অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಂಕ್ರಾಂತಿ ಸಂಭ್ರಮ

ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ "ಹಬ್ಬಗಳು". ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು.

ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆ

ಎಲ್ಲಾ ಚಟುವಟಿಕೆಗಳಿಗು ಆಧಾರಪ್ರಾಯವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು "ಸಂಕ್ರಮಣ ಅಥವಾ ಸಂಕ್ರಾಂತಿ" ಎಂದು ಜ್ಯೋತಿಷ್ಯಾಧಾರದ ಮೇಲೆ ಪರಿಗಣಿಸಲಾಗುವುದು. ಸಂಕ್ರಾಂತಿಯು ಒಂದು ವಿಧದಲ್ಲಿ ಸೂರ್ಯನ ಆರಾಧನೆಯಾಗಿದ್ದು, ಉತ್ತರಾಯಣ ದಕ್ಷಿಯಾಣಗಳ ಪ್ರಾರಂಭದ ದಿನವಾದ್ದರಿಂದ ಹೆಚ್ಚಿನ ಮಾಹತ್ವವನ್ನು ಪಡೆದಿದೆ. ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬವು ಭಾರತೀಯ ಕಾಲಮಾನ ’ಪುಷ್ಯಮಾಸದಲ್ಲಿ’ ಬರುವುದು. ಉತ್ತರಾಯಣದ ಪುಣ್ಯಕಾಲವೆಂದೂ(ದೇವತೆಗಳ ಕಾಲವೆಂದೂ) ಸಹ ಕರೆಯಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಪುಣ್ಯ ನದಿಗಳೆಂದು ಹೆಸರುವಾಸಿಯಾದ ಗಂಗಾ, ಕಾವೇರಿ ಮೊದಲಾದವುಗಳಲ್ಲಿ ಸ್ನಾನ ಮಾಡುವುದು  ಉಂಟು. ಸೂರ್ಯನು ಈವರೆಗೆ ದಕ್ಷಿಣದತ್ತ ವಾಲಿ ಚರಿಸುತ್ತಿದ್ದದ್ದು, ಸಂಕ್ರಾಂತಿಯ ದಿನದಿಮ್ದ ಉತ್ತರದ ಕಡೆ ಪಥ ಬದಲಾಯಿಸುತ್ತಾನೆ. ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಭಾರತದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ ಎಂಬ ಪ್ರತೀತಿ ಇದೆ.

ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ. ಆಂದ್ರ, ತಮಿಳು ನಾಡುಗಳಲ್ಲಿ ಸಂಕ್ರಾಂತಿ, ಕನು, ಭೋಗಿ ಎಂದು ಆಚರಿಸಲ್ಪಡುತ್ತದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಯುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು.

ಆಚರಣೆ

ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ(ಸಕ್ಕರೆ) ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ತಮ್ಮ ಆಪ್ತರೇಷ್ಟರಿಗೆ ಹಂಚಿ ಸಂತೋಷವನ್ನು ಪಡುತ್ತಾರೆ. ಈ ದಿನ ಶ್ರೀರಾಮನ ಪೂಜೆಯನ್ನು ಆಂದ್ರದಲ್ಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ತಯಾರಿಸಿದ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿದ ವಲೆಯಲ್ಲಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ. ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಹೇಳಿಕೆಯಂತೆ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುವರು.

ಜನಪದದಲ್ಲಿ ಸುಗ್ಗಿ ಹಬ್ಬವೆಂದೇ ಆಚರಿಸುವ ಸಂಕ್ರಾಂತಿಯ ಬಗ್ಗೆ ಹಲವಾರು ಹಾಡುಗಳನ್ನು ಕಟ್ಟಿ ಹಾಡಿರುವುದನ್ನು ಕಾಣಬಹುದು. ಉದಾಹರಣೆಗೆ ನೋಡುವುದಾದರೆ,

"ಸುಗ್ಗಿಯು ಬಂದಿತು

ಹಿಗ್ಗನು ತಂದಿತು

ನಮ್ಮಯ ನಾಡಿನ ಜನಕೆಲ್ಲ”.

ಈ ರೀತಿ ನಮ್ಮ ಭಾರತದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಧರ್ಮದ ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆದರೆ ಇತ್ತೀಚಿನ ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ನಮ್ಮ ಇಂದಿನ ಪೀಳಿಗೆಯವರಿಗೆ ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ಸಂಸ್ಕೃತಿಕ ದ್ಯೋತಕವಾದ ಹಬ್ಬಗಳಾವುವಿದೆ ಎಂಬುದೇ ತಿಳಿಯದಂತಾಗಿದೆ. ಹೀಗಾಗಿ ಅನುಕರಣೆಯ ಜಾಡ್ಯವನ್ನು ತೊರೆದು ಪರಂಪರಾಗತವಾಗಿ ಆಚರಣೆಗೆ ಒಳಪಟ್ಟ ಹಬ್ಬ ಹರಿದಿನಗಳನ್ನು ಹಿರಿಯರು ಆಚರಿಸುವತ್ತಾ ಗಮನ ಹರಿಸಿ, ತಮ್ಮ ಮಕ್ಕಳಿಗೂ ಅದರ ಮಹತ್ವ, ಹಿನ್ನೆಲೆ ಬಗ್ಗೆ ತಿಳಿಸಿ,  ಅದು ಮುಂದಿನ ಪೀಳಿಗೆಯವರೆಗೆ ಮುಂದುವರಿಯುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ಕೊಡುಗೆದಾರರು:ಶಬೀನ ರಫಿಕ್ 

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate