ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ, ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲಿನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವಸಂಕುಲಕ್ಕೆ ಮಾರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿವೆ.
ಪರಿಸರ ಮಾಲಿನ್ಯದ ವಿಧಗಳು:
- ವಾಯುಮಾಲಿನ್ಯ: ವಾಯು ಜೀವಧಾತು. ಗಾಳಿಯಿಲ್ಲದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಇಂತಹ ವಾಯು ವಿಷವಾಗುತ್ತಿದೆ.
ಇದಕ್ಕೆ ಕಾರಣಗಳು ಹೀಗಿವೆ:
- ನೈಸರ್ಗಿಕ: ಕಾಡ್ಗಿಚ್ಚು,ಜ್ವಾಲಾಮುಖಿಗಳು
- ಮನುಷ್ಯ ನಿರ್ಮಿತ: ಕೈಗಾರಿಕೆಗಳು ಮತ್ತು ವಾಹನಗಳು ಹೊರಸೂಸುವ ವಿಷಾನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿವೆ. ಅಲ್ಲದೆ ಕೃಷಿ,ರಸ್ತೆ, ಜನವಸತಿಯಂತಹ ಯೋಜನೆಗಳಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ ನೈಸರ್ಗಿಕವಾಗಿ ವಾಯುಮಂಡಲ ಸ್ವಚ್ಛವಾಗುತ್ತಿಲ್ಲ. ಹೀಗೆ ವಾಯುವು ಮಲಿನವಾಗುತ್ತಿದೆ.
- ಶಬ್ದಮಾಲಿನ್ಯ: ಅತಿಯಾದ ಶಬ್ದ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತಿದೆ. ವಾಹನ ದಟ್ಟಣೆ,ಕೈಗಾರಿಕೆ,ಯಂತ್ರಗಳು,ಧ್ವನಿವರ್ಧಕಗಳು ಶಬ್ದಮಾಲಿನ್ಯಕ್ಕೆ ಮೂಲ ಕಾರಣಗಳು. ಇಂದು ಮಧುಮೇಹ,ರಕ್ತದೊತ್ತಡದಂತ ಖಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ನಮ್ಮ ಜೀವನ ಶೈಲಿ, ಆಹಾರ ಕ್ರಮಗಳ ಜೊತೆಗೆ ಅತಿಯಾದ ಶಬ್ದವೂ ಕಾರಣ. ಹೆಚ್ಚಿದ ನ ನಗರೀಕರಣದಿಂದ ವಾಹನ ದಟ್ಟಣೆ ಜಾಸ್ತಿಯಾಗುತ್ತಿದೆ. ಇದು ಶಬ್ದ ಮತ್ತು ವಾಯುಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಸಹ ಶಬ್ದಮಾಲಿನ್ಯದಿಂದ ತೊಂದರೆಗೊಳಗಾಗುತ್ತಿವೆ.
- ಭೂಮಾಲಿನ್ಯ: ಭೂ ಮಾಲಿನ್ಯ ಎರಡು ಕಾರಣಗಳಿಂದ ಆಗುತ್ತಿದೆ: 1. ಅರಣ್ಯ ನಾಶ ಮತ್ತು 2. ತ್ಯಾಜ್ಯ ಪದಾರ್ಥಗಳ ಅನಿಯಮಿತ ಹೆಚ್ಚಳ.
- ಜಲಮಾಲಿನ್ಯ: ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರು, ಉಷ್ಣವಿದ್ಯುತ್ ಸ್ಥಾವರಗಳು, ಗಣಿಗಾರಿಕೆ, ತೈಲಬಾವಿಗಳು, ಕೃಷಿಯಲ್ಲಿ ಬಳಸುವ ರಾಸಾಯನಿಕಗಳು, ಮನುಷ್ಯ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು ಜಲಮೂಲಗಳಾದ ಕೆರೆ,ಕುಂಟೆ,ಸರೋವರ ಮತ್ತು ನದಿಗಳನ್ನು ಸೇರುತ್ತಿರುವುದು ಜಲಮಾಲಿನ್ಯಕ್ಕೆ ಮುಖ್ಯ ಕಾರಣಗಳು. ಜಲಮಾಲಿನ್ಯದಿಂದ ಮನುಷ್ಯರ ಆರೋಗ್ಯ ಹಾಳಾಗುವುದಷ್ಟೇ ಅಲ್ಲದೇ ಜಲಚರಗಳು, ನೈಸರ್ಗಿಕ ಜಲಮೂಲಗಳೂ ಸಹ ನಾಶವಾಗುತ್ತಿವೆ.
ಪರಿಸರ ಮಾಲಿನ್ಯದ ದುಷ್ಪರಿಣಾಮಗಳು.
- ಪರಿಸರ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆಸ್ತಮಾ,ಉಬ್ಬಸ,ಕ್ಯಾನ್ಸರ್,ಕಾಲರಾ, ಅತಿಸಾರ, ಕಾಮಾಲೆ ಮೊದಲಾದ ಖಾಯಿಲೆಗಳು ಉಲ್ಬಣಿಸುತ್ತವೆ.
- ಓಜೋನ್ ಪದರದ ನಾಶದಿಂದ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಚರ್ಮ ಕ್ಯಾನ್ಸರ್, ಕಣ್ಣಿನ ತೊಂದರೆಗಳಿಗೆ ಕಾರಣವಾಗುತ್ತಿದೆ.
- ಆಮ್ಲ ಮಳೆಯೂ ಕೂಡ ಪರಿಸರ ಮಾಲಿನ್ಯದ ಕಾರಣದಿಂದಲೇ ಆಗುತ್ತಿದೆ. ಇದರಿಂದ ಅನೇಕ ಸ್ಮಾರಕಗಳು, ಕಟ್ಟಡಗಳು, ಭೂಮಿಯ ಫಲವತ್ತತೆ ನಾಶವಾಗುತ್ತಿದೆ.
- ಕಾಡಿನ ನಾಶದಿಂದ ಹಸಿರು ಮನೆ ಪರಿಣಾಮ ಉಂಟಾಗಿ ಇಂಗಾಲದ ಡೈ ಆಕ್ಸೈಡ್ ಮತ್ತು ಮೀಥೇನ್ ಗಳು ಭೂಮಿಯ ಉಷ್ಣತೆ ಹೆಚ್ಚಲು ಕಾರಣವಾಗುತ್ತಿವೆ.
- ಅತಿವೃಷ್ಟಿ ಹಾಗೂ ಅನಾವೃಷ್ಟಿ, ಪ್ರವಾಹ, ಸುನಾಮಿ,ಭೂಕುಸಿತ,ಭೂಕಂಪನದಂತಹ ನೈಸರ್ಗಿಕ ವಿಕೋಪಗಳೂ ಸಹ ಪರಿಸರ ಮಾಲಿನ್ಯದಿಂದ ಉಂಟಾಗುತ್ತಿವೆ.
- ಕಾಡುಪ್ರಾಣಿಗಳು,ಜಲಚರಗಳು, ಸರೀಸೃಪಗಳು, ಪಕ್ಷಿಗಳು ಪರಿಸರ ನಾಶದಿಂದ ತೊಂದರೆಗೊಳಗಾಗುತ್ತಿವೆ. ಅವುಗಳ ಜೀವ ಮತ್ತು ಜೀವನ ನೇರವಾಗಿ ಪ್ರಕೃತಿಯನ್ನೇ ಅವಲಂಬಿಸಿರುವುದರಿಂದ ಪರಿಸರದಲ್ಲಾಗುವ ಚಿಕ್ಕ ಬದಲಾವಣೆಯೂ ಸಹ ಅವುಗಳ ನಾಶಕ್ಕೆ ಕಾರಣವಾಗಬಲ್ಲದು. ಅಥವಾ ಅವುಗಳ ಜೀವನ ಕ್ರಮವನ್ನೇ ಬದಲಿಸಿ ಜೈವಿಕ ಸರಪಣಿಯನ್ನೇ ತುಂಡರಿಸಬಹುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/26/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.