অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಸ್ಯಾತ್ಮಕ ಮಣ್ಣು

ಪರಿಚಯ

ಯಾವುದೇ ಜಮೀನನ್ನು ಬೇಸಾಯಕ್ಕೊಳಪಡಿಸುವಾಗ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಮಸ್ಯಗಳು ಕಂಡುಬಂದು ಬೆಳೆಗಳ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾದಲ್ಲಿ ಸಮಸ್ಯಾತ್ಮಕ ಜಮೀನು ಎನ್ನಬಹುದು. ಸಾಮಾನ್ಯವಾಗಿ ಕಂಡುಬರುವ ಸಮಸ್ಯಗಳೆಂದರೆ,  ಜೌಗು, ಚೌಳು ಮತ್ತು ಕ್ಷಾರ, ಆಮ್ಲೀಯತೆ, ಹೆಪ್ಪುಗಟ್ಟುವಿಕೆ, ನಂಜಾಗುವಿಕೆ, ಗಟ್ಟಿ ಮಣ್ಣಿನ ಕೆಳಪದರ ಇತ್ಯಾದಿ.

  • ಜೌಗು ಭೂಮಿ ( ವಸತಿ ಜಮೀನು)
  • ಚೌಳು ಮತ್ತು ಕ್ಷಾರ (ಕರ್ಲು) ಮಣ್ಣು
  • ಕ್ಷಾರ ಮಣ್ಣು ಉಂಟಾಗುವಿಕೆ
  • ಹುಳಿ ಮಣ್ಣು

ಜೌಗು ಭೂಮಿ ( ವಸತಿ ಜಮೀನು)

ಭೂಮಿಯ ಮೇಲ್ಭಾಗದಲ್ಲಿ ವರ್ಷದ ಬಹಳಷ್ಟು ಕಾಲ ನೀರು ನಿಂತಿರುವುದು ಅಥವಾ ಜಲಪಾತಳಿಯ ಮಟ್ಟ ಭೂಮಿಯ ಮೇಲ್ಭಾಗಕ್ಕೆ ಸಮೀಪವಾಗಿರುವ ಸನ್ನುವೇಶಗಳಲ್ಲಿ ಭೂಮಿಯಲ್ಲಿ ಜೌಗುಂಟಾಗಿ ಬೆಳೆ ಉತ್ಪಾದನೆ ಕುಂಠಿತವಾಗುತ್ತದೆ. ಈ ರೀತಿಯ ಜೌಗು ಭೂಮಿಯನ್ನು ನಮ್ಮ ರಾಜ್ಯದಲ್ಲಿ ಸುಮಾರು 63 ಸಾವಿರ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಕಾಣಬಹುದು.

ಭೂಮಿಯಲ್ಲಿ ಜೌಗುಂಟಾಗಲು ಕಾರಣಗಳೆಂದರೆ ಕಾಲುವೆ/ಕೆರೆಯಿಂದ ನೀರು ಸೋರಿವಿಕೆ. ಸಾಕಷ್ಟು ಬಸಿಗಲುವೆಗಳಿಲ್ಲದೆ ಅತಿ ನೀರಾವರಿ ಮಾಡುವುದು, ಜೇಡಿ ಅಂಶ ಜಾಸ್ತಿ ಇರುವ ಹಾಗೂ ತಗ್ಗು ಪ್ರದೇಶಗಳು.

ಜೌಗು ಭೂಮಿಯ ಸುಧಾರಣೆಯಾಗದಿದ್ದಲ್ಲಿ ಅದು ಕ್ರಮೇಣ ಚೌಳು ಅಥವಾ ಕ್ಷಾರ ಭೂಮಿಯಾಗಿ ಮಾರ್ಪಾಡಾಗುತ್ತದೆ

ಜೌಗು ಭೂಮಿಯ ಸಮಸ್ಯಗಳು

 

ಜೌಗು ಭೂಮಿಯಲ್ಲಿ ಮಣ್ಣಿನ ರಂಧ್ರಗಳು ನೀರಿನಿಂದ ಆವೃತಗೊಂಡು ಸಸ್ಯಗಳ ಬೇರುಗಳ ಉಸಿರಾಟಕ್ಕೆ ತೊಂದರೆಯಾಗಿ, ನೀರು ಮತ್ತು ಪೋಷಕಾಂಶಗಳ ಹೀರುವಿಕೆ ಕುಂಠಿತಗೊಂಡು ಬೆಳೆ ಬೆಳವಣಿಗೆ ಸಮರ್ಪಕವಾಗಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲಘು ಪೋಷಕಾಂಶಗಳಾದ ಕಬ್ಬಿಣ ಮತ್ತು ಮ್ಯಾಂನೀಸ್‍ಗಳು ಬೆಳೆಗಳಿಗೆ ನಂಜುಂಟುಮಾಡುವ ಪ್ರಮಾಣದಲ್ಲಿರುತ್ತದೆ.

ಸುಧಾರಣೆ

 

ಜೌಗು ಭೂಮಿ ಸುಧಾರಣೆಗೆ ಸೂಕ್ತ ಅಂತರದಲ್ಲಿ ಬಸಿಗಾಲುವೆಗಳನ್ನು ತೋಡಿ, ಭೂಮಿಯಲ್ಲಿರುವ ಹೆಚ್ಚುವರಿ ನೀರನ್ನು ಬಸಿಗಾಲುವೆಗಳ ಮೂಲಕ ಹೊರಕಾಕುವುದು ಅವಶ್ಯಕ. ಅಲ್ಲದೆ ಮಣ್ಣಿನ ಭೌತಿಕ ಗುಣಗಳನ್ನು ಉತ್ತಮಪಡಿಸಲು, ಹೆಚ್ಚು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಬೇಕು. ನೀರನ್ನು ಬಸಿದು ಹೊರಗೆ ಹಾಕಲು ಅಡಚಣೆಗಳಿದ್ದಲ್ಲಿ ಅಂತಹ ಜಮೀನಿನಲ್ಲಿ ಮೀನು ಸಾಕಣೆ ಮಾಡುವುದು ಸೂಕ್ತ.

ಚೌಳು ಮಣ್ಣು

ಚೌಳು ಮಣ್ಣುಗಳನ್ನು ಶುಷ್ಕ ಮತ್ತು  ಅರೆ ಶುಷ್ಕ ವಾತಾವರಣಗಳಲ್ಲಿ, ಜಲಾನಯನ ಪ್ರದೇಶಗಳಲ್ಲಿ, ಕರಾವಳಿ ತೀರ ಪ್ರದೇಶಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಕಾಣಬಹುದು.

ನಮ್ಮ ರಾಜ್ಯದಲ್ಲಿ 2.5 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶಗಳಲ್ಲಿ ಈ ರೀತಿಯ ಚೌಳು / ಕ್ಷಾರ ಮಣ್ಣಿರುವುದು ಕಂಡುಬಂದಿದೆ. ಈ ಮಣ್ಣುಗಳಲ್ಲಿ ಲವಣಗಳ ಅಂಶ ಹೆಚ್ಚಾಗಿರುತ್ತದೆ.

ಚೌಳು ಮಣ್ಣು ಉಂಟಾಗುವಿಕೆ

  • ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ, ಮಣ್ಣಿನಲ್ಲಿ ಉತ್ಪತ್ತಿಯಾದ ಲವಣಗಳು, ಮಣ್ಣಿನಿಂದ ಪೂರ್ತಿಯಾಗಿ ಬಸಿದು ಹೋಗದೆ, ಮಣ್ಣಿನ ಮೇಲ್ಪದರಗಳಲ್ಲಿಯೇ ಉಳದು ಮಣ್ಣು ಚೌಳಾಗುತ್ತದೆ.
  • ಅಂತರ್ಜಲ/ಜಲಪಾತಳಿ ಮೇಲೆಯೇ ಇರುವ ಸನ್ನಿವೇಶಗಳಲ್ಲಿ ನೀರಿನಲ್ಲಿ ಕರಗಿರುವ ಲವಣಗಳು ನೀರು ಆವಿಯಾಗುವಾಗ ಭೂಮಿಯ ಮೇಲ್ಭಾಗಕ್ಕೆ ಒಂದು ಶೇಖರಣೆಗೊಂಡು ಮಣ್ಣು ಚೌಳಾಗುತ್ತದೆ.
  • ಸಮುದ್ರಕ್ಕೆ ಸಮೀಪವಿರುವ ತಗ್ಗು ಜಮೀನುಗಳಲ್ಲಿ ಸಮುದ್ರದ ನೀರು ಒಳನುಗ್ಗಿ ನಂತರ ಹಿಂದೆ ಸರಿದಾಗ, ಅಲ್ಲಿ ಉಳಿದ ತೇವಾಂಶದ ನೀರು ಆವಿಯಾಗಿ ಲವಣಗಳು ಮಣ್ಣಿನಲ್ಲಿ ಸಂಗ್ರಹಗೊಂಡು ಚೌಳು ಮಣ್ಣಾಗುತ್ತದೆ.
  • ನೀರಾವರಿ ಪ್ರದೇಶಗಳಲ್ಲಿ ಅತಿಯಾದ ನೀರಿನ ಬಳಕೆಯಿಂದ ಹಾಗೂ ಅಸಮರ್ಪಕ ಬಸಿಗಾಳುವೆ ವ್ಯವಸ್ಥೆ ಇರುವಲ್ಲಿ ನೀರಾವರಿ ಮಾಡುವುದರಿಂದ ಬೂಮಿ ಚೌಳಾಗುತ್ತದೆ.
  • ಹೆಚ್ಚು ಲವಣಾಂಶ ಹೊಂದಿರುವ ಬಾವಿ/ಕೊಳವೆ ಬಾವಿಗಳ ನೀರನ್ನು ನೀರಾವರಿಗೆ ಬಳಸಿದಾಗ ಭೂಮಿ ಚೌಳಾಗುತ್ತದೆ.
  • ಕೈಗಾರಿಕಾ ತ್ಯಾಜ್ಯ ನೀರನ್ನು ಸೂಕ್ತವಾಗಿ ಉಪಚರಿಸದೆ ಹೆಚ್ಚು ಪ್ರಮಾಣದಲ್ಲಿ ಬಳಸಿದಾಗಲೂ ಭೂಮಿ ಚೌಳಾಗುತ್ತದೆ.

ಚೌಳು ಮಣ್ಣಿನ ಸಮಸ್ಯೆಗಳು

 

  • ಲವಣಾಂಶದ ಅಧಿಕತೆಯಿಂದ ಸಸ್ಯಗಳ ಬೇರುಗಳು ನೀರು ಹಾಗೂ ಪೋಷಕಾಂಶ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇದ್ದರೂ  ಬೇರುಗಳು ನೀರು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಬದಲಾಗಿ ಸಸ್ಯಗಳ ಬೇರುಗಳಿಂದಲೇ ನೀರು ಹೊರಹೋಗಿ ಮಣ್ಣನ್ನು ಸೇರುತ್ತದೆ. ಇದರಿಂದಾಗಿ ಸಸ್ಯಗಳು ಬಾಡುತ್ತವೆ.
  • ಸೂಕ್ಷ್ಮ ಜೀವಿಗಳ ಚಟುವಟಿಕೆ ಕಡಿಮೆಯಾಗಿ ಸವಯವ ವಸ್ತುಗಳ ಕೊಳೆಯುವಿಕೆ ನಿಧಾನವಾಗಿ ಸಾರಜನಕದ ಕೊರತೆ ಉಂಟಾಗುತ್ತದೆ.
  • ಕ್ಲೋಟೈಡ್ ಮತ್ತು ಬೋರಾನ್ ಪೋಷಕಾಂಶಗಳು ಹೆಚ್ಚು ಪ್ರಮಾಣದಲ್ಲಿದ್ದು ನಂಜು ಉಂಟುಮಾಡುತ್ತವೆ.

ಚೌಳು ಭೂಮಿ ಸುಧಾರಣೆ

ಚೌಳು ಮಣ್ಣಿನಲ್ಲಿ ಕರಗುವ ಲವಣಾಂಶ ಮಾತ್ರ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಈ ಮಣ್ಣಿನ ಸುಧಾರಣೇಗೆ ಜಮೀನಿನಲ್ಲಿ ನಿಗದಿತ ಅಂತರದಲ್ಲಿ ಬಸಿಗಾಲುವೆಗಳನ್ನು ತೆಗೆದು ಉತ್ತಮ ಮಟ್ಟದ ನೀರಿನಲ್ಲಿ ಲವಣಗಳನ್ನು ಕರಗಿಸಿ ಬಸಿಗಾಲುವೆಗಳ ಮೂಲಕ ಹೊರಗೆ ತೆಗೆಯಬೇಕು. ಚೌಳುಮಣ್ಣಿನ ಸುಧಾರಣೆಗೆ ಯಾವುದೇ ಸುಧಾರಕ ಸಾಮಗ್ರಿಗಳ ಅವಶ್ಯಕತೆ ಇದೆ.

ಕ್ಷಾರ ಮಣ್ಣು ಉಂಟಾಗುವಿಕೆ.

  • ಇದು ಚೌಳಾಗುವಿಕೆಯ ಮುಂದಿನ ಹಂತ.
  • ಈ ಮಣ್ಣುಗಳಲ್ಲಿ ವಿನಿಮಯ ಸೋಡಿಯಂ ಪ್ರಮಾಣ ಹೆಚ್ಚಾಗುವುದರಿಂದ ಕ್ಷಾರ ಮಣ್ಣಾಗುತ್ತದೆ.
  • ಮಣ್ಣಿನಲ್ಲಿ ಕಾರ್ಬೋನೇಟ್ / ಬೈಕಾರ್ಬೋನೇಟ್ ಪ್ರಮಾಣ ಜಾಸ್ತಿಯಾಗುವುದರಿಂದ ಸಹ ಕ್ಷಾರ ಉಂಟಾಗುತ್ತದೆ

ಚೌಳುಯುಕ್ತ ಕ್ಷಾರ ಮಣ್ಣು

ಚೌಳುಯುಕ್ತ ಕ್ಷಾರ ಮಣಿನಲ್ಲಿ ಲವಣಾಂಶ ಮತ್ತು ವಿನಿಮಯ ಸೋಡಿಯಂ ಪ್ರಮಾಣ ಎರಡೂ ಹೆಚ್ಚಾಗಿದ್ದು ಸಸ್ಯಗಳ ಬೆಳವಣಿಗೆ ಮೇಲೆ ಪರಿಣಾಮ ಬೀಋಉತ್ತದೆ. ಕರಗಿರುವ ಲವಣಾಂಶಗಳು ಹೆಚ್ಚಾಗಿರುವವರೆಗೆ ಮಣ್ಣಿನ ಭೌತಿಕ ಗುಂಗಳು ಚೆನ್ನಾಗಿದ್ದು ಲವಣಾಂಶಗಳು ಬಸಿದು ಹೋದಾಗ ಈ ಮಣ್ಣು ಕ್ಷಾರ ಮಣ್ಣಾಗಿ ಮಾರ್ಪಟ್ಟು ಮಣ್ಣಿನ ಭೌತಿಕ ಗುಣಗಳು ಹಾಳಾಗುತ್ತದೆ.

ಚೌಳು ಮತ್ತು ಕ್ಷಾರ ಭೂಮಿಗಳ ಗುಣಲಕ್ಷಣಗಳು

ಚೌಳು ಭೂಮಿ ಮೇಲ್ನೋಟಕ್ಕೆ ಬಿಳಿ ಬಣ್ಣದ ಲವಣಗಳ ಪದರಗಳಿಂದ ಕೂಡಿದ್ದು, ಕರಗುವ ಲವಣಗಳ ಪ್ರಮಾಣ ಅಧಿಕವಾಗಿರುತ್ತದೆ. ಆದರೆ ಕ್ಷಾರ ಭೂಮಿಯು ಮೇಲ್ನೋಟಕ್ಕೆ ಕಂದು ಮಿಶ್ರಿತ ಬಣ್ಣದಿಂದ ಕೂಡಿದ್ದು, ವಿನಿಮಯ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ.

ಚೌಳು ಮತ್ತು ಕ್ಷಾರ ಮಣ್ಣಿನ ಭೌತಿಕ ಮತ್ತು ರಾಸಯನಿಕ ಗುಣಧರ್ಮಗಳು ಕೆಳಕಂಡಂತೆ ಇವೆ.

  • ಗುಣಗಳು                ಚೌಳು ಮಣ್ಣು           ಚೌಳುಯುಕ್ತ ಕ್ಷಾರ ಮಣ್ಣು       ಕ್ಷಾರ ಮಣ್ಣು

ಭೌತಿಕ ಗುಣಗಳು

  • ಭೂಮಿಯ ಮೇಲ್ಪದರದ ಬಣ್ಣ ಬಿಳಿ         ಕಂದು ಮಿಶ್ರಿತ ಬಿಳಿ ಕಂದುಮಿಶ್ರಿತ ಬಿಳಿ
  • ಬಸಿಯುವಿಕೆಗೆ ತಡೆ ಯೊಡ್ಡುವ ಭೂಮಿಯ ಒಳಪದರ            ಇರುವುದಿಲ್ಲ             ಇರುತ್ತದೆ.                ಇರುತ್ತದೆ
  • ಮಣ್ಣಿನ ರಚನೆ         ಸಮಸ್ಯ ಇರುವುದಿಲ್ಲ               ಸಮಸ್ಯೆ ಇರುತ್ತದೆ.  ಸಮಸ್ಯೆ ಇರುತ್ತದೆ.
  • ಮಣ್ಣಿನ ಸ್ಪರ್ಶ         ನುಣುಪಾಗಿರುತ್ತದೆ  ಒರಟಾಗಿರುತ್ತದೆ     ಒರಟಾಗಿರುತ್ತದೆ
  • ಬರಿಗಾಲು ಸ್ಪರ್ಶ     ತಂಪಾಗಿರುತ್ತದೆ      ಬಿರುಸಾಗಿರುತ್ತದೆ    ಬಹಳ ಬಿರುಸಾಗಿರುತ್ತದೆ.
  • ಸಾವಯವ ಪದಾರ್ಥಗಳ ಕಳೆಯುವಿಕೆ  ಬಹಳ ಕಾಲ ಹಿಡಿಯುತ್ತದೆ       ಕರಗಿ ಸುಟ್ಟ ಹಾಗೆ ಕಾಣುತ್ತದೆ.                ಕರಗಿ ಸುಟ್ಟು ಕಪ್ಪು ಬಣ್ಣ ಇರುತ್ತದೆ

ರಾಸಾಯನಿಕ ಗುಣಗಳು

  • ಮಣ್ಣಿನ ರಸಸಾರ    7. ರಿಂದ 8.5           7.5 ರಿಂದ 8.5         8.5 ರಿಂದ 10.0
  • ವಿದ್ಯತ್ ವಾಹಕತೆ (ಡೆಸಿ/ಮೀ)              >4.0       >4.0       <4.0
  • ವಿನಿಮಯ ಸೋಡಿಯಂ ಅಂಶ (ಶೇಕಡಾವಾರು) >15         >15         >೧೫

ಕ್ಷಾರ ಮಣ್ಣಿನ ಸಮಸ್ಯೆಗಳು

  • ವಿನಿಮಯ ಸೋಡಿಯಂನ ಪ್ರಮಾಣ ಅಧೀಕವಾಗಿರುವುದರಿಂದ ಮಣ್ಣಿನ ಭೌತಿಕ ಗುಣಧರ್ಮಗಳು ಹಾಳಾಗುತ್ತವೆ.ಉದಾ: ಮಣ್ಣಿನ ಕಣರಚನೆ ಹಾಳಾಗಿ ನೀರಿನ ಬಸಿಯುವಿಕೆ ನಿಧಾನವಾಗುವುದರಿಂದ ಮಣ್ಣಿನಲ್ಲಿ ಗಾಳಿಯಾಡುವಿಕೆ ಕಡಿಮೆ ಯಾಗುತ್ತದೆ. ಮತ್ತು ಸಸ್ಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
  • ಮಣ್ಣಿನ ಕೆಳಪದರಗಳಲ್ಲಿ ಗಾಢ ಜೇಡಿ ಪದರ ಉಂಟಾಗಿ ಇಂತಹ ಮಣ್ಣಿನಲ್ಲಿ ಬೇಸಾಯ ಮಾಡುವುದು ಕಷ್ಟವಾಗುತ್ತದೆ.
  • ತೀವ್ರ ಕ್ಷಾರತೆಯಿಂದ ಮಣ್ಣಿನ ಸಾವಯವ ಅಂಶ ನೀರಿನಲ್ಲಿ ಕರಗಿ ನೀರು ಆವಿಯಾದಾಗ ಭೂಮಿಯ ಮೇಲ್ಭಾಗದಲ್ಲಿ ಕಂದುಮಿಶ್ರಿತ ಕಪ್ಪು ಬಣ್ಣ ಕಂಡು ಬರುತ್ತದೆ.
  • ಸಾವಯವ ಅಂಶ ಕಡಿಮೆಯಾಗುವುದರಿಂದ ಬೆಳೆಗೆ ದೊರೆಯುವ ಸಾರಜನಕದ ಕೊರತೆ ಕಂಡುಬರುತ್ತದೆ.
  • ಲಘು ಪೋಷಕಾಂಶವಾದ ಸತುವಿನ ಕೊರತೆ ಸಹ ಕಂಡುಬರುತ್ತದೆ. ಅಲ್ಲದೆ ಸುಣ್ಣಾಂಶ ವಸ್ತುಗಳಾದ ಕ್ಯಾಲ್ಸಿಯಂ ಮತ್ತು ಮೆಗ್ನೀಶೀಯಂ ಕೊರತೆಯೂ ಇರುತ್ತದೆ.
  • ಕಾರ್ಬೋನೇಟ್, ಬೈಕಾರ್ಬೋನೇಟ್ ಮತ್ತು ಸೋಡಿಯಂ ವಿದ್ಯತ್ ಕಣಗಳ ನಂಜು ಕಂಡುಬರುತ್ತದೆ

ಚೌಳು ಭೂಮಿ ಸುಧಾರಣೆ

ಚೌಳು ಮಣ್ಣಿನಲ್ಲಿ ಕರಗುವ ಲವಣಾಂಶ ಮಾತ್ರ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಈ ಮಣ್ಣಿನ ಸುಧಾರಣೇಗೆ ಜಮೀನಿನಲ್ಲಿ ನಿಗದಿತ ಅಂತರದಲ್ಲಿ ಬಸಿಗಾಲುವೆಗಳನ್ನು ತೆಗೆದು ಉತ್ತಮ ಮಟ್ಟದ ನೀರಿನಲ್ಲಿ ಲವಣಗಳನ್ನು ಕರಗಿಸಿ ಬಸಿಗಾಲುವೆಗಳ ಮೂಲಕ ಹೊರಗೆ ತೆಗೆಯಬೇಕು. ಚೌಳುಮಣ್ಣಿನ ಸುಧಾರಣೆಗೆ ಯಾವುದೇ ಸುಧಾರಕ ಸಾಮಗ್ರಿಗಳ ಅವಶ್ಯಕತೆ ಇದೆ.

  • ಚೌಳಿನ ಸಮಸ್ಯೆಇರುವ ಭೂಮಿಯ ಮೇಲ್ಪಧರದ  ಬಿಳಿಪುಡಿಯನ್ನೊಳಗೊಂಡ ಮಣ್ಣನ್ನು ಸುಮಾರು 2.5 ರಂದ 4 ಸೆ,ಮೀ. ಆಳದವರೆಗೆ ಕೆರೆದು ಜಮೀನಿನಿಂದ ದೂರ ಸಾಗಿಸಬೇಕು.
  • ಭೂಮಿಯನ್ನು ಸಮತಟ್ಟು ಮಾಡಬೇಕು.
  • ಸಮತಟ್ಟಾದ ಜಮೀನನ್ನು 10 ಚೆ.ಮೀ. ವಿಸ್ತಾರವುಳ್ಳ ಚಿಕ್ಕ ಚಿಕ್ಕ ಪಾತಿಗಳಾಗಿ ವಿಂಗಡಿಸಿ 10 ರಿಂದ 15 ಸೆಂ.ಮೀ. ಎತ್ತರಕ್ಕೆ ಬದುಗಳನ್ನು ಹಾಕಬೇಕು.
  • ಜಮೀನಿನ ಮಣ್ಣಿನ ವಿಧ ಹಾಗೂ ಅದರ ಕಣ ರಚನೆಗೆ ಅನುಗುಣವಾಗಿ ಈ ಕೆಳಗೆ ತಿಳಿಸಿರುವಂತೆ ಬಸಿಗಾಲುವೆ ತೆಗೆಯಬೇಕು.
  • ವಿವಿಧ ಮಣ್ಣಿನಲ್ಲಿ ಬಸಿಗಾಲುವೆಗಳ ಸೂಕ್ತ ಅಳತೆ

    ಮಣ್ಣು      ಇಳಿಜಾರು (ಶೇಕಡ)               ಆಳ (ಮೀಟರ್)      ಅಂತರ (ಮೀಟರ್)

    ಕಪ್ಪು ಮಣ್ಣು             0.3 ರಿಂದ 0.4         1.05 ರಿಂದ 1.20    18 ರಿಂದ 20

    ಕೆಂಪು ಮಣ್ಣು           0.3 ರಿಂದ 0.4         1.25 ರಿಂದ 1.50    45 ರಿಂದ 75

    ಮರಳು ಮಿಶ್ರಿತ ಮಣ್ಣು           0.3 ರಿಂದ 0.4         1.75 ರಿಂದ 2.00    75 ರಿಂದ 150

    ಕೆಂಪು ಮಣ್ಣಿನಲ್ಲಿ 1:1 ಹಾಗೂ ಕಪ್ಪು ಮಣ್ಣಿನಲ್ಲಿ 2:1 ಪಾಶ್ರ್ವ ಇಳಿಜಾರು (ಪಾದ:ಲಂಬ) ಇರುವಂತೆ ಬಸಿಗಾಲುವೆಗಳನ್ನು ರಚಿಸಬೇಕು.

    ತೋಡಿದ ಬಸಿ ಕಾಲುವೆಯ ನೋಟ

    ಕೊಳವೆ ಬಸಿ ಕಾಲುವೆಯ ಸೀಳುನೋಟ

  • ಪ್ರತಿ (ಮಡಿ)ಯಲ್ಲಿ 7-8 ಸೆಂ. ಮೀ. ಎತ್ತರಕ್ಕೆ ನೀರನ್ನು ಮೂರು ದಿವಸಗಳ ಕಾಲ ನಿಲ್ಲಿಸಬೇಕು. ಈ ರೀತಿ ನಿಲ್ಲಿಸಿದ ನೀರು ಭೂಮಿಯಲ್ಲಿ ಬಸಿದು ಇನ್ನುಳಿದ ನೀರನ್ನು ಮೂರನೇ ದಿವಸ ಹೊರಗೆ ಬಿಟ್ಟು ಮತ್ತೆ 7-8 ಸೆಂ.ಮೀ. ಎತ್ತರಕ್ಕೆ ಹೊಸ ನೀರನ್ನು ಪಾತಿಯಲ್ಲಿ ನಿಲ್ಲಿಸಬೇಕು. ಈ ಕ್ರಮಗಳನ್ನು ಕನಿಷ್ಠ 4-5 ಸಾರಿ ಮಾಡಬೇಕು. ಬೂಮಿಯಿಂದ ಬಸಿದ ನೀರನ್ನು ಬಸಿಗಾಲುವೆಗಳ ಮೂಲಕ ಸೂಕ್ತವಾದ ತಗ್ಗಿಗೆ ಅಥವಾ ಹಳ್ಳಕ್ಕೆ ಬಿಡಬೇಕು.
  • (ವಿ.ಸೂ. 1) ಲವಣಾಂಶಗಳನ್ನು ತೊಳೆಯಲು ಬಳಸುವ ನೀರು ಉತ್ತಮವಾಗಿರಬೇಕು.

  • ಲವಣಯುಕ್ತ ಜಮೀನಿನಿಂದ ಬಸಿದು ಬರುವ ನೀರನ್ನು ಮತ್ತೆ ಉಪಯೋಗಿಸಬರದು.
  • ಲವಣಾಂಶ ಜಾಸ್ತಿ ಇರುವ ನೀರನ್ನು ಸುಧಾರಣೆಗೆ ಬಳಸುವುದಾದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಲವಣಗಳನ್ನು ಬಸಿದು ಹೊರಹಾಕಲು ಬಳಸಬೇಕು)
  • ಭೂಮಿಯನ್ನು ಸಡಿಲಗೊಳಿಸಲು ಹಾಗೂ ಅದರ ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳನ್ನು ಹೆಚ್ಚಿಸಲು, ಹಸಿರೆಲೆ ಬೆಳೆಗಳಾದ ಸೆಣಬು/ಚೆಂಬೆ ಇವುಗಳಲ್ಲಿ ಯಾವುದಾದರೊಂದನ್ನು ಆಯ್ಕೆಮಾಡಿ ಬೆಳೆದ ಅವು ಹೂ ಬಿಡುವ ಸಮಯದಲ್ಲಿ (ಸುಮಾರು 45 ದಿನಗಳಲ್ಲಿ) ಕಟಾವು ಮಾಡಿ ಅದೇ ಭೂಮಿಯಲ್ಲಿ ಸೇರಿಸಬೇಕು. ಅಥವಾ ಎಕರೆಗೆ ಸುಮಾರು 10 ಟನ್ ಹೊಂಗೆ, ಗ್ಲಿರಿಸಿಡಿಯಾ, ಎಕ್ಕ ಮುಂತಾದ ಹಸಿರೆಲೆ ಗೊಬ್ಬರದ ಸೊಪ್ಪನ್ನು ಬಳಸಬಹುದು ಅಥವಾ ಎಕರೆಗೆ 5 ಟನ್ ನೆಲಗಡಲೆ ಸಿಪ್ಪೆ/ಬತ್ತದ ಜಳ್ಳು ಇತ್ಯಾದಿ ಸಾವಯವ ವಸ್ತುಗಳನ್ನು ಜಮೀನಿಗೆ ಸೇರಿಸಬೇಕು.
  • ಸಾವಯವ ಸುಧಾರಕಗಳನ್ನು ಭೂಮಿಗೆ ಸೇರಿಸಿದ ಒಂದು ತಿಂಗಳ ನಂತರ ಲವಣ ಸಹಿಷ್ಣುತೆ ಹೊಂದಿರುವ ಬೆಳೆಗಳನ್ನು ಆಯ್ಕೆ ಮಾಡಿ ಬೆಳೆಯಬೇಕು. ಪ್ರಾರಂಭದಲ್ಲಿ ಬತ್ತದ ಬೇಸಾಯ ಮಾಡುವುದು ಸೂಕ್ತ.
  • ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗೆ ಅನುಗುಣವಾಗಿ ರಾಸಾಯನಿಕ ಗೊಬ್ಬರ ಬಳಸಬೇಕು.
  • ಮಳೆಆಶ್ರಿತ ಪ್ರದೇಶಗಳಲ್ಲಿ ಸುಧಾರಣೆ ಕ್ರಮಗಳು

  • ನೀರಾವರಿ ಆಶ್ರಯದಲ್ಲಿ ಶಿಫಾರಸ್ಸು ಮಾಡಿದ 1, 2, 3, ಮತ್ತು 4 ಕ್ರಮಗಳನ್ನುಇಲ್ಲೂ ಅನುಸರಿಸಬೇಕು. (ವಿ.ಸೂ. ಬೀಳುವ ಮಳೆ ನೀರನ್ನು ಬಹಳ ಸಮರ್ಪಕವಾಗಿ ಬಳಸಿ ಲವಣಾಂಶವನ್ನು ತೊಳೆಯಬೇಕು.
  • ಮಣ್ಣನ್ನು ಸಡಿಲಗೊಳಿಸಲು ಸಾವಯವ ಗೊಬ್ಬರಗಳನ್ನು ಎಕರೆಗೆ 8 ರಿಂದ 10 ಟನ್‍ನಷ್ಟು ಬಳಸಬೇಕು.
  • ಮಳೆ ಆಶ್ರಯಕ್ಕೆ ತಕ್ಕಂತೆ ಶಿಫಾರಸ್ಸು ಮಾಡಿದ ಬೆಳೆ ಮತ್ತು ತಳಿಗಳನ್ನು ಆಯ್ಕೆ ಮಾಡಬೇಕು. ಭೂಮಿಯಲ್ಲಿ ಆಳಕ್ಕೆ ಬೇರು ಹೋಗುವ ಬೆಳೆಗಳಾದ ಹತ್ತಿ, ಕುಸುಬೆ, ಕಡಲೆ, ಬಾರ್ಲಿ,ಗೋಧಿ ಮುಂತಾದವುಗಳನ್ನು ಬೆಳೆಯುವುದು ಸೂಕ್ತ.
  • ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.
  • ಕ್ಷಾರ ಮಣ್ಣಿನ ಸುಧಾರಣೆಯು ಚೌಳು ಮಣ್ಣಿನ ಸುಧಾರಣೆಗಿಂತ ಕಷ್ಟವಾದದ್ದು. ಏಕೆಂದರೆ ಈ ಮಣ್ಣಿನಲ್ಲಿ ವಿನಿಮಯ ಸೋಡಿಯಂ ಪ್ರಮಾಣ ಹೆಚ್ಚಾಗಿದ್ದು ಮಣ್ಣಿನ ಭೌತಿಕ ಗುಣಗಳು ಹಾಳಾಗಿರುತ್ತದೆ. ಮೊದಲು ಜೇಡಿಕಣಗಳ ಮೇಲಿರುವ ಸೋಡಿಯಂ ಅನ್ನು ಕ್ಯಾಲ್ಸಿಯಂ ವಿದ್ಯುತ್ ಕಣದಿಂದ (ಜಿಪ್ಸಂಬಳಕೆಯಿಂದ ) ವಿನಿಮಯಗೊಳಿಸಿ ಸೋಡಿಯಂ ಲವಣ (ಸೋಡಿಯಂ ಸಲ್ಫೇಟ್)ವನ್ನು ಉತ್ತಮ ಗುಣಮಟ್ಟದ ನೀರಿನಲ್ಲಿ ಕರಗಿಸಿ, ಬಸಿಗಾಲುವೆ ಮೂಲಕ ಹೊರಗೆ ತೆಗೆಯಬೇಕು.

    ನೀರಾವರಿಯಲ್ಲಿ ಸುಧಾರಣೆ ಕ್ರಮಗಳು

    • ಕ್ಷಾರ ಮಣ್ಣನ್ನು  ಸುಧಾರಿಸಲು ನೀರಾವರಿಯಲ್ಲಿ ಚೌಳು ಮಣ್ಣಿನ ಸುಧಾರಣೆಯ್ಲಲಿ ಸೂಚಿಸಿರುವ 1, 2, 3 ಮತ್ತು 4 ಪದ್ಧತಿಗಳನ್ನು ಅನುಸರಿಸಬೇಕು.
    • ಕ್ಷಾರದ ಸಮಸ್ಯೆಗೆ ಮೂಲಕಾರಣವಾದ ಸೋಡಿಯಂ ತೆಗೆಯಲು ನಯವಾದ ಜಿಪ್ಸಂ ಪುಡಿಯನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಭೂಮಿಗೆ ಎರಚಿ ಉಳುಮೆ ಮಾಡಿ ಮಣ್ಣಿಗೆ ಬೆರೆಸಬೇಕು ಹಾಗೂ ಭೂಮಿಯಲ್ಲಿ ರಾಸಾಯನಿಕ ಕ್ರಿಯೆಗೆ ಅನುವು ಮಾಡಿಕೊಡಲು ವಾರಕ್ಕೊಮ್ಮೆ ಲಘು ನೀರಾವರಿ ಕೊಡುವುದು ಅವಶ್ಯಕ. ಮೂರು ವಾರದ ನಂತರ ಜಮೀನಿನಲ್ಲಿ ಸುಮಾರು ಮೂರು ದಿವಸಗಳವರೆಗೆ 7-8 ಸೆಂ.ಮೀ. ಎತ್ತರಕ್ಕೆ ನೀರು ನಿಲ್ಲಿಸಬೇಕು. ನಂತರ ನೀರನ್ನು ಬಸಿದು ಕನಿಷ್ಠ 24 ಘಂಟೆಗಳ ಕಆಲ ಭೂಮಿಯನ್ನು ಒಣಗಲು ಬಿಡಬೇಕು. ಈ ಕ್ರಮವನ್ನು ಕನಿಷ್ಠ 4-5 ಸಾರಿ ಅನುಸರಿಸಬೇಕು. ಶಿಫಠಾರಸ್ಸು ಮಾಡಿದ ಜಿಪ್ಸಂನ ಪ್ರಮಾಣದ ಶೇಕಡ 40 ರಷ್ಟನ್ನು ಪ್ರಥಮ ಹಂಗಾಮಿನಲ್ಲೂ, ಶೇಕಡ 40 ರಷ್ಟನ್ನು ಎರಡನೇ ಹಂಗಾಮಿನಲ್ಲೂ ಮತ್ತು ಉಳಿದ ಶೇಕಡ 20 ರಷ್ಟನ್ನು ಮೂರನೇ ಹಂಗಾಮಿನಲ್ಲೂ ಬಳಸಬೇಕು.
    • ಮಣ್ಣನ್ನು ಸಡಿಲಗೊಳಿಸಿ, ಭೌತಿಕ ಗುಣಗಳನ್ನು ಉತ್ತಮ ಪಡಿಸಲು ಚೌಳು ಮಣ್ಣಿನ ಸುಧಾರಣೆಯಲ್ಲಿ ತಿಳಿಸಿದಂತೆ ಸಾವಯವ ಸುಧಾರಕಗಳನ್ನು ಬಳಸುವುದು ಅನಿವಾರ್ಯ ಹಾಗೂ ಅಗತ್ಯ.
    • ಕನಿಷ್ಠ 2-3 ಹಂಗಾಮಿನಲ್ಲಿ ಡೈಯಂಚಾದಂತಹ ಹಸಿರು ಗೊಬ್ಬರದ ಬೆಳೆಗಳನ್ನು ಬೆಳೆಯುವುದು ಹೆಚ್ಚು ಪ್ರಯೋಜನಕಾರಿ.
    • ಸುಧಾರಿತ ಮಣ್ಣಿನಲ್ಲಿ ಕಂಡುಬರುವ ಸತುವಿನ ಕೊರತೆಯನ್ನು ನಿವಾರಿಸಲು ಎಕರೆಗೆ 8-10 ಕೆ.ಜಿ. ಸತುವಿನ ಸಲ್ಫೇಟನ್ನು ಬಿತ್ತನೆಗೆ ಮುಂಚಿತವಠಾಗಿ ಮಣ್ಣಿನಲ್ಲಿ ಸೇರಿಸಬೇಕು.
    • ಬೆಳೆಗೆ ಶಿಫಾರಸ್ಸು ಮಾಡಿದ ಹುಳಿ ಉಂಟು ಮಾಡುವ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು. (ಉದಾ:ಅಮೋನಿಯಂ ಸಲ್ಫೇಟ್)
    • ಕ್ಷಾರ ಸಹಿಷ್ಣುತಾ ಬೆಳೆ ಮತ್ತು ತಳಿಗಳನ್ನು ಬೆಳೆಯುವುದು ಸೂಕ್ತ. ಭತ್ತ ಬೆಳೇಯುವುದು ಹೆಚ್ಚು ಸೂಕ್ತ. ಅಸರಲ್ಲಿಯೂ ಕ್ಷಾರ ನಿರೋಧಕ ತಳಿಗಳಾದ ವಿಕಾಸ್, ಐ.ಆರ್. 30864 ರಾಶಿ ತಳಿಗಳನ್ನು ಬೆಳೆಯಬೇಕು
    • ವಿ.ಸೂ. :  ಸಮಸ್ಯಾತ್ಮಕ ಮಣ್ಣುಗಳ ಸುಧಾರಣಾ ಕ್ರಮ ಅನುಸರಿಸುವ ಮುಂಚೆ ಪರೀಕ್ಷೆ ಮಾಡುವುದು ಅಗತ್ಯ.
    • ಸುಣ್ಣಕಲ್ಲುಯುಕ್ತ ಮಣ್ಣುಗಳಲ್ಲಿ ಜಿಕಪ್ಸಂ ಬಳಕೆ ಮಾಡಬಾರದು. ಬದಲಾಗಿ ಗಂಧಕ ಅಥವಾ ಪೈರೈಟ್ ಪುಡಿಯನ್ನು ಬಳಸುವುದು ಸೂಕ್ತ.
    • ಸಕ್ಕರೆ ಕಾರ್ಖಾನೆ ಮಡ್ಡಿಯನ್ನು ಸಹ ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ಬಳಸಬಹುದು.

    ಮಳೆ ಆಶ್ರಿತ ಪ್ರದೇಶಗಳಲ್ಲಿ ಸುಧಾರಣೆ ಕ್ರಮಗಳು :

    ಕ್ಷಾರ ಮಣ್ಣಿನ ಸುಧಾರಣೆಗೆ ಜಿಪ್ಸಂ ಮತ್ತು ನೀರು ಅತ್ಯವಶ್ಯಕ. ಆದರೆ, ಖುಷ್ಕಿಯಲ್ಲಿ ನೀರಿನ ಸೌಕರ್ಯವಿಲ್ಲದಿರುವುದರಿಂಧ ಸಮಸ್ಯೆ ಸುಧಾರಿಸಲು ದೀರ್ಘ ಕಾಲ ಬೇಕಾಗುತ್ತದೆ. ನೀರಾವರಿಯಲ್ಲಿ ಕ್ಷಾರ ಮಣ್ಣನ್ನು ಸುಧಾರಿಸಲು ತಿಳಿಸಿರುವ ಎಲ್ಲ ಪದ್ಧತಿಗಳನ್ನು ಇಲ್ಲೂ ಅನುಸರಿಸಬೇಕು. ಅಲ್ಲದೆ ಶಿಫಾರಸ್ಸು ಮಾಡಿದ ಜಿಪ್ಸಂ ಪುಡಿಯನ್ನು ಪ್ರತಿ ವರ್ಷ ಶಿಫಾರಸ್ಸು ಮಾಡಿದ ಶೇ. 20 ಭಾಗ ಮಾತ್ರ ಸೇರಿಸಬೇಕು.

    ವಿ.ಸೂ. : ಮಳೆ ನೀರನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಕ್ಷಾರ ಮಣ್ಣಿನ ಸುಧಾಣೆ ಸಾಧ್ಯ.

    ಹುಳಿ ಮಣ್ಣು

    ತಾಂತ್ರಿಕವಾಗಿ ರಸಸಾರ 7.0 ಕ್ಕಿಂತ ಕಡಿಮೆ ಇರುವ ಮಣ್ಣನ್ನು ಹುಳಿ ಮನ್ನೆಂದು ವರ್ಗೀಕರಿಸಬಹುದು. ಮಣ್ಣಿನ ರಸಸಾರ 6.3 ಕ್ಕಿಂತ ಕಡಿಮೆ ಇದ್ದಾಗ ಮಾತ್ರ ಬೆಳೆಗಳ ಮೇಲೆ ಗಣನೀಯ ಪ್ರಮಾಣದಲ್ಲಿ ಹಾನಿಯುಂಟಾಗುತ್ತದೆ. ಆದ್ದರಿಂದ ಪ್ರಾಯೋಗಿಕವಾಗಿ ರಸಸಾರ 6.3 ಕ್ಕಿಂತ ಕಡಿಮೆ ಇರುವ ಮಣ್ಣನ್ನು ಹುಳು ಮಣ್ಣೆಂದು ಕರೆಯುತ್ತಾರೆ. ಮಣ್ಣು ವಿಜಾÐನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದ ಜಿಜ್ಞಾನಿಗಳ ಪ್ರಕಾರ ಕರ್ನಾಟಕದಲ್ಲಿ ಹುಳಿಮಣ್ಣಿನ ವಿಸ್ತೀರ್ಣ 12.30 ಲಕ್ಷ ಹೆಕ್ಟೇರ್ ಎಂದು ತಿಳಿದುಬಂದಿದೆ.

    ಹುಳಿ ಮಣ್ಣಿನ ಉತ್ಪತ್ತಿಗೆ ಕಾರಣಗಳು

    • ಮಣ್ಣಿನ ಉತ್ಪತ್ತಿಗೆ ಕಾರಣವಾದ ತಾಯಿ ಬಂಡೆಯಲ್ಲಿನ ಮೂಲ ವಸ್ತುಗಳು ಹುಳಿ ಉಂಟುಮಾಡುವ ಗುಣವನ್ನು ಹೊಂದಿದ್ದರೆ ಹುಳಿ ಮಣ್ಣು ಉಂಟಗುತ್ತದೆ.
    • ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಳೆಯ ನೀರಿನಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ವಿದ್ಯುತ್ ಕಣಗಳು ಕೊಚ್ಚಿಕೊಂಡು ಹೋಗುವುದರಿಂದ,
    • ಸಸ್ಯಗಳ ಬೇರಿನಿಂದ ಹೊರಬೀಳುವ ಜಲಜನಕದಿಂದ,
    • ನಿರಂತರವಾಗಿ ಅಮೋನಿಯಂ ಹೊಂದಿರುವ ಸಾರಜನಕದ ರಸಗೊಬ್ಬರದ ಬಳಕೆಯಿಂದ,
    • ಗಂಧಕದ ಬಳಕೆಯಿಂದ,
    • ಬೆಳೆಗಳ ಮೂಲಕ ಪೋಷಕಾಂಶಗಳಾದ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ನಷ್ಟವಾಗುವುದರಿಂದಲೂ ಉಂಟಾಗುತ್ತದೆ.

    ಹುಳಿ ಮಣ್ಣಿನ ಸಮಸ್ಯೆಗಳು

    • ಬೀಜಗಳು ಉತ್ತಮವಾಗಿ ಮೊಳೆಯುವುದಿಲ್ಲ.
    • ಸೂಕ್ಷ್ಮ ಜೀವಾಣುಗಳ ಚಟುವಟಿಕೆ ಕಡಿಮೆಯಾಗುವುದರಿಂದ ಸಾವಯವ ವಸ್ತುಗಳ ವಿಭಜನೆಯಾಗದೇ ಪೋಷಕಾಂಶಗಳ ಬಿಡುಗಡೆ ಮೇಲೆ ಪರಿಣಾಮ ಬೀರುತ್ತದೆ.
    • ರಂಜಕವು ಕಬ್ಬಿಣ ಮತ್ತು ಅಲ್ಯೂಮೀನಿಯಂ ಜೊತೆ ಸೇರಿ ಪ್ರತಿಕ್ರಿಯೆ ಹೊಂದಿ ಕರಗದ ರೂಪದ ಕಬ್ಬಿಣ ಮತ್ತು ಅಲ್ಯೂಮಿನಿಯಂ ಫಾಸ್ಪೇಟ್‍ಗಳಾಗಿ ಸ್ಥಿರೀಕರಣವಾಗುವುದರಿಂದ ಸಸ್ಯಗಳಿಗೆ ರಂಜಕ ದೊರೆಯುವ ಪ್ರಮಾಣ ಕಡಿಮೆಯಾಗುತ್ತದೆ.
    • ಅಲ್ಯೂಮಿನಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್‍ಗಳ ಪ್ರಮಾಣ ಹೆಚ್ಚಾಗಿ ಸಸ್ಯಗಳಿಗೆ ನಂಜಾಗುತ್ತದೆ.
    • ಸಾರಜನಕ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಂ, ಮೆಗ್ನೀಶೀಯಂ, ಸತು ಮತ್ತು ಬೊರಾನ್ ಪೋಷಕಾಂಶಗಳ ಕೊರತೆಯಿಂದಾಗಿ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ.

    ಹುಳಿ ಮಣ್ಣಿನ ಸುಧಾರಣಾ ಕ್ರಮಗಳು

    • ಹುಳಿ ಮಣ್ಣಿನ ಆಮ್ಲೀಯತೆ ತಿಳಿಯಲು ಮಣ್ಣಿನ ಮಾದರಿ ತೆಗೆದು ಪರೀಕ್ಷೆ ಮಾಡಿಸಬೇಕು.
    • ಸುಧಾರಣೆಗೆ ಬಳಸಬೇಕಾದ ಮಣ್ಣು ಸುಧಾರಣಾ ರಾಸಾಯನಿಕ ವಸ್ತುವಿನ ಪ್ರಮಾಣವನ್ನು ಪರೀಕ್ಷೆ ಮಾಡಿಸಿ ತಿಳಿದುಕೊಳ್ಳಬೇಕು. ಮಣ್ಣಿನ ಸುಣ್ಣದ ಅವಶ್ಯಕತೆಯ ಪ್ರಮಾಣವನ್ನು ಕಂಡುಹಿಡಿಯಬೇಕು.
    • ಸುಣ್ಣದಂಶದ ಪ್ರಮಾಣವನ್ನು ಸಹ ಪತ್ತೆ ಹಚ್ಚಿ ಎಷ್ಟು ಪ್ರಮಾಣದಲ್ಲಿ ಸುಣ್ಣವನ್ನು ಹಾಕಬೇಕೆಂಬುದನ್ನು ಲೆಕ್ಕಮಾಡಿ ಹಾಕಬೇಕು.
    • ಸುಣ್ಣವನ್ನು ಬಿತ್ತನೆಗೆ 3 ರಿಂದ 4 ವಾರ ಮುಂಚಿತವಾಗಿ ಬಳಸಬೇಕು.
    • ಶಿಫಾರಸ್ಸು ಮಾಡಿದ ಪ್ರಮಾಣಧ ಸುಣ್ಣವನ್ನು ನಯವಾಗಿ ಪುಡಿ ಮಾಡಿ ಮಣ್ಣಿನಲ್ಲಿ ತೇವಾಂಶವಿರುವಾಗ ಭೂಮಿಯ ಮೇಲೆ ಹರಡಿ ಉಳುಮೆ ಮಾಡಿ ಮಣ್ಣಿಗೆ ಸೇರಿಸಬೇಕು.
    • ಸುಣ್ಣವನ್ನು ಜಮೀನಿಗೆ ಹಾಕಿದ ಮೇಲೆ 2-3 ಸಾರಿ ಮಳೆ ಬಂದ ನಂತರ ಬಿತ್ತನೆ ಮಾಡಬೇಕು.
    • ಸಾಮಾನ್ಯವಾಗಿ ಮರಳು ಮಣ್ಣಿಗೆ ಹೆಕ್ಟೇರಿಗೆ 500 ಕೆ.ಜಿ. ಮತ್ತು ಜೇಡಿ ಅಂಶ ಹೆಚ್ಚಾಗಿರುವ ಮಣ್ಣಿಗೆ ಹೆಕ್ಟೇರಿಗೆ 700 ರಿಂದ 800 ಕೆ.ಜಿ. ಸುಣ್ಣ ಬೇಕಾಗುತ್ತದೆ.
    • ಸುಣ್ಣವನ್ನು ಬಳಸಿ ಸುಧಾರಣೆ ಮಾಡಿದ ಜಮೀನಿಗೆ ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಕೊಡಬೇಕು.

    ಸುಣ್ಣದ ಬಳಕೆ

    ಹೆಚ್ಚಿನ ಪ್ರಮಾಣದ ಸುಣ್ಣದ ಬಳಕೆಯಿಂದ ಆಗುವ ದುಷ್ಪರಿಣಾಮಗಳು

    • ಹಣದ ನಷ್ಟ
    • ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ.
    • ರಂಜಕ, ಪೊಟ್ಯಾಶಿಯಂ ಮತ್ತು ಲಘು ಪೋಷಕಾಂಶಗಳ ದೊರೆಯುವಿಕೆ ಕಡಿಮೆಯಾಗುತ್ತದೆ.
    • ಸೂಕ್ಷ್ಮ ಜೀವಾಣುಗಳ ಚಟುವಟಿಕೆ ಕಡಿಮೆಯಾಗುತ್ತದೆ.
    • ಬಳಸಿದ ಗೊಬ್ಬರಗಳ ಸಮರ್ಪಕ ಬಳಕೆಯಾಗುವುದಿಲ್ಲ.
    • ಬಳಸಬಹುದಾದ ಸುಣ್ಣದ ಪದಾರ್ಥಗಳು
    • ಕ್ಷಾರ ಸುಣ್ಣ (ಕ್ಯಾಲ್ಸಿಯಂ ಕಾರ್ಬೋನೇಟ್ )
    • ಸುಟ್ಟ ಸುಣ್ಣ (ಕ್ಯಾಲ್ಸಿಯಂ ಆಕ್ಸೈಡ್)
    • ನೀರು ಬೆರೆಸಿದ ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್)
    • ಡೊಲೋಮೈಟ್ (ಕ್ಯಾಲ್ಸಿಯಂ ಮೆಗ್ನೀಶೀಯಂ ಕಾರ್ಬೋನೇಟ್)
    • ಕಾಗದ ಕಾರ್ಖಾನೆ ರೊಚ್ಚು (ಸ್ಲೆಡ್ಜ್)
    • ಉಕ್ಕು ಕಾರ್ಖಾನೆ ಕಿಟ್ಟ (ಬೇಸಿಕ್ ಸ್ಲ್ಯಾಗ್)

    ಇವುಗಳ ಪೈಕಿ ಯಾವುದಾದರೂ ಒಂದನ್ನು ಒಳಸಬೇಕಾದರೂ ಅಸರಲ್ಲಿನ ಸುಣ್ಣದಂಶವನ್ನು ಆಧಾರವಾಗಿಟ್ಟುಕೊಂಡು ಬಳಸಬೇಕು.

    ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

    ಕೊನೆಯ ಮಾರ್ಪಾಟು : 6/19/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate