অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕದ ಪ್ರಾಚೀನ ವಿದ್ಯಾಕೇಂದ್ರಗಳು

ಕರ್ನಾಟಕದ ಪ್ರಾಚೀನ ವಿದ್ಯಾಕೇಂದ್ರಗಳು

'ವಿದ್' ಎಂಬ ಶಬ್ದದಿಂದ 'ವಿದ್ಯೆ' ಎಂಬ ಪದ ಬಳಕೆಗೆ ಬಂದಿದೆ ಎಂದು ಹೇಳುತ್ತಾರೆ. 'ವಿದ್ ಎಂದರೆ ಜ್ಞಾನ. ಪ್ರಾಚೀನ ಕಾಲದಲ್ಲಿ ವಿದ್ಯೆಯನ್ನು 'ಆತ್ಮ ಜ್ಞಾನ', 'ಮೋಕ್ಷ ಸಾಧನೆ' ಎಂದು ಭಾವಿಸಿದ್ದರು. ಜೀವಿಗಳ ಹುತಿಗೆ ಕಾರಣವೇನು? ಮರಣಾನಂತರ ಹೋಗುವುದೆಲ್ಲಿಗೆ? ಇತ್ಯಾದಿ ಭೂತ ಮತ್ತು ಭವಿಷ್ಯತ್ತಿನ ಚಿಂತನೆಯೇ ಅಂದಿನ ವಿದ್ಯೆಯ ವಿಷಯವಾಗಿರುತ್ತಿತ್ತು. ಶಿಕ್ಷಣದ ಗುರಿಯೂ ಇದೇ ಆಗಿರುತ್ತಿತ್ತು. ಆ ಕಾಲದ ವಿದ್ಯಾಭ್ಯಾಸದ ಪದ್ದತಿಯನ್ನು ವೈದಿಕ ಪದ್ದತಿ, ಬೌದ್ದ ಹಾಗು ಜೈನ ಸಿದ್ದಾಂತಕ್ರಮ ಎಂದು ವಿಂಗಡಿಸಿ ಕೊಂಡಿದ್ದರು. ವೈದಿಕ ಪದ್ದತಿಯೊಂದಿಗೆ ಉಳಿದ ಎಲ್ಲ ಪದ್ದತಿಗಳೂ ಸಮಕಾಲಿನವಾಗಿ ಪೋಷಿಸಲ್ಪಟ್ಟವು.

ವೈದಿಕ ಪದ್ದತಿಯ ಶಿಕ್ಷಣ ಕೇಂದ್ರಗಳನ್ನು ಗುರುಕುಲಗಳೆನ್ನುತ್ತಿದ್ದರು.ಋಷಿ,ಮುನಿಗಳು ಅರಣ್ಯದಲ್ಲಿ ವಾಸಿಸುತ್ತಾ ಶಿಕ್ಷಣ ನೀಡುವುದು ವಾಡಿಕೆಯಾಗಿತ್ತು. ಆ ಕಾಲದಲ್ಲೂ ಸಹಸ್ರ ಸಹಸ್ರ ಸಂಖ್ಯೆ ವಿದ್ಯಾರ್ಥಿಗಳನ್ನು ಹೊಂದಿದ್ದ ಗುರುಕುಳಗಲಿದ್ದುವೆಂದು ತಿಳಿದುಬರುತ್ತದೆ. ಅವರೆಲ್ಲರಿಗೂ ವಸತಿ, ಉಡುಪು ಉಚಿತವ್ವಗಿ ಪೂರೈಕೆಯಾಗುತ್ತಿತ್ತು.

ಪ್ರಾರಂಭದಲ್ಲಿ ಕರ್ನಾಟಕದಲ್ಲಿಯೂ ಇದೇ ವೈದಿಕ ಪದ್ದತಿಯ ಗುರುಕುಲ ಶಿಕ್ಷಣ ಪದ್ಧತಿ ಆಚರಣೆಯಲ್ಲಿದ್ದಿರಬಹುದೆಂದು ಊಹಿಸಬಹುದು. ರಾಷ್ಟ್ರಕೂಟರ ಕಾಲದಲ್ಲಿ ಬಳ್ಳಾರಿ ಜಿಲ್ಲೆಯ "ಕಾರ್ತಿಕೇಯ ತಪೋವನ" ಎಂಬ ಗುರುಕುಲ ಸ್ಥಾಪನೆಯಾಯಿತು. ಆ ಗುರುಕುಲವು ಚಾಲುಕ್ಯ, ಹೊಯ್ಸಳರ ಕಾಲದಲ್ಲೂ ಅತ್ಯಂತ ಪ್ರಮುಖ ವಿದ್ಯಾಕೆಂದ್ರವಾಗಿತ್ತೆಂದು ಇತಿಹಾಸದಿಂದ ತಿಳಿದುಬರುತ್ತದೆ. ಇದೇ ರೀತಿ 'ಕಂಕಬ್ಬೆ' ಎಂಬುವರಿಂದ "ಸುವರ್ನಾಕ್ಷಿ  ತಪೋವನ" ವೆಂಬ ಗುರುಕುಲ ಸ್ಥಾಪನೆಯಾಗಿತ್ತು. ಆಶ್ಚರ್ಯವೆಂದರೆ ಅಲ್ಲಿನ ಹುಲಿಗಳು, ಗಿಳಿಗಳು ಧರ್ಮಶ್ರವನ ಮಾಡುತ್ತಿದ್ದುವಂತೆ.ಗುರುಗಳ ಮನೆಯಲ್ಲೇ ಉಳಿದುಕೊಂಡು ವಿದ್ಯಾರ್ಜನೆ ಮಾಡಿದ ಶಿಷ್ಯರುಗಳ ಅನೇಕ ಉದಾಹರಣೆಗಳಿವೆ. ಸುಮಾರು ಒಂಬತ್ತನೆಯ ಶತಮಾನ 'ವಡ್ಡಾರಾಧನೆ' ' ಎಂಬ ಗ್ರಂಥದಲ್ಲಿ ಇದಕ್ಕೆ ಪೂರಕವಾದ ಆಧಾರಗಳಿವೆ.

ಗುರುಕುಲ ಪದ್ದತಿಯ ನಂತರ ಬಂದ ವಿದ್ಯಾಕೆಂದ್ರಗಳೆಂದರೆ   ಬೌದ್ದ ವಿಹಾರಗಳು ಮತ್ತು ಜೈನ ಬಸದಿಗಳು. ಬೌದ್ದ ವಿಹಾರಗಳು ಬೌದ್ದ  ಭಿಕ್ಶುಗಳಿಗಾಗಿಯೇ ಸ್ಥಾಪನೆಯಾದರೂ ಅನಂತರ ಸಾರ್ವಜನಿಕ ವಿದ್ಯಾಸಂಸ್ಥೆಗಲಾದುವು. 'ನಳಂದ' ಇಂತಹುಗಳಲ್ಲಿ ಪ್ರಸಿದ್ದವಾದುದು.

ಕರ್ನಾಟಕದಲ್ಲಿ ಕ್ರಿ.ಶ. ಮೂರನೆಯ ಶತಮಾನದ ಶಾಸನದ ಪ್ರಕಾರ "ಶಿವಸ್ಕಂದ ನಾಗಶ್ರೀ" ಎಂಬ ರಾಜಕುಮಾರಿ ಬನವಾಸಿಯನ್ನು ಬೌದ್ದವಿಹಾರಕ್ಕೆ ದಾನಮಾಡಿದಳು. ಇಮ್ಮಡಿ ಪುಲಿಕೇಶಿಯ ಕಾಲಕ್ಕೆ ಸುಮಾರು ನೂರಕ್ಕೂ ಹೆಚ್ಚಾಗಿ ಬೌದ್ದ ವಿಹಾರಗಳಿದ್ದುವೆಂದು ಹುಯಾನ್ ತ್ಸಾಂಗ್ ಬರವಣಿಗೆಯಿಂದ ತಿಳಿದುಬರುತ್ತದೆ. ಅವನ ಬರವಣಿಗೆಯಿಂದ ಆ ಕಾಲದಲ್ಲಿ ದೊರಕುತ್ತಿದ್ದ ಶೈಕ್ಷಣಿಕ ವಿಷಯಗಳು ಸಮಾಜಮುಖಿಯಾಗಿದ್ದುವೆಂಬುದನ್ನು ಸೂಚಿಸುತ್ತದೆ. "ಏಳನೆಯ ವಯಸ್ಸಿಗೆ ಶಿಕ್ಷಣ ಪ್ರಾರಂಭವಾಗುತ್ತಿತ್ತು. ವಿಜ್ಞಾನ, ವ್ಯಾಕರಣ, ಕುಶಲ (ಕೈಗಾರಿಕೆ) ವೃತ್ತಿಗಳು, ವೈದ್ಯಕೀಯ ಶಾಸ್ತ್ರ, ಮಂತ್ರ ಪ್ರಯೋಗ, ಔಷಧಿಗಳು, ಶಿಲೆಯ ಬಳಕೆ, ತರ್ಕಶಾಸ್ತ್ರ, ಸತ್ಯ ಮಿಥ್ಯಗಳ ಹಾಗು ಆತ್ಮತತ್ವ ಇತ್ಯಾದಿ ವಿಷಯಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು.

ಚಾಲುಕ್ಯರ ಆಳ್ವಿಕೆಯ ಕೊನೆಯವರೆಗೂ ಬೌದ್ದವಿಹಾರಗಳು ಚೆನ್ನಾಗಿ ನಡೆಯುತ್ತಿದ್ದವು. ಕ್ರಿ.ಶ.೧೦೯೫ ರಲ್ಲಿ "ಸಂಗವ ಶೆಟ್ಟಿ" ಎಂಬುವನು ಧಾರವಾಡ ಜಿಲ್ಲೆಯ 'ಡಂಬಳ' ಎಂಬ ಬೌದ್ದ ವಿಹಾರವನ್ನು ಕಟ್ಟಿಸಿದನು. ಅದೇ ಕೊನೆಯ ಬೌದ್ದವಿಹಾರವೆಂದು ತಿಳಿದುಬರುತ್ತದೆ.

ಬೌದ್ದವಿಹಾರಗಳು ಕ್ಷೀನದೆಸೆಗೆ ಬಂದ ಮೇಲೆ ಮತ್ತೆ ವೈದಿಕ ಪದ್ಧತಿ ಹಾಗೂ ಜೈನ ಪದ್ದತಿಗಳು ಪ್ರಾರಂಭವಾದುವು. ಆದರೂ ಶಿಕ್ಷಣದಲ್ಲಿ 'ಬೌದ್ದ ಧರ್ಮ' ವ್ಯಾಸಂಗದ ವಿಷಯವಾಗಿ ಉಳಿದುಕೊಂಡಿತ್ತು. ವೈದಿಕ ಪದ್ದತಿಯ ಗುರುಕುಲಗಳಲ್ಲಿ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಇದು ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಮೀಸಲಾಗಿತ್ತು. ಅನಂತರ ಸಂಸ್ಕೃತವೇ ಶಿಕ್ಷಣ ಮಾಧ್ಯಮವಾಗಿರುತ್ತಿತ್ತು. ಅಗ್ರಹಾರ, ದೇವಸ್ಥಾನ, ಬ್ರಹ್ಮ ಪುರಿ, ಘಟಿಕಸ್ಥಾನ ಎಂಬ ವಿದ್ಯಾಕೇಂದ್ರಗಳು ಉಚ್ಹ ಶಿಕ್ಷಣ ಕೇಂದ್ರಗಲಾಗಿದ್ದುವು. ಇಲ್ಲಿ ಸಂಸ್ಕೃತವೇ ಪ್ರಧಾನವಾಗಿತ್ತು.

ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರ,ಕಗುನಿಥಗಳನ್ನು ಕಲಿಸುತ್ತಿದ್ದರು.ಅಂತಹ ಉಪದ್ಯಯರನ್ನು 'ಕನ್ನಡ ಭಟ್ಟರು' ಎನ್ನುತ್ತಿದ್ದರು. ಇದರೊಂದಿಗೆ ಋಗ್ವೇದ ಮಂತ್ರಗಳನ್ನು ಬಾಯಿಪಾಟ ಮಾಡಿಸುತ್ತಿದ್ದರಂತೆ. ಈ ಬಗೆಯ ಶಿಕ್ಷಣಕ್ಕೆ "ಬಾಲ ಶಿಕ್ಷಾ ಶಾಸ್ತ್ರ" ಎಂದು ಕರೆಯುತ್ತಿದ್ದ ದಾಖಲೆಗಳಿವೆ. ಈ ಶಿಕ್ಷಕರ ಜೀವನೋಪಾಯಕ್ಕೆ 'ದತ್ತಿ' ಎಂದರೆ ಶಾಶ್ವತ ಆದಾಯ ವ್ಯವಸ್ಥೆ ಮಾಡುತ್ತಿದ್ದರು.ಅದಕ್ಕಾಗಿ 'ಅಗ್ರಹಾರ' ನೀಡುತ್ತಿದ್ದರಂತೆ.

'ಅಗ್ರಹಾರ' ಎಂದರೆ ಶ್ರೇಷ್ಠವಾದ ಸ್ಥಳ, ರಾಜಮಹರಜರುಗಳು ವಿದ್ಯಾಭಿವೃದ್ದಿಗಾಗಿ ಅಗ್ರಹಾರಗಳನ್ನು ನಿರ್ಮಿಸಿ ಅಲ್ಲಿ ವಿದ್ವಾಂಸರುಗಳನ್ನು ನೇಮಿಸುತ್ತಿದ್ದರು.

ಕರ್ನಾಟಕದಲ್ಲಿ ಕ್ರಿ.ಶ.೪೨೦ ರಿಂದ ಎರಡನೇ ನಾಗವರ್ಮನ ಆಳ್ವಿಕೆಯ ಕಾಲದಿಂದ ಈ 'ಅಗ್ರಹಾರ' ಸಂಪ್ರದಾಯಪ್ರಾರಂಬವಾಗಿರುವಂತೆ ಕಂಡುಬಂದಿದೆ.ಅಲ್ಲಿ ಎಲ್ಲ ಜಾತಿ-ಜನಾಂಗದವರು ವಾಸ ಮಾಡುತ್ತಿದ್ದರು.ಆದರೆ ಸಾಮೂಹಿಕವಾಗಿ ಆಡಳಿತ ನಡೆಯುತ್ತಿತ್ತು.

ಈ ಅಗ್ರಹಾರಗಳು ವೈದಿಕ ಸಂಪ್ರದಾಯದ ಪ್ರೌಡ ಶಿಕ್ಷಣದ ವಿದ್ಯಾ ಕೇಂದ್ರಗಳಾಗಿದ್ದವು. ಯಜನ, ಯಾಜನ, ಅದ್ಯಯನ ಅದ್ಯಾಪನ ದಾನ, ಪ್ರತಿಗ್ರಹ, ಎಂಬ ಆರು ಬಗೆಯ ಕರ್ಮಗಳು ಅಲ್ಲಿ ನಡೆಯುತ್ತಿದ್ದವು, ಇದಕ್ಕೆ ವಯೋಮಿತಿ ಇರಲಿಲ್ಲ. ವಿಶೇಷನವೆಂದರೆ ಅಲ್ಲಿನ ಅದ್ಯಾಪಕರೂ ಸಹ ಅಧ್ಯಯನ ಮಾಡುತ್ತಿದ್ದರು.ವಿದ್ಯೆಗೆ ಕೊನೆಯೇ ಇಲ್ಲವೆಂಬುದನ್ನು ತಮ್ಮ ವಿದ್ಯಾರ್ಥಿಗಳಿಗೆ ತಾವೇ ಮಾದರಿಯಾಗಿ ನಿರೂಪಿಸುತ್ತಿದ್ದರು.ಶಿವಮೊಗ್ಗ ಜಿಲ್ಲೆಯ 'ತಾಳಗುಂದ' ಇಂತಹ ಅಗ್ರಹಾರಗಳಲ್ಲಿ ಪ್ರಸಿದ್ದವಾದುದೆಂದು ತಿಳಿದುಬಂದಿದೆ.ಇದು ಕದಂಬರ ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು. ಅದರಂತೆ ಬಾದಾಮಿಯ ಚಾಳುಕ್ಯನ ಕಾಲದಲ್ಲಿ 'ಅಧಿಷ್ಠಾನ'ವೆಂಬ ವಿದ್ಯಾಕೆಂದ್ರವಿತ್ತು.ಇಲ್ಲಿ ಹತ್ತು ಸಾವಿರ ವಿದ್ವಾಮ್ಸರಿದ್ದರೆಂದು ಪ್ರತೀತಿ ಇದೆ. ಅವರೆಲ್ಲರಿಗೂ ೧೪ ವಿದ್ಯೆಗಳು ಕರಗತವಾಗಿದ್ದುವು. ಕ್ರಿ.ಶ.೭೫೯ ರ ಒಂದು ಶಾಸನದಲ್ಲಿ ವೇದಗಳನ್ನು ಬಲ್ಲ ಎರಡು ಸಾವಿರ ವಿದ್ವಾಂಸರ ಒಂದು ಪಡೆಯೇ ಅಲ್ಲಿತ್ತೆಂದು ಹೇಳಲಾಗಿದೆ. ರಾಷ್ಟ್ರಕೂಟ ಕಾಲದಲ್ಲಿ ೫೦೦ ಜನ ಚತುರ್ವೇದಿ  ಸಮುದಾಯ ಐಹೊಳೆ ಯಲ್ಲಿ ಇತ್ತೆಂಬುದಕ್ಕೆ ದಾಖಲೆ ಇದೆ. ಬೆಳಗಾವಿ ಜಿಲ್ಲೆಯ ದೆಗಾಂವಿ ವಿದ್ಯಾಕೆಂದ್ರಕ್ಕೆ ವಿದ್ವಾಂಸರನ್ನು ನೇಮಿಸುವಾಗ ಸ್ವತಃ ರಾಜನೇ ಅವರನ್ನು ಪರೀಕ್ಷಿಸಿ. ಅವರ ಜ್ಞಾನವನ್ನು ದ್ರುದಪದಿಸಿಕೊಂಡು ವಿದ್ಯಾಕೆಂದ್ರಕ್ಕೆ ಪ್ರವೇಶ ನೀಡುತಿದ್ದನಂತೆ.ವಿಜಾಪುರ ಜಿಲ್ಲೆಯ ಸಾಲೋಟಗಿ,ಧಾರವಾಡ ಜಿಲ್ಲೆಯ ಕುಂದಗೋಳ, ಸಾಂವಲಿ,ಗುಡಗೇರಿ,ಕಾದಿಯೂರು,ಹೆಬ್ಬೂರು,ಸವಣೂರು,ಲಕ್ಕುಂಡಿ,ಇಟ್ಟಗಿ,ಕುಕ್ಕನೂರು,ಲಕ್ಷ್ಮೇಶ್ವರ,ಬಲಿಗಾವೆ,ಈಸೂರು ಇತ್ಯಾದಿ ಕದೆಗಲ್ಲಿ ನೂರಾರು ಅಗ್ರಹಾರಗಲಿದ್ದುವೆಂದು ಅನೇಕ ಶಾಸನಗಳಿಂದ ತಿಳಿದುಬರುತ್ತದೆ.

ಪ್ರಾಥಮಿಕ ಅಗ್ರಹಾರಗಳಂತೆ 'ಬ್ರಹ್ಮ ಪುರಿ' ಎಂಬ ಇನ್ನೊಂದು ಬಗೆಯ ವಿದ್ಯಾಕೆಂದ್ರಗಳೂ ಪ್ರಖ್ಯಾತವಾಗಿ ಕಾರ್ಯನಿರತವಾಗಿದ್ದುವು. ಆದರೆ ಇವೆಲ್ಲ ಹೆಚ್ಹಾಗಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದುವು. ಅಗ್ರಹಾರಗಳಂತೆ ಬ್ರಹ್ಮ ಪುರಿಯೂ ಉಚ್ಹ ಶಿಕ್ಷಣ ಕೇಂದ್ರಗಳು.

ಪುಲಿಗೆರೆ, ಸೂಡಿ, ವಿಕ್ರಮಪುರ, ಬಳ್ಳಿಗಾವೆ, ಅಣ್ಣಿಗೇರಿ, ಕಲ್ಬುರ್ಗಿ,ತಲಕಾಡು ಮೊದಲಾದ ಎಲ್ಲಾ ನಗರಗಳಲ್ಲೂ (ಆ ಕಾಲದಲ್ಲಿ ಇವೆಲ್ಲಾ ನಗರ ಹಾಗೂ ರಾಜಧಾನಿಗಳಾಗಿದ್ದುವು.) ಬ್ರಹ್ಮಪುರಿಗಳಿದ್ದುವು.

ಅಂದಿನ ಸಮಾಜದಲ್ಲಿ ವಿದ್ಯೆಯ ಬಗೆಗೆ ಅಚಲವಾದ ನಂಬಿಕೆಯೊಂದಿತ್ತು. ವಿದ್ಯಾಕೇಂದ್ರಗಳ ಸ್ಥಾಪನೆ ಮಾಡಿದರೆ ತಮಗೆ ಪುಣ್ಯ ಲಭಿಸುತ್ತದೆ ಎಂದು ಜನರು ನಂಬಿದ್ದರು.ಕೇವಲ ರಾಜ, ಮಹಾರಾಜರೇ ಅಲ್ಲದೆ ಕೆಲವು ಶ್ರೀಮಂತರೂ ವಿದ್ಯಾಕೆಂದ್ರಗಳನ್ನು ಸ್ಥಾಪಿಸುತ್ತಿದ್ದರು. ಆದರೆ ಲಾಭ ಸಂಪಾದಿಸುವ ಗುರಿ ಯಾರಿಗೂ ಇರಲಿಲ್ಲವೆಂದೂ ತಿಳಿಯುತ್ತದೆ. ಈಗಲೂ ಸಮಾಜದಲ್ಲಿ "ವಿದ್ಯಾ ದಾನ" ಅನ್ನದಾನದಂತೆ ಪುಣ್ಯಕೆಲಸವೆಂದು ನಂಬಿಕೆ ಉಳಿದುಕೊಂಡಿದೆ.

ಕಾಲಕ್ರಮೇಣ ಮಠಗಳು ಮತ್ತು ದೇವಸ್ಥಾನಗಳು ವಿದ್ಯಾಕೆನ್ದ್ರಗಲಾಗಲಾರಂಬಿಸಿದವು. ಬೌದ್ದ ವಿಹಾರದಂತೆ ಜೈನ ಬಸದಿಗಳೂ ಈ ಕಾರ್ಯವನ್ನು ಕೈಗೆತ್ತಿಕೊಂಡವು. ದೇವಸ್ಥಾನಗಳು ಹೆಚ್ಚಾಗಿ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತಗೊಳ್ಳುತ್ತಿತ್ತು. ಹರಿಹರದ "ಹರಿಹರೇಶ್ವರ ದೇವಾಲಯ" ಆ ಕಾಲದ ಅತ್ಯಂತ ಉನ್ನತ ಶಿಕ್ಷಣ ಕೇಂದ್ರವಾಗಿತ್ತೆಂದು ಕಂಡುಬರುತ್ತದೆ. ಈ ದೃಷ್ಟಿ ಯಲ್ಲಿ ತಾಳಗುಂದದ ಪ್ರಣವೆಶ್ವರ ದೇವಾಲಯ, ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದ ಕೋಡಿಮತ,ನಾಗಾಯಿಯ ಮಧುಸೂದನ ಮತ್ತು ರಾಮೇಶ್ವರ ದೇವಾಲಯಗಳೂ ಪ್ರೌಡ ಶಿಕ್ಷಣ ನೀಡುತ್ತಿದ್ದವು.ಆದರೆ ಅನೇಕ ದೇವಸ್ಥಾನಗಳು ಮನರಂಜನೆ, ಕಥಾ ಕಾಲಕ್ಷೇಪಕ್ಕೆ ತ್ರುಪ್ತಿಗೊಂಡುವು.

ಉಚ್ಹ ಶಿಕ್ಷಣದಲ್ಲಿ 'ಘಟಿಕ ಸ್ಥಾನ' ವೆಂಬ ವಿದ್ಯಾ ಕೇಂದ್ರವು ಅತ್ಯಂತ ಪ್ರಾಚೀನವಾದುದು. ಅದು ಶಿಖಾ ಪ್ರಾಯದ ಶಿಕ್ಷಣ ಕೆಂದ್ರವಾಗಿರುತ್ತಿತ್ತು. ಬಹುಷಃ ಈಗಿನ ಸಂಶೋದನಾ ಕೆನ್ದ್ರಗಳಂತಿದ್ದಿರಬಹುದು. 'ಕಾಂಚಿ' ಇಂತಹ ಶಿಕ್ಷಣ ಕೇಂದ್ರವಾಗಿತ್ತು. ಮಯೂರಶರ್ಮ (ವರ್ಮ) ತನ್ನ ಶಿಕ್ಷಣವನ್ನು ಇಲ್ಲಿಯೇ ಪಡೆದನೆಂದು ಇತಿಹಾಸ ಹೇಳುತ್ತದೆ.ವಿದ್ಯಾರ್ಥಿಗಳೂ,ಉಪಾಧ್ಯಾಯರೂ ಒಟ್ಟುಗೂಡಿ ಚರ್ಚೆ ನಡೆಸುತಿದ್ದ ಶ್ರೇಷ್ಠತಮ ವಿದ್ಯಾ ಸಂಸ್ಥೆಯನ್ನು 'ಘಟಿಕ ಸ್ಥಾನ 'ವೆನ್ನುತಿದ್ದರು.ಅಲ್ಲಿ ವಾದ-ಪ್ರತಿವಾದಗಳು ನಡೆಯುತಿದ್ದವು.ವಾದದಲ್ಲಿ ಜಯ ಗಳಿಸಿದವರಿಗೆ "ಘಟಿಕಾ ಸಾಹಸಿ" ಘತಿಕಾವಾಡಿ ಎಂಬ ಬಿರುದು ನೀಡಿ ಗೌರವಿಸುತ್ತಿದ್ದರು.ಕ್ರಿ.ಶ.೭೧೩ ರ ಶಾಸನವೊಂದರಲ್ಲಿ "ಘಟಿಕ ಸಾಹಸಿ ಮಾಧವಶರ್ಮ" ಎಂಬ ಹೆಸರಿದೆ.೧೨೦೭ ರ ಶಾಸನದಲ್ಲಿ "ಘತಿಕವಾಡಿ ವಿಷ್ಣು ದೇವ "ಎಂಬ ಮೇಲಧಿಕಾರಿಗಳು ಇರುತ್ತಿದ್ದರು.

ಶಿಕ್ಷಣದ ಅವದಿಯ ಕೊನೆಯಲ್ಲಿ ಪರೀಕ್ಷೆಗಳಿರುತಿದ್ದವು. ಈ ಪರೀಕ್ಷೆಗಳಲ್ಲಿ 'ಘಟ' (ಮಡಿಕೆ) ಗಳನ್ನೂ ಉಪಯೋಗಿಸುತ್ತಿದ್ದರು. ಪರೀಕ್ಷೆ ನಡೆಸುವ ಸ್ಥಳವನ್ನು 'ಘಟಿಕಾ ಸ್ಥಾನ' ಎಂದು ಕರೆಯುತ್ತಿದ್ದರು.ನಮ್ಮ ವಿಶ್ವ ವಿದ್ಯಾನಿಲಯಗಳಲ್ಲಿ ಇಂದು 'ಘಟಿಕೋತ್ಸವ' ಎಂಬ ಪದ (ಪದವೀ ದಾನ) ಬಳಕೆಗೆ ಬಂದಿರುವುದಕ್ಕೆ ಈ 'ಘಟಿಕ ಎಂಬ ಪದ ಪ್ರೇರಣೆಯಾಗಿರಬಹುದು.

ಆಗಿನ ಕಾಲದಲ್ಲೂ ಔಧ್ಯಮಿಕ ಶಿಕ್ಷಣವಿತ್ತೆಂದರೆ ಆಶ್ಚರ್ಯವಾಗಬಹುದು. ಆದರೆ ಅದು ನಿಜ. ಪಟ್ಟದಕಲ್ಲಿನ ಶಾಸನಗಳಿಂದ ಇದು ದ್ರುದಪತ್ತಿದೆ. "ಆದಯ್ಯನ ರಗಳೆ' ಗ್ರಂಥದಲ್ಲಿ ಶಿವಭಕ್ತನಾದ ಆದಯ್ಯನಿಗೆ ಆತನ ತಂದೆ ವ್ಯಾಪಾರಶಿಕ್ಷಣ ನೀಡಿದನೆಂಬ ಮಾತಿದೆ. ಔಧ್ಯಮಿಕ ಶಿಕ್ಷಣದಲ್ಲಿ ವೀರ ಪಾಂಚಾಲರೆಮ್ಬುವರು ಅಗ್ರಗಣ್ಯರು. ಇವರಲ್ಲಿ ಅಕ್ಕಸಾಲಿಗರು, ಕಂಮದ ಆಚಾರಿಗಳು (ನಾಣ್ಯ) ಕಮ್ಮಾರರು, ಬಡಗಿಗಳು, ಕಲ್ಲು ಕುಟಿಗರು, ವಾಸ್ತುಕರ್ಮಿಗಳು, ಶಿಲ್ಪಿಗಳು ಮುಂತಾದವರು ಪ್ರಮುಖರು. ಆ ಕಾಲದಲ್ಲಿ ಇವರೆಲ್ಲಾ ಯಜ್ಞೋಪವೀತ ಧಾರಣೆ ಮಾಡುತ್ತಿದ್ದರು ಹಾಗೂ ವಿಶ್ವಕರ್ಮ ಬ್ರಾಹ್ಮಣರೆಂದು ಪ್ರಖ್ಯಾತರಾದರು. ತಮ್ಮ ಕುಲಕಸುಬನ್ನೆ ನಂಬಿ ಉದ್ಯೋಗವನ್ನಾಗಿ ಮುಂದುವರೆಸಿಕೊಂಡು ಬಂದರು.

ಕರ್ನಾಟಕ ವಿದ್ಯಾ ಕೇಂದ್ರಗಳಲ್ಲಿ ಭೋದಿಸುವ ವಿದ್ವಾಂಸರಿಗೆ ಅವಶ್ಯಕವಾದ ಅರ್ಹತೆಗಳನ್ನು ಗೊತ್ತುಪಡಿಸಿರಬಹುದು. ಏಕೆಂದರೆ ಆ ಕಾಲದಲ್ಲಿ ಉಪಾಧ್ಯಯರುಗಳು ಭಟ್ಟ, ಭಟ್ಟಾಚಾರ್ಯ, ಭಟ್ತೊಪಾದ್ಯಾಯ ಎಂದೆಲ್ಲಾ ಗುರುತಿಸಲ್ಪಟ್ಟಿದ್ದಾರೆ. ಈ ವಿದ್ವಾಂಸರ ಕನಿಷ್ಠ ಅರ್ಹತೆಯನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ಈ ಬಗೆಯ ವಿದ್ವಾಂಸರು ಕನಿಷ್ಠ ನಾಲ್ವರು ವಿದ್ಯಾರ್ಥಿಗಳನ್ನು ತಾವೇ  ಆರಿಸಿಕೊಂಡು ಅವರಿಗೆ ದಿನಕ್ಕೆ ಒಂದು ಹೊತ್ತು ಊಟ ಕೊಟ್ಟು ತಾವು ಕಲಿತಿರುವ ವಿದ್ಯೆಯನ್ನು ಬೋದಿಸಬೇಕಾಗಿತ್ತು. ಅಷ್ಟೇ ಅಲ್ಲದೆ ಅವರನ್ನು ಆ ವಿದ್ಯೆಯಲ್ಲಿ ಪರಿಣಿತರನ್ನಗಿಸಬೆಕಾಗಿತ್ತು.

ಉಪಾಧ್ಯಾಯರ ಹೆಸರುಗಳೇ ಅವರವರ ಅರ್ಹತೆಯನ್ನು ಸೂಚಿಸುತ್ತಿದ್ದುವಂತೆ. ಮಂತ್ರವಾದಿ ಲಖಂನ, ಸೋಮೇಶ್ವರ ವೈದ್ಯ ನರಸಿಂಹ ಭಟ್ತೊಪಾಧ್ಯಾಯ, ಸಾಮವೇದಿ ಮಲ್ಲಭಟ್ಟ, ಚಂಗದೇವಕ್ರಮಿತ, ಶ್ರೀ ಕರಣ ದೇವ , ಸಾಯಿದೇವ, ಕವಿತಿಲಕ ವಿಟ್ಟಯ್ಯ, ಸರ್ವಶಾಸ್ಥ್ರದ ಆದಿಭಟ್ಟ ಹೀಗೆ ಈ ಪಟ್ಟಿಯನ್ನು ಇನ್ನೂ ಬೆಳೆಸಬಹುದು.

ಜೈನರು ಚತುರ್ವಿಧ ದಾನಗಳನ್ನು ಪುರಸ್ಕರಿಸುತ್ತಾರೆ. ಅದರಲ್ಲಿ ಶಾಸ್ಥ್ರದಾನವೂ ಒಂದು. ರನ್ನನ ಅಜಿತ ಪುರಾಣದಲ್ಲಿ ಇದಕ್ಕೆ ಉದಾಹರಣೆ ಇದೆ. ಅತ್ತಿಮಬ್ಬೆ ಶಾಂತಿ ಪುರಾಣದ ಒಂದು ಸಾವಿರ ಪ್ರತಿಗಳನ್ನು ಬರೆಸಿ ದಾನ ಮಾಡಿದ ದಾಖಲೆ ಇದೆ.

ಹೀಗೆ ಕರ್ನಾಟಕದಲ್ಲಿ ವಿದ್ಯಾಕೇಂದ್ರಗಳು ಪ್ರಾಚೀನ ಕಾಲದಿಂದಲೂ ಬೆಳೆದುಕೊಂಡು ಬಂದಿವೆ. ಕವಿರಾಜ ಮಾರ್ಗದ ನೃಪತುಂಗನ ಪ್ರಕಾರ ಕನ್ನಡಿಗರು "ಕುರಿತೋದದೆಯುಂ ಕಾವ್ಯ ಪರಿಣಿತ ಮತಿಗಳು" ಆಗಿದ್ದರು. ಅಂದ ಮೇಲೆ ಅತ್ಯಂತ ವ್ಯವಸ್ಥಿತವಾದ ಅಧ್ಯಯನದಿಂದ ಶ್ರೇಷ್ಠ ವಿದ್ವಾಂಸರಾಗುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಈಗಲೂ ನಮ್ಮ ಕರ್ನಾಟಕ ವಿಶ್ವ ವಿದ್ಯಾಲಯಗಳ ಪದವೀಧರರು ರಾಷ್ಟ್ರಕ್ಕೆ ಕೀರ್ತಿ ತರುವಂತಹ ಕಾರ್ಯಗಲ್ಲಿ, ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಇದೆಲ್ಲದರ ಹಿಂದೆ ನಮ್ಮ ಪೂರ್ವಜರ ಪರಿಶ್ರಮ ಉತ್ತಮ ತಳಹದಿಯಾಗಿದೆ ಎಂಬುದನ್ನು ನಾವು ಮರೆಯಬಾರದು. (ಆಧಾರ).

ಮೂಲ :ಪ್ರಬಂದ ಮಂಜರಿ/ಎಚ್.ಎಸ್.ಕೆ.ವಿಶ್ವೇಶ್ವರಯ್ಯ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate