ಸ್ವತಂತ್ರಪೂರ್ವದಲ್ಲಿ ಯುವಕನೋರ್ವ ಅಂಡಮಾನಿನ ಸೆರೆಮನೆಯಲ್ಲಿದ್ದು ಕೊಂಡು ಸೆರೆಮನೆಯ ಕಿರುಕುಳವನ್ನೆಲ್ಲ ಸಹಿಸಿ, ಅಲ್ಲಿನ ವ್ಯವಸ್ಥೆಯ ವಿರುದ್ದ ಹೋರಾಡುತ್ತಾ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಬಿಎ ಪರೀಕ್ಷೆಗೆ ಖಾಸಗಿಯಾಗಿ ಕುಳಿತು ತೇರ್ಗಡೆಯಾಗುತ್ತಾನೆ. ಅಂದಿನ ಕಾಲದಲ್ಲಿ ಅಂಡಮಾನಿನ ಸೆರೆಮನೆಯೆಂದರೆ ಅಪ್ರತಿಮ ಭಾರತೀಯ ದೇಶಭಕ್ತರಿಗೆ ಆಂಗ್ಲರು ಕೊಡುತ್ತಿದ್ದ ಅತಿ ದೊಡ್ಡ ಬಹುಮಾನವೆಂದರೇ ತಪ್ಪಾಗಲಾರದು.ಸೆರೆಮನೆಯಲ್ಲಿದ್ದುಕೊಂಡೆ ಬಿಎ ಪರೀಕ್ಷೆ ಪಾಸಾದ ಭಾರತ ಮಾತೆಯ ವೀರ ಪುತ್ರ ಯಾರು ಗೊತ್ತೇ ಅವರೇ ಕ್ರಾಂತಿಕಾರಿ ದೇಶಭಕ್ತ ಭಗತ್ ಸಿಂಗ್ ಜೊತೆ ಕೇಂದ್ರ ವಿಧಾನಸಭೆಯ ಮೇಲೆ ಬಾಂಬು ಎಸೆದು ಬಂಧಿಯಾದ ದೇಶಭಕ್ತ ಕ್ರಾಂತಿಕಾರಿ ‘
ಬಟುಕೇಶ್ವರ ದತ್ತ ‘ಅಂಡಮಾನಿನ ಬಹುಮಾನವೆಂದರೆ , ಸೆರೆಮನೆಯ ಕೈದಿಗಳು ಪ್ರತಿದಿನ ತೆಂಗಿನ ನಾರನ್ನು ತೆಗೆದು ಶುದ್ದಿ ಮಾಡಬೇಕು, ಅದರಲ್ಲೂ ರಾಜಕೀಯ ಕೈದಿಗಳು ಪ್ರತಿದಿನ ಎಣ್ಣೆ ಗಾಣವನ್ನು ಖುದ್ದು ತಾವೇ ತಿರುಗಿಸಿ ೩೦ ಪೌಂಡ್ ಎಣ್ಣೆ ತಗೆಯಬೇಕು ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹ ಛಡಿಯೇಟು ಇಲ್ಲವೇ ಬೂಟುಗಾಲಿನ ಒದೆತ ತಪ್ಪಿದ್ದಲ್ಲ .ಕೆಲಸದಲ್ಲಿದ್ದಾಗ ಅಕ್ಕಪಕ್ಕದವರ ಜೊತೆ ಮಾತನಾಡಿದರೆ ನಿಂತಲ್ಲೆ ಬೇಡಿ ತೊಡಿಸುವ ನಿಲುವು ಬೇಡಿಯ ಶಿಕ್ಷೆ. ಇನ್ನೂ ಪ್ರಕೃತಿಯ ಕರೆಯ ಬಗ್ಗೆಯಂತೂ ಹೇಳತೀರದು ಬೆಳಗ್ಗೆ ,ಮಧ್ಯಾನ್ನ ಹಾಗೂ ಸಂಜೆಯಷ್ಟೆ ಕರೆಗೆ ಹೋಗಿಬರಲು ಅನುಮತಿ. ರಾತ್ರಿಯಾದರೇ ಅವರ ಇದ್ದ ಸೆರೆಮನೆಯಲ್ಲೇ ತೀರಿಸಿಕೊಳ್ಳಬೇಕು. ಇನ್ನೂ ರಾಜಕೀಯ ಕೈದೀಯಾದರೆ ಬೇರೆ ವ್ಯವಸ್ಥೆಯೇ ತಮ್ಮ ಪಕ್ಕದ ಸೆರೆಮನೆಯ ಕೊಠಡಿಯಲ್ಲಿನ ಕೈದಿಯನ್ನು ಸಹ ನೋಡುವಂತಿಲ್ಲ.
೧೯೦೮ ನವೆಂಬರ ೧೮ರಲ್ಲಿ ಬಂಗಾಳದ ಬರ್ದವಾನ್ ಜಿಲ್ಲೆಯ ಒರಿಗ್ರಾಮದ ಗೋಶ್ತ್ ಬಿಹಾರಿ ದತ್ತ ಹಾಗೂ ಕಮಲ ಕಾಮಿನಿಯವರ ಐದನೇ ಮಗನಾಗಿ ಜನಿಸಿದರು. ಬಟುಕೇಶ್ವರರು ಬಾಲ್ಯದಲ್ಲಿ ದೇಶಭಕ್ತರು , ಐತಿಹಾಸಿಕ ಹಾಗೂ ಪೌರಾಣಿಕ ಮಹಾಪುರುಷರ ಜೀವನ ಚರಿತ್ರೆಯ ಮಾಡಿದ ಅಧ್ಯಯನ ಅವರ ಮೇಲೆ ಭಾರಿ ಪ್ರಭಾವ ಬೀರಿತ್ತು. ಕಾನ್ಪುರದ ಮಾಲ್ ರೋಡ್ನಲ್ಲಿ ಆಂಗ್ಲರು ವಾಸಿಸುತ್ತಿದ್ದರು ಹಾಗಾಗಿ ಆ ರಸ್ತೆಯಲ್ಲಿ ಭಾರತೀಯರಿಗೆ ಸಂಚಾರ ನಿಶಿದ್ದವಾಗಿತ್ತು.ಯಾರಾದರೂ ಭಾರತೀಯರು ಅಪ್ಪಿತಪ್ಪಿ ಅತ್ತ ಕಡೆ ಸಂಚರಿಸಿದರು ಅವರಿಗೆ ತೀವ್ರ ಸ್ವರೂಪದ ಶಿಕ್ಷೆ ಕಾದಿತ್ತು. ಒಮ್ಮೆ ತರುಣ ಬಟುಕೇಶ್ವರರು ನಮ್ಮ ದೇಶದಲ್ಲಿ ಸಂಚರಿಸಲು ನಮಗೆ ಸ್ವತಂತ್ರವಿಲ್ಲವೇ ಎಂದು ಪ್ರಶ್ನಿಸಿ ಮಾಲ್ ರಸ್ತೆಗೆ ಸಂಚಾರಕ್ಕೆಂದು ಇಳಿದೆಬಿಟ್ಟರು. ಇದನ್ನು ಕಂಡು ಕೆಂಡಮಂಡಲವಾದ ಕೆಂಪುಮೂತಿಯ ಆಂಗ್ಲರು ಮನಬಂದಂತೆ ತಳಿಸಿದರು. ಬಟುಕೇಶ್ವರನ ಮೇಲೆ ಬಿದ್ದ ಆಂಗ್ಲರ ಏಟುಗಳು ಮುಂದೆ ಆಂಗ್ಲರ ಪಾಲಿಗೆ ಕಂಟಕವಾಗುತ್ತವೆ ಎಂದು ಯಾರು ಸಹ ಊಹಿಸಿರಲಿಲ್ಲ. ಅಂದೆ ಬಟುಕೇಶ್ವರರು ಈ ಆಂಗ್ಲರನ್ನು ಭಾರತದಿಂದ ಕಿತ್ತೋಗೆಯಬೇಕೆಂದು ನಿರ್ಧರಿಸಿದರು. ಇಂತಹ ಮಹತ್ವದ ನಿರ್ಧಾರ ಮನದಲ್ಲಿ ಮೂಡಿದ್ದು ಅವರ ಹದಿಮೂರರ ಪ್ರಾಯದಲ್ಲಿ ಎಂದರೆ ಬಾಲಕನ ದೇಶಭಕ್ತಿಯ ಎಂತಹುದು ಎಂದು ನಾವೆಲ್ಲ ಅರಿಯಬೇಕು.
ದೇಶದಲ್ಲಿ ಮಂದಗಾಮಿಗಳ ಬಗ್ಗೆ ತೀವ್ರ ಅಸಮಾಧಾನವಿದ್ದ ಕ್ರಾಂತಿಕಾರಿ ಯುವಕರೆಲ್ಲ ಸೇರಿ
ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ಎಂಬ ಸಂಸ್ಥೆಯನ್ನು ಕಟ್ಟಿ ಗುಪ್ತವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಸಂಘಕ್ಕೆ ಚಂದ್ರಶೇಖರ್ ಆಜಾದ್ ಹಾಗೂ ಭಗತ್ ಸಿಂಗ್ ಅವರೇ ನಾಯಕರುಗಳು. ಮೊದಲೇ ಮನದಲ್ಲಿ ಆಂಗ್ಲರು ಹೊತ್ತಿಸಿದ್ದ ಕಿಚ್ಚು ಬೃಹದಾಕಾರವಾಗಿ ಬೆಳೆದು ಆಂಗ್ಲರನ್ನು ಸುಟ್ಟು ಹಾಕುವಂತೆ ಬಟುಕೇಶ್ವರರನ್ನು ಪ್ರೇರೇಪಿಸಿತು ಹಾಗಾಗಿ ಅವರು ಸಹ
ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ನ ಸದಸ್ಯರಾದರು.
1928ರಲ್ಲಿ ಆಂಗ್ಲ ಸರ್ಕಾರವು ಭಾರತೀಯರು ಸ್ವತಂತ್ರ ಪಡೆಯಲು ಯೋಗ್ಯರೇ ಎಂದು ತೀರ್ಮಾನಿಸಲು
ಸೈಮನ್ ಕಮೀಶನ್ ಎಂಬ ಆಯೋಗವನ್ನು ಸೈಮನ್ ಎಂಬ ಅಧಿಕಾರಿಯ ಮುಂದಾಳತ್ವದಲ್ಲಿ ಕಳುಹಿಸಿಕೊಟ್ಟಿತು.
ಸೈಮನ್ ಕಮೀಶನ್ನನ್ನು ಭಾರತಿಯರೆಲ್ಲರೂ ಬಹಿರಂಗವಾಗಿ ವಿರೋಧಿಸಿ ಚಳುವಳಿ ಹರತಾಳಗಳಲ್ಲಿ ತೊಡಗಿದರು.ಲಾಲಾ ಲಜಪತ್ ರಾಯರು ಈ ಚಲುವಳಿಯ ಮುಂದಾಳತ್ವ ವಹಿಸಿ ಲಾಹೋರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಆಂಗ್ಲರು ಮಾಡಿದ ತೀವ್ರ ಲಾಟಿ ಪ್ರಹಾರಕ್ಕೆ ಲಾಲಾ ಲಜಪತ್ ರಾಯರು ಅಸುನೀಗಿದರು. ಲಾಲಾ ಲಜಪತ್ ರಾಯರು ಮರಣವೂ ಕ್ರಾಂತಿಕಾರರನ್ನು ಮತ್ತಷ್ಟು ಕೆರಳಿಸಿತು. ಲಾಟಿ ಪ್ರಹಾರ ಮಾಡಿದ ಅಧಿಕಾರಿಯಾದ ಸ್ಕಾಟ್ನನ್ನು ಬಲಿಪಡೆಯಬೇಕು ಎಂದು ಕ್ರಾಂತಿಕಾರಿಗಳು ನಿರ್ಧಾರ ಮಾಡಿ ಆ ಅಧಿಕಾರಿಯ ಚಲನವನದ ಮೇಲೆ ನಿಗಾ ಇಟ್ಟಿದ್ದರು. ಒಮ್ಮೆ ಆತನ ಲಾಹೋರಿನ ತನ್ನ ಕಛೇರಿಯಿಂದ ಸ್ಯಾಂಡರ್ಸ್ ಎಂಬ ಅಧಿಕಾರಿ ಹೊರಬರುತ್ತಿದ್ದಾಗ ಆತನೇ ಸ್ಕಾಟ್ ಎಂದು ತಪ್ಪಾಗಿ ಅರಿತು ಅವನನ್ನು ಮುಗಿಸಿಬಿಟ್ಟರು.
ಸ್ಯಾಂಡರ್ಸ್ ಹತ್ಯೆಯಿಂದ ಜಾಗೃತರಾದ ಆಂಗ್ಲರು ಹತ್ಯೆಯ ಹಿಂದೆಯಿದ್ದ ಕ್ರಾಂತಿಕಾರಿಗಳನ್ನು ಬಂಧಿಸಿಬಿಡಬೇಕೆಂಬ ಪಣ ತೊಟ್ಟರು. ಪೊಲೀಸರಿಗೆ
ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ಈ ಕೃತ್ಯದಲ್ಲಿ ಭಾಗಿಯಾಗಿದೆಂದು ಅನುಮಾನ ಬರತೊಡಗಿತು.ಆಗ ಆಂಗ್ಲ ಸರ್ಕಾರ್ ಜನರಿಗೆ
ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ಬಗ್ಗೆ ಸುಳ್ಳು ಹೇಳುತ್ತಾ ಜನರಿಗೆ ಈ ಸಂಘಟನೆಯವರನ್ನು ದೇಶದ್ರೋಹಿಗಳೆಂದು ಸಾರತೊಡಗಿತು. ಆಗ
ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ತಾವು ಆಂಗ್ಲರ ವಿರುದ್ದ ದೇಶದ ಸ್ವತಂತ್ರಕ್ಕಾಗಿ ಹೋರಾಡುವ ದೇಶ ಭಕ್ತರೆಂದು ತಮ್ಮ ಯೋಜನೆಗಳನ್ನು ಜನಕ್ಕೆ ತಿಳಿಸಬೇಕೆಂದು ನಿರ್ಧರಿಸಿದರು.
ಕೇಂದ್ರ ವಿಧಾನಸಭೆ ಜರುಗುವ ಸಮಯದಲ್ಲಿ ಬಾಂಬು ಎಸೆದು ತಮ್ಮ ಧ್ಯೇಯವನ್ನು ತಿಳಿಸುವ ಯೋಜನೆಯನ್ನು ಕ್ರಾಂತಿಕಾರಿಗಳು ನಿರ್ಧಾರ ಮಾಡಿ ಭಗತ್ ಸಿಂಗ್ ಮತ್ತು ಬಟುಕೇಶ್ವರರನ್ನು ಈ ಕಾರ್ಯಕ್ಕೆ ನೇಮಿಸಿದರು. ಕೇಂದ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದಾಗ ಭಗತ್ ಸಿಂಗ್ ಹಾಗೂ ಬಟುಕೇಶ್ವರರು ಬಂಬುಗಳನ್ನು ಹಾಕಿದರು ಆದರೆ ಅವರಾರು ತಪ್ಪಿಸಿಕೊಳ್ಳದೆ ಆಂಗ್ಲರಿಗೆ ಸೆರೆ ಸಿಕ್ಕರು. ಇಬ್ಬರನ್ನು ಬಂಧಿಸಿ ಮೂಕದ್ಧಮೆ ಹೊಡಿದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಆಗ ನ್ಯಾಯಯಾಲದಲ್ಲಿ ನಮ್ಮ ದಾಳಿಯು ಯಾವುದೇ ವ್ಯಕ್ತಿಯ ಮೇಲಲ್ಲ ನಮ್ಮದು ದುಷ್ಟ ವ್ಯವಸ್ಥೆ ವಿರುದ್ದ ಹೋರಾಟವೆಂದು ವಾದಿಸಿದರು. ಆದರೂ ನ್ಯಾಯಾಲಯ ಇಬ್ಬರಿಗೂ ಜೀವಾವದಿ ಶಿಕ್ಷೆ ವಿಧಿಸಿ ಲಾಹೋರಿನ ಕಾರಾಗೃಹಕ್ಕೆ ಅಟ್ಟಿತು. ಅದೇ ಸಮಯಕ್ಕೆ ಸ್ಯಾಂಡರ್ಸ್ ಹತ್ಯೆಯಲ್ಲಿ ಭಗತ್ ಸಿಂಗರ ಪಾತ್ರದ ಸುಳಿವು ಸಿಕ್ಕ ಮೇಲೆ ಭಗತ್ ಸಿಂಗರಿಗೆ ಗಲ್ಲು ಶಿಕ್ಷೆ ವಿಧಿಸಿತು. ಲಾಹೋರಿನ ಕಾರಾಗೃಹದ ಬಗ್ಗೆ ಹಿಂದೆಯೇ ಹೇಳಿದ್ದು ಅದೊಂದು ನರಕಕ್ಕೆ ಸವಾಲು ಒಡ್ಡುವ ಮತ್ತೊಂದು ನರಕವೆಂದು ಈ ಕಾರಾಗೃಹದಲ್ಲಿ ಸ್ವಲ್ಪ ಸಮಯ ಬಟುಕೇಶ್ವರರನ್ನು ಇರಿಸಿ ಅಲ್ಲಿಂದ ನೇರವಾಗಿ ಅಂಡಮಾನಿನ ಸೆರೆಮನೆಗೆ ವರ್ಗಾವಣೆ ಮಾಡಿದರು.ಸೆರೆಮನೆಯಲ್ಲಿ ನೀಡುತ್ತಿದ್ದ ಹಿಂಸೆಗೆ ದೇಹ ಕೃಶವಾದರೂ ನನ್ನ ದೇಶವು ಸ್ವತಂತ್ರವಾಗುವವರೆಗೂ ತಾನು ಹೋರಾಡಬೇಕೆಂದು ಬಟುಕೇಶ್ವರರು ತೀರ್ಮಾನಿಸಿದ್ದರು.ಇದೇ ಸಮಯಕ್ಕೆ ಬಟುಕೇಶ್ವರರಿಗೆ ಕ್ಷಯ ರೋಗ ತಗುಲಿ ಮತ್ತಷ್ಟು ಕೃಶರಾದರು. ಬಟುಕೇಶ್ವರರ ಆರೋಗ್ಯ ಹದಗೆಟ್ಟ ಬಗ್ಗೆ ಮಾಹಿತಿ ಪಡೆದ ಗಾಂಧೀಜಿಯವರು ಬಟುಕೇಶ್ವರರ ಬಿಡುಗಡೆಗೆ ಆಂಗ್ಲ ಸರ್ಕಾರವನ್ನು ಒತ್ತಾಯ ಮಾಡಿದಾಗ ಆಂಗ್ಲರು ದೆಹಲಿ, ಪಂಜಾಬ್ ಮತ್ತು ಬಾಂಗಳಕ್ಕೆ ಹೋಗಬಾರದು ಎಂಬ ಕಟ್ಟಳೆ ಬರೆಸಿಕೊಂಡು ಬಿಡುಗಡೆ ಮಾಡಿದರು. ಸೆರೆಮನೆಯಿಂದ ಹೊರಬಂದ ಬಟುಕೇಶ್ವರರು ಮತ್ತೆ ೧೯೪೨ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. ಆಗಸ್ಟ್ ೧೫ ೧೯೪೭ದಿನ ಸ್ವತಂತ್ರ ಬಂದ ದಿನ ಅವರ ಮೇಲಿದ್ದ ಕಟ್ಟಳೆಗಳು ರದ್ದಾದವು. ಆದರೆ ಕ್ಷಯ ರೋಗ ಮಾತ್ರ ಬಿಟ್ಟಿರಲಿಲ್ಲ ಕಡೆಗೆ ತೀವ್ರ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದರು . ೧೯೬೬ ಜೂಲೈ ೧೮ರಂದು ಭಾರತ ಮಾತೆಯ ವೀರಪುತ್ರ ಕೊನೆಯುಸಿರನ್ನು ಸ್ವತಂತ್ರ ಭಾರತದಲ್ಲಿ ಎಳೆದು ತಾಯಿಯಲ್ಲಿ ಲೀನರಾದರು.
ಇವರ ಅಂತ್ಯ ಸಂಸ್ಕಾರವನ್ನು ಭಗತ್ ಸಿಂಗ್ ಅವರ ತಾಯಿ ವಿದ್ಯಾ ದೇವಿ ಹಾಗೂ ಬಟುಕೇಶ್ವರರ ಅಣ್ಣ ವಿಶ್ವೇಶ್ವರ ದತ್ತರು ಪಂಜಾಬಿನ ಫಿರೋಜಾಪುರದಲ್ಲಿ ರಾಜ ಗುರು, ಸುಖ ದೇವ್ ಹಾಗೂ ಭಗತ್ ಸಿಂಗ್ ಸಮಾಧಿಗಳ ಪಕ್ಕದಲ್ಲಿ ನಡೆಸಿಕೊಟ್ಟರು. ಕಡೆಗೂ ಸಹ ಈ ನಾಲ್ವರು ದೇಶ ಭಕ್ತ ಕ್ರಾಂತಿಕಾರಿಗಳು ಪಂಚಭೂತಗಳಲ್ಲಿ ಮತ್ತೆ ಒಂದಾದರು ಎಂದರೆ ತಪ್ಪಾಗಲಾರದು.
ಕೊಡುಗೆದಾರರು : ಮಧು ಚಂದ್ರ