ಕಾಂಪೋಸ್ಟ್ ಒಂದು ಸಾವಯುವ ಗೊಬ್ಬರವಾಗಿದ್ದು, ಸಸ್ಯ ಹಾಗೂ ಪ್ರಾಣಿಗಳ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಕಾಂಪೋಸ್ಟ್ ಗೊಬ್ಬರವನ್ನು ತಯಾರು ಮಾಡುವುದಕ್ಕೆ ಕಾಂಪೋಸ್ಟೀಕರಣ ಎನ್ನುತ್ತಾರೆ. ಇದು ಅನೇಕ ಗುಂಪಿಗೆ ಸೇರಿರುವ ಸೂಕ್ಷ್ಮಜೀವಿಗಳ ಮುಖೇನ ನಡೆಯುವ ಸಾವಯವ ವಸ್ತುಗಳ ಕಳಿಯುವಿಕೆ ಕ್ರಿಯೆ. ಈ ಕ್ರಿಯೆಯಿಂದ ಸಂಕೀರ್ಣ ಸಾವಯುವ ವಸ್ತಗಳು ವಿಭಜನೆಗೊಂಡು ಸರಳರೂಪಕ್ಕೆ ಬರುವುದಲ್ಲದೆ, ಹ್ಯೂಮಸ್ ಸಾಮಗ್ರಿಯಾಗಿ ಮಾರ್ಪಾಡುಗೊಳ್ಳುತ್ತದೆ.
ಹಲವು ವಿಧಾನಗಳಲ್ಲಿ ಕಾಂಪೋಸ್ಟ್ ತಯಾರಿಸಲು ಸಾಧ್ಯವಿದೆ ಹಾಗೂ ಈ ಪದ್ಧತಿಗಳು ರೂಢಿಯಲ್ಲಯೂ ಇವೆ. ಇವುಗಳ ಪೈಕಿ ಕೆಲವು ವಿಧಾನಗಳನ್ನು ತಿಳಿಸಲು ಪ್ರಯತ್ನಿಸಲಾಗಿದೆ.
ಇದು ವಾತಾವರಣದಲ್ಲಿ ಲಭ್ಯರುವವ ಆಮ್ಲಜನಕವನ್ನು ಸೂಕ್ಷ್ಮಜೀವಿಗಳು ಬಳಸಿಕೊಂಡು ಜೈವಿಕ ಬದಲಾವಣೆಯನ್ನು ರೂಢಿಸಿಕೊಂಡಿರುವ ಮೊದಲನೆಯ ಪದ್ಧತಿ. ಇಲ್ಲಿ ಬಳಸುವ ಸವಯವ ವಸ್ತಗಳು ಸಸ್ಯ ಹಾಗೂ ಬೆಳೆಯ ತ್ಯಾಜ್ಯ ವಸ್ತುಗಳು, ದನಕರುಗಳ ಸಗಣಿ ಕೊಟ್ಟಿಗೆಯ ಕಸಕಡ್ಡಿಗಳು ಹಾಗೂ ಕಟ್ಟಿಗೆಯ ಬೂದಿ, ದನಗಳ ಸಗಣಿ ಕಾಂಪೋಸ್ಟ್ ಕ್ರಿಯೆಯಲ್ಲಿ ವೇಗವರ್ಧಕವಾಗಿ ಬಳಕೆಯಾಗುತ್ತದೆ. ಕಾಂಪೋಸ್ಟ್ ಗುಂಡಿಗಳು 1.6 ರಿಂದ 1.8 ಮೀ. ಅಗಲ, 1 ಮೀ. ಆಳ ಹಾಗೂ ಸಾವಯವ ವಸ್ತುಗಳು ದೊರೆಯುವುದರ ಆಧಾರದ ಮೇಲೆ ಉದ್ದ 3 ರಿಂದ 4 ಮೀ. ವರೆಗೂ ಮಾಡಿಕೊಳ್ಳಬಹುದು. ಗುಂಡಿಗಳನ್ನು ತುಂಬುವಾಗ ಮೊದಲು ಕೊಟ್ಟಿಗೆಯ ತ್ಯಾಜ್ಯ ವಸ್ತುಗಳು ಅಥವಾ ನಿಧಾನವಾಗಿ ಕಳೆಯುವ ತ್ಯಾಜ್ಯ ವಸ್ತುಗಳನ್ನು ದಪ್ಪವಾದ ಹಾಸಿಗೆಯಂತೆ ಬಳಸಬೇಕು. ಅದರ ಮೇಲೆ ಕಟ್ಟಿಗೆ ಬೂದಿ, ಅನಂತರ ಕೃಷಿ ತ್ಯಾಜ್ಯ ವಸ್ತುಗಳನ್ನು ಹರಡಬೇಕು.
ನಂತರ ದನಗಳ ಸಗಣಿ ಹಾಗೂ ಮಣ್ಣಿನ 2 ಪದರಗಳನ್ನು ಸಮನಾಗಿ ಹರಡಬೇಕು. ಆಗಾಗೆ ಮೇಲುಭಾಗದಲ್ಲಿ ನೀರನ್ನು ಚಿಮುಕಿಸುವುದು ಅವಶ್ಯಕ. ಸುಮಾರು 90 ದಿನಗಳಲ್ಲಿ ಕಾಂಪೋಸ್ಟ್ ಸಿದ್ಧವಾಗುತ್ತದೆ.
ಸಾವಯುವ ವಸ್ತುಗಳು : ಸಸ್ಯ ಹಾಗೂ ಬೆಳೆಗಳ ತ್ಯಾಜ್ಯ ವಸ್ತುಗಳು, ದನಕರುಗಳ ಸಗಣಿ (ವೇಗವರ್ಧಕ), ಗಂಜಲಯುಕ್ತ ಮಣ್ಣು ಹಾಗೂ ಬೂದಿ.
ಈ ಕ್ರಮವನ್ನು ಶ್ರೀ ಸಿ. ಎನ್. ಆಚಾರ್ಯ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು 1939 ರಲ್ಲಿ ಪ್ರಚುರಪಡಿಸಿದರು. ಈ ಪದ್ಧತಿಯಲ್ಲಿ 3 ರಿಂದ 10 ಮೀ. ಉದ್ದ, 2.0 ಮೀ. ಅಗಲ ಹಾಗೂ 1.0 ಮೀ ಆಳವಿರುವ ಕಂದಕಗಳನ್ನು ತೋಡಬೇಕು. ಈ ಕಂದಕದ ಕೆಳಭಾಗದಲ್ಲಿ ಅನೇಕ ಬಗೆಯ ಸಸ್ಯ ತ್ಯಾಜ್ಯ ವಸ್ತಗಳನ್ನು ದಪ್ಪ ಪದರವಾಗಿ ಹರಡಿ ನೀರನ್ನು ಚಿಮುಕಿಸಬೇಕು. ನಂತರ ದನಕರುಗಳ ಸಗಣಿ ಹಾಗೂ ಮೂತ್ರಯುಕ್ತ ರಾಡಿಯನ್ನು ಸಸ್ಯ/ಬೆಳೆ/ಕಳೆ/ಕೊಟ್ಟಿಗೆ ತ್ಯಾಜ್ಯಗಳನ್ನು ದಪ್ಪವಾಗಿ ಪದರಗಳಲ್ಲಿ ಹಾಕಬೇಕು. ಅದರ ಮೇಲೆ 2-5 ಮಿ.ಮೀ. ದಪ್ಪವಾಗಿ ಮಣ್ಣನ್ನು ಹಾಕಬೇಕು. ಈ ಕ್ರಮವನ್ನು ಭೂಮಿಯಿಂದ 1.5-2 ಅಡಿ ಮೇಲೆ ಬರುವಂತೆ ಪುನರಾವರ್ತಿಸಬೇಕು. ಕೊನೆಯಲ್ಲಿ ಮಣ್ಣಿನ ರಾಡಿಯಿಂದ 2 ಅಂಗುಲ ದಪ್ಪ ಹಾಕಿ ಮುಚ್ಚಬೇಕು. ಕಾಂಪೋಸ್ಟ್ ಆಗುವ ಕಾಲಾವಧಿ 8 ರಿಂದ 9 ತಿಂಗಳು
ಸಾವಯವ ವಸ್ತುಗಳು : ನಗರ ತ್ಯಾಜ್ಯ ವಸ್ತುಗಳು ಮನುಷ್ಯರ ತ್ಯಾಜ್ಯ, ಮಣ್ಣು ಇತ್ಯಾದಿ
ಇಟ್ಟಿಗೆ ಅಥವಾ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ತೊಟ್ಟಿಯನ್ನು ಕಟ್ಟಿಕೊಳ್ಳಬೇಕು. ಈ ತೊಟ್ಟಿಯ ಅಳತೆ ಸುಮಾರು 3-4 ಮೀ. ರಿಂದ 4 ಮೀ. ಉದ್ದ, 2 ಮೀ, ಅಗಲ ಮತ್ತು 1-2 ಮೀ. ಎತ್ತರವಿರಬೇಕು. ಗೋಡೆಯನ್ನು ( 10 ಅಂಗುಲ ದಪ್ಪ ) ಕಟ್ಟುವಾಗ, ಅಲ್ಲಲ್ಲಿ 6 ಅಂಗುಲ ಸುತ್ತಳತೆಯ ಕಿಂಡಿಗಳನ್ನು ಬಿಟ್ಟು ಕಟ್ಟುವುದರಿಂದ ತೊಟ್ಟಿಯೊಳಗೆ ಗಾಳಿ ಸಂಚಾರಕ್ಕೆ ಅನುಕೂಲವಾಗುತ್ತದೆ. ಸೂಕ್ಷ್ಮಜೀವಿಗಳು ಗಾಳಿಯಲ್ಲಿ ಲಭ್ಯವಿರುವ ಆಮ್ಲಜನಕವನ್ನು ಬಳಸಿಕೊಂಡು ಸಾವಯವ ವಸ್ತುಗಳನ್ನು ಕಾಂಪೋಟ್ಸ್ ಆಗಿ ಪರಿವರ್ತಿಸುತ್ತವೆ. ಈ ತೊಟ್ಟಿಯಲ್ಲಿ 6 ಅಂಗುಲ ದಪ್ಪ ಕೃಷಿ ತ್ಯಾಜ್ಯಗಳು ಅಂದರೆ, ಕೊಯ್ಲು ನಂತರ ಬರುವ ತ್ಯಾಜ್ಯಗಳು, ಕಸ ಕಡ್ಡಿಗಳು, ಹುಲ್ಲು ಗಿಡದ ಎಲೆಗಳು, ಕಳೆಗಳು ಮುಂತಾದವುಗಳನ್ನು ಮೊದಲನೆಯ ಪದರವಾಗಿ ಹರಡಬೇಕು. ಇದರ ಮೇಲೆ ಗೋಬರ್ ಗ್ಯಾಸ್ ಬಗ್ಗಡ ಇಲ್ಲವೆ ಸಗಣಿ ಬಗ್ಗಡವನ್ನು ( 4-50ಕಿ.ಗ್ರಾಂ. ¸ಗÀಣಿ, 125-150 ಲೀ. ನೀರನಲ್ಲಿ) 1-1.5 ಅಡಿ ಎತ್ತರದವರೆಗೆ ಗುಡಿಸಲು ಮಾದರಿಯಲ್ಲಿ ತುಂಬಬೇಕು. ಸುಮಾರು 3.5 ರಿಂದ 4 ತಿಂಗಳುಗಳ ಕಾಲಾವಧಿಯಲ್ಲಿ ಕಾಂಪೋಸ್ಟ್ ತಯಾರಾಗುತ್ತದೆ.
ತೊಟ್ಟಿ ತುಂಬಲು ಬೇಕಾಗುವ ಸಾಮಗ್ರಿಗಳು
ಕೃಷಿ ತ್ಯಾಜ್ಯ ವಸ್ತುಗಳು - 1350-1400 ಕಿ.ಗ್ರಾಂ
ಸಗಣಿ - 100 ಕಿ. ಗ್ರಾಂ
ಮಣ್ಣು - 1600-1700 ಕಿ.ಗ್ರಾಂ.
ನೀರು - 1350-1400 ಲೀಟರ್
ಈ ಕ್ರಮದಲ್ಲಿ ಕಲ್ಲುಚಪ್ಪಡಿ ಬಳಸಿ ತೊಟ್ಟಿಗಳನ್ನು ಕಟ್ಟಿಕೊಳ್ಳಬೇಕು. ಒಂದು ವೇಳೆ ಕಲ್ಲು ಚಪ್ಪಡಿ ಬಳಸಿ ತೊಟ್ಟಿಗಳನ್ನು ನಿರ್ಮಿಸಲು ಆರ್ಥಿಕವಾಗಿ ತೊಂದರೆ ಇದ್ದಲ್ಲಿ, ಸರ್ವ ಮರ/ಬಿದರಿನ ಮರ/ ಅಡಿಕೆ ಮರ ಇತ್ಯಾದಿ ಸ್ಥಳೀಯವಾಗಿ ಲಭ್ಯವಿರುವ ಮರಮುಟ್ಟುಗಳನ್ನು ಬಳಸಿ ತೊಟ್ಟಿಗಳನ್ನು ನಿರ್ಮಿಸಬಹುದು. ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ 18-20 ಅಂಗುಲ ಆಳದ ಕಂದಕವನ್ನು ಸುಮಾರು 4 ರಿಂದ 10 ಮೀ. ಉದ್ದ, 2.0 ಮೀ. ಅಗಲ ಮಾಡಿಕೊಂಡು ಅದರಲ್ಲಿ 1.5-1.8 ಮೀ. ಎತ್ತರ ಚಪ್ಪಡಿಗಳನ್ನು ನಿಲ್ಲಿಸಬೇಕು. ಇದನ್ನು ಉತ್ತರ ದಕ್ಷಿಣಾಭಿಮುಖವಾಗಿ ನಿಲ್ಲಿಸುವುದರಿಂದ ಗಾಳಿಯ ಸಂಚಾರ ಚೆನ್ನಾಗಿರುತ್ತದೆ. ಚಪ್ಪಡಿಗಳು ಬಿಗಿಯಾಗಿ ನಿಲ್ಲುವಂತೆ ಎಚ್ಚರಿಕೆ ವಹಿಸಬೇಕು.
ತೊಟ್ಟಿಯ ಕೆಳಭಾಗವನ್ನು ಗಟ್ಟಿಗೊಳಿಸಬೇಕು ಹಾಗೂ ಸಗಣಿ ಒಗ್ಗಡದಿಂದ ತೆಳುವಾಗಿ ಸಾರಿಸಿಕೊಳ್ಳುವುದು ಸೂಕ್ತ. ಸಾವಯವ ವಸ್ತುಗಳನ್ನು ಪದರ ಪದರವಾಗಿ ತೊಟ್ಟಿಯಲ್ಲಿ ತುಂಬಬೇಕು. ಸಾಮಾನ್ಯವಾಗಿ ನಿಧಾನವಾಗಿ ವಿಭಜನೆಯಾಗುವ ವಸ್ತುಗಳಾದ ತೆಂಗಿನ ಮೊಟ್ಟೆ, ಗರಿ, ತೆಂಗಿನನಾರು, ಜೋಳದ ಕಡ್ಡಿ ಇವುಗಳನ್ನು ಸಣ್ಣ ಚೂರುಗಳಾಗಿ ಮಾಡಿಕೊಂಡು, ಮೊದಲನೆಯ ಪದರವಾಗಿ ಸುಮಾರು 6 ಅಂಗುಲದ ವರೆಗೂ ಹರಡಬೇಕು. ಅನಂತರ ಚೆನ್ನಾಗಿ ನೀರು ಚಿಮುಕಿಸಿ, ಸಗಣಿಯ ಬಗ್ಗಡ ಮಾಡಿಕೊಂಡು ತೆಳುವಾಗಿ ಹರಡಿದ ನಂತರ ತೆಳು ಪದರವಾಗಿ ಮಣ್ಣನ್ನು ಹರಡಬೇಕು. ಮೊದಲನೆಯ ಪದರದ ವಸ್ತುಗಳಲ್ಲಿ ನಾರು ಮತ್ತು ಸೆಲ್ಯಲೋಸ್ ಅಂಶ ಜಾಸ್ತಿ ಇರುವುದರಿಂದ ಸೂಕ್ಷ್ಮ ಜೀವಿಗಳಾದ ಪ್ಲೊರೋಟಸ್, ಅಸ್ಟ್‍ರ್‍ಜಿಲ್ಲಸ್, ಟ್ರೈಕೋಡರ್ಮ, ಪ್ಯಾಸೊಲೋಮೈಸಿಸ್ ಮುಂತಾದವುಗಳ ಶಿಲೀಂಧ್ರಗಳನ್ನು ಸಗಣಿಯ ಬಗ್ಗಡದ ಜೊತೆಯಲ್ಲಿ ಸೇರಿಸಿ ಚಿಮುಕಿಸಬೇಕು.
ಎರಡನೆಯ ಪದರವಾಗಿ ಒಣಹುಲ್ಲು, ಕಳೆ, ನೆಲಗಡಲೆ ಸಿಪ್ಪೆ, ಸತ್ತೆ ಸೋಯಾಅವರೆ ಅವಶೇಷಗಳನ್ನು ಸುಮಾರು 10 ರಿಂದ 12 ಅಂಗುಲ ಮುಂದವಾಗಿ ಹರಡಬೇಕು. ಪದರವನ್ನು ಹರಡುತ್ತಿರುವಾಗ ಆಗಾಗ್ಗೆ ನೀರು ಹಾಕುತ್ತಿರಬೇಕು. ಅನಂತರ ಸಗಣಿಯ ಬಗ್ಗಡ, ತೆಳುವಾಗಿ ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣವನ್ನು ಈಗಾಗಲೇ ತಿಳಿಸಿರುವಂತೆ ಹರಡಬೇಕು. ಮೂರನೆಯ ಪದರದಲ್ಲಿ ಒಕ್ಕಣೆ ಮಾಡುವ ಕಾಲದಲ್ಲಿ ಕಣದಲ್ಲಿ ಶೇಖರವಾಗುವ ವಸ್ತುಗಳನ್ನು ಸುಮಾರು 4-6 ಅಂಗುಲ ಮಂದದ್ ಪದರವಾಗಿ ಹರಡಬೇಕು. ಇಲ್ಲಿ ಹಸಿರೆಲೆ ಗೊಬ್ಬರವನ್ನು ಮಿಶ್ರಮಾಡಿಕೊಂಡು ತುಂಬುವುದು ಸೂಕ್ತ. ನಾಲ್ಕನೆಯ ಪದರದಲ್ಲಿ ಲಭ್ಯವಿರುವ ಹಸಿರೆಲೆ ಗೊಬ್ಬರಗಳು, ಲಭ್ಯವಿದ್ದರೆ ಕೋಳಿ ಗೊಬ್ಬರ, ರೇಷ್ಮೆ ಹುಳುವಿನಹಿಕ್ಕೆ, ತ್ಯಾಜ್ಯಗಳು, ಕರರೆಗೋಡು, ಬಯೋಗ್ಯಾಸ್ ಬಗ್ಗಡ, ಹೀಗೆ ಲಭ್ಯವಿರುವ ವಸ್ತುಗಳ ಮತ್ತೊಂದು ಪದರವನ್ನು ಸುಮಾರು 10-12 ಅಂಗುಲದಷ್ಟು ಮಂದವಾಗಿ ಹರಡಬೇಕು. ಪ್ರಕೃತಿದತ್ತವಾಗಿ ದೊರೆಯುವ ಶಿಲಾರಂಜಕವನ್ನು ಸೇರಿಸಬಹುದು. ಸಗಣಿ, ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣಗಳನ್ನು ತೆಳುವಾಗಿ ಹರಡುವುದನ್ನು ಪುನರಾವರ್ತಿಸಬೇಕು. ಐದನೆಯ ಪದರವಾಗಿ ಜಾನುವಾರುಗಳ ಕೊಟ್ಟಿಗೆಯಲ್ಲಿ ಲಭ್ಯವಾಗುವ ಸಗಣಿ, ದನಕರುಗಳು ತಿಂದು ಬಿಟ್ಟ ಮೇವಿನ ಭಾಗ, ಗಂಜಲ ಇವೆಲ್ಲವನ್ನು ಸುಮಾರು 6-12 ಅಂಗು ಎತ್ತರ ತೊಟ್ಟಿಯ ಮೇಲುಭಾಗಕ್ಕೆ ಬಂದಾಗ ಗಟ್ಟಿಯಾಗಿ ಸಗಣಿ ಬಗ್ಗಡ ಮಾಡಿಕೊಂಡು ಆರನೆಯ ಪದರವಾಗಿ ಹಾಕಿ ಸಾರಿಸಬೇಕು. ತೊಟ್ಟಿಯನ್ನು ತುಂಬುವಾಗ ಒಂದು ಕಡೆ ಸ್ವಲ್ಪ ಸ್ಥಳವನ್ನು ಬಿಟ್ಟುಕೊಂಡಿದ್ದಲ್ಲಿ ತಿರುವಿ ಹಾಕಲು ಅನುಕೂಲವಾಗುತ್ತದೆ. ಆಗಾಗ್ಗೆ ನೀರು ಚಿಮುಕಿಸುವುದು ಈ ವಿಧಾನದಲ್ಲಿ ಅವಶ್ಯಕ.
ಚೆನ್ನಾಗಿ ಮಾಗಿದ ಕಾಂಪೋಸ್ಟ್ ಗೊಬ್ಬರದಲ್ಲಿ ಉಷ್ಣಾಂಶವು ಸ್ಥಿರವಾಗಿರುತ್ತದೆ. ಹಾಗೂ ದುರ್ವಾಸನೆಯಿರುವುದಿಲ್ಲ. ಬಣ್ಣ ಕಂದುಯುಕ್ತ ಕಪ್ಪು ಅಥವಾ ಕಪ್ಪು ರಸಸಾರ 7 ರ ಹತ್ತಿರವಿರುತ್ತದೆ. ಹಾಗೂ ಇಂಗಾಲ ಮತ್ತು ಸಾರಜನಕ ಅನುಪಾತ 20:1 ಕ್ಕಿಂತ ಕಡಿಮೆ ಇರುತ್ತದೆ. ಮಾಗಿದ ಕಾಂಪೋಸ್ಟ್‍ನ್ನು ತೇವಾಂಶವಿಲ್ಲದ ನೆರಳಿನ ಜಾಗದಲ್ಲಿ ಶೇಖರಿಸಬೇಕು.
ರಂಜಕಯುಕ್ತ ಕಾಂಪೋಸ್ಟ್ ಒಂದು ಪೌಷ್ಠೀಕರಿಸಲಾದ ಕಾಂಪೋಸ್ಟ್, ಇದನ್ನು ಶಿಲಾರಂಜಕ ಮತ್ತು ರಂಜಕ ಕರಗಿಸುವ ಸೂಕ್ಷ್ಮಜೀವಿಗಳನ್ನು ಉಪಯೋಗಿಸಿ ತಯಾರಿಸಬಹುದು. ಈ ರೀತಿ ಪೌಷ್ಠಿಕಗೊಳಿಸಲಾದ ಕಾಂಪೋಸ್ಟ್‍ನಲ್ಲಿ ರಂಜಕದ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದ.
ರಂಜಕಯುಕ್ತ ಕಾಂಪೋಸ್ಟ್‍ನ್ನು ಎರಡು ವಿಧವಾಗಿ ತಯಾರಿಸಬಹುದು
ಕೃಷಿ ಉತ್ಪನ್ನ ಆಧಾರಿತ ಕಾರ್ಖಾನೆಗಳ ತ್ಯಾಜ್ಯ ವಸ್ತುಗಳಾದ ಶಿಲಾರಂಜಕ ಮತ್ತು ಸಕ್ಕರೆ ಕಾರ್ಖಾನೆಗಳ ಪ್ರೆಸ್‍ಮಡ್, ತೆಂಗಿನ ನಾರಿನ ಪುಡಿ, ರೇಷ್ಮೆ ತ್ಯಾಜ್ಯ, ಅಡಿಕೆ ಸಿಪ್ಪೆ, ಹಣ್ಣು, ತರಕಾರಿ ಉಳಿಕೆಗಳು ಮತ್ತು ಪಟ್ಟಣಗಳಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳು ಇತ್ಯಾದಿ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 2/15/2020