অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಮ ಮನೋಹರ ಲೋಹಿಯ

ರಾಮ ಮನೋಹರ ಲೋಹಿಯ

ದೇಶದ ಸ್ವತಂತ್ರಕ್ಕಾಗಿ ಹೊರಾಡುವಾಗ ಬಂಧನಕ್ಕೆ ಒಳಗಾಗಿ ಸೆರೆಮನೆ ಸೇರದ ನಾಯಕರು ಬಹುಶ ಭಾರತದ ಇತಿಹಾಸದಲ್ಲಿ ಯಾರು ಇಲ್ಲ. ಹಾಗೆ  ದೇಶಕ್ಕೆ ಸ್ವತಂತ್ರ ಬಂದು ಅದೇ ಸ್ವತಂತ್ರಕ್ಕಾಗಿ ಹೋರಾಡಿದ ಸ್ವತಂತ್ರ ಚಳುವಳಿಗಾರ ಮತ್ತೆ ಅಧಿಕಾರಿಕಾರಶಾಹಿಗಳ ತಪ್ಪುಗಳನ್ನು ಖಂಡಿಸಿ ಚಳುವಳಿ ಮಾಡಿದ್ದಕ್ಕೆ ಮತ್ತೆ ಬಂಧನಕ್ಕೊಳಗಾಗಿ ಮತ್ತೆ ಸೆರೆಮನೆವಾಸ ಮಾಡಿದ್ದು ಬಹುಶ ಇತಿಹಾಸದಲ್ಲಿ ವಿರಳ ಅಂತ ಹೇಳಬಹುದು ಆದರೆ ಇದು ಸಾಧ್ಯವಿರುವುದು ನಮ್ಮ ದೇಶದಲ್ಲಿ ಮಾತ್ರ. ಆಂಗ್ಲ ಸರ್ಕಾರವು  ಇವರನ್ನು ಸರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಾರಿ ಸೆರೆಮನೆಗೆ ಕಳುಹಿಸಿದ್ದರೆ, ನಮ್ಮ ಸ್ವತಂತ್ರ ಪಡೆದ ಭಾರತ ಸರ್ಕಾರವು ಇವರನ್ನು ೧೨ಕ್ಕೂ ಹೆಚ್ಚು ಬಾರಿ ಸೆರೆಮನೆಗೆ ಕಳುಹಿಸಿದೆ.  ಯಾರು ಈ ಮಹಾನ್ ಸ್ವತಂತ್ರ ಚಳುವಳಿಗಾರ ಅಂತೀರಾ , ಇವರೇ ನಮ್ಮ ಸಮಾಜವಾದಿ ಮುಖಂಡರು , ಸ್ವತಂತ್ರ ಹೋರಾಟಗಾರರು ಹಾಗೂ  ಗಾಂಧೀವಾದಿಗಳು ಆದ ' ರಾಮ ಮನೋಹರ ಲೋಹಿಯ '

ಡಾ|| ರಾಮ್ ಮನೋಹರ್ ಲೋಹಿಯಾ

೧೯೪೨ರಲ್ಲಿ  ಗಾಂಧೀಜಿಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಸವಾಲು ಎಸೆದು ಚಳುವಳಿ ಆರಂಭಿಸಿದರು. ಆಂಗ್ಲ ಸರ್ಕಾರ ಗಾಂಧೀಜಿ ಸಮೇತ ಎಲ್ಲ ಚಳುವಳಿಗಾರರನ್ನು ಸೆರೆಮನೆಗೆ ಅಟ್ಟಿತು. ಆದರೆ ಲೋಹಿಯಾ ಆಂಗ್ಲರ ಕೈಗೆ ಸಿಗದೇ ಜೈ ಪ್ರಕಾಶ ನಾರಾಯಣರ ಜೊತೆ ಸೇರಿ ಭೂಗತವಾಗಿ ಚಳುವಳಿ ಸಂಘಟನೆಯಲ್ಲಿ ತೊಡಗಿದರು. ಆಂಗ್ಲ ಸರ್ಕಾರವು  ಲೋಹಿಯಾ ಅವರನ್ನು ಬಂಧಿಸಲು ದೊಡ್ಡ ಜಾಲವನ್ನು ಹಣೆಯಿತು. ಆಗ ಲೋಹಿಯಾ ಕೋಸಿ ನದಿ ದಾಟಿ ನೇಪಾಳಕ್ಕೆ ಹೋಗಿ ಅಲ್ಲಿ ಭೂಗತ ಆಕಾಶವಾಣಿಯನ್ನು ಆರಂಭಿಸಿ ಕ್ವಿಟ್ ಇಂಡಿಯ ಚಳುವಳಿಗೆ ಚಾಲನೆ ನೀಡಿದರು. ನೇಪಾಳದಲ್ಲಿ ಅಪಾಯದ ಸೂಚನೆ ಸಿಗುತ್ತಿದ್ದ ಹಾಗೆ ನೇಪಾಳ ಬಿಟ್ಟು ಭಾರತಕ್ಕೆ ಬಂದರು.ಆದರೆ ಎಲ್ಲಡೆಯು ಸೂರ್ಯ ಮುಳುಗದ ನಾಡಿನವರು ಇರುವಾಗ ತಪ್ಪಿಸಿಕೊಳ್ಳುವುದಕ್ಕೆ ಆಗುತ್ತದೆಯೇ ಕಡೆಗೂ  ಆಂಗ್ಲ ಸರ್ಕಾರದ ಕೈಗೆ ಸಿಕ್ಕಿ ಬಿದ್ದರು. ತಕ್ಷಣ ಭಾರತದ ಮುಖ್ಯ ಭಾಗದಲ್ಲಿದ್ದರೆ ಅಪಾಯವೆಂದು ಆಂಗ್ಲರು ಲೋಹಿಯಾ ಅವರನ್ನು ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಲಾಹೋರ್ ಜೈಲಿಗೆ ಕಳುಹಿಸಿದರು.
ಅಂದಿನ ಕಾಲದಲ್ಲಿ ಅಂಡಮಾನ್ ಮತ್ತು ಲಾಹೋರ್ ಜೈಲುಗಳೆಂದರೆ ಅತ್ಯಂತ ಕ್ರೂರವಾಗಿ ಶಿಕ್ಷಿಸುವ ಜೈಲುಗಳೆಂದೇ ಕುಖ್ಯಾತಿ ಪಡೆದಿದ್ದವು. ಇದೆ ಜೈಲಿನಲ್ಲಿ ಭಗತ್ ಸಿಂಗ್ರನ್ನು ಸಹ ಹಿಂದೆ ಇಡಲಾಗಿತ್ತು. ಲಾಹೋರ್ ಜೈಲಿನಲ್ಲಿ ಲೋಹಿಯಾ ಅವರಿಗೆ ಕೊಟ್ಟ ಶಿಕ್ಷೆಯನ್ನು ನೀವು ಊಹಿಸಿದರು ಸಹಿಸಲಸಾದ್ಯವೆನ್ನಬಹುದು. ನಮ್ಮ ದೇಶ ಉಗ್ರಗಾಮಿಗಳಿಗೂ ಸಹ ಕೊಟ್ಟಿರಲಿಲ್ಲ ಆ ರೀತಿಯ ಶಿಕ್ಷೆ ದೇಶ ಭಕ್ತ ಕ್ರಾಂತಿಕಾರಿ ಲೋಹಿಯಾ ಅವರಿಗೆ ಆಂಗ್ಲ ಸರ್ಕಾರ ನೀಡಿತ್ತು.
ಪ್ರತಿ ಸಲ ತನ್ನ ಕೊಠಡಿಯ ತನಕ ಕಿಟಕಿ ಮುಚ್ಚಿದ ವಾಹನಗಳಲ್ಲಿ ಲೋಹಿಯಾವರನ್ನು ಕರೆದೊಯ್ಯಲಾಗುತ್ತಿತ್ತು. ಕೊಠಡಿ ಒಳಗೆ ಕೊಡಿ ಹಾಕಿದ ಎಷ್ಟೂ ಸಮಯದವರೆಗೂ ಜಗತ್ತಿನ ಯಾವ ಭೂಖಂಡದಲ್ಲಿ ಹೀಗೆ ಬಂಧಿಸಿಡಲಾಗಿದೆ ಎನ್ನುವುದು ಗೊತ್ತಾಗಲಿಲ್ಲ. ಆರಂಭದಲ್ಲಿ ಲೋಹಿಯಾ ಅವರನ್ನು ಕೋಣೆಯಿಂದ ಕಚೇರಿಯವರೆಗೆ ಹಗಲು ರಾತ್ರಿ ಎನ್ನದೆ ಕರೆದೊಯ್ಯುತ್ತಿದ್ದರು. ಸುಮ್ಮನೆ ಬಹಳ ಸಮಯ ಕುರ್ಚಿಯಲ್ಲಿ ಕುಳ್ಳಿರಿಸುತ್ತಿದ್ದರು ಇಲ್ಲವೇ ನಿಲ್ಲಲು ಹೇಳುತ್ತಿದ್ದರು. ಮನಸ್ಸಿನಲ್ಲಿ ಸಿಟ್ಟು ಬರುವಂತೆ ಮಾಡುವುದೇ ಈ ವಿಧಾನ. ಈ ಮಾದರಿಯನ್ನು ನೀವು ಹಲವಾರು ಸಿನೆಮಾ ಇಲ್ಲವೇ ಲಂಚಗುಳಿತನ ಹೆಚ್ಚಾಗಿರುವ ಕಛೇರಿಗಳಲ್ಲಿ ನೋಡಿರಬಹುದು. ಲೋಹಿಯಾ ಅವರು ಕೆರಳುವಂತೆ ಮಾಡಲು ಒಂದೇ ಶಬ್ದವನ್ನು ಇಲ್ಲವೇ ಒಂದೇ ವಾಕ್ಯವನ್ನು ನೂರಾರು ಸಲ ಅಡಿ ತೋರಿಸುತ್ತಿದ್ದರು. ಲೋಹಿಯಾ ಅವರು ಎಂದಿಗೂ ಅಸಾಧಾರಣ ಭಾರವುಳ್ಳ ಬೇಡಿ ತೊಟ್ಟೆ ಇರಬೇಕಾಗಿತ್ತು. ಅವರನ್ನು ಒತ್ತಾಯದಿಂದ ಮಲಗದಂತೆ ಮಾಡಿ ಮಲಗಗೊಡದಿರುವಂತೆ ಮಾಡುವುದನ್ನು ಮಾಡಿ ಹಿಂಸೆ ಕೊಡುತ್ತಿದ್ದರು. ಎದುರಿಗೆ ಹಾಸಿಗೆ ಹಾಸಿದ್ದರೂ ಮಲಗಗೊಡದಿರುವುದು ಅಷ್ಟು ಸುಲಭವಾದ, ಸಹಜವಾದ ವಿಧಾನವಾಗಿರಲಿಲ್ಲ. ಲೋಹಿಯಾ ಅವರನ್ನು ಬಲವಂತದಿಂದ ಕಣ್ಣು ತೆರೆದೇ ಕುಳಿತುಕೊಳ್ಳುವಂತೆ ಹಿಂಸಿಸುತ್ತಿದ್ದರು. ಕಣ್ಣು ಮುಚ್ಚಿದರೆ ಪೊಲೀಸ್ ಅಧಿಕಾರಿ ಬೇಡಿಗಳಿಂದ ಸದ್ದು ಮಾಡುತ್ತಿದ್ದ . ಆರಂಭದಲ್ಲಿ ಈ ತರಹದ ನಿದ್ರಾಹೀನರಾಗುವಂತೆ ಸತತವಾಗಿ  ಮೂರು ನಾಲ್ಕು ದಿನಗಳವರೆಗೂ ನಾಲ್ಕು ತಿಂಗಳು ಮಾಡುತ್ತಿದ್ದರು.ಕಡೆಗೆ ಹತ್ತು ದಿನಕ್ಕೆರಾತ್ರಿ ಕಣ್ಣು ಮುಚ್ಚದಂತೆ ಹಿಂಸಿಸಿದರು. ಒಮ್ಮೆ ಹೀಗೆ ಶಿಕ್ಷಿಸುತ್ತಿರುವಾಗ ಲೋಹಿಯಾ ಒಂದು ಕಣ್ಣು ಮುಚ್ಚಿದರು ಆಗ ಅಧಿಕಾರಿ ಸದ್ದು ಮಾಡಿದನು ಆದರೆ ಲೋಹಿಯಾ ಕಣ್ಣು ಮುಚ್ಚೆ ಇದ್ದರು. ಇದನ್ನು ಕಂಡ ಅಧಿಕಾರಿ ಕುರ್ಚಿಯಿಂದ ಎದ್ದು ತನ್ನ ಮೇಲೆ ದಾಳಿ ಮಾಡುವಂತೆ ವರ್ತಿಸುತ್ತಿದ್ದ ಆಗ ಲೋಹಿಯಾ ' ದೈಹಿಕ ಹೋರಾಟಕ್ಕೆ ಒಬ್ಬರೇ ಬರಬೇಡಿ, ಅದು ಸೂಕ್ತವಲ್ಲ ' ಎಂದರು. ಆಗ ಅಧಿಕಾರಿ ಸುಮ್ಮನಾದನು. ಅದೇ ಸಮಯಕ್ಕೆ ಆ ಅಧಿಕಾರಿ ಜೋರಾಗಿ  ಅರಚಿ ತನ್ನ ಸಹಾಯಕರನ್ನು ಕರೆದು ಲೋಹಿಯಾ ಅವರ ಮೈಯನ್ನು ಹಿಡಿದು ತಾವು ಸುಸ್ತಾಗುವವರೆಗೂ ಎಳೆದಾಡಿ ಲೋಹಿಯಾ ಅವರ ಮೈಯಿಂದ ರಕ್ತ ಹರಿದುಬರುವಂತೆ ಮಾಡಿದರು.ಅಲ್ಲಿಂದ ಲೋಹಿಯಾವರನ್ನು ಸ್ನಾನ ಮಾಡಿಸಿ ಮತ್ತೆ ಬಲವಂತದ ಜಾಗರಣೆ ಮಾಡಿಸಿದರು. ಭಗತ್ ಸಿಂಗ್ರನ್ನು ಹಿಂಸೆಗೆ ಗುರಿಪಡಿಸಿದ ಅಧಿಕಾರಿಯನ್ನೇ  ಲೋಹಿಯಾ ಅವರಿಗೂ ಹಿಂಸಿಸಲು ನೇಮಕ ಮಾಡಿದ್ದರು. ಹಲವಾರು ಬಾರಿ ಕಾಯಿಲೆಗೆ ಬಿದ್ದರೂ ಭಾರತ ಮಾತೆಯ ದಯೆಯಿಂದ ಚೇತರಿಸಿಕೊಳ್ಳುತ್ತಿದರು. ಲಾಹೋರ್ ಜೈಲಿನ ಯಾತನೆಗಳನ್ನು ಅನುಭವಿಸುತ್ತಿರುವವರಿಗೆ ಪಕ್ಕದ ಕೊಠಡಿಯಲ್ಲಿರುವವರ ಸಂಪರ್ಕ ಸಹವಿರಲಿಲ್ಲ. ನಾಲ್ಕೈದು ತಿಂಗಳ ನಂತರವಷ್ಟೆ ಜೈಪ್ರಕಾಶ್ ನಾರಾಯಣರು ಸಹ ಇದೆ ಜೈಲಿನಲ್ಲಿ ಇದೆ ರೀತಿಯ ಯಾತನೆ ಅನುಭವಿಸುತ್ತಾ ಇದ್ದಾರೆ ಇಂದು ಲೋಹಿಯಾ ಅವರಿಗೂ ತಿಳಿದಿದ್ದು.ಲೋಹಿಯಾ ಅವರು ಲಾಹೋರ್ ಜೈಲಿನಲ್ಲಿದ್ದಾರೆ ಎಂದು ಸ್ವತಂತ್ರ ಹೋರಾಟಗಾರರಿಗೆ ತಿಳಿದಾಗ ಅವರನ್ನು ಸೆರೆಮನೆಯಿಂದ ಬಿಡಿಸುವ ಕಾರ್ಯಕ್ಕೆ ತೊಡಗಿದರು. ಲೋಹಿಯಾ ಅವರನ್ನು ಲಾಹೋರ್ ಸೆರೆಮನೆಯಿಂದ ಬಿಡಿಸಿಕೊಂಡು ಬರುವುದಕ್ಕೂ ಆಂಗ್ಲರು ಹಲವಾರು ಬಾರಿ ಅಡ್ಡಗಾಲು ಹಾಕಿದರೂ ಕಡೆಗೂ ಜೈಲಿನಿಂದ ಹೊರಬರುವಲ್ಲಿ ಯಶಸ್ವಿಯಾದರು.
ಮುಂದೆ ಗೋವೆಯನ್ನು ಪೋರ್ಚುಗೀಸರಿಂದ ವಿಮುಕ್ತಿಗೊಳಿಸುವ ಹಾಗೂ ನೇಪಾಳವನ್ನು ಸ್ವತಂತ್ರವಾಗಿಸುವ ಚಳುವಳಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಸೋಷಿಯಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದರು, ಕಡೆಗೆ ಹೊಂದಾಣಿಕೆ ಬಾರದ ಕಾರಣ ಕಾಂಗ್ರೆಸ್ ಪದವನ್ನು ತಗೆದು ಹಾಕಿ ಸಂಪೂರ್ಣಾಗಿ ಹೊರಗೆಬಂದು ರೈತರು , ಕಾರ್ಮಿಕರು ಹಾಗೂ ಮಾಧ್ಯಮ ವರ್ಗದ ಶ್ರಮಜೀವಿಗಳ ಪೋಷಣೆಗಾಗಿ ಸೋಷಿಯಲಿಸ್ಟ್ ಪಕ್ಷವನ್ನು ಕಟ್ಟಿದರು.
ಲೋಹಿಯಾ ಕನ್ನಡಿಗರಿಗೆ ಆತ್ಮೀಯರಾಗಿದ್ದು ಕಾಗೋಡಿನ ಚಳುವಳಿಯಯಲ್ಲಿ ಪಾಲ್ಗೊಂಡಾಗ, ಕಾಗೋಡು ಶಿವಮೊಗ್ಗೆಯ ಸಾಗರ ತಾಲೂಕಿನ ಒಂದು ಕುಗ್ರಾಮ . ಇಡಿ ಊರಿಗೆ ಒಬ್ಬನೇ ಜಮೀನ್ದಾರ ,ಉಳಿದವರೆಲ್ಲಾ ಗೇಣಿಕಾರರು, ಒಕ್ಕಲುಗಳು. ಅವರ ಸ್ಥಿತಿಯೆಂತು ಶೋಚನೀಯವಾಗಿತ್ತು. ಜಮೀನ್ದಾರರ ಮುಂದೆ ನಿಲ್ಲಲು ಹೆದರುತ್ತಿದ್ದರು. ಅಲ್ಲಿನ ರೈತರು ಸಂಘ ಕಟ್ಟಿಕೊಂಡು ಭೂ ಮಾಲೀಕರ ವಿರುದ್ದ ತಿರುಗಿಬಿದ್ದರು . ಆಗ ಗೇಣಿದಾರರನ್ನು ಭೂಮಿಯಿಂದ ಜಮೀನುದಾರರು ಬಿಡಿಸಿದರು ಈ ಅನ್ಯಾಯದ ವಿರುದ್ದ ರೈತರು ಸತ್ಯಾಗ್ರಹ ಹೂಡಿ ಪ್ರತಿಭಟಿಸಿದಾಗ , ಸರ್ಕಾರ ಜಮೀನುದಾರರ ಪರವಾಗಿ ವಹಿಸಿಕೊಂಡು ರೈತರನ್ನು ಬಂಧಿಸಿ ಶಿವಮೊಗ್ಗೆಯ ಜೈಲಿನಲ್ಲಿರಿಸಿತು.ಲೋಹಿಯಾ ಈ ಅನ್ಯಾಯವನ್ನು ಪ್ರತಿಭಟಿಸಲು ತಾವೇ ಕಾಗೋಡಿಗೆ ಆಗಮಿಸಿ ಇತರೆ ರೈತರ ಜೊತೆ ಸೇರಿ ಚಳುವಳಿಯ ಹೂಡಿದರು. ಸರ್ಕಾರ ಲೋಹಿಯಾರವರನ್ನು ಬಂಧಿಸಿ ಶಿವಮೊಗ್ಗೆಯ ಜೈಲಿನಲ್ಲಿ ಇಟ್ಟರು, ನಂತರ ಅವರನ್ನು ಬೆಂಗಳೂರಿಗೆ ವರ್ಗಾಯಿಸಿದರು. ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಬಿಡುಗಡೆ ಮಾಡಿದರು.      
ಹೀಗೆ ಯಾವ ವರ್ಗವೇ ಶೋಷಣೆಗೆ ಒಳಪಡಲಿ ಲೋಹಿಯಾ ಅದನ್ನು ಖಂಡಿಸಿ, ಅವರಿಗೆ ನ್ಯಾಯ ಒದಗಿಸುವವರೆಗೂ ಬಿಡುತ್ತಿರಲಿಲ್ಲ. ಎಲ್ಲರಿಗೂ ಸಮಾನ ಅವಕಾಶ ಇದು ಅವರ ಸಿದ್ದಾಂತ . ಅಧಿಕಾರಶಾಹಿಗಳು ತಪ್ಪು ಮಾಡಿದಾಗ ಹಿಂದೆ ಮುಂದೆ ನೋಡದೆ ಯಾರಿಗೂ ಅಂಜದೆ ಖಂಡಿಸುತ್ತಿದ್ದರು. ಲೋಹಿಯಾ ಒಬ್ಬ ಅಪರೂಪದ ಕ್ರಾಂತಿಕಾರಿ ನೇತಾರರು, ಸ್ವತಂತ್ರ ಭರತದಲ್ಲಿ ಸ್ವತಂತ್ರ ಹಾಗೂ ಸಮಾನತೆಗೆ ನಿರಂತರ ಹೋರಾಟ ಮಾಡಿದವರು. ಜಗತ್ತು ಪೊಲೀಸ್ ಮತ್ತು ಸೇನೆರಹಿತವಾಗಿರಬೇಕೆಂದು ಚಿಂತಿಸಿದ ಚಿಂತಕರಲ್ಲಿ ಲೋಹಿಯಾ ಸಹ ಒಬ್ಬರು. 
ರಾಮ್ ಮನೋಹರ್ ಲೋಹಿಯಾ ಅವರ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ  ಓಂಕಾರ್ ಶರದ್ ಅವರು ಬರೆದಿರುವ ಲೋಹಿಯಾ ಅವರ ಜೀವನ ಚರಿತ್ರೆಯನ್ನು ಓದಲೇಬೇಕು.

ಕೊಡುಗೆದಾರರು : ಮಧು  ಚಂದ್ರ

ಕೊನೆಯ ಮಾರ್ಪಾಟು : 6/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate