಸ್ ಘರ್ ಆಯುರ್ವೇದ, ಯೂನಾನಿ ಮತ್ತು ಪ್ರಕೃತಿ ಚಿಕಿತ್ಸೆ ಮಂಡಲಿ, ರಾಯ್ಪುರ, ಛತ್ತೀಸ್ ಘರ ಸರಕಾರ |
75 |
ಆಸ್ಪತ್ರೆಗಳು, ಹಾಸಿಗೆ ಸಾಮರ್ಥ್ಯ ಮತ್ತು ಔಷಧಾಲಯಗಳು:
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020
ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳ...
ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸು...
ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳ...
20ರ ಹರೆಯದಲ್ಲಿ ಮೊಡವೆಗಳೇ ಮಾಯವಾಗಿ ಚರ್ಮದ ಹೊಳಪೇ ಒಡವೆಯಾಗ...