ಶಾರೀರಿಕ ಚಟುವಟಿಕೆಗಳಾದ ನಡಿಗೆ, ಓಟ, ಎಸೆತ ಮತ್ತು ನೆಗೆತ ಮಾನವನ ಜೀವನದೊಂದಿಗೆ ಹಾಸುಹೊಕ್ಕಾಗಿ ಉಳಿದುಕೊಂಡುಬಂದಿವೆ. ಆದಿ ಕಾಲದಲ್ಲಿ ಜೀವನಾಧಾರವೆನಿಸಿದ್ದ ಇವುಗಳು ಮುಂದಿನ ಕಾಲ ಘಟ್ಟಗಳಲ್ಲಿ ಸಾಂಘಿಕ ಜೀವನಕ್ಕೆ, ನಂತರ ಸಮಾಜ, ರಾಜ್ಯ-ರಾಷ್ಟ್ರಗಳ ನಿರ್ಮಾಣ ಮತ್ತು ನಿರ್ವಹಣೆಗೆ ನೆರವಾಗಿವೆ.
ಐತಿಹಾಸಿಕ ಕಾಲದಲ್ಲಿ ಶ್ರೇಷ್ಠ ಮಟ್ಟದ ಶಾರೀರಿಕ ಸಾಮಥ್ರ್ಯವು ಅತ್ಯವಶ್ಯಕವೆನಿಸಿದ್ದು, ಕಠಿಣ ತೆರನಾದ ಶಾರೀರಿಕ ಚಟುವಟಿಕೆಗಳು ಅಂದು ಗೌರವಾದರಗಳಿಗೆ ಪಾತ್ರವಾಗಿದ್ದವು. ವಿಜ್ಞಾನ- ತಂತ್ರಜ್ಞಾನಗಳ ಬೆಳವಣಿಗೆಗಳಿದಾಗ ಪ್ರಸ್ತುತ ಕಾಲದಲ್ಲಿ ಜನರು ಶ್ರಮದಾಯಕ ಶಾರೀರಿಕ ಚಟುವಟಿಕೆಗಳಿಂದ ಬಹುತೇಕ ವಂಚಿತರಾಗಿರುವುದರಿಂದ ತತ್ಫಲವಾದ ಸ್ವಾಸ್ಥ್ಯ ಸಂಬಂಧಿ ಉಪಾದಿಗಳು ಜನರನ್ನು ಕಾಡದಂತೆ ಎಚ್ಚರಿಕೆವಹಿಸಲು ಹಾಗೂ ಬಾಧಿತರಿಗೆ ಪರಿಹಾರ ಒದಗಿಸಲು ಶಾರೀರಿಕ ಚಟುವಟಿಕೆಗಳು ಇಂದು ಅಗತ್ಯವೆನಿಸಿವೆ.
ಇಂತಹ ಅಮ್ಯೂಲ್ಯವಾದ ಶಾರೀರಿಕ ಚಟುವಟಿಕೆಗಳನ್ನು ಮಾನವನ ಹಿತದೃಷ್ಟಿಯಿಂದ ಚಿರಂತನವಾಗಿ ಉಳಿಸಿಕೊಂಡು ಹೋಗುವಂತಾಗಲು ದಾರ್ಶನಿಕರು ಅವುಗಳಿಗೆ ಸ್ಪರ್ಧೆಗಳ ರೂಪಕೊಟ್ಟು ಕ್ರೀಡೆಗಳನ್ನಾಗಿ ಪರಿವರ್ತಿಸಿದ್ದಾರೆ.
ಇವುಗಳಲ್ಲಿ “ಅಥ್ಲೆಟಿಕ್ಸ್” ಅಥವಾ ಬಹಳ ಸ್ಫುಟವಾಗಿ “ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪೋಟ್ರ್ಸ್” ಎಂಬುದು ಕ್ರೀಡೆಗಳಲ್ಲಿಯೇ ಮಾತೃಸದೃಶವಾದದ್ದು. ಶಾರೀರಿಕ ಸಾಮಥ್ರ್ಯ ಬೆಳೆಸಿ-ಉಳಿಸಿಕೊಂಡು ಹೋಗಲು ಮತ್ತು ಆರೋಗ್ಯ ಕಾಪಾಡಿಕೊಂಡು ಹೋಗಲು ಮಾತ್ರವಲ್ಲದೆ ಜೀವನ ಮೌಲ್ಯಗಳನ್ನು ಅರಿತು ನಡೆಯಲು, ಮಾನ-ಸನ್ಮಾನಗಳಿಸಿಕೊಳ್ಳಲು, ರಾಷ್ಟ್ರಗೌರವ ವರ್ಧಿಸಲು, ಸಮಾಜದಲ್ಲಿ ಏಕತೆ-ಐಕ್ಯತೆ ಆವಿರ್ಭವಿಸಲು ಸಹ ಅಥ್ಲೆಟಿಕ್ಸ್ ಕ್ರೀಡೆ ಬಹುವಾಗಿ ನೆರವಾಗುತ್ತದೆ.
ವಿಶ್ವದಾದ್ಯಂತ ಹಲವಾರು ಕ್ರೀಡಗಳು ಪ್ರಚಲಿತವಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತೆರನಾದ ಕ್ರೀಡಾ ಚಟುವಟಿಕೆಗಳು ಜನಮನ್ನಣೆಗಳಿಸಿವೆಯಾದರೂ, ಅತಿ ಪುರಾತನವಾದ “ಆಥ್ಲೆಟಿಕ್ಸ್ ಕ್ರೀಡೆ” ಸರ್ವೇ ಸಾಮಾನ್ಯವಾಗಿ ಸರ್ವ ಜನಾಂಗದ ಸಂಪರ್ಕದಲ್ಲಿದೆ. ಮಾನವನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಶಾರೀರಿಕ ಚಟುವಟಿಕೆಗಳನ್ನು ಅಪ್ಯಾಯಮಾನವಾದ ಸ್ಪರ್ಧಾತ್ಮಕ ಕ್ರೀಡೆಗಳನ್ನಾಗಿ ರೂಪಾಂತರಿಸಿದುದರ ಗರಿಮೆ ಪುರಾತನ ಗ್ರೀಕರಿಗೆ ಸಲ್ಲುತ್ತದೆ.
ಭಾರತ ದೇಶದಲ್ಲಿ ಪರಂಪರಾನುಗತವಾಗಿ ಪುರಾಣ ಪುನ್ಯಪುರುಷರ ಹೆಸರಿನಲ್ಲಿ ವಿವಿಧ ಹಬ್ಬಗಳನ್ನು ಆಚರಿಸಿದಂತೆಯೇ ಪುರಾತನ ಗ್ರೀಕರೂ ಕೂಡ ತಮ್ಮ ನಂಬುಗೆಯ ದೇವತೆ-ದೈವಗಳ ಹೆಸರಿನಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದುದುಂಟು. ಅವುಗಳಲ್ಲಿ ಇಸ್ತ್ಮಿಯನ್, ನೇಮಿಯನ್, ಪೈಥಿಯನ್ ಮತ್ತು ಒಲಂಪಿಕ್ ಎಂಬ ನಾಲ್ಕು ಹಬ್ಬಗಳು ರಾಷ್ಟ್ರೀಯ ಹಬ್ಬಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದವು.
ಧಾರ್ಮಿಕ ಚಟುವಟಿಕೆಗಳ ಆಚರಣೆ, ಬಂಧು-ಮಿತ್ರರ ಮಿಲನ, ಉಂಡು-ಉಡುವುದರ ಜೊತೆಗೆ ಮನರಂಜನೆ-ಸ್ಪರ್ಧೆಗಳನ್ನೊಳಗೊಂಡ ಶಾರೀರಿಕ ಚಟುವಟಿಕೆಗಳ ವೀಕ್ಷಣೆ ಮತ್ತು ಅವುಗಳಲ್ಲಿ ಸಮರ್ಥರು ಭಾಗವಹಿಸುವಿಕೆ ಈ ಹಬ್ಬಗಳ ವೈಶಿಷ್ಟ್ಯವಾಗಿದ್ದಿತು.
ಕಾಲಾನುಕ್ರಮದಲ್ಲಿ ಕ್ರೀಡೆಗಳ ಸ್ವರೂಪ ಪಡೆದ ಶಾರೀರಿಕ ಚಟುವಟಿಕೆಗಳು ಹಬ್ಬಗಳ ಸಂದರ್ಭದ ಇತರ ಚಟುವಟಿಕೆಗಳಿಗಿಂತಲೂ ಅಪ್ಯಾಯಮಾನವೆನಿಸಿದುವು. ಒಂದು ಗಮನಾರ್ಹ ಸಂಗತಿಯೆಂದರೆ ಗ್ರೀಸ್ ದೇಶದ ಎಲಿನ್ ಪ್ರಾಂತ್ಯದಲ್ಲಿನ ಒಲಂಪಿಯಾ ಎಂಬ ಸ್ಥಳದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಒಲಂಪಿಕ್ ಹಬ್ಬ ಕ್ರಿ.ಪೂ.776ರಲ್ಲು ಮರುಹುಟ್ಟು ಪಡೆದದ್ದು. ಹೀಗೆ ಮರುಹುಟ್ಟು ಪಡೆದ ಪುರಾತನ ಕಾಲದ ಮೊದಲ ಒಲಂಪಿಕ್ನಲ್ಲಿ ಒಂದು ಸ್ಟೇಡ್ (606 3/4 ಅಡಿ) ಓಟ ಸ್ವರ್ಧೆ ಮಾತ್ರ ಇದ್ದು, ಕಾಲಾನುಕ್ರಮದಲ್ಲಿ ಇನ್ನಿತರ ದೂರದ ಓಟ ಸ್ಪರ್ಧೆಗಳಲ್ಲದೆ, ನೆಗೆತ, ಎಸೆತ, ಕುಸ್ತಿ, ಬಾಕ್ಸಿಂಗ್, ಇತ್ಯಾದಿಗಳು ಸೇರ್ಪಡೆಗೊಂಡವು. ಸಾಹಿತ್ಯ, ಶಿಲ್ಪಕಲೆ, ವಿನ್ಯಾಸಕಲೆ, ಸಂಗೀತ, ನೃತ್ಯ ಇತ್ಯಾದಿ ಚಟುವಟಿಕೆಗಳಲ್ಲಿಯೂ ಸ್ಪರ್ಧೆಗಳು ನಡೆಯುತ್ತಿದ್ದವಾದರೂ ಒಲಂಪಿಕ್ಸ್ನಲ್ಲಿ ಅಥ್ಲೆಟಿಕ್ಸ್ ಕ್ರೀಡೆಗೆ ಅಗ್ರಪೂಜೆ ಸಲ್ಲುತ್ತಿತ್ತು.
ಗ್ರೀಕರ ಉಳಿದೆಲ್ಲ ರಾಷ್ಟ್ರೀಯ ಕ್ರೀಡೆಗಳನ್ನು ಮೀರಿ ಬೆಳೆದ ಒಲಂಪಿಕ್ ಕ್ರೀಡೆ, ಬಲಿಷ್ಟ ಚಕ್ರಾಧಿಪತ್ಯವಾಗಿ ರೂಪುಗೊಂಡ ರೋಮ್ನ ಅವಕೃಪೆಗೆ ಪಾತ್ರವಾಗಿ ಕ್ರಿ.ಪೂ 334ರಲ್ಲಿ ಸ್ಥಗಿತಗೊಂಡಿತಾದರೂ ಜನಮಾನಸದಿಂದ ಸಂಪೂರ್ಣವಾಗಿ ಮರೆಯಾಗಿರಲಿಲ್ಲ.
ಫ್ರಾನ್ಸ್ದೇಶದ ಶಿಕ್ಷಣ ತಜ್ಞ ಹಾಗೂ ದಾರ್ಶನಿಕ ಬೇರನ್ ಡಿ ಕೊಬರ್ಟಿನ್ನ ಪ್ರಯತ್ನದ ಫಲವಾಗಿ ಒಲಂಪಿಕ್ ಕ್ರೀಡೆಗಳೂ ಕ್ರಿ.ಶ.1896ರಲ್ಲಿ ಮತ್ತೊಮ್ಮೆ ಪುನರುಜ್ಜೀವನಗೊಂಡು 1916, 1940 ಮತ್ತು 1944ರ ಒಲಂಪಿಕ್ಸ್ ಹೊರತು ಪಡಿಸಿ ನಿರಂತರವಾಗಿ ನಾಲ್ಕು ವರ್ಷಕ್ಕೊಮ್ಮೆ ನಡೆದುಕೊಂಡು ಬರುತ್ತಿವೆ.
100 ಮೀಟರ್ ಓಟದಿಂದ ಹಿಡಿದು ಮ್ಯಾರಥಾನ್ ಓಟದವರೆಗಿನ ವಿವಿಧ ದೂರದ ಓಟಗಳು, ಅಡೆತಡೆ ಓಟ, ವಿವಿಧ ಎಸೆತದ ಸ್ಪರ್ಧೆಗಳು, ನೆಗೆತದ ಸ್ಪರ್ಧೆಗಳು, ಡೆಕಾಥ್ಲಾನ್ ಮತು ಹೆಪ್ಟಾಥ್ಲಾನ್ ಸ್ಪರ್ಧೆಗಳು, ನೆಗೆತದ ಸ್ಪರ್ಧೆಗಳು, ಥೆಕಾಥ್ಲಾನ್ ಮತ್ತು ಹೆಪ್ಟಾಥ್ಲಾನ್ನಂತಹ ಕಂಬೈಂಡ್ ಸ್ಪರ್ಧೆಗಳು, ನಡಿಗೆ ಸ್ಪರ್ಧೆ ಇತ್ಯಾದಿಗಳನ್ನೊಳಗೊಂಡ ಅಥ್ಲೆಟಿಕ್ಸ್ ಸ್ಪರ್ಧೆಗಳು ಒಲಂಪಿಕ್ಸ್ನಲ್ಲಿ ಅತಿರಂಜನೀಯ ಮತ್ತು ಹೆಚ್ಚು ಕ್ರೀಡಾಸಕ್ತರ ಗಮನ ಸೆಳೆಯುವ ಚಟುವಟಿಕೆಯಾಗಿದೆ.
ಅಪೇಕ್ಷಿತ ಮೌಲ್ಯಗಳನ್ನು ಬೆಳೆಸುವ ಹಾಗೂ ಸರಳ ಸ್ಪರ್ಧೆಗಳನ್ನೊಳಗೊಂಡ ಅಥ್ಲೆಟಿಕ್ಸ್ನ್ನು ಪ್ರಾಥಮಿಕ ಶಾಲಾ ಮಟ್ಟದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ, ತಾಲ್ಲೂಕು ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ವಿಶ್ವದಾದ್ಯಂತ ಆಯೋಜಿಸಲಾಗುತ್ತಿದೆ. ವಿಶೇಷ ಅಗತ್ಯವಿರುವವರು ಹಾಗೂ ವಿಕಲ ಚೇತನರಿಗೂ ಪ್ರತ್ಯೇಕ ಅಥ್ಲೆಟಿಕ್ಸ್ ಸ್ಪರ್ಧೆಗಳಿವೆ.
ವಯಸ್ಕರು ಮತ್ತು ವಯೋವೃದ್ಧರು ದೈಹಿಕ ಸಾಮಥ್ರ್ಯ ಬೆಳೆಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ನೆರವಾಗುವಂತೆ ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಶತಾಯುಷಿಗಳನೇಕರು ಸಹ ಇದರಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುತ್ತಿದ್ದಾರೆ. ಒಟ್ಟಾರೆ ವಿವಿಧ ವಯೋಮಾನದ ಮಹಿಳೆಯರು ಮತ್ತು ಪುರುಷರು ಆಸಕ್ತಿಯಿಂದ ಭಾಗವಹಿಸಲಿಚ್ಛಿಸುವ ಅಥ್ಲೆಟಿಕ್ಸ್ ಕ್ರೀಡೆ ಮನುಕುಲದ ಆಸ್ತಿ.
ಬನ್ನಿ! ನಡೆಯಿರಿ, ಓಡಿ, ಎಸೆಯಿರಿ, ನೆಗೆಯಿರಿ, ನಲಿಯಿರಿ, ಸ್ವಾಸ್ಥ್ಯ ಮತ್ತು ಸಾಮಥ್ರ್ಯವೆಂಬ ಆಸ್ತಿಗಳಿಸಿಕೊಳ್ಳಿ! ಅಥ್ಲೆಟಿಕ್ಸ್ ಕ್ರೀಡೆಯ ಮೂಲಕ ಬಲಿಷ್ಠ ಭಾರತ ಕಟ್ಟೋಣ!
ಮೂಲ : ಜಿ ನ್ಯೂಸ್ ೫
ಕೊನೆಯ ಮಾರ್ಪಾಟು : 4/22/2020