অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಯುರ್ವೇದ

ಆಯುರ್ವೇದ

ಆಯುರ್ವೇದ- ಮೂಲಭೂತ ಪರಿಕಲ್ಪನೆಗಳು

ಆಯುರ್ವೇದವು ಭಾರತ ಉಪಖಂಡದ ಅತಿ ಪುರಾತನ ವೈದ್ಯಕೀಯ ಪದ್ಧತಿಯಾಗಿದೆ. ಅದು 5000 ವರುಷಗಳ ಹಿಂದೆ ಭಾರತದಲ್ಲಿ ಉಗಮಿಸಿತು ಎಂಬ ಮಾತಿದೆ. ಆಯುರ್ವೇದ ಎನ್ನುವ ಪದವು ಎರಡು ಸಂಸ್ಕೃತ ಪದಗಳಾದ “ಆಯುಸ್”, ಅಂದರೆ ’ಜೀವನ’ ಮತ್ತು ’ವೇದ’, ಅಂದರೆ ’ವಿಜ್ಞಾನ’ ಎನ್ನುವುದರಿಂದಾಗಿದೆ. ಅಂದರೆ ಆಯುರ್ವೇದ ಅನ್ನುವ ಪದವು ಜೀವನದ ವಿಜ್ಞಾನ ಎಂದೇ ಆಗಿದೆ. ಇತರ ವೈದ್ಯಕೀಯ ಪದ್ಧತಿಗಳಿಗಿಂತ ಭಿನ್ನವಾಗಿ, ಆಯುರ್ವೇದವು ರೋಗಗಳ ಚಿಕಿತ್ಸೆಗಿಂತ ಹೆಚ್ಚಾಗಿ ಅರೋಗ್ಯವಂತ ಜೀವನ ನಡೆಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಆಯುರ್ವೇದದ ಪ್ರಮುಖ ಪರಿಕಲ್ಪನೆಯೆಂದರೆ ಗುಣಮುಖವಾಗುವ ಪ್ರಕ್ರಿಯೆಯನ್ನು ಅದು ವ್ಯಕ್ತಿಗತವಾಗಿಸುತ್ತದೆ.

ಆಯುರ್ವೇದದ ಪ್ರಕಾರ ಮಾನವ ದೇಹವು ನಾಲ್ಕು ಮೂಲಭೂತ ವಸ್ತುಗಳಿಂದ ಮಾಡಲ್ಪಟ್ಟಿದೆ- ದೋಷ, ಧಾತು, ಮಲ ಮತ್ತು ಅಗ್ನಿ. ದೇಹದ ಈ ಎಲ್ಲಾ ಮೂಲಭೂತ ವಸ್ತುಗಳಿಗೆ ಆಯುರ್ವೇದದಲ್ಲಿ ಮಹತ್ತರ ಸ್ಥಾನವಿದೆ. ಇವುಗಳನ್ನು “ಮೂಲ ಸಿದ್ಧಾಂತ”ವೆಂದೂ ಇಲ್ಲವೇ “ಆಯುರ್ವೇದ ಚಿಕಿತ್ಸೆಯ ಮೂಲಭೂತ ನಿಯಮ”ಗಳೆಂದೂ ಕರೆಯಲಾಗುತ್ತದೆ.

ದೋಷ

ದೋಷದ ಮೂರು ಪ್ರಮುಖ ನಿಯಮಗಳೆಂದರೆ ವಾತ, ಪಿತ್ತ ಮತ್ತು ಕಫ. ಇವು ಮೂರೂ ಜೊತೆಯಾಗಿ ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತವೆ. ಈ ಮೂರು ದೋಷಗಳ ಪ್ರಮುಖ ಕಾರ್ಯಗಳೆಂದರೆ, ಜೀರ್ಣವಾದ ಆಹಾರದ ಉಪ ಉತ್ಪನ್ನಗಳನ್ನು ದೇಹದುದ್ದಕ್ಕೂ ಸಾಗಿಸುವುದು. ಇದು ದೇಹದ ಅಂಗಾಂಶಗಳ ನಿರ್ಮಾಣಕ್ಕೆ ಸಹರಿಸುತ್ತದೆ. ಈ ದೋಷಗಳ ರಚನೆಯಲ್ಲಿ ಯಾವುದೇ ತೊಡಕುಂಟಾದಾಗ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಧಾತು

ಧಾತುವು ದೇಹಕ್ಕೆ ಆಧಾರವನ್ನು ನೀಡುತ್ತದೆ. ದೇಹದಲ್ಲಿ ಏಳು ಅಂಗಾಂಶ ವ್ಯವಸ್ಥೆಗಳಿವೆ. ಅವುಗಳೆಂದರೆ, ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ ಮತ್ತು ಶುಕ್ರ. ಅವು ಅನುಕ್ರಮವಾಗಿ ಪ್ಲಾಸ್ಮಾ, ರಕ್ತ, ಸ್ನಾಯು, ಕೊಬ್ಬಿನ ಅಂಗಾಂಶ, ಮೂಳೆ, ಮೂಳೆ ಮಜ್ಜೆ, ಮತ್ತು ರೇತಸ್ಸುಗಳನ್ನು ಪ್ರತಿನಿಧಿಸುತ್ತವೆ. ಧಾತುಗಳು ಮಾತ್ರಾ ದೇಹಕ್ಕೆ ಮೂಲಭೂತ ಪೌಷ್ಟಿಕತೆಯನ್ನು ನೀಡುತ್ತದೆ. ಜೊತೆಗೆ ಅದು ಮನಸ್ಸಿನ ಬೆಳವಣಿಗೆ ಮತ್ತು ರಚನೆಯಲ್ಲೂ ನೆರವಾಗುತ್ತದೆ.

ಮಲ

ಮಲ ಅಂದರೆ ತ್ಯಾಜ್ಯ ವಸ್ತು ಅಥವಾ ಕಲ್ಮಶ. ಅದು ದೇಹದ ಮೂರು ಅಂಶಗಳಲ್ಲಿ ಮೂರನೆಯದು. ಅಂದರೆ ದೋಷ ಮತ್ತು ಧಾತು. ಮೂರು ಮುಖ್ಯ ಕಲ್ಮಶಗಳೆಂದರೆ, ಮಲ, ಮೂತ್ರ ಮತ್ತು ಬೆವರು. ಕಲ್ಮಶಗಳು ದೇಹದ ತ್ಯಾಜ್ಯ ಉತ್ಪನ್ನಗಳಾಗಿದ್ದು ಸರಿಯಾದ ರೀತಿಯ ಅವುಗಳ ವಿಸರ್ಜನೆಯು ವ್ಯಕ್ತಿಯ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕಲ್ಮಶದಲ್ಲಿರುವ ಎರಡು ಮುಖ್ಯ ಅಂಶಗಳೆಂದರೆ ಮಲ ಮತ್ತು ಕಿಟ್ಟ. ಮಲವು ದೇಹದ ತ್ಯಾಜ್ಯ ಉತ್ಪನ್ನವಾಗಿದ್ದರೆ, ಕಿಟ್ಟವು ಧಾತುಗಳ ತ್ಯಾಜ್ಯ ಉತ್ಪನ್ನವಾಗಿದೆ.

ಅಗ್ನಿ

ದೇಹದ ಜೈವಿಕ ಬೆಂಕಿಯಾದ ಅಗ್ನಿಯ ಸಹಾಯದಿಂದಲೇ ಎಲ್ಲಾ ಚಯಾಪಚ ಹಾಗೂ ಜೀರ್ಣಕ್ರಿಯೆಗಳು ನಡೆಯುತ್ತವೆ. ಅಗ್ನಿಯೆಂದರೆ ಜೀರ್ಣಾಂಗ ವ್ಯೂಹ, ಪಿತ್ತಜನಕಾಂಗ ಮತ್ತು ಅಂಗಾಶ ಕೋಶಗಳಲ್ಲಿ ನೆಲೆಸಿರುವ ಕಿಣ್ವಗಳೆಂದು ಹೇಳಬಹುದು.

ದೇಹ ಮಾತೃಕೆ

ಆಯುರ್ವೇದದಲ್ಲಿ ಜೀವನವನ್ನು ದೇಹ, ಇಂದ್ರಿಯಗಳು, ಮನಸ್ಸು ಮತ್ತು ಆತ್ಮಗಳ ಸಂಗಮವೆಂದು ಪರಿಗಣಿಸಲಾಗಿದೆ. ಜೀವಿಸುತ್ತಿರುವ ಮಾನವನು ಮೂರು ಶರೀರದಲ್ಲಿರುವ ದ್ರವ (ಹ್ಯೂಮರ್ ) (ವಾತ, ಪಿತ್ತ ಮತ್ತು ಕಫ), ಏಳು ಮೂಲ ಅಂಗಾಂಶಗಳ (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ, ಮತ್ತು ಶುಕ್ಲ) ಮತ್ತು ತ್ಯಾಜ್ಯ ಉತ್ಪನ್ನಗಳ (ಮಲ, ಮೂತ್ರ, ಮತ್ತು ಬೆವರು) ಸಮಷ್ಠಿಯಾಗಿದ್ದಾನೆ. ಹೀಗೆ ದೇಹ ಮಾತೃಕೆಯು ಶರೀರದಲ್ಲಿರುವ ದ್ರವ (ಹ್ಯೂಮರ್ ), ಅಂಗಾಂಶಗಳು ಮತ್ತು ದೇಹದ ತ್ಯಾಜ್ಯ ಉತ್ಪನ್ನಗಳನ್ನು ಒಳಗೊಂಡಿದೆ. ದೇಹ ಮಾತೃಕೆ ಮತ್ತು ಅದರ ಅಂಗಗಳ ಬೆಳವಣಿಗೆ ಹಾಗೂ ಕೊಳೆಯುವಿಕೆಯು ಆಹಾರದ ಮೇಲೆ ಅವಲಂಬಿತವಾಗಿದೆ ಇದೇ ಮುಂದೆ ಹ್ಯೂಮರ್, ಅಂಗಾಂಶ ಹಾಗೂ ತ್ಯಾಜ್ಯವಾಗಿ ಸಂಸ್ಕರಣೆಗೊಳ್ಳುತ್ತದೆ. ಆಹಾರ ಸೇವನೆ, ಜೀರ್ಣವಾಗುವಿಕೆ, ಆಹಾರದ ಹೀರಿಕೊಳ್ಳುವಿಕೆ, ಮತ್ತು ಚಯಾಪಚಯ ಕ್ರಿಯೆಗಳು, ಮಾನಸಿಕ ಕ್ರಿಯೆಯಿಂದ ಮತ್ತು ದೇಹಾಗ್ನಿಯಿಂದ ಪ್ರಮುಖವಾಗಿ ಭಾದಿತವಾಗುವ ದೇಹದ ಆರೋಗ್ಯ ಮತ್ತು ಖಾಯಿಲೆಯ ಮೇಲೆ ಪರಸ್ಪರ ಪ್ರಭಾವ ಬೀರುತ್ತವೆ.

ಪಂಚಮಹಾಭೂತಗಳು

ಅಯುರ್ವೇದಕ್ಕೆ ಅನುಸಾರವಾಗಿ ಮಾನವನೂ ಸೇರಿದಂತೆ ಭೂಮಿಯ ಎಲ್ಲ ವಸ್ತುಗಳೂ ಐದು ಮೂಲಭೂತ ವಸ್ತು (ಪಂಚಮಹಾಭೂತ)ಗಳಿಂದ ಮಾಡಲ್ಪಟ್ಟಿವೆ. ಅವುಗಳೆಂದರೆ, ಭೂಮಿ, ಜಲ, ಅಗ್ನಿ, ವಾಯು ಮತ್ತು ನಿರ್ವಾತಗಳು. ದೇಹಮಾತೃಕೆಯು ಹಾಗೂ ಅದರ ಅಂಗಗಳ ವಿಭಿನ್ನ ರಚನೆಗಳು ಮತ್ತು ಕಾರ್ಯಗಳ ಅಗತ್ಯಗಳಿಗೆ ಬೇಕಾದಂತೆ ಈ ಪಂಚಮಹಾಭೂತಗಳ ಸಮತೋಲನಾ ಸಾಂದ್ರತೆಯು ವಿವಿಧ ಅನುಪಾತಗಳಲ್ಲಿ ಇರುತ್ತವೆ. ದೇಹಮಾತೃಕೆಯ ಬೆಳವಣಿಗೆ ಮತ್ತು ವೃದ್ಧಿಗಳು ಅದರ ಪೌಷ್ಟಿಕತೆಯ ಮೇಲೆ ಅಂದರೆ, ಆಹಾರದ ಅವಲಂಬಿತವಾಗಿದೆ. ಆಹಾರವೂ ಈ ಐದು ವಸ್ತುಗಳಿಂದಲೇ ಮಾಡಲ್ಪಟ್ಟಿದ್ದು .ಅದು ದೇಹಾಗ್ನಿ (ಅಗ್ನಿ) ಕ್ರಿಯೆಯ ನಂತರ ದೇಹಕ್ಕೆ ಸರಿಹೊಂದುವಂತಹ ವಸ್ತುಗಳನ್ನು ಮರುತುಂಬುತ್ತದೆ. ಅಂಗಾಂಶಗಳು ದೇಹದ ರಚನಾತ್ಮಕ ಅಂಶಗಳಾಗಿದ್ದರೆ, ಹ್ಯೂಮರ್ ಗಳು ಶಾರೀರಿಕ ಅಸ್ಥಿತ್ವವಾಗಿದೆ .ಇವುಗಳು ಪಂಚಮಹಾಭೂತಗಳ ಹಲವಾರು ಸಂಯೋಜನೆ ಮತ್ತು ಪರಿವರ್ತನೆಗಳಿಂದ ಉತ್ಪತ್ತಿಯಾಗುತ್ತದೆ.

ಆರೋಗ್ಯ ಮತ್ತು ಅನಾರೋಗ್ಯ

ಆರೋಗ್ಯ ಅಥವಾ ಅನಾರೋಗ್ಯವು ದೇಹಮಾತೃಕೆಯ ಮತ್ತು ಅದರ ವಿವಿಧ ಭಾಗಗಳ ನಡುವಿನ ಸಮತೋಲನದ ಮೇಲೆ ಅವಲಂಬಿತವಾಗಿದೆ. ಆಂತರಿಕ ಹಾಗೂ ಬಾಹ್ಯ ಅಂಶಗಳು ಸ್ವಾಭಾವಿಕ ಸಮತೋಲನದಲ್ಲಿ ತೊಡಕುಂಟುಮಾಡಿ ರೋಗಕ್ಕೆ ಕಾರಣವಾಗಬಹುದು. ಈ ರೀತಿಯ ಸಮತೋಲನ ಕಳೆದುಕೊಳ್ಳುವಿಕೆಯು ಆಹಾರ ಸೇವನಾ ಕ್ರಮದಿಂದ ಆಗಿರಬುಹುದು, ಅನಗತ್ಯ ಅಭ್ಯಾಸಗಳಿಂದಾಗಿರಬಹುದು ಅಥವಾ ಆರೋಗ್ಯಕರ ಜೀವನ ನಡೆಸುವ ನಿಯಮ ಪಾಲನೆಯನ್ನು ಕಡೆಗಣಿಸುವುದರಿಂದಾಗಿರಬಹುದು. ಕಾಲಕಾಲದ ಅಸಹಜತೆಗಳು, ಅಸಮರ್ಪಕ ವ್ಯಾಯಾಮ, ಅಥವಾ ಇಂದ್ರಿಯಗಳ ಅನಿಯಮಿತ ಬಳಕೆ ಹಾಗೂ ದೇಹ ಹಾಗೂ ಮನಸ್ಸಿನ ಅಸಂತುಲಿತ ಕ್ರಿಯೆಗಳು ಸಹ ಸಹಜ ಸಮತೋಲನವನ್ನು ಕೆಡಹುವುದರಲ್ಲಿ ಕಾರಣವಾಗಬಹುದು.ಇದರ ಚಿಕಿತ್ಸೆಯು, ಕ್ರಮಬದ್ಧ ಆಹಾರ ಸೇವನೆ,ಸರಿಯಾದ ಜೀವನ ದಿನಚರಿ ಮತ್ತು ಅಭ್ಯಾಸಗಳು ,ಔಷಧಿಗಳನ್ನು ನೀಡುವಿಕೆ, ಮತ್ತು ಪ್ರತಿಬಂಧಕ ಕ್ರಮಗಳಾದ ಪಂಚಕರ್ಮ ಮತ್ತು ರಸಾಯನ ಚಿಕಿತ್ಸೆಯ ಮೇಲಿನ ಅವಲಂಬನೆಯನ್ನು ಒಳಗೊಂಡಿದ್ದು ,ಇದರ ಮೂಲಕ ದೇಹ-ಮನಸ್ಸಿನ ನಡುವಿನ ಸಮತೋಲನವನ್ನು ನಿಯಂತ್ರಿಸುವುದಾಗಿದೆ.

ರೋಗ ನಿರ್ಧಾರ

ಆಯುರ್ವೇದದಲ್ಲಿ, ರೋಗ ನಿರ್ಧಾರವು ರೋಗಿಯ ಸಮಗ್ರ ಸ್ಥಿತಿಯದಾಗಿರುತ್ತದೆ. ವೈದ್ಯರು ರೋಗಿಯ ಆಂತರಿಕ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಯನ್ನು ಜಾಗರೂಕರಾಗಿ ಪರಿಶೀಲಿಸುತ್ತಾರೆ. ಅವರು ಇತರ ಲಕ್ಷಣಗಳಾದ ಭಾದೆಗೊಳಗಾಗಿರುವ ಅಂಗಾಂಶಗಳು, ಶಾರೀರಿಕ ದ್ರವ್ಯಗಳು , ರೋಗವಿರುವ ಸ್ಥಾನ, ರೋಗಿಯ ನಿರೋಧಕತೆ, ಮತ್ತು ಉತ್ಸಾಹ, ಆತನ ನಿತ್ಯ ಕ್ರಮಗಳು, ಆಹಾರ ಸೇವನೆಯ ಅಭ್ಯಾಸ, ರೋಗಿಯ ಸ್ಥಿತಿಯ ಗಂಭೀರತೆ, ಜೀರ್ಣಕ್ರಿಯೆ ಮತ್ತು ಇತರ ವೈಯಕ್ತಿಕ ವಿವರಗಳು, ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸ್ಥಿತಿಗಳನ್ನು ಸಹ ಕೂಲಂಕುಶವಾಗಿ ಪರೀಕ್ಷಿಸುತ್ತಾರೆ. ರೋಗ ನಿರ್ಧಾರವು ಈ ಕೆಳಗಿನ ಪರೀಕ್ಷೆಗಳನ್ನೂ ಒಳಗೊಂಡಿರುತ್ತದೆ:

  • ಸಾಮಾನ್ಯ ದೈಹಿಕ ಪರೀಕ್ಷೆ
  • ನಾಡಿ ಪರೀಕ್ಷೆ
  • ಮೂತ್ರ ಪರೀಕ್ಷೆ
  • ಮಲ ಪರೀಕ್ಷೆ
  • ನಾಲಿಗೆ ಮತ್ತು ನೇತ್ರ ಪರೀಕ್ಷೆ
  • ಸ್ಪರ್ಷ ಹಾಗೂ ಶ್ರವಣ ಸಾಮರ್ಥ್ಯವೂ ಒಳಗೊಂಡಂತೆ ಚರ್ಮ ಹಾಗೂ ಕಿವಿಯ ಪರೀಕ್ಷೆ.

ಚಿಕಿತ್ಸೆ

ಮೂಲಭೂತ ಚಿಕಿತ್ಸಾತ್ಮಕ ಕ್ರಿಯಾ ಮಾರ್ಗವು ಆರೋಗ್ಯವನ್ನು ತರುವ ವಿಧಾನವೇ ಸರಿಯಾದ ಮಾರ್ಗ ಮತ್ತು ರೋಗದಿಂದ ಮುಕ್ತನಾಗಿಸುವವನೇ ನಿಜವಾದ ವೈದ್ಯ ಎನ್ನುತ್ತದೆ. ಇದು ಆಯುರ್ವೇದದ ಪ್ರಮುಖ ಉದ್ದೇಶವನ್ನು ಅಂದರೆ, ಆರೋಗ್ಯದ ನಿರ್ವಹಣೆ ಮತ್ತು ಉತ್ತೇಜನೆ, ರೋಗವನ್ನು ತಡೆಗಟ್ಟುವಿಕೆ ಮತ್ತು ಅನಾರೋಗ್ಯದ ನಿವಾರಣೆ ಇವುಗಳನ್ನು ಸಾರುತ್ತದೆ. ರೋಗ ಚಿಕಿತ್ಸೆಯು ದೇಹಮಾತೃಕೆಯ ಅಥವಾ ಅದರ ಭಾಗಗಳ ನಡುವಿನ ಸಮತೋಲನವನ್ನು ಕೆಡಿಸುವ ಕಾರಣಗಳನ್ನು ದೂರಮಾಡುವ, ಪಂಚಕರ್ಮ ಚಿಕಿತ್ಸೆ, ಔಷಧ, ಸೂಕ್ತ ಆಹಾರ ಸೇವನಾ ಕ್ರಮ, ಚಟುವಟಿಕೆ ಯನ್ನು ಒಳಗೊಂಡಿದ್ದು ಇದು ದೇಹದ ಸಮತೋಲನವನ್ನು ಕಾಪಾಡಲು ಮತ್ತು ದೇಹದ ಸಂಯೋಜನೆಯನ್ನು ಬಲಗೊಡಿಸಿ ,ರೋಗವನ್ನು ತಡೆಗಟ್ಟಲು ಅಥವಾ ಭವಿಷ್ಯದಲ್ಲಿ ಆ ರೋಗವು ಬರುವ ಸಂಭಾವ್ಯತೆಯನ್ನು ಕಡಿಮೆಮಾಡುವಲ್ಲಿ ಸಹಕಾರಿಯಾಗುತ್ತದೆ.

ಸಾಮಾನ್ಯವಾಗಿ ಚಿಕಿತ್ಸೆಯ ಹೆಜ್ಜೆಗಳು ಔಷಧಿಯ ಬಳಕೆ, ನಿರ್ದಿಷ್ಟ ಆಹಾರ ಕ್ರಮ, ಮತ್ತು ಸೂಚಿತ ಚಟುವಟಿಕೆಯ ರೂಢಿಗಳನ್ನು ಒಳಗೊಂಡಿವೆ. ಈ ಮೂರು ಕ್ರಮಗಳ ಬಳಕೆಯನ್ನು ಎರಡು ವಿಧಾನಗಳಿಂದ ಮಾಡಲಾಗುತ್ತದೆ. ಒಂದು ಮಾರ್ಗದಲ್ಲಿ ಈ ಮೂರು ಹೆಜ್ಜೆಗಳು ರೋಗದ ಕಾರ್ಯಕಾರಣ ಅಂಶಗಳು ಮತ್ತು ರೋಗಗಳ ಪ್ರಕ್ರಿಯೆಗಳು ಮೈದೋರುವಿಕೆಯ ವಿರುದ್ಧ ಕೆಲಸಮಾಡುವುದರ ಮೂಲಕ ರೋಗವನ್ನು ಹತ್ತಿಕ್ಕುವ ಕಾರ್ಯವೆಸಗುತ್ತದೆ. ಎರಡನೆಯ ಮಾರ್ಗದಲ್ಲಿ, ಅವೇ ಮೂರು ಅಂಶಗಳನ್ನು (ಬಳಕೆ, ನಿರ್ದಿಷ್ಟ ಆಹಾರ ಕ್ರಮ, ಮತ್ತು ಸೂಚಿತ ಚಟುವಟಿಕೆಯ ರೂಢಿಗಳು) ಕ್ರಯಕಾರಣ ಅಂಶಗಳ ಮತ್ತು ರೋಗಗಳ ಪ್ರಕ್ರಿಯೆಗಳ ಮೈದೋರುವಿಕೆಯದೇ ಮಾದರಿಯ ಪರಿಣಾಮವನ್ನು ಉಂಟುಮಾಡಲು ಗುರಿಯಾಗಿಸಲಾಗುತ್ತದೆ. ಈ ಎರಡೂ ಮಾದರಿಯ ಚಿಕಿತ್ಸಾತ್ಮಕ ವಿಧಾನಗಳು ವಿಪ್ರೀತ ಮತ್ತು ವಿಪ್ರೀತರ್ಥಕಾರಿ ಚಿಕಿತ್ಸೆಗಳೆಂದು ಕರೆಯಲ್ಪಡುತ್ತವೆ.

ಚಿಕಿತ್ಸೆಗಳು ಯಶಸ್ವಿಯಾಗಲು ನಾಲ್ಕು ಅಂಶಗಳು ಪ್ರಮುಖವಾಗಿವೆ. ಅವುಗಳೆಂದರೆ:

  1. ವೈದ್ಯ/ ಚಿಕಿತ್ಸಕ
  2. ಔಷಧ ದ್ರವ್ಯಗಳು
  3. ಶುಶ್ರೂಶಕ ಸಿಬ್ಬಂದಿ
  4. ರೋಗಿ

ವೈದ್ಯ ಅಥವಾ ಚಿಕಿತ್ಸಕ ಈ ಪ್ರಮುಖತೆಯ ಸಾಲಿನಲ್ಲಿ ಪ್ರಥಮ ಸ್ಥಾನದಲ್ಲಿರುತ್ತಾನೆ. ಆತನಲ್ಲಿ ತಾಂತ್ರಿಕ ಕೌಶಲ್ಯ, ವೈಜ್ಞಾನಿಕ ಜ್ಞಾನ, ಪರಿಶುದ್ಧತೆ ಮತ್ತು ಮಾನವೀಯತೆ (ಅರ್ಥಮಾಡಿಕೊಳ್ಳುವಿಕೆ)ಯಿರಬೇಕು. ವೈದ್ಯನು ತನ್ನ ಜ್ಞಾನವನ್ನು ವಿನಯ, ಬುದ್ಧಿವಂತಿಕೆಯಿಂದ ಮತ್ತು ಮಾನವರ ಸೇವೆಗಾಗಿ ಬಳಸಿಕೊಳ್ಳಬೇಕು. ನಂತರ ಬರುವುದು ಆಹಾರ ಮತ್ತು ಔಷಧಿಗಳು. ಇವುಗಳು ಉತ್ತಮ ಗುಣಮಟ್ಟದವುಗಳಾಗಿದ್ದು, ವಿಶಾಲವಾದ ಅಳವಡಿಕೆ ಹೊಂದಿದ್ದು, ಅನುಮೋದಿತ ಕ್ರಿಯಾ ವಿಧಾನವನ್ನು ಬಳಸಿ, ಬೆಳೆಸಿದ ಮತ್ತು ತಯಾರಿಸಿದ್ದಾಗಿರಬೇಕು. ಹಾಗೂ ಅವುಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿರಬೇಕು. ಯಶಸ್ವೀ ಚಿಕಿತ್ಸೆಯ ಮೂರನೆಯ ಪ್ರಮುಖ ಅಂಶವೆಂದರೆ, ಶುಶ್ರೂಶಕ ಸಿಬ್ಬಂದಿಯ ಪಾತ್ರ. ಅವರು ಶುಶ್ರೂಶೆಯ ಕುರಿತು ಉತ್ತಮ ಜ್ಞಾನವನ್ನು ಹೊಂದಿದ್ದು, ತಮ್ಮ ಕೆಲಸದಲ್ಲಿ ಚತುರರಾಗಿರಬೇಕು, ಒಲವಿನ, ಕರುಣೆಯ, ಬುದ್ಧಿವಂತ, ನಿರ್ಮಲ, ಸ್ವಚ್ಛ ಮತ್ತು ಸಂಪನ್ಮೂಲ ಸಂಪನ್ನರಾಗಿರಬೇಕು. ನಾಲ್ಕನೆಯ ಪ್ರಮುಖ ಅಂಶವೇ ರೋಗಿ. ಆತ ಸಹಕಾರ ನೀಡುವವನಾಗಿರಬೇಕು ಮತ್ತು ಕೊಟ್ಟ ಸೂಚನೆಗಳನ್ನು ವಿನೀತನಾಗಿ ಪಾಲಿಸುವವನಾಗಿರಬೇಕು, ತನ್ನ ಅನಾರೋಗ್ಯದ ಲಕ್ಷಣಗಳ ಕುರಿತು ಸರಿಯಾಗಿ ವಿವರಿಸಬಲ್ಲವನಾಗಿರಬೇಕು, ಜೊತೆಗೆ ಚಿಕಿತ್ಸೆಗೆ ಅಗತ್ಯವಿರಬಹುದಾದ ಎಲ್ಲವನ್ನೂ ಒದಗಿಸಲು ಸದಾ ತಯಾರಿರಬೇಕು.

ಆಯುರ್ವೇದವು ರೋಗಕಾರಕಗಳು ಕೆಲಸ ಆರಂಭಿಸುವ ಹಂತದಿಂದ ಹಿಡಿದು ಅಂತಿಮವಾಗಿ ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗಿನ ವಿವಿಧ ಹಂತಗಳ ಸ್ಪಷ್ಟವಾದ ವಿಶ್ಲೇಷಣಾ ವಿವರಗಳನ್ನು ವೃದ್ಧಿಪಡಿಸಿದೆ. ಇದರಿಂದ ಈ ಪದ್ಧತಿಗೆ ರೋಗಗಳ ಲಕ್ಷಣಗಳು ಹೊರಗೆ ಕಾಣುವ ಮುನ್ನವೇ ಸುಪ್ತ ರೋಗ ಲಕ್ಷಣಗಳ ಮೂಲಕ ರೋಗಕ್ಕೆ ಸಾಧ್ಯ ಕಾರಣಗಳನ್ನು ಊಹಿಸುವ ಅನುಕೂಲವನ್ನು ಕೊಟ್ಟಿದೆ. ಇದು ಈ ವೈದ್ಯಕೀಯ ಪದ್ಧತಿಯ ಪ್ರತಿರೋಧಕ ಪಾತ್ರವನ್ನು ಹೆಚ್ಚಿಸುತ್ತದೆ. ಆ ಮೂಲಕ ಅಗತ್ಯ ಮತ್ತು ಪರಿಣಾಮಕಾರೀ ಹೆಜ್ಜೆಗಳನ್ನು ಮುಂಚಿತವಾಗಿ ತೆಗೆದುಕೊಳ್ಳಲು, ರೋಗವು ಉಲ್ಬಣಿಸುವುದನ್ನು ತಡೆಯಲು ಮತ್ತು ರೋಗವನ್ನು ಆರಂಭಿಕ ಹಂತದಲ್ಲೇ ತಡೆಹಿಡಿಯಲು ಸೂಕ್ತವಾದ ಚಿಕಿತ್ಸಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಚಿಕಿತ್ಸಾ ವಿಧಗಳು

ಶೋಧನಾ ಚಿಕಿತ್ಸೆ ( ಶುದ್ಧೀಕರಣ ಚಿಕಿತ್ಸೆ)

ಶೋಧನಾ ಚಿಕಿತ್ಸೆಯು ದೈಹಿಕ ಹಾಗೂ ಮನೋದೈಹಿಕ ರೋಗಗಳಿಗೆ ಕಾರಣವಾದ ಅಂಶಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ಈ ಪ್ರಕ್ರಿಯೆಯು ಆಂತರಿಕ ಮತ್ತು ಬಾಹ್ಯ ಶುದ್ಧೀಕರಣಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಬಳಸಲ್ಪಡುವ ಅಭ್ಯಾಸಗಳೆಂದರೆ ಪಂಚಕರ್ಮ (ಔಷಧಿಯಿಂದ ಉಂಟುಮಾಡುವ ವಮನ (ವಾಂತಿ), ವಿರೇಚನ (ಬೇಧಿ), ಬಸ್ತಿ (ತೈಲಎನಿಮ), ಎನಿಮ, (ಪಿಚಕಾರಿ ಬಳಸಿ ಮಲವಿಸರ್ಜನೆ ಸುಗಮಗೊಳಿಸುವಿಕೆ) ಮತ್ತು ಕಷಾಯ ಎನಿಮಾ, ಔಷಧಿಯನ್ನು ಮೂಗಿನ ಮೂಲಕ ಕೊಡುವ ನಸ್ಯ), ಪಂಚಕರ್ಮ –ಪೂರ್ವ ಕ್ರಿಯಾ ವಿಧಾನಗಳು (ಆಂತರಿಕ ಮತ್ತು ಬಾಹ್ಯ ಸ್ನೇಹನ ಮತ್ತು ಸ್ವೇದನ). ಪಂಚಕರ್ಮ ಚಿಕಿತ್ಸೆಯು ಚಯಾಪಚಯ ಕ್ರಿಯೆಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಅದು ಚಿಕಿತ್ಸಾತ್ಮಕ ಲಾಭವನ್ನು ನೀಡುವುದಲ್ಲದೆ ಅಗತ್ಯವಿರುವ ಶುದ್ಧೀಕರಣದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಚಿಕಿತ್ಸೆಯು ನರ ಸಂಬಂಧೀ ಖಾಯಿಲೆಗಳು , ಸ್ನಾಯು- ಅಸ್ಥಿ ಸಂಬಂಧೀ ಖಾಯಿಲೆಯ ಸ್ಥಿತಿಗಳು, ಕೆಲವು ನಿರ್ದಿಷ್ಟ ರಕ್ತನಾಳ ಹಾಗೂ ನರ-ರಕ್ತನಾಳ ಸಂಬಂಧೀ ಸ್ಥಿತಿಗಳು, ಶ್ವಾಸ ಸಂಬಂಧೀ ರೋಗಗಳು, ಚಯಾಪಚಯ ಹಾಗೂ ಅಂಗಾವನತಿಯ ಸ್ಥಿತಿಗಳ ಚಿಕಿತ್ಸೆಯಲ್ಲಿ ಈ ಪದ್ಧತಿಯು ಬಹಳವೇ ಪರಿಣಾಮಕಾರಿಯಾಗಿದೆ.

ಶಮನ ಚಿಕಿತ್ಸೆ (ಶಮನಕಾರೀ ಚಿಕಿತ್ಸೆ)

ಶಮನವು ವಿಷಮಯ ದೋಷಗಳ ಹತ್ತಿಕುವಿಕೆಯನ್ನು ಒಳಗೊಂಡಿದೆ. ಪ್ರಕೋಪಗೊಂಡ ಸ್ಥಿತಿಯ ಹ್ಯೂಮರ್(ದೋಷ) ವನ್ನು(ಕಫ, ವಾತ ಅಥವಾ ಪಿತ್ತ) ಇನ್ನುಳಿದ ಹ್ಯೂಮರ್ ಗಳ ಸಮತೋಲನಕ್ಕೆ ಯಾವುದೇ ಧಕ್ಕೆಯುಂಟುಮಾಡದೇ ಸಹಜ ಸ್ಥಿತಿಗೆ ತಲಪುವಂತೆ ಮಾಡುವುದಕ್ಕೆದಕ್ಕೆ ಶಮನ ಎನ್ನಲಾಗುತ್ತದೆ. ಈ ಚಿಕಿತ್ಸೆಯನ್ನು ಹಸಿವುಕಾರಕ, ಜೀರ್ಣಕಾರಕ, ವ್ಯಾಯಾಮ, ಸೂರ್ಯನ ಪ್ರಕಾಶಕ್ಕೆ ಒಡ್ಡುವ ಮೂಲಕ ಸಾಧಿಸಲಾಗುತ್ತದೆ. ಈ ಚಿಕಿತ್ಸಾ ಕ್ರಮದಲ್ಲಿ ಉಪಶಾಮಕ (ತೀವ್ರತೆಯನ್ನು ಕಡಿಮೆಮಾಡುವ) ಮತ್ತು ನಿದ್ರಾಕಾರಕಗಳನ್ನು ಬಳಸಲಾಗುತ್ತದೆ.

ಪಥ್ಯ ವ್ಯವಸ್ಥೆ (ಆಹಾರ ಕ್ರಮ ಹಾಗೂ ಚಟುವಟಿಕೆಗಳ ಸಲಹೆ)

ಪಥ್ಯ ವ್ಯವಸ್ಥೆಯು ಆಹಾರ ಕ್ರಮ, ಚಟುವಟಿಕೆ, ಅಭ್ಯಾಸಗಳು, ಮತ್ತು ಭಾವನಾತ್ಮಕ ಸ್ಥಿತಿಯ ಸೂಚನೆ ಮತ್ತು ವಿರೋಧಾತ್ಮಕ ಸೂಚನೆಗಳನ್ನು ಒಳಗೊಂಡಿದೆ. ಚಿಕಿತ್ಸಾತ್ಮಕ ಹೆಜ್ಜೆಗಳು ಹೆಚ್ಚು ಪರಿಣಾಮಕಾರಿಯಾಗಬೇಕೆಂಬ ಉದ್ದೇಶದಿಂದ ಹಾಗೂ ರೋಗಕಾರಕ ಪ್ರಕ್ರಿಯೆಗಳನ್ನು ಹಿಮ್ಮೆಟ್ಟಿಸಲು ಇವುಗಳನ್ನು ಮಾಡಲಾಗುತ್ತದೆ. ಅಗ್ನಿಯ ಚಟುವಟಿಕೆಯನ್ನು ಉತ್ತೇಜಿಸಲು ಮತ್ತು ಪಚನ ಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಆಹಾರದ ಸಾರವನ್ನು ಹೀರಿಕೊಂಡು ಅಂಗಾಂಶಗಳನ್ನು ಬಲಪಡಿಸಲು ಆಹಾರ ಕ್ರಮದಲ್ಲಿ ಮಾಡಬೇಕಾದ ಮತ್ತು ಮಾಡದಿರಬೇಕಾದ ಅಂಶಗಳ ಮೇಲೆ ಹೆಚ್ಚಿನ ಮಹತ್ವ ನೀಡಲಾಗಿದೆ.

ನಿದಾನ ಪರಿವಾರ್ಜನ (ರೋಗಕಾರಕಗಳು ಮತ್ತು ಬಿಗಡಾಯಿಸುವ ಕಾರಣೀಭೂತ ವಸ್ತುಗಳನ್ನು ದೂರವಿರಿಸುವುದು)

ನಿದಾನ ಪರಿವಾರ್ಜನವು ರೋಗಿಯ ಆಹಾರ ಕ್ರಮ ಹಾಗೂ ಜೀವನಶೈಲಿಯಲ್ಲಿ ತಿಳಿದಿರುವ ರೋಗಕಾರಕಗಳನ್ನು ದೂರವಿರಿಸುವುದಾಗಿದೆ. ಜೊತೆಗೆ, ಅದು, ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಅಂಶಗಳನ್ನು ಬಳಸುವುದನ್ನು ತಡೆಹಿಡಿಯುವುದನ್ನೂ ಒಳಗೊಂಡಿದೆ.

ಸತ್ವವಾಜಯ (ಮನೋಚಿಕಿತ್ಸೆ)

ಸತ್ವವಾಜಯವು ಮಾನಸಿಕ ವಿಕಲ್ಪಗಳ ಕುರಿತಾಗಿದೆ. ಅದು ಪರಿಪೂರ್ಣವಲ್ಲದ ವಸ್ತುಗಳ ಬಯಕೆಗಳಿಂದ ಮನಸ್ಸನ್ನು ತಡೆಹಿಡಿಯುವುದು, ಧೈರ್ಯ, ನೆನಪುಶಕ್ತಿ ಮತ್ತು ಏಕಾಗ್ರತೆಯನ್ನು ಬೆಳೆಸುವುದನ್ನೂ ಒಳಗೊಂಡಿದೆ. ಆಯುರ್ವೇದದಲ್ಲಿ ಮನಃಶಾಸ್ತ್ರ ಮತ್ತು ಮನೋವಿಜ್ಞಾನದ ಅಧ್ಯಯನಗಳು ಬಹುವಾಗಿ ನಡೆದಿವೆ. ಅಲ್ಲದೆ ಮನೋವಿಕಲ್ಪದ ಚಿಕಿತ್ಸೆಯಲ್ಲಿ ಹಲವಾರು ಮಾರ್ಗೋಪಾಯಗಳನ್ನು ಅನುಸರಿಸುತ್ತವೆ.

ರಸಾಯನ ಚಿಕಿತ್ಸೆ (ಇಮ್ಯುನೋಮಾಡ್ಯುಲೇಟರ್(ರೋಗ ನಿರೋಧಕತೆಯ ಮಾರ್ಪಾಡು) ಮತ್ತು ಪುನರುಜ್ಜೀವನಗೊಳಿಸುವ ಔಷಧಿಗಳ ಬಳಕೆ)

ರಸಾಯನ ಚಿಕಿತ್ಸೆಯು ಶಕ್ತಿ ಹಾಗೂ ಹುರುಪು -ಉತ್ಸಾಹಗಳನ್ನು ಉತ್ತೇಜಿಸುತ್ತದೆ. ದೇಹದ ಮಾತೃಕೆಯ ಸಮಗ್ರತೆ, ನೆನಪು ಶಕ್ತಿಯ ವೃದ್ಧಿ, ಬುದ್ಧಿ, ರೋಗ ನಿರೋಧಕತೆ, ಯೌವನವನ್ನು ಕಾಯ್ದುಕೊಳ್ಳುವುದು, ಹೊಳಪು, ಕಾಂಪ್ಲೆಕ್ಷನ್ ಮತ್ತು ದೇಹ ಮತ್ತು ಇಂದ್ರಿಯಗಳ ಶಕ್ತಿಯನ್ನು ಪ್ರಶಸ್ತ ಮಟ್ಟದಲ್ಲಿ ನಿರ್ವಹಣೆ ಮಾಡುವುದು, ಇವುಗಳು ಈ ಚಿಕಿತ್ಸಾ ವಿಧಾನದ ಲಾಭಗಳು. ಅವಧಿಗೆ ಮೊದಲೇ ಅಂಗಾಂಶಗಳ ಸವೆಯುವಿಕೆಯನ್ನು ತಡೆಯುವುದು ಮತ್ತು ವ್ಯಕ್ತಿಯ ಸಮಗ್ರ ಆರೋಗ್ಯದ ಉತ್ತೇಜನವೂ ರಸಾಯನ ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿದೆ.

ಆಹಾರ ಕ್ರಮ ಮತ್ತು ಆಯುರ್ವೇದ ಚಿಕಿತ್ಸೆ

ಆಯುರ್ವೇದದಲ್ಲಿ, ಆಹಾರ ಕ್ರಮವನ್ನು ನಿಯಂತ್ರಿಸುವುದು ಚಿಕಿತ್ಸೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದು ಯಾಕೆಂದರೆ, ಆಯುರ್ವೇದವು ಮಾನವ ದೇಹವು ಆಹಾರದ ಉತ್ಪನ್ನವೆಂದು ಪರಿಗಣಿಸುತ್ತದೆ. ವ್ಯಕ್ತಿಯ ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಆತನ ಮನೋಸ್ಥಿತಿಗಳು ಆತ ಸೇವಿಸುವ ಆಹಾರದ ಗುಣಮಟ್ಟದ ಮೇಲೆ ಆಧರಿಸಲ್ಪಟ್ಟಿವೆ. ಮಾನವನು ಸೇವಿಸುವ ಆಹಾರವು ದೇಹದಲ್ಲಿ ಮೊದಲು ಕೈಲ್ ಅಥವಾ ರಸವಾಗಿ ಮಾರ್ಪಾಡಾಗುತ್ತದೆ. ನಂತರ ಅನುಕ್ರಮವಾಗಿ ರಕ್ತ, ಸ್ನಾಯು, ಕೊಬ್ಬು, ಮೂಳೆ, ಮೂಳೆ ಮಜ್ಜೆ, ಪುನರುತ್ಪಾದನಾ ವಸ್ತುಗಳು ಮತ್ತು ಓಜಸ್ ಆಗಿ ಪರಿವರ್ತಿತವಾಗುತ್ತದೆ. ಹೀಗೆ, ಆಹಾರವು, ಎಲ್ಲ ಚಯಾಪಚಯ ಪ್ರಕ್ರಿಯೆಗಳ ಮತ್ತು ಜೀವ ಚಟುವಟಿಕೆಗಳ ಮೂಲವಾಗಿದೆ. ಆಹಾರದಲ್ಲಿನ ಪೌಷ್ಟಿಕಾಂಶದ ಕೊರತೆ ಅಥವಾ ಪರಿವರ್ತನೆಯಲ್ಲಿನ ಅಸಹಜತೆಯು ಹಲವಾರು ರೋಗ ಸ್ಥಿತಿಗೆ ಕಾರಣವಾಗುತ್ತದೆ.

ಭಾರತದಲ್ಲಿ ರಾಷ್ಟ್ರ ಮಟ್ಟದ ಆಯುರ್ವೇದ ಸಂಸ್ಥೆಗಳು

ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ, ನವ ದೆಹಲಿ

  • ರಾಆವಿ (ಆರ.ಎ.ವಿ) ಯು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಧೀನದಲ್ಲಿರುವ ಆಯುಶ್ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್, 1860 ರ ಪ್ರಕಾರ 1988 ರಲ್ಲಿ ನೋದಾಯಿಸಲ್ಪಟ್ಟಿತು.
  • ರಾಆವಿ ಯು 28 ವರ್ಷ ವಯಸ್ಸಿಗಿಂತ ಕೆಳಗಿನ ಆಯುರ್ವೇದದ ಪದವೀಧರರಿಗೆ ಮತ್ತು 33 ವರ್ಷ ವಯಸ್ಸಿನೊಳಗಿನ ಸ್ನಾತಕೋತ್ತರ ಪದವೀಧರರಿಗೆ ಗುರು- ಶಿಷ್ಯ ಪರಂಪರೆಯ ಮೂಲಕ ಅಂದರೆ, ಸಾಂಪ್ರದಾಯಿಕ ರೀತಿಯ ಜ್ಞಾನದ ಹರಿವಿನ ಮೂಲಕ ಉನ್ನತ ಪ್ರಾಯೋಗಿಕ ತರಬೇತಿ ನೀಡುತ್ತದೆ.
  • ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ಸದಸ್ಯ (MRAV) ದ ಎರಡು ವರ್ಷದ ಶಿಕ್ಷಣವು ಅಯುರ್ವೇದ ಸಂಹಿತೆಯ ಕುರಿತಾಗಿ ಪಡೆದಿರುವ ಜ್ಞಾನ ಹಾಗೂ ಟಿಪ್ಪಣಿಗಳ ಮೇಲೆ ಸಾಹಿತ್ಯಕ ಸಂಶೋಧನೆಯನ್ನು ಸುಗಮಗೊಳಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಮುಂದೆ, ಉತ್ತಮ ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಂಹಿತದ ಪರಿಣತರಾಗಬಲ್ಲರು. ಆಯುರ್ವೇದದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು, ತಮ್ಮ ಸ್ನಾತಕೋತ್ತರ ಅಧ್ಯಯನಕ್ಕೆ ಸಂಬಂಧಪಟ್ಟ ಸಂಹಿತೆಯ ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ಪ್ರವೇಶವನ್ನು ಪಡೆಯುತ್ತಾರೆ. ಶಿಷ್ಯರು ತಾವು ತೆಗೆದುಕೊಂಡಿರುವ ವಿಷಯಗಳ ಕುರಿತು ಆಳವಾದ ಚರ್ಚೆ, ಸಂವಾದಗಳಲ್ಲಿ ತೊಡಗಿಕೊಳ್ಳಲು ಸಾಕಷ್ಟು ಕಾಲಾವಕಾಶವನ್ನು ಪಡೆಯುತ್ತಾರೆ.
  • ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ದ ಒಂದು ವರ್ಷದ ಪ್ರಮಾಣ ಪತ್ರ ಶಿಕ್ಷಣದಲ್ಲಿ (ಸರ್ಟಿಫಿಕೇಟ್ ಕೋರ್ಸ್) ಆಯುರ್ವೇದಾಚಾರ್ಯ ಅಥವಾ ತತ್ಸಮಾನ ಪದವಿ ಪಡೆದ ವಿದ್ಯಾರ್ಥಿಗಳು ಮುಂದೆ ಉತ್ತಮ ಆಯುರ್ವೇದದ ಚಿಕಿತ್ಸಕರಾಗಲು ಹೆಸರುವಾಸಿಯಾದ ವೈದ್ಯರಿಂದ ಹಾಗೂ ಸಾಂಪ್ರದಾಯಿಕ ವೈದ್ಯವೃತ್ತಿಯಲ್ಲಿ ತೊಡಗಿರುವವರಿಂದ ಕೆಲವು ನಿರ್ದಿಷ್ಟ ಆಯುರ್ವೇದದ ಚಿಕಿತ್ಸಾ ಕ್ರಮದ ಮೇಲೆ ತರಬೇತಿ ಪಡೆಯುತ್ತಾರೆ.
  • ಈ ವಿಷಯಗಳಿಗೆ ಪ್ರವೇಶ ನೀಡುವುದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ನಂತರದ ರಾಷ್ಟ್ರ ಮಟ್ಟದ ಜಾಹೀರಾತು ನೀಡುವುದರ ಮೂಲಕ. ವಿದ್ಯಾರ್ಥಿಗಳಿಗೆ ಪಾವತಿಯಾಗುವ ಮಾಸಿಯ ಸಹಾಯಧನ ರೂ.15820/- ಆಗಿದ್ದು, ಜೊತೆಗೆ, ಕಾಲ ಕಾಲಕ್ಕೆ ಅನುಗುಣವಾಗಿ ದಿನ ಭತ್ಯೆಯೂ ಲಭಿಸುತ್ತದೆ. ಎಂ ಆರ್ ಎ ವಿ ಯ ವಿದ್ಯಾರ್ಥಿಗಳಿಗೆ ಮಾಸಿಕ ರೂ.2500 ಹೆಚ್ಚುವರಿಯಾಗಿ ನೀಡಲಾಗುತ್ತದೆ.
  • ರಾಷ್ಟ್ರೀಯ ಆಯುರ್ವೇದ ಸಂಸ್ಥೆ ಜೈಪುರ

    • ಈ ಸಂಸ್ಥೆಯು ಪದವಿ ಪೂರ್ವ, ಸ್ನಾತಕೋತ್ತರ ಶಿಕ್ಷಣ ಮತ್ತು ಚಿಕಿತ್ಸಾತ್ಮಕ ಮತ್ತು ಸಂಶೋಧನೆ, ಪಿ ಹೆಚ್ ಡಿ ಪದವಿಯನ್ನು ನೀಡುತ್ತಾ ಬಂದಿದೆ. ಇದು ರಾಜಸ್ಥಾನ ಆಯುರ್ವೇದ ವಿಶ್ವವಿದ್ಯಾಲಯ, ಜೋಧಪುರದ ಭಾಗವಾಗಿದೆ. ಬಿಎಎಂಎಸ್ ಪದವಿ ಶಿಕ್ಷಣಕ್ಕೆ ದಾಖಲಾತಿಯು ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾಗುವ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ನಡೆಯುತ್ತದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಪ್ರಕ್ರಿಯೆಯು ಎನ್ ಐ ಎ ಮತ್ತು ಐ ಪಿ ಜಿ ಟಿ ಆರ್ ಎ ಗಳು ಜಂಟಿಯಾಗಿ ನಡೆಸುವ ರಾಷ್ಟ್ರ ಮಟ್ಟದ ಜಂಟಿ ಪೋಸ್ಟ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ನಡೆಯುತ್ತದೆ.

    ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ,ಜಾಮ್ನಗರ್ (ಗುಜರಾತ)

    • ಗುಜರಾತ ಆಯುರ್ವೇದ ವಿಶ್ವವಿದ್ಯಾಲಯದ ಭಾಗವಾಗಿರುವ ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯು ಆಯುರ್ವೇದದ ಅತ್ಯಂತ ಪುರಾತನ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರವಾಗಿದೆ.
    • ಈ ಸಂಸ್ಥೆಯ ಆಸ್ಪತ್ರೆಗಳು ರೋಗಿಗಳಿಗೆ ಹೊರಾಂಗಣ ಹಾಗೂ ಒಳಾಂಗಣ ಸೌಲಭ್ಯಗಳನ್ನು ಒದಗಿಸುತ್ತದೆ. ವಿವಿಧ ರೋಗಗಳ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸಾ ಕ್ರಮಗಳಾದ ಪಂಚಕರ್ಮ, ಕ್ಷಾರಸೂತ್ರ ಮತ್ತು ಕ್ರಿಯಾ ಕಲ್ಪ ಇತ್ಯಾದಿಗಳನ್ನು ಒದಗಿಸಲಾಗುತ್ತಿದೆ.

    ಮೂಲ :ಆಯುಶ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate