ನೆಲ್ಲಿಕಾಯಿಗೆ ಶ್ರೀಫಲ, ಧಾತ್ರಿ, ಆಮಲಕೀ, ಅಮೃತಾ, ಶಿವಾ, ಶಾಂತಾ, ವೃಷ್ಯಾ, ರೋಚನೀ ಮುಂತಾದ ಅನೇಕ ಹೆಸರುಗಳಿವೆ. ಧಾತ್ರಿದೇವಿಯು ನಮ್ಮನ್ನೆಲ್ಲ ಕಾಪಾಡುವ ಭೂಮಿತಾಯಿಯು ಅವಳೇ ನೆಲ್ಲಿ ಮರದ ಅಧಿಷ್ಠಾತೃದೇವತೆಯು.
ನೆಲ್ಲಿಯ ಕಾಯಿಗೆ ಇಷ್ಟೊಂದು ಪ್ರಾಶಸ್ತ್ಯ ಸಿಕ್ಕುವುದಕ್ಕೆ ಅದರ ಗುಣಗಳೇ ಕಾರಣ. ಹತ್ತು ಕಿತ್ತಳೆಹಣ್ಣುಗಳಿಗೆ ಸಮವಾಗುವಷ್ಟು ವಿಟಮಿನ್ ‘ಸಿ’ ಒಂದು ದಪ್ಪ ನೆಲ್ಲಿಕಾಯಿಯಲ್ಲಿ ಇರುತ್ತದೆಂದು ಹೇಳುತ್ತಾರೆ. ಅದಕ್ಕೆ ಇರುವ ಮೇಲೆ ಹೇಳಿರುವ ಹೆಸರುಗಳೂ ಇದನ್ನೇ ಸೂಚಿಸುತ್ತವೆ. ‘ಶ್ರೀಫಲ’ವೆಂದರೆ ಐಶ್ವರ್ಯ ವನ್ನು ನೀಡುವ ಫಲ. ಆರೋಗ್ಯಭಾಗ್ಯವೇ ಆತ್ಯುತ್ತಮ ವಾದ ಸಂಪತ್ತು. ಧಾತ್ರಿಯೆಂದರೆ ಧರಿಸುವವಳು ‘ಧಿೀಯಂತೆ ಪುರುಷಾರ್ಥಾಃ ಅನಯಾ’ ಎಂದರೆ ಚತುರ್ವಿಧ ಪುರಷಾರ್ಥಗಳೂ ಇದರಿಂದ ಸಿದ್ಧಿಸು ತ್ತವೆ. ಬೃಹದ್ಧರ್ಮಪುರಾಣವು ಅದರ ಮಹಿಮೆ ಯನ್ನು ಹೀಗೆ ವರ್ಣಿಸುತ್ತದೆ.
ಧಾತ್ರೀ ವತ್ಸ ನೃಣಾಂ ಧಾತ್ರೀ ಮಾತೃವತ್ಕುರುತೇ ದಯಾಮ್
ದದ್ಯಾದಾಯಃ ಪಯಃ ಪಾನಾತ್ ಸ್ನಾನಾದ್ವೈ ಧರ್ಮಸಂಚಯಮ್॥
ಬಿಲ್ವಸ್ಸ ಚ ತುಲಸ್ಯಾಶ್ಚ ಯೇ ಗುಣಾ ಕಥಿತಾಃ ಸಖೀ
ತೆೇ ತೇ ಗುಣಾಸ್ಸರ್ವ ಏವ ಅನುಲಶ್ಯಾಂ ಸಮಾಹಿತಾಃ॥
ನೆಲ್ಲಿಯ ರಸಪಾನದಿಂದ ಆಯುರ್ವೃದ್ಧಿ ಯಾದರೆ, ಸ್ನಾನದಿಂದ ಧರ್ಮವೃದ್ಧಿಯಾಗುತ್ತದೆ. ತುಲಸೀ ಮತ್ತು ಬಿಲ್ವಗಳಿಗೆ ಸಮನಾಗಿ ವಿಷ್ಣು ಮತ್ತು ಶಿವರಿಬ್ಬರಿಗೂ ಪ್ರಿಯವಾದ ವೃಕ್ಷವಿದು. ಈ ಬಗ್ಗೆ ಮೇಲೆ ಹೇಳಿದ ಪುರಾಣದಲ್ಲಿ ಒಂದು ಕಥೆಯಿದೆ. :-
ಒಮ್ಮೆ ಪುಣ್ಯತೀರ್ಥವಾದ ಪ್ರಭಾಸಕ್ಷೇತ್ರದಲ್ಲಿ ಲಕ್ಷ್ಮೀ ಪಾರ್ವತಿ ಯರಿಬ್ಬರೂ ಸೇರಿದ್ದರು. ಆಗ ಪಾರ್ವತಿಗೆ ನಾರಾಯಣನನ್ನು ಅರ್ಚಿಸ ಬೇಕೆಂದೂ, ಲಕ್ಷ್ಮಿಗೆ ಶಂಕರನನ್ನು ಪೂಜಿಸಬೇಕೆಂದೂ ಮನಸ್ಸಾಯಿತಂತೆ! ತಾವೇ ಸೃಷ್ಟಿಸಿದ ವಿಶೇಷ ವಸ್ತುವಿನಿಂದ ಪೂಜಿಸಬೇಕೆಂದು ಇಬ್ಬರೂ ಬಯಸಿದರು. ಅವರಿಬ್ಬರ ಕಣ್ಣುಗಳೂ ಭಕ್ತಿ ಭಾವದಿಂದ ಅಶ್ರುಪೂರ್ಣವಾದವು. ಕಣ್ಣೀರಿನ ಈ ಪವಿತ್ರ ಬಿಂದುಗಳು ಭೂಮಿಯ ಮೇಲೆ ಬಿದ್ದಾಗ ಆ ಸ್ಥಳದಲ್ಲಿ ನೆಲ್ಲಿಯ ಮರ ಉದ್ಭವಿಸಿತು. ಅಮಲವೆಂದರೆ ಪವಿತ್ರವೆಂದೂ ‘ಕ’ ಎಂದರೆ ಜಲವೆಂದೂ ಅರ್ಥ. ಆದ್ದರಿಂದ ಈ ವೃಕ್ಷಕ್ಕೆ ‘ಅಮಲಕ’ವೆಂದು ಹೆಸರಾಯಿತು. ಲಕ್ಷ್ಮೀ ಪಾರ್ವತಿಯರು ಅಮಲಕ ಪತ್ರಪುಷ್ಪ ಫಲಗಳಿಂದ ಶಿವ-ವಿಷ್ಣುಗಳಿಬ್ಬರನ್ನು ಪೂಜಿಸಿ ಆನಂದವನ್ನು ಧರಿಸಿದರು. ಆದ್ದರಿಂದ ಅದು ಧಾತ್ರಿಯೆಂಬ ಹೆಸರನ್ನು ಪಡೆಯಿತು.
ಅಮರಕೋಶದಲ್ಲಿ ಇದನ್ನು ತಿಷ್ಯಫಲಾ ಮತ್ತು ವಯಸ್ಥಾ ಎಂಬ ಎರಡು ಹೆಸರುಗಳಿಂದಲೂ ಕರೆದಿದೆ. ‘ವಯಸ್’ ಎಂದರೆ ಯೌವನ. ಅದನ್ನು ಉಳಿಸಿಕೊಡುವ ಫಲವಿದು. ‘ತುಷ್ಯಂತಿ ಅಸ್ಮಿನ್’ ಅಂದರೆ ಇದರಿಂದ ಸಂತೋಷ ಉಂಟಾಗುವುದು. ‘ತಿಷ್ಯಂ ಮಂಗಲಂ ಅಸ್ಯಾಃ’ ಅಂದರೆ ನೆಲ್ಲಿಕಾಯಿಯು ಮಂಗಳ ಪ್ರದವು. ‘ನಿತ್ಯ ಮಾಮಲಕೇ ಲಕ್ಷ್ಮೀಃ’ ಎಂಬ ಮಾತಿನಂತೆ ಅದರಲ್ಲಿ ಲಕ್ಷ್ಮಿಯು ನಿತ್ಯವಾಗಿ ವಾಸ ಮಾಡುವಳು.
ಆರೋಗ್ಯದೃಷ್ಟಿಯಿಂದ ವೈಜ್ಞಾನಿಕವಾಗಿಯೂ ನೆಲ್ಲಿಯು ಬಹಳ ಉಪಯುಕ್ತವಾದುದು ಅದು ಪುಷ್ಟಿಕರವಾಗಿದ್ದು, ತ್ರಿದೋಷಗಳನ್ನು ಹತೋಟಿಯಲ್ಲಿಡುತ್ತದೆ. ಹಿಂದಿನ ದಿನದ ಏಕಾದಶಿಯ ಉಪವಾಸದ ನಂತರ ಇದರ ಸೇವನೆ ವಿಶೇಷ ಲಾಭವನ್ನು ಉಂಟು ಮಾಡುತ್ತದೆ. ನೆಲ್ಲಿ ದೀಪದ ಸುವಾಸನೆಯೂ ಆರೋಗ್ಯವರ್ಧಕವು. ನೆಲ್ಲಿಯ ರಸವನ್ನು ಕೇಶತೈಲಗಳಲ್ಲಿ ಬಳಸುತ್ತಾರೆ. ಅದು ಕೂದಲನ್ನು ಕಪ್ಪಾಗಿ ಮತ್ತು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ನೆಲ್ಲಿಯ ರಸವು ಜೀರ್ಣಶಕ್ತಿಯನ್ನು ವೃದ್ಧಿಪಡಿಸುತ್ತದೆ. ಮಲಬದ್ಧತೆ, ಮೂತ್ರವ್ಯಾಧಿಗಳು, ವಾಂತಿ-ಭೇದಿಗಳು, ಕಣ್ಣಿನ ರೋಗಗಳಿಗೂ ಇದು ಶಮನವನ್ನು ನೀಡುತ್ತದೆ. ಚರಕಸಂಹಿತೆಯಲ್ಲಿ ಈ ಎಲ್ಲ ಗುಣಗಳೂ ಹೇಳಲ್ಪಟ್ಟಿವೆ. ಚರ್ಮರೋಗಗಳಿಗೂ ಇದರಿಂದ ಔಷಧ ತಯಾರಿಸುತ್ತಿದ್ದರಂತೆ. ನೆಲ್ಲಿಯ ಬೀಜಗಳನ್ನು ಋತುದೋಷಗಳ ನಿವಾರಣೆಗೆ ಬಳಸಬಹುದು. ಎಲ್ಲ ಆಯುರ್ವೇದ ಲೇಹಗಳಲ್ಲಿ ನೆಲ್ಲಿಯನ್ನು ಬಳಸುತ್ತಾರೆ. ಬಿಕ್ಕಳಿಕೆಗೆ ಹಿಪ್ಪಲಿ, ಸೋಂಪು ಮತ್ತು ನೆಲ್ಲಿ ರಸಗಳನ್ನು ಕುದಿಸಿ ಕೊಡುತ್ತಾರೆ. ಇದನ್ನು ಜೇನುತುಪ್ಪದ ಜತೆ ಸೇವಿಸಿದರೆ ಅಲ್ಸರ್ ಮತ್ತು ಮೂತ್ರರೋಗಗಳು ದೂರಾಗುತ್ತದೆ. ಇಂತಹ ನೆಲ್ಲಿಕಾಯನ್ನು ಗೌರವದಿಂದ ಪೂಜಿಸಿ, ನಂತರ ಪ್ರತಿದಿನ ಸೇವಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳೋಣ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 5/27/2020