অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಷ್ಟ್ರೀಯ ಕ್ರಿಯಾ ಯೋಜನೆ

ರಾಷ್ಟ್ರೀಯ ಕ್ರಿಯಾ ಯೋಜನೆ

ರಾಷ್ಟ್ರೀಯ ಕ್ರಿಯಾ ಯೋಜನೆ ಹಾಗೂ ಹವಾಮಾನ ಬದಲಾವಣೆ ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು 2008 ರ ಜೂನ್ 30 ರಂದು ಜಾರಿಗೊಂಡಿತು. ರಾಷ್ಟ್ರೀಯ ಕ್ರಿಯಾ ಯೋಜನೆಯ ತಿರುಳಿನಂತೆ ಕಾರ್ಯನಿರ್ವಹಿಸುವ ಒಟ್ಟು ಎಂಟು 'ರಾಷ್ಟ್ರೀಯ ಕ್ರಿಯಾಸಮಿತಿ' ಗಳಿವೆ. ಇವು ಹವಾಮಾನ ಬದಲಾವಣೆಯ ಬಗ್ಗೆ ತಿಳುವಳಿಕೆ, ಹೊಂದಿಕೊಳ್ಳುವಿಕೆ ಮತ್ತು ಕುಗ್ಗಿಸುವಿಕೆ, ಶಕ್ತಿ ಸಾಮರ್ಥ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಳನ್ನು ಉತ್ತೇಜಿಸುವತ್ತ ಹೆಚ್ಚಿನ ಗಮನ ನೀಡುತ್ತವೆ. ಎಂಟು ಕಾರ್ಯ ಯೋಜನೆಗಳು ಇಂತಿವೆ : ರಾಷ್ಟ್ರೀಯ ಸೌರ ಕ್ರಿಯಾಸಮಿತಿ ಶಕ್ತಿ ಸಾಮರ್ಥ್ಯದ ಉನ್ನತೀಕರಣಕ್ಕಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ ರಾಷ್ಟ್ರೀಯ ಸ್ವಾಲಂಬಿ ನೆಲೆ ಕ್ರಿಯಾಸಮಿತಿ ರಾಷ್ಟ್ರೀಯ ಜಲ ಕ್ರಿಯಾಸಮಿತಿ ಹಿಮಾಲಯ ಸಸ್ಯಸಂಕುಲ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ ಹಸಿರು ಭಾರತಕ್ಕಾಗಿ ರಾಷ್ಟ್ರೀಯ ಕ್ರಿಯಾಸಮಿತಿ ಕೃಷಿ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ ಹವಾಮಾನ ಬದಲಾವಣೆ ಕುರಿತು ಕಾರ್ಯತಂತ್ರ ತಿಳುವಳಿಕೆಗಾಗಿ ರಾಷ್ಟ್ರೀಯ ಕ್ರಿಯಾಸಮಿತಿ

ರಾಷ್ಟ್ರೀಯ ಸೌರ ಕ್ರಿಯಾಸಮಿತಿ

ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು ರಾಷ್ಟ್ರೀಯ ಸೌರ ಕ್ರಿಯಾಸಮಿತಿಗೆ ಹೆಚ್ಚಿನ ಮಹತ್ವ ನೀಡಿದೆ. ಈ ಕ್ರಿಯಾ ಸಮಿತಿಯ ಉದ್ದೇಶವು ರಾಷ್ಟ್ರದ ಒಟ್ಟು ಶಕ್ತಿ ಮಿಶ್ರಣದಲ್ಲಿ ಸೌರ ಶಕ್ತಿಯ ಪಾಲನ್ನು ಹೆಚ್ಚಿಸುವುದು, ಹಾಗೆಯೇ ಇನ್ನಿತರ ನವೀಕರಿಸಬಲ್ಲ ಸಂಪನ್ಮೂಲಗಳತ್ತ ಗಮನ ಹರಿಸುವುದಾಗಿದೆ. ಈ ಕ್ರಿಯಾ ಸಮಿತಿಯು ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಆರ್ಥಿಕಸ್ನೇಹಿ, ಸ್ವಾವಲಂಬಿ ಹಾಗೂ ಅನುಕೂಲಕರ ಸೌರ ಶಕ್ತಿ ವ್ಯವಸ್ಥೆಗಳ ಸಂಶೋಧನೆ ಹಾಗೂ ಅಭಿವೃದ್ಧಿಯ ಜಾರಿಗೆ ಕರೆನೀಡುತ್ತದೆ. ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು ಸೌರ ಕ್ರಿಯಾ ಸಮಿತಿಗೆ ನಗರ ವ್ಯಾಪ್ತಿಯ ಕೈಗಾರಿಕೆಗಳು ಹಾಗೂ ವಾಣಿಜ್ಯ ಮಳಿಗೆಗಳ ಸೌರಶಕ್ತಿ ಅನ್ವಯಗಳಲ್ಲಿ ಎಲ್ಲ ಅಲ್ಪ ಪ್ರಮಾಣದ ಉಷ್ಣತೆ (150° ಸೆ.) ಬಳಕೆಯಲ್ಲಿ 80% ರಷ್ಟನ್ನು ಮತ್ತು ಮಧ್ಯಮ ಉಷ್ಣತೆಯ (150° ಸೆ. to 250° ಸೆ.) ಅನ್ವಯಗಳಲ್ಲಿ 60% ರಷ್ಟನ್ನು ಒಳಗೊಳ್ಳುವಂತೆ ಗುರಿಯನ್ನು ನಿರ್ದೇಶಿಸಿದೆ. ಇದನ್ನು 2017 ರ ವೇಳೆಗೆ 11 ಮತ್ತು 12 ನೇ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಸಾಧಿಸುವಂತೆ ಗುರಿಯನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಜೊತೆಯಾಗಿ ಗ್ರಾಮೀಣ ಅನ್ವಯಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮೂಲಕ ಜಾರಿಗೊಳಿಸಲಾಗುತ್ತದೆ. ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು 2017 ರ ವೇಳೆಗೆ ಸಂಯುಕ್ತ ಅನುಕೂಲಗಳನ್ನು ಬಳಸಿಕೊಂಡು 1000 ಮೆ.ವ್ಯಾ/ವಾರ್ಷಿಕ ಫೋಟೋವೋಲ್ಟಾಯಿಕ್ ಉತ್ಪಾದನೆಯನ್ನು ಹಾಗೆಯೇ 1000 ಮೆ.ವ್ಯಾ. ಸೌರ ಶಕ್ತಿಯ ಸಾಂದ್ರೀಕರಣದ ಗುರಿಯನ್ನು ಕೂಡಾ ನಿಗದಿಪಡಿಸಿಕೊಂಡಿದೆ.

ಶಕ್ತಿ ಸಾಮರ್ಥ್ಯದ ಉನ್ನತೀಕರಣಕ್ಕಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ

ಶಕ್ತಿಯ ಕಾರ್ಯ ದಕ್ಷತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಅದಾಗಲೇ ಹಲವಾರು ಉಪಕ್ರಮಗಳನ್ನು ಹೊಂದಿದೆ. ಇವುಗಳಿಗೆ ಜೊತೆಯಾಗಿ, ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು ಈ ಕೆಳಗಿನ ಅಂಶಗಳಿಗೆ ಕರೆ ನೀಡುತ್ತದೆ: ದೊಡ್ಡ ಪ್ರಮಾಣದಲ್ಲಿ ಶಕ್ತಿಯನ್ನು ಬಳಸುವ ಉದ್ದಿಮೆಗಳಿಗೆ ಶಕ್ತಿಬಳಕೆಯ ವಿಷಯದಲ್ಲಿ ನಿರ್ದಿಷ್ಟ ಪ್ರಮಾಣದ ಕಡಿತವನ್ನು ಕಡ್ಡಾಯ ಮಾಡುವುದು ಮತ್ತು ಹೆಚ್ಚುವರಿ ಶಕ್ತಿ ಉಳಿತಾಯವನ್ನು ಪ್ರಮಾಣೀಕರಿಸಲು ಕಾರ್ಯಚೌಕಟ್ಟನ್ನು ಸೃಷ್ಟಿಸುವುದರ ಜೊತೆಗೆ ಈ ಉಳಿತಾಯವನ್ನು ಬಿಕರಿ ಮಾಡಲು ಮಾರುಕಟ್ಟೆ ಆಧಾರಿತ ಯಾಂತ್ರಿಕತೆಯನ್ನು ರೂಪಿಸುವುದು. ನಿರ್ದಿಷ್ಟ ವಲಯಗಳಲ್ಲಿ ಶಕ್ತಿ ದಕ್ಷತೆಯ ಅನ್ವಯಗಳು/ಉತ್ಪನ್ನಗಳನ್ನು ಕೈಗೆಟಕುವಂತೆ ಮಾಡಲು ವಿನೂತನ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಆರ್ಥಿಕ ಬೇಡಿಕೆಯ ವ್ಯವಸ್ಥಾಪಕ ಕಾರ್ಯಗಳಿಗೆ ಸಹಕರಿಸಲು ಭವಿಷ್ಯದ ಶಕ್ತಿ ಉಳಿತಾಯವನ್ನು ಹಿಡಿದಿಡುವ ಮೂಲಕ ಯಾಂತ್ರಿಕತೆಗಳನ್ನು ರೂಪಿಸುವುದು ಹಾಗೂ ಇದಕ್ಕಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಪುಷ್ಟಿ ನೀಡುವುದು. ಶಕ್ತಿಯ ದಕ್ಷ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಕರ ಪ್ರೋತ್ಸಾಹವೇ ಮೊದಲಾದ ಆರ್ಥಿಕ ಸಂಬಂಧಿ ಹೆಜ್ಜೆಗಳನ್ನು ಅಭಿವೃದ್ಧಿಪಡಿಸುವುದು. ಇದು, ಶಕ್ತಿಯ ಸಮರ್ಥ ಬಳಕೆಯ ಪ್ರಮಾಣಪತ್ರ ಪಡೆದ ಪರಿಕರಗಳಿಗೆ ಪ್ರತ್ಯೇಕ ಕರ ನಿಗದಿಪಡಿಸುವುದನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಸುಸ್ಥಿರ ನೆಲೆ ಕ್ರಿಯಾಸಮಿತಿ

ಜನರನ್ನು ಈ ಕೆಳಗಿನ ಮೂರು ಬಗೆಗಳಲ್ಲಿ ಸ್ವಾವಲಂಬಿಗಳನ್ನಾಗಿ ರೂಪಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ವಸತಿ ಹಾಗೂ ವಾಣಿಜ್ಯ ವಲಯಗಳ ಕಟ್ಟಡಗಳಲ್ಲಿನ ಶಕ್ತಿ ಬಳಕೆಯ ದಕ್ಷತೆಯಲ್ಲಿ ಪ್ರಗತಿ ಪಟ್ಟಣದ ಘನತ್ಯಾಜ್ಯ ನಿರ್ವಹಣೆ (MSW) ನಗರದಲ್ಲಿ ಸಾರ್ವಜನಿಕ ಸಾಗಾಣಿಕೆಯನ್ನು ಪ್ರೋತ್ಸಾಹಿಸುವುದು.

ರಾಷ್ಟ್ರೀಯ ಜಲ ಕ್ರಿಯಾಸಮಿತಿ

ಜಲ ಸಂರಕ್ಷಣೆ, ನಷ್ಟದಲ್ಲಿ ಕಡಿತ, ಸಂಯುಕ್ತ ಜಲಮೂಲ ನಿರ್ವಹಣೆಯಿಂದ ಸಮಾನ ವಿತರಣೆ ಖಾತ್ರಿ- ಇವುಗಳು ರಾಷ್ಟ್ರೀಯ ಜಲ ಯೋಜನೆಯ ಮುಖ್ಯ ಉದ್ದೇಶಗಳು. ಜಲ ಸಮಿತಿಯು ನೀರಿನ ಬಳಕೆಯ ದಕ್ಷತೆಯನ್ನು ಶೇ.20 ರಷ್ಟು ಹೆಚ್ಚಿಸಲು ಪೂರ್ವಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ. ಮಳೆಯಲ್ಲಿನ ವ್ಯತ್ಯಯ ಮತ್ತು ನದಿ ನೀರಿನ ಹರಿವಿನ ವ್ಯತ್ಯಯಗಳನ್ನು ನಿವಾರಿಸಲು ಮೇಲ್ಮೈ ಹಾಗೂ ಅಂತರ್ಜಲ ನೀರಿನ ಸಂಗ್ರಹದಲ್ಲಿ ಸುಧಾರಣೆ, ಮಳೆಕೊಯ್ಲು ಮತ್ತು ಸಮರ್ಥ ನೀರಾವರಿ ವ್ಯವಸ್ಥೆಗಳಾದ ತುಂತುರು ಹಾಗೂ ಹನಿ ನೀರಾವರಿ ವ್ಯವಸ್ಥೆಗಳ ಮೂಲಕ ಕಾರ್ಯತಂತ್ರಗಳನ್ನು ರೂಪಿಸಿದೆ.

ಹಿಮಾಲಯ ಸಸ್ಯಸಂಕುಲ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ

ಸಸ್ಯಸಂಕುಲ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ, ಅದರಲ್ಲೂ ಪಂಚಾಯ್ತಿಗಳಿಗೆ ಈ ಯೋಜನೆಯು ಕರೆನೀಡಿದೆ. ಅಲ್ಲದೆ, ಇದು ರಾಷ್ಟ್ರೀಯ ಪಾರಿಸರಿಕ ನೀತಿ, 2006ರಲ್ಲಿ ನಮೂದಿತವಾಗಿರುವಂತೆ ಈ ಕೆಳಗಿನ ಮಾಪಕಗಳನ್ನು ಪುನರ್ಧೃಡೀಕರಿಸಿದೆ; ಪರ್ವತ ಪ್ರದೇಶಗಳ ಸಸ್ಯಸಂಪತ್ತಿನ ಸುಸ್ಥಿರ ಪ್ರಗತಿಗಾಗಿ ಸೂಕ್ತ ರೀತಿಯಲ್ಲಿ ಭೂ ಬಳಕೆಯನ್ನು ಯೋಜಿಸುವುದು ಹಾಗೂ ನೀರಿನ ಹರಿವಿನ ನಿರ್ವಹಣೆಯ ರೂಢಿಗಳನ್ನು ಅಳವಡಿಸಿಕೊಳ್ಳುವುದು ಪರ್ವತ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ರಚನೆಗೆ ಅತ್ಯುತ್ತಮ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು, ಈ ಮೂಲಕ ಸೂಕ್ಷ್ಮ ಸಸ್ಯಸಂಕುಲಕ್ಕೆ ಹಾನಿಯಾಗದಂತೆ ಮತ್ತು ಭೂಪ್ರದೇಶಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆವಹಿಸುವುದು. ಸಾವಯವ ಪದ್ಧತಿಯನ್ನು ಪ್ರಚುರಪಡಿಸುವ ಹಾಗೂ ರೈತರಿಗೆ ಲಾಭಾಂಶದ ಬಗೆಗೆ ತಿಳುವಳಿಕೆ ನೀಡುವ ಮೂಲಕ ವಿವಿಧ ಸಾಂಪ್ರದಾಯಿಕ ಬೆಳೆಗಳ ಬೆಳೆಗೆ ಮತ್ತು ತೋಟಗಾರಿಕೆಗೆ ಪ್ರೋತ್ಸಾಹಿಸಿವುದು, ಉತ್ತಮ ಕಾರ್ಯಾನುಷ್ಠಾನ ಹಾಗೂ ಬಹು ಷೇರುದಾರರ ಸಹಯೋಗಿತ್ವದೊಂದಿಗೆ ಸುಸ್ಥಿರ ಪ್ರವಾಸ ಯೋಜನೆಗಳನ್ನು ಪ್ರೋತ್ಸಾಹಿಸುವ ಮೂಲಕ ಸ್ಥಳೀಯ ನಿವಾಸಿಗಳ ದುಡಿಮೆಗೆ ಹಾಗೂ ಉತ್ತಮ ಜೀವನ ನಿರ್ವಹಣೆಗೆ ಅವಕಾಶಗಳನ್ನು ಕಲ್ಪಿಸಿಕೊಡುವುದು ಪರ್ವತೀಯ ಪರಿಸರದ ತಾಳಿಕೆ/ ಧಾರಣಾ ಸಾಮರ್ಥ್ಯಕ್ಕೆ ಹೊರೆಯಾಗದಂತೆ, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಮೇಲೆ ನಿಯಂತ್ರಣವಿಡುವುದು ನಿರ್ದಿಷ್ಟ ಪರ್ವತ ಪ್ರದೇಶಗಳಿಗೆ ಅದ್ವಿತೀಯ 'ಅಸದೃಶ ಮೌಲ್ಯಗಳ' ಜೊತೆಗೆ ಸುರಕ್ಷತಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವುದು

ಹಸಿರು ಭಾರತಕ್ಕಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ

ಈ ಕ್ರಿಯಾ ಸಮಿತಿಯು ಕಾರ್ಬನ್ ಸಿಂಕ್ಗಳಂತಹ ಸಸ್ಯಸಂಕುಲ ಸೇವೆಗಳ ವರ್ಧನೆಯನ್ನು ಗುರಿಯಾಗಿಟ್ಟುಕೊಂಡಿದೆ. ಇದು 6 ಮಿಲಿಯನ್ ಹೆಕ್ಟೇರುಗಳ ಅರಣ್ಯಾಭಿವೃದ್ಧಿ ಮತ್ತು ಅರಣ್ಯವ್ಯಾಪ್ತಿಯಡಿಯಲ್ಲಿ ಭೂ ಪ್ರದೇಶದ ವಿಸ್ತೀರ್ಣವನ್ನು 23 ರಿಂದ 33% ರಷ್ಟು ಹೆಚ್ಚಿಸುವ ರಾಷ್ಟ್ರೀಯ ಗುರಿಯನ್ನುಳ್ಳ ಪ್ರಧಾನಮಂತ್ರಿಗಳ 'ಹಸಿರು ಭಾರತ' ಪ್ರಚಾರದ ಮೇಲೆ ನಿರ್ಮಾಣಗೊಳ್ಳುತ್ತದೆ. ಇದು ನಷ್ಟಗೊಂಡ ಅರಣ್ಯಪ್ರದೇಶದಲ್ಲಿ, ರಾಜ್ಯ ಅರಣ್ಯ ಇಲಾಖೆಗಳ ಅಡಿಯಲ್ಲಿರುವ ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳ ಮೂಲಕ ಅನುಷ್ಠಾನಗೊಳ್ಳುತ್ತದೆ. ಈ ಸಮಿತಿಗಳು, ಸಮಾಜವು ಇದರಲ್ಲಿ ನೆರವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತವೆ.

ಕೃಷಿ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ

ಭಾರತೀಯ ಕೃಷಿಗಾರಿಕೆಯನ್ನು ಹವಾಮಾನ ಬದಲಾವಣೆಗೆ ಹೆಚ್ಚು ಪ್ರತಿರೋಧವೊಡ್ಡುವಂತೆ ಮಾಡುವುದು ಮುಖ್ಯ ಉದ್ದೇಶ. ಇದನ್ನು ಹೊಸ ಬಗೆಯ, ವಿಶೇಷವಾಗಿ ಉಷ್ಣನಿರೋಧಕ ಹೊಸತಳಿಯನ್ನು ಗುರುತಿಸುವ ಹಾಗೂ ಪರ್ಯಾಯ ಬೆಳೆ ಅಭಿವೃದ್ಧಿಪಡಿಸುವ ಮೂಲಕ ಸಾಧಿಸಲಾಗುತ್ತದೆ. ಇದಕ್ಕೆ ಪಾರಂಪರಿಕ ಜ್ಞಾನ ಹಾಗೂ ಪ್ರಾಯೋಗಿಕ ವ್ಯವಸ್ಥೆಗಳು, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ಮತ್ತು ನವೀನ ಸಾಲ ಹಾಗೂ ವಿಮೆ ಕಾರ್ಯವಿಧಾನಗಳ ಸಂಯೋಜಿತ ಬೆಂಬಲ ಬೇಕಾಗುತ್ತದೆ.

ಹವಾಮಾನ ಬದಲಾವಣೆ ಕುರಿತ ಕಾರ್ಯತಂತ್ರ ತಿಳುವಳಿಕೆಗಾಗಿ ರಾಷ್ಟ್ರೀಯ ಕ್ರಿಯಾ ಸಮಿತಿ

ಈ ಕ್ರಿಯಾಸಮಿತಿಯು ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿ, ವಿವಿಧ ಯಾಂತ್ರಿಕತೆಗಳ ಮೇಳೈಕೆ, ಮತ್ತು ಹೆಚ್ಚುವರಿಯಾಗಿ, ಹವಾಗುಣ ಬದಲಾವಣೆ ಅಧ್ಯಯನಕ್ಕೆ ಸಮರ್ಪಣೆಗೊಂಡ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಹಾಗೂ ಹವಾಗುಣ ಸಂಶೋಧನಾ ನಿಧಿಗಳ ಸಹಕಾರದಿಂದ ತನ್ನದೇ ಆದ ಸಂಶೋಧನಾ ಕಾರ್ಯಸೂಚಿಯನ್ನೂ ಹೊಂದಿರುತ್ತದೆ. ಕ್ರಿಯಾಸಮಿತಿಯು, ಒಗ್ಗಿಕೊಳ್ಳುವಿಕೆ ಹಾಗೂ ಉಪಶಮನಗಳಿಗಾಗಿ ವಿನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಖಾಸಗಿ ವಲಯದ ಉಪಕ್ರಮಗಳಿಗೆ ಕೂಡ ಪ್ರೋತ್ಸಾಹ ನೀಡುತ್ತದೆ.

ಕ್ರಿಯಾಯೋಜನೆಗಳ ಅನುಷ್ಠಾನ

ಎಂಟು ರಾಷ್ಟ್ರೀಯ ಕ್ರಿಯಾಸಮಿತಿಗಳು 'ಅನುಕ್ರಮ ಸಚಿವಾಲಯ'ಗಳ ಮೂಲಕ ಸಾಂಸ್ಥೀಕರಣಗೊಳ್ಳುತ್ತವೆ ಹಾಗೂ ಹೆಚ್ಚುವರಿ ಸಂಬಂಧಿತ ಸಚಿವಾಲಯಗಳು, ಆರ್ಥಿಕ ಸಚಿವಾಲಯ ಮತ್ತು ಯೋಜನಾ ಆಯೋಗ, ಉದ್ದಿಮೆಯ ಅನುಭವಿಗಳು, ಶಿಕ್ಷಣ ವಲಯದ ಅನುಭವಿಗಳು ಹಾಗೂ ಸುಶಿಕ್ಷಿತ ಸಮಾಜಗಳನ್ನೊಳಗೊಂಡ ಅಂತರ್ ವಲಯ ಗುಂಪುಗಳ ಮೂಲಕ ಸಂಘಟಿತವಾಗುತ್ತವೆ.

ಸೌರ ಶಕ್ತಿಯ ಬೃಹತ್ ಮುನ್ನಡೆ

ನವೀನ ಹಾಗೂ ನವೀಕರಿಸಬಲ್ಲ ಶಕ್ತಿಯ ಸಚಿವಾಲಯವು ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 14,000 ಮೆ. ವ್ಯಾ. ಸಾಮರ್ಥ್ಯದ ನವೀಕರಿಸಬಲ್ಲ ಶಕ್ತಿ ಆಧಾರಿತ ಗ್ರಿಡ್ ವಿದ್ಯುತ್ ಜನಕ ಘಟಕಗಳನ್ನು ಅನುಷ್ಹಾನಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಸಾಂಪ್ರದಾಯಿಕ ಗ್ರಿಡ್ ಶಕ್ತಿ ಜನಕಗಳಿಗೆ ಸಮನಾದ ಸೌರ ವಿದ್ಯುತ್ ಜನಕಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಭಾರತ ಸರಕಾರವು ಜವಾಹರ ಲಾಲ್ ನೆಹರು ರಾಷ್ಟ್ರೀಯ ಸೌರ ಮಿಷನ್ ಅನ್ನು ಅನುಮೋದಿಸಿದೆ. ಮಿಷನ್ 20,000 ಮೆ. ವ್ಯಾ. ಸಾಮರ್ಥ್ಯದ ಗ್ರಿಡ್ ಆಧಾರಿತ ಸೌರ ವಿದ್ಯುಜ್ಜನಕ ಹಾಗೂ 2,000 ಮೆ. ವ್ಯಾ. ಸಾಮರ್ಥ್ಯದ ಗ್ರಿಡ್- ಆಧಾರಿತವಲ್ಲದ ಸೌರ ವಿದ್ಯುಜ್ಜನಕವನ್ನೂ, ಜೊತೆಗೆ 20 ಮಿಲಿಯನ್ ಸೌರ ದೀಪಗಳನ್ನು ಒಳಗೊಂಡಂತೆ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ. ಜೊತೆಗೆ, 2022 ಇಸವಿಯೊಳಗೆ 20 ಮಿಲಿಯನ್ ಚದರ ಮೀಟರ್ ನಷ್ಟು ಸೌರ ಉಷ್ಣ ಸಂಗ್ರಾಹಕಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಹಮ್ಮಿಕೊಂಡಿದೆ. ಈ ಮಿಶನ್ ಮೂರು ಹಂತಗಳಲ್ಲಿ ಜಾರಿಗೆ ಬರಲಿದೆ. 2012-13 ವರೆಗೆ ಜಾರಿಯಲ್ಲಿರುವ ಈ ಮಿಷನ್ನಿನ ಪ್ರಥಮ ಹಂತದಲ್ಲಿ 1,100 ಮೆ. ವ್ಯಾ. ಸಾಮರ್ಥ್ಯದ ಗ್ರಿಡ್ – ಸಂಪರ್ಕವಿರುವ ಸೌರ ವಿದ್ಯುತ್ ಸ್ಥಾವರಗಳನ್ನು, ಹಾಗೂ 200 ಮೆ. ವ್ಯಾ. ಸಾಮರ್ಥ್ಯದ ಗ್ರಿಡ್- ಸಂಪರ್ಕವಿರದ ಸೌರ ಅನ್ವಯಿಕಗಳನ್ನು ಅನುಷ್ಠಾನಗೊಳಿಸುವ ಯೋಜನೆ ಇದೆ. ಜೊತೆಗೆ, ಈ ಮಿಶನ್ ಸೌರ ಶಕ್ತಿ ಘಟಕದ ವೆಚ್ಚವನ್ನು ಕಡಿಮೆ ಮಾಡುವ, ಸಾಮರ್ಥ್ಯವನ್ನು ಹೆಚ್ಚಿಸುವ, ಒಟ್ಟು ಕ್ರಿಯಾತ್ಮಕತೆಯನ್ನು ಉತ್ತಮಗೊಳಿಸುವ ಸಂಶೋಧನೆ ಹಾಗೂ ಅಭಿವೃದ್ಧಿ ಅಲ್ಲದೆ, ನವೀನ ವಸ್ತುಗಳು ಹಾಗೂ ಸಾಧನಗಳ ಅಭಿವೃದ್ಧಿಗೂ ಒತ್ತುಕೊಡುತ್ತದೆ. ಈ ಮಾಹಿತಿಯನ್ನು ಒದಗಿಸಿದವರು ಡಾ. ಫಾರೂಕ್ ಅಬ್ದುಲ್ಲಾ, ಸಚಿವರು, ನವೀನ ಹಾಗೂ ನವೀಕರಿಸಬಲ್ಲ ಶಕ್ತಿಯ ಸಚಿವಾಲಯ, ಇದು ಅವರು ಇಂದು ರಾಜ್ಯ ಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿರುವ ಹೇಳಿಕೆ.

ಮೂಲಾಧಾರ: ಪಿಐಬಿ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate