ಒಮ್ಮೆ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯ ವಾದ ನಡೆಯುತ್ತಿತ್ತು, ನ್ಯಾಯವಾದಿಗಳು ತಮ್ಮ ಎಂದಿನ ಲಹರಿಯಲ್ಲಿ ವಾದ ಮಾಡುತ್ತಿದ್ದರು. ಹೀಗಿರುವಾಗ ನ್ಯಾಯವಾದಿಗಳ ಕೈಗೊಂದು ತಂತಿ ಸುದ್ದಿ ಬಂತು.ಚೀಟಿಯನ್ನು ನೋಡಿದ ನ್ಯಾಯವಾದಿಗಳು ಮತ್ತೆ ಎಂದಿನ ಲಹರಿಯಲ್ಲಿ ತಮ್ಮ ವಾದ ಮುಗಿಸಿ ಮೊಕದ್ದಮೆಯ ವಿಚಾರಣೆ ಮುಗಿಯುವರೆರೆಗೂ ತಮ್ಮ ಎಂದಿನ ಸಮಚಿತ್ತದಲ್ಲಿದ್ದರು. ವಾದವೆಲ್ಲ ಮುಗಿದ ಮೇಲೆ ಅಲ್ಲಿದ್ದ ಸಹೋದ್ಯೋಗಿಗಳಿಗೆ ಗೊತ್ತಾಯಿತು ಆ ನ್ಯಾಯವಾದಿಗಳಿಗೆ ಬಂದ ಚೀಟಿಯಲ್ಲಿದ್ದ ಸುದ್ದಿ ‘ಅವರ ಹೆಂಡತಿಯ ಹೆಂಡತಿಯ ನಿಧನದ ‘ ಸುದ್ದಿಯಾಗಿತ್ತು ಎಂದು. ಅಂತಹ ಸುದ್ದಿ ಬಂದರು ಎದೆಗುಂದದೆ ತಮ್ಮ ಕಕ್ಷಿದಾರನಿಗೆ ಅನ್ಯಾಯವಾಗಬಾರದು ಎಂದು ತಮ್ಮ ವಾದ ಮುಂದುವರೆಸಿದ ರೀತಿ ಆ ನ್ಯಾಯವಾದಿಗಳ ಕರ್ತವ್ಯ ನಿಷ್ಠೆಯನ್ನು ಎತ್ತಿ ಹಿಡಿದಿತ್ತು. ಆ ನ್ಯಾಯವಾದಿಗಳು ಮತ್ತಾರು ಅಲ್ಲ ಭಾರತದ ಉಕ್ಕಿನ ಮನುಷ್ಯನೆಂದು ಖ್ಯಾತಿವೆತ್ತ ‘ ಸರ್ದಾರ್ ವಲ್ಲಭ ಭಾಯಿ ಪಟೇಲ್ ‘ . ವಲ್ಲಭರು ತಮ್ಮ ಜೀವನದಲ್ಲಿ ಎಂತಹ ಕಷ್ಟ ಬಂದರೂ ಎಂತಹ ಪರಿಸ್ಥಿತಿಯಿದ್ದರೂ ಗಟ್ಟಿ ನಿರ್ಧಾರ ಮಾಡಿ ತಮ್ಮ ಕೆಲಸವನ್ನು ಮಾಡುತ್ತಿದ್ದರು.
ಪಟೇಲರು ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸ ತೊಡಗಿದಾಗ ಭಾರತದ ಸ್ವತಂತ್ರ ಚಳುವಳಿಗೆ ಆನೆ ಬಲ ಬಂದಂತಾಯಿತು. ಒಂದರ್ಥದಲ್ಲಿ ಆಂಗ್ಲರಿಗೆ ಚಳಿ ಬಿಡಿಸಿದರು ಎಂದರೆ ತಪ್ಪಾಗಲಾರದು ಅದಕ್ಕೆ ಸಾಕ್ಷಿ ಬರ್ಡೋಲಿ ಚಳುವಳಿ. ಪಟೇಲರ ಮಹತ್ವ ನಮಗೆ ಅರಿವಾಗುವುದು ನಮ್ಮ ದೇಶಕ್ಕೆ ಸ್ವತಂತ್ರ ಬಂದಾಗ ಅಂದರೆ ೧೯೪೭ರಲ್ಲಿ, ಸ್ವತಂತ್ರ ಬಂದಾಗ ನಮ್ಮ ದೇಶದಲ್ಲಿ ೬೦೦ಕ್ಕೂ ಹೆಚ್ಚು ರಾಜರ ಆಳ್ವಿಕೆಯಿದ್ದ ಸಂಸ್ಥಾನಗಳಿದ್ದವು. ಕೆಲವರು ತಾವಾಗಿಯೇ ಭಾರತದ ಒಕ್ಕೂಟವನ್ನು ಸೇರಿದರೆ ಕೆಲವರು ಪ್ರತಿರೋಧ ಒಡ್ಡಿದರು. ಅಂದು ಏನಾದರೂ ಪಟೇಲರು ಒಂದು ಗಟ್ಟಿ ನಿರ್ಧಾರ ಮಾಡದೆ ಇದ್ದಿದ್ದರೆ ಬಹುಶ ಭಾರತವೇ ಒಂದು ಖಂಡವಾಗುತ್ತಿತ್ತು ಏನೂ. ನಾವು ಒಂದು ಸಂಸ್ಥಾನದಿಂದ ಮತ್ತೊಂದು ಸಂಸ್ಥಾನಕ್ಕೆ ಹೋಗಬೇಕೆಂದರೆ ವೀಸಾ ಮತ್ತು ಪಾಸ್ಪೋರ್ಟ್ ಇಟ್ಟುಕೊಂಡೇ ಹೋಗುವ ಪರಿಸ್ಥಿತಿ ಇರುತ್ತಿತ್ತೋ ಏನೂ. ಪ್ರತಿ ಸಂಸ್ಥಾನವು ಮತ್ತೊಂದು ಸಂಸ್ಥಾನದ ಮೇಲೆ ಸದಾ ಯುದ್ದ ಮಾಡುತ್ತಲೇ ಇರುತ್ತಿತ್ತೇನೊ ಇವೆಲ್ಲಾ ಊಹಿಸಲಾಗದ ಯಕ್ಷ ಪ್ರಶ್ನೆಗಳು ಇವು. ಈಗ ಇರುವ ಕಾಶ್ಮೀರವೇ ಒಂದು ಸಮಸ್ಯೆಯಾದರೆ ಇನ್ನೂ ೬೦೦ ಸಂಸ್ಥಾನಗಳ ಸಮಸ್ಯೆ ಎಂದರೆ ಸ್ವತಂತ್ರ ಭಾರತ ಎಂಬುದು ಭಾರತೀಯರ ಕೈಗೆ ಬಂಗಾರದಲ್ಲಿ ತೊಡಿಸಿದ ಕೋಳವಾಗುತ್ತಿತ್ತು.
ಅಂದು ಪಟೇಲರು ಎಲ್ಲ ಸಂಸ್ಥಾನದ ರಾಜರಿಗೆ “ನಾವೆಲ್ಲ ಒಂದಾದರೆ ಏಳಿಗೆಯನ್ನು ಬೇಗ ಸಾಧಿಸಬಹುದು,ಬನ್ನಿ ಸಹಕಾರ ನೀಡಿ” ಎಂದು ಮನವಿ ಮಾಡಿದರು. ದೇಶಭಕ್ತ ರಾಜ ಮಹಾರಾಜರು ತಾವಾಗಿಯೇ ಭರತ ಖಂಡದೋಳು ತಮ್ಮ ಸಂಸ್ಥಾನವನ್ನು ವಿಲೀನ ಮಾಡಿದರು. ಆದರೆ ಹೈದರಾಬಾದಿನ ನಿಜಾಮ ಮತ್ತು ಜುನಾಗಡದ ನವಾಬನು ಪಾಕಿಸ್ತಾನ ಸೇರುವ ಸಂಚು ನಡೆಸುತ್ತಿದ್ದರು. ಪರಿಸ್ಥಿತಿಯು ವಿಕೋಪಕ್ಕೆ ಹೋಗುವುದನ್ನು ಅರಿತ ಪಟೇಲರು ಜುನಾಗಡಕ್ಕೆ ಸೈನ್ಯವನ್ನು ಕಳುಹಿಸಿದರು. ಜುನಾಗಡ ನವಾಬನು ಮುಂಬರುವ ಸೋಲನ್ನು ತಪ್ಪಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ಪರಾರಿಯಾದನು. ಆದರೆ ಹೈದರಾಬಾದಿನ ನಿಜಾಮ ಭಾರತದ ಒಕ್ಕೂಟಕ್ಕೆ ಸೇರಲು ಇನ್ನೂ ಒಪ್ಪಿರಲಿಲ್ಲ. ಆಗಾಗಲೇ ಕೋಟ್ಯಂತರ ಹಣವನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿ ಪಾಕಿಸ್ತಾನದ ಸೇನೆಯ ನೆರವು ಪಡೆಯಲು ಯೋಜಿಸಿದ್ದ. ಹೈದರಾಬಾದಿನ ಹಿಂದೂಗಳಿಗೆ ರಜಾಕ್ ಪಡೆಯನ್ನು ಬಿಟ್ಟು ಹಿಂಸಿಸಲು ಆರಂಭಿಸಿದ್ದ, ರಜಾಕ್ ಪಡೆಗಳು ಕಂಡ ಕಂಡ ಹಿಂದೂಗಳನ್ನೆಲ್ಲ ಕತ್ತರಿಸಿ ರಕ್ತದ ಓಕಳಿಯನ್ನಾಡಿದ್ದರು.ಪರಿಸ್ಥಿತಿ ಮತ್ತೆ ವಿಷಮಕ್ಕೆ ಹೋಗುವುದನ್ನು ಅರಿತ ಪಟೇಲರು ಪೊಲೀಸ್ ಕಾರ್ಯಾಚರಣೆ ನಡೆಸಿ ಐದೆ ದಿನಗಳಲ್ಲಿ ನಿಜಾಮ ಅಟ್ಟಹಾಸ ನಿಲ್ಲಿಸಿ, ಹೈದರಾಬಾದ್ ನಿಜಾಮ ತನ್ನ ಸಂಸ್ಥಾನವನ್ನು ಬಿಟ್ಟು ಕೊಟ್ಟ. ನಂತರ ಇದೆ ಚಾಳಿಯನ್ನು ಕಾಶ್ಮೀರದ ಮಹಾರಾಜ ಮುಂದುವರೆಸಿದ ಕಡೆಗೂ ಅವನ ಆಟ ಹೆಚ್ಚು ನಡೆಯದೆ ಅವನು ಸಹ ತನ್ನ ಸಂಸ್ಥಾನವನ್ನು ಭಾರತಕ್ಕೆ ಸಹ ಬಿಟ್ಟು ಕೊಟ್ಟ. ಅದೇ ಸಮಯಕ್ಕೆ ಪಾಕಿಸ್ತಾನವು ಕಾಶ್ಮೀರ ಮೇಲೆ ಆಕ್ರಮಣ ಮಾಡಿ ಒಂದಿಷ್ಟು ಭೂ ಭಾಗವನ್ನು ಕಬಳಿಸಿತು. ಇದನ್ನು ಕಂಡು ಕೆಂಡಮಂಡಲರಾದ ಪಟೇಲರು ಆಕ್ರಮಿತ ಕಾಶ್ಮೀರದ ಭೂ ಭಾಗವನ್ನು ವಶಕ್ಕೆ ಪಡೆಯುವ ಯೋಜನೆಯನ್ನು ನಿರೂಪಿಸಿದರು. ಆದರೆ ಇದು ವಿದೇಶಾಂಗ ಖಾತೆಗೆ ಸೇರುವುದರಿಂದ ಆ ಯೋಜನೆಯನ್ನು ಅಲ್ಲಿಯೇ ಬಿಟ್ಟರು. ಇದೇನಾದರೂ ಗೃಹ ಖಾತೆಗೆ ಸೇರಿದ್ದರೆ ಕತೆ ಬೇರೆಯೇ ಆಗುತ್ತಿತ್ತು.
ಭಾರತ ಸ್ವತಂತ್ರ ಪಡೆದಾಗ ಆಂಗ್ಲರು ನಿಯೋಜಿಸಿದ್ದ ಇಂಡಿಯನ್ ಸಿವಿಲ್ ಸರ್ವೀಸ್ ಅಧಿಕಾರಿಗಳು ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಅಧಿಕಾರಿಗಳು ಆಂಗ್ಲರಿಗೆ ನಿಷ್ಠರಾಗಿದ್ದರು ಹಾಗೂ ಭಾರತದ ಆಡಳಿತವನ್ನು ನಡೆಸುವಲ್ಲಿ ಪಳಗಿದ್ದರು. ಈ ಅಧಿಕಾರಿಗಳು ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಲು ಬೇಕೆ ಬೇಡವೇ ಎನ್ನುವ ಮಹತ್ವದ ನಿರ್ಧಾರವನ್ನು ಪಟೇಲರು ತಗೆದುಕೊಂಡರು. ಆಂಗ್ಲ ಐಸಿಸ್ ಅಧಿಕಾರಿಗಳನ್ನು ತಮ್ಮ ದೇಶಕ್ಕೆ ವಾಪಸಾಗುವಂತೆ ಮಾಡಿ ,ಕೇವಲ ದಕ್ಷ ಭಾರತೀಯ ಅಧಿಕಾರಿಗಳನ್ನು ಉಳಿಸಿಕೊಂಡರು. ಸಮರ್ಥ ಐಸಿಸ್ ಅಧಿಕಾರಿಗಳ ಪಡೆಯನ್ನು ಕಟ್ಟಿಕೊಂಡು ಭಾರತದ ಆಡಳಿತವನ್ನು ಹತೋಟಿಗೆ ತಂದರು. ಈ ಇಂಡಿಯನ್ ಸಿವಿಲ್ ಸರ್ವೀಸ್ ಮುಂದೆ ಭಾರತೀಯ ಆಡಳಿತಾತ್ಮಕ ಸೇವೆ ಎಂದು ಹೆಸರುವಾಸಿಯಾಯಿತು.
ನಮ್ಮ ದೇಶದಲ್ಲಿ ಇಂದು ೨೯ ರಾಜ್ಯಗಳಿದ್ದು ಸಹ ಗಡಿ ವಿವಾದಗಳ ಬಗ್ಗೆ ಮಾತನಾಡುತ್ತಿವೆ, ಇನ್ನೂ ದೇಶದ ತುಂಬಾ ೬೦೦ ಸಂಸ್ಥಾನಗಳು ಇದ್ದಿದ್ದರೆ ಎನಾಗುತ್ತಿತ್ತು ಎನ್ನುವುದು ಚರ್ಚೆ ಮಾಡಲೇಬೇಕಾದ ವಿಚಾರ. ಇಂತಹ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ದುಡಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಸರ್ದಾರ್ ವಲ್ಲಭ ಭಾಯಿ ಪಟೇಲರನ್ನು ಸದಾ ಸ್ಮರಿಸುತ್ತಿರಬೇಕು.
ನಾಳೆ ಅಂದರೆ ಆಗಸ್ಟ್ ೧೫ ನಮ್ಮ ದೇಶಕ್ಕೆ ಸ್ವತಂತ್ರ ಬಂದು ೬೮ ವರ್ಷ ಕಳೆದು ೬೯ಕ್ಕೆ ಕಾಲಿಡುತ್ತಿದ್ದೇವೆ, ನಾವು ನಮ್ಮ ದೇಶಕ್ಕೆ ಭಾರವಾಗದೆ ನಮ್ಮಿಂದಾದ ಕೊಡುಗೆ ನೀಡೋಣ
ಕೊಡುಗೆದಾರರು : ಮಧು ಚಂದ್ರ
ಕೊನೆಯ ಮಾರ್ಪಾಟು : 6/30/2020