অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಾಳಿನ ಇಂಧನ : ಲಿಥಿಯುಂ

ನಿಮ್ಮ ಮನೆಯಲ್ಲಿ ಸ್ನಾನಕ್ಕೆ ಬಿಸಿ ನೀರು  ಹೇಗೆ ಕಾಯಿಸಿಕೊಳ್ಳುತ್ತೀರ, ಅಡಿಗೆ ಮಾಡಲು ಯಾವ ಇಂಧನ ಬಳಸುತ್ತೀರ ಎಂಬುದರಷ್ಟೇ ಮುಖ್ಯವಾದದ್ದು ನಿಮ್ಮ ವಾಚ್, ಕ್ಯಾಲ್ಕ್ಯುಲೇಟರ್, ಐ-ಪಾಡ್, ಸೆಲ್-ಫೆÇೀನ್, ಲ್ಯಾಪ್-ಟಾಪ್, ಟ್ಯಾಬ್ಲೆಟ್, ಕ್ಯಾಮರಾ, ಹಾಗೂ ಇನ್ನೂ ಅಸಂಖ್ಯಾತ  ವಿದ್ಯುನ್ಮಾನ  ಸಲಕರಣೆಗಳನ್ನು ಒಂದು ಚಾರ್ಜಿನಲ್ಲಿ ಎಷ್ಟು ಕಾಲ ಬಳಸಬಹುದು  ಎಂಬುದೂ  ಮುಖ್ಯ.  ವಿದ್ಯುತ್ತನ್ನು ನೇರವಾಗಿ ಬಳಸುವಷ್ಟೇ ಕೋಶಗಳಲ್ಲಿ ಶೇಖರಿಸಿಟ್ಟು ಬಳಸುವುದೂ ಅಗತ್ಯ.
ಪೆಟ್ರೋಲ್ ಗಾಡಿಗಳಷ್ಟೇ ದುಬಾರಿಯಾದ ‘ರೇವ’ ದಂತಹ ವಿದ್ಯುತ್ ಕಾರುಗಳು, ಈಗೀಗ ಬರುತ್ತಿರುವ ವಿದ್ಯುತ್ ದ್ವಿಚಕ್ರ ವಾಹನಗಳು ಏಕೆ ಜನಪ್ರಿಯವಾಗುತ್ತಿಲ್ಲವೆಂದರೆ, ಪೆಟ್ರೋಲ್ ಗಾಡಿಗಳಂತೆ ಅವು ಹೆಚ್ಚು ಭಾರವನ್ನೂ ಹೊರಲಾರದು, ಹೆಚ್ಚು ದೂರವನ್ನೂ ಕ್ರಮಿಸಲಾರದು, ಹೆಚ್ಚು ವೇಗವಾಗಿಯೂ ಹೋಗಲು ಸಾಧ್ಯವಿಲ್ಲ. ಇಂತಹ ವಾಹನಗಳು ತಮ್ಮ ಬ್ಯಾಟರಿಗಳ ಕ್ಷಮತೆಯ ಮೇಲೆ ಅವಲಂಬಿಸಿವೆ.  ಬ್ಯಾಟರಿಗಳು ಹೆಚ್ಚು ಶಕ್ತಿ ಸಾಂದ್ರತೆ ಹೊಂದಿ ಭರವಸನೀಯವಾಗಿ ದೀರ್ಘಾವಧಿ ಬಳಸುವಂತಾದರೆ ಹಸಿರು ವಿದ್ಯುತ್ ಸಾಂಪ್ರದಾಯಿಕ ಇಂಧನಕ್ಕೆ ಬೀಳ್ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ.
ಇಪ್ಪತ್ತು ಗಂಟೆಗಳ ಕಾಲ ಸತತವಾಗಿ ಲ್ಯಾಪ್-ಟಾಪ್ ಬಳಸುವುದು, ಐನೂರು ಕಿಲೋಮೀಟರ್ ದೂರ ಒಂದೇ ಚಾರ್ಜಿನಲ್ಲಿ ವಾಹನ ಓಡಿಸುವುದು ಎಂದರೆ ಹೇಗಿರುತ್ತದೆ? ಇದು ಕೇವಲ ಕನಸಿನ ಮಾತಾಗಿ ಉಳಿದಿಲ್ಲ. ಇಷ್ಟರಲ್ಲೇ ಆ ದಿನಗಳು ಬರಲಿವೆ.  ಈ ಸಾಧನೆಗೆ ಮೂಲಕಾರಣ ಲಿಥಿಯಮ್.

ಏನಿದು, ಲಿಥಿಯಮ್ ಎಂದರೆ?


ಲಿಥಿಯಮ್ ಬೆಳ್ಳಿಯಂತೆ ಬಿಳಿಯಾದ ಮೃದುವಾದ ಲೋಹ. ಅದನ್ನು ರಸಾಯನ ಶಾಸ್ತ್ರದಲ್ಲಿ ಲಿ ಎಂದು ಗುರುತಿಸುತ್ತಾರೆ. ಪ್ರಪಂಚದ ಅತ್ಯಂತ ಹಗುರವಾದ ಲೋಹ. ಇತರ ಎಲ್ಲ ಆಲ್ಕಲಿ ಲೋಹಗಳಂತೆ ಲಿಥಿಯಮ್ ದಹ್ಯ ವಸ್ತು. ಈ ಕಾರಣದಿಂದಲೇ ಲಿಥಿಯಮ್‍ಅನ್ನು  ಸೀಮೆ ಎಣ್ಣೆಯಲ್ಲಿ (ಖನಿಜ ತೈಲ) ರಕ್ಷಿಸಿರುತ್ತಾರೆ.  ಅದನ್ನು ಚಾಕುವಿನಲ್ಲಿ ಕತ್ತರಿಸಿದರೆ ಲೋಹದ ಹೊಳಪನ್ನು ತೋರುತ್ತದೆ.  ಆದರೆ ತೇವೇಂಶ ಉಳ್ಳ ಗಾಳಿಗೆ ಒಡ್ಡಿದರೆ ತಕ್ಷಣ ತುಕ್ಕು ಹಿಡಿದು ತನ್ನ ಹೊಳಪನ್ನು ಕಳೆದುಕೊಂಡು ಬೂದು, ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಗುಣದಿಂದಾಗಿ ಲಿಥಿಯಮ್ ಪ್ರಕೃತಿಯಲ್ಲಿ ಸ್ವತಂತ್ರ ರೂಪದಲ್ಲಿ  ದೊರೆಯುವುದಿಲ್ಲ. ಅದರ ಕಾಂಪೌಂಡ್‍ಗಳ ರೂಪದಲ್ಲಿ ಲಭ್ಯವಿರುತ್ತದೆ.

ಲಿಥಿಯಮ್ ವಿದ್ಯುದ್ವಾಹಿ ಕಣವಾಗಿದ್ದು, ನೀರಿನಲ್ಲಿ ಕರಗಬಲ್ಲ ಗುಣವನ್ನು ಹೊಂದಿರುವುದರಿಂದ ಸಮುದ್ರ ನೀರಿನಲ್ಲಿ ಹಾಗೂ ಜೇಡಿಮಣ್ಣಿನಲ್ಲಿ ಇದು ಲಭ್ಯ. ಲಿಥಿಯಮ್ ಕ್ಲೋರೈಡ್ ಮತ್ತು ಪೆÇಟ್ಯಾಶಿಯಮ್ ಕ್ಲೋರೈಡ್ ಗಳಿಂದ ಲಿಥಿಯಮ್ ಅನ್ನು ಎಲೆಕ್ಟ್ರೋಲೈಟ್ ರೂಪದಲ್ಲಿ ಬೇರ್ಪಡಿಸುತ್ತಾರೆ.

ಲಿಥಿಯಮ್ ಅಸ್ಥಿರವಾದ ನ್ಯೂಕ್ಲಿಯಸ್ ಹೊಂದಿರುವುದರಿಂದ ಅಣು ವಿಜ್ಞಾನಕ್ಕೆ ನಿಕಟವಾಗಿ ಸಂಬಂಧಿಸಿದೆ. 1932ರಲ್ಲಿ ಲಿಥಿಯಂ ಆಟಂಗಳನ್ನು ಹೀಲಿಯಂ ಆಟಂಗಳಾಗಿ ಪರಿವರ್ತನೆ ಮಾಡಿದುದು ಮೊಟ್ಟಮೊದಲ ಬಾರಿಗೆ ಮಾನವ ನಿರ್ಮಿತ ಅಣು-ಪರಿಣಾಮವೆನಿಸಿದೆ. ಪರಮಾಣು ಶಕ್ತಿಯ ನಿರ್ಮಾಣದಲ್ಲಿ ಇದರ ಪಾತ್ರ ದೊಡ್ಡದು.

ಲಿಥಿಯಮ್ ಮತ್ತು ಅದರ ಕಾಂಪೌಂಡುಗಳಿಂದ ಅನೇಕ ಕೈಗಾರಿಕಾ ಪ್ರಯೋಜನಗಳಿವೆ. ಶಾಖವನ್ನು ತಡೆದುಕೊಳ್ಳ  ಬಲ್ಲ ಗಾಜು, ಪಿಂಗಾಣಿ, ವಿಮಾನಗಳನ್ನು ನಿರ್ಮಿಸಲು ಬೇಕಾಗುವ ಹಗುರ ಹಾಗೂ ಶಕ್ತಿಶಾಲಿ ಮಿಶ್ರಲೋಹಗಳ ಉತ್ಪಾದನೆ,  ಲಿಥಿಯಮ್-ಅಯಾನ್ ಬ್ಯಾಟರಿಗಳ ನಿರ್ಮಾಣದಲ್ಲಿ ಇವು ಉಪಯುಕ್ತ. ಗಮನಾರ್ಹ ಪ್ರಮಾಣದಲ್ಲಿ ಎಲ್ಲ ಜೀವರಾಶಿಗಳಲ್ಲೂ ಲಿಥಿಯಮ್ ಅಂಶವಿರುತ್ತದೆ. ಆದರೆ ಅದು ಇಲ್ಲದಿದ್ದರೂ ಮನುಷ್ಯ ಸಂಪೂರ್ಣವಾಗಿ ಆರೋಗ್ಯವಾಗಿರಬಲ್ಲ. ಹೀಗಾಗಿ, ಅದರ ಅಸ್ತಿತ್ವ ಯಾವ ನಿರ್ದಿಷ್ಟ   ಜೀವಕ್ರಿಯೆಗೂ ಸಂಬಂಧಿಸಿಲ್ಲ.

ಆದರೆ ಮನುಷ್ಯನ ದೇಹಕ್ಕೆ ಲಿಥಿಯಮ್ ಅಯಾನುಗಳನ್ನು ನೀಡಿ ಮನಸ್ಥಿತಿಯನ್ನು ಸ್ಥಿಮಿತಕ್ಕೆ ತರಲು ಸಾಧ್ಯವಿದೆ.  ಲಿಥಿಯಮ್ ನರಮಂಡಲದ ಮೇಲೆ ಪ್ರಭಾವಬೀರಬಲ್ಲದು.

ಲಿಥಿಯಮ್ ಇತರ ಲೋಹಗಳಂತೆ ಶಾಕ ಹಾಗೂ ವಿದ್ಯುತ್ ವಾಹಕ. ಇತರ ಆಲ್ಕಲಿ ಲೋಹಗಳಿಗೆ ಹೋಲಿಸಿದರೆ ಇದರ ರಿಯಾಕ್ಟಿವಿಟಿ ಕಡಿಮೆ ಎಂದೇ ಹೇಳಬಹುದು. ಲಿಥಿಯಮ್ ಲೋಹವೇ ಆದರೂ ಚಾಕುವಿನಲ್ಲಿ ಕತ್ತರಿಸಬಹುದಾದಷ್ಟು ಮೃದು. ಬೇರಾವುದೇ ಲೋಹಕ್ಕಿಂತ ಬೇಗ ಕರಗುತ್ತದೆ. ಕೇವಲ 180 ಡಿಗ್ರಿ ಸೆಂ. ತಾಪಮಾನದಲ್ಲಿ ಕರಗಬಲ್ಲದು. ಆದರೆ ಇದು ಆಲ್ಕಲೀ ಲೋಹಗಳಲ್ಲೇ ಅತಿ ಹೆಚ್ಚಿನ ಕರಗುವ ತಾಪಮಾನ. ಪೀರಿಯಾಡಿಕ್ ಟೇಬಲ್ಲಿನಲ್ಲಿರುವ ಯಾವುದೇ  ಲೋಹಕ್ಕಿಂತಲೂ ಇದು ಅತ್ಯಂತ ಹಗುರವಾದ ಲೋಹ.  ಹೀಗಾಗಿ ಇದು ನೀರಿನಲ್ಲೂ ಎಣ್ಣೆಯಲ್ಲೂ ತೇಲುತ್ತದೆ.  ಅದರ ಸಾಂದ್ರತೆ ಬಹಳ ಕಡಿಮೆ (0.534 g/m) ಇದೆ. ಲಿಥಿಯಮ್ ನೀರಿನಲ್ಲಿ ತೇಲುತ್ತದೆ ಹಾಗೂ ನೀರಿನೊಂದಿಗೆ ಪ್ರತಿಕ್ರಿಯಿಸುತ್ತದೆ. ಹೀಗಾಗಿ ಇದನ್ನು ಸಾಧಾರಣವಾಗಿ ಪೆಟ್ರೋಲಿಯಮ್ ಜೆಲ್ಲಿಯಲ್ಲಿ ರಕ್ಷಿಸಿಡುತ್ತಾರೆ.

ಲಿಥಿಯಮ್ಮನ್ನು ಬೆಂಕಿಯ ಮುಂದಿಟ್ಟಾಗ ವಿಶಿಷ್ಠವಾದ ಕೆಂಪು ಬಣ್ಣವನ್ನು  ಹೊಮ್ಮಿಸುತ್ತದೆ. ಆದರೆ ಅದು ಸುಟ್ಟಾಗ ಪ್ರಖರವಾದ ಬೆಳ್ಳಿ ಬಣ್ಣವನ್ನು ತಳೆಯುತ್ತದೆ. ನೀರು ಅಥವಾ ಆವಿಯ ಎದುರಿನಲ್ಲಿ ಆಮ್ಲಜನಕದೊಂದಿಗೆ ಲಿಥಿಯಮ್ ಸಂಪರ್ಕಗೊಂಡಾಗ  ಅದು ಹತ್ತಿ ಉರಿಯುತ್ತದೆ. ಲಿಥಿಯಮ್ ದಹ್ಯವಸ್ತುವಾಗಿದ್ದು, ಗಾಳಿಗೂ ನೀರಿಗೂ ಸೋಕಿದಾಗ ಆಸ್ಫೋಟಗೊಳ್ಳಬಹುದು.
ಇಷ್ಟೆಲ್ಲಾ ಗುಣಗಳು, ಸಾಮರ್ಥ್ಯವೂ ಇರುವ ಲಿಥಿಯಮ್ ಎಲ್ಲಿ ಸಿಗುತ್ತದೆ? ಮಹಾಸ್ಫೋಟದ ಪರಮಾಣು ಅಧ್ಯಯನಕ್ಕೆ ಒಳಗಾದ ಮೂರು ಧಾತುಗಳಲ್ಲಿ ಲಿಥಿಯಮ್ ಸಹ ಒಂದು (ಇನ್ನುಳಿದವು ಹೀಲಿಯಮ್ ಮತ್ತು ಹೈಡ್ರೋಜಿನ್). ಹೊಸ ನಕ್ಷತ್ರಗಳಲ್ಲಿ ಹೇರಳವಾಗಿಯೂ ಹಳೆಯ ನಕ್ಷತ್ರಗಳಲ್ಲಿ  ಕಡಿಮೆ ಪ್ರಮಾಣದಲ್ಲಿಯೂ ಇರುತ್ತವೆ.

ಭೂಮಿಯಲ್ಲಿ ಅದರ ಸ್ಥಿರ ಐಸೋಟೋಪ್ (lithium-6 , lithium-7) ರೂಪಗಳಲ್ಲಿ ಸುಮಾರು 230 ಬಿಲಿಯನ್ ಟನ್‍ಗಳಷ್ಟು ಸಮುದ್ರದ ನೀರಿನಲ್ಲಿ ಲಭ್ಯವಿದೆ.  (.14 ರಿಂದ .25 ಪಾರ್ಟ್ಸ್ ಪರ್ ಮಿಲಿಯನ್). ಅದು ಖನಿಜ ರೂಪದಲ್ಲಿ ಇಗ್ನಿಯಸ್ ಕಲ್ಲುಗಳಲ್ಲಿ , ಪೆಗ್‍ಮಟೈಟ್ ರೂಪದಲ್ಲಿ ಸಿಗುತ್ತದೆ.  ಹೆಕ್ಟೊರೈಟ್ ಎಂಬ ಜೇಡಿಮಣ್ಣಿನಲ್ಲಿ ಸಹ ಇದು ಲಭ್ಯವೆಂದು ಕಂಡು ಹಿಡಿಯಲಾಗಿದೆ.  ಪ್ರಪಂಚದಲ್ಲಿ ಅತ್ಯಧಿಕ ಪ್ರಮಾಣದಲ್ಲಿ  ಲಭ್ಯವಿರುವ 25ನೆಯ ಧಾತು ಇದು.  ಅಂದರೆ, ನಿಕಲ್ ಮತ್ತು ಸೀಸ ಎಷ್ಟು ಸುಲಭವಾಗಿ ಹೇರಳವಾಗಿ ಲಭ್ಯವೋ ಅಷ್ಟೇ ಹೇರಳವಾಗಿ ಸಿಗುತ್ತದೆ. ಇಷ್ಟಾದರೂ ಇದನ್ನು ರೇರ್ ಎಲಿಮೆಂಟ್ ಎಂದು ಪರಿಗಣಿಸಲಾಗಿದೆ.  ಪ್ರಪಂಚದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ 5.4 ಮಿಲಿಯನ್ ಟನ್‍ಗಳಷ್ಟು ಲಿಥಿಯಮ್ ನಿಕ್ಷೇಪವಿರುವುದು ಬೊಲೀವಿಯಾದ ಸಲಾರ್ ದೆ ಯೂನಿ ಎಂಬಲ್ಲಿ. ಇದಲ್ಲದೆ ಆಸ್ಟ್ರೇಲಿಯಾ, ಅರ್ಜಂಟೈನಾ ಹಾಗೂ ಚೈನಾದಲ್ಲಿಯೂ  ತಲಾ ಏಳು ಮಿಲಿಯನ್ ಟನ್‍ಗಳಷ್ಟು ಲಭ್ಯವಿದೆ. ಇಷ್ಟರಲ್ಲಿ 52 ಬಿಲಿಯನ್ ಞWh ರಷ್ಟು ವಿದ್ಯುತ್ ಉತ್ಪಾದಿಸಬಲ್ಲದು. ಒಂದು ವೇಳೆ ಎಲ್ಲಾ ಲಿಥಿಯಮ್‍ಅನ್ನೂ ಕಾರ್ ಬ್ಯಾಟರಿ ಮಾಡಲು ಬಳಸಿದರೆ 24 ಞWh ಬ್ಯಾಟರಿ ಉಳ್ಳ ಸುಮಾರು ಎರಡು ಬಿಲಿಯನ್ ಕಾರುಗಳಿಗೆ ಸಾಕಾಗುತ್ತದೆ.

‘ಸಂಪನ್ಮೂಲ ಶಾಪ’ಗ್ರಸ್ಥ  ಬೊಲೀವಿಯಾ


ಸಮಾಜ ವಿಜ್ಞಾನಿಗಳು ಇದನ್ನು  ‘ಸಂಪನ್ಮೂಲ ಶಾಪ’ ಎಂದು ಕರೆಯುತ್ತಾರೆ. ಯಥೇಚ್ಛವಾಗಿ ನೈಸರ್ಗಿಕ ಸಂಪನ್ಮೂಲಗಳು ಇದ್ದರೂ ಸಹ  ಆರ್ಥಿಕ ಅಭಿವೃದ್ಧಿಯನ್ನು  ಕಾಣದೆ ನತದೃಷ್ಟ ವಾಗಿರುವ ಪರಿಸ್ಥಿತಿಯನ್ನು ಹೀಗೆನ್ನುತ್ತಾರೆ. ಅದರ ಸಂಪನ್ಮೂಲವೇ ಅದಕ್ಕೆ ಶಾಪವಾಗುತ್ತದೆ. ( ಬ್ರಿಟಿಷ್ ಕಾಲದ ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾದದ್ದೇನಲ್ಲ). ಇದಕ್ಕೆ ಒಳ್ಳೆಯ ನಿದರ್ಶನಬೇಕೆಂದರೆ ಬೊಲಿವಿಯಾದ ಪೆÇಟೋಸಿ ಯಲ್ಲಿರುವ ಸೆರ್ರೋ ರಿಚೋ (ಶ್ರೀಮಂತ ಬೆಟ್ಟ)ಗೆ ಹೋಗಬೇಕು. ಕಳೆದ ಮುನ್ನೂರು ವರ್ಷಗಳಿಂದ ಇಲ್ಲಿ ಸ್ಪ್ಯಾನಿಷ್ ಸಾಮ್ರಾಜ್ಯ ಗಣಿಗಾರಿಕೆ ಮಾಡಿ ಅಪಾರ ಪ್ರಮಾಣದ ಬೆಳ್ಳಿಯನ್ನು ತನ್ನ ದೇಶಕ್ಕೆ ಸಾಗಿಸಿದೆ . ಇಲ್ಲಿಯ ಜನ ಕೇವಲ ಆ ಗಣಿಗಳಲ್ಲಿ ಕೂಲಿಗಳಾಗಿ ಜೀತಮಾಡಿದ್ದಾರೆ ಈಗ ಸೆರ್ರೋ ರಿಚೋ ದಲ್ಲಿ ಏನೂ ಉಳಿದಿಲ್ಲ.

ಬೊಲೀವಿಯಾ ಚರಿತ್ರೆಯ ಉದ್ದಕ್ಕೂ ಒಂದಲ್ಲಾ ಒಂದು ಅಮೂಲ್ಯ ನಿಕ್ಷೇಪ ದೊರೆಯುತ್ತಲೇ ಹೋಗುತ್ತಿದೆ, ಅದನ್ನು ಅವರಿವರು ಲಪಟಾಯಿಸುತ್ತಲೇ ಬಂದಿದ್ದಾರೆ.  ದೇಶದ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಪ್ರಗತಿಕಾಣದೇ ಅದು ಹಾಗೇ ಉಳಿದಿದೆ. ಬೆಳ್ಳಿಯ ನಂತರ ತವರ (ಟಿನ್), ನಂತರ ತೈಲ ಮತ್ತು ನೈಸರ್ಗಿಕ ಅನಿಲ. ಒಂದು ವ್ಯತ್ಯಾಸವೆಂದರೆ ಆಗ ಸ್ಪ್ಯಾನಿಷರು ಈಗ ಐ.ಎಂ.ಎಫ್., ವಿಶ್ವ ಬ್ಯಾಂಕ್ ಹಾಗೂ ಅವರ ಖಾಸಗೀಕರಣದ ಯೋಜನೆಗಳು.

ಇತ್ತೀಚೆಗೆ ಅಮಾಯಕ ಬೊಲೀವಿಯಾ   ಮೇಲೆ ಪ್ರಪಂಚದ ಕಣ್ಣು ಬಿದ್ದಿರುವುದು ಅದರ ಲಿಥಿಯಮ್ ನಿಕ್ಷೇಪಕ್ಕಾಗಿ. ವಿದ್ಯುನ್ಮಾನ ಕ್ಷೇತ್ರದಲ್ಲಿ ಲಿಥಿಯಮ್‍ಗಿರುವ ಉಜ್ವಲ ಭವಿಷ್ಯ ಗಮನದಲ್ಲಿಟ್ಟು ನೋಡಿದರೆ, ಬೊಲೀವಿಯಾ ಅತ್ಯಂತ ಶ್ರೀಮಂತ ದೇಶವಾಗಿ ಅಭಿವೃದ್ಧಿಯಾಗಬಲ್ಲದು. ಆದರೆ ಸರ್ಕಾರ ಎಷ್ಟು ಜಾಣತನದಿಂದ ಈ ಕೊನೆಯ (?) ಅವಕಾಶವನ್ನು ಬಳಸಿಕೊಂಡು ಶ್ರೀಮಂತವಾಗುತ್ತದೆ ಎಂದು ಕಾದು ನೋಡಬೇಕಿದೆ.

ಸಲಾರ್ ದಿ ಯೂನಿ ಹತ್ತು ಸಾವಿರ ಚದರ ಕಿಲೋಮೀಟರ್ ನಷ್ಟು ದೊಡ್ಡದಾದ ಉಪ್ಪುಕಾಡು.  ಇದರ ಮೇಲೆ ಕಣ್ಣು ಹಾಕಿರುವವರಲ್ಲಿ ಪ್ರಮುಖರೆಂದರೆ, ಜಪಾನಿನ ದೈತ್ಯರು ಮಿಟ್ಸುಬಿಷಿ, ಹಾಗು ಸುಮಿಟೋಮೋ. ಫ್ರೆಂಚ್ ವಿದ್ಯುತ್-ವಾಹನ ತಯಾರಕ  ಬೊಲೇರೋ ಹಾಗೂ  ದಕ್ಷಿಣ ಕೊರಿಯಾ ಬ್ರೆಝಿಲ್ ಮತ್ತು ಇರಾನ್.
ಈ ಮೊದಲು ಬೆಳ್ಳಿ ನಿಕ್ಷೇಪಕ್ಕೆ ಮಾಡಿದಂತೆ  ವಿದೇಶೀಯರಿಗೆ ಗಣಿಗಾರಿಕೆಗೆ ಅವಕಾಶ ಕೊಟ್ಟು ಸುಮ್ಮನಾಗದೇ ಈ ಬಾರಿ 5.7 ಮಿಲಿಯನ್ ಡಾಲರ್‍ಗಳಷ್ಟು ಬಂಡವಾಳ ಹೂಡಿ ತನ್ನ ಒಡಲಿನಿಂದ ಲಿಥಿಯಮ್‍ಅನ್ನು ಹೇಗೆ ಪ್ರತ್ಯೇಕಿಸಬೇಕೆಂದು ಕಲಿಯುತ್ತಿದೆ. ಇದಕ್ಕಾಗಿ  ವೈಜ್ಞಾನಿಕ ಸಲಹಾ ಮಂಡಲಿಯೊಂದನ್ನು ರಚಿಸಿಕೊಂಡಿದೆ.  ಬೊಲೀವಿಯಾದ ಇಂದಿನ ಮುಖ್ಯ ಉದ್ದೇಶ  ಬಹಳ ಸರಳವಾದದ್ದು. ತನ್ನ ದೇಶದ ಜನರನ್ನು ಬಡತನದಿಂದ ಪಾರು ಮಾಡುವುದು.  ಆದರೆ ಹಾಗೆ ಮಾಡಲು ಹಲವಾರು ಅಡ್ದಿ ಆತಂಕಗಳನ್ನು ಎದುರಿಸ ಬೇಕಾಗುತ್ತದೆ. ವಿಶ್ವದಲ್ಲಿ ತಯಾರಾಗಲಿರುವ ವಿದ್ಯುತ್ ಕಾರುಗಳ ಕಾರ್ಖಾನೆಗಳೇ ಬೊಲೀವಿಯಾ ಎದುರು ನೋಡುತ್ತಿರುವ ಗ್ರಾಹಕರು.  ಆದರೆ  ವಿ-ಕಾರುಗಳು ಎಂದು ಜನಪ್ರಿಯವಾಗುತ್ತವೆ, ಅದರ ಮಾರುಕಟ್ಟೆ ಎಷ್ಟು ದೊಡ್ದದಾಗಿರುತ್ತದೆ ಎಂಬುದು ಇನ್ನೂ ಊಹೆಯ ಹಂತದಲ್ಲಿದೆ.  ಬೊಲಿವಿಯಾ  ಗಾಜು ಹಾಗೂ ಪಿಂಗಾಣಿ  ಮಾರುಕಟ್ಟೆಗಳ ಕಡೆ ಗಮನ ಹರಿಸಬಹುದು ಆದರೆ ಅವು ಅಷ್ಟು ಲಾಭದಾಯಕವಲ್ಲ. ಮತ್ತೊಂದು ಅವಲಂಬಿಸ ಬಹುದಾದ  ಗ್ರಾಹಕ ವರ್ಗವೆಂದರೆ ವಿದ್ಯುನ್ಮಾನ ವಸ್ತುಗಳಿಗೆ ಬ್ಯಾಟರಿ ತಯಾರಿಸುವವರು.

ಅಂತಹ ಒಂದು ಉದ್ಯಮ ಬೊಲೀವಿಯಾದಲ್ಲಿ ಸ್ಥಾಪಿಸಲು  ಎಷ್ಟು ಖರ್ಚಾಗಬಹುದು? ಸುಮಾರು ಇನ್ನೂರು ಮಿಲಿಯನ್ ಡಾಲರ್‍ಗಳು. ಆರ್ಥಿಕವಾಗಿ ಅಭಿವೃದ್ಧಿಯಾಗದ ದೇಶದಲ್ಲಿ ಇದು ಸಾಧ್ಯವಿಲ್ಲದಿರುವುದರಿಂದ  ಬಂಡವಾಳ ಹೂಡಿಕೆದಾರರೊಂದಿಗೆ ಪಾರ್ಟ್ನರ್‍ಶಿಪ್ ಗಾಗಿ ಹವಣಿಸುತ್ತಿದೆ.  ಇದೇನಾದರೂ ಯಶಸ್ವಿಯಾಗಿ ಹೊಸ ಮೂಲದಿಂದ ಆದಾಯ ಬರಲು ಪ್ರಾರಂಬಿಸಿದರೆ ಬೊಲೀವಿಯಾ ಜನರ  ಸ್ಥಿತಿ ಉತ್ತಮಗೊಳ್ಳಬಹುದೇ ಎಂದರೆ ನಮ್ಮ ದೇಶದಲ್ಲಿರುವಂತೆ ಬ್ರಷ್ಟಾಚಾರ, ದುಂದುವೆಚ್ಚ,  ಸ್ವಜನ ಪಕ್ಷಪಾತ ಇವೆಲ್ಲ ತಲೆಯೆತ್ತುವ ಸಾಧ್ಯತೆಗಳಿವೆ.

ಪರಿಸರ ಪ್ರಭಾವಗಳು:

ಉತ್ತರದ ಶ್ರೀಮಂತ ರಾಷ್ಟ್ರಗಳಿಗೆ ‘ಶುಚಿಯಾದ’ ಇಂಧನ ಒದಗಿಸುವ ಉತ್ಸಾಹದಲ್ಲಿ ಬೊಲೀವಿಯಾದ ಸುಂದರ ಮತ್ತು ಅಪರೂಪದ ವಿಶ್ವದ ಏಕೈಕ ಸಲಾರ್ ಉಪ್ಪುಕಾಡನ್ನು ನಾಶಮಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಬೊಲಿವಿಯಾಗೆ ತೀವ್ರ ನೀರಿನ ಕ್ಷಾಮ ವುಂಟಾಗುವ ಸಾಧ್ಯತೆ ಇದೆ. ಈಗಾಗಲೇ ಲಾಮಾ –ಕುರುಬರಿಗೆ, ಕ್ವಿನೋವಾ ರೈತರಿಗೆ ಹಾಗೂ ಪ್ರವಾಸಿಗಳಿಗೆ ನೀರಿನ ಕೊರತೆ ಕಾಡುತ್ತಿದೆ.   ಲಿಥಿಯಮ್ ಉತ್ಪಾನದೆಯಲ್ಲಿ ಬಳಕೆಯಾಗುವ ನೀರಿನ ಪ್ರಮಾಣ ಬಹಳ ಕಡಿಮೆ ಎಂದು ಹೇಳುವುದು ಕೇವಲ ಇದಕ್ಕೆ ಜನ ಅಡ್ಡಿ ಮಾಡದಿರಲಿ ಎಂದು.

ನೀರು, ಗಾಳಿ ಮತ್ತು ಭೂಮಿಯ ಮಾಲಿನ್ಯವಾಗುವ ಸಾಧ್ಯತೆಗಳಿವೆ. ನಿರೀಕ್ಷಿತ 30.000- 40,000 ಟನ್‍ಗಳ ಲಿಥಿಯಮ್ ಉತ್ಪಾನದೆ ಪ್ರತಿ ವರ್ಷ ಮಾಡಬೇಕಾದರೆ ಭಾರೀ ಪ್ರಮಾಣದ ವಿಷಕಾರೀ ರಾಸಾಯನಿಕಗಳನ್ನು ಪರಿಷ್ಕರಿಸಬೇಕಾಗುತ್ತದೆ. ಇದರಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗಬಹುದು. ಹಣ ಮಾಡುವ ತಕ್ಷಣದ ಪ್ರೇರಣೆಯೇ ಪ್ರಧಾನವಾಗಿರುವಲ್ಲಿ ಸರ್ಕಾರ ಪರಿಸರದ ಕಾಳಜಿಯನ್ನೂ  ತೋರಿಸುವುದರ ಬಗ್ಗೆ ಅನುಮಾನಗಳಿವೆ.  ಈಗ ಬೊಲೀವಿಯಾ  ಮುಖ್ಯವಾಗಿ ಅವಲಂಬಿಸಿರುವ ವ್ಯವಸಾಯ ಹಾಗೂ ಪ್ರವಾಸೋದ್ಯಮಕ್ಕೆ ಇದರಿಂದ ಏಟು ಬೀಳುವ ಸಾಧ್ಯತೆ ಇದೆ.

ಒಂದಂತೂ ಖಂಡಿತ. ಈಗ ವಿಶ್ವ ಮಾರುಕಟ್ಟೆಯಲ್ಲಿ ಲಿಥಿಯಮ್ಮಿಗೆ ಅಪಾರ ಬೇಡಿಕೆ ಇರುವುದಂತೂ ನಿಜ. ಹಾಗೂ ಬೊಲೀವಿಯದ ಖನಿಜ ಶ್ರೀಮಂತಿಕೆ ಅದಕ್ಕೆ ಅಪಾರ ವರಮಾನ ತರುವ ಸಾಧ್ಯತೆಯೂ ಇದೆ. ಆದರೆ ಇದರಿಂದ ಲಾಭ ಬೊಲೀವಿಯಾಗೆ ಆಗುತ್ತದೋ ಅಥವಾ ಅದರ ಸಂಪನ್ಮೂಲಗಳನ್ನು ದೋಚುವ ದೇಶಗಳಿಗೋ? ಬೊಲೀವಿಯಾ ಇದುವರೆಗೂ ಅನುಭವಿಸುತ್ತಲೇ ಬಂದಿರುವ ತನ್ನ ಸಂಪನ್ಮೂಲ ಶಾಪದಿಂದ ವಿಮೋಚನೆ ಪಡೆಯುವ ಏಕೈಕ ಉದ್ದೇಶದಿಂದ ಮತ್ತಷ್ಟು ಶಾಪಕ್ಕೆ ಗುರಿಯಾಗಬಾರದು.

ಹೊಸ ತಲೆಮಾರಿನ ಸುಧಾರಿತ ಬ್ಯಾಟರಿ


ಹೊಸ ತಲೆಮಾರಿನ ವಿದ್ಯುತ್ ಕಾರುಗಳಿಗೆ ಸುಧಾರಿತ ಪಾಲಿಮರ್‍ಗಳೊಂದಿಗೆ ಲಿಥಿಯಂ  ಅಯಾನ್ ಬ್ಯಾಟರಿ ಬರಲಿವೆ. ದೊಡ್ಡ ಗಾತ್ರದ, ಹೆಚ್ಚು ಅಪಾಯವಿಲ್ಲದ ಹೆಚ್ಚು ಶಕ್ತಿಯನ್ನು ಶೇಖರಿಸಬಲ್ಲ ಲಿಥಿಯಮ್ ಅಯಾನ್ ಬ್ಯಾಟರಿ ಸಂಶೋಧನೆಗಳು ನಡೆಯುತ್ತಿವೆ.   ಈಗಾಗಲೇ ಪಾಲಿಮರ್ ಮೆಂಬ್ರೇನ್ ಬ್ಯಾಟರಿಗಳು  ಐ-ಪಾಡ್, ಲ್ಯಾಪ್‍ಟಾಪ್, ಮತ್ತಿತರ ಒಯ್ಯಬಹುದಾದ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುತ್ತಿದೆ. ಅವುಗಳಲ್ಲಿರುವ ಕೂದಲ ಎಳೆಯಷ್ಟು ಸಣ್ಣ ಸಪರೇಟರ್‍ಗಳು ಕೋಶದ ಮೂಲಕ ಹರಿವ ಎಲೆಕ್ಟ್ರಾನ್ ಗಳನ್ನು ನಿಯಂತ್ರಿಸುತ್ತದೆ.  ಅದರ ವೈಫಲ್ಯದಿಂದ  ಬ್ಯಾಟರಿಗಳು ಅತಿಯಾಗಿ ಬಿಸಿಯಾಗುತ್ತವೆ ಕೆಲವೊಮ್ಮೆ ಬೆಂಕಿಹಚ್ಚಿಕೊಳ್ಳಲೂ ಸಾಧ್ಯ. ಇಂತಹ ಸಮಸ್ಯೆಗಳಿಂದ ಇತ್ತೀಚೆಗೆ ಮಾರುಕಟ್ಟೆಯಿಂದ ಬ್ಯಾಟರಿಗಳನ್ನು ಹಿಂದಕ್ಕೆ ಪಡೆದಿರುವ ಉದಾಹರಣೆಗಳೂ ಇವೆ.

ಈಗ ಕಂಡುಹಿಡಿದಿರುವ ಹೆಚ್ಚು ರಂಧ್ರಯುಕ್ತವಾದ ಹೊಸ ಪಾಲಿಮರ್ ಸಪರೇಟರ್ಸ್, ವಿದ್ಯುತ್ ಪ್ರವಾಹವನ್ನು ಹೆಚ್ಚು ಯಶಸ್ವಿಯಾಗಿ ನಿಯಂತ್ರಿಸಿ ಶಾಖ ಸೋರುವಿಕೆಯನ್ನು  ಹೆಚ್ಚು ದಕ್ಷವಾಗಿ ನಿಯಂತ್ರಿಸುತ್ತದೆ. ಆಧುನಿಕ ಬ್ಯಾಟರಿಗಳಲ್ಲಿರುವ ಎಲೆಕ್ಟ್ರೋಡ್‍ಗಳು ಸ್ಪಂಜಿನಂತೆ ರಂಧ್ರಯುಕ್ತ ವಾಗಿರುತ್ತವೆ. ಆದರೆ ಆ ರಂಧ್ರಗಳು ಮೈಕ್ರೋಮೀಟರ್‍ಗಳಲ್ಲಿರುತ್ತವೆ.

ವಿದ್ಯುತ್ ಚಾರ್ಜ್- ಮತ್ತು ಡಿಸ್_ಚಾರ್ಜ್ ಆಗಲು ರಾಸಾಯನಿಕಗಳಿಗೆ ಸಾಕಷ್ಟು  ಸ್ಥಳಾವಕಾಶವಿರುತ್ತದೆ. ಹೀಗಾಗಿ ಕಾರುಗಳು ಹೆಚ್ಚು ದೂರ ಕ್ರಮಿಸಲು ಬೇಕಾಗುವ ಸಾಮರ್ಥ್ಯವಿರುತ್ತದೆ. ಹಾಗೂ ಅದರ ಚಾರ್ಜಿಂಗ್ ಬೇಗ ಮಾಡಲು ಸಾಧ್ಯವಾಗುತ್ತದೆ. ಇದರ ಸಂವಹನ ಮಾಧ್ಯಮವು ದ್ರವರೂಪದ ಎಲೆಕ್ಟ್ರೋಲೈಟ್ ಆಗಿದ್ದು ಧನ ಮತ್ತು ಋಣ ಧೃವಗಳಿಗೆ ಅಯಾನ್‍ಗಳ ಚಲನೆ ಸುಲಭವಾಗುತ್ತದೆ. ಗಂಟೆಗಳ ಕಾಲ ಚಾರ್ಜ್ ಮಾಡುವ ಬದಲು ನಿಮಿಷಗಳಲ್ಲಿ ಚಾರ್ಜ್ ಆಗಬಲ್ಲದು.  ಗಿಡ ಮರಗಳು ನೀರನ್ನು ಹೀರಿಕೊಳ್ಳುವಂತೆ ಮೆಕ್ಯಾನಿಕೋ-ಕೆಮಿಕಲ್ ತಂತ್ರಜ್ಞಾನದಲ್ಲಿ ಎಲೆಕ್ಟ್ರೋಲೈಟನ್ನು ಬ್ಯಾಟರಿ ಹೀರಿಕೊಳ್ಳುತ್ತದೆ.
ಬ್ಯಾಟರಿಯಲ್ಲಿ ಹುದುಗಬಹುದಾದ ಶಕ್ತಿಯ ಸಾಂದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಗ್ರಾಫೈಟ್ ಬಳಸುವ ಬದಲು ಸಿಲಿಕಾನ್ ಬಳಸಿ ಬ್ಯಾಟರಿಯ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸಬಹುದು. ಬ್ಯಾಟರಿಗಳ ತಾಂತ್ರಿಕ ಬೆಳವಣಿಗೆ ಅಷ್ಟೇನೂ ಚುರುಕಾಗಿ ಆಗುತ್ತಿರಲಿಲ್ಲ. ಈಗ ಪೆಟ್ರೋಲ್ ಮಾಫಿಯಾವನ್ನು ಎದುರಿಸಬೇಕಾದ ಅನಿವಾರ್ಯತೆಯಿಂದ ವಾಹನ ಉದ್ಯಮಗಳು ಹೆಚ್ಚು ಸಾಮರ್ಥ್ಯದ ಬ್ಯಾಟರಿಗಳನ್ನು ಕೇಳುತ್ತಿದೆ. ಅಂದರೆ ಈಗ ವಿದ್ಯುತ್ ಇಲ್ಲದೆ ಲ್ಯಾಪ್ ಟಾಪ್‍ಅನ್ನು ಎರಡು ಗಂಟೆಗಳ ಕಾಲ ಬಳಸಬಹುದಾದರೆ, ಈ ಬ್ಯಾಟರಿಗಳ ನೆರವಿನಿಂದ ಇಪ್ಪತ್ತು ಗಂಟೆಗಳ ಕಾಲ ಬಳಸಬಹುದು! ಹೀಗೇ, ಎಲೆಕ್ಟ್ರಿಕ್ ಕಾರ್‍ಗಳಲ್ಲೂ, ಹಾಗೂ ಮನೆಯ ಸೂರಿನಿಂದ ಉತ್ಪತ್ತಿಯಾದ ಸೌರ ವಿದ್ಯುತ್ತನ್ನು ಶೇಖರಿಸಿಡಲು ಇದು ಅನುಕೂಲಕರ. ಹಾಗೂ ಎರಡು ತಿಂಗಳ ಕಾಲ ಬಳಸದೇ ಇಟ್ಟಿದ್ದರೂ ಶಕ್ತಿ ಸೋರಿಹೋಗುವುದಿಲ್ಲ.

ಬ್ಯಾಟರಿಯಲ್ಲಿನ  ಸಿಲಿಕಾನ್ ಚಾರ್ಜ್ ಆದಾಗ ಹಿಗ್ಗುತ್ತದೆ, ಡಿಸ್-ಚಾರ್ಜ್ ಆದಾಗ ಹಿಗ್ಗುತ್ತದೆ. ಹೀಗೆ ಆಗುವುದರಿಂದ ಅದರ ಕ್ಷಮತೆ ಕ್ರಮೇಣ ಕಡಿಮೆಯಾಗಿಬಿಡುತ್ತದೆ. ನ್ಯಾನೋ ತಂತ್ರಜ್ಞಾನವು ಈ ಸಮಸ್ಯೆಯನ್ನು ಬಗೆಹರಿಸಲಿದೆ. ಒಂದು ಕಾಗದದ 1/1000 ದಷ್ಟು ದಪ್ಪನೆಯ ಡಯಾಮೀಟರ್ ಹೊಂದಿರುವ ಅಸಂಖ್ಯಾತ ಸಿಲಿಕಾನ್ ನ್ಯಾನೋ ವಯರ್‍ಗಳು ಲಿಥಿಯಮ್ಮನು ಹಿಡಿದಿಟ್ಟುಕೊಳ್ಳುತ್ತದೆ, ಹಾಗೂ ಸತತ ಬಳಕೆಯಿಂದ ಕಾರ್ಯ ಕ್ಷಮತೆ ಹಾಳಾಗುವುದಿಲ್ಲ.

ಲಿಥಿಯಮ್  ಉಪಯೋಗಗಳು.


ಲಿಥಿಯಮ್‍ಅನ್ನು ಪಿಂಗಾಣಿ ಪಾತ್ರೆಗಳನ್ನು ಮಾಡಲು, ಅಣು ಶಸ್ತ್ರಾಸ್ತ್ರಗಳ ನಿರ್ಮಾಣದಲ್ಲಿ,  ಗಾಜು ತಯಾರಿಕೆಯಲ್ಲೂ ಬಳಸುತ್ತಾರೆ. ಹವಾ ನಿಯಂತ್ರಕಗಳಲ್ಲೂ, ಘರ್ಷಣೆ ನಿವಾರಕ (ಲೂಬ್ರಿಕೆಂಟ್) ಅಂತೆಯೂ ಬಳಸುತ್ತಾರೆ.

ಔಷಧದಲ್ಲಿ ಲಿಥಿಯಮ್:

ಬೈಪೆÇೀಲಾರ್ ಡಿಸಾರ್ಡರ್ ಖಾಯಿಲೆಗೆ  ಖಿನ್ನತೆಯನ್ನು ಹೋಗಲಾಡಿಸಿ ಮನಸ್ಥಿತಿಯನ್ನು ಸ್ಥಿಮಿತಕ್ಕೆ ತರಲು  ಲಿಥಿಯಮ್ ಅಯಾನುಗಳ ಔಷಧಿ ನೀಡುತ್ತಾರೆ.  ದೇಹದೊಳಕ್ಕೆ  ಸೇವಿಸಿದರೆ ನರಮಂಡಲದ ಆದ್ಯಂತ ಲಿಥಿಯಮ್ ಹರಡಿಕೊಳ್ಳುತ್ತದೆ. ಮೇನಿಯಾ ದಂತಹ ಇತರ ಮನೋವೈಜ್ಞಾನಿಕ ಖಾಯಿಲೆಗಳಿಗೆ ಇದು ಸಿದ್ಧೌಷಧ. ಆದರೆ ಲಿಥಿಯಮ್ ಔಷಧಿಯಾಗಿ ಪಡೆಯುವವರು ಆಗಾಗ ತಮ್ಮ ಥೈರಾಯ್ಡ್ ಮತ್ತು ಕಿಡ್ನಿಯ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು.  ದೇಹದಲ್ಲಿನ ಸೋಡಿಯಂ ಮತ್ತು ನೀರಿನ ಪ್ರಮಾಣಗಳ ಮೇಲೆ ಲಿಥಿಯಮ್ ಪ್ರಭಾವ  ಬೀರುತ್ತದೆ. ಲಿಥಿಯಮ್ ಬಳಕೆಯಿಂದ ದೇಹದಲ್ಲಿ  ನೀರಿನ ಪ್ರಮಾಣ ಕಡಿಮೆಯಾಗಬಹುದು.

ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ 7 ಅಪ್ ನಂತಹ ತಂಪು ಪಾನೀಯಗಳಲ್ಲಿ ಇದನ್ನು ಬಳಸುವುದು ಜನಪ್ರಿಯವಾಗಿತ್ತು.  1929 ರಲ್ಲಿ  "Bib-Label Lithiated Lemon-Lime Soda" ಎಂಬ ಪೇಯವನ್ನು   ಹೌಡಿ ಕಾಪೆರ್Çರೇಷನ್ ಮಾರುಕಟ್ಟೆಗೆ ತಂದಿತು.  ಮದ್ಯ ಸೇವಿಸಿದ ಮರುದಿನವೂ ಇರುವ ಮಂಪರನ್ನು ಹೋಗಲಾಡಿಸಲು ಇದನ್ನು ಮುಖ್ಯವಾಗಿ ಬಳಸಲಾಗುತ್ತಿತ್ತು.  1948ರಲ್ಲಿ ಇದರ ಬಳಕೆಯನ್ನು ನಿಲ್ಲಿಸಲಾಯಿತು.

ಬಲ್ಲೆಯಾ  ಬೊಲೀವಿಯಾ?


ಬೊಲೀವಿಯಾ  ದಕ್ಷಿಣ ಅಮೆರಿಕದ ಅತ್ಯಂತ ಬಡ ದೇಶ.
ಇದು ಕರಾವಳಿಯನ್ನೇ ಕಾಣದ ಲ್ಯಾಂಡ್ ಲಾಕ್ಡ್ ದೇಶ.
ಬೊಲೀವಿಯಾದ ಟಿಟಿಕಾಕಾ ಸರೋವರದಲ್ಲಿ ಮುಳುಗಿಹೋಗಿದ್ದ ಸುಮಾರು 1000 ವರ್ಷಗಳ ಪುರಾತನ ದೇವಾಲಯ ಇತ್ತೀಚೆಗೆ ಪತ್ತೆಯಾಗಿದೆ.  ಇದು ಇನ್ಕಾ ನಾಗರಿಕತೆಗಿಂತ ಹಳೆಯದು.

ಲಾ ಪಾಝ್ ಬೊಲೀವಿಯಾದ ರಾಜಧಾನಿ ನಗರ 3,630 ಮೀಟರ್‍ಗಳ ಎತ್ತರದಲ್ಲಿದ್ದು ವಿಶ್ವದ ಅತ್ಯಂತ ಎತ್ತರದಲ್ಲಿರುವ ರಾಜಧಾನಿ ಎನಿಸಿದೆ.
ಟಿಟಿಕಾಕಾ ಸರೋವರ 12,507 ಅಡಿಗಳ ಎತ್ತರದಲ್ಲಿದ್ದು ದಕ್ಷಿಣ ಅಮೇರಿಕದ ಅತ್ಯಂತ ದೊಡ್ಡ ಸರೋವರವೆನಿಸಿದೆ. ಹಾಗೂ ವಾಣಿಜ್ಯ  ಸಂಚಾರಕ್ಕಾಗಿ ಬಳಸಲಾಗುತ್ತಿರುವ ಅತಿ ಎತ್ತರದಲ್ಲಿರುವ ಸರೋವರ.
ಭೂಗ್ರಹದಲ್ಲೇ  ಅತ್ಯಧಿಕ ಪ್ರಮಾಣದಲ್ಲಿ ಉಪ್ಪು ಸಂಗ್ರಹವಾಗಿರುವ ಜಾಗ ಬೊಲೀವಿಯಾ. ಸಾಲಾರ್ ಡಿ ಯುನಿ (ಯುನಿ ಮರಳ ಹಾಸು)ಯಲ್ಲಿ 64 ಮಿಲಿಯನ್ ಟನ್‍ಗಳಷ್ಟು ಉಪ್ಪು ಇದೆ.

ಪ್ರಪಂಚದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪ ವಿರುವುದು ಬೊಲೀವಿಯಾದಲ್ಲಿ.
ಜೀವ ವೈವಿಧ್ಯತೆ ಗೆ ಹೆಸರುವಾಸಿಯಾಗಿದೆ.  ಇಡೀ ಭೂಮಿಯಲ್ಲಿರುವ ಜೀವ ವರ್ಗಗಳ ಶೇ. 40ರಷ್ಟು ಜೀವಿಗಳು (ಪ್ರಾಣಿ/ಸಸ್ಯ) ಇಲ್ಲಿವೆ.
ಮನುಷ್ಯನಿಗೆ ತಿಳಿದಿರುವ ಜೀವರಾಶಿಯ ಶೇ. 70ರಷ್ಟು ಜೀವಿಗಳು ಇಲ್ಲಿವೆ. 20,000 ವಿವಿಧ ಸಸ್ಯ ಪ್ರಬೇಧಗಳನ್ನು ಹೊಂದಿವೆ. ಪಕ್ಷಿ ಸಂಕುಲದ ಅತ್ಯಧಿಕ ಸಂಖ್ಯೆ ಇಲ್ಲಿದ್ದು ವಿಶ್ವದ  ಏಳನೆಯ ಸ್ಥಾನದಲ್ಲಿದೆ, ಹಾಗೂ ಚಿಟ್ಟೆಗಳ ವೈವಿಧ್ಯತೆಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ.  
ಬೊಲೀವಿಯನಿಟ  ಎಂಬ ಅನರ್ಘ್ಯ ರತ್ನ ಪ್ರಪಂಚದಲ್ಲಿ ಇನ್ನೆಲ್ಲೂ ಸಿಗುವುದಿಲ್ಲ.  ಭಾಗಶಃ ಹಳದಿ ಭಾಗಶಃ ನೇರಳೆ ಬಣ್ಣದ ಈ ಹರಳು ಸಿಟ್ರೀನ್ ಮತ್ತು ಅಮೆಟ್ರೀನ್ ಗಳಿಂದ ಉಂಟಾಗಿದೆ.

ದಕ್ಷಿಣ ಅಮೆರಿಕದಲ್ಲೇ ಅತ್ಯಧಿಕವಾಗಿ ನೈಸರ್ಗಿಕ ಅನಿಲದ ನಿಕ್ಷೇಪವನ್ನು ಹೊಂದಿರುವ  ಎರಡನೆಯ ದೇಶ  ಬೊಲೀವಿಯಾ.

ಕೊನೆಯ ಮಾರ್ಪಾಟು : 3/4/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate