ಉದ್ದೇಶಗಳು
ಈ ಅಧ್ಯಾಯದಿಂದ ಮಳೆ ನೀರಿನ ಕೊಯ್ಲು ಮತ್ತು ಪುನರ್ ಬಳಕೆ ಬಗ್ಗೆ ತಿಳಿಸುವುದಾಗಿದೆ.
ಮಳೆ ನೀರು ಕೊಯ್ಲು ಎಂದರೆ ಭೂಮಿಗೆ ಬಿದ್ದಂತಹ ನೀರನ್ನು ವಿವಿಧ ಅವಶ್ಯಕತೆಗಳಿಗೆ ಸದಾ ಉಪಯೋಗಿಸಲು ಅನುಕೂಲವಾಗುವಂತೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕೃಷಿ ಮತ್ತು ಕೃಷಿಯೇತರ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಣಾ ರಚನೆಗಳಲ್ಲಿ ಶೇಖರಿಸುವುದಲ್ಲದೆ, ಮೇಲ್ಛಾವಣಿಯ ಮಳೆ ನೀರನ್ನು ಶೇಖರಿಸುವುದು. ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ. 60 ಭಾಗ ಮಳೆಯಾಶ್ರಿತ ಪ್ರದೇಶವಾಗಿದ್ದು, ವಾರ್ಷಿಕ ಮಳೆಯ ಶೇ. 57 ರಷ್ಟು ಮುಂಗಾರು ಮಳೆಯಲ್ಲಿ ಹೆಚ್ಚಾದ ಮಳೆ ನೀರನ್ನು ವಿವಿಧ ರೀತಿಯ ಸಂಗ್ರಹಣಾ ರಚನೆಗಳಲ್ಲಿ ಸಂಗ್ರಹಿಸಿ ವಿವಿಧ ಉದ್ದೇಶಗಳಿಗೆ ಪುನರ್‍ಬಳಕೆ ಮಾಡಬಹುದು.
ಕೃಷಿ ಮತ್ತು ಕೃಷಿಯೇತರ ಪ್ರದೇಶಗಳಲ್ಲಿ ಮಳೆ ನೀರಿನ ಕೊಯ್ಲು
ಮೇಲ್ಛಾವಣಿ ಮಳೆ ನೀರು ಕೊಯ್ಲು
ಹರಿದು ಬರುವ ಮಳೆ ನೀರನ್ನು ಸಂಗ್ರಹಿಸುವ ವಿಧಾನಗಳು
ನಾಲಾ ಬದು/ಜಿನುಗು ಕೆರೆ/ತಡೆ ಅಣಿ : ಅಂತರ್ಜಲವನ್ನು ವೃದ್ಧಿಮಾಡುವ ದಿಶೆಯಲ್ಲಿ ನೀರು ಬಸಿಯುವ ಹಳ್ಳದಲ್ಲಿ ಮಣ್ಣಿನ ಒಡ್ಡುಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಬೇಕು. ನಾಲಾ ಬದುವಿನ ಉದ್ದೇಶಗಳೆಂದರೆ :
ಸಂಗ್ರಹಿಸಿದ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದು.
ಅಂತರ್ಜಲ ವೃದ್ಧಿಸುವುದು.
ಕೆಂಪು ಮಣ್ಣಿನ ಪ್ರದೇಶದಲ್ಲಿ ಪ್ರತಿ ಎರಡೂವರೆ ಎಕರೆ ಪ್ರದೇಶಕ್ಕೆ ಸುಮಾರು 250 ಘನ ಮೀಟರ್ ಸಾಮಥ್ರ್ಯವುಳ್ಳ ಕೃಷಿ ಹೊಂಡವನ್ನು ತಾಕಿನ ಕೆಳಭಾಗದಲ್ಲಿ ನಿರ್ಮಿಸಬೇಕು ಈ ಸಾಮಥ್ರ್ಯದ ಕೃಷಿ ಹೊಂಡಕ್ಕೆ ಮೇಲ್ಭಾಗದಲ್ಲಿ 12 ಮೀಟರ್ ಅಗಲವಿರುವಂತೆ ಪಕ್ಕ ಗೋಡೆಗಳಿಗೆ 1:1 ಪ್ರಮಾಣದಲ್ಲಿ ಇಳಿಜಾರು ಮಾಡಬೇಕು. ಕೃಷಿ ಹೊಂಡದ ಆಳ 3 ಮೀಟರ್ ಇರಬೇಕಕು. ಕೃಷಿ ಹೊಂಡಕ್ಕೆ ಜಮೀನಿನಿಂದ ಸರಾಗವಾಗಿ ನೀರು ಕಾಲುವರಗಳನ್ನು ನಿರ್ಮಿಸಬೇಕು ಕೃಷಿ ಹೊಂಡಕ್ಕೆ ನೀರು ಹರಿದು ಬರಲು ಒಳ ಹರಿವು ಮತ್ತು ಕೃಷಿ ಹೊಂಡ ತುಂಬಿ ಹೊರ ಹರಿಯುವ ನೀರಿಗೆ ರಚನೆಗಳನ್ನು ಸುಭದ್ರವಾಗಿ ನಿರ್ಮೀಸಬೇಕು. ಈ ರೀತಿ ಸಂಗ್ರಹಿಸಿದ ನೀರನ್ನು ಉಪಯೋಗಿಸಿ ಅಲ್ಫಾವಧಿ ತರಕಾರಿ ಬೆಳೆಗಳು ಹಾಗೂ ನಾಟಿ ಮಾಡಿದ ತೋಟಗಾರಿಕೆಯ ಸಸಿಗಳನ್ನು ಬೆಳೆಸಲು ಬಳಸಬಹುದು. ಕೃಷಿ ಹೊಂಡದಲ್ಲಿ ಶೇಖರಿಸಿದ ನೀರು ಸುಮಾರು 180 ದಿನಗಳು ಇರುವ ಸಂದರ್ಭದಲ್ಲಿ ಮೀನುಸಾಕಣೆಯನ್ನು ಸಹ ಮಾಡಬಹುದು.
ಕೊಳವೆ ಭಾವಿಗಳ ಮರುಪೂರಣ :
ಒಂದು ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಸಂದರ್ಭದಲ್ಲಿ, ಆ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಬಂದಿರುವ ಕಲ್ಲಿನ ಪದರಗಳ ವಿವರ, ಬೋರ್‍ವೆಲ್ ಕೊರೆಯುವ ಆಳ ಕೇಸಿಂಗ್ ಪೈಪಿನ ವಿವರ ಇತ್ಯಾದಿ ಗಮನದಲ್ಲಿಟ್ಟುಕೊಂಡು ಇಂಗು ಗುಂಡಿ ನಿರ್ಮಿಸಬೇಕಾಗುತ್ತದೆ.
ಜಲ ಮರುಪೂರಣಕ್ಕೆ ಬೋಲ್ಡರ್ಸ್ ಕಲ್ಲುಗಳು, ದಪ್ಪ ಮರಳು, ಸಣ್ಣ ಮರಳು, ಇದ್ದಿಲು, ನೈಲಾನ್ ಮೇಷ್ ಉಪಯೋಗಿಸುವರು. ಜಲ ಮರುಪೂರಣ ಮಾಡುವ ಇಂಗು ಗುಂಡಿಗೆ ಆಯಾ ಪ್ರದೇಶದಲ್ಲಿಯೇ ಸಿಗುವಂತಹ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.
ಇಂಗು ಗುಂಡಿಯು 3 ಮೀ. ಆಳ ಇರಬೇಕು. ದಪ್ಪ ಕಲ್ಲುಗಳನ್ನು 1.5 ಮೀ. ಎತ್ತರ ತುಂಬಬೇಕು. ಇದರ ಮೇಲ್ಭಾಗದಲ್ಲಿ 15 ಸೆ.ಮೀ. ದಪ್ಪದ ಕಲ್ಲುಗಳನ್ನು 30 ಸೆ.ಮೀ. ಎತ್ತರ ತುಂಬಬೇಕು. ನಂತರ 40 ಮಿ.ಮೀ ಜೆಲ್ಲಿ 15 ಸೆಂ.ಮೀ. ಎತ್ತರ, ಇದರ ಮೇಲೆ ಬೇಬಿ ಜೆಲ್ಲಿ 20 ಮಿ.ಮೀ. ಎತ್ತರ ತುಂಬಬೇಕು. ನಂತರ 15 ಸೆಂ.ಮೀ. ಎತ್ತರ ಇದ್ದಿಲು ತುಂಬಬೇಕು. ಅದರ ಮೇಲೆ ನೈಲಾನ್ ಮೆಷ್ ಹಾಸಬೇಕು. ಇದರ ಮೇಲೆ ದಪ್ಪ ಮರಳು 30 ಸೆಂ.ಮೀ. ಎತ್ತರ ಹರಡಬೇಕು. 3 ಮೀ. ಆಳದ ಇಂಗು ಗುಂಡಿಗೆ 30 ಸೆಂ.ಮೀ. ಎತ್ತರದಷ್ಟು ಖಾಲಿ ಜಾಗ ಇರಬೇಕಾಗುತ್ತದೆ. ಪೂರ್ಣ ಜಲ ಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಇಂಗು ಗುಂಡಿ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಸಿಮೆಂಟ್ ಕಾಂಕ್ರೀಟ್‍ನಿಂದ ಭದ್ರಗೊಳಿಸಿದರೆ ಇಂಗು ಗುಂಡಿಯಲ್ಲಿ ಮಳೆ ನೀರು ಹರಿದುಬರುವ ಸಂದರ್ಭದಲ್ಲಿ ನೀರು ನಿಲ್ಲುವುದಕ್ಕೆ ಅನುಕೂಲವಾಗುತ್ತದೆ.
ಮಳೆ ನೀರು ಹರಿದು ಬರುವಾಗ ಕಸ ಕಡ್ಡಿ ಮಣ್ಣು ಮಿಶ್ರಿತ ನೀರು ಹರಿದು ಬರುವುದರಿಂದ ಬರುವ ಮಳೆ ನೀರನ್ನು ಶೋಧಿಸಲು, ಸೋಸು ಗೂಂಡಿಗಳನ್ನು ನಿರ್ಮಿಸುವುದರಿಂದ ಮಾರ್ಗ ಮಧ್ಯದಲ್ಲಿ ನೀರಿನ ಹರಿವಿಗೆ ತಡೆಯೊಡ್ಡುವ ಕಸ ಕಡ್ಡಿ ಮಣ್ಣು ಮುಂತಾದ ತ್ಯಾಜ್ಯವಸ್ತುಗಳನ್ನು ಜಲ ಮರುಪೂರಣ ಇಂಗು ಗುಂಡಿಗೆ ಬರದ ಹಾಗೆ ತಡೆಹಿಡಿಯಬಹುದು.
ಇಂಗು ಗುಂಡಿ ನಿರ್ಮಿಸಿದ ನಂತರ ಕೇಸಿಂಗ್ ಪೈಪ್‍ನ್ನು ಒಮ್ಮೆ ಪರೀಕ್ಷಿಸಬೇಕು. ಕೆಲವು ಕೊಳವೆ ಬಾವಿಗ ಕಬ್ಬಿಣದ ಕೇಸಿಂಗ್ ಪೈಪ್‍ಗಳು ತುಕ್ಕು ಹಿಡಿದಿರುತ್ತದೆ. ಕೆಲವೊಮ್ಮೆ ಬೆಂಡಾಗಿರುತ್ತವೆ. ಅಂತಹ ಸಂಧರ್ಭದಲ್ಲಿ ಕೆಲವು ಅಡಿಗಳಷ್ಟು ಪೈಪ್‍ನ್ನು ತೆಗೆದು ಹೊದ ಕೇಸಿಂಗ್ ಪೈಪ್‍ನ್ನು ಸೇರಿಸಿ ಜಲ ಮರುಪೂರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಬಹುದು. ಇಂಗು ಗುಂಡಿಯಲ್ಲಿ ಕೇಸಿಂಗ್ ಪೈಪ್ ಸುತ್ತಲೂ ಕಬ್ಬಿಣದ ಕ್ಲಾಂಪ್ ಹಾಕಿ ಸಿಮೆಂಟ್ ಕಾಂಕ್ರಿಟ್ ನಿರ್ಮಿಸುವುದೆರಿಂದ ಅದು ಜಾರದಂತೆ ಭದ್ರವಾಗಿ ಹಿಡಿದುಕೊಳ್ಳುತ್ತದೆ.
ರಂಧ್ರಗಳನ್ನು ಕೊರೆಯುವ ಡ್ರಿಲ್ಲಿಂಗ್ ಮೆಷೀನ್‍ನಿಂದ ಸುಮಾರು 2 ಮಿ.ಮೀ. 4 ಮಿ.ಮೀ. ಮತ್ತು 6 ಮಿ.ಮೀ. ರಂಧ್ರಗಳನ್ನು 7.5 ಸೆಂ.ಮೀ. ಅಂತರದಲ್ಲಿ ಸಉಮಾರು 200 ರಿಂದ 400 ರಂಧ್ರಗಳನ್ನು ನಿರ್ಮಿಸಬೇಕು. ಪ್ಲಾಸ್ಟಿಕ್ ಮತ್ತು ಕಟ್ಟಿಣದ ಪೈಪ್‍ಗಳಿಗೂ ಈ ವಿಧವಾದ ರಂಧ್ರಗಳನ್ನು ನಿರ್ಮಿಸಬೇಕು
ರಂಧ್ರಗಳನ್ನು ನಿರ್ಮಿಸಿದ ನಂತರ ಕೇಸಿಂಗ್ ಪೈಪ್ ಒಳಗೆ ನೀರನ್ನು ನೇರವಾಗಿ ಬಿಡುವಂತಿಲ್ಲ. ರಂಧ್ರಗಳನ್ನು ನಿರ್ಮಿಸುವ ಕೇಸಿಂಗ್ ಪೈಪ್‍ಗೆ ನೈಲಾನ್ ಮೆಷ್‍ನಂತಹ ಅಕ್ವಾ ಮೆಷ್ ನಂತರ ಮರಳು ಕೇಸಿಂಗ್ ಪೈಪ್ ಸುತ್ತಲೂ ಬರುವಂತೆ ನೈಲಾನ್ ಮೆಷ್‍ನಿಂದ ಸುತ್ತುವರಿಸಬೇಕು.
ಈ ವಿಧಾನದಲ್ಲಿ ಮಳೆ ನೀರಿನ ಹರಿವನ್ನು ಬತ್ತಿ ಹೋದ ಬೋರ್‍ವೆಲ್ ಕಡೆಗೆ ತಿರುಗಿಸಿ ಆ ಒಳ ಹರಿವಿಗೆ ಅಡ್ಡವಾಗಿ ಒಂದು ಸೋಸು ಗುಂಡಿ ಮತ್ತು ಸೋಸಿದ ನೀರು ತೊಟ್ಟಿಯಲ್ಲಿ ಸಂಗ್ರಹವಾಗುವಂತೆ ಒಂದು ತೊಟ್ಟಿಯನ್ನು ನಿರ್ಮಾಣ ಮಾಡಬೇಕು. ಆ ತೊಟ್ಟಿಗೆ 25 ಅಥವಾ 30 ಮಿ.ಮೀ. ಪಿವಿಸಿ ಪೈಪನ್ನು ಅಳವಡಿಸಿ ಅದನ್ನು ನೇರವಾಗಿ ಕೇಸಿಂಗ್ ಪೈಪಿಗೆ ( ಇದರ ಜೊತೆಗೆ ಸುಮಾರು 1.5 ಮೀ. ಕೆಳಗೆ ) ರಂಧ್ರ ಮಾಡಿ ಅಳವಡಿಸಬೇಕು. ಇಂಗು ಗುಂಡಿಯನ್ನು ಈ ರೀತಿ ವಿನ್ಯಾಸಗೊಳಿಸುವುದರಿಂದ ಬಾವಿಯಲ್ಲಿ ತ್ವರಿತವಾಗಿ ಜಲ ಮರುಪೂರಣವಾಗುತ್ತದೆ. ಮಳೆ ಬರುವ ಸಂದರ್ಭದಲ್ಲಿ ಹರಿದು ಬರುವ ನೀರನ್ನು ಕಾಲುವೆ ಮೂಲಕ ಒಂದೇ ಮಾರ್ಗವಾಗಿ ತೊಟ್ಟಿಯಲ್ಲಿ ಶೇಖರಣೆಗೊಂಡಿರುವ ನೀರನ್ನು ನಿಧಾನವಾಗಿ ಶೋಧಿಸಿ ಬಿಡಬೇಕು. ಕೇಸಿಂಗ್ ಪೈಪ್‍ಗೆ ನೇರ ಸಂಪರ್ಕವಿರುವದರಿಂದ ನೀರು ಶೀಘ್ರದಲ್ಲಿ ಆಳ ಸೇರಿ ನೀರಿನ ಸೆಲೆಯನ್ನು ಸೇರಿಸಿ ಹೆಚ್ಚು ನೀರು ವೃದ್ಧಿಯಾಗಲು ಮಾಡುವುದರಿಂದ ಇನ್ನೂ ಹೆಚ್ಚು ನೀರು ಅಂತರ್ಜಲಕ್ಕೆ ಸೇರಿಸಲು ಅನುಕೂಲವಾಗುತ್ತದೆ.
ಮನೆಯ ಮೇಲ್ಚಾವಣಿಯ ಮೇಲೆ ಮಳೆ ಬಂದಾಗ ಬಿದ್ದಂತಹ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ದಿನನಿತ್ಯದ ಬಳಕೆಗೆ ಉಪಯೋಗಿಸುವುದು ಕೂಡ ಮಳೆ ನೀರು ಕೊಯ್ಲಿನ ಪ್ರಮುಖ ಅಂಗವಾಗಿದೆ. ಮೇಲ್ಛಾವಣಿ ನೀರು ಅತೀ ಪರಿಶಿದ್ಧವಾಗಿರುವುದು. ಈ ನೀರನ್ನು ಸಂಗ್ರಹಿಸಿ ಕೊಳವೆ ಬಾವಿ, ತೆರೆದ ಬಾವಿಗಳಿಗೆ ವರ್ಗಾಯಿಸಿ ಅಂತರ್ಜಲವನ್ನು ಹೆಚ್ಚಿಸಬಹುದು.
ಮೇಲ್ಛಾವಣಿಯಿಂದ ನೀರನ್ನು ಶೇಖರಿಸುವಾಗ ಮೇಲ್ಚಾವಣಿಯು ಸ್ವಚ್ಚವಾಗಿರಬೇಕು. ಈ ನೀರು ಕೊಳವೆಯನ್ನು ಒಂದು ಸೇರುವಲ್ಲಿ ಕಟ್ಟಿಣದ ಜಾಳಿಗೆಯನ್ನು ಇಟ್ಟು ಇತರ ವಸ್ತಗಳು ಅಲ್ಲಿಯೇ ಉಳಿದು ನೀರು ಮಾತ್ರ ಕೊಳವೆ ಮುಖಾಂತರ ಸಂಗ್ರಹವಾಗುವುದರಲ್ಲಿ ಸೇರುವುದು. ವಿವಿಧ ರೀತಿಯ ಮೇಲ್ಚಾವಣಿಗಳಿಗೆ ತಕ್ಕಂತೆ ನುರಿತ ವ್ಯಕ್ತಗಳ ಸಲಹೆ ಮೇರೆಗೆ ನೀರು ಸಂಗ್ರಹಣೆ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು.
ಮೂಲ : ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 6/20/2020