অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಡಾ.ಸುಧಾ ಎನ್ ಮೂರ್ತಿ ಮತ್ತು ಕನ್ನಡ ಸಾಹಿತ್ಯ

ಡಾ.ಸುಧಾ ಎನ್ ಮೂರ್ತಿ ಮತ್ತು ಕನ್ನಡ ಸಾಹಿತ್ಯ

ರಸಾನುಭವದ ಸುಂದರ ಅಭಿವ್ಯಕ್ತಿಯೇ ಸಾಹಿತ್ಯ” ಎಂಬ ರಂ.ಶ್ರೀ ಮುಗಳಿ ಯವರ ಮಾತಿನಂತೆ ಸಾಹಿತ್ಯವೆಂಬುದು ಬರಿಯ ಮುದ್ರಿತಗೊಂಡ ಪುಸ್ತಕವಲ್ಲ. ಅದರ ಮೂಲ ಕವಿ ಹೃದಯದಲ್ಲಿ ರಸರೂಪದಲ್ಲಿ ಮೊಳೆತು ಕಾವ್ಯ , ಕಥೆ ಮತ್ತಿತರ ರೂಪದಲ್ಲಿ ಹೂತು ಸಹೃದಯರ ರಸರೂಪವಾಗಿ ಪರಿಣಾಮ ಹೊಂದಿ ಬೆರೆತು ಹೋಗುತ್ತದೆ. ಸಾಹಿತ್ಯ ಎಂದರೆ ’ಶಬ್ದಾರ್ಥಗಳ ಸಾಹಿತ್ಯ ಮಾತ್ರವಲ್ಲ, ಕಲೆ ಶಾಸ್ತ್ರಗಳನ್ನು ಹೊಂದಿರುವುದಾಗಿದ್ದು ವಿಶಾಲ, ವಿಶಿಷ್ಟ ಅರ್ಥದಿಂದ ಕೂಡಿದುದಾಗಿದೆ.

ಎಲ್ಲಾ ಭಾಷೆಗಳಲ್ಲೂ ಸಾಹಿತ್ಯವು ತನ್ನದೇ ಆದ ಛಾಪನ್ನು  ಹೊಂದಿರುವುದಲ್ಲದೆ, ಆಯಾ ಭಾಷೆಗಳ ಸಂಸ್ಕೃತಿಯ ವಾಹಕವೂ ಆಗಿರುವುದನ್ನು ಕಾಣಬಹುದು. ಅದರಲ್ಲೂ ಪ್ರಾಚೀನ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯದ ಹಿರಿಮೆಯು ವರ್ಣನಾತೀತವಾದುದು. ಇದಕ್ಕೆ ನಮ್ಮ ಸಾಹಿತಿಗಳ ಕೊಡುಗೆಯು ಅನನ್ಯವಾದುದಾಗಿರುವುದು ನಮಗೆಲ್ಲರಿಗೂ ತಿಳಿದ ವಿಷಯವೆ. ಅದರಲ್ಲೂ ಮಹಿಳಾ ಸಾಹಿತಿಗಳ ಕಾರ್ಯವೂ ಉಲ್ಲೇಖಾರ್ಹ. ಅಂತಹ ಮಹಿಳಾ ಸಾಹಿತಿಗಳ ಸಾಲಿನಲ್ಲಿ ಬರುವ ಡಾ.ಸುಧಾ ಎನ್ ಮೂರ್ತಿರವರ ಕೊಡುಗೆಯು ಅತ್ಯುನ್ನತವಾದುದಾಗಿದೆ. ಡಾ.ಸುಧಾ ಎನ್ ಮೂರ್ತಿರವರು ಲೇಖಕಿಯಾಗಲೆಂದು ಬರವಣಿಗೆಯನ್ನು ಪ್ರಾರಂಭಿಸಿದವರಲ್ಲ. ತನ್ನ ತಾತನಿಂದ ಕಥೆ ಕೇಳುತ್ತಾ, ಹುರಿದುಂಬಿ ಕಥೆಗಳ ಪಾತ್ರವನ್ನು ತನ್ನಲ್ಲೇ ಅನುಭವಿಸುತ್ತಾ  ಹವ್ಯಾಸಕ್ಕಾಗಿ ಬರವಣಿಗೆಯನ್ನು ಪ್ರಾರಂಭಿಸಿದವರು.

ಇಂತಹ ಮೇರು ವ್ಯಕ್ತಿತ್ವದ ಸುಧಾ ಮೂರ್ತಿರವರು ೧೯೫೦ ರ ಆಗಸ್ಟ್ ೧೯ ರಂದು ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಗಳಿಗೆ ಮೂರನೇ ಮಗಳಾಗಿ ಧಾರವಾಡದ ಶಿಗ್ಗಾಂವ್(ಈಗ ಹಾವೇರಿ ಜಿಲ್ಲೆಯಲ್ಲಿದೆ)ನಲ್ಲಿ ಜನಿಸಿದರು.ತಂದೆ ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀರೋಗ ತಜ್ಞರು ಹಾಗೂ ಪ್ರಾಧ್ಯಾಪಕರಾಗಿದ್ದರು. ತಾಯಿ ವಿಮಲಾ ಕುಲಕರ್ಣಿ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಇಂತಹ ವಿದ್ವತ್ ವಾತಾವರಣದಲ್ಲಿ ಬೆಳೆದ ಸುಧಾ ಮೂರ್ತಿರವರು ಮಾಧರಿ ವ್ಯಕ್ತಿತ್ವವನ್ನು ಪಡೆದರು. ಟಾಟ ಇಸ್ಟಿಟ್ಯೂಟ್ ಬೆಂಗಳೂರು ಎಂಬಲ್ಲಿ ಎಂ.ಇ ಯಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿಧ್ಯಾರ್ಥಿನಿ.

ಬೆಂಗಳೂರಿನ ಇನ್ಪೋಸಿಸ್ ಸಂಸ್ಥೆಯನ್ನು ತಮ್ಮ ಪತಿ ಹಾಗೂ ಅವರ ಜೊತೆಗಾರರ ಸಹಯೋಗದೊಂದಿಗೆ ಕಟ್ಟಿ ಬೆಳೆಸಿದ ಸಂಘಟಕಿ. ಎಂ.ಇ ಯನ್ನು ಮುಗಿಸಿದ ನಂತರ ತನ್ನ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಲು ಹೊರಟಿದ್ದಾಗ “ಸೂಚನಾ ಫಲಕದಲ್ಲಿ ಟಾಟ ಸಂಸ್ಥೆ ಹುಡುಗರಿಗೆ ಮಾತ್ರ ಎಂದು ಬರಿದಿದ್ದ ವೃತ್ತಿ ಆಹ್ವಾನ ನೋಡಿ, ಹುಡುಗಿಯರಿಗೆ ಏಕಿಲ್ಲ ಎಂದು ಶ್ರೀಮತಿ ಸುಧಾ ಮೂರ್ತಿರವರು ಟಾಟ ಮುಖ್ಯಸ್ಥರಿಗೆ ಪತ್ರ ಬರೆದು ಹಾಕಿದರು. ಅದನ್ನು ಜೆ.ಆರ್.ಡಿ ಟಾಟರವರು ಓದಿ ಅವರಿಗೆ ಸಂದರ್ಶನಕ್ಕೆ ಆಹ್ವಾನಿಸಿ “ಕಾರ್ಖಾನೆಯ ವಾತಾವರಣದಲ್ಲಿ ಕೆಲಸ ಮಾಡುವುದು ಸ್ತ್ರೀಯರಿಗೆ ಎಷ್ಟು ಕಷ್ಟ” ಎಂದು ಸೌಜನ್ಯದಿಂದ ಮನವರಿಕೆ ಮಾಡಿಕೊಟ್ಟರು. ಹೇಗಾದರೂ ಸ್ತ್ರೀಯರಿಂದ ಇಂತಹ ಬದುಕು ಒಂದು ದಿನ ಆರಂಭವಾಗಲೇಬೇಕಲ್ಲ ಎಂಬ ಆತ್ಮವಿಶ್ವಾಸದಿಂದ ನುಡಿದು ಆ ಆರಂಭವನ್ನು ತಮ್ಮಿಂದಲೇ ಟಾಟ ಸಂಸ್ಥೆಯಲ್ಲಿ ವೃತ್ತಿ ಮಾಡುವ ಮೂಲಕ ಪ್ರಾರಂಭಿಸಿದರು. ಅನಂತರ ತನ್ನ ಪತಿಯೊಂದಿಗೆ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಅವರೊಂದಿಗೆ ಬೆಳೆಸುತ್ತಿರುವುದರ ಸಂಘಟಕಿಯಾಗಿದ್ದು, ಮಹಿಳೆಯರಿಗೆ ಮಾಧರಿಯಾಗಿದ್ದಾರೆ.

ಇದಷ್ಟೇ ಮಾತ್ರವಲ್ಲದೆ, ಇಂದು ಅದೆಷ್ಟೆಷ್ಟೋ ಊರುಗಳಲ್ಲಿ ಗ್ರಂಥಾಲಯಗಳು, ಶಾಲೆಯಲ್ಲಿನ ಕಲಿಕೆಯ ವ್ಯವಸ್ಥೆಗಳು, ನೈಸರ್ಗಿಕ ಸ್ವಚ್ಛತೆಯ ಸೌಲಭ್ಯಗಳು ಹೀಗೆ ಹಲವಾರು ಸಾಮಾಜಾಭಿವೃದ್ಧಿ ಕಾರ್ಯಗಳನ್ನು ಇನ್ಫೋಸಿಸ್ ಫೌಂಡೇಷನ್ ಮೂಲಕ ಸಂಚಲನಗೊಳ್ಳಲು ನೀಡಿರುವ ಕೊಡುಗೆ ಮಹೋನ್ನತವಾದದ್ದು.

ಶಿಕ್ಷಣಿಕ, ಸಾಮಾಜಿಕ, ತಾಂತ್ರಿಕ ವಲಯದಲ್ಲಿ ತನ್ನದೇ ಛಾಪು ವ್ಯಕ್ತಿತ್ವವನ್ನು ಮೂಡಿಸಿರುವ ಡಾ.ಸುಧಾ ಎನ್ ಮೂರ್ತಿರವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ನಿರಂತರವಾಗಿ ಸತತವಾಗಿ ತೊಡಗಿಸಿ ಹಲವಾರು ಲೇಖನಗಳನ್ನು ನೀಡಿರುವುದು ಪ್ರಶಂಸನೀಯ. ಇಂಗ್ಲೀಷ್ ಮತ್ತು ಕನ್ನಡ ದ್ವಿಭಾಷಾ ಜ್ಞಾನ ಚಾತುರ್ಯವನ್ನು ಹೊಂದಿರುವ ಡಾ.ಸುಧಾ ಎನ್ ಮೂರ್ತಿಯವರು ಎರಡು ಭಾಷೆಯಲ್ಲೂ ಕೃತಿಗಳ ರಚನೆಯನ್ನು ಮಾಡಿದ್ದಾರೆ. ಅದರಲ್ಲೂ ಕನ್ನಡ ಸಾಹಿತ್ಯವೆಂದರೆ ಅಪಾರ ಒಲವು ಗೌರವ. ಹೀಗಾಗಿ ತನ್ನ ಕೈಲಾದಷ್ಟು ಕನ್ನಡ ರಚನಾ ಕಾರ್ಯದಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸು೧೬ಕ್ಕಿಂತ ಹೆಚ್ಚು ಕೃತಿಗಳನ್ನು  ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದು, ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಅವರಿಂದ ವಿರಚಿತ ಕನ್ನಡ ಕೃತಿಗಳು ಹೀಗಿವೆ,

  1. ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್.
  2. ಡಾಲರ್ ಸೊಸೆ
  3. ಮಹಾಶ್ವೇತಾ
  4. ಅತಿರಿಕ್ತೆ
  5. ಸಾಮಾನ್ಯರಲ್ಲಿ ಅಸಾಮಾನ್ಯರು
  6. ಯಶಸ್ವಿನಿ
  7. ತುಮುಲ
  8. ಕಾವೇರಿಯಿಂದ ಮೆಕಾಂಗಿಗೆ
  9. ಗುಟ್ಟೊಂದು ಹೇಳುವೆ
  10. ಮನದ ಮಾತು
  11. ಪರೀಧಿ
  12. ಮಕ್ಕಳಿಗೆ ನನ್ನ ಮೆಚ್ಚಿನ ಕಥೆಗಳು
  13. ಋಣ
  14. ಹಕ್ಕಿಯ ತೆರದಲ್ಲಿ
  15. ಸುಕೇಶಿನಿ ಮತ್ತು ಇತರ ಕಥೆಗಳು
  16. ಕಂಪ್ಯೂಟರ್ ಲೋಕದಲ್ಲಿ.

ಡಾ ಸುಧಾ ಎನ್ ಮೂರ್ತಿರವರು ರಚನೆಯಲ್ಲಿ ಬಳಸಿದ ಭಾಷೆಯು ಸರಳ ಸುಲಭ ಭಾಷೆಯಾಗಿದ್ದು, ಪ್ರತಿಯೊಬ್ಬರಿಗೂ ಅರ್ಥವಾಗುವಂತಹದ್ದಾದ್ದು, ಪ್ರತಿಯೊಂದು ರಚನೆಯು ಮಾಹಿತಿಭರಿವಾಗಿದ್ದು ಮಕ್ಕಳಿಂದ ಹಿಡಿದು ಎಲ್ಲರಿಗೂ ಬಹು ಉಪಯೋಗಕಾರಿಯಾದುದಾಗಿವೆ. ಅದರಲ್ಲೂ ಮಕ್ಕಳಿಗಾಗಿ ಅಂದರೆ ವಿದ್ಯಾರ್ಥಿಗಳಿಗಾಗಿ ರಚಿಸಿದ ಮಕ್ಕಳಿಗೆ ನನ್ನ ಮೆಚ್ಚಿನ ಕಥೆಗಳು, ಸುಕೇಶಿನಿ ಮತ್ತು ಇತರ ಕಥೆಗಳು ಪುಸ್ತಕಗಳಂತು ಮೌಲ್ಯಗಳ ಆಗರ ಎಂದರೆ ತಪ್ಪಾಗಲಾರದು. ಅದರಲ್ಲಿನ ಪ್ರತಿಯೊಂದು ಕಥೆಯು ಮೌಲ್ಯಿಕ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಮನೋರಂಜನಾತ್ಮಕವಾಗಿ ಮೂಡಿಬಂದಿದೆ. ಅದರಲ್ಲಿನ ಜಿಪುಣ ಜೀವಣ್ಣ, ಪರೋಪಕಾರ ಮತ್ತಿತರ ಕಥೆಗಳಂತು ಕಣ್ಣಿಗೆ ರಾಚುವಂತೆ ಮೂಡಿ ಬಂದಿದ್ದು, ಮಾತಿನಿಂದ ಪ್ರಭಾವಕಾರಿಯಾಗದ ಮೌಲ್ಯಗಳು ಈ ಕಥೆಗಳಿಂದ ಪ್ರಭಾವಕಾರಿಯಾಗುವುದರಲ್ಲಿ ಎರಡು ಮಾತಿಲ್ಲ. ಈ ರೀತಿಯಾಗಿ ತಾಂತ್ರಿಕ ವಲಯದಲ್ಲಿ ತನ್ನದೇ ಆದ ಛಾಪನ್ನು ಹೊಂದಿರುವ ಡಾ ಸುಧಾ ಎನ್ ಮೂರ್ತಿರವರು ಕನ್ನಡ ಸಾಹಿತ್ಯಕ್ಕೂ ಕೊಡುಗೆಯನ್ನು ನೀಡಿರುವುದು ಪ್ರಶಂಸನೀಯ ಸಂಗತಿಯಾಗಿದ್ದು, ಇತರರಿಗೆ ಮಾಧರಿಯಾಗಿದ್ದಾರೆ.

ಕೊನೆಯ ಮಾರ್ಪಾಟು : 7/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate