অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಲ್ಲಿಕಾ

ಮಲ್ಲಿಕಾ

ವಾಲಿಬಾಲ್ ಇತ್ತೀಚೆಗೆ ಜನಪ್ರಿಯ ಕ್ರೀಡೆಗಳಲ್ಲೊಂದಾಗಿದ್ದು, ಒಳಾಂಗಣ ಅಥವಾ ಹೋರಾಂಗಣಲ್ಲಿ ಪ್ರಮುಖ ಕ್ರೀಡೆಯಾಗಿದೆ. ಹೀಗಾಗಿ ವಾಲಿಬಾಲ್ ಕ್ರೀಡೆ ರಾಜ್ಯ, ರಾಷ್ಟ್ರೀಯ, ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಕ್ರೀಡೆಯಾಗಿ ಮಾರ್ಪಟ್ಟಿದೆ.

ಅಂದಹಾಗೆ ಮೈಸೂರು ಡಿವೈಎಎಸ್ ಹಾಸ್ಟೇಲ್ ಮತ್ತು ಮೈಸೂರು ಯೂನಿವರ್ಸಿಟಿ ಈ ಕ್ರೀಡೆಯ ಉತ್ತೇಜನ ಹಾಗೂ ಪ್ರತಿಭಾನ್ವಿತ ಆಟಗಾರರ ಪ್ರವರ್ಧಮಾನಕ್ಕೆ ಇನ್ನಲ್ಲದ ಪ್ರಾಶಸ್ತ್ಯ ನೀಡುತ್ತಿದೆ. ಇವರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಅನೇಕ ಮಂದಿ ರಾಜ್ಯ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಹವರ ಪೈಕಿ ರಾಜ್ಯ ಮಹಿಳಾ ವಾಲಿಬಾಲ್ ತಂಡದ ನಾಯಕಿ ಮಲ್ಲಿಕಾ ಶೆಟ್ಟಿ ಕೂಡ ಒಬ್ಬರಾಗಿದ್ದು, ಪ್ರತಿಭಾವಂತ ಆಟಗಾರ್ತಿ ಎನಿಸಿದ್ದಾರೆ.

ಸುಮಾರು 23ಕ್ಕೂ ಅಧಿಕ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಮಲ್ಲಿಕಾ ಶೆಟ್ಟಿ, ಹಲವು ಬಾರಿ ಟೂರ್ನಿಯ ಶ್ರೇಷ್ಠ ಆಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಜತೆಗೆ ಕೆಲವು ದಿನಗಳ ಹಿಂದೆ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಮೈಸೂರು ಕ್ರೀಡಾ ಹಾಸ್ಟೇಲ್‌ನ ಸ್ಟಾರ್ ಆಟಗಾರ್ತಿಯಾಗಿರುವ ಮಲ್ಲಿಕಾ, ರಾಷ್ಟ್ರೀಯ ಜೂನಿಯರ್ ಮತ್ತು ಸೀನಿಯರ್ ಶಿಬಿರಗಳಲ್ಲಿ ತಲಾ ಒಮ್ಮೆ ಪಾಲ್ಗೊಂಡಿದ್ದಾರೆ. ಆದರೆ ಈವರೆಗೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಲು ಸಾಧ್ಯವಾಗಿಲ್ಲ. ಆದರೂ ರಾಷ್ಟ್ರೀಯ ತಂಡದಲ್ಲಾಡುವ ಅವರ ತುಡಿತ ಮಾತ್ರ ಮಾಸಿಲ್ಲ.''ರಾಷ್ಟ್ರೀಯ ತಂಡದಲ್ಲಿ ಆಡುವುದು ನನ್ನ ಗುರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ'' ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಸಾಕಷ್ಟು ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರುವ ಮಲ್ಲಿಕಾ ಶೆಟ್ಟಿಗೆ ರಾಷ್ಟ್ರೀಯ ತಂಡದಲ್ಲಿ ಇನ್ನೂ ಅವಕಾಶ ದೊರೆಯದಿರುವುದು ವಿಪರ್ಯಾಸ ಸರಿ.

ಕೆಲಸಕ್ಕಾಗಿ ಹಾತೊರಿಯುತ್ತಿರುವ ಮಲ್ಲಿಕಾ
ಕೆಲುವರು ಕ್ರೀಡಾ ಸಾಧನೆ ಮಾಡದೆಯೂ ಕ್ರೀಡಾ ಕೋಟಾದಡಿ ಸರಕಾರಿ ಕೆಲಸಗಳನ್ನು ಗಿಟ್ಟಿಸುತ್ತಾರೆ. ಆದರೆ ಪ್ರತಿಭೆಯಿದ್ದರೂ ಕೆಲಸ ಪಡೆಯಲಾಗದ ನತದೃಷ್ಟೇ ಮಲ್ಲಿಕಾ ಶೆಟ್ಟಿ ಅವರದ್ದಾಗಿದೆ. ಈ ಕುರಿತು ತಮ್ಮ ಅಸಾಹಯಕತೆ ವ್ಯಕ್ತಪಡಿಸಿದ ಮಲ್ಲಿಕಾ''ನಮ್ಮಂತಹ ಬಡವರಿಗೆ ಕೆಲಸಕ್ಕಾಗಿ ಶಿಫಾರಸು ಮಾಡುವುವರು ಯಾರು ಸರ್,'' ಎಂದು ಪ್ರಶ್ನಿಸುತ್ತಾರೆ. ''ಹಲವು ಬಾರಿ ಕ್ರೀಡಾ ಕೋಟಾದಡಿ ರೈಲ್ವೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಕೆಲಸ ಮಾತ್ರ ಸಿಕ್ಕಿಲ್ಲ. ಕೇಂದ್ರ ಸಚಿವ ಡಿ.ವಿ. ಸದನಾಂದಗೌಡ ಅವರು ಸೇರಿದಂತೆ ಎಲ್ಲರ ಬಳಿ ತಮ್ಮ ಸ್ಥಿತಿ ಹೇಳಿಕೊಂಡರೂ ಯಾರು ನೆರವಿಗೆ ಬಂದಿಲ್ಲ. ತಂದೆ ಕಳೆದುಕೊಂಡಿರುವ ನಾನು ಮತ್ತು ನನ್ನ ಕುಟುಂಬ ಮಾವನನ್ನು ಆಶ್ರಯಿಸಿದ್ದೇವೆ. ಹೀಗಾಗಿ ಕುಟುಂಬಸ್ಥರ ತುತ್ತಿನ ಚೀಲ ತುಂಬಿಸಲು ಕೆಲಸಕ್ಕಾಗಿ ಹಾತೊರಿಯುತ್ತಿದ್ದೇನೆ,'' ಎಂದು ವಿಜಯ ಕರ್ನಾಟಕದೊಂದಿಗೆ ತಮ್ಮ ಒಳ ನೋವು ತೋಡಿಕೊಂಡರು.

21ರ ಹರೆಯದ ಮಲ್ಲಿಕಾ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗುಳಿ ಗ್ರಾಮದವರಾಗಿದ್ದು, ಸದ್ಯ ಮೈಸೂರಿನ ಕ್ರೀಡಾ ಇಲಾಖೆಯಲ್ಲಿ ಕೋಚ್ ಅಶೋಕ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಎಡಗೈ ಆಟಗಾರ್ತಿಯಾಗಿರುವ ಮಲ್ಲಿಕಾ ತಂಡದ ಆಧಾರ ಸ್ತಂಭ. ರಕ್ಷಣೆ, ಆಕ್ರಮಣಕಾರಿ ಹೊಡೆತಗಳ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರುವ ಇವರು ರಾಜ್ಯ ತಂಡದ ಶಕ್ತಿಯೆನಿಸಿದ್ದಾರೆ.

1.72 ಸೆಂಟಿ ಮೀಟರ್ ಎತ್ತರವಿರುವ ಇವರು ಶಾಲಾ ದಿನಗಳಿಂದಲೇ ವಾಲಿಬಾಲ್ ಕ್ರೀಡೆಯತ್ತ ಆಕರ್ಷಿತರಾದವರು. 2007ರಲ್ಲಿ ಬೆಂಗಳೂರಿಗೆ ಬಂದ ಅವರು ಕ್ರೀಡಾ ಶಾಲಾ ವಿದ್ಯಾನಗರದಲ್ಲಿ ವಾಲಿಬಾಲ್‌ನತ್ತ ಹೆಚ್ಚು ಆಸಕ್ತಿ ಬೆಳೆಸಿಕೊಂಡರು. ಬಳಿಕ ದೈಹಿಕ ಶಿಕ್ಷಕರು ಹಾಗೂ ಪೋಷಕರ ನೆರವಿನಿಂದ ಮೈಸೂರಿನ ಕ್ರೀಡಾ ಹಾಸ್ಟೇಲ್‌ಗೆ ಸೇರ್ಪಡೆಗೊಂಡು ತರಬೇತಿ ಪಡೆಯುತ್ತಿದ್ದು, ಪ್ರಸ್ತುತ ಮೈಸೂರಿನ ಟೆರೆಸಿಯಾನ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಅಂತಿಮ ವರ್ಷದ ಪದವಿ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದ ಮಲ್ಲಿಕಾ ಶೆಟ್ಟಿ ಕೇರಳದಲ್ಲಿ ಫೆಬ್ರವರಿಯಲ್ಲಿವ ನಡೆಯಲಿರುವ ರಾಷ್ಟ್ರೀಯ ಕೂಟದಲ್ಲಿ ರಾಜ್ಯ ಮಹಿಳಾ ತಂಡದ ನಾಯಕತ್ವದ ಹೊಣೆಗಾರಿಕೆ ಹೊತ್ತಿದ್ದಾರೆ. ನಾಯಕತ್ವದ ಗುಣಗಳಲ್ಲದೆ ಕಿರಿಯ ಆಟಗಾರ್ತಿಯರಿಗೆ ಸ್ಫೂರ್ತಿದಾಯಕವಾಗಿದ್ದಾರೆ.

ಮೂಲ : ಮಂಜುನಾಥ ಕೆ ಜಾಬಗೆರೆ , ಬೆಂಗಳೂರು ಪ್ರಜಾವಾಣಿ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate