অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಸಿರು ಮನೆ

ಹಸಿರು ಮನೆ ಪರಿಣಾಮ

ಭೂಮಿಯು ಸೂರ್ಯನಿಂದ ಶಾಖವನ್ನು ಪಡೆಯುತ್ತದೆ. ಇದರಿಂದ ಭೂ ಮೇಲ್ಮೈಯು ಬಿಸಿಯಾಗಿರುತ್ತದೆ. ಈ ಶಕ್ತಿಯು ವಾತಾವರಣದ ಮೂಲಕ ಹಾದುಬರುವಾಗ, ನಿರ್ದಿಷ್ಟ ಪ್ರಮಾಣದ (ಶೇ.30 ರಷ್ಟು) ಶಕ್ತಿಯು ಚೆಲ್ಲಾಪಿಲ್ಲಿಯಾಗಿ ಹರಡಿಕೊಳ್ಳುತ್ತದೆ. ಈ ಶಕ್ತಿಯ ಕೆಲಭಾಗವು ಭೂಮಿ ಮತ್ತು ಸಾಗರಗಳ ಮೇಲ್ಮೈಯಿಂದ ವಾತಾವರಣಕ್ಕೆ ಮರಳಿ ಪ್ರತಿಫಲನಗೊಳ್ಳುತ್ತದೆ. ವಾತಾವರಣದ ಕೆಲವು ಅನಿಲಗಳು ಭೂಮಿಯ ಸುತ್ತ ಹೊದಿಕೆಯಂತಹ ರಚನೆಯನ್ನು ನಿರ್ಮಿಸಿಕೊಂಡು, ಈ ಶಕ್ತಿಯ ಕೆಲಭಾಗವನ್ನು ಹೀರಿಕೊಳ್ಳುತ್ತವೆ. ಕಾರ್ಬನ್ ಡೈಯಾಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ಗಳು ನೀರಾವಿಯೊಡನೆ ಸೇರಿ, ವಾತಾವರಣದ ಶೇಕಡಾ ಒಂದಂಶಕ್ಕಿಂತಲೂ ಕಡಿಮೆ ಭಾಗವನ್ನು ಭರ್ತಿ ಮಾಡುತ್ತವೆ. ಈ ಅನಿಲಗಳನ್ನು 'ಹಸಿರುಮನೆ ಅನಿಲಗಳು' ಎಂದು ಕರೆಯಲಾಗುತ್ತದೆ. ಹಸಿರುಮನೆಯ ಗಾಜುಗಳು ಹೆಚ್ಚುವರಿ ಶಕ್ತಿಯ ಹೊರಸೂಸುವಿಕೆಯನ್ನು ತಡೆಗಟ್ಟುವಂತೆಯೇ ಈ `ಹಸಿರು ಕಂಬಳಿ'ಯು ಭೂಮಿಯಿಂದ ಹೊರಸೂಸಲ್ಪಡುವ ಶಕ್ತಿಯಲ್ಲಿ ಸ್ವಲ್ಪಭಾಗವನ್ನು ಹೀರಿಕೊಳ್ಳುತ್ತದೆ ಮತ್ತು ಉಷ್ಣತೆಯ ಮಟ್ಟವನ್ನು ಕಾಯ್ದಿಡುತ್ತದೆ. ಆದ್ದರಿಂದ ಈ ಪ್ರಕ್ರಿಯೆಯನ್ನು 'ಹಸಿರುಮನೆ ಪರಿಣಾಮ' ಎಂದು ಕರೆಯಲಾಗುತ್ತದೆ. ಈ ಹಸಿರುಮನೆ ಪರಿಣಾಮವನ್ನು ಮೊತ್ತಮೊದಲ ಬಾರಿಗೆ ಗುರುತಿಸಿದವರು ಫ್ರೆಂಚ್ ವಿಜ್ಞಾನಿ, ಜೀನ್ ಬ್ಯಾಪ್ಟಿಸ್ಟ್ ಫೌರಿಯೆರ್ . ಅವರು ಹಸಿರು ಮನೆಯಲ್ಲಿ ಮತ್ತು ವಾತಾವರಣದಲ್ಲಿ ನಡೆಯುವ ಪ್ರಕ್ರಿಯೆಗಳ ಸಾಮ್ಯತೆಯನ್ನು ಗುರುತಿಸಿದರು.

ಹಸಿರು ಮನೆ ಅನಿಲಗಳ ಕಂಬಳಿಯು ಭೂಮಿಯ ಸೃಷ್ಟಿಯಾದಾಗಿನಿಂದಲೂ ಅಸ್ತಿತ್ವದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಚಟುವಟಿಕೆಗಳ ಪರಿಣಾಮವಾಗಿ ಹೆಚ್ಚು ಹೆಚ್ಚು ಹಸಿರುಮನೆ ಅನಿಲಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತಿವೆ. ಇದರ ಪರಿಣಾಮವಾಗಿ ಹಸಿರು ಮನೆ ಅನಿಲಗಳ ಕಂಬಳಿಯು ದಪ್ಪವಾಗುತ್ತಾ ಸಾಗಿ, 'ಹಸಿರುಮನೆ ಸಹಜ ಪರಿಣಾಮ'ದಲ್ಲಿ ಏರುಪೇರು ಉಂಟಾಗುತ್ತದೆ. ನಾವು ಕಲ್ಲಿದ್ದಲು, ತೈಲ, ನೈಸರ್ಗಿಕ ಅನಿಲಗಳೇ ಮೊದಲಾದ ಇಂಧನಗಳನ್ನು ದಹಿಸಿದಾಗ ಕಾರ್ಬನ್ ಡೈಯಾಕ್ಸೈಡ್ ಅನಿಲವು ಬಿಡುಗಡೆಗೊಳ್ಳುತ್ತದೆ. ಅರಣ್ಯನಾಶದಿಂದ, ಮರಗಳಲ್ಲಿ ಸಂಚಿತವಾಗಿರುವ ಕಾರ್ಬನ್(ಇಂಗಾಲ), ಕಾರ್ಬನ್ (ಇಂಗಾಲದ) ಡೈಯಾಕ್ಸೈಡ್ ಆಗಿ ವಾತಾವರಣಕ್ಕೆ ಜಾರಿಕೊಳ್ಳುತ್ತದೆ. ಹೆಚ್ಚಿದ ಕೃಷಿಗಾರಿಕೆ ಮತ್ತು ಭೂ ಬಳಕೆಯ ವಿನ್ಯಾಸದಲ್ಲಿನ ವ್ಯತ್ಯಾಸಗಳು ಮೀಥೇನ್ ಹಾಗೂ ನೈಟ್ರಸ್ ಆಕ್ಸೈಡ್ ಹೆಚ್ಚಳಕ್ಕೆ ಕಾರಣವಾಗುತ್ತವೆ. ಕಾರ್ಖಾನೆಗಳಲ್ಲಿ ನಡೆಯುವ ಪ್ರಕ್ರಿಯೆಗಳಿಂದಾಗಿಯೂ ಕೃತಕ ಹಾಗೂ ಇತ್ತೀಚೆಗೆ ಗುರುತಿಸಲ್ಪಟ್ಟ ಹೊಸ ಅನಿಲ ಸಿಎಫ್ಎಸ್ (ಕ್ಲೋರೋಫ್ಲೋರೋಕಾರ್ಬನ್) ಮೊದಲಾದವುಗಳು ವಾತಾವರಣ ಸೇರುತ್ತವೆ. ವಾಹನಗಳು ಉಗುಳುವ ಹೊಗೆ ಮತ್ತು ಇಂಧನಗಳು ಓಝೋನ್ ನಿರ್ಮಾಣಕ್ಕೆ ಕಾರಣವಾಗುತ್ತವೆ. ಹಸಿರುಮನೆ ಪರಿಣಾಮದ ವ್ಯತ್ಯಯವು ಮುಖ್ಯವಾಗಿ ಭೂತಾಪಮಾನ ಏರಿಕೆಯ ರೂಪದಲ್ಲಿ ಹಾಗೂ ಹವಾಗುಣ ಬದಲಾವಣೆಯ ರೂಪದಲ್ಲಿ ವ್ಯಕ್ತವಾಗುತ್ತದೆ.

ಹಸಿರುಮನೆ ಅನಿಲಗಳಿಗೆ ನಾವು ಹೇಗೆ ಕೊಡುಗೆ ನೀಡುತ್ತಿದ್ದೇವೆ?

ಇದ್ದಿಲು, ಪೆಟ್ರೋಲ್ ಮೊದಲಾದ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚಿನ ಭೂಮಿಯ ನಮ್ಮ ಬೇಡಿಕೆ ಈಡೇರಿಕೆಗಾಗಿ ಮರಗಳನ್ನು ಕಡಿಯುವುದು ಕೊಳೆಯದಂತಹ - ಪ್ಲಾಸ್ಟಿಕ್ನಂತಹ- ತ್ಯಾಜ್ಯ ವಸ್ತುಗಳ ಉತ್ಪಾದನೆ ಕೃಷಿಗಾರಿಕೆಯಲ್ಲಿ ರಸ ಗೊಬ್ಬರಗಳು ಹಾಗೂ ಕೀಟನಾಶಕಗಳ ವಿವೇಚನಾಹೀನ ಬಳಕೆ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate